Thursday 19 February 2015

ಬೆಳಕು - ಕತ್ತಲೆಯ ಎರಡು ನೀಳ್ಗತೆಗಳು -ವಿಷ್ಣು ನಾಯ್ಕ

               
                        

ಬೆಳಕು - ಕತ್ತಲೆಯ ಎರಡು ನೀಳ್ಗತೆಗಳು
   (ಎಚ್ಚರ ಇದ್ದ ಕಾಶೀ & ಬಾಳಸುನ ಔಷಧಿ.-2 ಕತೆಗಳು -ಎಂ.ಎ. ಖತೀಬ)


ಈ ಸಂಕಲನದಲ್ಲಿ ಎರಡು ನೀಳ್ಗತೆಗಳಿವೆ.  ಒಂದು, ಎಚ್ಚರ ಇದ್ದ ಕಾಶೀ, ಇನ್ನೊಂದು ಬಾಳಸುನ ಔಷಧಿ.  ಈ ಎರಡೂ ಕತೆಗಳು ನಡೆದದ್ದು ಕಾಳೀನದಿಯ ಆಸುಪಾಸಿನಲ್ಲಿ.  ಎರಡೂ ಕತೆಗಳಿಗೆ ವಸ್ತುವಾದ ಕುಟುಂಬಗಳು ಶ್ರಮಸಂಸ್ಕೃತಿಗೆ ಹೆಸರಾದ ದಲಿತರದು.
ಕಥೆಯನ್ನು ಬರೆದವರು ಎಂ.ಎ. ಖತೀಬ ಎಂಬ ಹೆಸರಿನ ಕಡವಾಡದ ಜಾಗ್ರತ ಮನಸಿನ ಲೇಖಕ.  ಈ ಕಥೆಗಳನ್ನು ಓದುತ್ತ ಹೋದಂತೆ ನನಗೆ ನನ್ನ ಬಾಲ್ಯದ ದಿನಗಳೇ ಬಿಚ್ಚಿಕೊಳ್ಳುತ್ತಿವೆ ಎಂದೆನಿಸತೊಡಗಿತು.  ಕತೆಯಲ್ಲಿ ಉತ್ಪ್ರೇಕ್ಷೆಯ ರೋಚಕ ಸಂಗತಿಗಳು ಬಹಳ ಕಡಿಮೆ.  ಕಡಿಮೆ ಎನ್ನುವುದಕ್ಕಿಂತ ಇಲ್ಲವೇ ಇಲ್ಲ ಎಂದರೂ ನಡೆದೀತು.  ಅತ್ಯಂತ ನಿರಾಡಂಬರ ಮಾತಿನ ಶೈಲಿ ಸಹಜ ಸಹಜ ಎಂಬಂಥ ಬೆಳವಣಿಗೆ.  ದುಡಿಮೆಯಲ್ಲೇ ದೇವರನ್ನು ಕಾಣುವ ಕುಟುಂಬಗಳ ಕತೆಯವು.  ಎರಡೂ ಕತೆಗಳಲ್ಲಿ ಬಳಕೆಯಾದ ಭಾಷೆ, ಪಾತ್ರಗಳ ನಿತ್ಯ ಸ್ವಭಾವ, ನನ್ನ ಈ ಗುಮಾನಿಗೆ ಕಾರಣ.  ದುಡಿಮೆ, ದುಡಿಮೆ, ದುಡಿಮೆ! ಇದು ಇಲ್ಲಿಯ ಕಥೆಗಳ ಒಳಗಿನ ಸ್ಥಾಯೀ ಭಾವಗಳು.  ನಾಳೆಯ ಬಗೆಗಿನ ಸುಂದರ ಕನಸುಗಳು ಇಲ್ಲಿಯ ಭರವಸೆಯ ಬದುಕು.
