ನನ್ನ ಅಪ್ಪ ಆರ್ ವಿ ಭಂಡಾರಿ..
ಆರ್ ವಿ ಭಂಡಾರಿ ಎಂದರೆ ತಕ್ಷಣ ನನಗೆ ನೆನಪಾಗುವುದು ಅವರ ವಿನಾಕಾರಣ ಪ್ರೀತಿ ಹಾಗೂ ಅವರ ಎಲ್ಲವನ್ನೂ ಒಂದೇ ಪೋಸ್ಟ್ ಕಾರ್ಡ್ ನಲ್ಲಿ ಹೇಳಿಬಿಡಬೇಕು ಎನ್ನುವ ತವಕ.
ಅವರು ನನಗೆ ವರ್ಷಗಟ್ಟಲೆ ಬರೆದ ಪತ್ರಗಳು ನನ್ನೊಂದಿಗೆ ಇವೆ. ಅದರಲ್ಲಿ ಅತಿ ಹೆಚ್ಚಿನದ್ದು ಪೋಸ್ಟ್ ಕಾರ್ಡ್ ಗಳೇ. ಅವರಿಗೆ ಮಾತನಾಡುವ, ಚರ್ಚಿಸುವ, ಸಂವಾದಿಸುವ ತವಕ ಎಷ್ಟಿತ್ತು ಎನ್ನುವುದಕ್ಕೆ ಆ ಪೋಸ್ಟ್ ಕಾರ್ಡ್ ಗಳೇ ಸಾಕ್ಷಿ. ಅವರು ಬರೆಯುವ ಕಾರ್ಡ್ ನಲ್ಲಿ ಒಂದಕ್ಷರಾದಷ್ಟೂ ಜಾಗ ಅವರು ಉಳಿಸುತ್ತಿರಲಿಲ್ಲ. ಬರದೇ ಬರೆಯುತ್ತಿದ್ದರು.
ನಮ್ಮ ಪುಸ್ತಕದ ಬಗ್ಗೆ, ಅವರು ಓದಿದ್ದರ ಬಗ್ಗೆ, ಅವರ ಪುಸ್ತಕಗಳ ಬಗ್ಗೆ ಹೀಗೆ ಸದಾ ನನ್ನ ಅವರ ನಂಟು
ಇದು ನನ್ನೊಬ್ಬನಿಗೆ ಮಾತ್ರವಲ್ಲ. ಅವರ ಹತ್ತಿರಕ್ಕೆ ಬಂದವರ ಎಲ್ಲರ ಅನುಭವವೂ ಹೌದು. ಬಂಡಾಯ ಸಾಹಿತ್ಯದ ಹಲವು ಮುಖಗಳಲ್ಲಿ ನನಗೆ ಆರ್ ವಿ ಭಂಡಾರಿಯವರದ್ದು ಮರೆಯಲಾಗದ ಮುಖ. ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.
ನಾನು ಮಂಗಳೂರಿಗೆ ಹೋದ ಮೇಲೆ ಅವರು ನೆರೆಯವರೇ ಆದ ಕಾರಣ ಇನ್ನಷ್ಟು ಅವರನ್ನು ಗಮನಿಸಲು ಸಾಧ್ಯವಾಯಿತು. ನಂತರ ಗುಲ್ಬರ್ಗದಲ್ಲಿದ್ದಾಗಲೂ ಅವರ ಕಾರ್ಡ್ ಚಳವಳಿಯಿಂದಾಗಿ ಆ ಸ್ನೇಹದ ತಂತು ಕಡಿದು ಹೋಗಲೇ ಇಲ್ಲ.
ಅವರು ಮೊದಲು ಬದಲಾವಣೆ ತಂದದ್ದು ತಮ್ಮ ಮನೆಯೊಳಗೇ. ಮನೆಯನ್ನು ಮೌಢ್ಯದೊಳಕ್ಕೆ ತಳ್ಳಿ ಸಮಾಜವನ್ನು ಮಾತ್ರ ಬದಲಾಯಿಸಲು ಹೊರಟವರ ನಡುವೆ ಇವರು ತೀರಾ ಭಿನ್ನ. ಹಾಗಾಗಿಯೇ ವಿಠ್ಠಲ, ಮಾಧವಿ, ಯಮುನಾ ಇವತ್ತು ಥೇಟ್ ಅಪ್ಪನಂತೆಯೇ ವಿಚಾರದ ದೀವಿಗೆಗಳು
ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.
ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ
ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ
-ಜಿ ಎನ್ ಮೋಹನ್
ಇದು ನನ್ನ ‘ಅಣ್ಣನ ನೆನಪು’
ನೆನಪು 1
ವಿಠ್ಠಲ ಭಂಡಾರಿ
ಅಣ್ಣ ನಮ್ಮನ್ನು ಮುದ್ದಿಸಿದ ನೆನಪು ನನಗಿಲ್ಲ.
ಮೊದಲಿಂದ ಆತ ಒಬ್ಬ ಗಂಭೀರ ವ್ಯಕ್ತಿಯಾಗಿಯೇ ನನಗೆ ಕಾಣಿಸುತ್ತಿದ್ದ.
ಯಾರೊಂದಿಗೂ ಹರಟೆ ಹೊಡೆಯುವುದಾಗಲೀ, ಅನವಶ್ಯಕ ಮಾತುಕತೆಯಾಡುತ್ತಾ ಸಮಯ ಕಳೆಯುವುದಾಗಲೀ, ಲೋಕಾಭಿರಾಮವಾಗಿ ಇನ್ನೊಬ್ಬರನ್ನು ಟೀಕೆ ಮಾಡುತ್ತಾ ಕುಳಿತುಕೊಳ್ಳುವುದಾಗಲೀ ನಾನು ನೋಡೇ ಇಲ್ಲ. ಹಾಗೆ ಅವನನ್ನು ನಾನು ಕಲ್ಪಿಸಲಾರೆ.
