ಅಮ್ಮನ ನೆನಪಲ್ಲಿ ಅಣ್ಣನ ದಿನಗಳು..
ನನ್ನ ಅಪ್ಪ ಆರ್ ವಿ ಭಂಡಾರಿ..
ಬಂಡಾಯ ಸಾಹಿತ್ಯದ ಹಲವು ಮುಖಗಳಲ್ಲಿ ನನಗೆ ಆರ್ ವಿ ಭಂಡಾರಿಯವರದ್ದು ಮರೆಯಲಾಗದ ಮುಖ.
ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.
ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.
ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ
ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ
ನೆನಪು 9ಅಮ್ಮನ ನೆನಪಲ್ಲಿ ಅಣ್ಣನ ದಿನಗಳು
ನಾವೆಲ್ಲ ಮಕ್ಕಳು ಅವಳನ್ನು ಕರೆಯುತ್ತಿದ್ದುದೇ ಅಕ್ಕ ಎಂದು.
ತಾಯಿಗೆ ಆಯಿ, ಅವ್ವ ಎಂದು ಕರೆವ ರೂಢಿ ಸಾಮಾನ್ಯವಾಗಿದೆ. ಅಮ್ಮ ಎಂದು ಹಳ್ಳಿಯಲ್ಲಿ ಇತ್ತೀಚೆಗೆ- ಸ್ವಲ್ಪ ನಗರದ ಗಾಳಿ ಬೀಸಿದ ಮೇಲೆ-ಕರೆಯುವ ಪರಿಪಾಠ. ಆಯಿ ಎಂದು ಕರೆಯುವುದೇ ಹೆಚ್ಚು.
ಆದರೆ ನಾವೆಲ್ಲ ಅಜ್ಜಿಗೆ ‘ಆಯಿ’ ಎಂದು ಕರೆಯುತ್ತಿದ್ದೆವು. ಯಾಕೆಂದರೆ ಅಣ್ಣ (ತಂದೆ) ಅವಳಿಗೆ ಆಯಿ ಎಂದು ಕರೆಯುತ್ತಿದದ್ದನ್ನು ನಾವೂ ಅನುಕರಿಸಬೇಕು.
ಅಕ್ಕ ಎಂದು ಕರೆದದ್ದು ಯಾಕೆ ಗೊತ್ತಿಲ್ಲ. ತಾಯಿಯ ಹೆಸರು ‘ಸುಬ್ಬಿ’ ಎಂದಾದರೂ ಇಡೀ ಊರಿಗೆ ಆಕೆ ‘ದೊಡ್ಡಕ್ಕ’. ಅವರ ತಾಯಿ ಮನೆಯಲ್ಲಿ, ನಮ್ಮ ಕೇರಿಯಲ್ಲಿ, ಊರಲ್ಲಿ ಜಾತಿ ಭೇದವಿಲ್ಲದೆ ಈಕೆ ‘ದೊಡ್ಡಕ್ಕ’ ಎಂದೇ ಪ್ರಸಿದ್ದ. ಕೆಲವು ಬೆರಳೆಣಿಕೆಯಷ್ಟು ಮಂದಿ ‘ಸುಬ್ಬಕ್ಕ’ ಎನ್ನುತ್ತಿದ್ದರು. ಬಹುಶಃ ಊರಿಗೆ ದೊಡ್ಡಕ್ಕನಾದವಳು ನಮಗೆ ಅಕ್ಕನಾಗಿರಬೇಕು.
ನಿಜವಾದ ಅರ್ಥದಲ್ಲಿ ಆಕೆ ದೊಡ್ಡಕ್ಕನೇ ಆಗಿದ್ದಳು. ಅವಳ ಕಾಳಜಿ, ಮುಗ್ದತೆ, ಕಷ್ಟ ಸಹಿಷ್ಣುತೆ, ಸಮಾಧಾನದ ಮನಸ್ಥಿತಿಯಿಂದಾಗಿಯೇ ಅವಳನ್ನು ದೊಡ್ಡಕ್ಕ ಎಂದು ಒಪ್ಪಿಕೊಳ್ಳುವಂತೆ ಮಾಡಿರಬೇಕು. ಮೂಲತಃ ಅವನ ಕುಟುಂಬದಲ್ಲಿ ಈಕೆ ಹಿರಿಯವಳು. ಬೆನ್ನಿಗೆ 5 ಜನ ತಂಗಿ, 5 ಜನ ತಮ್ಮಂದಿರು.