ಎಚ್ಚರ ಇದ್ದ ಕಾಶೀ ಆಪತ್ತನ್ನು ಎದುರಿಸುತ್ತ ಭವಿಷ್ಯದ ಸಂಕಲ್ಪವನ್ನು ಈಡೇರಿಸಿಕೊಂಡ ವಿವೇಕಿ  ಹೆಣ್ಣುಮಗಳೊಬ್ಬಳ ಸುತ್ತ ಹೆಣೆದ ಕತೆ.  ಈ ಕಥೆಯ ನಾಯಕ 'ಲಾಡು' ಎಂದರೂ ಸರಿ,  ಅವನ ಮಗ ಸಂತೋಷ ಎಂದರೂ ಅಷ್ಟೇ ಸರಿ.  ಕಥೆಯ ನಾಯಕಿ ಮಾತ್ರ ನಿವರ್ಿವಾದವಾಗಿ ಕಾಶಿಯೇ. ಲಾಡು ಮತ್ತು ಕಾಶೀ ಗುಡಿಕೈಗಾರಿಕೆಯಲ್ಲಿ ತೊಡಗಿಸಿಕೊಂಡವರು. ಬುಟ್ಟಿ ಮಾಡುವ ಕೆಲಸಗಳ ಜೊತೆಯಲ್ಲಿ ಕೂಲಿ ಕೆಲಸವನ್ನೂ ಮಾಡುತ್ತಿದ್ದವರು. ವೈವಿಧ್ಯಮಯ ಬುಟ್ಟಿಗಳನ್ನು ಹೆಣೆಯುವ ಕಲೆಯಲ್ಲಿ ನಿಪುಣರು ಮಾತ್ರವಲ್ಲ, ಹೊಸ ಹೊಸ ವಿನ್ಯಾಸಗಳಿರುವ ಬುಟ್ಟಿಗಳನ್ನು ಸಂತೆಯಲಿಟ್ಟು ಮಾರಿ ಸಂಸಾರ ಸಾಗಿಸುವವರು.  
ಲಾಡು ಮತ್ತು ಕಾಶಿಯ ಮಗ (ಸಂತೋಷ) ಈ ಕಥೆಗೆ ಅನಿರೀಕ್ಷಿತ ತಿರುವುಗಳನ್ನು ತಂದುಕೊಡುವಲ್ಲಿ ಮಹತ್ವದ ಪಾತ್ರಗಳನ್ನು ನಿರ್ವಹಿಸಿದ ಶಾಲಾ ಬಾಲಕ.  ಒಂದು ದಿನ ಈತನ ಶಾಲೆಯ ಮಾಸ್ತರರು ಪಾಲಕರನ್ನು ಕರೆದುಕೊಂಡು ಬರುವಂತೆ ಸಂತೋಷನಿಗೆ ಸೂಚಿಸುತ್ತಾರೆ.  ಮನೆಗೆ ಬಂದು ಹೇಳಿದಾಗ ತಾಯಿ ಕಾಶೀ ಹೋಗುತ್ತಾಳೆ.  ನಿನ್ನ ಮಗ ಗುಣದಲ್ಲಿ ಒಳ್ಳೆಯವನು.  ತಂಟೆ-ತಕರಾರಿಲ್ಲ.  ಆದರೆ ಅಭ್ಯಾಸದಲ್ಲಿ ತೀರಾ ಹಿಂದೆ ಎನ್ನುತ್ತಾರೆ.  