Thursday, 19 February 2015

'ಯಕ್ಷಗಾನ ಕೈಪಿಡಿ'ಯ ಮುನ್ನುಡಿ - ಎಂ.ಎ. ಹೆಗಡೆ

'ಯಕ್ಷಗಾನ ಕೈಪಿಡಿ'ಯ ಮುನ್ನುಡಿ
1955 ರಲ್ಲಿ ಪ್ರಥಮ ಮುದ್ರಣವನ್ನು ಕಂಡ ಸೋಂದಾ ಕೃಷ್ಣ ಭಂಡಾರಿಯವರ 'ಯಕ್ಷಗಾನ ಕೈಪಿಡಿ'ಯು ಈಗ ಪುನಮರ್ುದ್ರಣವನ್ನು ಕಾಣುತ್ತಿದೆ. ಮುದ್ರಿತವಾದ ಪ್ರತಿಯನ್ನು ಹರಸಾಹಸದಿಂದ ಹುಡುಕಿ ಮರುಮುದ್ರಣಕ್ಕೆ ಅಣಿಗೊಳಿಸಬೇಕಾದ ಪರಿಸ್ಥಿತಿ. ಅಂಥ ಸಾಹಸಕ್ಕಾಗಿ ಪ್ರಕಾಶಕರು ಅಭಿನಂದನೆಗೆ ಅರ್ಹರು.
'ಯಕ್ಷಗಾನ ಕೈಪಿಡಿ'ಯನ್ನು ಬರೆಯುವುದಕ್ಕೆ ಭಂಡಾರಿಯವರನ್ನು ಪ್ರೇರಿಸಿದ ಸಂಗತಿಗಳ ಬಗೆಗೆ ಅವರೇ 'ಲೇಖಕರ ವಿಜ್ಞಾಪನೆಗಳು' ಎಂಬಲ್ಲಿ ಹೇಳಿಕೊಂಡಿದ್ದಾರೆ. ಸಂಗೀತ, ನಾಟಕ, ಚಲನಚಿತ್ರಗಳ ಪ್ರಭಾವದಿಂದ ಯಕ್ಷಗಾನ ಪರಂಪರೆಯು ನಷ್ಟವಾಗುತ್ತಿರುವುದನ್ನು ಕಂಡು ಅವರಿಗೆ ಆತಂಕವುಂಟಾಯಿತು. ಯಕ್ಷಗಾನವು ತನ್ನ ವೈಶಿಷ್ಟ್ಯಗಳನ್ನು ಒಂದೊಂದಾಗಿ ಕಳೆದುಕೊಳ್ಳುತ್ತ ಅಸ್ತಿತ್ವವನ್ನೇ ಕಳೆದುಕೊಳ್ಳಬಹುದೆಂಬ ಭಾವ ಬಲಿಯತೊಡಗಿತು. ಇಂಥ ಸಂದರ್ಭದಲ್ಲಿ ಯಕ್ಷಗಾನದ ಪರಂಪರೆಯು 'ಹೀಗಿದೆ' ಎಂಬುದನ್ನು ಮುಂದಿನವರಿಗೆ ತಿಳಿಸಬೇಕೆಂಬ ಅಭಿಲಾಷೆಯಿಂದ, ಕಲಾವಿದರನ್ನು ಪ್ರೇಕ್ಷಕರನ್ನೂ ಎಚ್ಚರಿಸುವ ದೃಷ್ಟಿಯಿಂದ ಶ್ರಮ ವಹಿಸಿ ಗ್ರಂಥವನ್ನು ರಚಿಸಿದರು.
