ಆ ಒಂದು ಜಗಲಿ ಕಟ್ಟೆ..
ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.
ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.
ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ
ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ
ನೆನಪು 12
ಹಕ್ಕೆ ಜಗಲಿ ಪುರಾಣ
ನಮ್ಮಲ್ಲಿ ‘ಹಕ್ಕೆ ಜಗುಲಿ ಪುರಾಣ’ ಎಂದರೆ ಕೆಲಸಕ್ಕೆ ಬಾರದ ಮಾತುಕತೆ ಎಂದರ್ಥ. ಅಂಗಳಕ್ಕೆ ಇಳಿಯದೇ ಮನೆಯ ಒಳಗೇ ಕುಳಿತು ಮಾಡುವ ಕಾಲಹರಣ. ಉತ್ತರನ ಪೌರುಷ ಎಂತಲೂ ಬಳಕೆ ಇದೆ.
ಅದು ಏನೇ ಇರಲಿ. ನಮ್ಮ ಹಳ್ಳಿಯಲ್ಲಿ ಪ್ರತಿ ಮನೆಯಲ್ಲಿ ಒಂದು ಜಗಲಿ ಮತ್ತು ಹೊರಗೆ ಕುಳಿತುಕೊಳ್ಳಲು ಒಂದು ಹಕ್ಕೆ ಜಗುಲಿ (ಹಕ್ಕೆ ಚಿಟ್ಟೆ ಅಂತಲೂ ಹೇಳುತ್ತಾರೆ) ಇದ್ದೇ ಇರುತ್ತದೆ. ಸಾಮಾನ್ಯವಾಗಿ ಸಂಜೆ ಹೊತ್ತು ಈ ಹಕ್ಕೆ ಜಗುಲಿಯಲ್ಲಿ ಕುಳಿತೇ ಸುದ್ದಿ ಹೇಳುವುದು.
ಆದರೆ ನಮ್ಮ ಮನೆಯಲ್ಲಿ ಹಕ್ಕೆ ಜಗುಲಿ ಇರಲಿಲ್ಲ. ಮಣ್ಣಿನ ಗೋಡೆಯಿರುವ ಸಣ್ಣ ಮನೆ. ನಮ್ಮ ಮನೆಯ ಹಿಂದಿನ ಮನೆಯಲ್ಲಿರುವ ಸುಬ್ರಾಯ ಶೆಟ್ಟರು ಈ ಗೋಡೆ ನಾನೇ ಹಾಕಿದ್ದು ಎಂದು ವರ್ಣಿಸುತ್ತಿದ್ದರು. ಮನೆಯಲ್ಲಿ ಸಣ್ಣ ಹೊಳ್ಳಿ (ಜಗಲಿ); ಅದಕ್ಕೆ ಕಟ್ಟಿಗೆ ರೀಪಿನ ಶಿರವಾಳ್ತೆ (ಕಡಕಟ್ಟು, ಕಟಾಂಜನ); ಶಿರವಾಳ್ತೆಗಿರುವ ಬಾಗಿಲು ದಾಟಿದರೆ ಅಂಗಳ. ಹೊಳ್ಳಿ ಕೂಡ ಸಣ್ಣದು. ಆಚೆ ಈಚೆ ಎರಡು ಖುರ್ಚಿ ಹಾಕಿದರೆ ಮೂರನೆಯವರು ಸ್ವಲ್ಪ ಅಡ್ಡಾಡುವುದೂ ಕಷ್ಟವೇ.
ನಮ್ಮ ಮನೆಗೆ ಬಂದುಹೋಗುವವರು ಸ್ವಲ್ಪ ಹೆಚ್ಛೇ ಅನ್ನಬೇಕು. ಅಣ್ಣ ಮಾಸ್ತರ್ ಆಗಿರುವುದು ಒಂದಾದರೆ ಒಬ್ಬ ಲೇಖಕನಾಗಿರುವದರಿಂದಲೂ ಸ್ನೇಹದಿಂದ, ಗೌರವದಿಂದ ಆತನ ಸಲಹೆ ಕೇಳಲು, ಮಾತಾಡಿಸಲು ಬರುತ್ತಿದ್ದರು. ಹಾಗಾಗಿ ಹೊಳ್ಳಿಯನ್ನು ಸ್ವಲ್ಪ ವಡಾಯಿಸಲು (ವಿಸ್ತರಿಸಲು) ನಿರ್ಧರಿಸಿ, ಯಾವಾಗಲೂ ನಮ್ಮ ಮನೆಯ ಕೆಲಸ ಮಾಡಿಕೊಡುತ್ತಿದ್ದ ಅಯ್ಯನಿಗೆ ಹೇಳಲಾಯಿತು.
