Sunday 22 December 2013

‘ನುಡಿಸಿರಿ’ಗೆ ಪರ್ಯಾಯವಾದ ‘ಜನನುಡಿ’ -ಹೊಮ್ಮುತ್ತಿರುವ ಜನಪರ ಪರ್ಯಾಯದ ಸಂಕೇತ - ವಸಂತ

‘ನುಡಿಸಿರಿ’ಗೆ ಪರ್ಯಾಯವಾದ ‘ಜನನುಡಿ’ -ಹೊಮ್ಮುತ್ತಿರುವ ಜನಪರ ಪರ್ಯಾಯದ ಸಂಕೇತ

Standard
*ವಸಂತ
‘ನುಡಿಯು ಸಿರಿಯಲ್ಲ, ಬದುಕು’ ಎಂಬ ಘೋಷವಾಕ್ಯದೊಂದಿಗೆ ಡಿಸೆಂಬರ್ 14, 15 ರಂದು ಮಂಗಳೂರಿನಲ್ಲಿ ನಡೆದ ‘ಜನನುಡಿ’, ಅದರಲ್ಲಿ ಭಾಗವಹಿಸಿದ ಕೆಲವರಿಗೆ 1980ರ ದಶಕದ ಬಂಡಾಯದ ಸ್ಥಾಪನಾ ಸಮ್ಮೇಳನವನ್ನು ನೆನಪಿಸಿದರೆ, ಇನ್ನೂ ಕೆಲವರಿಗೆ 12ನೇ ಶತಮಾನದ ಅನುಭವ ಮಂಟಪವನ್ನು ನೆನಪಿಸಿತಂತೆ. ಹಲವರಿಗೆ ಒಂದು ‘ಚಾರಿತ್ರಿಕ’ ಘಟನೆಯಲ್ಲಿ ಭಾಗವಹಿಸಿದ ರೋಮಾಂಚನವನ್ನು ಉಂಟು ಮಾಡಿತಂತೆ. ರಾಜ್ಯದ ನಾಲ್ಕೂ ಮೂಲೆಗಳಿಂದ ಬಂದ ಹಲವು ಪ್ರಗತಿಪರ ಲೇಖಕರು, ಕಲಾವಿದರು, ಚಿಂತಕರು ಮತ್ತು ಸಾಹಿತ್ಯ-ಕಲಾಸಕ್ತರು ಅಲ್ಲಿ ನೆರೆದಿದ್ದರು. ವೇದಿಕೆಯ ಮೇಲೂ ಕೆಳಗೂ ಮಹಿಳೆಯರೂ ಯುವಜನರೂ ಅರ್ಧಕ್ಕಿಂತಲೂ ಹೆಚ್ಚು ಇದ್ದರು. ದಲಿತ, ತಳಸಮುದಾಯದ ಲೇಖಕರೂ ಹೋರಾಟಗಾರರು, ಹಲವು ಜನವಿಭಾಗಗಳ ನಿಜವಾದ ಪ್ರತಿನಿಧಿಗಳು ದೊಡ್ಡ ಸಂಖ್ಯೆಯಲ್ಲಿ ಇದ್ದಿದ್ದು ಎದ್ದು ಕಾಣುತ್ತಿತ್ತು. ಮಾತ್ರವಲ್ಲ, ಸಮಾವೇಶದಲ್ಲಿ ನಡೆದ ಚರ್ಚೆಗಳು ಜನರನ್ನು ಬಾಧಿಸುವ ವಿಷಯಗಳ ಬಗ್ಗೆ ಇತ್ತು. ಸಾಮಾನ್ಯವಾಗಿ ಕೊನೆಗೆ ಇರುವ (ಅಥವಾ ಇಲ್ಲದೆನೇ ಹೋಗುವ) ಮಹಿಳೆಯ ಬಗೆಗಿನ ಗೋಷ್ಟಿ ಮೊದಲ ಗೋಷ್ಟಿಯಾಗಿತ್ತು. ‘ಸಮಕಾಲೀನ ಸವಾಲುಗಳು-ಸಾಧ್ಯತೆಗಳು’, ‘ಜನಸಂಸ್ಕತಿ ಮತ್ತು ಮಾರುಕಟ್ಟೆ’, ‘ಕರಾವಳಿಯ ತಲ್ಲಣಗಳು’ ಇವೆಲ್ಲ ವಿಷಯಗಳು ಸಾಹಿತ್ಯಕ-ಸಾಂಸ್ಕøತಿಕ ಸಮಾವೇಶದಲ್ಲಿ ಗೋಷ್ಟಿಗಳ ವಿಷಯವಾಗುವುದು ಅಪರೂಪ. ಇವೆಲ್ಲಾ ಇಂತಹ ನೆನಪುಗಳಿಗೆ, ಅನ್ನಿಸಿಕೆಗಳಿಗೆ ಕಾರಣವಾಗಿರಬಹುದು.
