Sunday, 15 December 2019

ದೇಶದ ಕಾಯಿದೆಗಳು ಸlಧರ್ಮದ ಹೆಸರಲ್ಲಿ ಕೆಲವರನ್ನು ಹೊರಗಿಟ್ಟು ರೂಪಿತವಾಗುತ್ತಿವೆ.

ನಾನು ನನ್ನ ಬಾಲ್ಯ-ತಾರುಣ್ಯಗಳನ್ನು ಹಲವು ಜಾತಿ ಧರ್ಮ ಭಾಷೆಗೆ ಸೇರಿದ ಮಂದಿ, ಹೊಟ್ಟೆಪಾಡಿಗಾಗಿ ನಿತ್ಯ ಹೋರಾಡುವ  ಗಲ್ಲಿಗಳಲ್ಲಿ ಕಳೆದೆ. ಅದುವೇ ಸಮಾಜವನ್ನು ನೋಡಲು ನನಗೊಂದು ತಾತ್ವಿಕ ದೃಷ್ಟಿಕೋನ ಒದಗಿಸಿತು. ಮುಂದೆ ನಾನು ಓದಿದ ಮತ್ತು ಕಲಿಸಿದ ಸಾಹಿತ್ಯವು, ಈ ಸಾಮಾಜಿಕ ವಾಸ್ತವಿಕತೆಯ ಮುಂದುವರಿಕೆಯಾಗಿತ್ತು. ಬಳಿಕ  ಭಾರತದ ಜನಸಮುದಾಯಗಳು ತಮ್ಮ ಧರ್ಮ ಜಾತಿ ಭಾಷೆಗಳ ಗಡಿಗಳಾಚೆ ಬಂದು ಕಟ್ಟಿದ ಕೂಡು ಸಂಸ್ಕೃತಿಯ ಶೋಧ ಮಾಡಿದೆ. ಅದಕ್ಕಾಗಿ ಭಾರತವನ್ನು ನಿರಾಳವಾಗಿ ಅಲೆದಾಡಿದೆ. ನನ್ನ ಹುಡುಕಾಟವು ಭಾರತದ ಮತೀಯ ಹಿಂಸೆಗಳು ಮೂಡಿಸಿದ ನಿರಾಶೆಯಲ್ಲಿ ಮಾಡಿದ ಭರವಸೆಯ ಬೇಸಾಯವಾಗಿತ್ತು.  ಆದರೆ ನಿನ್ನೆ ಪಾರ್ಲಿಮೆಂಟು ಪಾಸುಮಾಡಿದ ಪೌರತ್ವ ಕಾಯಿದೆ, ನನ್ನೀ ಬಾಲ್ಯಾನುಭವದ ಬುನಾದಿ, ಸಾಹಿತ್ಯಾಭ್ಯಾಸ, ಸಾಂಸ್ಕೃತಿಕ ಶೋಧಗಳ ಅಂತಸ್ಥವನ್ನೇ ಅಲುಗಿಸುತ್ತ ವಿಚಿತ್ರ  ಕಂಪನ ಹುಟ್ಟಿಸಿದೆ.  ಪಾರ್ಲಿಮೆಂಟು  ಮುಂದೆ ಪಾಸು ಮಾಡಲಿರುವ ಪೌರತ್ವ ಕಾಯಿದೆ ಇನ್ಯಾವ ಸನ್ನಿವೇಶ ಹುಟ್ಟಿಸಲಿದೆಯೋ ತಿಳಿಯದು. ಈತನಕ ದೇಶದ ಕಾಯಿದೆಗಳು ಸಮಸ್ತ ಪ್ರಜೆಗಳನ್ನು ಉದ್ದೇಶಿಸಿ ರೂಪಿತವಾಗುತ್ತಿದ್ದವು. ಈಗವು ಧರ್ಮದ ಹೆಸರಲ್ಲಿ ಕೆಲವರನ್ನು ಹೊರಗಿಟ್ಟು ರೂಪಿತವಾಗುತ್ತಿವೆ.  ಗ್ರೂಪ್ ಫೋಟೊದಿಂದ ಕೆಲವರ ಚಿತ್ರವನ್ನಷ್ಟೇ ಹೀಗೆ ಕತ್ತರಿಸಿ ಹೊರತೆಗೆಯಬಹುದೇ? ವಿವೇಕಾನಂದ ಕಬೀರ ಕುವೆಂಪು ಟಾಗೂರ ಗಾಂಧಿ ಅಂಬೇಡ್ಕರ್ ಲೋಹಿಯಾ ಮುಂತಾದ ಹಿರೀಕರು ಕಂಡರಿಸಿದ ಕೂಡುಭಾರತದ ಕಲ್ಪನೆಯನ್ನು, ನಾಡಿನ ವಿಶಾಲ ಸಮುದಾಯಗಳ ಒಳಗೆ ಇನ್ನೂ ಬತ್ತಿರದ ವಿವೇಕ-ಮನುಷ್ಯತ್ವ,  ಅಷ್ಟು ಸುಲಭಕ್ಕೆ ಬಿಟ್ಟುಗೊಡದು  ಎಂದು ನನ್ನ ನಂಬಿಕೆ.
 
ಜನಾಂಗದ್ವೇಷದಿಂದ ಜಗತ್ತಿನಲ್ಲಿ ಯಾವ ದೇಶವೂ ಘನತೆವೆತ್ತ ಸಮಾಜವನ್ನು ಕಟ್ಟಲು ಸಾಧ್ಯವಾಗಿಲ್ಲ. ಭಾರತದ ಅಸ್ತಿತ್ವ ಇರುವುದು ಅದರ ಬಹುತ್ವದ ಅರ್ಥಪೂರ್ಣ ನಿಭಾವಣೆಯಲ್ಲಿ. ಇದರ  ಖಬರಿಲ್ಲದವರು, ನಾಡಿಗೆ ಕೇಡನ್ನೇ ಎಸಗುವರು.

Thursday, 12 December 2019

ಕೋಣೆಯಲ್ಲಿ ಬೆಂಕಿ ಬಿದ್ದಿದ್ದರೆ: ಸರ್ವೇಶ್ವರ ದಯಾಳ ಸಕ್ಸೇನ.

ನಿನ್ನ ಮನೆಯ
ಒಂದು ಕೋಣೆಯಲ್ಲಿ ಬೆಂಕಿ ಬಿದ್ದಿದ್ದರೆ
ನೀನು ಮತ್ತೊಂದು
ಕೋಣೆಯಲ್ಲಿ ನಿದ್ರಿಸ ಬಲ್ಲೆಯಾ?

ನಿನ್ನ ಮನೆಯ
ಒಂದು ಕೋಣೆಯಲ್ಲಿ ಹೆಣಗಳು ಕೊಳೆಯುತ್ತಿದ್ದರೆ
ನೀನು ಮತ್ತೊಂದು ಕೋಣೆಯಲ್ಲಿ
ಪ್ರಾರ್ಥನೆ ಮಾಡ ಬಲ್ಲೆಯಾ?

ಹೌದು! ಎನ್ನುವುದಾದರೆ
ನಿನ್ನೊಂದಿಗೆ ನನಗೆ ಮಾತನಾಡುವುದು ಏನೂ ಉಳಿದಿಲ್ಲ.

ದೇಶ ಕಾಗದದಿಂದಾದ ನಕ್ಷೆಯಲ್ಲ
ಒಂದು ಭಾಗ ಹರಿದ ಮೇಲೂ
ಉಳಿದ ಭಾಗ ಮೊದಲಿನಂತೆ ಸ್ವಸ್ಥವಾಗಿರಲು
ಹಾಗು ನದಿ, ಪರ್ವತ, ನಗರ, ಹಳ್ಳಿಗಳೆಲ್ಲ
ಹಾಗೆಯೇ ತಂತಮ್ಮ ಜಾಗದಲ್ಲಿ ಒಟ್ಟಾಗಿ ಕಾಣಲು

ಇದನ್ನು ನೀನು
ಒಪ್ಪುವುದಿಲ್ಲವಾದರೆ
ನನಗೆ ನಿನ್ನೊಂದಿಗಿರಲು ಸಾಧ್ಯವಿಲ್ಲ.

ಈ ಜಗತ್ತಿನಲ್ಲಿ
ಮಾನವ ಜೀವಕ್ಕಿಂತ
ದೊಡ್ಡದು ಯಾವುದೂ ಇಲ್ಲ
ದೇವರು, ಜ್ಞಾನ, ಚುನಾವಣೆ
ಯಾವುದೂ ಅಲ್ಲ
ಕಾಗದದಲ್ಲಿ ಬರೆದ
ಯಾವುದೇ ಒಡಂಬಡಿಕೆಯನ್ನು
ಹರಿದು ಹಾಕಬಹುದು
ಭೂಮಿಯ ಏಳು ಪದರಗಳಡಿ
ಹೂತು ಹಾಕಲೂಬಹುದು

ಆತ್ಮಸಾಕ್ಷಿಯೇ
ಹೆಣಗಳ ರಾಶಿಯ ಮೇಲೆ ನಿಂತಿದ್ದರೆ
ಅಲ್ಲಿ ಅಂಧಕಾರವಿದೆ
ಬಂದೂಕಿನ ನಳಿಕೆಯಲ್ಲಿ
ಅಧಿಕಾರ ನಡೆಯುತ್ತಿದ್ದರೆ
ಅದು ಆಯುಧಗಳ ದಂಧೆಯಾಗಿದೆ

ನೀನಿದನ್ನು ಒಪ್ಪದಿದ್ದಲ್ಲಿ
ನಿನ್ನನ್ನು ಒಂದೂ ಕ್ಷಣವೂ ಸಹಿಸಲಾರೆ.

ನೆನಪಿಡು
ಒಂದು ಮಗುವಿನ ಹತ್ಯೆ
ಒಂದು ಹೆಂಗಸಿನ ಸಾವು
ಗುಂಡಿನಿಂದ ಛಿದ್ರಗೊಂಡ 
ಒಬ್ಬ ಮನುಷ್ಯನ ದೇಹ
ಅದು ಯಾವುದೇ ಸರ್ಕಾರದ ಪತನ ಮಾತ್ರವಲ್ಲ
ಅದು ಇಡೀ ರಾಷ್ಟ್ರದ ಪತನ.

ಹೀಗೇ ರಕ್ತ ಹರಿದು
ಭೂಮಿಯಲ್ಲಿ ಇಂಗುವುದಿಲ್ಲ
ಆಕಾಶದಲ್ಲಿ ಹಾರುವ
ಬಾವುಟವನ್ನೂ ಕಪ್ಪಾಗಿಸುತ್ತದೆ.

ಯಾವ ನೆಲದಲ್ಲಿ
ಸೈನಿಕರ ಬೂಟುಕಾಲುಗಳ ಗುರುತಿರುವುದೋ
ಅಲ್ಲಿ ಅವುಗಳ ಮೇಲೆ
ಹೆಣಗಳು ಬೀಳುತ್ತಿರುತ್ತವೋ
ಆ ನೆಲ ನಿನ್ನ ರಕ್ತದಲ್ಲಿ ಬೆಂಕಿಯಾಗಿ ಹರಿಯದಿದ್ದಲ್ಲಿ
ನೀನು ಬರಡಾಗಿರುವೆ ಎಂದು ತಿಳಿದುಕೋ
ನಿನಗಲ್ಲಿ ಉಸಿರಾಡಲೂ ಹಕ್ಕಿಲ್ಲ
ನಿನಗಾಗಿ ಈ ಜಗತ್ತೂ ಸಹ
ಇಲ್ಲವೆಂದೇ ತಿಳಿ.

ಕೊನೆಗೊಂದು ಮಾತು
ಸ್ಪಟಿಕದಷ್ಟೇ ಸ್ಪಷ್ಟ
ಯವುದೇ ಕೊಲೆಗಡುಕನನ್ನು ಎಂದಿಗೂ ಕ್ಷಮಿಸಬೇಡ
ಅವನು ನಿನ್ನ ಗೆಳೆಯನೆ ಆಗಿರಲಿ
ಧರ್ಮದ ಗುತ್ತಿಗೆ ಪಡೆದವನಿರಲಿ
ಅಥವಾ ಪ್ರಜಾತಂತ್ರದ ಸ್ವಯಂಘೋಷಿತ
ಕಾವಲುಗಾರನೇ ಆಗಿರಲಿ.

ಕವಿ: ಸರ್ವೇಶ್ವರ ದಯಾಳ ಸಕ್ಸೇನ.
ಕನ್ನಡಕ್ಕೆ: ಪಿ. ಸುನೀತ ಹೆಬ್ಬಾರ್

Tuesday, 10 December 2019

ಪೌರತ್ವ ಮಸೂದೆ: ಧರ್ಮನಿರಪೇಕ್ಷ ಪರಂಪರೆಗೆ ಕಪ್ಪುಚುಕ್ಕೆ

ಪ್ರಜಾವಾಣಿ ಸಂಪಾದಕೀಯ:
(11.12.2019)

