Wednesday, 18 September 2019

ಸ್ವಂತಿಕೆಯ ಛಾಪನ್ನು ಪಡೆದುಕೊಂಡಿರುವ ಸಂವೇದನೆ- ‘ಮೌನಗರ್ಭದ ಒಡಲು’

ಸ್ವಂತಿಕೆಯ ಛಾಪನ್ನು ಪಡೆದುಕೊಂಡಿರುವ 
ಸಂವೇದನೆ- ‘ಮೌನಗರ್ಭದ ಒಡಲು’
                                                            -ಡಾ. ಬಂಜಗೆರೆ ಜಯಪ್ರಕಾಶ
                                                                              (ಕೃತಿಗೆ ಬರೆದ ಮುನ್ನುಡಿಯಿಂದ)
`ಮಾತಿಗೆ ಒಂದೇ ಭಾವ
ಮೌನಕ್ಕೆ ನೂರು ನೂರು ನೂರು ಭಾವ (ಮೌನಗರ್ಭದ ಒಡಲು)
ಮೌನಕ್ಕೆ ನೂರು ನೂರಾರು ಭಾವ ಎಂದು ಮಾಧವಿ ಬರೆದಿರುವುದು ಕೇವಲ ಕಾವ್ಯಾಲಂಕಾರವಲ್ಲ ಎನಿಸುತ್ತದೆ ನನಗೆ. ಮಾತಿಗೆ ಒಂದರ್ಥ. ಹೆಚ್ಚೆಂದರೆ ಎರಡು ಅಥವಾ ಮೂರು ಧ್ವನ್ಯಾರ್ಥಗಳಿರಬಹುದು. ಆದರೆ ಮೌನದ ಅರ್ಥ ಸಾಧ್ಯತೆ ಅಸೀಮವಾದುದು. ಒಂದು ಮೌನ ನುಡಿಯುವ ಭಾμÉ ಅಪಾರವಾದದ್ದು. ಝೆನ್ ಪಂಥದಲ್ಲೂ ಮೌನಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ. ಅದು ವಿವರಿಸಲಾಗದ ಸಂದಿಗ್ಧ. ವಿವರಿಸಿದರೂ ಅರ್ಥಮಾಡಿಸಲಾಗದ ಸಂಕಷ್ಟ. ಅಥವಾ ವಿವರಿಸಲು ಏನಿದೆ? ಅನುಭವವನ್ನು ಹಾಗೆ ಮಾತಿನ ನಾವೆ ಹತ್ತಿಸಿ ದಡ ಸೇರಿಸುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಝೆನ್ ಪಂಥದ ನಿಲುವು. ಅನುಭವದ ಆಳ, ಹರಿವು ಹೆಚ್ಚಿದಷ್ಟೂ ಅದಕ್ಕೆ ಮಾತಿನ ರೂಪಕೊಡುವುದು ಹೆಚ್ಚು ಕಷ್ಟ.

 ತೆಳು ಅನುಭವಗಳು ಮಾತುಗಳಾಗಿ ಪಟಪಟನೆ ಹೊಮ್ಮಬಹುದಾದರೂ ಅನುಭವದಾಳದಲ್ಲಿ ಮುಳುಗಿದ ಅರ್ಥ ಅಷ್ಟು ಸುಲಭವಾಗಿ ಚಿಮ್ಮಲಾರದು. ಝೆನ್ ಮಾತುಗಳಿಗೆ ಅರ್ಥ ಸಾಧ್ಯತೆಯ ಮಿತಿಯೇ ಒಂದು ತೊಡಕು. ಹೇಳಿದರೂ ಹೇಳಬೇಕಾದುದನ್ನು ಹೇಳಿದಂತಾಗುವುದಿಲ್ಲ. ಹೇಳಬೇಕಾದುದನ್ನು ಹೇಳದಿದ್ದ ಮೇಲೆ ಮಾತಿಗಿಂತ ಮೌನವೇ ಪ್ರಶಸ್ತವಲ್ಲವೇ. ಮೌನವನ್ನು ಪರಿಭಾವಿಸುವವರು ಅವರ ಸಾಧ್ಯತೆಗೆ ತಕ್ಕಂತೆ ಭಾವಿಸಬಹುದು. ಅರ್ಥೈಸಬಹುದು. ಅಥವಾ ಅರ್ಥ ಮಾಡಿಕೊಳ್ಳದೆಯೂ ಉಳಿಯಬಹುದು. ಮಾತುಗಳಾಡಿದ ಮಾತ್ರಕ್ಕೆ ಅದನ್ನು ಎದುರಿನವರು ಕೇಳಿಸಿಕೊಳ್ಳುತ್ತಾರೆಂಬ ಖಾತ್ರಿ ಇಲ್ಲ. ಕೇಳಿಸಿಕೊಂಡರೂ ಅರ್ಥ ಮಾಡಿಕೊಳ್ಳುತ್ತಾರೆಂಬ, ಅರ್ಥ ಮಾಡಿಕೊಂಡರೂ ಸ್ಪಂದಿಸುತ್ತಾರೆಂಬ ಭರವಸೆ ಇಲ್ಲ. ಹಾಗಾಗಿ ಮೌನವೆನ್ನುವುದು ಒಂದು ಅನಿವಾರ್ಯ ಆಶ್ರಯ.
