ಈಗಲೂ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಜನಪ್ರಿಯವಾದ ಮಾಧ್ಯಮ ಎನ್ನುವುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಹವ್ಯಾಸಿ ತಂಡ, ವೃತ್ತಿ ಮೇಳ, ಹರಕೆಯ ಆಟಗಳ ಮೂಲಕ ಯಕ್ಷಗಾನ ಇಂದು ನೋಡುಗರನ್ನು ಪ್ರಭಾವಿಸಿದೆ. ಕಾಲದಿಂದ ಕಾಲಕ್ಕೆ ಹಲವು ಬದಲಾವಣೆಗೆ-ಪಠ್ಯದಲ್ಲಿಯೂ ಪ್ರದರ್ಶನದಲ್ಲಿಯೂ- ತೆರೆದುಕೊಂಡಿದೆ. ಯಕ್ಷಗಾನಕ್ಕೆ ವಿದ್ಯಾವಂತ ವರ್ಗದ ಪ್ರವೇಶದಿಂದಾಗಿ 'ಮಾತುಗಾರಿಕೆ' ಇನ್ನಷ್ಟು ಹೆಚ್ಚು ಚುರುಕುಗೊಂಡಿದೆ; ವಿಸ್ತಾರಗೊಂಡಿದೆ. ಕ್ವಚಿತ್ತಾದ ಉದಾಹರಣೆಯನ್ನು ಹೊರತುಪಡಿಸಿದರೆ ಇದು ಬಹುತೇಕ ಸಂದರ್ಭದಲ್ಲಿ ಸಾಂಪ್ರದಾಯಿಕ ಚೌಕಟ್ಟನ್ನು ದಾಟಿ ಹೋದಂತೇನೂ ಅನ್ನಿಸುವುದಿಲ್ಲ. ಆದರೆ ಭಾಗವತಿಕೆ ಕುಣಿತ ಮತ್ತು ಅಭಿನಯಗಳು ಭಿನ್ನ ಸ್ವರೂಪವನ್ನು ಪಡೆದುಕೊಳ್ಳುತ್ತಿವೆ. ಮುಖ್ಯ ರಾಗಗಳು, ಮುದ್ರೆಗಳು, ರಂಗಚಲನೆಗಳು ಮರೆಯಾಗಿ ಇತಿಹಾಸದ ಸಂಗತಿಯಾಗುತ್ತಿರುವದನ್ನು ಹಲವು ವಿದ್ವಾಂಸರು ಗುರುತಿಸಿದ್ದಾರೆ. ಈ ಚಹರೆ ಇಂದಿನದು ಮಾತ್ರವಲ್ಲ 1955ರಲ್ಲಿ 'ಯಕ್ಷಗಾನ ಕೈಪಿಡಿ' ರಚಿಸಿದ ಕೃಷ್ಣ ಭಂಡಾರಿ ಸೋಂದಾ ಅವರ ಕಲದ್ದೂ ಆಗಿತ್ತು. ....ಕನ್ನಡಿಗರ ಪ್ರಾಚೀನ ಕಲೆಯಾದ ಈ ಯಕ್ಷಗಾನವು ತನ್ನ ವೈಶಿಷ್ಟ್ಯವನ್ನೇ ಕಳೆದುಕೊಳ್ಳತೊಡಗಿ ಕಾಲಾನಂತರದಲ್ಲಿ ಇದರ ಅಸ್ತಿತ್ವಕ್ಕೂ ಲೋಪ ಬರಬಹುದೆಂಬ ಭ್ರಾಂತಿ ಅನೇಕ ಶ್ರದ್ಧಾವಂತ ಯಕ್ಷಗಾನ ಭಕ್ತರಲ್ಲಿ ಉಂಟಾಗತೊಡಗಿತು. ಎನ್ನುವ ಆತಂಕ ಭಂಡಾರಿಯವರನ್ನು ಅಂದು ಕಾಡಿತ್ತು. ಇದರ ಫಲವೇ ಈ ಕೃತಿ ರಚನೆ ಎನ್ನುವುದು ಸ್ಪಷ್ಟವಾಗಿದೆ.