*ಪೌರತ್ವ ಮಸೂದೆ: ಧರ್ಮನಿರಪೇಕ್ಷ ಪರಂಪರೆಗೆ ಕಪ್ಪುಚುಕ್ಕೆ*

ವಸಾಹತುಶಾಹಿಯ ಹಿಡಿತದಿಂದ ಹೊರಬರಲು ಧರ್ಮದ ಚೌಕಟ್ಟುಗಳನ್ನು ಮೀರಿ ಹೋರಾಟ ನಡೆಸಿದ ಭಾರತವು ಧರ್ಮದ ಆಧಾರದಲ್ಲಿ ವಿಭಜನೆ ಕಾಣಬೇಕಾಯಿತು. ಪರಿಣಾಮವಾಗಿ ಇಂದಿನ ಬಾಂಗ್ಲಾದೇಶವನ್ನೂ ಒಳಗೊಂಡ ಇಸ್ಲಾಮಿಕ್ ದೇಶ ಪಾಕಿಸ್ತಾನವು ಉದಯವಾಯಿತು. ಆ ಸಂದರ್ಭದಲ್ಲಿ ಭಾರತವನ್ನು ‘ಹಿಂದೂ ರಾಷ್ಟ್ರ’ ಆಗಿಸಬೇಕು ಎಂಬ ಆಗ್ರಹಗಳು ಗಟ್ಟಿಯಾಗಿಯೇ ಕೇಳಿಬಂದಿದ್ದವು. ಆದರೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರು ಮತ್ತು ದೇಶದ ಸಂವಿಧಾನವನ್ನು ರೂಪಿಸಿದವರು, ಈ ದೇಶದ ಪರಂಪರೆ ಕಲಿಸಿದ ಪಾಠಗಳನ್ನು ಗಮನದಲ್ಲಿ ಇರಿಸಿಕೊಂಡು, ಧರ್ಮನಿರಪೇಕ್ಷತೆ ಮತ್ತು ಸಮಾನತೆ ಎಂಬ ಮೌಲ್ಯಗಳನ್ನು ದೇಶದ ಸಂವಿಧಾನದ ಆತ್ಮದ ಸ್ಥಾನದಲ್ಲಿ ಇರಿಸಿದರು. ಆದರೆ, ಈ ದೇಶ ಪಾಲಿಸಿಕೊಂಡು ಬಂದಿರುವ ಧರ್ಮನಿರಪೇಕ್ಷತೆ ಹಾಗೂ ಸಮಾನತೆಯ ಅಣಕದಂತೆ ಕಾಣುತ್ತಿರುವ ‘ಪೌರತ್ವ (ತಿದ್ದುಪಡಿ) ಮಸೂದೆ– 2019’ ಸೋಮವಾರ ರಾತ್ರಿ ಲೋಕಸಭೆಯ ಅನುಮೋದನೆ ಪಡೆದುಕೊಂಡಿದೆ. ಈ ಮಸೂದೆಯು ಭಾರತದ ಪೌರತ್ವ ನೀಡುವ ವಿಚಾರದಲ್ಲಿ ಧರ್ಮದ ಆಧಾರದಲ್ಲಿ ತಾರತಮ್ಯ ಎಸಗುತ್ತದೆ, ದೇಶಗಳ ಆಧಾರದಲ್ಲಿ ತಾರತಮ್ಯ ಎಸಗುತ್ತದೆ. ಅಷ್ಟೇ ಅಲ್ಲ, ವ್ಯಕ್ತಿಯೊಬ್ಬ ಒಂದು ನಿರ್ದಿಷ್ಟ ಬಗೆಯ ದೌರ್ಜನ್ಯಕ್ಕೆ ಒಳಗಾಗಿದ್ದರೆ ಮಾತ್ರ ಆತನಿಗೆ ಭಾರತದ ಪೌರತ್ವ ನೀಡಲಾಗುವುದು ಎನ್ನುವ ಮೂಲಕವೂ ತಾರತಮ್ಯಕ್ಕೆ ದಾರಿ ಮಾಡಿಕೊಡುತ್ತದೆ. ಈ ಮಸೂದೆಗೆ ರಾಜ್ಯಸಭೆಯ ಅನುಮೋದನೆ ಇನ್ನಷ್ಟೇ ಸಿಗಬೇಕಿದೆ. ಇದಕ್ಕೆ ಒಂದು ವೇಳೆ, ರಾಜ್ಯಸಭೆಯ ಅನುಮೋದನೆ ದೊರೆತು ಈ ತಿದ್ದುಪಡಿಗಳು ಮೂಲ ಕಾಯ್ದೆಯ ಭಾಗವಾದರೂ ಮೇಲ್ನೋಟಕ್ಕೇ ಕಾಣಿಸುವ ತಾರತಮ್ಯದ ಅಂಶಗಳ ಕಾರಣದಿಂದಾಗಿ ಇವು ನ್ಯಾಯಾಂಗದ ನಿಕಷಕ್ಕೆ ಒಳಪ‍ಡಬಹುದು. ಧರ್ಮನಿರಪೇಕ್ಷತೆಯು ಸಂವಿಧಾನದ ಮೂಲಸ್ವರೂಪಗಳಲ್ಲಿ ಒಂದು. ಅದರ ಉಲ್ಲಂಘನೆಗೆ ಎಷ್ಟೇ ಬಹುಮತ ಇರುವ ಸರ್ಕಾರಕ್ಕೂ ಅವಕಾಶ ಇಲ್ಲ. ಕೇಂದ್ರ ಸರ್ಕಾರವು ಈ ಮಸೂದೆಯನ್ನು ಕಳೆದ ವರ್ಷವೂ ಮಂಡಿಸಿತ್ತು. ಹಿಂದೆ ಮಂಡಿಸಿದ್ದ ಮಸೂದೆಗೆ ಹೋಲಿಸಿದರೆ ಈಗಿನ ಮಸೂದೆಯಲ್ಲಿ ಒಂದೆರಡು ಬದಲಾವಣೆಗಳು ಆಗಿವೆ. ಈಶಾನ್ಯ ಭಾರತದ ಕೆಲವು ಪ್ರದೇಶ
ಗಳನ್ನು ಬಹುಶಃ ರಾಜಕೀಯ ಕಾರಣಗಳಿಗಾಗಿ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಅಫ್ಗಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಧರ್ಮದ ಕಾರಣಕ್ಕೆ ದೌರ್ಜನ್ಯಕ್ಕೆ ತುತ್ತಾಗಿ, ಭಾರತಕ್ಕೆ 2014ರ ಡಿಸೆಂಬರ್ 31ಕ್ಕೂ ಮೊದಲು ಬಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರೈಸ್ತ ಸಮುದಾಯದ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡುವುದು ಈ ತಿದ್ದುಪಡಿಯ ಉದ್ದೇಶ. ಮಸೂದೆಯ ಉದ್ದೇಶವನ್ನು ಓದಿದಾಗ, ಅದರಲ್ಲಿನ ಲೋಪಗಳು ಮೇಲ್ನೋಟಕ್ಕೇ ಗೊತ್ತಾಗುತ್ತವೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಗಾನಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಧರ್ಮದ ಕಾರಣಕ್ಕೆ ದೌರ್ಜನ್ಯಗಳು ನಡೆದಿರುವುದು ನಿಜವಾದರೂ, ಇತರ ಕಾರಣಗಳಿಗಾಗಿ ಅಲ್ಲಿ ದೌರ್ಜನ್ಯಕ್ಕೆ ಗುರಿಯಾದ ಸಮುದಾಯಗಳಿಗೆ ಸೇರಿದವರು ಭಾರತದೊಳಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದರೆ ಅವರಿಗೆ ಭಾರತದ ಪೌರತ್ವ ನೀಡುವುದಿಲ್ಲವೇಕೆ ಎಂಬ ಪ್ರಶ್ನೆ ಎದುರಾಗುತ್ತದೆ. ‘ಧರ್ಮದ ಆಧಾರದಲ್ಲಿ ವಿಭಜನೆ ಕಾಣುವ ಮೊದಲು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಭಾರತದ ಭಾಗವೇ ಆಗಿದ್ದವು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧರ್ಮದ ಕಾರಣದಿಂದಾಗಿ ದೌರ್ಜನ್ಯಕ್ಕೆ ತುತ್ತಾದವರಿಗೆ ಆಶ್ರಯ ಕಲ್ಪಿಸುವುದು ಭಾರತದ ನೈತಿಕ ಜವಾಬ್ದಾರಿ’ ಎಂದು ತಿದ್ದುಪಡಿಯ ಪರವಾಗಿ ವಾದಿಸಬಹುದು. ಆದರೆ, ಈ ಎರಡು ದೇಶಗಳ ಜೊತೆಯಲ್ಲಿ ಅಫ್ಗಾನಿಸ್ತಾನವನ್ನು ಮಾತ್ರ ಸೇರಿಸಿಕೊಂಡಿದ್ದು ಏಕೆ, ಭಾರತದ ಜೊತೆ ಗಡಿ ಹಂಚಿಕೊಂಡಿರುವ ಇತರ ನೆರೆ ರಾಷ್ಟ್ರಗಳು ಏಕೆ ಮಸೂದೆಯ ವ್ಯಾಪ್ತಿಗೆ ಒಳಪಡಲಿಲ್ಲ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಭಾರತದ ಜೊತೆ ಗಡಿ ಹಂಚಿಕೊಂಡಿರುವ ಮ್ಯಾನ್ಮಾರ್‌ ದೇಶದಲ್ಲಿ ರೋಹಿಂಗ್ಯಾ ಮುಸ್ಲಿಂ ಸಮುದಾಯದವರು ಕೂಡ ಧರ್ಮದ ಕಾರಣಕ್ಕೇ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ಆದರೆ, ಆ ಸಮುದಾಯದವರು ಅಕ್ರಮವಾಗಿ ಭಾರತ ಪ್ರವೇಶಿಸಿದ್ದರೆ, ಅವರಿಗೆ ಪೌರತ್ವ ನೀಡುವ ಪ್ರಸ್ತಾವ ತಿದ್ದುಪಡಿಯಲ್ಲಿ ಇಲ್ಲ. ಇನ್ನೊಂದು ನೆರೆರಾಷ್ಟ್ರ ಶ್ರೀಲಂಕಾದಲ್ಲಿ ಭಾರತ ಮೂಲದ ತಮಿಳರು, ಭಾಷೆಯ ಕಾರಣಕ್ಕಾಗಿ ಮತ್ತು ಜನಾಂಗೀಯ ನೆಲೆಯಲ್ಲಿ ಕಿರುಕುಳ ಅನು
ಭವಿಸಿದ್ದಾರೆ. ಹೀಗಿರುವಾಗ, ಶ್ರೀಲಂಕಾದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ತಮಿಳರಿಗೆ ಪೌರತ್ವ ನೀಡುವ ಪ್ರಸ್ತಾವ ಕೂಡ ಮಸೂದೆಯಲ್ಲಿ ಇಲ್ಲ. ಈ ಮಸೂದೆಯು ಮುಸ್ಲಿಮರನ್ನು ಮಾತ್ರ ತನ್ನ ವ್ಯಾಪ್ತಿಯಿಂದ ಹೊರಗಿರಿಸುವ ಉದ್ದೇಶ ಹೊಂದಿದೆ. ಧರ್ಮದ ಆಧಾರದಲ್ಲಿ ತಾರತಮ್ಯ ಎಸಗುವ ಈ ಮಸೂದೆಯು ದೇಶದ ಧರ್ಮನಿರಪೇಕ್ಷ ಪರಂಪರೆಗೆ ಒಂದು ಕಪ್ಪುಚುಕ್ಕೆಯಂತೆ ಕಾಣಿಸುತ್ತಿದೆ.

Tuesday, 19 November 2019

ಮಗಳಿಗೆ ನೆಹರೂ ಅವರಿಂದ ಪತ್ರ*

ಒಬ್ಬ ತಂದೆ ಇದಕ್ಕಿಂತ ಒಳ್ಳೆಯ ಪತ್ರವನ್ನು ಮಗಳಿಗೆ ಬರೆಯಲು ಸಾಧ್ಯವಿಲ್ಲ. ಈ ಪತ್ರವನ್ನು ಎಂಟನೇಯ ತರಗತಿಯ ಕನ್ನಡ ಪಠ್ಯದಲ್ಲಿಯೂ ಸೇರಿಸಿದೆ.

" ಪ್ರಿಯ ಮಗಳೇ, ನಿನ್ನ ಹುಟ್ಟಿದ ಹಬ್ಬದ ದಿನ ಉಡುಗೊರೆ ಆಶೀರ್ವಾದಗಳನ್ನು ಪಡೆಯುವುದು ನಿನ್ನ ಅಭ್ಯಾಸ. ಆಶೀರ್ವಾದಗಳಿಗೇನು ಕಡಿಮೆ ಬೇಕಾದ್ದಷ್ಟು ಕಳುಹಿಸುತ್ತೇನೆ. ಆದರೆ ಈ ನೈನಿ ಸೆರಮನೆಯಿಂದ ನಾನು ನಿನಗೆ ಯಾವ ಉಡುಗೊರೆ ಕಳುಹಿಸಲಿ ಹೇಳು?

ಪ್ರಿಯ ಮಗಳೆ, ನೀನು ಚೆನ್ನಾಗಿ ಬಲ್ಲೆ, ಬುದ್ಧಿವಾದ, ಉಪದೇಶ ಮಾಡುವುದು ನನಗೆ ಇಷ್ಟವಿಲ್ಲ. ಬುದ್ಧಿವಾದ ಹೇಳುವುದೆಂದರೆ ನನಗೆ ಬೇಸರ. ಅಪಾರ ಜ್ಞಾನ ನನ್ನೊಳಗಿಲ್ಲ. ಆದರೆ ನನ್ನಲ್ಲಿ ಮತ್ತಷ್ಟು ಜ್ಞಾನ ಸಂಪಾದನೆಗೆ ಸ್ಥಳವಿದೆ. ಸ್ಥಳದ ಅಭಾವವಿದೆ ಎಂಬ ಮಾತೇ ಇಲ್ಲ. ನಾನು ಸರ್ವವನ್ನೂ ಬಲ್ಲವನಲ್ಲವಾದ್ದರಿಂದ ಹೇಗೆ ಉಪದೇಶ ಮಾಡಲಿ? ಉಪದೇಶ ಮಾಡುವುದರಿಂದ ಸರಿ ತಪ್ಪು ತಿಳಿಯುವುದಿಲ್ಲ ತರ್ಕ, ಸಂಭಾಷಣೆಗಳಿಂದ ಜ್ಞಾನ ಉಂಟಾಗುತ್ತದೆ. ನಾವಿಬ್ಬರು ಪರಸ್ಪರ ಚರ್ಚೆ ಮಾಡಿದ್ದೇವೆ. ಆದರೆ ಈ ಜಗತ್ತು ತುಂಬಾ ವಿಸ್ತಾರವಾದ್ದು. ನಾವು ಅಹಂಕಾರಿಗಳಾಗಬಾರದು. ನಾವು ಮಹಾಜ್ಞಾನಿಗಳಲ್ಲ. ನಮಗೆ ತಿಳಿಯದ ಎಷ್ಟೋ ವಿಷಯಗಳು ಜಗತ್ತಿನಲ್ಲೂ ಮತ್ತು ಜಗತ್ತಿನಾಚೆಗೂ ಇವೆ. 

ಆದ್ದರಿಂದ ನನ್ನ ಮಾತುಗಳೇನಾದುರೂ ನಿನಗೆ ಉಪದೇಶದಂತೆ ಕಂಡುಬಂದರೆ ಅದೊಂದು ವಿಷಗುಳಿಗೆ ಎಂದು ಬಲವಂತವಾಗಿ ನುಂಗಬೇಡ. ನೀನು ವಿಚಾರ ಮಾಡಿ ಅದನ್ನು ಸ್ವೀಕರಿಸು.
             
ಜಗತ್ತಿನ ರಾಷ್ಟ್ರಗಳ ಇತಿಹಾಸದಲ್ಲಿ ಜನಾಂಗಗಳ ಬದುಕಿನ ಮಹಾಘಟ್ಟಗಳ ಕುರಿತು ಓದುತ್ತೇವೆ. ಮಹಾನ್ ಸ್ತ್ರೀ ಪುರುಷರು ಸಾಧಿಸಿದ ಮಹಾತ್ಕಾರ್ಯಗಳ ಕುರಿತು ತಿಳಿಯುತ್ತೇವೆ. ನಾವು ಹಾಗೆಯೇ ಪರಾಕ್ರಮ ಕಾರ್ಯಗಳನ್ನು ಮಾಡಿದಂತೆ ಕನಸು ಕಾಣುತ್ತಾ ಮೈ ಮರೆಯುತ್ತೇವೆ. ಜೋನ್ ಆಫ್ ಆರ್ಕ್ ಕಥೆಯನ್ನು ನೀನು ಓದಿದಾಗ ಅದು ನಿನ್ನ ಮನಸ್ಸನ್ನು ಆಕರ್ಷಿಸಿದ ಬಗೆ ಮತ್ತು ಅವಳಂತಾಗಲು ನೀನುಎಂಥಾ ಪ್ರಬಲ ಆಕಾಂಕ್ಷೆ  ಹೊಂದಿದ್ದೆ ಎಂಬುದರ ಬಗ್ಗೆ ನೆನಪಿದೆಯೇ ನಿನಗೆ? ಸಾಮಾನ್ಯ ಸ್ತ್ರೀ ಪುರುಷರಲ್ಲಿ ಅಂತಹ ಆಕಾಂಕ್ಷೆಗಳಿರುವುದು ಅಪರೂಪ. ಅವರು ತಮ್ಮ ನಿತ್ಯದ ಅಗತ್ಯತೆಗಳಾದ ಅನ್ನ, ಬಟ್ಟೆ, ಮಕ್ಕಳು, ಕುಟುಂಬ ಇತ್ಯಾದಿಗಳಿಗಾಗಿ ಮಾತ್ರ ಯೋಚಿಸುತ್ತಾರೆ. ಆದರೆ ಒಂದು ಕಾಲಘಟ್ಟ ಒದಗುತ್ತದೆ. ಆಗ ಎಲ್ಲ ಸಾಮಾನ್ಯ ಸ್ತ್ರೀ ಪುರುಷರು ಕೂಡ ಮಹಾತ್ಕಾರ್ಯಕ್ಕಾಗಿ ಸಿದ್ಧವಾಗಿ ನಿಂತು ಬಿಡುತ್ತಾರೆ.
           
ನೀನು ಹುಟ್ಟಿದ ವರ್ಷ ೧೯೧೭ ಚರಿತ್ರೆಯಲ್ಲಿ ಒಂದು ಮಹಾವರ್ಷ. ಆ ವರ್ಷ ದೀನ ದಲಿತರ ಬಗ್ಗೆ ಅಪಾರ ಮಮತೆಯುಳ್ಳ, ಕರುಣೆಯುಳ್ಳ, ಓರ್ವ ಹೃದಯವಂತ ಮಹಾಪುರುಷ ಕಾಣಿಸಿಕೊಂಡ. ತನ್ನ ಜನಾಂಗದ ಇತಿಹಾಸದಲ್ಲಿ ಎಂದೆಂದಿಗೂ ಮರೆಯಲಾಗದ ಒಂದು ಮಹಾಧ್ಯಾಯ ಬರೆಯಿಸಿದ. ನೀನು ಹುಟ್ಟಿದ ವರ್ಷವೇ ಲೆನಿನ್ ಮಹಾಕ್ರಾಂತಿ ಪ್ರಾರಂಭಿಸಿ ರಷ್ಯ ಮತ್ತು ಸೈಬಿರಿಯಾಗಳ ಸ್ವರೂಪವನ್ನೇ ಬದಲಾಯಿಸಿದ. ಇಂದು ಭಾರತದಲ್ಲಿ ಮತ್ತೋರ್ವ ಮಹಾನಾಯಕ ಆಗಮಿಸಿದ್ದಾನೆ. ನಮ್ಮ ಜನ ಸ್ವತಂತ್ರರಾಗಲು ಹಸಿವು, ಬಡತನ, ಶೋಷಣೆಯಿಂದ ಮುಕ್ತರಾಗಲು ಕಾರ್ಯೋನ್ಮುಖರಾಗುವಂತೆ ತ್ಯಾಗ, ಬಲಿದಾನಗಳಿಗೆ ಸಿದ್ಧವಾಗುವಂತೆ ಅವರಿಗೆ ಸ್ಪೂರ್ತಿ ನೀಡುತ್ತಿದ್ದಾನೆ.
        
