Wednesday, 18 September 2019

ಸಂವಿಧಾನದ ಮುಂದಿರುವ ಸವಾಲುಗಳು-ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್



ಸಂವಿಧಾನ ಭಾರತೀಯರ ಮಹಾಗ್ರಂಥ. ವಿವಿಧ ಧರ್ಮಗಳ, ಜಾತಿಯ, ಸಂಸ್ಕøತಿಯ, ಭಾಷೆಯ, ನಂಬಿಕೆಗಳ, ಅಭಿಪ್ರಾಯಗಳ, ಆಚಾರ, ವಿಚಾರಗಳ, ಆಹಾರ ಪದ್ಧತಿಗಳ, ಉಡುಪುಗಳ ಜನರನ್ನು ಒಟ್ಟಿಗೆ ಮುನ್ನಡೆಸುತ್ತಿರುವುದು ಭಾರತದ ಸಂವಿಧಾನ. ಪ್ರಜಾಪ್ರಭುತ್ವ, ಜಾತ್ಯತೀತÀತೆ, ಸಾಮಾಜಿಕ ನ್ಯಾಯವೆಂಬ ಸಿದ್ಧಾಂತಗಳನ್ನು ಬಿತ್ತಿ, ಬೆಳೆಸುತ್ತಿರುವುದು ಭಾರತದ ಸಂವಿಧಾನ. ನಾವೆಲ್ಲರೂ ಅನುಭವಿಸುತ್ತಿರುವ ಮಾನವ ಹಕ್ಕುಗಳು, ಮೂಲಭೂತ ಹಕ್ಕುಗಳು ಮತ್ತು ಎದುರಿಸುವ ಸಮಸ್ಯೆಗಳಿಗೆ ಹಲವು ಸಾಂವಿಧಾನಿಕ ಪರಿಹಾರಗಳನ್ನು ನೀಡಿರುವುದು ಭಾರತದ ಸಂವಿಧಾನ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವೆಂಬ ಸ್ವತಂತ್ರ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳಲ್ಲಿ ಈ ದೇಶದ ಜನರು ಭಾಗವಹಿಸುವಂತೆ ಮಾಡಿರುವುದು ಭಾರತದ ಸಂವಿಧಾನ. ಜನ ಸಾಮಾನ್ಯರ ಕನಿಷ್ಠ ಅವಶ್ಯಕತೆಗಳನ್ನು ಸ್ವಲ್ಪ ಮಟ್ಟಿಗಾದರೂ ಪೂರೈಸಿರುವುದು ಭಾರತ ಸಂವಿಧಾನದ ಆಶಯವಾದ ಕಲ್ಯಾಣ ರಾಜ್ಯದ ಮೌಲ್ಯ. ಧರ್ಮ, ಜನಾಂಗೀಯ, ಜಾತಿ, ಲಿಂಗ, ಭಾಷೆ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸಿ ಎಲ್ಲರಿಗೂ ಸಮಾನ ರಕ್ಷಣೆ ಮತ್ತು ಅವಕಾಶಗಳನ್ನು ನೀಡಿರುವುದು ಭಾರತದ ಸಂವಿಧಾನ. ಆದ್ದರಿಂದ, ನಾವು ಸುರಕ್ಷಿತವಾಗಿ ಬದುಕಲು, ನಮಗೋಸ್ಕರ, ನಮ್ಮ ಮುಂದಿನ ಪೀಳಿಗೆಗಾಗಿ ನಮ್ಮ ಸಂವಿಧಾನವನ್ನು, ಅದರ ಆಶಯಗಳನ್ನು ರಕ್ಷಿಸಬೇಕು. 


