Sunday 22 December 2013

ಆರ್ ವಿ ಭಂಡಾರಿ ಹುಟ್ಟಿದ ದಿನ : ಸುನಂದಾ ಕಡಮೆ ನೆನಪುಗಳು

ಆರ್ ವಿ ಭಂಡಾರಿ ಹುಟ್ಟಿದ ದಿನ : ಸುನಂದಾ ಕಡಮೆ ನೆನಪುಗಳು    
ಸುನಂದಾ ಪ್ರಕಾಶ ಕಡಮೆ
ಮಂಗಳವಾರ, 5 ಮೇ 2009 (08:59 IST)
ಆರ್ ವಿ ಭಂಡಾರಿ
ಬಂಡಾಯ ಸಂಘಟನೆಯ ಮುಂಚೂಣಿಯಲ್ಲಿದ್ದ ಡಾ. ಆರ್‍.ವಿ ಭಂಡಾರಿಯವರು ಉತ್ತರಕನ್ನಡದ ಹೊನ್ನಾವರ ತಾಲೂಕಿನ ಅರೆಅಂಗಡಿಯಲ್ಲಿ ೧೯೩೫ ಮೇ ೫ ರಂದು ಜನಿಸಿದ್ದು. ಅವರ ಹುಟ್ಟು ಹಬ್ಬದ ನಿಮಿತ್ತ ಈ ಲೇಖನ.
ನಮ್ಮ ಉತ್ತರ ಕನ್ನಡದ ಹಿರಿಯ ಚೇತನ ಆರ್.ವಿ ಭಂಡಾರಿಯವರನ್ನು ಸಾಹಿತ್ಯ ಮತ್ತು ಸಾಮಾಜಿಕ ಲೋಕವು ಕಾಮ್ರೆಡ್ ಅಂದಿತು. ನಿಷ್ಠುರ ಸಮಾಜವಾದಿ ಅಂದಿತು. ವೈಚಾರಿಕತೆಯ ಹರಿಕಾರ ಅಂದಿತು. ದಲಿತ ಬಂಡಾಯ ಚಳುವಳಿಯ ಹಿರೀಕ ಅಂದಿತು. ತಾತ್ವಿಕತೆಯ ಕಠಿಣ ಚಿಂತಕ ಅಂದಿತು. ಕ್ರಾಂತಿಕಾರಿ ಹೋರಾಟಗಾರ ಅಂತೆಲ್ಲ ಏನೇನೋ ಅಂದಿತು. ಆದರೆ ನನ್ನ ಪಾಲಿಗೆ ಮಾತ್ರ ಅವರೊಬ್ಬ ಸಂವೇದನಾಶೀಲ ವಾತ್ಸಲ್ಯಮಯಿ ಸಾಕ್ಷಾತ್ ತಂದೆಯ ಸ್ಥಾನದಲ್ಲಿದ್ದವರು. ಹೆತ್ತರಷ್ಟೇ ತಂದೆಯಲ್ಲ, ಅಕ್ಷರ ಕಲಿಸಿದರಷ್ಟೇ ಗುರುವಲ್ಲ. ಅಂಥದೊಂದು ಸಾಧ್ಯಂತ ಅಂತರ್‌ದೃಷ್ಟಿ ಕಾಳಜಿ ಅಂತಃಕರಣಗಳನ್ನು ಎರೆದು ಪೋಷಿಸಿದವರೆಲ್ಲ ಆ ಜಾಗವನ್ನು ಭದ್ರವಾಗಿ ತುಂಬುವವರೇ. ಹಾಗೆ ಪ್ರಮುಖ ಸಾಲಲ್ಲಿ ನಿಲ್ಲುವ ನನ್ನ ಸಾಹಿತ್ಯಕ ಗುರು ಆರ್‍ವಿ ಭಂಡಾರಿಯವರು ಹುಟ್ಟಿದ ದಿನ ಇಂದು. ಶ್ರೇಷ್ಠ ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿ ಮಾತ್ರ ನನ್ನನ್ನಾವರಿಸಿದ್ದ ಆರ್‍ವಿಯವರು ಎಲ್ಲ ಶೋಷಿತ ಸಮುದಾಯಗಳ ಒಳಸಂಕಟಗಳನ್ನು ಮಾತುಗಳಲ್ಲಿ ವರ್ತನೆಯಲ್ಲಿ ಬರಹಗಳಲ್ಲಿ ಮೊಗೆಮೊಗೆದು ಕೊಟ್ಟವರು. 