                                                                                                                         ‘ನುಡಿಸಿರಿ’ ಒಂದು ‘ಸಾಂಸ್ಕತಿಕ ಮುಖವಾಡ’
Meenakshi Baali
Meenakshi Baali
ಡಾ. ಮೋಹನ್ ಆಳ್ವಾ ಅವರು ಕಳೆದ 10 ವರ್ಷಗಳಿಂದ ಅದ್ದೂರಿಯಾಗಿ ಸಂಘಟಿಸುತ್ತಿರುವ ‘ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್’ನ ನಿಜವಾದ ಉದ್ದೇಶ ಹಲವು ಲೇಖಕ-ಕಲಾವಿದರಾಗಿ ಅರಿವಾಗಲಾರಂಭಿಸಿದಂತೆ ಅದರ ವಿರುದ್ಧ ಭಾವನೆ ಹೊಗೆಯಾಡಲಾರಂಭಿಸಿತ್ತು. 10ನೇ ನುಡಿಸಿರಿಯನ್ನು ವೀರೇಂದ್ರ ಹೆಗಡೆಯವರು ಉದ್ಘಾಟಿಸುತ್ತಾರೆ ಎಂದು ತಿಳಿದಾಗ ಅದು ಭುಗಿಲೆದ್ದಿತು. ಧರ್ಮಸ್ಥಳದಲ್ಲಿ ಸೌಜನ್ಯ ಮತ್ತು ನೂರಾರು ಹೆಣ್ಣುಮಕ್ಕಳ ಕೊಲೆಗಳ ವಿರುದ್ಧ ಇತ್ತೀಚೆಗೆ ವ್ಯಕ್ತವಾದ ರೊಚ್ಚಿಗೆ ಮತ್ತು ಇತರ ಯಾವುದೇ ಜನತೆಯ ತಲ್ಲಣಗಳಿಗೆ ‘ನುಡಿಸಿರಿ’ ಸಕಾರಾತ್ಮಕವಾಗಿ ಸ್ಪಂದಿಸುವುದಿಲ್ಲ.  ಮಾತ್ರವಲ್ಲ ಅವÀನ್ನು ಮರೆಮಾಚುವುದೇ ಇಂತಹ ಸಂಭ್ರಮಗಳ ಗುರಿ. ‘ನುಡಿಸಿರಿ’ ಪಾಳೆಯಗಾರಿ, ಬಂಡವಾಳಶಾಹಿ ಮತ್ತು ಕೋಮುವಾದಿ ಶಕ್ತಿಗಳ ‘ಸಾಂಸ್ಕøತಿಕ ಮುಖವಾಡ’ ಎಂಬುದು ಹೆಚ್ಚೆಚ್ಚು ಲೇಖಕ-ಕಲಾವಿದರಿಗೆ ಸ್ಪಷ್ಟವಾಗುತ್ತಿದ್ದಂತೆ ಅದಕ್ಕೆ ಪರ್ಯಾಯ ಕಟ್ಟಬೇಕು. ಬಂಡವಾಳಗಾರ, ಧರ್ಮಗುರು, ಒಡೆಯ ಇವರನ್ನೆಲ್ಲಾ ಸಾಹಿತ್ಯ-ಸಂಸ್ಕøತಿ ಪ್ರವೇಶಿಸಿ ಭ್ರಷ್ಟಗೊಳಿಸಲು ಬಿಡಬಾರದು ಎಂಬ ಭಾವನೆ ಗಟ್ಟಿಯಾಗತೊಡಗಿ ‘ಜನನುಡಿ’ ಮೂಡಿಬಂತು. ಸಮುದಾಯ, ಕರಾವಳಿ ಲೇಖಕಿಯರ ಸಂಘ, ಚಿಂತನ, ಜನಸಾಹಿತ್ಯ ಸಂಘಟನೆ, ಸಹಮತ್, ಇಪ್ಟಾ, ನಾವು-ನಮ್ಮಲ್ಲಿ, ಆದಿಮ ಮುಂತಾದ ಹಲವು ಸಮಾನ-ಮನಸ್ಕ ಪ್ರಗತಿಪರ ಸಾಂಸ್ಕೃತಿಕ ಸಂಘಟನೆಗಳು ಜನ-ಪರ ಸಂಘಟನೆಗಳ ಸಹಕಾರದಿಂದ ಕಟ್ಟಿಕೊಂಡ ‘ಅಭಿಮತ’ ಈ ಸಮಾವೇಶವನ್ನು ಸಂಘಟಿಸಿತ್ತು. ‘ನುಡಿಸಿರಿ’ಗೆ ಪರ್ಯಾಯವಾಗಿ ‘ಜನನುಡಿ’ ಮೂಡಿ ಬಂದಿದ್ದರೂ ಅದರ ಉದ್ದೇಶಗಳು ಇನ್ನೂ ವ್ಯಾಪಕವಾದದ್ದು ಅಂತಾರೆ ಅದರ ಸಂಘಟಕರು.