ಕಾಶಿ ಶಾಲೆಯಲ್ಲಿ ಕ್ಲಾಸ್ರೂಮಿನ ವಾತಾವರಣವನ್ನು ಗಮನವಿಟ್ಟು ನೋಡಿ ಮನೆಗೆ ಬಂದವಳೇ ಗಂಡನೊಂದಿಗೆ ಚಚರ್ಿಸುತ್ತಾಳೆ ಮತ್ತು ತಾನು ಕಂಡುಕೊಂಡ ಪರಿಹಾರದ ದಾರಿಯನ್ನೂ ಅರಹುತ್ತಾಳೆ.  ಹೆಂಡತಿ ಕೊಟ್ಟ ಕಾರಣ, ಗಂಡ ಲಾಡುನನ್ನೂ ಎಚ್ಚರಿಸುತ್ತದೆ.  ತಮ್ಮ ಮಗ ಶಾಲೆಯಲ್ಲಿ ಡೆಸ್ಕ್ ಬೆಂಚುಗಳನ್ನು ಬಳಸುತ್ತಾನೆ.  ಮನೆಯಲ್ಲಿ ಚಿಮಣಿ ಬುಡ್ಡಿಯ ಕೆಳಗೆ ನೆಲದ ಮೇಲೆ ಬಿದ್ದುಕೊಂಡು ಬರೆಯುತ್ತಾನೆ, ಓದುತ್ತಾನೆ.  ಈ ದೈಹಿಕ ಅಡಚಣಿ ಅವನಿಗೆ ಮಾನಸಿಕ ಅಡಚಣೆಯಾಗಿಯೂ ಕಾಡುತ್ತದೆ.  ಆದ್ದರಿಂದ ಅವನಿಗಾಗಿ ಒಂದು ಟೇಬಲ್ ಮತ್ತು ಖುಚರ್ಿಯನ್ನು ಮಾಡಿಕೊಡಬೇಕು ಎಂಬ ತೀಮರ್ಾನಕ್ಕೆ ಬರುತ್ತಾರೆ.  ಇದು ಈ ಕತೆಯ ಮೊದಲ ತಿರುವು. ಇಲ್ಲಿ 'ಕಾಶೀ'ಯ ಶೈಕ್ಷಣಿಕ ಮನೋಕಾಳಜಿಗೆ ಬೆರಗಾಗುತ್ತೇವೆ. 

ಮುಂದೆ ದಿನಗಳು ಸವೆದಂತೆ ಅವರ ಕುಟುಂಬಕ್ಕೆ ಹಿತೈಷಿಯಾದ  ಒಬ್ಬಳು ಹೆಣ್ಣು ಕೋಳಿಯೊಂದನ್ನು ದಾನವಾಗಿ ಕೊಡುತ್ತಾಳೆ.  ಹಾಗೆ ಕೊಡಲು ನಿರ್ಧರಿಸಿರುವುದರ ಉದ್ದೇಶ, ಆ ಹುಡುಗನಿಗೆ ದಿನಕ್ಕೊಂದು ಮೊಟ್ಟೆ ಸಿಗಬೇಕಾದ ಅಗತ್ಯವಿದೆಯೆಂಬುದನ್ನು ಅವಳು ಮನಗಂಡದ್ದು.  ಹೆಣ್ಣುಕೋಳಿ ಬರುತ್ತದೆ.  ಊರ ಗಂಡುಕೋಳಿಯೊಂದಿಗೆ ಸಹವಾಸ ಮಾಡಿದ್ದರಿಂದ ಮೊಟ್ಟೆ ಹಾಕಲು ಪ್ರಾರಂಭಿಸುತ್ತದೆ.  ಶಾಲಾ ಬಾಲಕ ಸಂತೋಷನಿಂದ ಕತೆಗೆ ದಕ್ಕಿದ ಎರಡನೆಯ ತಿರುವು ಇದು.