೧೯೮೮ ರ ನನ್ನ ಮದುವೆಯ ನಂತರ ಪ್ರಕಾಶ್‌ನ ಸಾಹಿತ್ಯಕ ವಲಯದಲ್ಲಿ ಪರಿಚಯವಾದ ಆರ್‍ವಿ, ಮೊದಲ ಭೇಟಿಯಿಂದಲೇ ಮನಸ್ಸಿನಲ್ಲಿ ನಿಂತರು. ಅವರ ಬೆಳ್ಳಿ ಕೂದಲ ಸೌಸ್ಟವ, ಯಕ್ಷಗಾನ ಕಲೆಗೆ ಒಗ್ಗುವಂಥ ಚೂಪು ಮುಖಚರ್ಯೆ, ಮುಖಕ್ಕೆ ಚೂರು ದೊಡ್ಡದೇ ಅನ್ನಿಸುವ ಸದಾ ಮೂಗಿನಿಂದ ಮೇಲೇರಿಸಿಕೊಳ್ಳುವ ಚಾಳೀಸು, ಕೈಯಲ್ಲೆರಡು ಪುಸ್ತಕಗಳು, ತಿಳಿ ಬಣ್ಣದ ಖಾದಿ ಕುರ್ತಾ, ಬಿಳಿಯ ಪಾಯಿಜಾಮಾದಲ್ಲಿ ಆಪ್ತವೆನ್ನಿಸುವ ಸಪೂರ ನಿಲುವಿನ ಆರ್‍ವಿ ಭಂಡಾರಿ ನನ್ನ ಮೊದಲ ಪರಿಮಿತ ಓದಿನ ಅರಿವಿಗೊಂದು ಸಮಾಜವಾದಿ ವಾಸ್ತವದ ಪರಿಕಲ್ಪನೆ ಒದಗಿಸಿದವರು. ಒಮ್ಮೆ ಕಂಡು ಮಾತಾಡಿದವರನ್ನು ತಮ್ಮ ಅತ್ಯಂತ ಸಹಜವಾದ ಕಕ್ಕುಲಾತಿಯ ಮಾಯಾ ಸ್ಪರ್ಶದಿಂದ ತನ್ನೆಡೆಗೆ ಸೆಳೆಯುವ ಆಳವಾದ ಸಾಮರ್ಥ್ಯ ಅವರ ಘನ ವ್ಯಕ್ತಿತ್ವಕ್ಕಿತ್ತು. ‘ಬದುಕನ್ನು ಅರಿತಂತೆ ಅರ್ಥ ಮಾಡಿಕೊಂಡಂತೆ ಬರೆ, ಆಶಯ ಉದ್ದೇಶ ಪ್ರಾಮಾಣಿಕವಾಗಿದ್ದರಾಯ್ತು’ ಎಂದೇ ಉತ್ಸಾಹ ತುಂಬುವ ಆರ್‍ವಿಯವರು, ಸ್ತ್ರೀವಾದ ಬಂಡಾಯ ಅಂತೆಲ್ಲ ಎಂದೂ ನನ್ನನ್ನು ಪ್ರೇರೇಪಿಸಿದವರಲ್ಲ. 

ಯಾವುದೇ ಬರಹ ಎಲ್ಲೇ ಪ್ರಕಟವಾದರೂ ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ಭಂಡಾರಿಯವರ ಆತ್ಮೀಯವೂ ಮೌಲಿಕವೂ ಆದ ಅಂಚೆ ಕಾರ್ಡೋಂದು ಹಾಜರಾಗುತ್ತಿತ್ತು. ಇಂಕು ಪೆನ್ನಿನಿಂದಲೇ ಬರೆದ ಸಣ್ಣ ಗೀಚು ಅಕ್ಷರ, ನನ್ನ ಬರಹದ ಜೀವದನಿಯಂತಿರುವ ಒಂದೆರಡೇ ಸಾಲು, ಮಳೆಗಾಲವಾಗಿದ್ದರೆ, ಒಂದೆರಡು ಮಳೆಹನಿಗೆ ಒದ್ದೆಯಾಗಿ ಹರಡಿಕೊಂಡ ಅಲ್ಲಿಯ ಪದಗಳು. ಅಂಥ ಇಪ್ಪತ್ತಾರು ಪತ್ರಗಳು ಅವರ ಜೀವದುಸಿರಂತೆ ಇಂದು ನನ್ನ ಕಡತಗಳ ಮಡಿಲಲ್ಲಿ ಜೀವಂತವಾಗಿವೆ. ಬೀದರ್ ಸಾಹಿತ್ಯ ಸಮ್ಮೇಳನ ಮುಗಿಸಿ ವಾಪಸ್ಸಾಗುವ ದಾರಿಯಲ್ಲಿ, ಬಿರುಬೇಸಿಗೆಯ ಮಧ್ಯಾಹ್ನದ ದಿನವೊಂದರಲ್ಲಿ ಆರ್‌ವಿ ಯವರು, ಜಿಲ್ಲೆಯ ಇನ್ನೊಬ್ಬ ಹಿರಿಯ ಆಪ್ತಬಂಧು ವಿಷ್ಣು ನಾಯ್ಕರು ಮತ್ತು ಮಗ ವಿಠ್ಠಲನ ಜೊತೆ ನಮ್ಮ ಹುಬ್ಬಳ್ಳಿಯ ಮನೆಗೆ ಬಂದರು. ನನಗಂತೂ ಬದುಕಿನ ಹಲವು ಸಂಭ್ರಮದ ದಿನಗಳಲ್ಲಿ ಇದೂ ಒಂದು. ಅಂದು ನನ್ನದು ತರಕಾರೀ ಅಡಿಗೆ. ಆರ್‌ವಿಯವರಿಗೆ ಕೋಳಿ ಸಾರೆಂದರೆ ಇಷ್ಟದ ಊಟವೆಂದು ಕೇಳಿದ್ದೆ. ಅದನ್ನು ಮಾಡಿ ಬಡಿಸುವ ಹಂಬಲದಿಂದ ‘ಉಳಿಯಿರಿ ಸರ್, ನಾಲ್ಕು ದಿನದ ನಂತರ ಸಿರಸಿಯ ಬಸ್ಸು ಹತ್ತಿಸುವೆ’ ಅಂತ ಒತ್ತಾಯಪೂರ್ವಕವಾಗಿಯೇ ಅಂದಿದ್ದೆ. ಕಣ್ಣಲ್ಲಿ ಅದೇ ಮೋದ, ಶಾಂತಚಿತ್ತ, ಮಿದು ಹೂವಂಥ ತೀಕ್ಷ್ಣ ಸ್ವರದಲ್ಲಿ ‘ಇನ್ನೊಮ್ಮೆ ಬರುವೆ’ ಅಂದಿದ್ದರು.