ಆತನ ಹೃದಯದಲ್ಲಿ ದುಃಖಿತರಿಗಾಗಿ ಅಪಾರ ಪ್ರೇಮವಿದೆ. ಅವರ ನೋವನ್ನು ಶಮನಗೊಳಿಸಲು ಕಾತುರನಾಗಿದ್ದಾನೆ. ಬಾಪೂಜಿ ಈಗ ಸೆರೆಮನೆಯಲ್ಲಿದ್ದರೂ ಅವರ ಸಂದೇಶ ಕೋಟಿ ಕೋಟಿ ಭಾರತೀಯರ ಹೃದಯಗಳನ್ನು ಸೂರೆಗೊಂಡಿದೆ. ಸ್ತ್ರೀಯರು, ಪುರುಷರು, ಮಕ್ಕಳು ತಮ್ಮ ಮನೆ ಬಿಟ್ಟು ಸ್ವಾತಂತ್ರ್ಯ ಸಂಗ್ರಾಮದ ಸೈನಿಕರಾಗಿದ್ದಾರೆ. ನಮ್ಮ‌ ಕಣ್ಣೆದುರಿಗೆ ನಡೆಯುತ್ತಿರುವ ಈ ಮಹಾನ್ ಘಟನೆಗಳಲ್ಲಿ ನಮ್ಮದೊಂದು ಪಾತ್ರವಹಿಸುವ ಭಾಗ್ಯ ನಿನ್ನದು ಮತ್ತು ನನ್ನದಾಗಿದೆ.
                
ಈ ಮಹೋನ್ನತ ಕಾರ್ಯದಲ್ಲಿ ನನ್ನ ಮತ್ತು ನಿನ್ನ ಪಾಲಿಗೆ ಬರುವ ಕೆಲಸ ಯಾವುದೆಂದು ನಾನು ಹೇಳಲಾರೆ. ಕೆಲಸ ಯಾವುದೇ ಬರಲಿ ನಮ್ಮ ಆದರ್ಶಗಳಿಗೆ ಕೆಟ್ಟ ಹೆಸರು ಬರುವ ಯಾವುದೇ ಕೆಲಸವನ್ನು ನಾವು ಮಾಡುವಂತಿಲ್ಲ. ಇದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ನಾವು ವೀರ ಸೈನಿಕರಾಗಿ ಭಾರತದ ಘನತೆ, ಗೌರವ, ಮಾನ, ಮರ್ಯಾದೆಗಳನ್ನು ಎತ್ತಿ ಹಿಡಿಯಬೇಕಿದೆ‌.
            
ಅನೇಕ ಸಲ ನಾವು ಏನು ಮಾಡಬೇಕು ಎಂಬ ಸಂದೇಹ ನಮಗೆ ಬರಬಹುದು. ಸರಿ ತಪ್ಪುಗಳನ್ನು ನಿರ್ಧರಿಸುವುದು ಕಷ್ಟವಾಗಬಹುದು. ನಿನ್ನಲ್ಲಿ ಇಂತಹ ಸಂದೇಹಗಳು ಕಾಣಿಸಿಕೊಂಡಾಗ ಒಂದು ಸಣ್ಣ ಪರೀಕ್ಷೆಯನ್ನು ನಡೆಸಬೇಕೆಂದು ನಿನಗೆ ಸೂಚಿಸುತ್ತೇನೆ. ಇದು ನಿನಗೆ ಸಹಕಾರಿಯಾಗಬಹುದು. ರಹಸ್ಯದಲ್ಲಿ ಯಾವ ಕೆಲಸವನ್ನೂ ಮಾಡಬೇಡ. ತೆರೆಯ ಮರೆಯಲ್ಲಿ  ಕೆಲಸ ಮಾಡಬೇಕೆಂದು ನಿನಗೆ ಅನ್ನಿಸಿದರೆ ನೀನು ಭಯಗೊಂಡಿರುವೆ ಎಂದು ಅರ್ಥ. ಭಯ ಎಂಬುದು ಕೆಟ್ಟದ್ದು ಅದು ನಿನ್ನಂತವಳಿಗೆ ಅರ್ಹವಾದುದಲ್ಲ. ಧೈರ್ಯವನ್ನು ಬೆಳೆಸಿಕೊ. ಉಳಿದೆಲ್ಲವೂ ತಾವಾಗಿಯೇ ಬರುವವು. ನೀನು ಧೈರ್ಯವಂತಳಾದರೆ ಯಾವುದಕ್ಕೂ ನೀನು‌ ಹೆದರುವುದಿಲ್ಲ. ನಿನಗೆ ನಾಚಿಕೆ ಎನಿಸುವ ಯಾವ ಕೆಲಸವನ್ನೂ ನೀನು ಮಾಡುವುದಿಲ್ಲ. ಬಾಪೂಜಿಯ ನಾಯಕತ್ವದಲ್ಲಿ ನಡೆಯುತ್ತಿರುವ ಚಳುವಳಿಯಲ್ಲಿ ರಹಸ್ಯಕ್ಕೆ ಸ್ಥಾನವಿಲ್ಲ. ಮುಚ್ಚಿಟ್ಟುಕೊಳ್ಳುವುದಕ್ಕೆ ಅವಕಾಶವೇ ಇಲ್ಲ. ನಾವು ರಹಸ್ಯದಲ್ಲಿ ಯಾವ ಕೆಲಸವನ್ನೂ ಮಾಡದಿರೋಣ. ಏಕಾಂತವನ್ನು ನಾವು ಅಪೇಕ್ಷಿಸೋಣ. ಏಕಾಂತಕ್ಕೂ ರಹಸ್ಯಕ್ಕೂ ವ್ಯತ್ಯಾಸವಿದೆ. ಈ ಮಾರ್ಗವನ್ನು ಅನುಸರಿಸಿದರೆ ಏನೇ ಬಂದರೂ ನೀನು ಜ್ಯೋತಿಯ ಮಗಳಾಗಿಯೇ ಬೆಳೆಯುವೆ. ನಿನಗೆ ಭಯವೆನ್ನುವುದೇ ಇರುವುದಿಲ್ಲ. ನೀನು ನಿರ್ಭಯಳೂ, ಶಾಂತಚಿತ್ತಳೂ, ನಿರ್ಮಲೆಯೂ ಆಗಿರುವೆ. ನಿನ್ನ ಮನಸ್ಸು ಕದಡದೆ ಶಾಂತವಾಗಿರುವೆ.
             
ಪುಟ್ಟ ಮಗಳೇ, ನಿನಗೆ ಶುಭವಾಗಲಿ. ನೀನು ದೊಡ್ಡವಳಾಗಿ ವೀರರಮಣಿ ಎನಿಸಿ ಭಾರತದ ಸೇವೆ ಮಾಡು. ಇದೇ ನನ್ನ ಪ್ರೀತಿ ತುಂಬಿದ ಹರಕೆ".

*ಜವಾಹರ್ ಲಾಲ್ ನೆಹರೂ
(ನೈನಿ ಜೈಲಿನಿಂದ ಇಂಧಿರಾ ಪ್ರಿಯದರ್ಶಿನಿಯ ಜನ್ಮದಿನಕ್ಕೆ ಬರೆದ ಪತ್ರ. ಕೃತಿ :ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿಯ ಕನ್ನಡ ಅನುವಾದ ಕೃತಿ)

ಗುಲಾಬಿ ಕಂಪಿನ ರಸ್ತೆ- ಮಾಧವಿ ಭಂಡಾರಿ

ಗುಲಾಬಿ ಕಂಪಿನ ರಸ್ತೆ

ಒಂದೇ ಸಮನೆ ಚರಚರನೆ ಹೊಲಿಗೆ ಯಂತ್ರವನ್ನುತುಳಿಯುತ್ತಿದ್ದಳು ಸಮೀರಾ. ಸಲ್ವಾರಿನ ಒಂದು ತುದಿಮುಗಿದು ತಿರುಗಿಸಿ ಇನ್ನೊಂದು ಹೊಲಿಗೆ ಹಾಕಲುಸೂಜಿಯಡಿ ಇಟ್ಟರೆ, ಅರೆ! ಹೊಲಿಗೆಯೇಬಿದ್ದಿಲ್ಲವೆನಿಸಿತು. ಸುಮ್ಮನೆ ಹೊಲಿಗೆಯಂತ್ರಓಡಿಸಿದೇನೆ? ಈಗಿತ್ತಲಾಗಿ ಕಣ್ಣನ್ನಪರೀಕ್ಷಿಸಿಕೊಳ್ಳಲಾಗಿರದ ಹಾಗೂ ಕನ್ನಡಕದಪಾಯಿಂಟ್ ಬದಲಾದ ಹಾಗೆ ಅನ್ನಿಸುತ್ತಲೇ ಇರುವಆಕೆ ಕೈಯಲ್ಲಿ ಹಿಡಿದು ನೋಡಿದಳು. ದಾರವಿಲ್ಲದಇಂತಹ ಎಷ್ಟು ಹೊಲಿಗೆಗಳು ತನ್ನ ಒಡಲ ತುಂಬೆಲ್ಲತುಂಬಿವೆ ಎಂದು ಕೊಂಡಾಗ ಅವಳಿಗೆ ಅರಿವಿಲ್ಲದೆನಿಟ್ಟುಸಿರೊಂದು ಹೊರ ಬಂತು.

ರೂಢಿ ಬಲದಿಂದ ಬಾಬಿನ್ ಕೇಸಿಗೆ ಕೈ ಓಡಿತು. ದಾರವೇ ಖಾಲಿ ಆಗಿದೆ. ಮತ್ತೆ ಚರಚರನೆ ದಾರತುಂಬಿಸಿದಳು. ಸೂಜಿಗೆ ದಾರ ಪೋಣಿಸಿ ಹೊಲಿಯತೊಡಗಿದರೆ ಮತ್ತೆ ದಾರ ತುಂಡರಿಸಿತು. ಇದುಹೊಲಿಗೆ ಯಂತ್ರದ ದೋಷವೋ ಅಥವಾಜೋರಾಗಿ ತುಳಿಯುತ್ತಿರುವಾಗ ಒಮ್ಮೆಲೇ ನಿಂತುಬಿಡುವ ತನ್ನ ತಲೆಯ ದೋಷವೋ ಒಂದೂತಿಳಿಯದಾದಳು. ನಿನ್ನೆ ಮೊನ್ನೆ ಹೂವಂತೆ ಅರಳಿದ್ದಚಂದೂ ಮುದುರಿ ಮೂಲೆಯಲ್ಲಿ ಕುಳಿತಿದ್ದುನೆನಪಾದಾಗಲೆಲ್ಲ ಕರುಳ ಸಂಕಟಕ್ಕೆ ಅವಳ ಕಾಲುಓಡುತ್ತಲೇ ಇರಲಿಲ್ಲ. ಮತ್ತೆ ದಾರ ಪೋಣಿಸಿ ಕಾಲುತುಳಿದರೆ ಓಡುವ ಹೊಲಿಗೆ ಯಂತ್ರದ ಜೊತೆಗೆನೆನಪಿನ ಸುರುಳಿಯೂ ಬಿಚ್ಚಿಕೊಂಡಿತು.

ಈಗ ಹೊತ್ತುರಿವ ನನ್ನ ಹೊನ್ನಾವರದ ಝಲಕ್ಒಂದು ಹತ್ತು ವರ್ಷದ ಹಿಂದೆಯೇ ನಮ್ಮ ಕೇರಿಯಅಂಗಳದಲ್ಲೇ ಕಾಣಿಸಿತ್ತು. ಅಪರೂಪಕ್ಕೆ ಗೆಳತಿಸಂಮ್ರೀನ್ ಬಂದಿದ್ದಳು. ಬಿಡುವಿಲ್ಲದ ಮಾತಿನನಡುವೆ ಒಲೆಯ ಮೇಲಿಟ್ಟ ಕುಕ್ಕರ್ ಕೂಗಿದಾಗಮಟನ್ ಬಿರಿಯಾನಿಯ ಕಂಪು ಮನೆಯ ತುಂಬೆಲ್ಲಓಡಾಡಿತು. ಸುಮಾರು ಹನ್ನೆರಡು ಗಂಟೆಯಸಮಯ ಇನ್ನೇನು ಮೂರನೇ ವಿಸಲ್‍ಗೆ ಬೆಂಕಿಆರಿಸಿದರಾಯಿತೆಂದುಕೊಳ್ಳುತ್ತಿರುವಾಗಲೇಅಚಾನಕ್ ದಂಡೊಂದು ದಾಳಿಯಿಟ್ಟಂತೆ ಓಣಿತತ್ತರಿಸಿತು. ‘ಜೈ ಶ್ರೀರಾಮ್, ಜೈ ಭಜರಂಗಿ ಎನ್ನುವಸಾಮೂಹಿಕ ಉದ್ಘೋಷಗಳು ಎಲ್ಲೆಡೆ ತುಂಬಿದವು. ಹಕ್ಕಿಗಳೆಲ್ಲ ಗುಳೆಯೆದ್ದಂತೆ ಪುರ ಪುರನೆ ಹಾರಿಹೋದವು. ಗರ್ನಾಲುಗಳ ಹೊಡೆತಕ್ಕೆ ತೊಟ್ಟಿಲಕಂದಮ್ಮಗಳೆಲ್ಲ ಬೆಚ್ಚಿ ಕಿಟಾರನೆ ಕಿರುಚಿದವು. ಗಂಟೆಜಾಗಟೆಗಳ ಅಬ್ಬರಕ್ಕೆ ಎಲ್ಲರ ಮನೆಯಬಾಗಿಲುಗಳೂ ಮುಚ್ಚಿಕೊಂಡವು. ಭೂಸ್ವಾಧೀನದಮಾತುಗಳು ಧ್ವನಿವರ್ಧಕದಲ್ಲಿ ತೇಲಿ ಬರುತ್ತಿತ್ತು. ಮಾತು ಮಾತಿಗೆ ಕರತಾಡನ, ಮಧ್ಯೆ ಮಧ್ಯೆಭಜನೆಯ ಠೇಂಕಾರ. ‘ಜೈ ಶ್ರೀರಾಮ್, ಜೈ ಭಜರಂಗಿ’ಘೋಷಣೆ ಮುಗಿಲು ಮುಟ್ಟುತ್ತಿದ್ದಂತೆವಿಜಯೋತ್ಸಾಹದ ದಾಂಧಲೆ ಕರಗಿದಾಗಲೇಹಿಡಿದಿಟ್ಟ ಜೀವ ಕೈಗೆ ಬಂದಂತಾಯಿತು. ಪರಿಮಳಿಸುತ್ತಿದ್ದ ಮನೆಯ ಮೂಲೆಯಲ್ಲಿಬಿರಿಯಾನಿ ಸೀದಿದ ಕಮರು ಕಠು ವಾಸನೆ ಮತ್ತೆಉಸಿರುಗಟ್ಟಿಸಿತು.

ಓಣಿಮಠಕೇರಿ ಹತ್ತಾರು ಮುಸ್ಲಿಂ ಕುಟುಂಬಗಳನೆಲೆ. ಎಲ್ಲ ಸಣ್ಣ ಪುಟ್ಟ ಕಸುಬುದಾರರ ಸೋರುವಮಾಡುಗಳ ಹಂಚಿನ ಮನೆ. ಮಧ್ಯದಲ್ಲೊಂದು ಜಾತಿಧರ್ಮದ ಹಂಗಿಲ್ಲದೆ ಬಯಸಿ ಬಂದವರಿಗೆಲ್ಲ ಆಸರೆನೀಡುವ ಅಪ್ಪಟ ಮಾನವೀಯ ಅರಳಿ ಮರ. ಎದುರು ಪರ್ಲಾಂಗು ಅಳತೆಯ ಮೈದಾನ. ಬೆಳಗೂಸಂಜೆ ಆಡುವ ಮಕ್ಕಳು, ಸುದ್ದಿ ಹೇಳುವ ಹೆಂಗಸರುಗಂಡಸರಿಂದ ಕಳೆಯೇರುತ್ತಿತ್ತು. ಅಲ್ಲಿ ಇದ್ದಕ್ಕಿದ್ದಂತೆವಿಷದ ಮಳೆ ಸುರಿಯಿತು. ದಂಡಾಗಿ ಬಂದ ಜನರಾಮ ಹನುಮರ ಮೂರ್ತಿಯನ್ನಿಟ್ಟು, ಊದಿನ ಕಡ್ಡಿದೀಪ ಬೆಳಗಿ, ಅರಿಶಿಣ ಕುಂಕುಮ ಬಳಿದದಾರಗಳನ್ನೆಲ್ಲ ಅರಳಿ ಮರಕ್ಕೆ ಸುತ್ತಿ ಹಕ್ಕಿನಮುದ್ರೆಯೊತ್ತಿ ನಡೆದರು. ಮಠದ ಕೇರಿ ಮುಲ್ಲಾಗಳಕೇರಿಯೂ ಆಗಿ ಸಾಮರಸ್ಯದ ಭಾರತ ದರ್ಶಿಸುತ್ತಿದ್ದಅಲ್ಲಿಗೀಗ ಕೋಮು ಸೂತಕದ ಅಪಾರದರ್ಶಕ ಬೇಲಿರೂಪುಗೊಂಡಿತು.