ಹೆಣ್ಣುಕೋಳಿ ಮೊಟ್ಟೆ ಹಾಕಲು ಅನುಕೂಲವಾಗುವಂತೆ ಒಂದು ತೂಗು ಬುಟ್ಟಿಯನ್ನು ಲಾಡು ಸಜ್ಜುಗೊಳಿಸುತ್ತಾನೆ.  ಅದರಿಂದ ಕೋಳಿಗಾದ ಅನುಕೂಲ ಕಂಡು ಇಡೀ ಕುಟುಂಬವೇ ಖುಷಿಪಡುತ್ತದೆ.  ಪ್ರತಿನಿತ್ಯ ನಿದರ್ಿಷ್ಟ ಅವಧಿಗೆ ಆ ತೂಗುಬುಟ್ಟಿಯಲ್ಲಿ ಹೋಗಿ ಕುಳಿತು ಮೊಟ್ಟೆ ಇಡುವ ಹೆಣ್ಣುಕೋಳಿ, ಆ ದಿನ ಬುಟ್ಟಿಯ ಸಹವಾಸ ಬಿಟ್ಟು ದೂರ ಕುಳಿತುಬಿಡುತ್ತದೆ.  ಇದರ ಮರ್ಮ ಅರಿಯದ ಲಾಡು, ತಲೆಯೆತ್ತರದಲ್ಲಿ ತೂಗುತ್ತಿದ್ದ ಆ ಬುಟ್ಟಿಯೊಳಗಿನ ಮೊಟ್ಟೆಗಾಗಿ ಕೈಯಾಡಿಸಿದಾಗ, ಬುಸ್ಎಂಬ ಸದ್ದುಕೇಳಿ ಬೆಚ್ಚಿಬೀಳುತ್ತಾನೆ. ಅವನಿಗೆ ಹಾವು ಕಚ್ಚುತ್ತದೆ.  ಹೆಂಡತಿಯ ಬಳಿ ಹೇಳಿಕೊಳ್ಳುತ್ತಾನೆ.  ಔಷಧಾಲಯದ ಸೌಲಭ್ಯ ಇಲ್ಲದ ಆ ದಿನಗಳಲ್ಲಿ ಮಾಡಿದ ಪ್ರಯತ್ನವೆಲ್ಲವೂ ವ್ಯರ್ಥವಾಗಿ ವಿಷವೇರಿದ ಲಾಡು ಸಾಯುತ್ತಾನೆ.
ಗಟ್ಟಿಮುಟ್ಟಾದ ಮನೆಯೊಂದನ್ನು ಕಟ್ಟಿಕೊಳ್ಳಬೇಕು, ಭದ್ರವಾದ ನೆಲೆ ಕಂಡುಕೊಳ್ಳಬೇಕು.  ಮಗನ ಓದು ಮುಗಿಯುವವರೆಗೆ ದುಡಿದುದೆಲ್ಲವನ್ನು ಭದ್ರವಾಗಿ ಕಾದಿಡಬೇಕು ಎಂದುಕೊಂಡವಳಿಗೆ, ಗಂಡನ ಅನಿರೀಕ್ಷಿತ ಸಾವಿನ ಆಘಾತದಿಂದ ಚೇತರಿಸಿಕೊಳ್ಳಲಾಗುತ್ತಿಲ್ಲ.  ತಾಯಿಯ ಅವಸ್ಥೆಯನ್ನು ಕಂಡ ಮಗ ಮನೆಯ ಹೊಣೆಗಾರಿಕೆ ಇನ್ನು ತನ್ನ ಹೆಗಲಿಗೆ ಎಂಬುದನ್ನು ಸ್ವಯಂ ಪ್ರೇರಣೆಯಿಂದ ತಾನೇ ನಿರ್ಧರಿಸಿ, ಶಾಲೆ ಬಿಟ್ಟು ಪೇಂಟಿಂಗ್ ಕೆಲಸಕ್ಕೆ ಹೋಗುವ ನಿಧರ್ಾರ ಕೈಕೊಳ್ಳುತ್ತಾನೆ.  ಮಾತ್ರವಲ್ಲ ಅದನ್ನು ತಾಯಿಗೂ ಹೇಳುತ್ತಾನೆ: ಇನ್ನು ಎರಡು ದಿನ ಮಾತ್ರ ಗಂಜಿಗೆ ಸಾಲುವಷ್ಟು ಕುಚ್ಚಿಗಕ್ಕಿ ಇದೆ; ಆದ್ದರಿಂದ ಅವ್ವ, ನಾನು ಪೇಂಟಿಂಗ್ ಕೆಲಸಕ್ಕೆ ಹೋಗಿ ದುಡ್ಡು ತರುತ್ತೇನೆ ಎಂದಾಗ, ಗಂಡನ ಸಾವಿನ ದುಃಖದಲ್ಲಿ ಮುಳುಗಿ ಉಳಿದೆಲ್ಲ ಕರ್ತವ್ಯ ಮರೆತು, ಇದ್ದೂ ಸತ್ತಂತೆ ಮಲಗಿದ ತಾಯಿಗೆ ಮಗನ ಈ ತೀಮರ್ಾನ ಮತ್ತು ಮಾತು ಬೆಚ್ಚಿಬೀಳಿಸುತ್ತದೆ. ಅವಳು ತನ್ನ ಮೂಲ ಕರ್ತವ್ಯದ ಬಗ್ಗೆ ಎಚ್ಚರಗೊಳ್ಳುತ್ತಾಳೆ.  