ನಾನು ಹಾಗೂ ಪ್ರಕಾಶ್, ಎಷ್ಟೋ ಸಲ ನಮಗೆ ಆಮಂತ್ರಣವಿಲ್ಲದ ಸಾಹಿತ್ಯ ಕಾರ್ಯಕ್ರಮಗಳಿಗೆಲ್ಲ ಉಪಸ್ಥಿತರಿರುತ್ತಿದ್ದ ಸಂದರ್ಭದಲ್ಲಿ ಆರ್‍ವಿಯವರು ಹತ್ತಿರ ಸರಿದು ನಿಂತು ‘ಇದೇ ನಿಜವಾದ ಸಾಹಿತ್ಯ ಪ್ರೀತಿ’ ಅಂತ ಮೆಲುದನಿಯಲ್ಲಿ ಪಿಸುಗುಟ್ಟಿ ನಸುನಗುತ್ತಿದ್ದರು. ಕಾರ್ಯಕ್ರಮಗಳಲ್ಲಿ ಭೇಟಿಯಾದಾಗಲೆಲ್ಲ ಕನಿಷ್ಠ ಹತ್ತು ನಿಮಿಷವಾದರೂ ಮಾತಾಡದೇ ಅವಸರದಲ್ಲಿ ಎದ್ದು ಬಿಟ್ಟರೆ ನಮಗೆಂಥದೋ ಕಳಕೊಂಡ ತಪ್ಪಿತಸ್ಥ ಭಾವ. ಕೂಡಲೇ ಒಂದು ಪುಟ್ಟ ಪತ್ರ. ಹೀಗೆ ಜಾತಿ ಮತ ಲಿಂಗ ತಾರತಮ್ಯವಿಲ್ಲದೇ ನಮ್ಮ ಉತ್ತರಕನ್ನಡದ ಹಿರಿ-ಕಿರಿಯ ಬರಹಗಾರರದೆಲ್ಲ ಕೆಲವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಒಳಗೊಂಡೂ ಒಂದು ಸಮಗ್ರ ಕುಟುಂಬದಂತಹ ಸಂಬಂಧಗಳು. ಜಿಲ್ಲಾ ಸಮ್ಮೇಳನವೊಂದರಲ್ಲಿ ನಾನು ‘ಮಹಿಳೆ ಮತ್ತು ಸಾಹಿತ್ಯಾಭಿವ್ಯಕ್ತಿ’ ಎಂಬ ವಿಷಯ ಕುರಿತು ಪ್ರಬಂಧ ಮಂಡಿಸುತ್ತಿದ್ದ ಆ ವೇಳೆಯಲ್ಲಿ ಆರ್‍ವಿಯವರು ವೇದಿಕೆಯಿಂದ ಹೊರಗಿರುವ ಪುಸ್ತಕ ಮಳಿಗೆಯಲ್ಲಿ ಕೂತಿದ್ದು, ನನ್ನ ಲೇಖನವನ್ನು ಆಲಿಸಲಾಗಲಿಲ್ಲವೆಂಬ ಕಾರಣಕ್ಕೆ ಆನಂತರ ಅವರು ನನಗೆ ಎರಡು ಪತ್ರಗಳನ್ನು ಬರೆದು ಕೇವಲ ಓದುವುದಕ್ಕಾಗಿ ಅದನ್ನು ತರಿಸಿಕೊಂಡಿದ್ದರು. ತಲುಪಿದ ತಕ್ಷಣ ಮರುಟಪಾಲಿಗೊಂದು ಚುಟುಕಾದ ಅನಿಸಿಕೆ. ‘ನಿನ್ನ ಯೋಚನೆಗಳು (ಥಿಂಕಿಂಗ್ಸ್) ಸರಿಯಾದ ದಾರಿಯಲ್ಲಿವೆ, ಅಚ್ಚರಿಯ ಜೊತೆ ಸಂತೋಷವೂ ಆಯಿತು’ ಹೀಗೆ ಅದೇಕೋ ನನ್ನ ಬರಹಗಳೆಂದರೆ ಆರ್‍ವಿಯವರಿಗೆ ಒಂದು ವಿಶೇಷ ಪ್ರೀತಿಯಿತ್ತು ಕಾಳಜಿಯಿತ್ತು. 