ಅನುಪಮಾ
ಅನುಪಮಾ
    ಬಿಚ್ಚುಮನಸ್ಸಿನ ಪ್ರಬುದ್ಧ ಚರ್ಚೆ
ಉದ್ಘಾಟನೆ, ಸಮಾರೋಪಗಳಲ್ಲದೆ ಮೇಲೆ ಹೇಳಿದ ಹಲವು ಗೋಷ್ಟಿಗಳಲ್ಲಿ ಚಿಂತನ-ಮಂಥನ ನಡೆಯಿತು. ಧರ್ಮಸ್ಥಳದಲ್ಲಿ ಹೆಣ್ಣುಮಕ್ಕಳ ಅಸಹಜ ಸಾವು ಮತ್ತು ಅದರ ವಿರುದ್ಧ ಭುಗಿಲೆದ್ದ ಚಳುವಳಿ, ಕಾರ್ಮಿಕ ಚಳುವಳಿಯ ಕೋಟೆ ಮತ್ತು ಬಹುಸಂಸ್ಕøತಿಯ ಬೀಡಾಗಿದ್ದ ಕರಾವಳಿ ‘ಹಿಂದುತ್ವದ ಪ್ರಯೋಗಶಾಲೆ’ ಆಗಲು ಕಾರಣಗಳು, ಮೋದಿ ಪ್ರತಿನಿಧಿಸುವ ಶ್ರೀಮಂತ-ಪರ’ಕೋಮುವಾದಿ ಫ್ಯಾಸಿಸ್ಟ್ ನಾಯಕತ್ವಕ್ಕೆ ವಿರೋಧ, ಮಡೆಸ್ನಾನ-ಪಂಕ್ತಿಬೇಧ-ಪಲ್ಲಕಿ ಮೆರವಣಿಗೆಗಳ ಖಂಡನೆ, ಮೂಢನಂಬಿಕೆಗಳ ವಿರುದ್ಧ ಕಾನೂನಿಗೆ ಬೆಂಬಲ, ಮಹಿಳೆಯರ ಮೇಲೆ ದೌರ್ಜನ್ಯಗಳ ವಿವಿಧ ರೂಪಗಳು, ಮಹಿಳಾ ಚಳುವಳಿಯ ಸಮೀಕ್ಷೆ/ವಿಮರ್ಶೆ, ಜಾಗತೀಕರಣದ ಸಂದರ್ಭದಲ್ಲಿ ಕಾವ್ಯದ ಪಾತ್ರ, ಸಾಹಿತ್ಯದ ಕಾರ್ಪೋರೇಟಿಕರಣ, ಮಾಧ್ಯಮಗಳಲ್ಲಿ ಬುದ್ಧಿಜೀವಿ-ವಿರೋಧಿ ಧೋರಣೆಗಳು, ಉದ್ಯಮ ಮತ್ತು ಜಾಹೀರಾತು ಜನಸಂಸ್ಕøತಿಯನ್ನು ಬಳಸಿಕೊಂಡ ಬಗೆ,  ಕನ್ನಡ ಕಾವ್ಯ ಮಹಿಳಾ ಸಮಸ್ಯೆಗೆ ಸ್ಪಂದಿಸಿದ ರೀತಿ, ಶ್ರಮದ ಮೇಲೆ ಬಂಡವಾಳದ ದಾಳಿ, ಜಾಗತೀಕರಣಕ್ಕೂ ಕೋಮುವಾದಕ್ಕೂ ಇರುವ ಸಂಬಂಧ, ಸರ್ಕಾರ ಮತ್ತು ಉದ್ಯಮಿಗಳು ಉತ್ಸವಗಳನ್ನು ಸಂಘಟಿಸುವ ಹಿಂದಿನ ಹುನ್ನಾರಗಳು; ಕೋಮುವಾದ, ಫ್ಯಾಸಿಸಂನಂತಹ ‘ರೋಗ ಲಕ್ಷಣ’ಗಳ ಬದಲು ಬಂಡವಾಳಶಾಹಿ, ಸಾಮ್ರಾಜ್ಯಶಾಹಿಯಂತಹ ‘ರೋಗ’ಗಳಿಗೆ ಔಷಧಿ ಹುಡುಕುವ ಅಗತ್ಯ; ಕೊರಗ, ಕುಡುಬಿ, ಮಲೆಕುಡಿಯ ಮುಂತಾದ ಮೂಲನಿವಾಸಿಗಳ ತಲ್ಲಣಗಳು, ಜನ ಚಳುವಳಿಗಳು ಬಿಡಿಬಿಡಿಯಾಗಿ ದ್ವೀಪಗಳಾಗದೆ ಐಕ್ಯತೆ ಸಾಧಿಸಿ ವ್ಯವಸ್ಥೆ ಬದಲಿಸುವತ್ತ ಸಾಗುವ ಬಗೆ, ಮೆಗಾ ಪ್ರಾಜೆಕ್ಟುಗಳಿಂದ ಒಕ್ಕಲೆಬ್ಬಿಸಿದ ಜನರ ಸಮಸ್ಯೆಗಳು, ಪ್ರಜಾಸತ್ತೆಯ ಅಂಗಗಳ ಪಾಳೆಯಗಾರೀಕರಣ,  ಐಸಿಡಿಎಸ್ ಖಾಸಗೀಕರಣ, ಮೈಸೂರು ಒಡೆಯರ್ ನಿಧನದ ಸಂದರ್ಭದಲ್ಲಿ ಮಾಧ್ಯಮಗಳ ಪಾಳೆಯಗಾರಿಯ ಪೂಜೆ ; ಜನಸಂಸ್ಕøತಿಯಲ್ಲೂ ಯಜಮಾನ, ಪೂಜಾರಿ, ಪುರುಷ  ಶಕ್ತಿಗಳ ಶಕ್ತಿ ರಾಜಕಾರಣದ  ಪ್ರಭಾವ; ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ರಾಜಕೀಯ ಪರ್ಯಾಯ – ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಬಿಚ್ಚುಮನಸ್ಸಿನ ಪ್ರಬುದ್ಧವಾದ ಆಳವಾದ ಚರ್ಚೆ ನಡೆಯಿತು. ತಮ್ಮ ಮಾತುಗಳ ಮೂಲಕ ಚರ್ಚೆ ಆರಂಭಿಸಿದವರಲ್ಲಿ, ಪ್ರತಿಕ್ರಿಯಿಸಿದವರಲ್ಲಿ – ರಾಜೇಂದ್ರ ಚೆನ್ನಿ, ಎಸ್.ಜಿ. ಸಿದ್ದರಾಮಯ್ಯ, ರಹಮತ್ ತರಿಕೆರೆ, ದಿನೇಶ್ ಅಮಿನ್‍ಮಟ್ಟು, ಆರ್.ಪೂರ್ಣಿಮಾ, ಎಚ್.ಎಸ್.ಅನುಪಮ, ಕೆ.ನೀಲಾ, ವಿನಯಾ ಒಕ್ಕುಂದ, ಮಾವಳ್ಳಿ ಶಂಕರ್, ಎನ್. ಗಾಯತ್ರಿ, ಜಿ.ಪಿ.ಬಸವರಾಜು, ಕೆ.ಎಸ್.ವಿಮಲ, ಸಬಿಹಾ ಭೂಮಿಗೌಡ, ವಿಠ್ಠಲ ಭಂಡಾರಿ, ಎಂ.ಡಿ.ಒಕ್ಕುಂದ, ಸನತ್ ಕುಮಾರ ಬೆಳಗಲಿ, ರವಿಕೃಷ್ಣಾ ರೆಡ್ಡಿ, ವಸುಂಧರಾ ಭೂಪತಿ, ಮೀನಾಕ್ಷಿ ಬಾಳಿ, ಪಿಚ್ಚಳ್ಳಿ ಶ್ರೀನಿವಾಸ್ – ಸೇರಿದ್ದರು. ಒಟ್ಟು 48 ಜನ ವೇದಿಕೆಯಿಂದ ಮಾತನಾಡಿದರು. 16 ಕವಿಗಳು ತಮ್ಮ ಕವಿತೆ ಓದಿದರು.