ಆದರೆ ಮೌನ ಸುಮ್ಮನುಳಿಯುವುದಿಲ್ಲ. ಮಾತಾಗದಿದ್ದರೂ ಅದು ಮನಸ್ಸಾಗಿ ನುಡಿಯುತ್ತದೆ. ಕಲೆಯಾಗಿ, ಕಸೂತಿಯಾಗಿ, ಹಾಡಾಗಿ, ನರ್ತನವಾಗಿ, ಹಸೆಯಾಗಿ, ರಂಗವಲ್ಲಿಯಾಗಿ, ಜೋಗುಳವಾಗಿ, ಕಣ್ಣೋಟವಾಗಿ ನುಡಿಯುತ್ತದೆ. ಆದರೆ ಮೌನವಾಗಿರುವುದು ಝೆನ್‍ಗೆ ಒಂದು ಆಯ್ಕೆ. ಒಂದು ಅಧಿಕಾರ. ಇದಿರಿನ ಅಂಕುಶವಿಲ್ಲದ ಸ್ವಾಯತ್ತತೆ. ಅದನ್ನು ನುಡಿಯಲೇಬೇಕೆಂದು ನಿರ್ಬಂಧಿಸುವುದು ಸಾಧ್ಯವಿರದ ಮಾತು. ತಲೆದಂಡವಾದರೂ ನುಡಿಯದೇ ಉಳಿದ ನಿದರ್ಶನಗಳೆಷ್ಟೋ ಆ ಪಂಥದಲ್ಲಿವೆ. ಅದು ಸತ್ಯದ ಸಾಕ್ಷಾತ್ಕಾರದ ದಾರಿ. ಸ್ವಯಂ ಬೋಧೆಯಾಗದ ಹೊರತು, ಸ್ವಯಂ ಜ್ಞಾನೋದಯವಾಗದ ಹೊರತು ನುಡಿಯಿಂದ ಉಪಯೋಗವೇನು ಎಂಬ ಅಚಲ ನಿಲುವು ಅದರದ್ದು. ಆದರೆ ಹೆಣ್ಣು ಲೋಕದ ಮೌನ ಆಯ್ಕೆಯಿಂದ ಬಂದದ್ದಲ್ಲ, ಅನಿವಾರ್ಯತೆಯಿಂದ ಉಂಟಾದದ್ದು. ನುಡಿಯಲು ನೂರು ಮಾತಿವೆ, ಆದರೆ ಅದಕ್ಕೆ ಆಸ್ಪದವಿಲ್ಲ. ಈ ನಡುವೆ ಏನಾದರೂ ನುಡಿದರೂ ನಿಜವಾದುದನ್ನು ನುಡಿಯುವಂತಿಲ್ಲ. ನುಡಿದರೆ ದಂಡನೆ ತಪ್ಪದು. ಹೆಚ್ಚು ನುಡಿದರೂ ಮರ್ಯಾದೆಯ ಮೇರೆಯನ್ನು ಮೀರಿದಂತೆ ಎನ್ನುವಂತಹ ಬಂಧನದ ಹೇರಿಕೆ. ಹಾಗಾಗಿ ಹೆಣ್ಣು ಲೋಕಕ್ಕೆ ನೂರು ಅನುಭವಗಳಿವೆ, ಅನಿಸಿಕೆಗಳಿವೆ, ಆಲೋಚನೆಗಳಿವೆ, ಅಭಿಪ್ರಾಯಗಳೂ ಇವೆ. ಅವು ಲೋಕಕ್ಕೆ ಬೇಕಿಲ್ಲ. ಲೋಕ ಅವುಗಳನ್ನು ಮಾನ್ಯ ಮಾಡುವುದೂ ಇಲ್ಲ. ಹಾಗಾಗಿ ನುಡಿಯದೇ ಉಳಿಯಬೇಕಾದ ಒತ್ತಡ ಹೆಣ್ಣೊಳಗೆ ಕಲೆಯಾಗಿ, ದುಡಿಮೆಯಾಗಿ, ಪ್ರೀತಿಯ ಹೊನಲಾಗಿ, ಬದುಕಿನ ಪ್ರೀತಿಯಾಗಿ, ಮಾನವೀಯ ಸ್ಪಂದನವಾಗಿ ಹೇಗೋ ತನ್ನನ್ನು ತಾನು ಕಂಡರಿಸಿ ಕೊಳ್ಳುತ್ತದೆ. ಅದು ಒಂದು ಅಸಾಧ್ಯ ಸಾಧ್ಯತೆಯ ಹಾದಿ. ಅದು ಪಿಸುಮಾತಾಗಿ, ನಗೆಯಾಗಿ, ಬಿಂಕವಾಗಿ, ಬೆಡಗಾಗಿ ಹೊಮ್ಮಬಹುದು. ಪ್ರತಿಭಟನೆಯಾಗಿ, ನಿರಸನವಾಗಿ, ಧಿಕ್ಕಾರವಾಗಿ ಕೂಡ ಪರ್ಯವಸಾನವಾಗಬಹುದು.
ಆದರೆ ಮೌನವೆಂದರೆ ಶೂನ್ಯವಲ್ಲ. ಮೌನವೆಂದರೆ ಅರ್ಥರಾಹಿತ್ಯತೆಯಲ್ಲ. ಮೌನವೆಂದರೆ ಜೀವಚ್ಛವದ ಪಾಡಲ್ಲ. ಇದನ್ನು ಹಲವು ಬಗೆಯಾಗಿ, ಹಲವು ರೂಪಕಗಳಲ್ಲಿ ಖಚಿತ ನಿಲುವಿನೊಂದಿಗೆ, ದೃಷ್ಟಿಕೋನದೊಂದಿಗೆ, ಅಸ್ಮಿತೆ ಪ್ರತಿಪಾದನೆಯ ಧೋರಣೆಯೊಂದಿಗೆ ಮಾಧವಿಯವರು ಈ ಸಂಕಲನದಲ್ಲಿ ಅಭಿವ್ಯಕ್ತಿಸಿದ್ದಾರೆ. ಬಂಡಾಯ ಕಾವ್ಯದ ಆರಂಭದ ದಿನಗಳಲ್ಲಿ ವೈಚಾರಿಕವಾದ ಆದರ್ಶವಾದದ ಪ್ರತಿಪಾದನೆ ಕವಿತೆಗಳಲ್ಲಿ ಅಭಿವ್ಯಕ್ತಗೊಂಡಿತು. ಅದರೊಳಗಿದ್ದ ಧಿಕ್ಕಾರದ ಮನಃಸ್ಥಿತಿ ಬಹಳಮಟ್ಟಿಗೆ ವಾಚ್ಯವಾಗಿತ್ತು. ಆದರೆ ಅದಕ್ಕೆ ಸಾಂದರ್ಭಿಕ ಅನಿವಾರ್ಯತೆ ಇತ್ತು. ಹಾಗೆಯೇ ಬಂಡಾಯ ಸಾಹಿತ್ಯದ ಜೊತೆಯಲ್ಲಿ ಆರಂಭಗೊಂಡ ಮಹಿಳಾವಾದಿ ಕಾವ್ಯದ ಧಾಟಿಯೂ ಹೆಣ್ತನದ ಪ್ರತಿಪಾದನೆಯನ್ನು ನಿಚ್ಚಳವಾಗಿ, ದಿಟ್ಟವಾಗಿ ಸಾಕಷ್ಟು ವಾಚ್ಯವಾಗಿ  ಅಭಿವ್ಯಕ್ತಿಸಿತು. ಈಗ ಆ ರಭಸ ಇಲ್ಲ. ಧೋರಣೆಗಳು, ಆಶಯಗಳು, ಅನುಭವದ ಪರಿಧಿಯಲ್ಲಿ ಮಾಗಿ, ಕಾವ್ಯಾರ್ಥದ ಸಾಧ್ಯತೆಗಳನ್ನು ಒಳಗೊಳ್ಳುತ್ತಾ, ತಮ್ಮ ಅಭಿವ್ಯಕ್ತಿ ಸಾಧ್ಯತೆಯ ವಿಸ್ತಾರಗಳನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿವೆ. ಅದರಲ್ಲೂ ಈ ತಲೆಮಾರಿನ ಲೇಖಕ-ಲೇಖಕಿಯರು ತಮ್ಮ ಅನುಭವ ಮಂಡನೆಗೆ ಬಳಸುತ್ತಿರುವ ಭಾμÉ ಹಾಗೂ ರೂಪಕಗಳು, ಕಾವ್ಯಾಲಂಕಾರಗಳು ಹೆಚ್ಚು ಧ್ವನಿ ಸಾಧ್ಯತೆಯನ್ನು ಒಳಗೊಳ್ಳತೊಡಗಿವೆ. ಕಾವ್ಯವನ್ನು ತಮ್ಮ ಅಭಿವ್ಯಕ್ತಿ ಸಾಧ್ಯತೆಯ ಸಾಧನವನ್ನಾಗಿ ಬಳಸಿಕೊಳ್ಳುವುದರಲ್ಲಿ ಪಾರಂಪರಿಕ ಸಾಂಸ್ಕೃತಿಕ ಪರಿಕರಗಳನ್ನು ಬಳಸಿಕೊಳ್ಳುತ್ತಲೇ ಹೊಸ ಆಶಯಗಳ ಹಂಬಲವನ್ನು ಅನಾವರಣಗೊಳಿಸುವ ಸಾಮಥ್ರ್ಯವನ್ನು ಇವು ಪಡೆದುಕೊಳ್ಳತೊಡಗಿವೆ.
     ಹಾಗಾಗಿಯೇ ಇಂದು ಹೊಸ ತಲೆಮಾರಿನ ಕಾವ್ಯ ನೇರವಾಗಿ ತನ್ನನ್ನು ಬಂಡಾಯ ಕಾವ್ಯ, ಮಹಿಳಾ ಕಾವ್ಯ ಎಂದು ಕರೆದುಕೊಳ್ಳಬೇಕಾದ ಅಗತ್ಯತೆ ಇಲ್ಲದೆಯೇ ಬದಲಾವಣೆಯ ಆಶಯಗಳನ್ನು ಮಂಡಿಸುವಲ್ಲಿ ಸಶಕ್ತಗೊಂಡಿದೆ. ಹೆಣ್ತನದ ಪರಿಸ್ಥಿತಿಯನ್ನು ಸಾಂಕೇತಿಕಗೊಳಿಸಿ ಪ್ರಾದೇಶಿಕ ಅನುಭವ ಸೀಮೆಯನ್ನು ಬಳಸಿಕೊಂಡು ಅರ್ಥಸಾಧ್ಯತೆ ಪಡೆದುಕೊಂಡಿರುವ ಮಾಧವಿಯವರ ಪತ್ರೊಡೆ ಕವಿತೆ ಇಂತಹವುಗಳಲ್ಲೊಂದು. ಮೊಲೆಯೆರಡೆ ಸಾಕು, ಕನ್ಯತ್ವದ ಋಜುವಾತು, ನಡುವೆ ಸುಳಿವಾತ್ಮ, ಏಳು ಬಣ್ಣ ಸೇರಿ, ಅವತಾರ ಮುಂತಾದವುಗಳೆಲ್ಲ ಈ ಬಗೆಯ ಕವಿತೆಗಳಾಗಿವೆ. ಹೆಣ್ಣಿನ ಅಸ್ತಿತ್ವದ ಪರಿಯನ್ನು, ಸಾರ್ಥಕತೆಯನ್ನು, ಸಂಕಷ್ಟವನ್ನು, ಸಂತಸವನ್ನು, ವೈಶಿಷ್ಟ್ಯವನ್ನು ಹಲವು ಬಗೆಯಾಗಿ ಧ್ವನಿಸುವ ಈ ಕವಿತೆಗಳು ಮಾಧವಿಯವರ ಕಾವ್ಯಶಕ್ತಿಗೆ ನಿದರ್ಶನಗಳೆಂದು ನಾನು ಭಾವಿಸುತ್ತೇನೆ. ಎಲ್ಲಿಯೂ ವಾಚ್ಯವಾಗದೆ, ವಿವರಣೆಯಾಗದೆ, ಕ್ಲೀμÉ ಎನಿಸದೆ ಹೀಗೆ ಹೇಳಬಲ್ಲ ಸಾಮಥ್ರ್ಯ ಕೇವಲ ಓದಿನಿಂದ ಬಂದದ್ದಲ್ಲ. ಬದುಕಿನ ಅನುಭವದ ಮೂಸೆಯಲ್ಲಿ ಮಾಗಿದ ಮನಸ್ಸಿನ ಹಬೆಯಲ್ಲಿ ಮೂಡಿನಿಂತ ಅಕ್ಷರಾಕೃತಿಗಳು ಇವು.

 ದನಿಯೇನೋ ಮೆಲುವಾದುದು ಆದರೆ ನಿಲುವು ಗಟ್ಟಿಯಾದುದು. ವರ್ಣನೆಯೇನೋ ನಿರಲಂಕಾರ ಆದರೆ ಅದರ ಅರ್ಥಸಾಧ್ಯತೆ ಹಲವು ಆಕಾರ. ಹೀಗೆ ತಣ್ಣಗೆ ಆದರೆ ಮನಸ್ಸಿಗೆ ನಾಟುವಂತೆ ಹೇಳುವ ಪರಿಪಾಕ ಮಾಧವಿಯವರಿಗೆ ದಕ್ಕಿದೆ. ಅದನ್ನು ಅಷ್ಟು ಜತನವಾಗಿ ಅವರು ಮೈಗೂಡಿಸಿಕೊಂಡಿದ್ದಾರೆ. ದಲಿತ ಕಾವ್ಯ, ಬಂಡಾಯ ಕಾವ್ಯ, ಹೆಣ್ಣು ಕಾವ್ಯ ಮುಂತಾಗಿ ಮೂಗು ಮುರಿಯುವ ಕಾಲ ಇದಲ್ಲ ಎಂದು ಹೇಳುವುದಕ್ಕೆ ಮಾಧವಿಯೂ ಸೇರಿದಂತೆ ನಮ್ಮ ತಲೆಮಾರಿನ ಹಲವು ಕವಿ- ಕವಯಿತ್ರಿಯರು ಸವಾಲಿನಂತೆ ನಿಂತಿದ್ದಾರೆ. ರಿಯಾಯಿತಿಗಳಿಂದ ಪರಿಗಣಿಸಬೇಕಾದ, ಉದಾರ ಮನಸ್ಸಿನ ಲೆಕ್ಕಾಚಾರದಿಂದ ಗುರುತಿಸಬೇಕಾದ ಧ್ವನಿಗಳಲ್ಲ ಇವು. ಇವಕ್ಕೆ ಸಿದ್ಧಾಂತ, ಪಂಥ, ಲಿಂಗ, ಪಕ್ಷ, ಪ್ರದೇಶ, ಜಾತಿ ಮತ್ತು ಮತ ಇವುಗಳ ರಕ್ಷಣೆ ಇಲ್ಲದೆಯೂ ಕನ್ನಡ ಕಾವ್ಯಕ್ಕೆ ಮೆರುಗು ನೀಡಬಲ್ಲ ಅಭಿವ್ಯಕ್ತಿ ಪರಂಪರೆಯಾಗಿ ಇದು ಬೆಳೆದಿದೆ. ಹಾಗೆ ಬೆಳೆದು ಬಂದಿರುವುದಕ್ಕೆ ಒಂದು ನಿದರ್ಶನ ಮಾಧವಿಯವರ ಮೌನಗರ್ಭದ ಒಡಲು ಸಂಕಲನ. 