‘ನನ್ನನ್ನು ಗುಂಪಿನಲ್ಲಿ ಗುರ್ತು ಹಿಡಿಯೋದು ಸುಲಭ ನೋಡಿ, ಈ ಬೆಳ್ಳಿ ಕೂದಲ ಭಾಗ್ಯದಿಂದ’ ಎಂದು ಯಾವುದೇ ಅಹಮಿಕೆಯಿಲ್ಲದೇ ಮುಗ್ಧ ಮುಕ್ತ ಮನಸ್ಸಿನಿಂದ ಹರಟುವ ಆರ್‍ವಿಯವರ ಭಾಷಣಗಳೆಂದರೆ ಜಿಲ್ಲೆಯ ಕಿರಿಯರಿಗೆ ಅಚ್ಚುಮೆಚ್ಚು. ಯಾಕೆಂದರೆ ಅಲ್ಲಿ ಯಾವುದೇ ಆಟಾಟೋಪವಿಲ್ಲದೇ ಸುಳಿದು ಬರುವ ತಾಜಾ ಆಗಿರುವ- ಪಳದಿ, ಕೋಳಿಸಂಡಿಗೆ, ಗುಳ್ಳೆ, ಸೋಗು, ದಂಡು, ಬೆಪ್ಪುತಕ್ಕಡಿ, ಹರಿಗೋಲು, ಹುಬೇಹೂಬು, ನದರು, ಗೋಣಿಚೀಲ ಮುಂತಾದ ಅಪ್ಪಟ ನೆಲದ ಭಾಷೆ ಹಾಗೂ ದೇಶೀ ನುಡಿಗಟ್ಟುಗಳೇ ಕಾರಣ. ಒಂದು ಹೊಸ ಸಿದ್ಧಾಂತ, ಹೊಸ ನೋಟವನ್ನು ಸೀಳಿ ತೋರಿಸುವ ಹೊಸ ವರಸೆ ಆರ್‍ವಿಯವರ ಭಾಷಣದ ವೈಶಿಷ್ಟ್ಯ. ತಮ್ಮ ‘ಬಿರುಗಾಳಿ’ ‘ಹದ್ದುಗಳು’ ಕೃತಿಗಳನ್ನು ಮಗಳಂತಿರುವ ನನಗೆ ‘ಗೌರವಪೂರ್ವಕ’ ಅಂತ ಬರೆದು ಸಹಿ ಹಾಕಿ ಕೊಟ್ಟಾಗ ಮಾತ್ರ ನಾನು ಸಿಡುಕಿ ಬಿಟ್ಟಿದ್ದೆ. ಅದಕ್ಕವರು ‘ಯಾಕೆ? ಕಿರಿಯರೆಂದ ಮಾತ್ರಕ್ಕೆ ಗೌರವ ತೊಗೊಳ್ಳಲು ಯೋಗ್ಯರಲ್ಲವೇ’ ಅಂತ ಸಮಾಧಾನಚಿತ್ತರಾಗಿ ಅದೇ ಆರ್ದ್ರಭಾವ ತುಂಬಿ ನುಡಿದಿದ್ದರು.  