ಇದರ ಭಾಗವಾಗಿ ಒಂದಿಷ್ಟು ಕಡಗಲ್ಲು (ಚೀರೆ ಕಲ್ಲು) ಮನೆ ಎದುರು ಬಂದಿತು. ಮನೆಯ ಮುಂದಿನ ಮಾಡನ್ನು (ಚಾವಣಿ) ಉದ್ದ ಮಾಡಲು “ಕಟ್ಟಿಗೆ ತರುವುದು ಬೇಡ; ಕಾಡಿನ ಮರ ನಾಶ ಮಾಡುವುದು ಸರಿ ಅಲ್ಲ” ಎಂದು ಅಣ್ಣನ ಆದೇಶ ಆಗಿರುವುದರಿಂದ ತೆಂಗಿನ ಪಟ್ಟಿ ತರಲಾಯಿತು. ಹೊಳ್ಳಿಯ ತುದಿಗೆ 2 ಫೂಟಿನಲ್ಲಿ ಕಲ್ಲುಕಟ್ಟಿ ಅದರ ಮೇಲೆ ಶಿರವಾಳ್ತೆ ಕಟ್ಟುವುದು, ಅದರ ಮುಂದೆ ಬೇಸಿಗೆಯಲ್ಲಿ ಕುಳಿತುಕೊಳ್ಳಲು ಅನುಕೂಲ ಆಗುವಂತೆ ಒಂದುವರೆ ಫೂಟಿನ ಹಕ್ಕೆ ಜಗುಲಿ ಕಟ್ಟುವುದೆಂದು ನಾವು ತೀರ್ಮಾನಿಸಿ, ಅದರಂತೆ ಕಲ್ಲು ಕಟ್ಟಲು ಪ್ರಾರಂಭಿಸಿದರು.
ಮಧ್ಯಾಹ್ನದೊಳಗೆ ಸುಮಾರು ಅರ್ಧ ಕೆಲಸ ಮುಗಿದಿರಬೇಕು. ಶಾಲೆ ಬಿಟ್ಟು ಬಂದ ಅಣ್ಣ ಹಿಂದೆ ಮುಂದೆ ಅಡ್ಡಾಡಿ ಹೊರಗೆ ಕಟ್ಟುತ್ತಿರುವುದು ಏನು ಎಂದು ವಿಚಾರಿಸಿದ. ಹೊರಗೆ ಒಂದು ಕಟ್ಟೆ, ಯಾರಾದರೂ ಬಂದರೆ, ನೀವು ಸಂಜೆ ಒಂದು ಗಳಿಗೆ ಕುಳಿತುಕೊಳ್ಳುವುದಕ್ಕೆ ಒಂದು ಕಟ್ಟೆ ಕಟ್ಟುತ್ತೇವೆ; ಚೆನ್ನಾಗಿರುತ್ತದೆ ಎಂದು ಅಯ್ಯ ಹೇಳಿದ.
ಇದಕ್ಕೆ ಅಣ್ಣ ಗ್ರೀನ್ ಸಿಗ್ನಲ್ ನೀಡಲಿಲ್ಲ. ಯಾವುದೇ ಕಾರಣಕ್ಕೂ ಈ ಕಟ್ಟೆ ಕಟ್ಟ ಬಾರದೆಂದು ಅಣ್ಣ ಹಠ ಹಿಡಿದ. ತಾನು ಮಾಡುವ ಕೆಲಸಕ್ಕೆ ಶಹಬ್ಬಾಸ್ ಗಿರಿ ಪಡೆಯಬೇಕೆಂದುಕೊಂಡು ಉತ್ಸಾಹದಿಂದ ವಿವರಿಸಿದ ಅಯ್ಯನಿಗೆ ನಿರಾಶೆಯಾಯಿತು.
ನಮಗೂ ನಿರಾಸೆಯೇ.
ನಮಗೂ ನಿರಾಸೆಯೇ.