ಗೆಳೆಯರೊಂದಿಗೆ ಆತ ನಕ್ಕಾಗ ನಾವು ಕಿಡಕಿಯಲ್ಲಿ ನೋಡಿ ಖುಷಿಪಟ್ಟ ದಿನಗಳಿದ್ದವು. ನಾನು ಯಾರನ್ನಾದರೂ ಟೀಕೆ ಮಾಡುವಾಗಲೆಲ್ಲಾ ಆತನ ನೆನಪು ನನ್ನ ನಾಲಿಗೆಗೆ ಬ್ರೇಕ್ ಹಾಕುತ್ತಿರುತ್ತದೆ.
ಆತನನ್ನು ನಾನು ತೀರಾ ಪ್ರೀತಿಸತೊಡಗಿದ್ದು ಸೈದ್ಧಾಂತಿಕವಾಗಿಯೇ ಎನ್ನಬಹುದು. ಅಂದರೆ ನಾನು ಕಾಲೇಜಿಗೆ ಹೋಗಲು ಪ್ರಾರಂಭಿಸಿದಾಗಲೇ. ಇದಕ್ಕಿಂತ ಮೊದಲು ಅವನನ್ನು ಕಂಡರೆ ವಿಚಿತ್ರ ಭಯ, ಗೌರವ ಮಾತ್ರ ಇತ್ತೆಂದು ಕಾಣುತ್ತದೆ. ಅವನ ಸಹನಾಶೀಲ ಬದುಕಿನ ಬಗ್ಗೆ… ವಿಶ್ವ ಕೋಶದಂತಿರುವ ಜ್ಞಾನದ ಬಗ್ಗೆ… ಒಂದು ನಿಮಿಷವನ್ನೂ ವ್ಯರ್ಥ ಮಾಡದೆ ಓದುವ ಅವನ ಆಸಕ್ತಿಯ ಬಗ್ಗೆ… ಈ ಗೌರವ ಇತ್ತು. ಆದರೆ ಪ್ರೀತಿ ಇತ್ತೇ?
ನಾನಾಗಲೀ ನನ್ನ ಹಿರಿಯಕ್ಕ ಇಂದಿರಾ ಆಗಲಿ ಅಣ್ಣನ ಎದುರು ಕುಳಿತುಕೊಳ್ಳುತ್ತಿರಲೇ ಇಲ್ಲ; ಅಷ್ಟು ಭಯ. ಮಾಧವಿ ಮಾತ್ರ ಭಯ ಇಲ್ಲದೇ ಕೂಡ್ರುತ್ತಿದ್ದಳು. ಹಾಗೆ ಆತ ಆರಾಮ ಕುರ್ಚಿಯಲ್ಲಿ ಕುಳಿತಿರುವಾಗ ಅವನೆದುರು ಭಯವಿಲ್ಲದೆ ಮಂಚದ ಮೇಲೆ ಕುಳಿತು ಕೊಂಡಿದ್ದು ಎಂ.ಎ. ಓದಲು ವಿಶ್ವವಿದ್ಯಾಲಯಕ್ಕೆ ಹೋದ ಮೇಲೆಯೆ. ಇಲ್ಲದಿದ್ದರೆ ನಿಂತೇ ಇರುವುದು.
ಆತ ಯಾವಾಗಲೂ ಒಬ್ಬನೇ ಊಟ ಮಾಡುವುದು. ಅವನಾದ ಮೇಲೆ ನಮ್ಮೆಲ್ಲರ ಊಟ. ಯಾಕೆಂದರೆ ಅವನೊಂದಿಗೆ ಊಟಕ್ಕೆ ಕುಳಿತರೆ ಹರಟೆ ಹೊಡೆಯಲು ಆಗುತ್ತಿರಲಿಲ್ಲ. ಊಟದ ಬಗ್ಗೆ ಏನೂ ಕತೆ ಕಟ್ಟಲು ಸಾಧ್ಯ ಆಗುತ್ತಿರಲಿಲ್ಲ. ತಮಾಷೆಗೆ, ಹರಟೆಗೆ ಅವಕಾಶ ಇರಲಿಲ್ಲ. ಒಂದೂ ಮಾತು ಆಡದೇ ಊಟ ಮಾಡುವುದೆಂದರೆ ಅದು ರುಚಿಸದು. ಆತ ಊಟಕ್ಕೆ ಮತ್ತು ತಿಂಡಿಗೆ ಒಳ ಬಂದರೆ ನಾವು (ನಾನು ಮತ್ತು ಅಕ್ಕ) ಹೊರಗೆ, ಆತನ ಆರಾಮ ಕುರ್ಚಿಯಲ್ಲಿ ಕೂಡ್ರಲು ಸ್ಪರ್ಧೆ ನಮ್ಮೊಳಗೆ; ಆತ ಹೊರಗೆ ಬಂದರೆ ನಾವು ಅಲ್ಲಿಂದ ಮಾಯ.
ಅವನೊಂದಿಗೆ ನನ್ನ ಯಾವ ಬೇಡಿಕೆಯನ್ನು ಮಾತನಾಡುವುದಿದ್ದರೂ ಒಂದು ನಿರ್ದಿಷ್ಟ ಸಮಯವನ್ನು ಎದುರು ನೋಡುತ್ತಿದ್ದೆ. ಅದು ಊಟದ ನಂತರ ಆತ ಹಾಕುವ ಕವಳದ ಗಳಿಗೆ.
No comments:
Post a Comment