ರಾಜೇಂದ್ರ ಚೆನ್ನಿ
ರಾಜೇಂದ್ರ ಚೆನ್ನಿ
ಇಂತಹ ವ್ಯಾಪಕವಾದ ಆಳವಾದ ಚರ್ಚೆಗಳ ಸಾರಾಂಶವನ್ನು ಸ್ವಲ್ಪದರಲ್ಲಿ ಹೇಳುವುದು ಕಷ್ಟ. ಈ ಚರ್ಚೆಗಳಲ್ಲಿ ಹೇಳಲ್ಪಟ್ಟು ಸಮಾವೇಶದ ಉದ್ದಕ್ಕೂ ಮಾರ್ದನಿಸಿದ ಕೆಲವು ನುಡಿಗಳನ್ನು ಜತೆಗೆ ನೀಡಿದ ಬಾಕ್ಸಿನಲ್ಲಿ ಸಂಗ್ರಹಿಸಲಾಗಿದೆ. ಅವು ಚರ್ಚೆಯ ‘ರುಚಿ’ ಕೊಡಬಹುದು. ಸಮಾವೇಶದ ನಿರ್ಣಯಗಳನ್ನೂ ಬಾಕ್ಸಿನಲ್ಲಿ ಕೊಡಲಾಗಿದೆ. ‘ಜನನುಡಿ’ಯಲ್ಲಿ ಕವಿಗೋಷ್ಟಿ, ಹೋರಾಟದ ಹಾಡುಗಳು, ಕೋಲಾಟ ಮತ್ತು ಕೆಲವರ ವಿಷಯ ಮಂಡನೆಯಲ್ಲಿ ಬಿಟ್ಟರೆ ಸಾಹಿತ್ಯಕ-ಸಾಂಸ್ಕøತಿಕ ಭಾಗ ಕಡಿಮೆ ಇತ್ತು  ಎಂಬುದು ಒಂದು ಕೊರತೆ. ಇದು ಸಮಯ ಸಂಪನ್ಮೂಲಗಳ ಮಿತಿಯಿಂದ ಆಗಿರುವಂತಹದ್ದು. ಆದರೂ ‘ಜನನುಡಿ’ಯ ಮುಂದಿನ ಅವತರಣಿಕೆಗಳಲ್ಲಿ ಗಮನಿಸಬೇಕಾದ್ದು.
                                                                          ಸಾಂಸ್ಕತಿಕ ರಾಜಕೀಯ ಮಹತ್ವ
ಆದರೆ ‘ಜನನುಡಿ’ಯ ಮಹತ್ವ ಇರುವುದು ಅಲ್ಲಿ ಏನು ಹೇಳಲಾಯಿತು, ಮಾಡಲಾಯಿತು ಎಂಬುದರಲ್ಲಿ ಅಲ್ಲ. ಇಂತಹ ಒಂದು ಜನ-ಪರ ಪರ್ಯಾಯ ಸಾಹಿತ್ಯಕ-ಸಾಂಸ್ಕøತಿಕ ಸಮಾವೇಶವನ್ನು ಸಂಘಟಿಸಲಾಯಿತು. ವೈವಿಧ್ಯಮಯ ಚಟುವಟಿಕೆಯಲ್ಲಿ ತೊಡಗಿದ ಹಲವು ಸಾಂಸ್ಕøತಿಕ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಒಗ್ಗೂಡಿ ‘ನುಡಿಸಿರಿ’ ಪ್ರತಿನಿಧಿಸಿದ ಪಾಳೆಯಗಾರಿ, ಬಂಡವಾಳಶಾಹಿ ಮತ್ತು ಕೋಮುವಾದಿ ಶಕ್ತಿಗಳ ‘ಸಾಂಸ್ಕøತಿಕ ಮುಖವಾಡ’ವನ್ನು ಕಿತ್ತೊಗೆದು ಅವರನ್ನು ಬಯಲು ಮಾಡಿತು ಎಂಬುದೇ ‘ಜನನುಡಿ’ಯ ಮಹತ್ವ. ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಮಡೆಸ್ನಾನ-ಪಂಕ್ತಿಬೇಧದ ವಿರುದ್ಧ ಹೋರಾಟ, ಬಿಜೆಪಿಯ ರಾಜಕೀಯ ಸೋಲು, ಸೌಜನ್ಯ ಚಳುವಳಿಗಳ ಬೆನ್ನಲ್ಲೇ ಇದು ಬಂದಿದ್ದು ಕರಾವಳಿಯಲ್ಲಿ ಬಲವಾದ ಬದಲಾವಣೆಯ ಗಾಳಿ ಬೀಸುತ್ತಿರುವುದರ ಸಂಕೇತ. ಇದು ಕರಾವಳಿಯ ತಲ್ಲಣಗಳ ನಿರ್ದಿಷ್ಟ ಸನ್ನಿವೇಶದಲ್ಲಿ ಮೂಡಿಬಂದರೂ, ಇಡೀ ರಾಜ್ಯದ ದೇಶದ ಮಟ್ಟಿಗೂ ಸಾಂಸ್ಕøತಿಕ ರಾಜಕೀಯ ಮಹತ್ವ ಹೊಂದಿದೆ. ಇದು ನಮ್ಮ ರಾಜ್ಯ ಮತ್ತು ದೇಶದಲ್ಲಿ ಕೆಳಗಿನಿಂದ ಮೇಲಕ್ಕೆ ಹೊಮ್ಮುತ್ತಿರುವ ಜನ-ಪರ ಪರ್ಯಾಯದ ಸಂಕೇತ. ಭಾರತದ ರಾಜಕೀಯದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿಗಳ ದ್ವಿ-ಸ್ವಾಮ್ಯವನ್ನು ಒಡೆಯಲು ಬೇಕಾದ ಎಡ-ಪ್ರಜಾಸತ್ತಾತ್ಮಕ ಬದಲಿಗೆ ಸಾಂಸ್ಕøತಿಕ ಭೂಮಿಕೆ ಸಿದ್ಧವಾಗುತ್ತಿದೆ ಎಂಬ ಆಶಾಭಾವನೆ ಮೂಡಿಸುವಂತದ್ದು. ಇಂತಹ ಸಮಾವೇಶ ಸಂಘಟಿಸುವುದರಲ್ಲಿ ನಾಯಕತ್ವ ನೀಡಿದ ಎಚ್.ಎಸ್.ಅನುಪಮ, ಮುನೀರ್ ಕಾಟಿಪಳ್ಳ ಮತ್ತು ನವೀನ್ ಸೂರಿಂಜೆ ಅವರುಗಳನ್ನೂ; ‘ಅಭಿಮತ’ ಕಟ್ಟಲು ಸಹಯೋಗ ನೀಡಿದ ಎಲ್ಲಾ ಸಂಘಟನೆಗಳನ್ನೂ ತಮ್ಮ ಚಾರಿತ್ರಿಕ ಜವಾಬ್ದಾರಿ ನಿರ್ವಹಿಸಿದ್ದಕ್ಕೆ ಅಭಿನಂದಿಸಲೇಬೇಕು.
Lunch
‘ಜನನುಡಿ’ಯಲ್ಲಿ ಮಾರ್ದನಿಸಿದ ನುಡಿಗಳು
“ನಾನು ಕೋಮುವಾದಿ ವ್ಯಕ್ತಿ, ಸಂಘಟನೆ ಮತ್ತು ಸರ್ಕಾರಗಳ ಕಾರ್ಯಕ್ರಮ ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸುವುದಿಲ್ಲ. ಅವರ ಪ್ರಶಸ್ತಿ, ಪುರಸ್ಕಾರಗಳನ್ನು ಸ್ವೀಕರಿಸುವುದಿಲ್ಲ” (ಅನುಪಮ);
“ಸಾಹಿತ್ಯ ಇಂದು ಅನುಸರಿಸಬೇಕಾದ್ದು ಅವ್ಯಕ್ತ ಹಿಂಸೆÀಗಳನ್ನು ವ್ಯಕ್ತಪಡಿಸುವಂತಹ ಡಾ.ಅಂಬೇಡ್ಕರ್ ಮಾರ್ಗವನ್ನು.. ಇಂದಿನ ಪರಿಸ್ಥಿಯಲ್ಲೂ ಕಾವ್ಯ ಬುಡಮೇಲು (ಸಬ್ವರ್ಸಿವ್) ಗುಣವನ್ನು ಉಳಿಸಿಕೊಳ್ಳಬೇಕು.. ನಮ್ಮೆದುರು ನಡೆಯುವ ವಿದ್ಯಮಾನಗಳನ್ನು ಅದರ ನಿಜವಾದ ಹೆಸರಿನಲ್ಲಿ ಕರೆಯಬೇಕಾಗಿದೆ. ಗುಜರಾತ್‍ನಲ್ಲಿ ನಡೆದ 2002ರಲ್ಲಿ ನಡೆದ ನರಮೇಧವನ್ನು ನರಮೇಧ ಎಂದೇ ಕರೆಯಬೇಕು. ದಂಗೆಗಳು ಎಂದಲ್ಲ.” (ಚೆನ್ನಿ);
“ಬಿಡಿಬಿಡಿಯಾಗಿ ಚದುರಿ ಹೋಗಿರುವ ಜನರ ಹೋರಾಟಗಳೂ ಸಂಘಟನೆಗಳು ಸೌಜನ್ಯ ಪ್ರಕರಣದಲ್ಲಿ ಆದಂತೆ ಒಂದಾಗಿ ಹೋರಾಡಬೇಕಾಗಿದೆ. ಜನರ ಹೋರಾಟಗಳೂ ಸಂಘಟನೆಗಳೂ ಸಿಗಿದು ಚೂರು ಚೂರು ಮಾಡಿದರೂ ಮತ್ತೆ ಮತ್ತೆ ಒಂದಾಗುವ ಜರಾಸಂಧನಂತೆ ಆಗಬೇಕಾಗಿದೆ.” (ಸಬಿಹಾ);