ಭತ್ತದೊಳಗಿದೆ ಬ್ರಹ್ಮಾಂಡ, ಹೊದ್ಲು ಅರಳುವ ಪರಿ, ಪರದೆಯ ಪಂಜರ, ನೋಯದವರಿಗೇನು ಗೊತ್ತು, ತಾಯ ಮೊಲೆ ಹಾಲು ವಿಷವಲ್ಲ, ಗಂಡಿಗೆ ಹೆಣ್ಣು ಮಾಯೆ, ಗುನ್ಹೇಗಾರ, ಕಣ್ಣಿಗಿಲ್ಲ ಆಯುಷ್ಯದ ಹಂಗು, ಮುಖವಿಲ್ಲದ ಚಹರೆಗಳು, 
ಮತಾಂತರಿಯ ಅಹವಾಲು ಮುಂತಾದವುಗಳು ಸಾಮಾಜಿಕ ಆಯಾಮವುಳ್ಳ, ತಮ್ಮನ್ನು ತಾವು ಸಮಕಾಲೀನಗೊಳಿಸಿಕೊಂಡು ಪ್ರಸ್ತುತಗೊಳ್ಳುವ ಕವಿತೆಗಳು. ಇವುಗಳಲ್ಲಿ ಈ ಮೊದಲಿನ ವಿಭಾಗದ ಕವಿತೆಗಳಿಗಿರುವ ಅರ್ಥಸಾಧ್ಯತೆಗಳೇ ಇದ್ದರೂ ಇವು ಆಶಯಾತ್ಮಕ ಕವಿತೆಗಳಾಗಿಯೇ ಹೆಚ್ಚು ಗೆದ್ದಿವೆ. ಇವುಗಳಿಗೆ ಖಾಸಗೀತನಕ್ಕಿಂತಲೂ ಹೊರಜಗತ್ತಿನ ಆವರಣದ ಲೇಪ ಕೊಂಚ ಹೆಚ್ಚಾಗಿದೆ. ಅಂದ ಮಾತ್ರಕ್ಕೆ ಇವು ಸೋತಿರುವ ಕವಿತೆಗಳಲ್ಲ. ಆದರೆ ಇದೊಂದು ರೂಢಿಗತವಾದ ಹಾದಿ. ಆದರೂ ಮಾಧವಿಯವರ ವೈಯಕ್ತಿಕ ಪ್ರತಿಭೆಯ ಛಾಪು ಇಲ್ಲಿ ಮಸುಕಾಗಿಲ್ಲ ಎನ್ನುವುದೂ ಮುಖ್ಯ.
ಪ್ರೇಮ ಹಾಗೂ ವಿರಹದ ಕೆಲವು ಕವಿತೆಗಳು ಈ ಸಂಕಲನದಲ್ಲಿವೆ. ಪ್ರತಿಯೊಬ್ಬರ ಭಾವದಲ್ಲೂ ಬಂದು ಹೋಗುವ ಬದುಕಿನ ಈ ನಿಜಗಳು ಮಾಧವಿಯವರಲ್ಲಿ ಕೂಡ ಕವಿತೆಗಳಾಗಿವೆ. ಇವುಗಳನ್ನು ವಿಶಿಷ್ಟವೆನ್ನಲಾಗದಿದ್ದರೂ ಬದುಕಿನ ಸಹಜ ಯಾನದ ಪ್ರತಿಸ್ಪಂದನಗಳಾಗಿ, ಸ್ವಂತ ವ್ಯಕ್ತಿತ್ವದ ಅನಾವರಣಗಳಾಗಿ ಓದಲು ಅರ್ಥಪೂರ್ಣವಾಗಿವೆ.