ಚಾರಿತ್ರಿಕ ಮಹತ್ವ :
ಸುಮಾರು 1955ರಲ್ಲಿ ಮೊದಲ ಬಾರಿಗೆ ಮುದ್ರಣಗೊಂಡು ಜನಮಾನಸದಿಂದ ದೂರವಾದ 'ಯಕ್ಷಗಾನ ಕೈಪಿಡಿ' ಒಂದು ಚಾರಿತ್ರಿಕ ಮಹತ್ವದ ಕೃತಿಯಾಗಿರುವುದರಿಂದ ಬಂಡಾಯ ಪ್ರಕಾಶನ ಇದನ್ನು ಪ್ರಕಟಿಸಲು ಮುಂದಾಗಿದೆ. ನಿದರ್ಿಷ್ಟ ಚಾರಿತ್ರಿಕ ಘಟ್ಟದಲ್ಲಿ 'ಯಕ್ಷಗಾನ', ಸಾಹಿತ್ಯಿಕ ಮೌಲ್ಯದ ದೃಷ್ಟಿಯಿಂದ ಹಾಗೂ ರಂಗ ಪ್ರದರ್ಶನದ ದೃಷ್ಟಿಯಿಂದಲೂ ಹೊರಳಿಕೊಳ್ಳುತ್ತಿರುವ ಸಂಧಿಕಾಲವನ್ನು ಇದು ದಾಖಲಿಸುತ್ತದೆ. ಈಗಿತ್ತ ಸಂಗೀತ ನಾಟಕ-ಚಲಚ್ಚಿತ್ರಗಳ ಯುಗಾರಂಭವಾದ ಮೇಲೆ ಅದರ ಥಳುಕು-ಸೆಳಕುಗಳ ಸಂಸರ್ಗ ಈ ಕಲೆಯ ಸೇವಕರಲ್ಲಿಯೂ ಆಗತೊಡಗಿ ಮುಖ್ಯತಃ ನಟರ ವೇಷ, ಭೂಷಣ, ನೃತ್ಯ ಮತ್ತು ಅಭಿನಯ, ಹಾಡುಗಾರಿಕೆಯಲ್ಲಿಯೂ ಅವುಗಳ ಪ್ರಭಾವ ಕಂಡುಬರುತ್ತಿದ್ದುದು ಎಲ್ಲರೂ ಅರಿತ ಮಾತಾಗಿದೆ. ಎಂದು ಯಕ್ಷಗಾನ ತನ್ನ ಮೂಲಸ್ವರೂಪ ಕಳೆದು ಕೊಳ್ಳುವುದಕ್ಕೆ ಕಾರಣವಾದ ಅನ್ಯ ಪ್ರಭಾವದ ಕುರಿತು ಗಮನ ಸೆಳೆಯುತ್ತಾರೆ. ತಾನು ಈ ಕೃತಿ ರಚನೆ ಮಾಡುವ ಕಾಲದಲ್ಲಿ ಹಲವು ಹಳೆಯ ರಾಗಗಳು, ಹೆಜ್ಜೆಗಳು ಮಾಯವಾಗಿವೆ ಎಂದು ಲೇಖಕರು ಹೇಳುತ್ತಾರೆ. ಆದರೆ ಅವೆಲ್ಲವನ್ನೂ ಇಲ್ಲಿ ದಾಖಲಿಸಿದ್ದಾಗಿಯೂ ಹೇಳಿದ್ದಾರೆ. ಈ ಕೃತಿ ರಚನೇ ಆದ ಎರಡು ವರ್ಷದ ನಂತರ ಅಂದರೆ 1957 ರಲ್ಲಿ ರಚಿಸಲ್ಪಟ್ಟ 'ಯಕ್ಷಗಾನ ಬಯಲಾಟ' ಕೃತಿಯಲ್ಲಿ ಕೋಟ ಶಿವರಾಮ ಕಾರಂತರು ಕೂಡ ಯಕ್ಷಗಾನದ ಪಾಲಿಗೆ ಈಗ ಒಂದು ಸಂಧಿ ಕಾಲವೇ ಬಂದಂತಿದೆ. ಅದನ್ನು ಜನರು ಪ್ರೋತ್ಸಾಹಿಸದೇ ಬೀಳುಬಿಡುತ್ತಿದ್ದಾರೆ-ಎಂಬುದಕ್ಕಿಂತಲೂ ಹೆಚ್ಚಿನ ದು:ಖ ಆ ಕಲೆಯ ಆಳ, ಶಕ್ತಿಯನ್ನರಿಯದೆ ಅದಕ್ಕೆ ಅಪಚಾರ ಮಾಡುತ್ತಿದ್ದಾರಲ್ಲ ಎಂಬುದು. ಇದನ್ನು ತಡೆಯುವ ದಾರಿ ಯಾವುದು-ಎಂದು ನಾವು ಯೋಚಿಸಬೇಕಾದ ಕಾಲ ಬಂದಿದೆ. ನಾವಿನ್ಯತೆಯ ಮೋಹ ಈ ದೇಶೀಯ ಕಲೆಗೆ ಮೃತ್ಯುವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದನ್ನು ಕಾಣಬಹುದು( 1957;ಪುಟ:22-23, ಹರ್ಷ ಮುದ್ರಣ, ಪ್ರಕಟನಾಲಯ; ಪುತ್ತೂರು, ದ. ಕ). ಬಹುಶಃ ಈಗ ಇವುಗಳಲ್ಲಿ ಇನ್ನಷ್ಟು ಇತಿಹಾಸದ ಪುಟ ಸೇರಿರಬೇಕು. ಆದ್ದರಿಂದ ಕಾಲಕಾಲಕ್ಕೆ ನಡೆದ ಬದಲಾವಣೆಯ ಅಧ್ಯಯನಕ್ಕೆ ಸಂಶೋಧಕರಿಗೆ ಇದೊಂದು ಆಕರ ಗ್ರಂಥವಾಗಬಹುದು ಎನ್ನುವುದು ಪ್ರಕಾಶನದ ಆಶಯ.