ಆ ಕಾಲದ ಅನೇಕ ಹಿರಿಯರಿಗೆ ಕಲಾತಜ್ಞರಿಗೆ ಇದೇ ಅಭಿಪ್ರಾಯವಿತ್ತೆಂಬುದು ಅವರ ಮಾತುಗಳಿಂದ ಸ್ಪಷ್ಟವಾಗಿದೆ. ತ್ಯಾಗಲಿ, ಸಿಸರ್ಿ, ಸೋಂದಾಗಳಲ್ಲಿ ಯಕ್ಷಗಾನ ಸಮ್ಮೇಳನಗಳು ನಡೆದು ಅಲ್ಲಿಯೂ ಅದೇ ತೆರನಾದ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಸುಮಾರು 1950 ರಲ್ಲಿ ಪ್ರಕಟಗೊಂಡ ವಿದ್ವಾನ್ ರಾ.ಭ. ಹಾಸಣಗಿಯವರ 'ಯಕ್ಷನಾಟಕಗಳು' ಎಂಬ ಕೃತಿಯಲ್ಲಿಯೂ ಇಂಥದೇ ಅಭಿಪ್ರಾಯ ವ್ಯಕ್ತಗೊಂಡಿದ್ದಾಗಿ ನೆನಪು. ಆ ಪುಸ್ತಕದ ಪ್ರತಿಗಳೂ ಈಗ ಸಿಗುತ್ತಿಲ್ಲ.
ಡಾ. ಶಿವರಾಮ ಕಾರಂತರ 'ಯಕ್ಷಗಾನ ಬಯಲಾಟ' ಎಂಬ ಕೃತಿಯ ರಚನೆಗೂ ಇದೇ ಸಂಗತಿಯೇ ಪ್ರೇರಕವಾಗಿರುವುದನ್ನು ಗಮನಿಸಬಹುದು. ಡಾ. ಕಾರಂತರ ಕೃತಿಯು 1957 ರಲ್ಲಿ ಪ್ರಕಟವಾಯಿತೆಂಬುದನ್ನು ಇಲ್ಲಿ ಗಮನಿಸಬೇಕು. ಡಾ. ಕಾರಂತರ ಅಧ್ಯಯನದ ವ್ಯಾಪ್ತಿ ವಿಸ್ತಾರಗಳೂ ಉಪಯುಕ್ತತೆಯೂ ಬೇರೆಯದೇ ಆದರೂ, ಯಕ್ಷಗಾನದ ಶ್ರೀಮಂತ ಪರಂಪರೆಯನ್ನು ಉಳಿಸುವ ಕಾಳಜಿಯು ಸಮಾನವಾಗಿತ್ತೆಂಬುದನ್ನು ಗಮನಿಸಬಹುದು.

ಕಲೆಯು ನಿಂತ ನೀರಲ್ಲ ; ಹರಿಯುತ್ತಿರುವ ಪ್ರವಾಹ. ಅದರ ಹರಿವನ್ನು ತಡೆಯಲಾಗುವುದಿಲ್ಲ. ಹರಿವಿನ ರಭಸವನ್ನು ತಡೆಗಟ್ಟುವ ಪ್ರಯತ್ನವನ್ನು ಮಾಡಬಹುದು. ಕೊಚ್ಚಿಕೊಂಡು ಹೋಗುವಾಗ ಆಗಬಹುದಾದ ಹಾನಿಯನ್ನು ಕಡಿಮೆಗೊಳಿಸಲು ಹವಣಿಸಬಹುದು. ಡಾ. ಕಾರಂತರು ಹವಣಿಸಿದ್ದು ಅದನ್ನೇ. ಕೃಷ್ಣ ಭಂಡಾರಿಯವರ ಲಕ್ಷ್ಯವೂ ಅದೇ. ಮುಂದೆ ಮುಂದೆ ಸಾಗುತ್ತ ಬಂದವರಿಗೆ ಎಲ್ಲಿಂದ ಹೊರಟಿದ್ದೇವೆನ್ನುವುದೇ ಮರವೆಯಾಗಬಾರದು. ಅದನ್ನು ನೆನಪಿಸಿಕೊಳ್ಳಲು ಈ ಕೃತಿಯ ನೆರವು ಬಹಳ.