ಒಟ್ಟಾರೆ ಮೌನಗರ್ಭದ ಒಡಲು ನನ್ನ ಓದಿನಲ್ಲಿ ಒಂದು ಉತ್ತಮ ಕಾವ್ಯಕೃತಿಯಾಗಿ, ಅರ್ಥವಂತಿಕೆಯ ಸಾಧ್ಯತೆಯನ್ನು ಅರಹುವ ಅಭಿವ್ಯಕ್ತಿಯಾಗಿ, ತನ್ನ ಸ್ವಂತಿಕೆಯ ಛಾಪನ್ನು ಪಡೆದುಕೊಂಡಿರುವ ಸಂವೇದನೆಯಾಗಿ ಕಂಡಿದೆ. ಮಾಧವಿ ಭಂಡಾರಿಯವರು ಈ ಸಂಕಲನದಲ್ಲಿ ಬರೆದಿರುವ `ಅಮ್ಮ' ಮತ್ತು `ಅಪ್ಪ' ಎಂಬ ಎರಡು ಕವಿತೆಗಳು ನನ್ನ
ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿವೆ. ಒಬ್ಬ ಮಗಳಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ, ಸಾಹಿತಿಯಾಗಿ ಹಾಗೂ ಮಮಕಾರಗಳುಳ್ಳ ಹೆಣ್ಣಾಗಿ ತಾಯಿತಂದೆಯನ್ನು ಕಂಡರಿಸುವ ಈ ವಿಧಾನ ನನಗೆ ತುಂಬಾ ಆಪ್ತವೆನಿಸಿವೆ. ಇದಕ್ಕೆ ಕಾರಣಗಳು ಏನೇ ಇರಬಹುದಾದರೂ ಆ ಎರಡು ಕವಿತೆಗಳು ಒಂದು ರೀತಿಯಲ್ಲಿ ಕಣ್ತೆರೆಯಿಕೆಯ ದರ್ಶನಗಳಂತಿವೆ. ಆಪ್ತ ಸಂವಾದಗಳೂ ಆಗಿವೆ.
ಮಾಧವಿಯವರು ನಾನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ನಮ್ಮ ಸಮಿತಿಯ ಸದಸ್ಯೆಯಾಗಿ ಹಲವು ಹೊಸತನದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಪ್ರಾಧಿಕಾರಕ್ಕೂ, ನಮ್ಮ ತಂಡಕ್ಕೂ ಹೆಸರು ತಂದವರು. ಬಿಡುವಿರದ ಕೆಲಸ, ಕೈಕೊಡುವ ಆರೋಗ್ಯ, ಸಾಕಷ್ಟು ಪ್ರತಿಕೂಲ ಸನ್ನಿವೇಶಗಳ ನಡುವೆಯೇ ಅತ್ಯಂತ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ನಡೆಸಿದವರು, ನಡೆಸಲು ಹೆಗಲು ಕೊಟ್ಟವರು. ಆತ್ಮೀಯ ನಡವಳಿಕೆ, ಸ್ನೇಹಪೂರ್ವಕ ಸಾಹಚರ್ಯ ಹಾಗೂ ದಿಟ್ಟ ಗಂಭೀರ ನಿಲುವುಗಳಿಂದ ನನ್ನ ಮೆಚ್ಚುಗೆಗೆ ಪಾತ್ರರಾದ ಒಡನಾಡಿ ಅವರು. ನಮ್ಮ ಪುಸ್ತಕ ಪ್ರಾಧಿಕಾರದ ಇಡೀ ಸಮಿತಿ ಒಮ್ಮೆ ಕಾರವಾರಕ್ಕೆ, ಮತ್ತೊಮ್ಮೆ ಶ್ರೀಶೈಲಕ್ಕೆ ಯಾತ್ರೆ ಮಾಡಬೇಕೆಂದಿದ್ದೆವು. ಆ ಯಾತ್ರೆಯ ಹರಕೆ ಅದೇಕೋ ಫಲಿಸದೆ ಕನಸಾಗಿಯೇ ಉಳಿಯಿತು. ನಾವಿನ್ನೂ ಉಳಿದಿದ್ದೇವಲ್ಲ, ಈ ಹರಕೆಗಳು ಎಂದಾದರೂ ಫಲಿಸದಿರುತ್ತವೆಯೇ.

`ಮೌನಗರ್ಭದ ಒಡಲು' ಕೃತಿಗೆ ನನ್ನ ಪ್ರತಿಕ್ರಿಯೆಯ ಮಾತುಗಳನ್ನು ಆಶಿಸಿದ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.

No comments:

Post a Comment