Wednesday 6 June 2018

ಯಾಕಾದರೂ ಆರ್.ವಿ. ಭಂಡಾರಿಯ ಮಗನಾದೆ ಎನಿಸುತ್ತಿತ್ತು..ವಿಠ್ಠಲ ಭಂಡಾರಿ

ಯಾಕಾದರೂ ಆರ್.ವಿ. ಭಂಡಾರಿಯ ಮಗನಾದೆ ಎನಿಸುತ್ತಿತ್ತು..

ನನ್ನ ಅಪ್ಪ ಆರ್ ವಿ ಭಂಡಾರಿ..

ಬಂಡಾಯ ಸಾಹಿತ್ಯದ ಹಲವು ಮುಖಗಳಲ್ಲಿ ನನಗೆ ಆರ್ ವಿ ಭಂಡಾರಿಯವರದ್ದು ಮರೆಯಲಾಗದ ಮುಖ.
ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.
ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.
ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ
ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ
ನೆನಪು 7
ಭಾಷಣ ಕಲಿತಿದ್ದು
ಅಣ್ಣ ಆ ಕಾಲದ, ಆ ಭಾಗದ ಒಳ್ಳೆಯ ಭಾಷಣಕಾರನಾಗಿದ್ದ.
ಎಷ್ಟೇ ಜನರಿದ್ದರೂ ತನ್ನತ್ತ ಸೆಳೆದುಕೊಳ್ಳುವ ಕಂಚಿನ ಕಂಠ, ಯಾವ ಸಂಗತಿಯನ್ನೂ ಹೊಸ ರೀತಿಯಲ್ಲಿ ಆಕರ್ಷಕವಾಗಿ ಹೇಳುವ ಕಲೆ, ಸಾಮಾನ್ಯ ಸಂಗತಿಯನ್ನೂ ಹೊಸ ಆಯಾಮದಲ್ಲಿ ತೆರೆದಿಡುವ ಆತ್ಮ ವಿಶ್ವಾಸ, ಮಾತಿಗೆ ಮುಕ್ತಾಯಕ್ಕೆ ಕೊಡುವ ಒಂದು ಸಣ್ಣ ಭಾವನಾತ್ಮ ಸ್ಪರ್ಷ… ಆತ ಈ ಕಾರಣಕ್ಕಾಗಿ ಜಿಲ್ಲೆಯಲ್ಲಿಯೇ ಪ್ರಸಿದ್ದನಾಗಿದ್ದ.
ಇವನಂತೆ ಜಿ.ಎಸ್. ಅವಧಾನಿಯವರು ಮತ್ತು ಜಿ.ಯು.ಭಟ್ ಅವರು ಕೂಡ ಬಹು ಬೇಡಿಕೆಯ ಭಾಷಣಕಾರರಾಗಿದ್ದರು. ಆತನ ಬರವಣಿಗೆ ಕೂಡ ಆಕರ್ಷಕವಾದದ್ದೇ ಆಗಿತ್ತು. ಎಲ್ಲೇ ಭಾಷಣ ಸ್ಪರ್ಧೆಯಾಗಲಿ, ಪ್ರಬಂಧ ಸ್ಪರ್ಧೆಯಾಗಲಿ ಆತನಲ್ಲಿ ಹಲವರು ಬಂದು ಬರೆಸಿಕೊಂಡು ಹೋಗುತ್ತಿದ್ದರು. ಅದನ್ನೆಲ್ಲಾ ಕಾಯ್ದಿಟ್ಟರೆ ಒಂದು ಸಂಪುಟವೇ ಆಗಿಬಿಡುತ್ತಿತ್ತು. ಯಾರಿಗೂ ಇಲ್ಲ ಎನ್ನುತ್ತಿರಲಿಲ್ಲ. ಭಂಡಾರಿ ಮಾಸ್ತರರ ಹತ್ತಿರ ಭಾಷಣ ಬರೆಸಿಕೊಂಡರೆ ಬಹುಮಾನ ಬರುತ್ತದೆಂದು ಪ್ರತೀತಿಯೇ ಬಿದ್ದಿತ್ತು.
ನಾನು ಭಾಷಣ ಮಾಡಲು ಸ್ವಲ್ಪಮಟ್ಟಿಗೆ ಕಲಿತದ್ದು ಪ್ರಾಥಮಿಕ ಶಾಲೆಯಲ್ಲಿ. ಮೊದಲಬಾರಿಗೆ ಸ್ಟೇಜು ಹತ್ತಿದಾಗ ಜನರೆದುರು ನಿಲ್ಲುವುದೆಂದರೇ ಕೈಕಾಲು ನಡುಗುತ್ತಿತ್ತು. ಬಾಯಿ ಪಾಠ ಮಾಡಿದ್ದು ಮರೆತು ಹೋಗುತ್ತಿತ್ತು. ಕನ್ನಡ ಶಾಲೆಯಲ್ಲಿ ಆಟೋಟ ಸ್ಪರ್ಧೆಯಿದ್ದಾಗ ನನ್ನನ್ನು ಹೆಚ್ಚು ಸೇರಿಸುತ್ತಿರಲಿಲ್ಲ. ನಮ್ಮ ಶಾಲೆಯ ಶಾಸ್ತ್ರೀ ಮಾಸ್ತರರು ನನ್ನನ್ನೇ ಸಾಂಸ್ಕೃತಿಕ ಕಾರ್ಯದರ್ಶಿ ಮಾಡುತ್ತಿದ್ದರು. ಯಾಕೆಂದರೆ ನಾನು ಆರ್.ವಿ. ಭಂಡಾರಿಯವರ ಮಗ ಆಗಿರುವುದರಿಂದ. ನನ್ನನ್ನು ಕೇಳದೇ ಭಾಷಣ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಗೆ ಹೆಸರನ್ನು ಮೊದಲೇ ಹಚ್ಚಿಡುತ್ತಿದ್ದರು.
ಅಣ್ಣನ ಮಗನಾಗಿದ್ದುದರಿಂದ ನನಗೆ ಜನ್ಮದತ್ತವಾಗಿ ಇಂತಹ ಕೆಲವು ಅರ್ಹತೆಗಳು ಬಂದು ಬಿಟ್ಟಿದ್ದವು!!??. ಇದೇ ಪೀಕಲಾಟಕ್ಕೆ ಕಾರಣ ಆಗುತ್ತಿದ್ದುದು. ಒಮ್ಮೆ ಇನ್ಸ್ಪೆಕ್ಟರ್ (ಕೆಲವು ವರ್ಷ ಇನ್ಸ್ಪೆಕ್ಟರ್ ಎನ್ನಲು ವಿನಾಯಕ ಭಟ್ ಎನ್ನುತ್ತಿದ್ದೆವು.) ಬಂದಾಗ ಏಕಾಏಕಿ ಸ್ವಾಗತ ಭಾಷಣ ಮಾಡು ಎಂದು ಬಿಟ್ಟರು.
ಅವರು ಹಿಂದಿನಿಂದ ಹೇಳಿಕೊಡುವುದು ನಾನು ಜೀವ ಎಡಕೈಲಿ ಕಟ್ಟಿಕೊಂಡು ಹೇಳುವುದು. ಮುಂದಿದ್ದ ಹುಡುಗರು ಶಾಸ್ತ್ರಿ ಮಾಸ್ತರರ ಭಯಕ್ಕೆ ದೊಡ್ಡದಾಗಿ ನಗುತ್ತಿರಲಿಲ್ಲ. ಮೇಲಿಂದ ಈತ ಭಂಡಾರಿ ಮಾಸ್ತರರ ಮಗನೆಂದು ಅವರಿಗೆ ಹೇಳುವುದು. ಅವರು ನನಗೆ ಪ್ರಶ್ನೆ ಕೇಳುವುದು. ಆಗೆಲ್ಲಾ ಯಾಕಾದರೂ ಆರ್.ವಿ. ಭಂಡಾರಿಯ ಮಗನಾದೆ ಎನಿಸುತ್ತಿತ್ತು.
ನನ್ನ ಭಾಷಣವನ್ನು ಅಣ್ಣನ ಭಾಷಣಕ್ಕೆ ಹೋಲಿಸುತ್ತಿದ್ದರು. ಆತನ ಮರ್ಯಾದೆ ಕಾಪಾಡಲು ಸ್ಟೇಜಿನ ಮೇಲೆ ನಿಲ್ಲುವುದು ಅನಿವಾರ್ಯವಾಯಿತು. ಬಹುಶಃ 6 ನೇ ತರಗತಿಯಲ್ಲಿ “ಉತ್ಥಾನಪಾದ ಮತ್ತು ಸುರುಚಿಯ ಮಗ ಧ್ರುವ. ಅವನೆದುರು ಪ್ರತ್ಯಕ್ಷನಾದ ದೇವರು ‘ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಮಗು. . . .’ ಎಂದು ಒಂದಿಷ್ಟು ಕಂಠಪಾಠ ಮಾಡಿಕೊಂಡು ಹೊನ್ನಾವರದಲ್ಲಿ ಎರಡೋ ಮೂರೋ ಬಹುಮಾನ ತಂದೆ. ಒಂದಿಷ್ಟು ವಿಶ್ವಾಸ ಬಂತು.
ಕಾಲೇಜಿಗೆ ಹೋದಾಗಲೂ ಹಾಗೆಯೇ. ಅಪ್ಪನ ಹಾಗೆ ಭಾಷಣ ಮಾಡುವುದಿಲ್ಲ ಎಂಬ ಅಪವಾದ ನನ್ನೊಂದಿಗೆ ಇದ್ದೇ ಇತ್ತು. ಹಾಗಾಗಿ ನಾನು ಭಾಷಣ ಮಾಡಲು ಕಲಿಯುವುದು ನನಗೆ ಅನಿವಾರ್ಯ ಆಯಿತು. ವಿದ್ಯಾರ್ಥಿ ಸಂಘಟನೆಗೆ (SFI) ಸೇರಿದ್ದರಿಂದ ಅಲ್ಲಿ ನಾನು, ಸುರೇಶ ತಾಂಡೇಲ ಮೊದಲಾದವರೇ ನಾಯಕರು. ಸದಸ್ಯತ್ವ ಮಾಡಲು, ಹೋರಾಟಕ್ಕೆ ಜನರನ್ನು ಎಬ್ಬಿಸಲು ಮಾತು ಆಡಲೇಬೇಕಾಯಿತು. ಅದರೊಂದಿಗೆ ಹಿಂದೆ ಮುಂದೆ ಅವಧಾನಿಯವರು ಭಾಷಣ ಮಾಡಲು, ಅತಿಥಿಗಳನ್ನು ಪರಿಚಯಿಸಲು, ನಿರೂಪಣೆ ಮಾಡಲು ಕರೆದು ಬಿಡುತ್ತಿದ್ದರು.
ಒಮ್ಮೆಯಂತೂ ಹೊನ್ನಾವರದ ಮಂಕಿಯಲ್ಲಿ ಸಾಕ್ಷರತೆ ಆಂದೋಲನದ ಕಾರ್ಯಕ್ರಮ ನಡೆಯುತ್ತಿತ್ತು. ನಮ್ಮ ಇಡೀ ತಂಡ ಅದರಲ್ಲಿ ಪಾಲ್ಗೊಂಡಿದ್ದೆವು. ಅವಧಾನಿಯವರು ತಾಲೂಕು ಸಂಚಾಲಕರು. ಅಣ್ಣ ಪ್ರಚಾರ ಸಮಿತಿ ಸಂಚಾಲಕ. ಇವರಿಬ್ಬರಿರುವುದರಿಂದ ನಾವು ಅಲ್ಲಿರಬೇಕಲ್ಲಾ! -ನಾನು ಮತ್ತು ಶ್ರೀಪಾದ ಭಟ್ ಒಟ್ಟಿಗೇ ಹೋಗಿದ್ದೆವು. (ಯಾವಾಗಲೂ ಒಟ್ಟಿಗೇ ಹೋಗುತ್ತಿದ್ದೆವು)- ಸಭೆ ಪ್ರಾರಂಭ ಆಯಿತು. ನಮ್ಮನ್ನು ಭಾಷಣ ಮಾಡಲು ನಿಲ್ಲಿಸಿಯೇ ಬಿಟ್ಟರು.
ಶ್ರೀಪಾದ ಆಗಲೇ ಒಳ್ಳೆ ಡಿಬೇಟರ್ ಅಂಥ ಕಾಲೇಜಿನಲ್ಲಿ ಹೆಸರುಗಳಿಸಿದ್ದ. ನಾನೂ ಭಾಷಣದಲ್ಲಿ ಅಲ್ಲಲ್ಲಿ ಭಾಗವಹಿಸಿದ್ದೆ. ಆದರೆ ಮೊದಲೇ ಸಣ್ಣ ತಯಾರಿ ಇರುತ್ತಿತ್ತು. ತೀರಾ ಗಂಭೀರ ವಿಷಯ ಇದ್ದರೆ ಅಣ್ಣನೇ ಬರೆದುಕೊಡುತ್ತಿದ್ದ ಅಥವಾ ಬರೆದದ್ದನ್ನ ತಿದ್ದಿಕೊಡುತ್ತಿದ್ದ. ಆದರೆ ಇಲ್ಲಿ ಯಾವ ಮುನ್ಸೂಚನೆ ಇಲ್ಲದೆ ಇರುವುದು ಒಂದಾದರೆ ಎದುರಿಗೆ ಅಣ್ಣ ಇದ್ದಾನೆ ಎನ್ನುವುದು ಇನ್ನೊಂದು ಸಮಸ್ಯೆ. ಭಾಷಣ ಮಧ್ಯ ಬಿಟ್ಟರೆ ಅಣ್ಣನ ಮರ್ಯಾದೆ ಹರಾಜು. ಇಂತಹ ಇಕ್ಕಟ್ಟಿನಿಂದ ಪಾರಾಗಲು ನಾನು ಸ್ವಲ್ಪವಾದರೂ ಭಾಷಣ ಕಲಿಯುವುದು ಅನಿವಾರ್ಯವಾಯಿತು. ಹೀಗೆ ಅಣ್ಣನನ್ನು ಮೆಚ್ಚಿಸುವಂತಹ ಭಾಷಣ ಅವನೆದುರು ಮಾಡಬೇಕೆಂದು ಹಂಬಲಿಸುತ್ತಿದ್ದೆ.
ಆಮೇಲೆ ರಾಜ್ಯದಾದ್ಯಂತ ಭಾಷಣಕ್ಕೆ ಹೋದೆ; ಆದರೆ ಅಣ್ಣನ ಎದುರು ಭಾಷಣ ಮಾಡಲು ಧೈರ್ಯ ಬರಲೇ ಇಲ್ಲ. ಆತ ಎದುರು ಕುಳಿತಿದ್ದಾನೆಂದರೆ ವಾಲಿಯೆದುರು ಶಸ್ತ್ರ ಹಿಡಿದು ನಿಂತಂತೆ; ಅರ್ಧ ಶಕ್ತಿ ಪಾತಾಳಕ್ಕೆ ಇಳಿಯುತ್ತಿತ್ತು. ಬೇರೆಯವರಿಂದ ಕೇಳಿ ಆತ ಬಲ್ಲ; ಚೆನ್ನಾಗಿ ಮಾತಾಡಿದ್ಯಂತಲ್ಲೋ! ತಯಾರಿ ಇಲ್ಲದೇ ಮಾತನಾಡಬಾರದು; ಟಿಪ್ಪಣೆ ಮಾಡ್ಕೋಬೇಕು ಅಂತ ಎಚ್ಚರಿಸುತ್ತಿದ್ದ. ಸ್ಪರ್ಧೆಗೆ ಹೋಗುವಾಗ ನಾನು ನಾಲ್ಕಾರು ಪಾಯಿಂಟನ್ನ ಹೇಳಿದರೆ ಮಾತ್ರವೇ ಆತ ಮತ್ತೆ ಏನಾದರೂ ಹೇಳಿಕೊಡುತ್ತಿದ್ದ. ಇಲ್ಲದಿದ್ದರೆ ಯಾವುದಾದರೂ ಪುಸ್ತಕ, ಲೇಖನ ಕೊಟ್ಟು ಓದಲು ಹೇಳುತ್ತಿದ್ದ. ಚೆನ್ನಾಗಿ ಆದರೆ ಖುಷಿಪಡುತ್ತಿದ್ದ. ಈಗಲಾದರೂ ಅಣ್ಣ ಮೆಚ್ಚುವಂತ ಒಂದು ಭಾಷಣ ಮಾಡ್ಬೇಕು ಅಂತ ಅನ್ನಿಸ್ತಿರ್ತದೆ.

No comments:

Post a Comment