ಕೃಷ್ಣ ಭಂಡಾರಿಯವರು ಬದುಕಿದ್ದು ಬಾಳಿದ್ದು ಉತ್ತರಕನ್ನಡದ ನೆಲದಲ್ಲಿ. ಅವರು ಮದ್ದಳೆ ವಾದಕರಾಗಿ ಪ್ರಸಿದ್ಧರಾದವರು. ಆದರೆ ಅವರ ತಿಳಿವು ಮದ್ದಳೆಗೆ ಸೀಮಿತವಾಗಿರಲಿಲ್ಲ. ಯಕ್ಷಗಾನದ ಅಂಗೋಪಾಂಗಗಳ ತಲಸ್ಪಶರ್ಿಯಾದ ಜ್ಞಾನವುಳ್ಳವರಾಗಿದ್ದರು. ಇಲ್ಲಿನ ರಂಗಸಂಪ್ರದಾಯಗಳೆಲ್ಲವನ್ನೂ ಚೆನ್ನಾಗಿ ಬಲ್ಲವರು. ಯಕ್ಷಗಾನವು ಶಾಸ್ತ್ರೀಯವೆನಿಸಿಕೊಳ್ಳಬೇಕಾದರೆ ಭರತಶಾಸ್ತ್ರದ ನಿಯಮಗಳಿಗೆ ಬದ್ಧವಾಗಿರಬೇಕೆಂದು ಅಪೇಕ್ಷಿಸಿದವರು. ಅದಕ್ಕೆ ಪುಷ್ಪಾಂಜಲಿಯಂಥ ಹೊಸಕ್ರಮವನ್ನು ಅವರು ಸೂಚಿಸುತ್ತಾರೆ. 
ಕೃಷ್ಣ ಭಂಡಾರಿಯವರು ಕೃತಿಯನ್ನು ರಚಿಸುವ ಕಾಲಕ್ಕಾಗಲೇ ಅನೇಕ ಸಂಪ್ರದಾಯಗಳು ಮಾಯವಾಗಿದ್ದವು. ಈಗ ಇನ್ನಷ್ಟು ಕಾಲ ಸಂದಿದೆ. ಮತ್ತಷ್ಟು ಬದಲಾವಣೆಗಳಾಗಿವೆ. ಹಾಗಾಗಿ ಈ ಕಾಲಕ್ಕೆ ಅವರ ಕೃತಿಯು ಪ್ರಸ್ತುತವೆನ್ನಿಸಲಿಕ್ಕಿಲ್ಲ. ಆದರೆ ಪ್ರಾಚೀನವಾದ ಸಂಪ್ರದಾಯಗಳನ್ನು ತಿಳಿದುಕೊಳ್ಳುವ ಅಭಿಲಾಷೆಯುಳ್ಳವರಿಗೆ ಇದು ಅತ್ಯಮೂಲ್ಯವಾದ ಸಂಗ್ರಾಹ್ಯ ಕೃತಿಯೆನ್ನುವುದರಲ್ಲಿ ಸಂದೇಹವಿಲ್ಲ. ಯಾಕೆಂದರೆ ಅದು ಕೇವಲ ಸಂಪ್ರದಾಯದ ರಕ್ಷಣೆಯ ಬಗೆಗೆ ಹೇಳುವುದಿಲ್ಲ. ನಮಗೆ ಬೇಕಾದ ವಿವರಗಳನ್ನು ಯಥೇಚ್ಛವಾಗಿ ಒದಗಿಸುತ್ತದೆ.