ಆ ದಿನದಿಂದಲೇ ತಾನು ಕೂಡಿಸಿಟ್ಟ ಹಣವನ್ನು ಮಗನಿಗೆ ತೋರಿಸಿ, ಇದು ನಿನ್ನ ಓದಿಗೆ ಮತ್ತು ಇದು ಮನೆಯ ಖಚರ್ಿಗೆಂದು - ನನ್ನ ಸಲಹೆಯ ಮೇರೆಗೆ ನಿನ್ನಪ್ಪ ಕೂಡಿಸಿಟ್ಟದ್ದು.  ಆದ್ದರಿಂದ ನೀನು ನಿನ್ನ ಶಾಲೆಯ ವಿದ್ಯಾಭ್ಯಾಸವನ್ನು ಮುಂದುವರಿಸು ಎನ್ನುತ್ತಾಳೆ.  ಇದು ಬಾಲಕ ಸಂತೋಷ ಈ ಕಥೆಗೆ ನೀಡಿದ ಮೂರನೇ ತಿರುವು.

                                 -2-

ಎರಡನೆಯ ಕಥೆ ಇಷ್ಟು ದೀರ್ಘವಾಗಿಲ್ಲ.  ಆದರೆ ದುಃಖಾಂತ್ಯದಿಂದ ಕೊನೆಗೊಳ್ಳುವ ಮೂಲಕ ಓದುಗರ ಮನಸ್ಸನ್ನು ಹಿಂಡುತ್ತದೆ.  ಈ ಕಥೆಯಲ್ಲಿ ಬರುವ 'ಬಾಳಸು' ತನ್ನ ಕುಟುಂಬದೊಂದಿಗೆ ಕಡವಾಡ ಊರಿನಲ್ಲಿ ಅವನಪ್ಪ ಡೊಂಗಾ ಕಟ್ಟಿದ ಹಂಚಿನ ಮನೆಯಲ್ಲಿ ವಾಸಿಸುತ್ತಿದ್ದವನು.  ಇಲ್ಲೂ ಒಬ್ಬ ಶಾಲಾ ಬಾಲಕನಿದ್ದಾನೆ.  ಆದರೆ ಹೈಸ್ಕೂಲು ಹಂತ ತಲುಪಿದವನಲ್ಲ.  ಆ ಕುಟುಂಬದ ಉದ್ಯೋಗ ಗದ್ದೆ ಕೆಲಸ. ಅಂದರೆ ಸಸಿನೆಟ್ಟಿ, ಕಳೆ ತೆಗೆಯುವುದು ಇತ್ಯಾದಿ ಇತ್ಯಾದಿ ಕೂಲಿ ಕೆಲಸಗಳು. ಕುಚ್ಚಿಗಕ್ಕಿಯೇ ಕುಟುಂಬದ ಮುಖ್ಯ ಆಹಾರ.  ಅದರ ಸಂಗ್ರಹಣೆಗಾಗಿಯೇ ಗಂಡ 'ಬಾಳಸು', ಹೆಂಡತಿ 'ನಾಗಿ' ಕಡವಾಡ ಊರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದವರು. ಕೂಲಿಯ ಜೊತೆಗೆ ಬುಟ್ಟಿ, ಚಬೂಲ, ವಲರ್ಿ, ಸೂಪು, ವಲರ್ೊ, ಹಚ್ಕಿ, ಶಿಬೆ, ಬೀಸಣಿಕೆ, ಕೋಳಿ ಮುಚ್ಚುವ ಪಾಂಜು, ಶೆಣಪೆ ಇತ್ಯಾದಿಗಳನ್ನು ಹೆಣೆದು ಕಾರವಾರ ಸಂತೆಯಲಿ ಮಾರಾಟಮಾಡಿ ಮರಳಿ ಬರುವಾಗ ಕೋಳಿಗಳನ್ನು ತಂದು ಸಾಕಿ ಹಣ ಸಂಪಾದಿಸುತ್ತಿದ್ದವರು. ಒಬ್ಬನೇ ಮಗ ಚಂದ್ರಹಾಸನಿಗೆ ಶಿಕ್ಷಣ ಪಡೆಯುವಲ್ಲಿ ಅಡಚಣೆಯಾಗಬಾರದೆಂಬುದಷ್ಟೇ ತಾಯ್ತಂದೆಯರ ಉದ್ದೇಶ.