ಯಾಕೆ ಬೇಡ ಎಂದು ನಾವೂ ಕೇಳಿದೆವು. ಆದರೆ ಆತ ಅದಕ್ಕೆ ಕಾರಣ ಹೇಳಲು ತಯಾರಿರಲಿಲ್ಲ. ಅಂತೂ ಇಂತೂ ತುಂಬಾ ಒತ್ತಾಯಿಸಿದ ಮೇಲೆ ಆತ “ಮನೆಗೆ ಯಾರೇ ಬಂದರೂ ಇಷ್ಟು ದಿನ ಒಳಗೆ ಹೊಳ್ಳಿಯ ಮೇಲೆ ಕುಳ್ಳಿರಿಸಿಕೊಳ್ಳುವುದು, ಅಲ್ಲಿಯೇ ನಮ್ಮೊಂದಿಗೆ ಚಹ ತಿಂಡಿ ಕೊಡುವುದು ಮಾಡುತ್ತಿದ್ದೆವು. ಇನ್ನು ಬೇರೆ ಬೇರೆ ಜಾತಿಯವರು ಬಂದರೆ ಹೊರಗೆ ಹಕ್ಕೆ ಜಗುಲಿಯ ಮೇಲೆ ಕುಳ್ಳಿರಿಸಿ ಚಾ ತಿಂಡಿ ಕೊಡುವುದಿಲ್ಲ ಎಂದು ಯಾವ ಗ್ಯಾರಂಟಿ? ನಮ್ಮೂರಲ್ಲಿ ಹಲವು ಮನೆಗಳಲ್ಲಿ ಜಾತಿಯಲ್ಲಿ ಕೀಳು ಎಂದು ಪಟ್ಟಕಟ್ಟಿ ಹೊರಗೆ ಕುಳ್ಳಿರಿಸಿ ಚಾ ಕೊಡುತ್ತಾರೆ. ಅದು ನಮ್ಮಲ್ಲಿ ಆದರೆ ನಮಗೂ ಉಳಿದವರಿಗೂ ಏನು ವ್ಯತ್ಯಾಸ?” ಎಂದು ತನ್ನ ಭಯ,ಆತಂಕ ವ್ಯಕ್ತಪಡಿಸಿದ.
ಎಂಥ ಅದ್ಭುತ ಆಲೋಚನೆ ಅನ್ನಿಸಿತು. ಹೊರಗೆ ಹಕ್ಕೆ ಜಗಲಿ ಇಲ್ಲದಿದ್ದರೆ ಹೊರಗೆ ಕೂಡ್ರಿಸುವ ಪ್ರಶ್ನೆಯೇ ಇರುವುದಿಲ್ಲ. ಅನಿವಾರ್ಯವಾಗಿಯಾದರೂ ಯಾವುದೇ ಜಾತಿಯವರು ಬಂದರೂ ಒಳಗೇ ಕರೆಯಬೇಕಲ್ಲಾ ಎನ್ನುವುದು ಆತನ ಆಶಯ.
ಹಾಗಾಗುವುದಿಲ್ಲವೆಂದು ನಾವೆಲ್ಲಾ ಭರವಸೆ ಕೊಟ್ಟು ಅವನನ್ನು ಒಪ್ಪಿಸಲಾಯಿತು.
ಹಾಗಾಗುವುದಿಲ್ಲವೆಂದು ನಾವೆಲ್ಲಾ ಭರವಸೆ ಕೊಟ್ಟು ಅವನನ್ನು ಒಪ್ಪಿಸಲಾಯಿತು.
ಹಕ್ಕೆ ಜಗಲಿ ಕಟ್ಟಿದ ಮೇಲೂ ಯಾವುದೇ ಜಾತಿಯವರು, ದಲಿತರು ಮನೆಗೆ ಬಂದರೂ ಒಳಗೆ ಕರೆದು ಚಹಾ ಕೊಟ್ಟಾಗಲೇ ಅವನಿಗೆ ಸಂಶಯ ಪರಿಹಾರವಾಗಿದ್ದು. ಬೇಸಿಗೆಯಲ್ಲಿ ಚಪ್ಪರ ಹಾಕಿದ್ದಾಗ ಆತನೂ ಹೊರಗೆ ಬಂದು ಕುಳಿತುಕೊಳ್ಳುತ್ತಿದ್ದ. ಮೊಮ್ಮಕ್ಕಳೊಂದಿಗೆ ಆಟವಾಡುವಾಗಲೂ ಇಲ್ಲಿ ಕುಳಿತಿರುತಿದ್ದ. ಆತ ಹೊರಗೆ ಕುಳಿತಿರುವಾಗ ಯಾರಾದರೂ ಬಂದರೆ ತಕ್ಷಣ ಒಳಗೆ ಕರೆದುಕೊಂಡು ಹೋಗಿ ಮಂಚದ ಮೇಲೆ ಅಥವಾ ಖುರ್ಚಿಯ ಮೇಲೆ ಕುಳ್ಳಿರಿಸಿ ಮಾತನಾಡುತ್ತಿದ್ದ.
ಹೀಗೆ ಆತನ ಪ್ರತಿ ವ್ಯವಹಾರವೂ ಅತ್ಯಂತ ಸೂಕ್ಷ್ಮವಾಗಿರುತ್ತಿತ್ತು. ಜಾತಿನಿಷ್ಠ ಸಮಾಜದ ಬದಲಾವಣೆಗೆ ತುಡಿಯುವ ಆತನ ಮನಸ್ಸು ಇಂತಹ ಸಣ್ಣ ಸಣ್ಣ ಕಾರ್ಯದಲ್ಲಿಯೂ, ವಿವರಗಳಲ್ಲಿಯೂ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡುತ್ತಿತ್ತು.