ಕಾಡಿನ ಕವಿ ಕುವೆಂಪು ಸಾಹಿತ್ಯ ಸಮೀಕ್ಷೆಯನ್ನು ಸಹೃದಯರ ಮನಸ್ಸಿಗೆ ನೀಡಿದ ಭಂಡಾರಿಯವರು, ಕನ್ನಡ ಕಾದಂಬರಿಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷವೆಂಬ ಚಿಂತನಶೀಲ ಸಂಕಥನವನ್ನು ಸೃಷ್ಟಿಸಿದರು. ‘ಕಣ್ಣೇ ಕಟ್ಟೆ ಗಾಡೇ ಗೂಡೇ’ ಮುಂತಾದ ಕವನ ಸಂಕಲನಗಳಲ್ಲಿ ಅವರು ಕವಿಯಾಗಿ ಹೆಸರು ಮಾಡಿದ್ದರೂ ಒಂದು ಝಲಕ್ ನಂತೆ ಮಿಂಚಿ ಮರೆಯಾಗುತ್ತಿದ್ದ ಅವರ ಕವಿತೆಗಳ್ಯಾಕೋ ವಯಕ್ತಿಕವಾಗಿ ನನಗೆ ಅಷ್ಟು ಇಷ್ಟವಾಗುತ್ತಿರಲಿಲ್ಲ. ಆದರೆ ‘ಕೋಳಿಸಂಡಿಗೆ’ ಎಂಬ ಅವರ ಕಥೆಯೇ ಒಂದು ಒಳ್ಳೆಯ ಕಾವ್ಯದ ಹೊಳಹನ್ನು ನೀಡುವಷ್ಟು ಸಾಂದ್ರವಾಗಿತ್ತು. ಮಾರ್ಕ್ಸ ವಿಚಾರಧಾರೆಯಿಂದ ಪ್ರಭಾವಿತರಾದ ಆರ್‍ವಿಯವರು ‘ಬೆಂಕಿಯ ಮಧ್ಯೆ’ ಮತ್ತು ‘ಬಿರುಗಾಳಿ’ಯೆಂಬ ಜನಪರ ನಿಲುವಿನ ಹಾಗೂ ಮಕ್ಕಳ ಕಣ್ಣುಗಳ ಮೂಲಕ ಲೋಕವನ್ನು ನೋಡುವ ಎರಡು ಅಮೂಲ್ಯ ಕಾದಂಬರಿಯನ್ನು ಹೊರತಂದವರು. ‘ಬೆಳಕಿನ ಕಡೆಗೆ’ ಎಂಬ ಮಕ್ಕಳ ನಾಟಕಗಳ ಮೂಲಕ ಮಗುವಿನ ಮಾನಸಿಕ ಸಾಮಾಜಿಕ ಜಗತ್ತನ್ನು ವಿಸ್ತರಿಸುವತ್ತ ಗಮನಹರಿಸಿದವರು. ನನ್ನ ಅರಿವಿನ ಮಿತಿಗೆ ಬಾರದ ಅವರ ಇನ್ನೂ ಹಲವು ಬರಹಗಳು ಈಗಾಗಲೇ ಪ್ರಕಟವಾಗಿದ್ದು, ಇನ್ನೂ ಕೆಲವು ಮುದ್ರಣ ಹಂತದಲ್ಲಿದ್ದು, ಅವರ ಕನಸಿನ ಕೂಸು ‘ಬಂಡಾಯ ಪ್ರಕಾಶನ’ ಮಗ ವಿಠ್ಠಲ ಸೊಸೆ ಯಮುನಾ ಮಗಳು ಮಾಧವಿ ಅವರ ಆರೈಕೆಯಲ್ಲಿ ಇನ್ನಷ್ಟು ಪುಷ್ಟಿಯನ್ನು ಪಡೆಯುತ್ತಿದೆ. 

ನಾಲ್ಕೈದು ವರ್ಷಗಳ ಕೆಳಗೆ ಮೈಸೂರು ದಸರೆಯಲ್ಲಿ ಚಾಮುಂಡೇಶ್ವರಿ ಮೂರ್ತಿಯ ಮೆರವಣಿಗೆಯ ಕುರಿತು ತಮ್ಮದೇ ಕೆಲವು ತಾತ್ವಿಕ ಚಿಂತನೆಗಳನ್ನು ಮಂಡಿಸಿದ ಆರ್‍ವಿಯವರು ಮುಖ್ಯವಾಗಿ ಅಲ್ಲಿಯ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದ್ದರು. ಆ ವಿಷಯವೊಂದು ಕೆಲ ಕಾಲದವರೆಗೆ ಬಹುಮುಖೀ ಚರ್ಚೆಗೆ ಗ್ರಾಸ ಒದಗಿಸಿತ್ತು. ಹೀಗೆ ಅವರ ಮಾತು ಮತ್ತು ಕೃತಿ ಒಂದೇ ಆಗಿತ್ತಲ್ಲದೆ, ನುಡಿದಂತೆ ನಡೆವ ಬದ್ಧತೆಯಿದ್ದು ಕೆಲವು ಆದರ್ಶದ ವಿಷಯಕ್ಕಂತೂ ಸರ್ವತಾ ಹೊಂದಾಣಿಕೆಯ ಮನೋಭಾವ ಅವರ ಸ್ವಭಾವದಲ್ಲಿರಲಿಲ್ಲ. ಆ ಸಮಯದಲ್ಲೇ ಒಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಭೇಟಿಯಾದರು. ಚಾಮುಂಡೇಶ್ವರಿ ಮೆರವಣಿಗೆಯ ಕುರಿತು ಸೂಕ್ಷ್ಮವಾಗಿ ಕೇಳಿದೆ. ‘ಇನ್ನೊಬ್ಬರ ಮಾತನ್ನು ವಿಚಾರಗಳನ್ನು ಯೋಚನೆಗಳನ್ನು ಆಲಿಸುವವರ ಸಂಖ್ಯೆ ಇಂದಿನ ಕಿರಿಯರಲ್ಲಿ ವಿರಳವಾಗುತ್ತಿದೆ’ ಎಂದು ಖೇದ ತುಂಬಿದ ದನಿಯಲ್ಲಿ ಹೇಳಿ ಮುಗುಳ್ನಕ್ಕರು. ಡಾ. ಗೌರೀಶ ಕಾಯ್ಕಿಣಿಯವರಂತೆ ಚಿಂತನೆಗೆ ಹಚ್ಚುವ, ಸಂಘರ್ಷಗಳನ್ನು ಇನ್ನಷ್ಟು ಕೆದಕುವ, ಕಿಡಿಯಾಗಿ ಹೊಸ ಬೆಳಕನ್ನೇ ಮೂಡಿಸಿ ಹೊಸ ದಾರಿಗಳನ್ನೇ ಸೃಷ್ಟಿಸಿಬಿಡುವ ಆರ್‍ವಿಯವರ ಮನೋಶಕ್ತಿ ಮತ್ತು ಅವರು ಅರಳಿಸಿಟ್ಟ ಸಾಹಿತ್ಯ ವಿಸ್ತಾರ ಭೀಮಬಲದಿಂದ ಕೂಡಿದ್ದಾಗಿದೆ. 