ಒಂದು ದಿನ ಮರಿಗಳೊಂದಿಗೆ ಹೊರಗೆ ಹೋದ ಕೋಳಿಯೊಂದು ಹಿತ್ತಲಿನಲ್ಲಿ ಕಸ ಸರಿಸುತ್ತ, ಸಿಕ್ಕಿದ್ದನ್ನು ತಿನ್ನುತ್ತ ಇರುವಾಗ, ಎಲ್ಲಿಂದಲೋ ಹಾರಿಬಂದ ಹದ್ದು ಕೋಳಿಮರಿಯನ್ನು ಹೊತ್ತುಕೊಂಡು ಹೋಗುತ್ತದೆ.  ಅದನ್ನು ಕಂಡ ಬಾಳಸು, ಮೈಮೇಲಿನ ಪರವೆ ಇಲ್ಲದವನಂತೆ ಓಡುವಾಗ ಬಲಗಾಲಿಗೆ ಮೊಳೆ (ಚರಕ) ತಾಗಿ ಎರಡೂ ಬೆರಳುಗಳ ಮಧ್ಯದಿಂದ ಮೇಲೆ ಬರುತ್ತದೆ.  ಗಂಡ ಚೀರಿದ ಧ್ವನಿ ಕೇಳಿದ ನಾಗಿ ಇದ್ದೆಲ್ಲ ಶಕ್ತಿ ಹಾಕಿ ಮೊಳೆ ತೆಗೆಯುತ್ತಾಳೆ.  ತುಕ್ಕು ಹಿಡಿದ ಉದ್ದ ಕಬ್ಬಣದ ಮೊಳೆ ತಳದಿಂದ ಮೇಲ್ಭಾಗವನ್ನು ಕತ್ತರಿಸಿ ಬಂದಿತ್ತು.  ಊರಿನ ಗಾಂವಟಿ ಔಷಧಿಗೆ ಎಲ್ಲರೂ ಮೊರೆಹೋದರು. ಸುಟ್ಟ ಬಟ್ಟೆಯ ಬಿಸಿ ಬೂದಿ ಹಚ್ಚಿದರು. ಇದಕ್ಕೆ ಅದೇ ಪಕ್ಕಾ ಔಷಧಿ ಎಂದರು. ಗಾಡಗರ ಮನೆಗಳನ್ನೂ ಅಲೆದರು. ಹದಿನೈದು ದಿನ ಆಗುವಾಗ ಒಣಗಿದಂತೆ ಕಂಡ ಗಾಯ, ಒಂದು ದಿನ ಇದ್ದಕ್ಕಿದ್ದಂತೆ ಹೆಚ್ಚಾಗಿ ಬಾಳಸು ಚಡಪಡಿಸತೊಡಗಿದ.  ಈ ನಡುವೆ ಕರಿನಾಸ, ಮಾಂಡಾನಾಸ, ಜಟಕೊ, ಬಮರ್ೊ, ಜನಿ, ಕುಟಿ ಮುಂತಾದ ಗ್ರಾಮೀಣ ನಂಬಿಕೆಯಲ್ಲಿ ಬೆಳೆದ ದೇವರುಗಳಲ್ಲೆಲ್ಲ ಹರಕೆ ಹೊತ್ತದ್ದಾಯಿತು.  ಮುಂದಿನ ಜಾತ್ರೆಗೆ ಉಪವಾಸ ಇದ್ದು ಸೇವೆ ಅಪರ್ಿಸುತ್ತೇವೆ ಎಂದು ಗಂಡಹೆಂಡಿರಿಬ್ಬರೂ ಹೇಳಿಕೊಂಡರು.  ಮಧ್ಯಾಹ್ನವಾಗುತ್ತ ಬಂದಂತೆ ಬಾಳಸುಗೆ ನೋವು ತಡೆಯಲಾಗಲಿಲ್ಲ.  