ಪುಸ್ತಕದ ಮೊದಲ ಭಾಗದಲ್ಲಿ ಕಲೆಯ ಉಗಮ ಮತ್ತು ಸ್ವರೂಪದ ಚಚರ್ೆಗೆ - ನಾದೋತ್ಪತ್ತಿಯ ಲಕ್ಷಣ, ನಾದಲಕ್ಷಣದಿಂದ ಪ್ರಾರಂಭಿಸಿ ಸೂತ್ರಧಾರಿಯ ಲಕ್ಷಣದವರೆಗೆ- ಸಂಬಂಧಿಸಿದಂತೆ ಭರತನ ನಾಟ್ಯಶಾಸ್ತ್ರದ ಹಲವು ಶ್ಲೋಕಗಳನ್ನು ಅರ್ಥ ಸಹಿತವಾಗಿ ವಿವರಿಸಲಾಗಿದೆ. ಹೀಗೆ ಮಾಡುವಾಗೆಲ್ಲಾ ನಾಟ್ಯ, ತಾಳ, ನಾದ, ಭಾಷೆ ಇತ್ಯಾದಿಗಳನ್ನೆಲ್ಲಾ ದೈವದ ಕೊಡುಗೆಯಾಗಿಯೇ ನೋಡುವ ಸಾಂಪ್ರದಾಯಿಕ ನೋಟವಿದೆ. ಕಲೆಯ ಉಗಮದ ಕುರಿತು ಭರತನ 'ನಾಟ್ಯ ಶಾಸ್ತ್ರ'ದ ನಿಲುವುಗಳನ್ನು (ನಾಟ್ಯ ಶಾಸ್ತ್ರದ ಚಾರಿತ್ರಿ ಮಹತ್ವವನ್ನು ಒಪ್ಪಿಕೊಳ್ಳುತ್ತಲೇ) ಒಪ್ಪಲು ಸಾಧ್ಯವಿಲ್ಲ ಎನ್ನುವುದು ಬೇರೆ ಮಾತು. ಆದರೆ ಕೃಷ್ಣ ಭಂಡಾರಿಯವರು ಭರತನ ನಾಟ್ಯಶಾಸ್ತ್ರವನ್ನು ಉತ್ತರ ಕನ್ನಡಕ್ಕೆ ವಿಶಿಷ್ಟವಾದ ಯಕ್ಷಗಾನದೊಂದಿಗೆ ಅನುಸಂಧಾನ ಮಾಡುತ್ತಿರುವುದು ತೀರಾ ಮುಖ್ಯವಾದುದು. ಬಹುವಿಸ್ತಾರವಾದ ಭೂಮಿಕೆ ಉಳ್ಳ ಭರತನ ಸಿದ್ಧಾಂತವನ್ನು ಸ್ಥಳೀಯತೆಯೊಂದಿಗೆ ಇಟ್ಟು ನೋಡುವ ಆ ಮೂಲಕ ಯಕ್ಷಗಾನಕ್ಕೊಂದು ಶಾಸ್ತ್ರೀಯ ಚೌಕಟ್ಟನ್ನು ರೂಪಿಸಲು ಅವರು ನಡೆಸಿದ ಪ್ರಯತ್ನವನ್ನು ಇಲ್ಲಿ ಚಾರಿತ್ರಿಕವಾಗಿ ಗಮನಿಸಬಹುದು. ದಕ್ಷಿಣೋತ್ತರ ಜಿಲ್ಲೆಯಲ್ಲಿ ಮಾತ್ರ ಪ್ರಚಲಿತವಿದ್ದ ಈ ಕಲೆಯನ್ನು ಅವರು ಕನ್ನಡದ ಕಲೆಯೆಂದೇ ಒತ್ತು ಕೊಡುತ್ತಿರುವುದನ್ನ್ನೂ ಗಮನಿಸಬಹುದು.