ಕಾಲ ಎಲ್ಲವನ್ನೂ ಮರೆಯಿಸಿತು ಎಂದುಕೊಂಡರೆಮೊನ್ನೆ ಮೊನ್ನೆ ಹೊನ್ನಾವರ ಹೊತ್ತುರಿದಾಗಲೇಅರಿವಾಗಿದ್ದು, ಇದು ಬೂದಿ ಮುಚ್ಚಿದ ಕೆಂಡವಾಗಿಹೊಗೆಯಾಡುತ್ತಲೇ ಇತ್ತ? ಜತನದಿಂದ ಕಟ್ಟಿದ ನನ್ನಮನೆಗೂ ಉರಿ ನಾಲಿಗೆಯನ್ನು ಚಾಚಿದಾಗಲೇ ಅದುಖಾತ್ರಿಯಾಯಿತು.

ಪಿ.ಯು.ಸಿ. ಓದುತ್ತಿರುವ ಚಾಂದನಿ ಎಲ್ಲರ ಚಂದೂಆಗಿ ಬೆಳೆದವಳು. ನಕ್ಕರೆ ಬೆಳದಿಂಗಳ ಸುರಿವವಳು.ಒಂದೇ ಮಾತಿನಲ್ಲಿ ಹೇಳುವುದಾದರೆ ಪಕ್ಕಾ ಚಾಂದ್ಕಾ ತುಕಡಾ ಅವಳು. ಆಡಿ, ಹಾಡಿ, ಓದಿಕೊಂಡಿದ್ದವಳು. ಸೌಹಾರ್ದದ ನೆಲೆಯನ್ನು ಕೆಡಿಸಿದಈ ಘಟನೆ ನಡೆದ ತಿಂಗಳೊಪ್ಪೊತ್ತಿನಲ್ಲಿಕಾಲೇಜಿನಿಂದ ಬಂದವಳೇ ಹೊಸ್ತಿಲಿಗೆಕಾಲಿಡುವಾಗಲೇ ಕಸೂತಿ ಬ್ಲೌಸಿಗೆ ಹೆಮ್ಮಿಂಗ್ಮಾಡುತ್ತಿದ್ದ ನನ್ನ ಕತ್ತಿಗೆ ತೆಕ್ಕೆ ಬಿದ್ದಳು. ಸದಾ ನನ್ನಮೈಹೊಸೆಯುತ್ತ, ತೆಕ್ಕೆ ಬೀಳುತ್ತ, ಸೆರಗುಹೊದೆಯುತ್ತಿರುವುದು ನಿತ್ಯದಸಂಗತಿಯಾದುದರಿಂದ ಜೋತುಬಿದ್ದ ಭಾರಕ್ಕೆಸಾವರಿಸಿಕೊಂಡೆ. ಅವಳಿಗಾಗಿಯೇ ಬಣ್ಣ ಬಣ್ಣದಪ್ರಿಲ್ ಫ್ರಾಕ್‍ಗಳನ್ನು ಹೊಲಿದುತೊಡಿಸುತ್ತಿದ್ದೆನಾದ್ದರಿಂದ ಅವಳಿಗೆ ನನ್ನಲ್ಲೂ, ನನಗೆಅವಳಲ್ಲೂ ತೀರದ ಅಕ್ಕರಾಸ್ಥೆ. ಪಟಪಟನೆಉದುರಿದ ನಾಲ್ಕು ಹನಿ ಕಸೂತಿಯನ್ನುತೋಯಿಸಿದಾಗಲೇ ಇದು ದಿನದತೆಕ್ಕೆಯಲ್ಲವೆನಿಸಿತು. ಬಿಕ್ಕುವಿಕೆಗೆ ಬೆಚ್ಚಿ ಗಲ್ಲದ ಮೇಲೆಕೈಯಾಡಿಸಿದೆ. ಕಣ್ಣೀರು ಮೆತ್ತಿಕೊಂಡಿತು.

‘ಕ್ಯಾ ಹುವಾ ಬೇಟೀ?’

‘ಮೈ ಕಾಲೇಜ್ ಕೊ ನಹೀ ಜಾವುಂಗೀ’

‘ಯಾಕೆ, ಏನಾಯ್ತು?

‘ಕಲ್ ಸೆ ಬಿಲ್‍ಕುಲ್ ನಹೀ ಜಾವುಂಗೀ’

‘ಆಯ್ತು, ಈಗ್ಹೇಳು.’ ‘ನನ್ಜೊತೆ ಫ್ರೆಂಡ್ಸ್ ಯಾರೂಮಾತಾಡೋದಿಲ್ಲ.

ನಮ್ ಜೊತೆ ಮಾತಾಡಿದ್ರೆ ಜನ ಬಹಿಷ್ಕಾರ್ಹಾಕ್ತಾರಂತೆ,

‘ಬಿಡು, ನೀನು ಓದೋದಕ್ಕೆ ತಾನೆ ಹೋಗ್ತಿರೋದು, ನೆಟ್ಟಗೆ ಕ್ಲಾಸಿಗೆ ಹೋಗು, ನೆಟ್ಟಗೆ ರಸ್ತೆ ಹಿಡಿದ್ಕೊಂಡುಬಾ.

‘ನನ್ಗೆ ಫಸ್ಟ್ ಬೆಂಚ್‍ನಲ್ಲಿ ಯಾರೂ ಜಾಗಾಕೋಡೋದಿಲ್ಲ ಬೇಕಂತಲೆ ವೇಲ್ ಇಷ್ಟಗಲ ಹಾಸಿಕೂತಿರ್ತಾರೆ’ ‘ಕಷ್ಟ ಏನು? ಮುಂದಿನವರಿಗೂಹಿಂದಿನವರಿಗೂ ಒಂದೇ ತರ ಕಲ್ಸೋದಲ್ವಾ?’

‘ಕಾಲೇಜಿನ ಗೇಟು ದಾಟ್ತಿದ್ದ ಹಾಗೆ ‘ಗುಮ್ಮಾ ಬಂತುಗುಮ್ಮಾ, ಸಾಬಿ ಗುಮ್ಮಾ ಬಂತು ಗುಮ್ಮಾ, ಗುಮ್ಮಾಬಂತು ಗುಮ್ಮಾ ಪಾಕಿ ಗುಮ್ಮಾ’ ಅಂತ ಎಲ್ಲರೂಕ್ಲಾಪ್ಸ್ ಹಾಕಿ ಹಾಡೋಕೆ ಶುರು ಮಾಡ್ತಾರೆ’

‘ಬೇಡಾ ಬಿಟ್ಬಿಡು, ಬುರ್ಖಾ ತೆಗೆದ್ಬಿಡು’ 

‘ನಮ್ದೇ ಹುಡುಗ್ರು ಗುರಾಯಿಸ್ತಾರೆ’

‘ನೀನು ಲಕ್ಷ್ಯ ಕೊಡ್ಬೇಡಾ, ನಮಗಿರೋದು ಒಂದೇಕಾಲೇಜು ಅಲ್ವಾ? ಮತ್ತೆ ಅಲ್ಲಿಗೆ ಹೋಗ್ಲೇಬೇಕಲ್ಲಾ. ನೀನು ಏನೆಲ್ಲ ಓದ್ಬೇಕು. ದೊಡ್ಡ ಸಾಹೇಬ್ ಆಗ್ಬೇಕು.ತಾಜ್‍ನಂತ ಮನೆ ಕಟ್ಬೇಕು. ನಾನು ಮಷಿನ್ ಮಾರಿಕಾಲ್ಮೇಲೆ ಕಾಲ್ಹಾಕಿ ಕುಂತ್ಕೊಬೇಕು. ಹ್ಞಾ, ನಿನ್ನ ನಿಖಾಸೀರೆ ನಾನೇ ಹೊಲ್ಯೋದು ಮತ್ತೆ’

ನಾನು ನಕ್ಕೆ, ಅವಳು ನಗಲಿಲ್ಲ. ಉಮ್ಮಳಿಕೆಏರುತ್ತಲೇ ಹೋಯಿತು, ತೆಕ್ಕೆ ಬಿಗಿಯಾಗುತ್ತಲೇಇತ್ತು. ಅಂದು ಪಠ್ಯದ ಚೀಲ ಎಸೆದವಳು ಮತ್ತೆಕಾಲೇಜಿನ ದಾರಿ ತುಳಿಯಲೇ ಇಲ್ಲ.

ಕಾಲೇಜಿನ ದಾರಿ ಗುಲಾಬಿ ನಗೆ ನಕ್ಕಿತು. ನಾನುಎಷ್ಟೊಂದು ಆಸೆ ಹೊತ್ತು ಆ ದಾರಿ ತುಳಿಸಿದ್ದೆ. ಬಣ್ಣಬಣ್ಣದ ಕನಸಿಗೆ ಬಣ್ಣ ಬಣ್ಣದ ಬಟ್ಟೆ ತೊಟ್ಟುಗೆಳತಿಯರೊಡನೊಂದಾಗಿ ಕಾಲೇಜಿನ ಅಂಗಳದತುಂಬೆಲ್ಲ ಮುಗಿಯದ ನಗೆ ಚೆಲ್ಲಿದ್ದೆ. ಈ ನಡುವೆ ಈಘೋಷಾ ಯಾಕೆ ಬಂದು ಸೇರಿತೋ, ಹೆಣ್ಣು ಮಕ್ಕಳಭಾವಗಳನ್ನೆಲ್ಲ ಇದ್ದಿಲ ಚೀಲದಲ್ಲಿ ತುಂಬಿದಂತೆ.

ಹಿಂದಿ ತರಗತಿಯಲ್ಲಿ ಉಪನ್ಯಾಸಕರು ಪ್ರೇಮ-ಚಂದಾರ ಕಾದಂಬರಿಯ ಪುಟಗಳನ್ನು ಕಲಿಸಿದರೆಅಲ್ಲಿಯ ಕಥಾನಾಯಕಿ ನಾನೇ ಆಗಿರುತ್ತಿದ್ದೆ. ರಸ್ತೆಯಗುಂಟ ಇದೇ ಗುಂಗಿನಲ್ಲಿ ಸಾಗಿ, ಮನೆಯಲ್ಲೂಅದನ್ನೇ ಉಸಿರಾಡುತ್ತಿದ್ದೆ. ನನ್ನ ಚೂಪಾದ ಮೂಗು,ಕೇದಿಗೆಯ ಬಣ್ಣ, ನಕ್ಕಾಗಿನ ನನ್ನ ಗುಳಿಗೆನ್ನೆ, ಮಲ್ಲಿಗೆಯ ದಂಡೆಯಂತಹ ಮಿಂಚು ದಂತ, ಲೋಕದ ಚಲುವೆಲ್ಲ ಒಟ್ಟಾಗಿ ಸುರಿದಂತ ಭಾವಸ್ಫೂರಣ ಕಣ್ಣು, ಗುಂಗರು ಗುಂಗರಾದ ರಾಶಿಕೂದಲು, ನೀಳ ತೆಳು ದೇಹವನ್ನು ಕಂಡು, ‘ಅಗಲವಾದ ನಿನ್ನ ಹಣೆಯಲ್ಲಿ ಕೆಂಪುತಿಲಕವೊಂದಿದ್ದರೆ’ ಎನ್ನುವಾಗ ನನ್ನ ಅಂದುಗೆಯಫೈಜಣದೊಂದಿಗೆ ಗಾಳಿಯೊಂದಿಗೆ ಗಂಧ ತೀಡುತ್ತಿದ್ದೆ. ಆ ಮೈಗಂಧ ಆಘ್ರಾಣಿಸುವ ಎರಡು ಕಣ್ಣುಗಳುನನ್ನನ್ನೇ ಅರಸುವುದನ್ನು ಕಂಡೂ ಕಾಣದಂತಿದ್ದೆನಾನು.

ಮನೆಯಿಂದ ಹೊರಟು, ಕ್ವಾಲಿಟಿ ಹೋಟೆಲ್ ದಾಟಿ, ಕಾಲೇಜು ಸರ್ಕಲ್‍ನಲ್ಲಿ ತಿರುಗಿ, ಕಾಲೇಜಿನ ದಾರಿಹಿಡಿದರೆ ಮೂಡ ಗಣಪತಿ ದೇವಸ್ಥಾನದಿಂದಹೊರಟು ಕಾಲೇಜು ಕ್ರಾಸಿಗೆ ಸೇರಿ ಕಾಯುವಸೂರಿಯ ಕಣ್ಣು ಕೂಡಿದರೆ ಅಸೀಮ ಆಕಾಶದಲ್ಲಿಢೀಢೀ ಡಿಕ್ಕಿ ಹೊಡೆಯುತ್ತಿದ್ದವು. ದಿನವೂಎದುರುಗೊಳ್ಳುವ ಆತನನ್ನು ಕಂಡಾಗ ನನ್ನೆದೆಯಲ್ಲಿಹುಚ್ಚೆದ್ದು ಹರಿವ ಶರಾವತಿ ಅವನ ಕಣ್ಣಿನಲ್ಲಿ ಉಕ್ಕಿಹರಿಯುತ್ತಿತ್ತು. ವಿದಾಯಿಸುವ ಅವನ ಬಾಡಿದನೋಟ ಪ್ರಭಾತ ನಗರವನ್ನು ಇಳಿಯುವಾಗಎದುರಾಗುವ ಅರಬ್ಬಿಯ ಸಂಧ್ಯಾನುರಾಗ ನನ್ನಕೆನ್ನೆಗಿಳಿಯುತ್ತಿತ್ತು. ಸದ್ದಿಲ್ಲದೆ ಹಿಂಬಾಲಿಸುವನಮ್ಮಿಬ್ಬರ ಮೂಕ ಮಿಲನಕ್ಕೆ ಹೆಜ್ಜೆ ಮಾತ್ರಸಾಕ್ಷಿಯಾಗಿತ್ತು.

ಪರೀಕ್ಷೆಗಳೆಲ್ಲವೂ ಮುಗಿದ ಒಂದು ದಿನಗ್ರಂಥಾಲಯದ ಪುಸ್ತಕಗಳನ್ನು ಹಿಂದಿರುಗಿಸಲುಏರು ರಸ್ತೆ ಹತ್ತುತ್ತಿದ್ದೆ. ಸುಳಿವಿಲ್ಲದ ಮಳೆಯಂತೆದೂರದಲ್ಲಿ ಕಾಣಿಸಿದ. ಸಾಗರದ ನೀಲಿಯನ್ನೇಹೊದ್ದಂತೆ ತುಂಬು ತೋಳಿನ ನೀಲ ಶರ್ಟ ಧರಿಸಿದಆತ ಸಮೀಪಿಸುತ್ತಿದ್ದಂತೆ ತಲೆತಗ್ಗಿಸಿದರೂ ಬೆಳಗಿನಮಂದ ಮಾರುತಕ್ಕೆ ಗರಿಗೆದರಿದ ಕ್ರಾಪ್ ಕೂದಲುನನ್ನನ್ನು ಕೆಣಕದೆ ಇರಲಿಲ್ಲ. ಇನ್ನೇನು ಒಂದರ್ಧಮಾರು ದೂರವಿದೆಯೆಂದುಕೊಂಡಾಗ ಕೆಂಪುಗುಲಾಬಿಯೊಂದನ್ನು ದಾರಿಯಲ್ಲಿರಿಸಿ ಮುನ್ನಡೆದ. ಬೇಡ ಬೇಡವೆಂದರೂ ಹೆಜ್ಜೆ ದಾಟಲಿಲ್ಲ. ಕಂಪಿಸುವಕೈಯಲ್ಲಿ ಗುಲಾಬಿಯನ್ನೆತ್ತಿದೆ. ಮುಳ್ಳಿಲ್ಲದ ಗುಲಾಬಿ! ಆಫ್ರಾಣಿಸಿದೆ, ಕೈಗಳಿಂದ ಎದೆಗೊತ್ತಿಕೊಂಡೆ. ಬೆಚ್ಚನೆಯ ಸ್ಪರ್ಶದ ಸುಖಾನುಭಾವದ ಹಿಗ್ಗುಸಂಧಿಸಿದ ಆತನ ಕಣ್ಣುಗಳಲ್ಲಿ ಹೊಮ್ಮಿ ಮತ್ತಾಗಿಮುತ್ತಿಕೊಂಡಿತು.