ಕಣ್ಣಿಗೆ ಕತ್ತಲೆ ಬಂದಂತೆ, ಕೈಕಾಲು ಸೋತು ಸತ್ತಂತೆ! ಈ ವಿಚಾರಕ್ಕೆ ಅಲ್ಲಿ ನೆರೆದ ಊರವರೆಲ್ಲ ಜೋಯಿಸರಲ್ಲೊ, ಗಾಡಗರಲ್ಲೊ, ಊರ ಸಣ್ಣಪುಟ್ಟ ದೇವರುಗಳಲ್ಲೊ ಕೇಳುವ ಮಾತನಾಡಿದರೇ ಹೊರತು, ಆಸ್ಪತ್ರೆಯ ಸುದ್ದಿ ಎತ್ತಲಿಲ್ಲ.  
ನಾಗಿಗೆ ತನ್ನ ಅಣ್ಣನ ನೆನಪಾಗುತ್ತಿದ್ದಂತೆ ಅವನಿಗೆ ಸುದ್ದಿ ಮುಟ್ಟಿಸುತ್ತಾಳೆ.  ಆತ ಬರುತ್ತಾನೆ. ತತ್ಕ್ಷಣ ಸಿಕ್ಕಿದ ಸೈಕಲ್ ಮೇಲೆ ಕೂಡ್ರಿಸಿ ಆಸ್ಪತ್ರೆಗೆ ಕೊಂಡೊಯ್ಯುತ್ತಾನೆ.  ತಂಗಿಯ ಮನೆಗೆ ಬಂದು ಬಾವನನ್ನು ಆಸ್ಪತ್ರೆಗೆ ಸಾಗಿಸಿದ ಅಣ್ಣ ಈತನ ಸ್ಥಿತಿ ಕಂಡು ಎದೆಗುಂದುತ್ತಾನೆ.  ಡಾಕ್ಟರರು, ನರ್ಸಗಳು, ಟೆಕ್ನೀಶಿಯನ್ ಇವರೆಲ್ಲ - ಕೇಸು ಸೀರಿಯಸ್ ಆಗಿದೆ ಎಂಬುದನ್ನು ಭಾವಿಸಿ ಸಂಬಂಧಪಟ್ಟವರಿಗೆ ಎಚ್ಚರಿಸುತ್ತಾರೆ. ಅತೀ ತುತರ್ಾಗಿ ಟಿಟಿ. ಇಂಜೆಕ್ಷನ್ ಕೊಡಬೇಕಿತ್ತು, ಆದ್ದರಿಂದ ಹೀಗಾಗಿದೆ.  ಸಲಾಯನ್ ಹಾಕಿದ್ದೇವೆ.  ನಮ್ಮಿಂದಾದಷ್ಟು ಪ್ರಯತ್ನ ಮಾಡುತ್ತೇವೆ ಎಂದೆಲ್ಲ ಹೇಳಿದ ಡಾಕ್ಟರ್, ನಾಲ್ಕು ತಾಸು ಬಿಟ್ಟು ಮತ್ತೆ ಬರುವುದಾಗಿ ಹೇಳಿ ಮನೆಗೆ ಹೋಗುತ್ತಾರೆ.  ಆದರೆ ತುತ್ತನ್ನ ಬಾಯಿಗಿಡುವ ಮೊದಲೇ ಸಿಸ್ಟರ್ ಫೋನ್.  ಕೇಸು ಸೀರಿಯಸ್ ಆಗಿದೆ.  ಪಲ್ಸ್ ಕೆಲಸ ಮಾಡುತ್ತಿಲ್ಲ! ಡಾಕ್ಟರ್ ಬಂದು ನೋಡಿ, ಬಾಳಸು ಸತ್ತದ್ದನ್ನು ದೃಢೀಕರಿಸುವಲ್ಲಿಗೆ ಕಥೆ ಮುಗಿಯುತ್ತದೆ.