ದರಾ ಸರ್ತಿಯಂತೆ ನನ್ನ ‘ಗಾಂಧಿ ಚಿತ್ರದ ನೋಟು’ ಕಥಾ ಸಂಕಲನದ ಪ್ರತಿಯೊಂದನ್ನು ಪ್ರತ್ಯೇಕವಾಗಿ ಆರ್‍ವಿ ಯವರ ಹೆಸರಿಗೆ ಕಳಿಸಿದ್ದೆ. ಅದೇ ದಿನ ಅವರ ಮಗಳು ನನ್ನ ಆಪ್ತ ಗೆಳತಿಯೂ ಆದ ಮಾಧವಿಯಿಂದ ದೂರವಾಣಿ ಬಂತು, ಮಾಧವಿ ತನ್ನ ತಂದೆಯನ್ನು ಅಣ್ಣ ಅಂತ ಸಂಬೋಧಿಸುತ್ತಾಳೆ. ‘ಅಣ್ಣನ ಹೆಸರಿಗೆ ಬೇರೆ ಯಾಕೆ ಕಳಿಸಿದಿ, ಅವರೀಗ ನಿನ್ನ ಪುಸ್ತಕವನ್ನು ಓದುವ ಹಂತದಲ್ಲಿಲ್ಲ’ ಎಂಬ ಎದೆಯೊಡೆವ ಸುದ್ದಿಯೊಂದನ್ನು ರವಾನಿಸಿದಳು. ನಾನು ಕಣ್ಣೀರಾಗಿ ಹೋದೆ. ಕರುಳ ಬಳ್ಳಿಯೊಂದು ಎಲ್ಲೋ ಸಡಿಲಾಗಿ ಹೋಗುತ್ತಿರುವ ಎಂಥದೋ ಅವ್ಯಕ್ತ ಸಂಕಟ, ಹಿಂಸೆ. 

ಕಳೆದ ದೀಪಾವಳಿ ಮುನ್ನಾ ದಿನ ಅಂಬಾರಕೊಡ್ಲಿನ ವಿಷ್ಣು ನಾಯ್ಕರ ಪರಿಮಳದಂಗಳದಲ್ಲಿ ಕಾವ್ಯ ಕಮ್ಮಟವೊಂದು ನಡೆಯುತ್ತಿದ್ದ ಸಂದರ್ಭದಲ್ಲೇ ಅವರ ಅಗಲಿಕೆಯ ಸುದ್ದಿ ವಿದ್ಯುತ್ ಶಾಕಿನಂತೆ ನಮ್ಮನ್ನು ತತ್ತರ ನಡುಗಿಸಿಬಿಟ್ಟಿತು. ಕೊನೆಯ ಕ್ಷಣ ಕಾಣಲಾಗಲಿಲ್ಲವೆಂಬ ದುಃಖ ಇಂದಿಗೂ ಕಾಡುತ್ತಿದೆ. ಕನ್ನಡದ ಚೈತನ್ಯ ಶಕ್ತಿ ಭಂಡಾರಿಯವರ ಆ ಮಂದಸ್ಮಿತ ನೋಟ, ಆ ಮೃದು ಮಧುರ ಸವಿನುಡಿಯ ಸನ್ನಿಧಿ, ನನ್ನ ಕಡೇ ಉಸಿರಿರುವ ತನಕ ನನ್ನೊಡಲಲ್ಲಿರುತ್ತದೆ. ನನ್ನನ್ನು ಹಾಗೂ ನನ್ನ ಬರವಣಿಗೆಯನ್ನು ಪೊರೆಯುತ್ತದೆ.
[ಆರ್ ವಿ ಭಂಡಾರಿ ಕುರಿತು ರಹಮತ್ ತರೀಕೆರೆ ಬರೆದ ಲೇಖನವನ್ನು ಓದಲು ಇಲ್ಲಿ ಕ್ಲಿಕ್ಕಿಸಿ]
ಪುಟದ ಮೊದಲಿಗೆ
 
Votes:  6     Rating: 3.5    
 ಭಂಡಾರಿಯವರು ಬ್ರಾಹ್ಮಣರೂ ಅಲ್ಲ, ಬ್ರಾಹ್ಮಣ್ಯದ ಬಗ್ಗೆ ಒಲವಿದ್ದವರೂ ಅಲ್ಲ. ಹೀಗಿದ್ದರೂ ಭಂಡಾರಿಯವರ ಜನ್ಮದಿನದ ನೆಪದಲ್ಲಿ ಬ್ರಾಹ್ಮಣ್ಯದ ಬ್ರಾಹ್ಮಣರ ಚರ್ಚೆ ಏಕೆ ಈ ವೇದಿಕೆಯಲ್ಲಾಗುತ್ತಿದೆ?...