ಶೈಕ್ಷಣಿಕ ಮಹತ್ವ :
ಯಕ್ಷಗಾನದ ಭಾಗವತಿಕೆ, ಕುಣಿತ ಮತ್ತು ಮದ್ದಲೆಯನ್ನು ಕಲಿಯುವ ಆಸಕ್ತಿರಿಗೆ ಇದೊಂದು ಮಹತ್ವದ ಶೈಕ್ಷಣಿಕ ಕೃತಿ ಕೂಡ. ಸಂಪ್ರದಾಯ ಬದ್ಧವಾಗಿ ಒಂದು ಕಲೆಯನ್ನು ಕಲಿಸುವ ಪಠ್ಯಗಳು ನಮ್ಮಲ್ಲಿ ತೀರಾ ಅಪರೂಪ. ಈ ನಿಟ್ಟಿನನಲ್ಲಿ ಐವತ್ತರ ದಶಕದಲ್ಲಿಯೇ ಭಂಡಾರಿಯವರಿಂದ ಈ ಶ್ಲಾಘನೀಯ ಕೆಲಸ ನಡೆಯಿತು. ರಾಗದ ಆರೋಹಣ, ಅವರೋಹಣಗಳನ್ನು, ಮೃದಂಗದ ಬಿಡ್ತಿಗೆಯನ್ನು ಬಹುಶಃ ಮೌಖಿಕವಾಗಿ ಅಥವಾ ಪ್ರಾಯೋಗಿಕವಾಗಿ ಹೇಳುವುದು ಸುಲಭವಾಗಬಹುದು. ಆದರೆ ಬರವಣಿಗೆಗೆ ಇಳಿಸುವುದು ತೀರಾ ಕಷ್ಟ ಸಾಧ್ಯವಾದದ್ದು. ಯಾವುದೇ ಸಾಂಪ್ರದಾಯಿಕ ಶಿಕ್ಷಣ ಪದವಿ ಹೊಂದಿರದ ಕೃಷ್ಣ ಭಂಡಾರಿಯವರು ಒಂದು ಶಾಸ್ತ್ರ ಗ್ರಂಥವನ್ನು ಎಲ್ಲೂ ಸಂಶಯಕ್ಕೆ ಎಡೆಯಿಲ್ಲದಂತೆ ಇಲ್ಲಿ ನಿರೂಪಿಸಿದ್ದು ಮೆಚ್ಚುವಂತದ್ದು. ಇಷ್ಟೊಂದು ಸರಳವಾಗಿ ಮತ್ತು ಸಮಗ್ರವಾಗಿ ವಿವರಿಸುವ ಇಂಥದ್ದೊಂದು ಕೃತಿ ಈವರೆಗೂ ಇರಲಾರದು. ರಾಗ-ತಾಳಗಳ ಸ್ಪಷ್ಟತೆ, ಖಚಿತತೆ ಮತ್ತು ಈ ಕ್ಷೇತ್ರದಲ್ಲಿರುವ ಪ್ರಾಯೋಗಿಕ ಅನುಭವದಿಂದಾಗಿ ಇದು ಒಂದು 'ಮಾದರಿ ಬರವಣಿಗೆ' ಕೂಡ. ಹಾಗಾಗಿ ರಾಜ್ಯಾದ್ಯಂತ ನಡೆಯುತ್ತಿರುವ ಯಕ್ಷಗಾನ ಶಾಲೆಗಳಿಗೆ ಈ ಕೃತಿ ಶೈಕ್ಷಣಿಕ ಪಠ್ಯವಾಗಿ ವರದಾನವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಗೃಂಥಕರ್ತರ ಪರಿಚಯ :
ಕೃಷ್ಣ ತಾಯಿಲಕ್ಷ್ಮೀ ಭಂಡಾರಿಯವರು ಶಿರಸಿ ತಾಲೂಕಿನ ಸೋಂದಾ ಗ್ರಾಮದವರು. ಶಿರಸಿ-ಯಲ್ಲಾಪುರ ಮಾರ್ಗದಲ್ಲಿ ಮುಖ್ಯರಸ್ತೆಯಿಂದ ಸುಮಾರು 12 ಕಿ.