ಪರಂಪರೆಯ ಪುನರುಜ್ಜೀವನದ ಬಗೆಗೆ ಅಥವಾ ಅದರ ಪರಿಷ್ಕೃತ ಪ್ರಯೋಗದ ಬಗೆಗೆ ಆಸಕ್ತಿಯುಳ್ಳವರು ಅನೇಕರಿದ್ದಾರೆ. ಅವರಲ್ಲಿ ಸಾಕಷ್ಟು ಜನ ಕಲಾವಿದರೂ ಇದ್ದಾರೆ. ಕಲಾವಿದರ ಪಾಲಿಗೆ ವಿವರಗಳು ಮುಖ್ಯವಾಗುತ್ತವೆ. ಇಂಥ ವಿವರಗಳು ವಿಚಾರಗೋಷ್ಠಿಗಳಲ್ಲಿ ಭಾಗವಹಿಸುವ ಪರಿಣತರಿಂದಲೂ ದೊರೆಯುವುದಿಲ್ಲ. ಅಲ್ಲಿ ವಿವರಗಳನ್ನು ಕುರಿತು ಚಚರ್ಿಸಲು ಸಾಧ್ಯವಾಗದ ಒತ್ತಡವಿರುತ್ತದೆ. ಕೆಲವೊಮ್ಮೆ ಪರಿಣತರು ರಂಗದ ಅಂತರಂಗವನ್ನು ಬಲ್ಲವರಾಗಿರುವುದಿಲ್ಲ. ಉದಾ: ಕೃಷ್ಣ ಒಡ್ಡೋಲಗ. ಪ್ರಾಚೀನ ಕ್ರಮವನ್ನು ಅಳವಡಿಸಬೇಕೆಂದು ಹೇಳುವುದಕ್ಕೆ ಯಾರೂ ಆದೀತು. ವಿವರಗಳನ್ನು ಒದಗಿಸಲಿಕ್ಕಾದೀತೇ? ಬಳಸುವ ಪದ್ಯ ಬಿಡ್ತಿಗೆ ಇತ್ಯಾದಿಗಳನ್ನು ತಿಳಿಯುವುದು ಹೇಗೆ? ಅಂಥಲ್ಲಿ ಈ ಕೈಪಿಡಿಯು ನೆರವಿಗೆ ಬರುತ್ತದೆ. ಅದನ್ನು ಯಥೇಚ್ಛವಾಗಿ ಬಳಸಿಕೊಳ್ಳಬಹುದು.
ಇಂದು ಯಕ್ಷಗಾನದ ಕುರಿತು ಅಧ್ಯಯನ-ಸಂಶೋಧನೆಗಳೂ ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿವೆ. ಅಂಥವರಿಗೆ ಇದೊಂದು ಆಕರಗ್ರಂಥವಾಗಬಹುದಾಗಿದೆ. ಹೀಗೆ ಹಲವಾರು ದೃಷ್ಟಿಗಳಿಂದ ಉಪಯುಕ್ತವಾಗಿದ್ದ ಈ ಕೃತಿಯ ಪ್ರತಿಗಳು ಅಲಭ್ಯವಾಗಿದ್ದು ಒಂದು ಕೊರತೆಯಾಗಿತ್ತು. ಅದು ಪುನಃ ಮುದ್ರಿತವಾಗುತ್ತಿರುವುದರಿಂದ ಆ ಕೊರತೆಯು ನೀಗಿದಂತಾಯಿತು. ಅಂಥದೊಂದು ಪ್ರಯತ್ನಕ್ಕೆ ತೊಡಗಿದ ಡಾ. ವಿಠ್ಠಲ ಭಂಡಾರಿಯವರು ಯಕ್ಷಗಾನ ಪ್ರೇಮಿಗಳೆಲ್ಲರ ಅಭಿನಂದನೆಗೆ ಪಾತ್ರರಾಗಿದ್ದಾರೆ. ಯಕ್ಷಗಾನಾಸಕ್ತರು ಈ ಪ್ರಯತ್ನಕ್ಕೆ ಯಥೋಚಿತವಾಗಿ ಪ್ರತಿಸ್ಪಂದಿಸಿದರೆ ಅದು ಸಾರ್ಥಕವೆನಿಸೀತು.
- ಎಂ.ಎ. ಹೆಗಡೆ
ಶಿರಸಿ
5-12-2013

No comments:

Post a Comment