‘ಸಾಹಿತ್ಯ ಕಲೆಯಲ್ಲಿ ನವರಸಗಳು ಇರಬೇಕು ಅಂತಾರೆ. ಆದರೆ ‘ಶ್ರಮ ರಸ’ ಇಲ್ಲದೆ ಒಂಬತ್ತು ರಸಗಳಲ್ಲಿ ಯಾವುವು ಇರಲಾರವು..ವಿರಾಸತ್ ಎನ್ನುವುದೇ ಪಾಳೆಯಗಾರಿಯ ವಾಸನೆ ಹೊಡೆಯುವ ಶಬ್ದ.”(ಮೀನಾಕ್ಷಿ);
“ಕರಾವಳಿ ಜಿಲ್ಲೆಗಳಲ್ಲಿ ಇತಿಹಾಸದ ಚಕ್ರವನ್ನು ಶಿಲಾಯುಗಕ್ಕೆ ಹಿಂದಕ್ಕೆ ತಿರುಗಿಸುವ ಪ್ರಯ್ರತ್ನ ನಡೆದಿದೆ. ಇಲ್ಲಿನ ಬಹುಸಂಸ್ಕøತಿಗಳ ಸಹಬಾಳ್ವೆ, ಮಾತೃಪ್ರಧಾನ ಕುಟುಂಬದಲ್ಲಿ ವ್ಯಕ್ತವಾದ ಮಹಿಳೆಯರ ಸ್ವಾತಂತ್ರ್ಯ ಮತ್ತು ಆತ್ಮಗೌರವ, ಭೂಸುಧಾರಣೆ, ಸಾಮಾಜಿಕ ನ್ಯಾಯ, ಮಾನವ ಕೇಂದ್ರಿತ ಅಭಿವೃದ್ಧಿ ಮಾದರಿ – ಇವೆಲ್ಲವನ್ನು ಅಗೋಚರ ಸರ್ಕಾರವೊಂದು ಅದರ ವಿರುದ್ಧ ದಿಕ್ಕಿನಲ್ಲಿ ಬದಲಾಯಿಸಲು ಪ್ರಯತ್ನಿಸುತ್ತಿದೆ.” (ಅಮಿನ್ ಮಟ್ಟು);
“ಇಲ್ಲಿನ ದೈವವಾದ ನಾಗಬ್ರಹ್ಮರಲ್ಲಿ ಹೆಣ್ಣು ಬೇಕೆಂದು ಕೇಳುವ ಏಕೈಕ ಪ್ರದೇಶ ಇದಾಗಿದೆ. ಇಲ್ಲಿನ ಇತಿಹಾಸದಲ್ಲಿ ಹೆಣ್ಣಿನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಒಂದು ಉದಾಹರಣೆ ಇಲ್ಲಿ ಇಲ್ಲ. ಆದರೆ ಕಳೆದ ಕೆಲವು ದಶಕಗಳಿಂದ ನೇತ್ರಾವತಿ  ಹೆಣ್ಣು ಮಕ್ಕಳ ರಕ್ತ ಮತ್ತು ಕಣ್ಣಿರಿನಿಂದ ಕೆಂಪಾಗಿದೆ. ಸೌಜನ್ಯ ಪ್ರಕರಣ ಇಡೀ ತುಳುನಾಡಿನ ಮನಸ್ಸಿನ ಮೇಲೆ ಎಸಗಿದ ಅತ್ಯಾಚಾರ. ನಮ್ಮ ಸಹನೆ ಕಟ್ಟೊಡೆದಿದೆ. ಇನ್ನೊಂದು ಇಂತಹ ಪ್ರಕರಣ ನಡೆಯಬಾರದು ಎಂದು ನಾವು ಹೋರಾಟ ನಡೆಸುತ್ತಿದ್ದೇವೆ. ಈ ಹೋರಾಟದಲ್ಲಿ ನಮ್ಮೊಂದಿಗೆ ಗಟ್ಟಿಯಾಗಿ ನಿಂತ ಏಕೈಕ ಪಕ್ಷ ಎಂದರೆ ಸಿಪಿಎಂ.” (ಅತ್ರಾಡಿ ಅಮೃತಾ ಶೆಟ್ಟಿ);
‘ಬಿಜೆಪಿಗೆ ಮೋದಿ ಎಂಬ ‘ಫಿಟ್ಸ್’ ಬಂದಿದೆ. ಅದಕ್ಕೆ ಕಬ್ಬಿಣ ಬೇಡುತ್ತಿದೆ. ಈ ‘ಫಿಟ್ಸ್’ನ್ನು ಬಿಡಿಸುವತ್ತ ನಾವು ಎಡ-ಪ್ರಜಾಸತ್ತಾತ್ಮಕ ಬದಲಿ ತರಬೇಕಾಗಿದೆ.” (ಮಾವಳ್ಳಿ ಶಂಕರ್);