ಮಿ. ದೂರದಲ್ಲಿದೆ ಇವರ ಮನೆ. ತೀರಾ ಬಡ ಕುಟುಂಬದಿಂದಲೂ ಹಿಂದುಳಿದ ಸಮುದಾಯದಿಂದಲೂ ಬಂದಿರುವ ಇವರು ಸೋಂದಾದ ಮಠದಲ್ಲಿ 'ಕರ್ನೆ' ಭಾರಿಸುತ್ತಿದ್ದರು. ದೇವರ ಹೆಸರಿನಲ್ಲಿ ಅವರು ನೀಡುವ ಅಕ್ಕಿಗಾಗಿಯೋ ಊಟಕ್ಕಾಗಿಯೋ ವಾದ್ಯ ಮಾಡುವ ಬಿಟ್ಟಿ ಕಾಯಕ ಇವರದು. ಒಳ್ಳೆಯ ಪಂಚವಾದ್ಯ ಕಲಾವಿದರಾಗಿ (ಅದರಲ್ಲಿ 'ಮೋವ್ರಿ' ವಾದಕರಾಗಿ) ಆ ಕಾಲದಲ್ಲಿ ಹೆಸರು ಮಾಡಿದವರು. ಚಿಕ್ಕಂದಿನಿಂದಲೂ ತಾಯಿಯ ಆರೈಕೆಯಲ್ಲಿಯೇ ಬೆಳೆದ ಇವರು ಮಠದ ಗೇಣಿದಾರರಾಗಿ ಅಲ್ಲಿಯೇ ಊಳಿಗಮಾಡಿಕೊಂಡು ಬಡತನದಲ್ಲಿಯೇ ಬೆಳೆದರು. ಪಾರಂಪರಿಕವಾಗಿ ಬಂದ ಪಂಚವಾದ್ಯ ಕಲಾವಿದರಾದ್ದರಿಂದ ಸಹಜವಾಗಿಯೇ ಇವರಿಗೆ ರಾಗ ಮತ್ತು ತಾಳದ ಖಚಿತ ಜ್ಞಾನ ಅವರಿಗೆ ಇತ್ತು. ಇದರೊಂದಿಗೆ ಬಾಲ್ಯದಿಂದಲೇ ಸುತ್ತ ನಡೆಯುತ್ತಿರುವ ಆಟ, ತಾಳಮದ್ದಲೆಯನ್ನು ನೋಡುತ್ತಿದ್ದ ಇವರು ಸಾವಕಾಶ ಅದರ ಕಡೆಗೇ ಒಲಿದರು.
krishna bhandari, sonda |
ಎತ್ತರದ ನಿಲುವು, ತಲೆಗೊಂದು ಕಪ್ಪು ಟೊಪ್ಪಿ, ಬಿಳಿ ಪಂಜೆ, ಮೇಲೆ ಒಂದು ಜುಬ್ಬಾ ಹಾಕಿಕೊಂಡು ಬದುಕಿನ ತುಂಬಾ ಯಕ್ಷಗಾನಕ್ಕಾಗಿಯೇ ನಡೆದರು. ಮದ್ದಲೆ ವಾದಕರಾಗಿ ಭಾಗವತರಾಗಿ, ವೇಷಧಾರಿಯಾಗಿ ಮತ್ತು ತಾಳಮದ್ದಲೆಯ ಅರ್ಥಧಾರಿಯಾಗಿಯೂ ಅವರು ಆ ಕಾಲದಲ್ಲಿ ಹೆಸರು ಮಾಡಿದ್ದರು. ಇವೆಲ್ಲದರಲ್ಲಿಯೂ ಅವರಿಗೆ ಅಪಾರವಾದ ಗತಿ ಇರುವುದರಿಂದ ಯಕ್ಷಗಾನದ ಮಾಸ್ತರರಾಗಿಯೂ ಯಶಸ್ವಿಯಾದರು. ಸುತ್ತಮುತ್ತಲಿನ ಊರುಗಳಿಗೆ ಹೋಗಿ ಹದಿನೈದು-ಇಪ್ಪತ್ತು ದಿವಸ ಅಲ್ಲೇ ಉಳಿದು ಸ್ಥಳೀಯ ಕಲಾವಿದರಿಗೆ ಯಕ್ಷಗಾನವನ್ನು ಕಲಿಸಿ ಬರುತ್ತಿದ್ದರು. ಅಲ್ಲಿ ಅವರಿಗೆ ಸಂಭಾವನೆ ಸಿಗುತ್ತದೆಂಬ ಯಾವ ಭರವಸೆಯೂ ಇಲ್ಲ. ಆಹೊತ್ತಿನ ಊಟಕ್ಕೆ-ಚಹಾಕ್ಕೇನೂ ಕೊರತೆ ಇರಲಿಲ್ಲ. ಮನೆಯಲ್ಲಿ ಹೆಂಡತಿ ಲಲಿತಾ ಮತ್ತು ಮಹಾಬಲೇಶ್ವರ, ದೇವರು ಎನ್ನುವ ಎರಡು ಮಕ್ಕಳು. ಹೇಗೋ ಸಂಸಾರ ನಡೆಯುತ್ತಿತ್ತು. ಈಗಲೂ ಅವರ ಮೂಲ ಮನೆ ಸೋಂದಾ ಮಠದ ಪಕ್ಕದಲ್ಲಿಯೇ ಇದೆ. ಅದರಲ್ಲಿ ಈಗ ಅವರ ಮೊಮ್ಮಗ ಶಹನಾಯಿ ವಾದಕ ದತ್ತಾತ್ರೆಯ ಭಂಡಾರಿ ವಾಸವಾಗಿದ್ದಾರೆ.
ಆ ಕಾಲದಲ್ಲಿ ತ್ಯಾಗಲಿ, ಸೋಂದಾ, ಶಿರಸಿಯಲ್ಲಿ ನಡೆದ ಯಕ್ಷಗಾನ ಸಮ್ಮೇಳನದಲ್ಲಿ ಭಾಗವಹಿಸಿದ ಉಲ್ಲೇಖ ಮಾಡುತ್ತಾರೆ. ಅಲ್ಲಿ ನಡೆದ ಗಂಭೀರ ಚಚರ್ೆಯೇ ಅವರಿಗೆ ಈ ಕೃತಿ ಬರೆಯಲು ಹುಮ್ಮಸ್ಸು ನೀಡಿತು. ಯಕ್ಷಗಾನ ರಂಗದಲ್ಲಿ ಆಗುತ್ತಿರುವ ಅನುಚಿತ ಬೆಳವಣಿಗೆಯನ್ನು ಸ್ವಲ್ಪಮಟ್ಟಿಗಾದರೂ ತಡೆಹಿಡಿಯುವ ಮಾರ್ಗವಾಗಿ ಇರುವ ಸೋಗೆಮನೆಯಲ್ಲಿಯೇ ಯಕ್ಷಗಾನ ಶಾಲೆಯನ್ನು ತೆರೆದರು. ಕೃಷ್ಣ ಭಂಡಾರಿಯವರ ಯಕ್ಷಶಾಲೆಯಲ್ಲಿ 15 ರಿಂದ 25 ಜನರ ವರೆಗೂ ವಿದ್ಯಾಥರ್ಿಗಳಿದ್ದರೆಂದು ಅವರ ಆಪ್ತರು ಹೇಳುತ್ತಾರೆ. ಎಲ್ಲಾ ಜಾತಿ, ಪಂಗಡಗಳ ಆಸಕ್ತರಿಗೆ ಈ ಶಾಲೆ ತೆರೆದುಕೊಂಡಿತ್ತು. ಅವಶ್ಯವಿದ್ದಲ್ಲಿ ವಿದ್ಯಾಥರ್ಿಗಳಿಗೆ ಊಟ-ತಿಂಡಿಯ ವ್ಯವಸ್ಥೆಯನ್ನೂ ಮಾಡಿದ ಕುರಿತು ಹೇಳಲಾಗುತ್ತದೆ. ಯಕ್ಷಗಾನ ಪ್ರದರ್ಶನಕ್ಕೆ ಅಗತ್ಯವಿದ್ದ ಕುಣಿತ, ಭಾಗವತಿಕೆ, ಮೃದಂಗ, ಚಂಡೆ (ಕೆಲವು ಬಾರಿ ಚಂಡೆಯ ಬದಲು ತಾಸ್ಮೋರನ್ನು ಬಳಸುತ್ತಿದ್ದರು.) ಮುಂತಾದ ಎಲ್ಲಾ ವಿಭಾಗದಲ್ಲಿಯೂ ಶಾಸ್ತ್ರೀಯವಾಗಿ ಕಲಿಸಲಾಗುತ್ತಿತ್ತು. ಯಕ್ಷಗಾನ ವಿದ್ವಾಂಸರ ನಡುವೆ ಗೌರವಾನ್ವಿತ ಸ್ಥಾನ ಪಡೆದ ಸೋಂದಾ ಕೃಷ್ಣ ಭಂಡಾರಿಯವರು ಸ್ವತ: ಬಡತನದ ಬೇಗೆಯಲ್ಲಿ ಬೆಂದರೂ ತಾವು ಕಲಿತದ್ದನ್ನು, ಕಲಿಸಿದ್ದನ್ನು ಈ ಪುಸ್ತಕದಲ್ಲಿ ದಾಖಲಿಸುವ ಮೂಲಕ ಯಕ್ಷಗಾನ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.