 Re:  ನಿಮಗೇಕೆ ಇದರಬಗ್ಗೆ ಹೊಟ್ಟೇಕಿಚ್ಚು? ನೀವೂ ಮಾರ್ಕ್ಸ್‌ವಾದಿ ಬ್ರಾಹ್ಮ೦ಡ್ರಾ?
 ಇಲ್ಲಿ ಪ್ರತಿಕ್ರಿಯಿಸುತ್ತಿರುವವರಲ್ಲಿ ಬಹುತೇಕರು ಬ್ರಾಹ್ಮಣಶಾಹಿ ಮನೋಭಾವದವರೆಂಬುದು ಅವರ ಧಾಟಿಯಿಂದಲೇ ಸುಸ್ಪಷ್ಟ. ಇಂತಹವರ ವಿರುದ್ಧವೇ ಭಂಡಾರಿ ರಣಕಹಳೆ ಊದಿದ್ದು....
 Re:  ಇವರೊಬ್ಬ ಜಾತಿವಾದಿಯೆ೦ದು ಈ ಪ್ರತಿಕ್ರಿಯೆಯಿ೦ದಲೇ ಗೊತ್ತಾಗುತ್ತದೆ.
 Re:  ಕಹಳೆಯನ್ನಲ್ಲದೆ ಓಲಗವನ್ನು ಊದಬೇಕಿತ್ತೆ?!!
 illin kelavara reply-gaLannu noDidare avaru pratiyobbara huLuku huDukalende KENDASAMPIGE oduttiruvantide. - RAVEE...
 Re:  ರವೀ, ನೀವು ಮಾಡಿರುವುದು ಅದನ್ನೇ!
 ಭಂಡಾರಿಯವರಿಗೆ ಪ್ರಿಯವಾದ ಕರಿಕಾನಮ್ಮನ ಗುಡ್ಡ ನಿಜಕ್ಕೂ ರುದ್ರರಮಣೀವಾದ ಕ್ಷೇತ್ರ. ಅಲ್ಲಿ ನೆಲೆಸಿರುವ ಕರಿಕಾನಪರಮೇಶ್ವರಿ ಕೆಂಡಸಂಪಿಗೆಯ ಓದುಗರೆಲ್ಲರಿಗೂ ಒಳ್ಳೆಯದ್ದನ್ನು ಮಾಡಲಿ....
 Re:  ರುದ್ರರಮಣೀಯ ಕ್ಷೇತ್ರವಾದ ಕರಿಕಾನಮ್ಮನ ಗುಡ್ಡದ ಬಗ್ಗೆ ಸಚಿತ್ರವರದಿಯನ್ನು ಕೆ೦ಡಸ೦ಪಿಗೆಗೆ ದಯವಿಟ್ಟು ಬರೆಯಿರಿ. ಓದುಗರೆಲ್ಲರೂ ಅದರಲ್ಲಿ ವಿಹರಿಸುವ೦ತಾಗಲಿ.
 ಭಂಡಾರಿಯವರ ಬಗ್ಗೆ ಕೇಳಿ ಮತ್ತೆ ಅವರ ನೆನಪಿಸಿಕೊಂಡೆ ಒಂದೆರಡು ಭಾರಿ ಅವರೊಂದಿಗೆ ಜಗಳವಾಡಿದ್ದೆ. ಅವರ ಮಗ ವಿಠ್ಠಲ ನನ್ನ ಸ್ನೇಹಿತರು. ನಾನು ಮತ್ತು ನಾಟಕ ಅಕಾಡಮಿ ಸದಸ್ಯರಾಗಿದ್ದ ಕಿರಣ್ ಭಟ್ ತುಂಬಾ ಬಾರಿ ಅವರೊಂದಿಗೆ ಮಾತುಕತೆ ನಡೆಸಿದ್ದೆವು. ನಿಮ್ಮ ಬರಹ ಚೆನ್ನಾಗಿದೆ. ಅವರ ಬಗ್ಗೆ ಇನ್ನು ಬರೆಯ ಬಹುದಿತ್ತು....