“ಜನನುಡಿ ನುಡಿಸಿರಿಗೆ ಪರ್ಯಾಯವಾಗಿ ಮೂಡಿಬಂದಿದೆ. ನಮ್ಮ ಸಂಖ್ಯೆ ಇಲ್ಲಿ ಕಡಿಮೆ ಇರಬಹುದು. ಆದರೆ ಬುದ್ಧ, ಬಸವ ಮುಂತಾದವರು ಆರಂಭಿಸಿದ ಎಲ್ಲಾ ದೊಡ್ಡ ಬದಲಾವಣೆಗಳೂ ಆರಂಭವಾಗಿದ್ದು ಇಂತಹ ಸಣ್ಣ ಸಂಖ್ಯೆಯ ಜನರಿಂದಲೇ”( ನೀಲಾ);
“ಕರಾವಳಿಯಲ್ಲಿ ಹೆಂಚು, ಗೇರುಬೀಜ, ಬೀಡಿ ಮುಂತಾದ ಕೈಗಾರಿಕೆಗಳು ಜಾಗತೀಕರಣದ ದಾಳಿಗೆ ಸಿಕ್ಕು ಜರ್ಝರಿತವಾಗಿ ವ್ಯಾಪಕ ನಿರುದ್ಯೋಗ ಉಂಟಾದ ಪರಿಸರ ಕೋಮುವಾದ ಬೆಳೆಯಲು ಪ್ರಶಸ್ತವಾದ ಭೂಮಿಕೆ ನಿರ್ಮಿಸಿತು ಎಂಬುದನ್ನು ಮರೆಯಬಾರದು.” (ವಿಮಲಾ);
“ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಲವು ದಿನಗಳ ಕಾಲ ಚಳಿಗಾಳಿ ಲೆಕ್ಕಿಸದೆ ಧರಣಿ ಕೂತ ಸಾವಿರಾರು ಅಕ್ಷರ ದಾಸೋಹ ಮಹಿಳಾ ಕಾರ್ಮಿಕರನ್ನು ಎಷ್ಟು ಜನ ಲೇಖಕರು ಕಲಾವಿದರು ಚಿಂತಕರು ಹೋಗಿ ಮಾತನಾಡಿಸಿದರು ? ಅದಕ್ಕೆ ಅವರಿಗೆ ಆಹ್ವಾನ ಬೇಕೆ ? ಅದು ಅವರ ಜವಾಬ್ದಾರಿ ಅಲ್ಲವೆ ?”(ವಿಠ್ಠಲ)

“ಒಂದು ಕೋಮುವಾದ ಎದುರಿಸಲು ಪ್ರಗತಿಪರರೆನಿಸಿಕೊಂಡವರು ಇನ್ನೊಂದು ಕೋಮಿನ ಮೂಲಭೂತವಾದ ಬೆಂಬಲಿಸಿ ಕೋಮುವಾದದ ವಿರುದ್ಧ ಹೋರಾಟಕ್ಕೆ ಪೆಟ್ಟು ಕೊಟ್ಟಿದ್ದಾರೆ. ಬಡ ಮುಸ್ಲಿಂ ಮಹಿಳೆಗೆ ನೆರವು ನೀಡಿದನೆಂಬ ಕಾರಣಕ್ಕೆ ವಿಟ್ಲದ ಪತ್ರಕರ್ತನೊಬ್ಬನ ಮೇಲೆ ಕೋಮುವಾದಿ ಸಂಘಟನೆಯೊಂದು ದಾಳಿ ಮಾಡಿದೆ. ಅದನ್ನೂ ನಾವು ಖಂಡಿಸುತ್ತೇವೆ.” (ಜೀವನ್)
“ಆಳ್ವಾಸ್ ನುಡಿಸಿರಿಗೆ ಇಷೆಲ್ಲಾ ಖರ್ಚು ಮಾಡುವುದು ಹೇಗೆ ಸಾಧ್ಯವಾಗುತ್ತದೆ… ಆಳ್ವಾಸ್ ಶಿಕ್ಷಣ ಸಂಸ್ಥೆಗಳಲ್ಲಿ 16 ಸಾವಿರ ವಿದ್ಯಾರ್ಥಿಗಳಿದ್ದಾರೆ. ಪ್ರತಿಯೊಬ್ಬರಿಂದ ಒಂದುವರೆ ಲಕ್ಷ ಬರುತ್ತದೆ. ಅಂದರೆ ಸುಮಾರು 200ಕೋಟಿ.ರೂ. ಇದರ ಮಿಗುತೆ ಹಣದಲ್ಲೇ ಇಂತಹ ಅದ್ದೂರಿ ಸಮ್ಮೇಳನ ನಡೆಸಲಾಗುತ್ತಿದೆ.”(ಪ್ರಶಾಂತ್);
  • ಡಾ. ವಿನಯಾ ಒಕ್ಕುಂದ
    ಡಾ. ವಿನಯಾ ಒಕ್ಕುಂದ

No comments:

Post a Comment