ನನ್ನ ತಂದೆ (ಆರ್. ವಿ. ಭಂಡಾರಿ) ಈ ಪುಸ್ತಕದ ಕುರಿತು ಮೊದಲು ನನ್ನ ಗಮನ ಸೆಳೆದವರು. 'ಯಕ್ಷಗಾನ ಬಯಲಾಟ' ಪುಸ್ತಕ ಬರೆದ ಶಿವರಾಮ ಕಾರಂತರೂ ಕೃಷ್ಣ ಭಂಡಾರಿಯವರನ್ನು ಉಲ್ಲೇಖಿಸಿದ್ದನ್ನು ನೆನಪಿಸಿಕೊಂಡಿದ್ದ ಅವರು(ಕಾರಂತರ ಬರಹದಲ್ಲೋ ಅಥವಾ ಭಾಷಣದಲ್ಲೋ ಗೊತ್ತಿಲ್ಲ.)ಇಂತಹ ಮಹತ್ವದ ಪುಸ್ತಕವನ್ನು ಮರುಮುದ್ರಿಸುವ ಕಾಳಜಿಯನ್ನು ವ್ಯಕ್ತಪಡಿಸಿದ್ದರು. ಈಗ ಅವರ ನೆನಪಿನ ಪುಸ್ತಕ ಮಾಲೆಯಾಗಿ ಪ್ರಕಟಿಸುತ್ತಿದ್ದೇವೆ.
ಈ ಕೃತಿಯನ್ನು ಸಂಪಾದಿಸುವಾಗ ಮೂಲದಲ್ಲಿ ಬಳಸಲಾದ ಕೆಲವು ಶಬ್ದಗಳು ಮತ್ತು ವಾಕ್ಯಗಳ ರಚನೆ ಈಗಿಲ್ಲದಿದ್ದರೂ ಅದನ್ನು ಬದಲಾಯಿಸದೇ ಹಾಗೇ ಇಟ್ಟುಕೊಳ್ಳಲಾಗಿದೆ. ಯಾಕೆಂದರೆ ಇದು ಆಕಾಲದ ಭಾಷಾ ಬಳಕೆಯ ಬಗ್ಗೆ ಕೂಡ ಮಹತ್ವದ ದಾಖಲೆಯಾಗಬಹುದು ಎನ್ನುವ ಕಾರಣದಿಂದ.
ಈ ಪುಸ್ತಕದಲ್ಲಿ ಪ್ರಸ್ತಾಪಿತವಾದ ಹಲವು ಸಂಗತಿಯು ನನಗೆ ಹೊಸತಾಗಿದ್ದರಿಂದ ನಾನು ಯಕ್ಷಗಾನದ ವಿದ್ವಾಂಸರೂ ಪ್ರಸಂಗಕರ್ತರೂ ಆದ ಪ್ರೋ. ಎಂ.ಎ.ಹೆಗಡೆಯವರ ಸಹಾಯ ಕೋರಿದೆ. ಪುಸ್ತಕ ಪ್ರಕಟಿಸುವ ಯೋಜನೆ ಮುಂದಿಟ್ಟಾಗ ಅವರು ಸಂತೋಷದಿಂದಲೇ ಅನುಮೋದಿಸಿದರು ಮಾತ್ರವಲ್ಲ ಎರಡೆರಡು ಬಾರಿ ಪುಸ್ತಕದ ಪ್ರೂಫ್ ತಿದ್ದಿಕೊಟ್ಟರು. ಉಪಯುಕ್ತವಾದ ಒಂದು ಮುನ್ನುಡಿಯನ್ನೂ ಬರೆದುಕೊಟ್ಟು ಪ್ರೋತ್ಸಾಹಿಸಿದರು. ಅವರಿಗೆ ಪ್ರಕಾಶನವು ಕೃತಜ್ಞವಾಗಿದೆ.
ಈ ಪುಸ್ತಕ ತರುವಲ್ಲಿ ಕೃಷ್ಣ ಭಂಡಾರಿಯವರ ಮೊಮ್ಮಗ ದತ್ತಾತ್ರೆಯ ಭಂಡಾರಿಯವರ ನೆರವನ್ನು ನೆನೆಯಲೆ ಬೇಕು. ನನಗೆ ಸಿಕ್ಕಿರುವ 'ಯಕ್ಷಗಾನ ಕೈಪಿಡಿ' ಪುಸ್ತಕಗಳಿಗೆಲ್ಲಾ ಒಂದೋ ಹಿಂಬದಿಯ ಪುಟಗಳಿರಲಿಲ್ಲ ಅಥವಾ ಮುಂಬದಿಯ ಪುಟಗಳಿರಲಿಲ್ಲ. ಅಂತಹ ಸಂದರ್ಭದಲ್ಲಿ ದತ್ತಾತ್ರೆಯ ಅವರು ಅಜ್ಜನ ಕುರಿತ ಹೆಮ್ಮೆಯಿಂದ ಪೂರ್ಣರೂಪದ ಪುಸ್ತಕ ಒದಗಿಸಿದರು; ಫೋಟೋ ಒದಗಿಸಿದರು; ಪ್ರೀತಿಯಿಂದ ಅಜ್ಜನ ಕುರಿತು ಅಗತ್ಯವಾದ ಮಾಹಿತಿ ಒದಗಿಸಿದರು. ದತ್ತಾತ್ರೇಯ ಭಂಡಾರಿ ಕೂಡ ಜಿಲ್ಲೆಯಾದ್ಯಂತ ಹಲವು ಕಾರ್ಯಕ್ರಮ ನೀಡಿದ ಒಳ್ಳೆಯ ಶಹನಾಯಿ ವಾದಕರು. ದೂರದ ಕಾಶಿಗೆ ಹೋಗಿ ಶಹನಾಯಿಯ ದಂತಕತೆ ಬಿಸ್ಮಿಲ್ಲಾಖಾನರೊಂದಿಗೆ ಇದ್ದು ಶಹನಾಯಿ ನುಡಿಸುವ ಸೂಕ್ಷ್ಮವನ್ನು ಕಲಿತು ಬಂದವರು. ಅವರು ಮತ್ತು ಅವರ ಮಡದಿ ಪ್ರಫುಲ್ಲಾ ಅವರ ಸಹಾಯಕ್ಕೆ ಕೃತಜ್ಞತೆಗಳು.
ಇದನ್ನು ಪ್ರಕಟಿಸಲು ಅಗತ್ಯವಾದ ಆಥರ್ಿಕ ನೆರವನ್ನೂ ನೀಡಿದ ಸಹಯಾನ (ಡಾ. ಆರ್.ವಿ. ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ), ಚಿಂತನ ರಂಗ ಅಧ್ಯಯನ ಕೇಂದ್ರ, ಉತ್ತರ ಕನ್ನಡ, ಯಕ್ಷಕಿರೀಟ ಕೆರೆಕೋಣ, ಮುಂತಾದ ಸಂಸ್ಥೆಗಳ ಗೆಳೆಯರಿಗೆ ಅನಂತ ಕೃತಜ್ಞತೆಗಳು.
ಈ ಹಿಂದೆ ಮೊಳೆ ಜೋಡಿಸಿ ಮುದ್ರಿಸಿದ ಕೆಲಸವನ್ನು ಈಗ ಕಂಪ್ಯೂಟರನಲ್ಲಿ ಮಾಡುವುದು ಸಾಹಸದ ಕೆಲಸ. ಇದನ್ನು ತಾಳ್ಮೆಯಿಂದ ಮಾಡಿದ ಮತ್ತು ಸುಂದರವಾಗಿ ಮುಖಪುಟ ವಿನ್ಯಾಸ ಮಾಡಿದ ರಾಮು.ಎಂ ಅವರಿಗೆ,
ಮುಖಪುಟದ ರೇಖಾಚಿತ್ರ ಬಿಡಿಸಿಕೊಟ್ಟ ಗೆಳೆಯ ಸತೀಶ ಯಲ್ಲಾಪುರ ಅವರಿಗೆ,
ಸುಂದರವಾಗಿ ಮುದ್ರಿಸಿಕೊಟ್ಟ ಚಂದ್ರು ಮತ್ತು ಉಳಿದ ಸಿಬ್ಬಂದಿಗಳಿಗೆ,
ಓದುಗರಾದ ತಮಗೆ
ಅನಂತ ಕೃತಜ್ಞತೆಗಳು.
- ಡಾ. ವಿಠ್ಠಲ ಭಂಡಾರಿ, ಕೆರೆಕೋಣ
ಸಂಪಾದಕ
No comments:
Post a Comment