ನಮ್ಮ ಸಂವಿಧಾನವನ್ನು ನಾವು ಕಳೆದುಕೊಂಡರೆ ಅಂರ್ತಯುದ್ಧ ನಡೆದು ಭಾರತ ದೇಶ ಛಿದ್ರ ಛಿದ್ರವಾಗಿ ಹೋಳಾಗುತ್ತದೆ. ಪ್ರಜಾಪ್ರಭುತ್ವ, ಜಾತ್ಯತೀತÀತೆ, ಸಾಮಾಜಿಕ ನ್ಯಾಯವೆಂಬ ಸಿದ್ಧಾಂತಗಳು ನಾಶವಾಗಿ ಅರಾಜಕತೆ, ಮತೀಯವಾದ, ಕೋಮುವಾದ, ಮೂಲಭೂತವಾದವೆಂಬ ಅಮಾನವೀಯ ಸಿದ್ಧಾಂತಗಳು ರಾರಾಜಿಸುತ್ತವೆ. ಜನಸಾಮಾನ್ಯರು ಗಳಿಸಿದ ಹಕ್ಕುಗಳನ್ನು ಕಳೆದುಕೊಂಡು ಬಾಯಿಗೆ ಬೀಗ ಹಾಕಿಕೊಂಡು ಗುಲಾಮರಂತೆ ಜೀವಿಸಬೇಕಾಗುತ್ತದೆ. ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಮತ್ತು ಬಡವರು ಶೋಷಣೆ, ದಬ್ಬಾಳಿಕೆ, ಕ್ರೌರ್ಯ, ಹಿಂಸೆ, ಅಭದ್ರತೆಗಳಿಗೆ ಬಲಿಯಾಗಬೇಕಾಗುತ್ತದೆ. ರೂಲ್ ಆಫ್ ಲಾ ಹೋಗಿ ಜಂಗಲ್ ಲಾ ವ್ಯವಸ್ಥೆ ಬರುತ್ತದೆ. ಆದ್ದರಿಂದ, ನಮ್ಮ ಸಂವಿಧಾನವನ್ನು ನಾವು ಉಳಿಸಿಕೊಳ್ಳಬೇಕಾಗಿದೆ.

ಹಾಗಾದರೆ ಇಂತಹ ಗಂಭೀರ ಪರಿಸ್ಥಿತಿಯಲ್ಲಿ ನಮ್ಮ ಕರ್ತವ್ಯವೇನು? 
ಮೊತ್ತ ಮೊದಲಿಗೆ ನಾವೆಲ್ಲರೂ ನಮ್ಮ ಸಂವಿಧಾನವನ್ನು ಓದಬೇಕು, ಅರ್ಥೈಸಬೇಕು. ಸಂವಿಧಾನದ ಮೂಲತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಅದರಂತೆ ನಡೆದುಕೊಳ್ಳಬೇಕು. ಸಂವಿಧಾನದ ಆಶಯಗಳನ್ನು ಬದುಕಿನ ವಿಧಾನವಾಗಿಸಿಕೊಳ್ಳಬೇಕು. ನಮ್ಮ ಕುಟುಂಬದ ಸದಸ್ಯರಿಗೆ ಸಂವಿಧಾನದ ಮಹತ್ವವನ್ನು ಮನವರಿಕೆ ಮಾಡಿಕೊಡಬೇಕು. ನಮ್ಮ ಸುತ್ತಮುತ್ತಲಿನ ಬಂಧು, ಬಳಗ, ಗೆಳೆಯರಲ್ಲಿ, ವಿದ್ಯಾರ್ಥಿ ಯುವಜನರ ಮಧ್ಯೆ ನಮ್ಮ ಸಂವಿಧಾನದ ತಿಳುವಳಿಕೆಯನ್ನು ಹಂಚಿಕೊಳ್ಳಬೇಕು. ಸಂವಿಧಾನದ ಪ್ರತಿಯೊಂದು ಆಶಯವನ್ನು ಅನುಷ್ಠಾನಗೊಳಿಸಲಿಕ್ಕೆ ಪ್ರಯತ್ನಿಸಬೇಕು. ಸಂವಿಧಾನ ಎದುರಿಸುತ್ತಿರುವ ಸವಾಲುಗಳನ್ನು ಹಿಮ್ಮೆಟ್ಟಿಸಬೇಕು. 
ನಮ್ಮ ಸಂವಿಧಾನದ ಉಳಿವಿಗಾಗಿ, ದೇಶದ ಸಮಗ್ರತೆಗಾಗಿ ಮತ್ತು ಜನತೆಯ ಕಲ್ಯಾಣಕ್ಕಾಗಿ ನಾವೆಲ್ಲರೂ ಎಲ್ಲ ರೀತಿಯ ತ್ಯಾಗಕ್ಕೆ ಸಿದ್ಧರಾಗೋಣ. 
                          

ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ 
                                                                                                             ಆಗಸ್ಟ್ 2018

No comments:

Post a Comment