ಮೊದಲನೆಯ ಕಥೆಯಲ್ಲಿ ಬೆಳಕನ್ನು ಹಿಡಿಯುವ ಎಚ್ಚರ ಇದ್ದರೆ, ಎರಡನೆಯ ಕಥೆಯಲ್ಲಿ ಕತ್ತಲನ್ನೇ ತಬ್ಬಿಕೊಂಡ ಮೌಢ್ಯ ತುಂಬಿಕೊಂಡದ್ದನ್ನು ಸುಲಭವಾಗಿ ಗುರುತಿಸಬಹುದಾಗಿದೆ.  ಎರಡೂ ಕಥೆಯೊಳಗಿನ ಪಾತ್ರಗಳ ಉದ್ಯೋಗ, ಸಂಸ್ಕೃತಿ, ಮಕ್ಕಳನ್ನು ಓದಿಸುವ ಹಂಬಲ ಸರಿಯಾಗಿದ್ದರೂ ಮೂಢನಂಬಿಕೆಗೇ ಆಂತುಕೊಂಡ ಎರಡನೆಯ ಕಥೆಯ ಜೀವಗಳು ನಿರಂತರ ದುಡಿಮೆಯ ಬಾಳಸುವನ್ನು ವಿನಾಕಾರಣ ಕಳೆದುಕೊಂಡದ್ದನ್ನು ಕಾಣಬಹುದಾಗಿದೆ.
ಈ ಎರಡೂ ಕಥೆಗಳನ್ನು ಬರೆದ ಎಂ.ಎ. ಖತೀಬ್ ಅಸಮಾನ್ಯ ಸಂಯಮದಿಂದ ಇಲ್ಲಿಯ ಕತೆಗಳನ್ನು  ಬೆಳೆಸುತ್ತ ಹೋದರೂ ದುಡಿಸಿಕೊಂಡ ಭಾಷೆಯ ಸೊಗಡು ಚೆನ್ನಾಗಿಯೇ ಇದ್ದರೂ, ಹಳ್ಳಿಯ ಅಜ್ಜಿ ಮೊಮ್ಮಕ್ಕಳಿಗೆ ಹೇಳಿದ ಕತೆಯಂತೆ ನೇರವಾಗಿದೆ.  ಇಲ್ಲಿ ಬಳಕೆಯಾದ ಗ್ರಾಮೀಣ ಪದಗಳು, ಅದರಲ್ಲೂ ಅವರ ಉದ್ಯೋಗಕ್ಕೆ ಹೊಂದಿಕೆಯಾಗುವ ಪದಗಳು, ಗ್ರಾಮೀಣ ದೇವರುಗಳ ಹೆಸರುಗಳೆಲ್ಲ ಓದುಗರನ್ನು ಸೆಳೆಯುತ್ತವೆ.  ಕೊಂಕಣಿ, ಮರಾಠಿ ಮತ್ತು ಕನ್ನಡ ಪದಗಳು ಪರಸ್ಪರ ಪ್ರಭಾವ ಬೀರಿವೆ.  ಕತೆಯ ಸರಳತನ ಮತ್ತು ನೇರತೆ ಲೇಖಕರ ಗುಣವೂ ಹೌದು ಮಿತಿಯೂ ಹೌದು ಎನಿಸುತ್ತದೆ.
                                                                      -ವಿಷ್ಣು ನಾಯ್ಕ 
ಪರಿಮಳ, ಅಂಬಾರಕೊಡ್ಲ
ಅಂಕೋಲಾ-581314
ಉತ್ತರ ಕನ್ನಡ ಜಿಲ್ಲೆ
ಮೊಬೈಲ್: 09448145370 

                             

No comments:

Post a Comment