ಅನಿರೀಕ್ಷಿತ ಘಟನೆಗಳು ಮನೆಯ ಆರ್ಥಿಕಸ್ಥಿತಿಯನ್ನು ಅಲ್ಲಾಡಿಸಿದವು. ಕಲಾಯಿ ಸಾಬಿಯಾಗಿಧರ್ಮಾತೀತವಾಗಿ ಜನರ ಪ್ರೀತಿ ಪಾತ್ರನಾದ ಅಪ್ಪಸ್ಟೀಲ್ ಪಾತ್ರೆಗಳ ದಾಳಿಯಿಂದಾಗಿ ಕುಸಿದಿದ್ದರು. ಅಷ್ಟೂ ಸಾಲದೆಂಬಂತೆ ಪಾಶ್ರ್ವವಾಯು ಹಠಾತ್ತನೆಎರಗಿ ಏಳಗೊಡಲೇ ಇಲ್ಲ. ಅಮ್ಮನ ಸಂಧಿವಾತಮನೆಯ ಮೂಲೆ ಹಿಡಿಸಿತು. ಸಣ್ಣ ಪುಟ್ಟ ವ್ಯಾಪಾರವಹಿವಾಟು ಅಷ್ಟಾಗಿ ಅಣ್ಣಂದಿರ ಕೈಗೆ ಹತ್ತಲೇ ಇಲ್ಲ. ದುಡಿಯುವ ಕೈಗಿಂತ ಉಣ್ಣುವ ಕೈಯೇಮೇಲಾದಾಗ ಕಾಲೇಜಿನ ಹಾದಿಯ ಕಡೆ ತಿರುಗಿಯೂನೋಡಲಾಗಲಿಲ್ಲ.

ಈ ಗುಲಾಬಿ ಕಂಪಿನ ರಸ್ತೆಗೆ ರಕ್ತದ ವಾಸನೆಮೆತ್ತಿದವರಾರು? ನಡೆದದ್ದು ಸಣ್ಣ ಸಂಗತಿ, ತಾರೀಬಾಗಿಲ ರಸ್ತೆಯಲ್ಲಿ ಒಂದು ಬೈಕ್ ಮತ್ತುರಿಕ್ಷಾದ ಆಕ್ಸಿಡೆಂಟ್ ಜಮಾಯಿಸಿದ ಜನರಲ್ಲಿಮಾತಿಗೆ ಮಾತು ಬೆಳೆದು, ಕಾವು ಇಳಿದುರಾಜಿಯಾಗಿ ರಸ್ತೆ ಹಿಡಿವ ಸಂದರ್ಭದಲ್ಲಿ ಕಲ್ಲೊಂದುತೂರಿ ಬಂದು ರಿಕ್ಷಾವಾಲಾನ ಹಣೆಗೆ ತಾಗಿ ರಕ್ತಸುರಿಯಿತು. ದೂರದಲ್ಲೊಂದು ಸದ್ದು ಮಾಡುತ್ತಾಗಡ್ಡಧಾರಿಯಲ್ಲದವನ ಸವಾರಿ ಹೊತ್ತ ಬೈಕೊಂದುಶರವೇಗದಲ್ಲಿ ಮರೆಯಾಯಿತು.

ಅದೇ ಸಂಜೆ ಬಸ್‍ಸ್ಟಾಂಡ್ ಪಕ್ಕದಲ್ಲಿರುವ, ಬಿರ್ಯಾನಿಗೆ ಹೆಸರುವಾಸಿಯಾದ ಖಾನ್ಕುಟುಂಬದವರು ನಡೆಸುತ್ತ ಬಂದ, ನಿಜಹೇಳಬೇಕೆಂದರೆ ಒಳಗಡೆ ಬಿರ್ಯಾನಿ ಮಾಡಲುಬಾರದ ಬಹುಸಂಖ್ಯಾತರದೇ ಬಾಯಿರುಚಿಯಮೇಲಾಟವಾಗಿರುವ ‘ವೆಲ್‍ಕಮ್’ ಹೋಟೆಲ್ಮೇಲೆ ದೀಪ ಆರುತ್ತಿದ್ದಂತೆ ಉದ್ರಿಕ್ತ ಗುಂಡಿನಿಂದಕಲ್ಲು ತೂರಾಟ. ತಾವೇನು ಕಡಿಮೆಯಿಲ್ಲವೆನ್ನುವಂತೆಮುಸ್ಲೀಮರ ಪ್ರತಿ ತೂರಾಟ ಪರಿಸ್ಥಿತಿಕೈಗೆತ್ತಿಕೊಳ್ಳಲು ನಾಪತ್ತೆಯಾದವನ ಸುಳಿವಾಗಲೇಇಲ್ಲ.

ಮೂರನೇಯ ದಿನ ಹೊನ್ನಾವರ ಪಟ್ಟಣದ ಹೈದಯಭಾಗದಲ್ಲಿರುವ ಅಸಾಮಿ ಕೆರೆಯಲ್ಲಿ ವ್ಯಕ್ತಿಯ ಹೆಣತೇಲಿತು. ಮೂರು ದಿನಗಳಿಂದ ಕಣ್ಮರೆಯಾದಗಾಯಗೊಂಡ ಸುರೇಶನ ಹೆಣವಾದ್ದರಿಂದ ಇದುದಾಡಿವಾಲಾರುಗಳದೇ ಕೆಲಸವೆಂದುತೀರ್ಮಾನಿಸಲು ಕಷ್ಟವೇನೂ ಆಗಲಿಲ್ಲ. ಕಾಳ್ಗಿಚ್ಚಿನಂತೆ ಹಬ್ಬಿದ ಸುದ್ದಿ ನಗರದ ಶಾಂತಿಯನ್ನೇನಾಶಮಾಡಿತು. ಒಂದಿಷ್ಟು ಮನೆಯ ಬಾಗಿಲುಮುಚ್ಚಿತ್ತು. ಒಂದಿಷ್ಟು ಜನ ಪ್ರಾಣಭಯದಿಂದಊರನ್ನೇ ಬಿಟ್ಟು ಹೋದವರ ನೆಲೆ ಇನ್ನೂಪತ್ತೆಯಾಗಿಲ್ಲ. ಪುಟ್ಟ ಪುಟ್ಟ ಹೆಜ್ಜೆಯಿಟ್ಟುಕಿಲಕಿಲಿಸುತ್ತ ಸಾಗಬೇಕಾದ ಮಕ್ಕಳು ಸಾಗುವದಾರಿಯಲ್ಲೆಲ್ಲ ಖಾಕಿ ಪಡೆಗಳ ಕಣ್ಗಾವಲ್ಲಿತ್ತು. ಘೋಷಿತ ರಾಜಕೀಯ ಚದುರಂಗದಾಟದರಂಗಿನಲ್ಲಿ, ಘೋಷಿತ ಬಂದ್‍ಗಳ ಕಾರಸ್ತಾನದಲ್ಲಿಮನುಷ್ಯರ ಸುಳಿವಿಲ್ಲದೆ ಪೋಲೀಸರ ಆವಾಸಸ್ಥಾನವೆಂಬಂತೆ ಭಾಸವಾಗತೊಡಗಿತು.

ದಿನಕ್ಕೊಂದರಂತೆ ತೂರಿ ಬರುವ ಸುದ್ದಿ ಜನರನ್ನುತತ್ತರಿಸಿತು. ಬಸ್‍ಸ್ಟಾಂಡಿನಲ್ಲಿ ಬಸ್ಸಿನ ಗ್ಲಾಸಗಳೆಲ್ಲಪುಡಿ ಪುಡಿಯಾದವೆಂದೂ, ಕುಮಟಾದಲ್ಲಿಪೊಲೀಸ್ ಜೀಪೇ ಹೊತ್ತುರಿಯಿತೆಂದೂ, ಹೆರಂಗಡಿಯಲ್ಲಿ ಗುಡ್ಡ ಗಾಡು ದಾರಿಯಲ್ಲಿ ಮನೆಗೆಸಾಗುತ್ತಿರುವ ಹಿಂದೂ ವಿದ್ಯಾರ್ಥಿನಿಯ ಮೇಲೆರೇಪ್ ಆಯಿತೆಂದೂ, ಸಿದ್ದಾಪುರದಲ್ಲಿಹಣ್ಣಿನಂಗಡಿಯನ್ನು ಕಿತ್ತೆಸೆದರೆಂದೂ, ಯಲ್ಲಾಪುರದಲ್ಲಿ ಮರಳು ಲಾರಿ ಯುವಕರನ್ನುಥಳಿಸಿದರೆಂದೂ, ಭಟ್ಕಳದಲ್ಲಿ ಗುಡಿಸಲೊಂದುಹೊತ್ತುರಿಯಿತೆಂದೂ, ಅಂಕೋಲಾದಲ್ಲಿ ಟಾಯರ್ಶಾಪ್ ಧ್ವಂಸವಾಯಿತೆಂದೂ, ಶಿರಸಿಯ ಬಂದ್ವೇಳೆ ಕಲ್ಲು ತೂರಾಟ, ಲಾಠಿ ಚಾರ್ಜ್‍ಗೆಬಲಿಯಾದರೆಂದೂ ಹುತ್ತದಿಂದೆದ್ದು ಬರುವ ಒರಲೆಹುಳುಗಳಂತೆ ಸುದ್ದಿ ಹಬ್ಬುತ್ತಲೇ ಇತ್ತು. ರಸ್ತೆ ಜನಸಂಚಾರವನ್ನು ಕಳೆದುಕೊಂಡುಬಣಗುಡತೊಡಗಿತು.

ಗಾಳಿ ದಿಕ್ಕಿಗೆಲ್ಲ ಈ ಕೋಮು ಜ್ವಾಲೆ ಹಬ್ಬುತ್ತಲೇಹೋಯಿತು. ಎಷ್ಟು ವರ್ಷಗಳಿಂದ ಕಿರಿಯ ಅಣ್ಣಆಸೀಫ್ ಮನೆ ಮಗನೇ ಆಗಿ ಬಾಳಿದ ಅರೇಅಂಗಡಿಯಲ್ಲಿ ಸೈಕಲ್ ರಿಪೇರಿ ಶಾಪ್ ರಾತ್ರಿಬೆಳಗಾಗುವುದರಲ್ಲಿ ಹೊತ್ತುರಿದ ಊರಿಗೆ ಅಂದುಮನೆ ಸೇರಿದವನು ಇಂದಿಗೂ ಹೊರಗಡಿಯಿಟ್ಟಿಲ್ಲ. ಬೆಳಗಾಗುತ್ತಲೇ ಸೈಕಲ್ ಏರಿ ಕಡ್ಲೆ, ಕಡತೋಕ್,ಕೆಕ್ಕಾರಿಗೆ ಹೋಗಿ ಮೀನು ಮಾರಿ ನಗು ಮುಖದಿಂದಮಕ್ಕಳಿಗೆ ಚಾಕಲೇಟು ಹಿಡಿದು ಬರುವ ಹಿರಿಯಣ್ಣರಫಿಯ ಮೇಲೆ ಏಕಾಏಕಿ ಎರಗಿ ಪೆಟ್ಟಿಗೆ ಮುರಿದುಸೈಕಲ್ ಜಜ್ಜಿದ ಹೊಡೆತಕ್ಕೆ ಪ್ರಾಣಉಳಿಸಿಕೊಳ್ಳುವುದೇ ಕಷ್ಟವಾಯಿತು. ಸಿಕ್ಕಿ ಬಿದ್ದಮೀನುಗಳೇ ಕಣ್ಮುಂದೆ ಸುಳಿದು ಮುರಿದ ಕಾಲಿನನೋವೂ ನಗಣ್ಯವಾಗಿ ಮೂಲೆ ಹಿಡಿದಿದ್ದ. ರಮೇಶ್ಕಾಮತ್ ಅವರ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‍ಮ್ಯಾನ್ಆಗಿ ಅಂಗಡಿಯ ಕೀಲಿಕೈಗೂ ಒಡೆಯನಾದ ಮಧ್ಯದಅಣ್ಣ ರಜಾಕ್‍ನನ್ನು ಹಾಡೇ ಹಗಲು ಎಳೆದು ಮಧ್ಯರಸ್ತೆಯಲ್ಲಿ ಥಳಿಸಿದ ಹೊಡೆತಕ್ಕೆ ಅರೆವಿವಸ್ತ್ರನಾಗಿಕಣ್ಣೀರಿಡುತ್ತ ಬಂದು ಆತ ಬೆಳಗಾಗುವುದರಲ್ಲಿನಾಪತ್ತೆಯೇ ಆದವನ ಸುಳಿವು ಹೆಂಡತಿಗೂತಿಳಿದಿಲ್ಲ.

ಲೋಕದ ವ್ಯವಹಾರಕ್ಕೆ ಮನೆಯ ಬಾಗಿಲುಮುಚ್ಚಿಕೊಂಡಿತು. ಮನೆಯೊಳಗಿನ ಮನಸ್ಸುಮುಗ್ಗುತ್ತಲೇ ಹೋಯಿತು. ಚಾಂದನಿ ದಿನದಿಂದದಿನಕ್ಕೆ ಮಂಕಾಗತೊಡಗಿದಳು. ಮಗ್ಗುಲಲ್ಲಿಭಯಭೀತಳಂತೆ ಮುದುಡಿ ಮುದ್ದೆಯಾಗಿಮೈಗೊತ್ತೊತ್ತಿ ಮಲಗುತ್ತಿದ್ದಳು. ಆಗಾಗ ತೆಕ್ಕೆಬೀಳುತ್ತಿದ್ದಳು. ನಿದ್ದೆಯಲ್ಲೇ ಕನವರಿಸುತ್ತಿದ್ದಳು. ‘ಛೋಡ್ ದೋ ಮುಜೆ, ಪ್ಲೀಸ್ ಬಿಟ್ಬಿಡು, ನನ್ನಎಂದು ಒಂದು ದಿನ ಹೇಳಿದರೆ, ಹಾಲ್ ಜೋಡಲ್ಲೇಹ್ಞೂ...... ಪ್ಲೀಸ್ ಅಣ್ಣಾ ಕೈ ಮುಗಿತೀನಿ ಬಿಡು’ಎಂದು ಇನ್ನೊಂದು ದಿನ, ‘ನಹೀ ಬೊಲತೀ ಹ್ಞೂ, ಬಿಲ್‍ಕುಲ್, ಯಾರಿಗೂ ಹೇಳೋದಿಲ್ಲ ಭಯ್ಯಾ, ಯಾರ ಹೆಸರನ್ನೂ ಹೇಳೋದಿಲ್ಲ ಅಣ್ಣಾ’ ಎಂದುಮಗುದೊಂದು ದಿನ. ನಿದ್ದೆಯಲ್ಲೇ ನನ್ನ ಸೊಂಟಬಿಗಿಯಾಗಿ ಬಳಸಿ ಗಳಗಳನೆ ಅಳುತ್ತ ಏದುಸಿರುಬಿಡುವ ಅವಳ ವರ್ತನೆ ರಹಸ್ಯ ಗರ್ಭದಂತಾಯಿತು.

ಥಟ್ಟನೆ ನೆನಪಾಗಿದ್ದು, ಕೂದಲ ಸುಂದರಿಯ ತಲೆಮೀಯಿಸುತ್ತಿದ್ದಾಗ ಬೆನ್ನಿನ ಮೇಲಿನ ಗೀರುವಿಕೆ, ಎದೆಯ ಮೇಲಿನ ಕನ್ನೆತ್ತರ ಗುರುತು. ಗೆಳತಿಯರೊಂದಿಗೆ ಚಾಂದ್ರಾಣಿ ಗುಡ್ಡಕ್ಕೆ ಮುಳ್ಳೆಹಣ್ಣು ಕೊಯ್ಯಲು ಹೋಗಿದ್ದುದಾಗಿಯೂ, ಮೈತುಂಬ ಮುಳ್ಳು ತರಚಿದೆಯೆಂದೂ ಹೇಳಿದುದನ್ನುಮಳ್ಳಿಯ ಹಾಗೆ ನಂಬಿದ್ದ ನನಗೆ ಈಗಿತ್ತಲಾಗಿ ಅವಳಉತ್ತರ ಅಷ್ಟು ಸರಳವಾದದ್ದಾಗಿ ಕಾಣಲಿಲ್ಲ.

ಇಡೀ ಕುಟುಂಬ ನನ್ನ ಹೊಲಿಗೆ ಯಂತ್ರದ ಮೇಲೆನಡೆಯತೊಡಗಿತು. ನಾನಾದರೂ ಅಂತಿಂಥಹೊಲಿಗೆಯವಳಾಗಿರಲಿಲ್ಲ. ಒಮ್ಮೆ ನನ್ನ ಮನೆಯದಾರಿ ತುಳಿದವರು ಮತ್ತೆ ಮರೆಯುತ್ತಿರಲಿಲ್ಲ. ದೂರದೂರುಗಳಿಗೆ ನೌಕರಿಗಾಗಿ ಹೋದವರೂಮದುವೆಯಾಗಿ ಹೋದ ಹೆಣ್ಣು ಮಕ್ಕಳೂತವರುಮನೆಗೆ ಬರುವಾಗ ಬಟ್ಟೆಯ ಗಂಟನ್ನೇತರುತ್ತಿದ್ದರು. ಹೆಣ್ಣು ಮಕ್ಕಳ ತಾಯಂದಿರಿಗೋ ‘ನನ್ನಕೈ ಗುಣ ಭಾಳ ಚಲೋದು’. ನಾನು ಹೊಲಿದಬ್ಲೌಸಿನಲ್ಲೇ ಗಂಡು ಮೆಚ್ಚಿ ನಿಶ್ಚಿತಾರ್ಥವಾದದ್ದು, ಮಧುರ ದಾಂಪತ್ಯ ಸಿಕ್ಕಿದ್ದು, ಸೀಮಂತಕ್ಕೆ ಉಡಿಸಿದಹಸಿರು ಸೀರೆ ಕುಪ್ಪುಸದಿಂದಲೇ ಸುಖಪ್ರಸವವಾಗಿದ್ದು, ಎಲ್ಲದಕ್ಕೂ ನಾನೇ ನಿಮಿತ್ತವಾಗಿದ್ದೆ. ನಾನೇ ಹೊಲಿದ ಬಟ್ಟೆ ತೊಟ್ಟು ಕಡೆದ ಗೊಂಬೆಯಹಾಗೆ ಓಡಾಡುವ ಮಕ್ಕಳನ್ನು ಕಂಡಾಗ ನನ್ನಕೈಚಳಕಕ್ಕೆ ನಾನೇ ಮೆಚ್ಚಿದ್ದೆ. ಒಮ್ಮೆ ಭಾವೀಪತಿಯೊಂದಿಗೆ ಶರಾವತಿ ದಡದಲ್ಲಿ ಕುಳಿತು ಸೂರ್ಯಮುಳುಗುವುದನ್ನು ನೋಡುತ್ತಿರುವಾಗ ಎಡಪಕ್ಕದಲ್ಲಿದ್ದ ಆತ ಕದ್ದು ಕದ್ದು ನೋಡಿ ‘ಒಳಗೆ ಪ್ಯಾಡ್ಹಾಕಿದ್ದೀಯಾ’ ಎಂದು ಹುಳ್ಳಹುಳ್ಳಗೆ ನಕ್ಕಿದ್ದು ನಿಮ್ಮಕಠೋರಿ ಬ್ಲೌಸಿನ ಮಹಿಮೆಯಿಂದಾಗಿಯೇ ಎಂದುಶಿಲ್ಪಾ ಹೇಳಿದಾಗ ಬಿದ್ದೂ ಬಿದ್ದೂ ನಕ್ಕು ಹೊಟ್ಟೆಹುಣ್ಣಾಗಿತ್ತು.
ರಂಜಾನ್, ಗಣೇಶ್ ಚತುರ್ಥಿ, ಮೊಹರಂ, ದಸರಾ, ದೀಪಾವಳಿ, ಬಕ್ರಿದ್, ಕ್ರಿಸ್‍ಮಸ್, ಮದುವೆ ಮುಂಜಿ,ಜಾತ್ರೆ, ಪೇಸ್ತು ಹೀಗೆ ಒಂದರ ಹಿಂದೆ ಒಂದರಂತೆಬರುವ ಹಬ್ಬ ಹರಿದಿನಗಳಿಗೆ ನನ್ನ ಮನೆ ಬಣ್ಣಬಣ್ಣದ ಬಟ್ಟೆಗಳ ಜವಳಿ ಅಂಗಡಿಯೇ ಆಗಿರುತ್ತಿತ್ತು. ಹಗಲೂ ರಾತ್ರಿ ದುಡಿದರೂ ಬಟ್ಟೆಯ ರಾಶಿಕರಗುತ್ತಿರಲಿಲ್ಲ.

ಮಂಜಿನಂತೆ ಕರಗಿದ್ದು, ನನ್ನ ಆಯುಷ್ಯ, ನನ್ನ ಕನಸು, ತಮ್ಮ ಪ್ರಾಯಕ್ಕೆ ತಕ್ಕಂತೆ ಮದುವೆಯಾದಅಣ್ಣಂದಿರು ಮಕ್ಕಳನ್ನು ನನ್ನ ಮಡಿಲಿಗೆಸೆದರೇಹೊರತು ತಂಗಿಯ ಕನಸಿನ ಹಂದರವನ್ನುಪ್ರವೇಶಿಸಲೇ ಇಲ್ಲ. ಮನೆ ತುಂಬುತ್ತಲೇ ಹೋಯಿತು,ಮನ ಖಾಲಿಯಾಗುತ್ತಲೇ ಹೋಯಿತು. ಕಣ್ಣಿಗೆಕನ್ನಡಕ ಬಂತು, ಕೂದಲಿಗೆ ಬಣ್ಣ ಹಚ್ಚಿದೆ, ಆದರೆನೆರಿಗೆಗಳ ಮುಚ್ಚಲಾಗಲಿಲ್ಲ. ಕಾಲು ಸೋತರೂಯಂತ್ರ ನಿಲ್ಲಲಿಲ್ಲ. ಎಲ್ಲರ ಹೊಟ್ಟೆ ನನ್ನ ಕಾಲಮೇಲಿತ್ತು. ಈ ಧರ್ಮದ ಗೋಡೆ ಮನುಷ್ಯರನ್ನುಒಡೆದಿದ್ದರೆ ನಾನೂ.......

ಈಗ ಹಗಲೂ ರಾತ್ರಿ ಚಂದುವನ್ನು ಕಾಯುವುದೇದೊಡ್ಡ ಕೆಲಸವಾಯಿತು. ಒಂದು ಸಂಜೆ ಚಹದಜೊತೆ ಮಂಡಕ್ಕಿ ವಗ್ಗರಿಸಿ ಎಲ್ಲರಿಗೂ ನೀಡಿಇವಳನ್ನೂ ಕೂಗಿದರೆ ಸುಳಿವೇ ಇಲ್ಲ. ಕರೆದೂಕರೆದೂ ಅರಸುತ್ತ ಅರಳಿ ಮರದ ಹತ್ತಿರ ಬಂದೆ. ಅರಳಿಮರದ ಕಟ್ಟೆಯ ಮೇಲೆ ಮೊಳಪೊಂಡಿಮಡಚಿ, ತಲೆ ಇಟ್ಟು ಕುಳಿತ ಚಂದುವ ಕಂಡೆ. ಭುಜದಮೇಲೆ ಕೈಯಿಟ್ಟರೆ ಬೆಚ್ಚಿ ಬಿದ್ದವಳೆ ‘ಮುಟ್ಟಬೇಡಾ,ಮುಟ್ಬೇಡಾ, ಡೋಂಟ್ ಟಚ್,’ ಎಂದು ಕಿರುಚುತ್ತ, ಅಲ್ಲೇ ಕಲ್ಲಿನ ಮೂರ್ತಿಗೆ ಹಚ್ಚಿದ ಅರಿಶಿಣಕುಂಕುಮವನ್ನು ಬರಗಿ ಬರಗಿ ಮುಖಕ್ಕೆಬಳಿದುಕೊಂಡಳು. ರೋಷದಿಂದ ಎದ್ದು ನಿಂತು ‘ಜೈಶ್ರೀರಾಮ್, ಜೈ ಭಜರಂಗಿ, ಜೈ ಜೈ ಭಜರಂಗಿ ಎಂದುಕೈ ಎತ್ತಿ ಕೂಗಿದಳು. ಕೂದಲು ಬಿಚ್ಚಿ, ಕಣ್ಣಲ್ಲಿಕೆಂಡವುಗುಳುತ್ತ ನಿಂತ ಆಕೆ ಯಾರನ್ನೋ ಸಾಯಿಸಹೊರಟ ಅವತಾರಿಯಂತೆ ಕಂಡಳು. ನನ್ನ ಕಣ್ಣೀರುಧರೆಗುರುಳುತ್ತಿತ್ತು. ಕಣ್ಣಲ್ಲಿ ಕಣ್ಣಿಟ್ಟು ನೋಡಿದಅವಳೂ ಗಳಗಳನೆ ಒಂದಿಷ್ಟು ಹೊತ್ತು ಅತ್ತೂ ಅತ್ತೂಎದೆಗೊರಗಿದಳು. ಪಾದರಸದಂತ ಮಗು ಲೋಕದಭಾವಗಳಿಗೆ ಜಡವಾಗಿ ಕುಳಿತಳು.

ಫೋನ್ ರಿಂಗುಣಿಸಿತು. ತೋಳ ತೊಟ್ಟಿಲ ಕೂಸಾದಚಂದೂವನ್ನು ಹಾಸಿಗೆಗೆ ಒರಗಿಸಿ ಮೇಲೆ ಸರಿದಸಲ್ವಾರ್ ಸರಿಪಡಿಸುವಾಗ ಹೊಟ್ಟೆಉಬ್ಬಿದಂತೆನಿಸಿತು. ಬೇಗ ಬೇಗ ಮುಚ್ಚಿ ಫೋನ್‍ಗೆಕಿವಿ ಹಚ್ಚಿದೆ.

‘ಹಲೋ’

‘ನಾನು....... ಪಲ್ಲವಿ’

‘ಹ್ಞಾ, ಗೊತ್ತಾಯ್ತು, ಹೇಳು ಪಲ್ಲವಿ’

‘ಅದು..... ಬಟ್ಟೆ ಬೇಕಿತ್ತು.

“ಮೂರು ತಿಂಗಳ ಮೇಲಾಯ್ತಲ್ಲ ಹೊಲಿದಿಟ್ಟು, ಅರ್ಜೆಂಟ್ ಇದೆ, ಮದ್ವೆ ಅಂದೆ’

‘ಹೌದಾಗಿತ್ತು, ಈಗ ಸಮಯ ಸರಿ ಇಲ್ಲಾ ಅಲ್ಲ. ಅದಕ್ಕೇ ಮದ್ವೆ ಪೋಸ್ಟ್ ಪೋನ್ ಆಯ್ತು.’

‘ಓ, ತಯಾರಿಗೆ ಇನ್ನೂ ಸಮಯ ಸಿಗ್ತು, ಬಾ’

‘ಅದು..... ನಿಮ್ಮ ಕೇರಿಗೆ ಬರಲಿಕ್ಕೆ...... ಭಯ’

‘ನಾನೇನೂ ಹುಲಿ ಕಟ್ಟಿಲ್ಲ ಅಲ್ಲಾ’

‘ಹಾಗಲ್ಲ, ನಿಮ್ಮ ಜನ...... ಸರಿಯಿಲ್ಲವಂತೆ’

‘ಓ, ನಾನಿದ್ದೇನಲ್ಲಾ, ಧೈರ್ಯವಾಗಿ ಬಾ’

‘ಅದು ಸರೀನೇ, ಅಲ್ಲಿಗೆ ಬಂದರೆ..... ನಮ್ಮ ಜನಬಹಿಷ್ಕಾರ ಹಾಕ್ತಾರಂತೆ, ಮತ್ತೆ..... ಹುಡುಗನಿಗೆಗೊತ್ತಾದ್ರೆ..... ಮದ್ವೆ......’

‘ಉಶ್ ssssssss’

‘ಮತ್ತೆ ನೀವೇ..... ಮೇನ್ರೋಡಿಗೆ.......ತಂದುಕೊಟ್ರೆ’ ಉಗುಳು ನುಂಗಿದೆ, ಮಾತಾಡಲಾಗಲಿಲ್ಲ. ಎದೆಯ ದನಿಯೇ ಇಂಗಿಹೋದಂತೆನಿಸಿತು. ಮನಸ್ಸು ಚೀತ್ಕರಿಸಿತು. ಸಂಬಂಧಇಷ್ಟು ಬೇಗ ಹಳಸುತ್ತದೆಯೇ? ಎಷ್ಟು ಸಾರಿಕಾಲೇಜಿನಿಂದ ಹಸಿದು ಬರುವ ಇವಳಿಗೆ ಕಷಾಯಬಿಸ್ಕತ್ತು ನೀಡಿಲ್ಲ? ಮನೆಗೆ ಬಂದವರೆಲ್ಲ ಸುಖದುಃಖಹಂಚಿಕೊಳ್ಳುತ್ತ, ಗೇಟನ್ನೂ ದಾಟಿ ಅವಳೆಯಂಚಿನತೆಂಗಿನಮರದ ತನಕವೂ ಸಾಗಿ ವಿದಾಯಿಸುತ್ತದ್ದನಾನು ಎಷ್ಟು ಬೇಗ ಅನ್ಯಳಾಗಿ ಬಿಟ್ಟೆ! ನವಿಲಿನನಡಿಗೆಯ ರಸ್ತೆ ಬಿಕ್ಕಿಬಿಕ್ಕಿ ಬಿಕ್ಕಿತು.

ಮನೆಯ ಹಿಂದಿನ ಸಣ್ಣ ನೀರು ಅವಳೆಯಆಚೆಯಿಂದ ‘ಬೂಬಮ್ಮಾ’ ಎನ್ನುವ ಲಲಿತಮ್ಮರದನಿ ಬಂತೆಂದರೆ ನಮ್ಮ ಮನೆಯಲ್ಲೂ ಹಬ್ಬ. ನಾಗರಪಂಚಮಿಯ ಪಾತೋಳಿಯನ್ನು ಬೊಗಸೆಯಲ್ಲಿಹಿಡಿದ ಉಮ್ಮಾ ‘ಕೈಯೆಲ್ಲಾ ಘಮ ಘಮಿಸಿತು’ಎಂದರೆ, ರಂಜಾನಿನ ಸುರಕುಂಬಾ ಸವಿದ ಲಲಿತಮ್ಮ‘ಹೊಟ್ಟೆಯೆಲ್ಲಾ ಸಿಹಿಯಾಯಿತು’ ಎಂದರೆ ಅವರಮನೆಯಲ್ಲೂ ಹಬ್ಬ. ಇದೇ ಚಂದೂ ಎಳೆ ಬಾಲೆ ಆಗ. ಅಮ್ಮನ ಅನಾರೋಗ್ಯದಿಂದ ಎದೆ ಹಾಲು ಬತ್ತಿತು. ಒಂದೇ ಸಮನೆ ಅಳುವ ಕೂಸಿನ ಬಾಯಿ ಮುಚ್ಚಿದ್ದೇಲಲಿತಮ್ಮರ ಮನೆಯ ಆಕಳು ಕರೆದ ಕೌಳಿಗೆ ಹಾಲು. ಹಾಲಿನಿಂದಲೇ ಬದುಕು ಸಾಗಬೇಕಾದ ಅವರ ಕಿರಿಮಗಳ ಗಂಡು ನೋಡಲು ಬಂದಾಗ ಕೆನೆ ಬಣ್ಣದನನ್ನ ಬುಟ್ಟಾ ಸೀರೆಯನ್ನು ಉಡಿಸಿದವಳೂ ನಾನೇ. ಕ್ಷಣದಲ್ಲಿ ಹಾಲು ಹಾಲಾಹಲವಾದುದೇಕೆ?

ನಿದ್ದೆಯೋ ಎಚ್ಚರವೋ ತಿಳಿಯದ ಮನಸ್ಥಿತಿಯಲ್ಲಿಮಧ್ಯರಾತ್ರಿ ಮೀರಿತು. ಮಗ್ಗುಲಾಗಿ ಚಂದೂವನ್ನುಬಳಸಿದೆ. ಖಾಲಿ ಹಾಸಿಗೆ, ಎದ್ದು ಮನೆಯೆಲ್ಲಹುಡುಕಿದೆ ಸುಳಿವಿಲ್ಲ. ಎದೆ ಧಸಕ್ಕೆಂದಿತು. ಏನೋನೆನಪಾಗಿ ಕತ್ತಲಲ್ಲೇ ಮೊಬೈಲಿನ ಕ್ಷೀಣ ಬೆಳಕಲ್ಲಿಅರಳಿ ಮರ ಸುತ್ತಿ ಬಂದೆ. ಬಾವಿ ಕಟ್ಟೆಯ ಮೇಲೆಕುಳಿತು ‘ನೀಲೆ ಗಗನ ಕಿ............ ಎಂದು ಆಕಾಶದಿಟ್ಟಿಸುತ್ತ ಕಾಲು ಕುಣಿಸುತ್ತ ಸುಶ್ರಾವ್ಯವಾಗಿಹಾಡುತ್ತ ಏನಾದರೂ ಪರಾಮಶಿಯಾದರೆ ನನ್ನಿಂದಬಯ್ಸಿಕೊಳ್ಳುವ ಚಂದೂ ನೆನಪಾದಳು. ಕರುಳಿಂದಮೀಟಿದ ಕಂಪನದಲ್ಲಿ ಮೊಬೈಲ್ ಕೈತಪ್ಪಿತು. ಕತ್ತಲಲ್ಲೆ ಓಡಿ ಓಡಿ ಓಡಿದೆ. ನೀಲ ಗಗನದಲ್ಲಿಬೆಳ್ಳಿಮೋಡಗಳ ಹಿಂದಿಕ್ಕಿ ಓಡುತ್ತಿದ್ದ ಚಂದಿರನ ಹೆಣಹಿತ್ತಲ ಬಾವಿಯಲ್ಲಿ ತೇಲುತ್ತಿತ್ತು.

ಲೋಕಕ್ಕೆ ಬಣ್ಣ ಬಣ್ಣದ ಬಟ್ಟೆ ತೊಡಿಸುವ ಮುಖವಿವರ್ಣವಾಯಿತು. ಮನೆಯ ತುಂಬ ಪೇರಿಸಿಟ್ಟಬಟ್ಟೆ ಬಿಕ್ಕಿತು. ಮಾನಕ್ಕೆ ವಿವಿಧ ಆಕಾರ ನೀಡಿದಹೊಲಿಗೆ ಯಂತ್ರ ಮೌನವಾಯಿತು. ಎದೆಯಲ್ಲಿಮುಳ್ಳೊಂದು ಮುರಿಯಿತು.

ಚೆಲ್ಲಿದ ರಕ್ತದ ಪ್ರತಿ ಹನಿಗೂ ನ್ಯಾಯಕೊಡುವುದೆಂದರೆ ಇದೇ ಇರಬಹುದೆ? ಮುರಿದಮುಳ್ಳು ಕೀವುಗಟ್ಟುತ್ತಲೇ ಇತ್ತು. ರಸ್ತೆಗೆ ರಕ್ತತೊಟ್ಟಿಕ್ಕುತ್ತಲೇ ಇತ್ತು. ನಾ ನಡೆವ ಹಾದಿಯಲ್ಲಿಮುಳ್ಳಿಲ್ಲದ ಗುಲಾಬಿ ಚೆಲ್ಲಿದ ಸೂರಿ,ಸೂರ್ಯಕಾಂತ್ ಮತ್ತೆ ಮತ್ತೆ ಮತ್ತೆ ನೆನಪಾಗಿಕಾಡಿದ.

ಮಾಧವಿ ಭಂಡಾರಿ ಕೆರೆಕೋಣ



Friday, 25 October 2019

ನಾದ ಲಯಗಳ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಗೋಪಾಲಕೃಷ್ಣ ಹೆಗಡೆ ಕಲ್ಬಾಗ*



ನಾದ ಲಯಗಳ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಗೋಪಾಲಕೃಷ್ಣ ಹೆಗಡೆ ಕಲ್ಬಾಗ

ನಾದ ಲಯದ ಸೂಕ್ಷ್ಮವನ್ನು ಇಂದಿನ ಮಕ್ಕಳು ಕಳೆದುಕೊಳ್ಳುತ್ತಿದ್ದಾರೆ. ಮಾತ್ರವಲ್ಲ ಪಾಲಕರಾದ ನಾವೂ ಇಂದು ಅದರಿಂದ ದೂರ ಆಗುತ್ತಿದ್ದೇವೆ. ಯಾವ ಸ್ವರಕ್ಕೆ ರಾಗವಿಲ್ಲವೋ ಅದನ್ನು ವಿಕೃತ ಸ್ವರ ಅನ್ನುತ್ತೇವೆ. ಅದು ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಒಳ್ಳೆಯದನ್ನು ಆಲಿಸುವ, ಗ್ರಹಿಸುವ, ಚಿಂತಿಸುವ ಮತ್ತು ಮನನ ಮಾಡುವವರ ಕೊರತೆ ನಮ್ಮಲ್ಲಿ ಇದೆ. ಒಬ್ಬ ಸಂಗೀತಗಾರ ವೇದಿಕೆಯಲ್ಲಿ ಪ್ರದರ್ಶನ ನೀಡುವುದಕ್ಕೆ ಮಾತ್ರ ಸೀಮಿತನಲ್ಲ. ಬದಲಾಗಿ ಸಮಾಜದೊಟ್ಟಿಗಿನ ಬದುಕಿನಲ್ಲಿ ಕೂಡ ಆತ ಹೆಚ್ಚು ಪ್ರಸ್ತುತ ಆಗಬೇಕು.” ಎಂದು ಎಸ್.ಡಿ.ಎಂ ಕಾಲೇಜಿನ ಸಂಗೀತ ಉಪನ್ಯಾಸಕ ಕಲ್ಬಾಗ ಗೋಪಾಲಕೃಷ್ಣ ಹೆಗಡೆ ಹೇಳಿದರು. ಅವರು ಚಿಂತನ ರಂಗ ಅಧ್ಯಯನ ಕೇಂದ್ರ ಮತ್ತು ಸಹಯಾನ ಹಮ್ಮಿಕೊಂಡ *ಬಣ್ಣಬಣ್ಣದ ಮಕ್ಕಳ ರಜಾ ಶಿಬಿರದ ಸಮಾರೋಪ ಸಮಾರಂಭದ* ಅತಿಥಿಯಾಗಿ ಮಾತನಾಡುತ್ತಿದ್ದರು.


ರಂಗ ಶಿಬಿರದ ಮೂಲಕ ಪ್ರಕೃತಿಯೆಡೆಗೆ ಕೊಂಡೊಯ್ಯುತ್ತಿದ್ದೇವೆ. ನಾವು ಮಕ್ಕಳಿಗೆ ಕಲಿಸುವುದಿಲ್ಲ. ನಾವೇ ಮಕ್ಕಳಿಂದ ಕಲಿಯುತ್ತೇವೆ. ಮಕ್ಕಳಲ್ಲಿ ಸಾಮಾಜಿಕ, ರಾಜಕೀಯ ಪ್ರಜ್ಞೆಯನ್ನು ಬೆಳೆಸುವಲ್ಲಿ ಈ ಶಿಬಿರಗಳು ಕ್ರಿಯಾಶೀಲವಾಗಿರುತ್ತವೆ.” ಎಂದು ಶಿಬಿರದ ನಿರ್ದೇಶಕಿ ಎಂ.ವಿ. ಪ್ರತಿಭಾ ಹೇಳಿದರು. ಚಿಂತನ ರಂಗ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಕಿರಣ ಭಟ್ ಸ್ವಾಗತಿಸಿದರು. ಗಣೇಶ ಭಂಡಾರಿ ವಂದಿಸಿದರು. ಪ್ರಮೋದ ನಾಯ್ಕ ಕಡತೋಕ ನಿರೂಪಿಸಿದರು.
ಮಕ್ಕಳಲ್ಲಿ ನಾಯಕತ್ವ ಬೆಳೆಸುವ ಪ್ರಾಮಾಣಿಕ ಜವಾಬ್ದಾರಿ ಹೆಚ್ಚಿಸುವ ನಿಟ್ಟಿನಲ್ಲಿ ‘ಮಕ್ಕಳ ಸಹಯಾನ’ ಎನ್ನುವ ಸಮಿತಿಯನ್ನು ರಚಿಸಲಾಯಿತು. ವಿಠ್ಠಲ ಭಂಡಾರಿಯವರು ಅದರ ಅವಶ್ಯಕತೆ ಮತ್ತು ಸ್ವರೂಪದ ಬಗ್ಗೆ ವಿವರಿಸಿದರು.
ನಂತರದಲ್ಲಿ ಎಂ.ವಿ. ಪ್ರತಿಭಾ ರವರು ನಿರ್ದೇಶಿಸಿದ *ಕೋಟಿಗಾನಳ್ಳಿ ರಾಮಯ್ಯ ಬರೆದ “ಹಕ್ಕಿ ಹಾಡು” ನಾಟಕವನ್ನು* ಮಕ್ಕಳು ಸುಂದರವಾಗಿ ಪ್ರದರ್ಶಿದರು. ಚಿಂತನ ರಂಗ ಅಧ್ಯಯನ ಕೇಂದ್ರದ ಯುವ ಕಲಾವಿದರು ದ.ರಾ ಬೇಂದ್ರೆಯವರು ಬರೆದ ‘ *ಸಾಯೋ ಆಟ’* ನಾಟಕ ಪ್ರದರ್ಶಿಸಿದರು.

Thursday, 24 October 2019

“ಅಣ್ಣನನ್ನು ಪರಿಚಯಿಸಲು ಆಗಲಿಲ್ಲ ಎನ್ನುವ ಕೊರಗು ಮತ್ತು ಅಣ್ಣ ಅಕ್ಷರದ ತೆಕ್ಕೆಗೆ ಸಿಗಲೇ ಇಲ್ಲ ಎನ್ನುವ ಸತ್ಯ ನನ್ನ ಎದುರಿಗಿದೆ.”


ಅಣ್ಣನನ್ನು ಪರಿಚಯಿಸಲು ಆಗಲಿಲ್ಲ ಎನ್ನುವ ಕೊರಗು ಮತ್ತು
 ಅಣ್ಣ ಅಕ್ಷರದ ತೆಕ್ಕೆಗೆ ಸಿಗಲೇ ಇಲ್ಲ ಎನ್ನುವ ಸತ್ಯ ನನ್ನ ಎದುರಿಗಿದೆ.”
                                                                                            - ವಿಠ್ಠಲ ಭಂಡಾರಿ

      ರಾತ್ರಿಯಿಂದಲೇ ಜನ ಬರಲಾರಂಭಿಸಿದರು. ಮಣಿಪಾಲದಿಂದ ಬಂದು ಸೇರಲು ರಾತ್ರಿಯಾಗಿತ್ತು. ಆಗಲೇ ಮನೆಯಂಗಳದ ತುಂಬ ಜನರ ಸಂತೆ. ಸಂಬಂಧಿಕರು, ಅಣ್ಣನ ಆಪ್ತೇಷ್ಟರು, ಊರವರು, ಎಲ್ಲರೂ ನೆರೆದಿದ್ದರು. ಆಶ್ಚರ್ಯವೆಂದರೆ ಸದಾ ಅಣ್ಣನನ್ನು ದ್ವೇಷಿಸುವವರು ಅಲ್ಲಿ ಸೇರಿ ನಾಲ್ಕು ಒಳ್ಳೆಯ ಮಾತನ್ನು ಆಡಿದರು.
     ಅಲ್ಲೇ ಅಂತ್ಯಕ್ರಿಯೆ ನಡೆದ ಸ್ವಲ್ಪ ಹೊತ್ತಿನಲ್ಲಿಯೇ ಒಂದು ಶ್ರದ್ಧಾಂಜಲಿ ಸಭೆ ನಡೆಯಿತು. ಹೊರಗಿನಿಂದ ಬಂದವರೊಂದಿಗೆ ಊರಜನರೂ, ಸಂಬಂಧಿಕರೂ ಸಭೆಗೆ ಕಿವಿ, ಮನಸ್ಸುಗಳಾಗಿದ್ದರು.