 Re:  ನೀವು ಯಾರು ದಯವಿಟ್ಟು ತಿಳಿಸಿ
 ಭಂಡಾರಿಯವರ ವ್ಯಕ್ತಿತ್ವ ೨೪ ಕ್ಯಾರೆಟ್ ಚಿನ್ನದಂಥದ್ದು. ಆದರೆ ಅವರು ಬ್ರಾಹ್ಮಣ ವಿರೋಧಿಗಳಾಗಿದ್ದರು. ಬ್ರಾಹ್ಮಣೇತರ ಸಮಾಜಗಳ ಎಲ್ಲಾ ಮುಖ್ಯ ಸಮಸ್ಯೆಗಳಿಗೂ ಬ್ರಾಹ್ಮಣರೇ ಕಾರಣ ಎಂದು ಅವರು ಬಲವಾಗಿ ನಂಬಿದ್ದರು. ಮಾರ್ಕ್ಸ್‌ವಾದದಿಂದ ಪ್ರೇರಿತವಾಗಿದ್ದ ಅವರ ವೈಚಾರಿಕತೆ ವೈದಿಕ ಧರ್ಮವನ್ನು ಖಂಡಿಸುವಲ್ಲಿ ಎಲ್ಲಿಲ್ಲದ ಪ್ರಖರತೆಯನ್ನು ಪಡೆಯಿತು. -- ಹಂಪನಕಟ್ಟೆ ಶ್ರೀರಾಮ...
 Re:  ಬ್ರಹ್ಮದ್ವೇಷವೇ ಬಂಡಾಯ ಚಳುವಳಿಯ ಪ್ರಾಣವಾಯು. ಬ್ರಾಹ್ಮಣವಿರೋಧಿಯಾಗದೆ ಬಂಡಾಯ ಸಾಹಿತಿಯಾಗಲು ಸಾಧ್ಯವೇ ಇಲ್ಲ. ವೈದಿಕ ಧರ್ಮದ ವಿರುದ್ಧ ರಣಕಹಳೆ ಊದದ ಕೃತಿ ಬಂಡಾಯ ಸಾಹಿತ್ಯವಾಗಲು ಸಾಧ್ಯವೇ ಇಲ್ಲ. ಇಂತಹ ಸನ್ನಿವೇಶದಲ್ಲಿ ಪ್ರವರ್ಧಮಾನಕ್ಕೆ ಬಂದವರು ಭಂಡಾರಿ. ಹೀಗಾಗಿ ಅವರೂ ಸಹ ಮಿಕ್ಕ ಬಂಡಾಯಗಾರರ ಹಾಗೆ ಬ್ರಾಹ್ಮಣ ವಿರೋಧಿಯಾಗಿದ್ದು ಆಶ್ಚರ್ಯವೇನಲ್ಲ.
 ದಲಿತ ಬಂಡಾಯ ಚಳುವಳಿಯಲ್ಲಿ ಗುರುತಿಸಿಕೊಂಡ ಅನೇಕ ಮಂದಿ ಕಾಲ ಕಾಲಕ್ಕೆ ತಮ್ಮ ನಿಲುವುಗಳನ್ನು ಬದಲಿಸಿಕೊಂಡು ಯಾವ ಮೌಲ್ಯಗಳನ್ನು ವಿರೋಧಿಸಿದ್ದರೋ ಅದೇ ಮೌಲ್ಯಗಳ ಭಾಗವಾಗಿಬಿಟ್ಟರು. ಆದರೆ ಡಾ.ಭಂಡಾರಿಯವರು ಮಾತ್ರ ತಾವು ಪ್ರತಿಪಾದಿಸಿದ ಮೌಲ್ಯಗಳಿಗೆ ಕೊನೆತನಕವೂ ಬದ್ದರಾಗಿದ್ದರು. ಈ ಕಾರಣಕ್ಕಾಗಿಯೂ ಡಾ.ಭಂಡಾರಿ ಮುಖ್ಯರಾಗುತ್ತಾರೆ-ಚಿದಂಬರ ಬೈಕಂಪಾಡಿ...
 Re:  ಚಿದಂಬರ ಬೈಕಂಪಾಡಿಯವರೆ, ಮೌಲ್ಯಗಳನ್ನು ವಿರೋಧಿಸುವುದು ಮೂರ್ಖತನ ಹಾಗೂ ಅಪಾಯಕಾರಿ. ಮೌಲ್ಯಗಳಿಲ್ಲದ ಸಮಾಜ ನಿತ್ಯ ನರಕ ಸದೃಶ. ಮೌಲ್ಯಗಳ ಪೋಷಣೆ ಮತ್ತು ಸಂರಕ್ಷಣೆಯೇ ಪ್ರಜ್ಞಾವಂತ ನಾಗರಿಕರ ಹೊಣೆಗಾರಿಕೆ.
 nimmadu bejavaabdaari pratikriye. - ravi...
 ಇಲ್ಲಿ ಆರ್.ವಿ.ಯವರ ಪರಿಚಯಕ್ಕಿ೦ತ ಹೆಚ್ಚಾಗಿ ಸುನ೦ದಾರವರು ತಮ್ಮ ಪರಿಚಯವನ್ನೇ ಮಾಡಿಕೊ೦ಡಿದ್ದಾರೆ!...
 Re:  ತೇಜಸ್ವಿಯವರ ಅಣ್ಣನ ನೆನಪಿನ ಬಗ್ಗೆ ನಿಮ್ಮ ಅಭಿಪ್ರಾಯವೇನು?

1 comment: