'ಸಂವಿಧಾನ ಓದು' ಪುಸ್ತಕಕ್ಕೆ ಬರೆದ ಲೇಖಕರ ಮಾತು
ನಮ್ಮ ಸಂವಿಧಾನ ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ. ಅನುಷ್ಠಾನಕ್ಕೆ ಬಂದು 68 ವರ್ಷಗಳು ಕಳೆದರೂ ನಮ್ಮ ಸಂವಿಧಾನ ಪ್ರಸ್ತುತವಾಗಿದೆ. ಆದರೂ, ನಮ್ಮ ದೇಶದ ಬಹುಪಾಲು ಜನ ಸಂವಿಧಾನವನ್ನು ಓದಲಿಲ್ಲ. ಸರ್ಕಾರಗಳು ಸಹ ದೇಶದ ಜನರಿಗೆ ಸಂವಿಧಾನವನ್ನು, ಸಂವಿಧಾನದ ಮೂಲ ಆಶಯಗಳನ್ನು ತಿಳಿಯಪಡಿಸುವ ಕ್ರಮವಹಿಸಲಿಲ್ಲ. ಇತ್ತೀಚೆಗೆ ನಮ್ಮ ಶಿಕ್ಷಣದಲ್ಲಿ ಸಂವಿಧಾನವನ್ನು ತಿಳಿಯಪಡಿಸುವ ಸಣ್ಣ ಪ್ರಯತ್ನ ಪ್ರಾರಂಭವಾಗಿರುವುದು ಸಂತೋಷದ ಸಂಗತಿ.ದೇಶದ ಕೆಲವು ವಿದ್ಯಾವಂತರು ಸಂವಿಧಾನವನ್ನು ಓದಿದ್ದಾರೆ. ಆದರೆ, ಸರಿಯಾದ ರೀತಿಯಲ್ಲಿ ಅರ್ಥೈಸಲಿಲ್ಲ. ಕೆಲವರು ಅರ್ಥೈಸಿದರೂ, ಅದರ ಆಧಾರದಂತೆ ನಡೆದುಕೊಳ್ಳಲಿಲ್ಲ. ಇದರ ಪರಿಣಾಮವಾಗಿ ಹಲವು ಸಮಸ್ಯೆಗಳು ಇನ್ನೂ ಪೂರ್ಣವಾಗಿ ಪರಿಹಾರವಾಗದೇ ಮುಂದುವರೆದಿವೆ. ಕೆಲವು ಹೊಸ ಸಮಸ್ಯೆಗಳು ಸೇರ್ಪಡೆಯಾಗಿವೆ. ಜೊತೆಗೆ ಹಲವು ಸವಾಲುಗಳು ನಮ್ಮನ್ನು ಕಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸಂವಿಧಾನದ ಮೂಲತತ್ವಗಳನ್ನೇ ಮರುಪರಿಶೀಲನೆ ಮಾಡಬೇಕೆಂಬ ಕೂಗು ಕೇಳಿಸುತ್ತಿದೆ! ಮತ್ತೊಂದು ಕಡೆ ಸಂವಿಧಾನವನ್ನು ಬದಲಾಯಿಸಬೇಕೆಂಬ ಕೂಗು ಸಹ ಕೇಳಿಸುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ದೇಶದ ಯುವಜನತೆ ಯಾವ ದಾರಿಯಲ್ಲಿ ಮುಂದುವರೆಯಬೇಕೆಂದು ತಿಳಿಯದೆ ಗೊಂದಲದಲ್ಲಿದ್ದಾರೆ. ನಮ್ಮ ಸಂವಿಧಾನವನ್ನು ಯಾವುದೇ ಭಾಷೆಯಲ್ಲಿ ಹತ್ತು ಬಾರಿ ಓದಿದರೂ ಬೇಗನೆ ಅರ್ಥವಾಗುವುದಿಲ್ಲ. ಕಾರಣ, ಅದೊಂದು ಕಥೆಯಲ್ಲ, ಕಾದಂಬರಿಯಲ್ಲ ಅಥವಾ ಕವಿತೆಯಲ್ಲ. ಅದೊಂದು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಕಾರ್ಯಕ್ರಮ. ಸಂವಿಧಾನ ಅರ್ಥವಾಗಲು ಅದರ ಹಿನ್ನೆಲೆ, ಪ್ರಸ್ತುತತೆ ತಿಳಿದಿರಬೇಕು. ಭಾರತ ದೇಶವನ್ನು ಅರ್ಥಮಾಡಿಕೊಳ್ಳದ ಹೊರತು, ಭಾರತದ ಸಂವಿಧಾನ ಅರ್ಥವಾಗುವುದಿಲ್ಲ. ಭಾರತದ ಸಂವಿಧಾನ ಅರ್ಥಮಾಡಿಕೊಳ್ಳದಿದ್ದರೆ, ಅದರ ಮೂಲತತ್ವಗಳು ತಿಳಿಯುವುದಿಲ್ಲ. ಸಂವಿಧಾನದ ಮೂಲ ತತ್ವಗಳೇ ನಮ್ಮ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ದಿನನಿತ್ಯದ ಕೆಲಸಗಳನ್ನು ಮುನ್ನಡೆಸುವುದು.
ಹಾಗಾಗಿ ನಮ್ಮ ಸಂವಿಧಾನವನ್ನು ಓದಿ ಸುಲಭವಾಗಿ ಅರ್ಥಮಾಡಿಕೊಳ್ಳಲು ಒಂದು ಕ್ರಮವನ್ನು ತಿಳಿಯಪಡಿಸುವ ಪ್ರಯತ್ನವನ್ನು ಈ ಕಿರುಹೊತ್ತಿಗೆಯಲ್ಲಿ ಮಾಡಲಾಗಿದೆ. ನಾವೆಲ್ಲರೂ ನಮ್ಮ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿ, ಅದರಂತೆ ನಡೆದುಕೊಂಡರೆ ಕೆಲವೇ ವರ್ಷಗಳಲ್ಲಿ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ನಾವು ಎದುರಿಸುತ್ತಿರುವ ಸವಾಲುಗಳನ್ನು ಹಿಮ್ಮೆಟ್ಟಿಸಬಹುದು. ನಾವೆಲ್ಲರೂ ಒಟ್ಟಿಗೆ ಶಾಂತಿಯಿಂದ, ನೆಮ್ಮದಿಯಿಂದ, ಯಾವುದೇ ಭಯಭೀತಿ ಇಲ್ಲದೇ ಜೀವಿಸಿ, ದೇಶವನ್ನು ಪ್ರಗತಿಯತ್ತ ಮುನ್ನಡೆಸಿ, ಒಂದು ಸಮ ಸಮಾಜವನ್ನು ಕಟ್ಟಬಹುದೆಂಬ ನಂಬಿಕೆ ನನ್ನದು.
ಅರ್ಥಪೂರ್ಣವಾದ ಮುನ್ನುಡಿಯನ್ನು ಬರೆದುಕೊಟ್ಟ ಈ ನಾಡಿನ ಚಿಂತಕರಾದ ಶ್ರೀಯುತ ಬರಗೂರು ರಾಮಚಂದ್ರಪ್ಪನವರು. ಅವರಿಗೆ ನನ್ನ ಕೃತಜ್ಞತೆಗಳು.
ನನ್ನ ಈ ಸಣ್ಣ ಪ್ರಯತ್ನದಲ್ಲಿ ಸಲಹೆ ಮತ್ತು ಸಹಕಾರವನ್ನು ನೀಡಿದ ಡಾ. ವಿಠ್ಠಲ ಭಂಡಾರಿ, ಡಾ. ಮೀನಾಕ್ಷಿ ಬಾಳಿ, ಕೆ.ಎಸ್.ವಿಮಲಾ, ಸತ್ಯಾ ಎಸ್. ಟಿ. ಸುರೇಂದ್ರ ರಾವ್ ಅವರಿಗೆ ನನ್ನ ಕೃತಜ್ಞತೆಗಳು.
ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್
ಆಗಸ್ಟ್ 2018
No comments:
Post a Comment