ಬೆಂಗಳೂರಿನಿಂದ ಬಂದ ಜಿ.ಎಸ್. ನಾಗರಾಜ (ಕಾರ್ಯದರ್ಶಿ ಸಿ.ಪಿ..ಎಮ್.) ಎಸ್.ವೈ. ಗುರುಶಾಂತ, ಎಸ್. ವರಲಕ್ಷ್ಮೀ, ಡಾ ಎನ್.ಆರ್. ನಾಯಕ, ಎಂ. ಜಿ. ಹೆಗಡೆ, ಮೋಹನ ಹಬ್ಬು, ಶಾಂತಾರಾಮ ನಾಯಕ ಹಿಚ್ಕಡ, ಕೃಷ್ಣಾನಾಯಕ ಹಿಚ್ಕಡ, ಶಾಂತಿ ನಾಯಕ ಮುಂತಾದ ಹಲವರು ಬಂದಿದ್ದರು. ಕೆಲವರು ಸಭೆಯಲ್ಲಿ ಮಾತನಾಡಿದರು. ಅಣ್ಣನ ಬದುಕಿನ ಹಲವು ಮಗ್ಗಲುಗಳನ್ನು ತೆರೆದಿಟ್ಟರು. ಹಲವರು ಅಣ್ಣನೊಂದಿಗಿನ ತಮ್ಮ ಸ್ನೇಹವನ್ನು ಬಿಚ್ಚಿಟ್ಟರು. ಅವರೆಲ್ಲರ ಮಾತುಗಳನ್ನು ರೆಕಾರ್ಡ್ ಮಾಡಿಕೊಳ್ಳುವ ವ್ಯವಸ್ಥೆಯಿದ್ದಿದ್ದರೆ ಎಷ್ಟು ಒಳ್ಳೆಯದಾಗಿರುತ್ತಿತ್ತು ಎಂದು ಈಗ ಅನ್ನಿಸುತ್ತದೆ. ಎಷೊಂದು ಒಳ್ಳೆಯ, ಅಪರೂಪದ ಸಂಗತಿಗಳು ದಾಖಲಾಗುತ್ತಿದ್ದವು! ಆದರೆ ದಿನ ಅದೇನೂ ನೆನಪಿನಲ್ಲಿ ಉಳಿದಿರಲಿಲ್ಲ.
ನಾನೂ ಖಾಲಿಯಾಗಿದ್ದೆ. ಗ್ರಹಿಸುವ ಸ್ಥಿತಿಯಲ್ಲಿ ಇರಲಿಲ್ಲ. ಅಕ್ಕ, ಮಾಧವಿ, ಇನ್ನಕ್ಕರನ್ನು ಸುಧಾರಿಸುವ ಜವಾಬ್ದಾರಿ ಕೂಡ ನನ್ನ ಮತ್ತು ಯಮುನಾಳ ಮೇಲೆಯೇ ಇತ್ತು.
        ಒಂದೆಡೆ ಬಂದವರೊಂದಿಗೆ ಮಾತನಾಡಬೇಕು. ವಿವಿಧ ಊರುಗಳಿಂದ ಸ್ಥಿರದೂರವಾಣಿ ಸಾಂತ್ವನದ ಫೋನುಗಳಿಗೆ ಉತ್ತರಿಸಬೇಕು. ಪತ್ರಿಕೆಗಳಿಗೆ ಅಣ್ಣನ ಕುರಿತ ವಿವರ, ಫೋಟೋ ಇತ್ಯಾದಿಗಳನ್ನು ಕಳುಹಿಸಲು ತೊಡಗಬೇಕು. ಊರಿನಲ್ಲಿ ಕಳುಹಿಸುವ ವ್ಯವಸ್ಥೆ ಇಲ್ಲ. ಹೊನ್ನಾವರಕ್ಕೆ ಹೋಗಬೇಕು. ಹೆಚ್ಚು ಕಡಿಮೆ ಇಡೀ ದಿನ ಒಂದೆಡೆ ಕುಳಿತು ಅಳಲೂ ಸಮಯವಿಲ್ಲದಷ್ಟು ಕೆಲಸ.
      ಬಂದವರೆಲ್ಲ ಒಬ್ಬೊಬ್ಬರೇ ಹೋಗುತ್ತಿದ್ದಂತೆ ಒಂಟಿ ಎನಿಸತೊಡಗಿತು. ನಾಳೆ ಮತ್ತೆ ಅಣ್ಣ ಸಿಗುವುದಿಲ್ಲ ಎನ್ನಿಸಿದಾಗ ತುಂಬಾ ಖೇದವೆನಿಸಿತು.
ನಂತರ ಹೊನ್ನಾವರ, ಅಂಕೋಲಾ, ದಾಂಡೇಲಿ, ಕುಮಟಾ, ಶಿರಸಿ ಹೀಗೆ.... ಜಿಲ್ಲೆಯ ತುಂಬಾ ಶ್ರದ್ಧಾಂಜಲಿ ಸಭೆಗಳು ನಡೆದವು. ಒಂದಿಷ್ಟು ದಿನ ಪತ್ರಿಕೆಯನ್ನು ನೋಡಿ ಖುಷಿ ಪಟ್ಟೆವು. ಬೇರೆ ಬೇರೆ ಕಡೆಯಿಂದ ಬಂದ ಸುದ್ದಿ, ಶ್ರದ್ಧಾಂಜಲಿ ಸುದ್ದಿ, ಬೇರೆ ಬೇರೆಯವರು ನೀಡಿದ ಹೇಳಿಕೆ, ಲೇಖನಗಳು.... ತಿಂಗಳವರೆಗೆ ಹಲವರ ನೆನಪಿನ ಬುತ್ತಿ ಬಿಚ್ಚಿ ನೀಡುವುದು.
ಆದರೂ ಮನೆ ಖಾಲಿ ಖಾಲಿ ಎನ್ನಿಸುತ್ತಿತ್ತು. ಆತ ಕೂಡ್ರುವ ಜಾಗ, ಆರಾಮ ಖುರ್ಚಿ, ಹೊರವರಾಂಡ, ಗೇಟಿನ ಪಕ್ಕದ ಕಟ್ಟೆ.........ಹೀಗೆ
ಆತನ ನಿಧನದ ವಾರ್ತೆಯನ್ನು ಜಿಲ್ಲೆಯಲ್ಲಿ ಪತ್ರಿಕೆಗಳು ಕೂಡಾ ತುಂಬಾ ಗೌರವಪೂರ್ಣವಾಗಿ, ಅರ್ಥಪೂರ್ಣವಾಗಿ, ಪ್ರೀತಿಪೂರ್ವಕವಾಗಿಯೇ ಸುದ್ದಿ ಪ್ರಕಟಿಸಿದವು. ಜಿಲ್ಲೆಯ ಪ್ರಧಾನ ದಿನಪತ್ರಿಕೆ ಕರಾವಳಿ ಮುಂಜಾವುಬಡವಾದ ಬಂಡಾಯದನಿ: ರವಿ ಅಸ್ತಂಗತ ಎಂದು ಅರ್ಥಪೂರ್ಣ ತಲೆಬರಹದೊಂದಿಗೆ ಮುಖಪುಟದಲ್ಲಿ ಪ್ರಕಟಿಸಿದರೆ ಒಳಪುಟದಲ್ಲಿಮೂಕವಾದ ವರ್ಣ ಮತ್ತು ವರ್ಗ ಸಂಘರ್ಷದ ಒಳದನಿ ಎಂದು ಅಣ್ಣನ ವೈಚಾರಿಕ ಕೊಡುಗೆಯನ್ನು ನೆನಪಿಸಿತು. ಗಂಗಾಧರ ಹಿರೇಗುತ್ತಿಯವರುಮರೆಯಾದ ರವಿ-ಆರ್.ವಿ.” ಎಂದು ಸಂಪಾದಕೀಯ ಬರೆದರು. ಲೋಕಧ್ವನಿ ಪತ್ರಿಕೆಯಲ್ಲಿ ಅಶೋಕ ಹಾಸ್ಯಗಾರ ಅವರುವೈಚಾರಿಕಭಂಡಾರ ಭಂಡಾರಿ ಎಂದು ಬರೆದರೆ ಜನಮಾಧ್ಯಮದಲ್ಲಿಬಂಡಾಯ ಸಾಹಿತಿ ಆರ್.ವಿ. ಭಂಡಾರಿ ಇನ್ನಿಲ್ಲ ಎಂದು ಸಂಪಾದಕೀಯ ಬರೆದರು. ಹಲವರು ಅಣ್ಣನ ಕುರಿತು ಲೇಖನ ಬರೆದರು. ಬರಗೂರು ರಾಮಚಂದ್ರಪ್ಪನವರುಪ್ರಗತಿಪರ ಚಳುವಳಿಯ ಗೆಳೆಯ ಆರ್.ವಿ. ಭಂಡಾರಿ ಎಂದು, ವಿಷ್ಣು ನಾಯ್ಕ ಅವರು್ವಿ ಭಂಡಾರಿ ಎಂಬ ಕೆಂಡದ ನಡಿಗೆ ಎಂದು, ಎಸ್.ಆರ್. ನಾರಾಯಣ ರಾವ್ ಅವರುಆರ್ವಿ ಲವಲವಿಕೆಯ ಚಿಂತಕ-ಸಾಹಿತಿ ಎಂದು ಬರೆದರು.
      ಬರೆದಂತೆ ಬದುಕಿದರು, ಬದುಕಿದಂತೆ ಬರೆದರು. ಶೋಷಿತರ ನೋವಿಗೆ ಸಮರ್ಥ ಧ್ವನಿ ನೀಡಿದ್ದ ಆರ್.ವಿ ಭಂಡಾರಿ ಎಂದು ವಿನಾಯಕ ಎಲ್. ಪಟಗಾರ, “ಅಂಗಾತ ಮಲಗಿದ ಅಂಚೆಕಾರ್ಡ್: ಆರ್ ವಿ ಎಂದು ಸಾಗರದ ಯೋಗೀಶ್ ಜಿ. ‘ಗಟ್ಟಿಯಾದ ನೈತಿಕ ಧ್ವನಿಯೊಂದು ಅಡಗಿತು ಎಂದು ಎಸ್.ಬಿ. ಜೋಗೂರ, ‘ಕಾಣದಿದ್ದರೂ ನಮ್ಮ ಜತೆಗಿರುವ ಭಂಡಾರಿ ಎಂದು ಸರ್ವಜಿತ್, ‘ಭಂಡಾರಿಯವರು ಅವ್ಯವಸ್ಥೆಯ ವಿರುದ್ಧದ ದನಿಯಾಗಿದ್ದರು ಎಂದು ಪ್ರಭಾಕರ ರಾಣೆ, ‘ಮಗುವಿನ ಮನಸ್ಸಿನ ಮಾರ್ಕ್ಸ್ವಾದಿ ಎಂದು ಜಿ.ಯು. ಭಟ್ಟ, ‘ಧೀಮಂತ ಕನಸುಗಾರ ಆರ್.ವಿ. ಭಂಡಾರಿ ಎಂದು ವಿ. ಜೆ. ನಾಯಕ, ‘ಕಾಡುತ್ತಿರುವ ನನ್ನ ಆರ್.ವಿ. ಸರ್ ಎಂದು ಅರವಿಂದ ಕರ್ಕಿಕೋಡಿ, ‘ಡಾ. ಆರ್.ವಿ. ಭಂಡಾರಿ ಎಂಬ ಬಂಡಾಯದ ಧ್ವನಿ ಅಡಗಿದಾಗ ಅನ್ನಿಸಿದಿಷ್ಟು ಎಂದು ಬಿ.ಎನ್. ವಾಸ್ರೆ ಹೀಗೆ ಹಲವರು ಪತ್ರಿಕೆಯಲ್ಲಿ, ಸುನಂದಾ ಕಡವೆ, ರಹಮತ್ ತರಿಕೆರೆ ಇವರು ವೆಬ್ನಲ್ಲಿ  ಲೇಖನ ಬರೆದು ತಮ್ಮ ಪ್ರೀತಿಯ ನಮನ ಅರ್ಪಿಸಿದರು.
ಹೊನ್ನಾವರ, ಕೆರೆಕೋಣ, ಕುಮಟಾ, ಶಿರಸಿ, ಕಾರವಾರ ಹೀಗೆ ಜಿಲ್ಲೆಯಾದ್ಯಂತ ಶ್ರದ್ಧಾಂಜಲಿ ಸಭೆಗಳು ಏರ್ಪಾಟಾದವು. ವಿಷ್ಣು ನಾಯಕ, ರೋಹಿದಾಸ ನಾಯಕ, ಜಯಂತ ಕಾಯ್ಕಿಣಿ, ಚಿಂತಾವiಣಿ ಕೊಡ್ಲಕೆರೆ, ವಿ.ಜಿ. ನಾಯಕ, ಶಾಂತಾರಾಮ ನಾಯಕ ಮುಂತಾದವರು ಭಾಗವಹಿಸಿ ಮಾತನಾಡಿದರು.
ಸಹಯಾನದಲ್ಲಿ ಈಗ ಆತನ ನಡಿಗೆ.
ಅಣ್ಣ ೨೦೦೮ರ ಅಕ್ಟೋಬರ್ ೨೫ ರಂದು ನಮ್ಮನ್ನು ಅಗಲಿದನು. ಅವನು ತನ್ನ ಬದುಕಿನುದ್ದಕ್ಕೂ ಕಂಡ ಸಮಾನತೆಯ ಕನಸನ್ನು ನನಸಾಗಿಸಲು ಅವರ ನೆನಪಿನಲ್ಲಿ 'ಸಹಯಾನ'(ಡಾ.ಆರ್.ವಿ ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ) ಹುಟ್ಟಿಕೊಂಡಿತು. ಆತನ ಸ್ನೇಹಿತರು, ವಿದ್ಯಾರ್ಥಿಗಳು, ಚಳುವಳಿಯ ಸಹಪಾಠಿಗಳು ಸೇರಿ ಸಂಸ್ಥೆಯನ್ನು ಕಟ್ಟುತ್ತಿದ್ದಾರೆ. ೨೦೦೯  ಅಕ್ಟೋಬರ್ ೨೫ ರಂದು ಗೌರವಾನ್ವಿತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ರಿಂದ ಉದ್ಘಾಟನೆಗೊಂಡಿತು. ಹೊನ್ನಾವರ ತಾಲೂಕು ಕೇಂದ್ರದಿಂದ ೧೧ ಕಿ.ಮಿ ದೂರದ ಗ್ರಾಮೀಣ ಪ್ರದೇಶವಾದ ಕೆರೆಕೋಣದಲ್ಲಿರುವ ಮೂಲ ಮನೆ ಮತ್ತು ಮನೆಯ ಸುತ್ತಲಿರುವ ಕೈತೋಟವನ್ನು ಉಪಯೋಗಿಸಿಕೊಂಡು 'ಸಹಯಾನ' ಕೆಲಸ ಮಾಡುತ್ತಿದೆ. ಪ್ರಜಾಪ್ರಭುತ್ವ, ಜಾತ್ಯಾತೀತತೆ, ವೈಜ್ಞಾನಿಕ ಸಮಾಜವಾದದ ಆದರ್ಶಗಳನ್ನು ಜನತೆಯಲ್ಲಿ ಹರಡುವುದು ಮತ್ತು ಅಸ್ಪೃಶ್ಯತೆ, ಜಾತಿವಾದ, ಕೋಮುವಾದದ ಅಪಾಯಗಳನ್ನು ಸಂಘಟನಾತ್ಮಕವಾಗಿ ಎದುರಿಸುವುದು, ಮೌಢ್ಯತೆ, ಲಿಂಗ ಅಸಮಾನತೆ, ಸಾಮಾಜಿಕ-ಆರ್ಥಿಕ ಅಸಮಾನತೆಯ ಕುರಿತು ಜಾಗೃತಿ ಮೂಡಿಸುವುದು. ಜನಮುಖಿ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಪೋಷಿಸುವುದು, ಅಭಿವೃದ್ಧಿಗೊಳಿಸುವುದು, ಯುವ ಲೇಖಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿ, ಯುವ ಜನರಿಗೆ ಓದು ಮತ್ತು ಬರವಣಿಗೆಯನ್ನು ಒಳಗೊಂಡಂತೆ ಸಂವಿಧಾನದ ಆಶಯ ಮತ್ತು ಜಾರಿಯ ಅಗತ್ಯದ ಕುರಿತು ತರಬೇತಿ ನೀಡುವುದು..... ಹೀಗೆ ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
 ಇವೆಲ್ಲದರ ಮೂಲಕ ಪ್ರಬಲ ಜನತಾ ಸಾಂಸ್ಕೃತಿಕ ಚಳುವಳಿ ಕಟ್ಟುವುದು `ಸಹಯಾನ' ಮಹೋನ್ನತ ಗುರಿಯಾಗಿದೆ. ಉದ್ದೇಶಗಳ ಈಡೇರಿಕೆಗಾಗಿ `ಸಹಯಾನ'ವು ನಿರಂತರವಾಗಿ ಶ್ರಮಿಸುತ್ತಿದ್ದು ಅನೇಕ ಜನಪರ ಕಾರ್ಯಕ್ರಮಗಳನ್ನು ಕಳೆದ ರ್ಷಗಳಿಂದಲೂ ನಡೆಸಿಕೊಂಡು ಬರುತ್ತಿದೆ. ಸಹಯಾನ ಸಾಹಿತ್ಯೋತ್ಸವ-ಜಿಲ್ಲೆಯ ಹೆಮ್ಮೆ ೨೦೧೦ ರಿಂದ ಪ್ರತಿ ರ್ಷವೂ ಮೇ ತಿಂಗಳಿನಲ್ಲಿ  ಕೆರೆಕೋಣದ ಮನೆಯಂಗಳದಲ್ಲಿ ನಡೆಯುತ್ತಿರುವ `ಸಹಯಾನ ಸಾಹಿತ್ಯೋತ್ಸವವು ಸಮಾನ ಮನಸ್ಕ ಸಾಹಿತಿಗಳೆಲ್ಲಾ ಒಂದುಗೂಡಿ ಚರ್ಚಿಸುವ ಅರ್ಥ ಪೂರ್ಣ ಕಾರ್ಯಕ್ರಮವಾಗಿದೆ. ಅತ್ಯಂತ ಗ್ರಾಮೀಣ ಪ್ರದೇಶವಾದ ಕೆರೆಕೋಣದಂತಹ ಊರಿನಲ್ಲೂ ಸಾಹಿತ್ಯದ ಒಲವಿನಿಂದ ಬೇರೆ ಬೇರೆ ಜಿಲ್ಲೆಗಳಿಂದ ಸಾಹಿತಿಗಳು ಆಸಕ್ತರೂ ಆಗಮಿಸುತ್ತಾರೆಸಾಹಿತ್ಯೋತ್ಸವವೆಂದರೆ ಜಾತ್ರೆಯಾಗದಂತೆ ತಡೆಯಲು ಪ್ರತಿಬಾರಿಯೂ ಒಂದೊಂದು ಪ್ರಚಲಿತ ವಿಯವನ್ನು ಆಧಾರವಾಗಿಟ್ಟು ವಿಚಾರಸಂಕಿರಣ, ಸಂವಾದ, ಕವಿಗೋಷ್ಠಿ, ನಾಟಕ, ಜಾನಪದ ಕಲಾ ಪ್ರದರ್ಶನ, ಪುಸ್ತಕ ಮೇಳ ಇತ್ಯಾದಿಗಳು ನಡೆಯುತ್ತವೆ. ಸಾಹಿತ್ಯ, ಸಂಘಟನೆ, ಚಳುವಳಿ, ಪತ್ರಿಕೆ, ಯಕ್ಷಗಾನ, ಜಾನಪದ. ಬುಡಕಟ್ಟು ಅಧ್ಯಯನ, ಸಂಶೋಧನೆ, ಅಕ್ಷರ ಜಾತ್ರೆ....... ಹೀಗೆ ಬದುಕನ್ನು ಸುಂದರವಾಗಿಸಬಲ್ಲ ಅನೇಕ ವಿಭಾಗಗಳಲ್ಲಿ ದುಡಿದವರು ಆರ್.ವಿ. ಯವರು. ಅವರ ಆಶಯಗಳನ್ನೆ ಮುಖ್ಯ ಭೂಮಿಕೆಯಾಗಿಟ್ಟುಕೊಂಡು ಪ್ರತಿವರ್ಷವೂ ಸಾಹಿತ್ಯೋತ್ಸವವನ್ನು ಸಂಘಟಿಸಲಾಗುತ್ತದೆ. ಚಿಂತನದ ಜೊತೆ ಸೇರಿ ಮಕ್ಕಳ ಶಿಬಿರ ನಡೆಸಲಾಗುತ್ತಿದೆ. ಒಬ್ಬ ಕಲಾವಿದರಿಗೆ ಸಹಯಾನ ಸಮ್ಮಾನವನ್ನು ಪ್ರತಿ ವರ್ಷ ಕೊಡಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಸಂವಿಧಾನ ಓದು ಆಭಿಯಾನವನ್ನು ಸಮುದಾಯದ ಜೊತೆ ಸೇರಿ ನಡೆಸುತ್ತಿದೆ....ಹೀಗೆ ಅಣ್ಣ ಮತ್ತೆ ಮತ್ತೆ ಸಹಯಾನದ ಅಂಗಳಕ್ಕೆ ಬಂದು ಹೋಗುತ್ತಿದ್ದಾನೆ. ಸದಾ ಅವನು ಅಲ್ಲೇ ಇರುವಂತೆ ಮಾಡುವ ಸವಾಲು ನಮ್ಮೆದುರಿದೆ.