ನನ್ನ ಅಜ್ಜ-ತಾಯಿಯ ಅಪ್ಪ-ಸುಬ್ರಾಯ ಭಂಡಾರಿ. ಆ ಕಾಲದ ಪಂಚವಾದ್ಯದ ಅದ್ಭುತ ಕಲಾವಿದ ಎಂದು ಹೆಸರು ಗಳಿಸಿದವನು. ಸಣ್ಣ ಭೂಮಿ, ಅಂತಹ ಸಂಪಾದನೆಯೇನೂ ಇಲ್ಲ. ಬಡತನ ಮನೆಯನ್ನಾಳುತ್ತಿದ್ದಾಗ ಆ ಕುಟುಂಬದ ಹಿರಿಯ ಮಗಳು ಎಂಥಾ ಸುಖದಲ್ಲಿ ಬದುಕಲು ಸಾದ್ಯ? ಮೇಲಿಂದ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡಳು. ಹಾಗೂ ಹೀಗೂ ನಾಲ್ಕನೇ ತರಗತಿವರೆಗೂ ಹೋದಳು. ಅಲ್ಲಿಂದ ದುಡಿಯೋದಕ್ಕೆ ಪ್ರಾರಂಭಿಸಿದಳು. ಕೈಕಾಲು ಗಟ್ಟಿ ಇರೋವರೆಗೆ ದುಡಿತಾನೇ ಇದ್ದಳು. ಆದರೆ ಈಗ ದುಡಿಯಬೇಕಾಗಿರಲಿಲ್ಲ. ಕುಳಿತು ಉಣ್ಣಬೇಕಾದ ದಿನ ಇದು. ಆದರೆ ಕುಳಿತು ಉಣ್ಣೋ ಮನಸ್ಸಿಲ್ಲದೆ ಹೊರಟು ಹೋದಳು.
ಹಾಗೆ ನೋಡಿದರೆ ಅಣ್ಣ ಮತ್ತು ಅಕ್ಕನ ಸ್ವಭಾವ ಕೆಲವು ಸಂದರ್ಭದಲ್ಲಿ ವಿರುದ್ಧಾತ್ಮಕವಾದದ್ದು. ಮಕ್ಕಳನ್ನು ಪ್ರೀತಿಸೋದು, ಯಾರಿಗೂ ಅನ್ಯಾಯ ಮಾಡಬಾರದು, ಕೈಲಾದಷ್ಟು ಸಹಾಯ ಮಾಡಬೇಕು, ನಾವು ದುಡಿದದ್ದು ನಾವು ತಿನ್ನಬೇಕು… ಅನ್ನೋದರಲ್ಲಿ ಇಬ್ಬರದೂ ಒಂದೇ ಥೇರಿ.
ಆದರೆ ಅಣ್ಣ ಸಮಾಜ ಕಟ್ಟೋದು ಮುಖ್ಯ ಅಂತ ಮನೆಯ ಆಚೆಯ ಕಾರ್ಯಕ್ಷೇತ್ರ ಆಯ್ಕೆ ಮಾಡಿಕೊಂಡವನು. ಅಕ್ಕ ಮನೆ ಸರಿಯಾಗಿ ಕಟ್ಟದೆ, ಇನ್ನೇನು ಸಮಾಜ ಕಟ್ಟೋದು ಅಂತ ಮನೆ ಬೆಳೆಸುವ ಪ್ರಯತ್ನ ಮಾಡಿದಳು. ಈ ಕಾರಣಕ್ಕಾಗಿ ಇಬ್ಬರ ನಡುವೆ ಆಗಾಗ ಏರು ದನಿಯಲ್ಲಿ ಚರ್ಚೆ ನಡೆಯುತಿತ್ತು.
ನಾನು ಯಾರ ಕಡೆ ಇರಬೇಕು ಅನ್ನೋದೆ ಗೊತ್ತಾಗ್ತಿರಲಿಲ್ಲ. ಈ ವಿಷಯದಲ್ಲಿ ಅಕ್ಕ ಮತ್ತು ಅಣ್ಣ ರಾಜಿ ಆಗ್ಲೇ ಇಲ್ಲ. ಅಣ್ಣ ಸಾಹಿತ್ಯ, ಚಳುವಳಿ, ಪುಸ್ತಕ, ಬರವಣಿಗೆ ಅಂತಾ ತುಂಬಾ ಓಡಾಡ್ತಾ ಇದ್ರು. ಮನೆ ಖರ್ಚಿಗೆ ಅಂತ ತಿಂಗಳಿಗೆ ಸ್ವಲ್ಪ ಹಣ ಕೊಡ್ತಿದ್ದ. ಕಡಿಮೆ ಬಿದ್ರೆ ಅಕ್ಕನೇ ವ್ಯವಸ್ಥೆ ಮಾಡ್ಕೋಬೇಕಾಗಿತ್ತು. ಮನೆಗೆ ಬೇಕಾದ ದಿನಸಿಯನ್ನು ತರೋದಕ್ಕೆ ಒಂದು ಉದ್ರಿ ಅಂಗಡಿ ಗೊತ್ತು ಮಾಡಿದ್ರು. ಉದ್ರಿ ಪಟ್ಟಿ ಬೆಳೆದಿದ್ದೂ ಇದೆ. ಔಷಧಕ್ಕೆ ಹಣ ಕೊಡ್ತಿದ್ರು. ನಮ್ಮ ಶಿಕ್ಷಣಕ್ಕೆ ಹಣ ಕೊಡ್ತಿದ್ರು. ಇಷ್ಟು ಬಿಟ್ರೆ ಅವರು ಮನೆ ಬಗ್ಗೆ ಎನೂ ಕಾಳಜಿ ವಹಿಸಿದವರಲ್ಲ.
ಅಕ್ಕ ಬಡತನದಲ್ಲಿ ಬೆಳೆದವಳು. ಜೀವನ ಪೂರ್ತಿ ಅದನ್ನು ಮೀರುವ ಪ್ರಯತ್ನ ಮಾಡಿದಳು. ಒಂದು ಮನೆ ಕಟ್ಟಬೇಕು, ಅದಕ್ಕೆ ಸಿಮೆಂಟ್ ಮಾಡಬೇಕು, ಸಣ್ಣತೋಟ ಮಾಡ್ಬೇಕು, ನಾಲ್ಕಾರು ಆಕಳು ಕಟ್ಟಬೇಕು, ಮಳೆಗಾಲಕ್ಕೆ ಬೇಕಾಗುವಷ್ಟು ಅಕ್ಕಿ ಮತ್ತು ಸಾಮಾನು ದಾಸ್ತಾನು ಮಾಡಬೇಕು, ಒಂದೆರಡು ತೊಲೆ ಚಿನ್ನದಲ್ಲಿ ಕರಿಮಣಿ ಮಾಡ್ಕೋಬೇಕು, ಸ್ಟೀಲಿನ ಕೊಡಪಾನ ತಕೋಬೇಕು, ಮಕ್ಕಳಿಗೆ ಚೊಲೋ ಅಂಗಿ ತರಬೇಕು…. ಹೀಗೆ ಏನೆಲ್ಲಾ ಸಣ್ಣಪುಟ್ಟ ಕನಸು ಕಾಣ್ತಾ ಇದ್ದಳು. ಆದ್ರೆ ಇದೆಲ್ಲಾ ಯಾಕೆ ಬೇಕು? ಅಂತ ಅಣ್ಣಾ ಕೇಳೋನು.
ನಾನು ನೋಡ್ದ ಹಾಗೆ ಅವಳ ದಿನಚರಿ ಬೆವರಿನ ದಿನಚರಿ ಆಗಿತ್ತು.
ಬೆಳಗ್ಗೆ ಎದ್ದು ಮನೆ ಕೆಲಸ, ಕೊಟ್ಗೆ ಕೆಲಸ ಮುಗಿಸಿ ಮನೆಯವರಿಗೆ ಚಾ ತಿಂಡಿ ಕೊಟ್ಟು ಕಾಡಿಗೆ ಸೊಪ್ಪು ತರಲು ಹೋಗೋದು. ಸೊಪ್ಪು ತಂದು ಹಾಕಿ ಮನೆ ಕೆಲಸ ಮಾಡೋಳು, ಹಿತ್ಲೋಳಿ (ಕಾಯಿಪಲ್ಲೆ) ನೆಡೋದು, ಗುಡ್ಸೋದು… ಅಡಿಗೆ ಮಾಡಿ 1.30-2.00 ಗಂಟೆಗೆ ಊಟ. ನಿದ್ರೆ ಮಾಡ್ತಿರಲಿಲ್ಲ. 2.30-3.00 ಗಂಟೆಗೆ ಅಡ್ಕೆ ಸುಲಿಯೋದಕ್ಕೆ ಹೋಗೋಳು ಅಥವಾ ಬೆಟ್ಟಕ್ಕೆ ಕಟ್ಟಿಗೆ ತರೋದಕ್ಕೆ, 4-5 ಕಿ ಮಿ ಆಚೆಯ ಅಮ್ಮನವರ ಮನೆ ಗುಡ್ಡಕ್ಕೆ ಕರಡ (ಒಣಗಿದ ಹುಲ್ಲು) ತರೋದಕ್ಕೆ ಹೋಗೋಳು.
ವಾಪಾಸು ಬರೋದು ಗೋದೂಳಿ ಮುಹೂರ್ತಕ್ಕೆ. ಮನೆಗೆ ಬಂದ ಮೇಲೆ ಆಕಳ ಕೆಲಸ- ಹುಲ್ಲು, ಅಕ್ಕಚ್ಚು ಕೊಡೋದು, ಒಂದೋ…ಅರ್ಧಪಾವೋ ಹಾಲು ಕೊಡೋ ಒದೆಯೋ ದನವನ್ನು ಕಾಲು ಕಟ್ಟಿಹಾಕಿಕೊಂಡು ಕರೆಯೋದು- ಮತ್ತೆ ರಾತ್ರಿ ಹಗಲು ಬೆಟ್ಟಕ್ಕೆ ಹೋದಾಗ ಕಾಲಿಗೆ ಹೆಟ್ಟಿದ ಮುಳ್ಳು ತೆಗೆಯೋದು, ತಿಂಗಳ ಬೆಳಕಿದ್ದರೆ ಬಾವಿಯಿಂದ ನೀರು ಎತ್ತಿ ತೆಂಗಿನ ಗಿಡಕ್ಕೆ ಹಾಕೋದು.. ಹೀಗೆ ಬೆಳಗ್ಗೆ 6.00 ರಿಂದ ರಾತ್ರಿ 10.00 ಗಂಟೆವರೆಗೆ ಬಿಡುವಿಲ್ಲದೆ ದುಡಿಮೆ, ಈ ಎಲ್ಲಾ ಕೆಲಸದಲ್ಲಿ ಅತ್ತೆ-ಸೊಸೆ (ಅತ್ತೆ ಅಂದರೆ ತಂದೆಯವರ ತಾಯಿ) ಜೋಡಿಯಾಗಿಯೇ ಪಾಲ್ಗೊಳ್ಳುತ್ತಿದ್ರು. ತನ್ನ 50-55 ವರ್ಷದ ವರೆಗೂ ಇದೇ ವೇಳಾ ಪಟ್ಟಿ. ಆ ಮೇಲೆ ಅನಾರೋಗ್ಯದಿಂದ ಇಷ್ಟೊಂದು ದುಡಿತ ಸಾಧ್ಯ ಆಗ್ತಿರಲಿಲ್ಲ.
ಅಕ್ಕನ ತಂಗಿಯರು ಸ್ವಲ್ಪ ಒಳ್ಳೆ ಆರ್ಥಿಕ ಸ್ಥಿತಿಯಲ್ಲಿದ್ದವರು. ತನ್ನ ಗಂಡ ಶಾಲೆ ಮಾಸ್ತರ ಆದ್ರೂ ಬಡತನದಲ್ಲಿ ಈಕೆಯೇ ದೊಡ್ಡಕ್ಕ. ಅಪ್ಪ ಮದುವೆಗೆ ಮಾಡಿಸಿಕೊಟ್ಟ ಬಿಳಿ ಹರಳಿನ ಕುಡುಕು (ಬೆಂಡೋಲೆ), ಎರಡು ಚಿನ್ನದ ಬಳೆ, ಆತ ಅಳಿಯನಿಗೆ ಹಾಕಿದ ಒಂದು ಉಂಗುರ, ತಾಳಿ ಗುಂಡು ಬಿಟ್ರೆ ಬೇರೆ ಚಿನ್ನ ಇರಲಿಲ್ಲ.
ಅವಳು ಆಮೇಲೆ ಒಂದು ಎಮ್ಮೆ ಸಾಕಿ ಹಾಲು ಮಾರಾಟ ಮಾಡಿ ಕೈಗೆ ಎರಡು ಚಿನ್ನದ ಬಳೆ ಮಾಡಿಕೊಂಡಿದ್ಳಂತೆ. ಆದರೆ ಅಣ್ಣ ಮನೆ ಜಾಗ ತಕ್ಕೊಳ್ಳುವಾಗ ಎರಡು ಬಳೆ, ಎಂ.ಎ. ಮಾಡುವಾಗ ದುಡ್ಡಿಲ್ದೆ ಎರಡು ಬಳೆಯನ್ನು ಬ್ಯಾಂಕಿನಲ್ಲಿಟ್ಟು ಹಣ ತಂದಿದ್ದ. ಆದರೆ ಅದನ್ನು ಬಿಡಿಸಿಕೊಂಡು ಬರಲಾಗದೇ ಅದು ಲಿಲಾವಾಯಿತು. ಇದರಿಂದ ಅವಳ ಜೀವನದ ಅತೀ ದುಃಖದ ಘಟನೆಗೆ ಕಾರಣ ಆಗಿದ್ದ.
ಆದರೆ ನಿವೃತ್ತ ಆದ ಮೇಲೆ ಅಣ್ಣ ಬಂದ ಹಣದಿಂದ 4 ಬಳೆ ಮಾಡಿಸಿಕೊಟ್ಟಾಗ ಅಂದು ಅನುಭವಿಸಿದ ದುಃಖಕ್ಕಿಂತ 2 ಪಟ್ಟು ಹೆಚ್ಚು ಸಂಭ್ರಮ ಪಟ್ಟಿದ್ದಳು. ನನಗೆ ಗೊತ್ತಿರೋ ಹಾಗೆ ಊರಿನ ಅನೇಕ ಹೆಂಗಸ್ರು ಮಾಡಿಕೊಂಡ ಹಾಗೆ, ತನ್ನ ತಂಗಿಯರ ಕೊರಳಲ್ಲಿ ಇರುವ ಹಾಗೆ ಒಂದು ಚಿನ್ನದ ಕರಿಮಣಿ ಗಂಡ ಮಾಡಿಸಿಕೊಡ್ಬೇಕು ಅಂತ ಕನಸು ಕಂಡಳು. ಆದರೆ ಅಣ್ಣನಿಂದ ಅದಾಗ್ಲಿಲ್ಲ. ಯಾಕೆಂದರೆ ಅಷ್ಟು ಹಣ ಇರಲಿಲ್ಲ.
ಕೊನೆಗೆ ಹತ್ತಾರು ವರ್ಷ ಅಡ್ಕೆ ಸುಲಿದು, ಮನೆಯಲ್ಲಾದ ಗೊಬ್ಬರ ಬೇರೆ ಜನಕ್ಕೆ ಮಾರಾಟ ಮಾಡಿ ಒಂದು ಚಿನ್ನದ ಕರಿಮಣಿ, ಇನ್ನೊಂದು ಕುತ್ತುಂಬ್ರಿಸರ ಮಾಡಿ ಕೊಂಡಿದ್ದಳು. ಬಿಸಿನೀರು ತಾಗಿದ್ರೆ ಹಾಳಾಗಿ ಹೋಗಬಹುದು ಅಂತ ಸ್ನಾನದ ಸಂದರ್ಭದಲ್ಲಿ ನೀರಿಗೆ ತಾಗಿಸ್ತಿರಲಿಲ್ಲ. ಎಲ್ಲೋ ದೂರ ಹೋಗುವಾಗ ಮಾತ್ರ ಹಾಕಿಕೊಳ್ಳುತ್ತಿದ್ದಳು. ಆದರೆ ಇನ್ನಾರ್ದೋ ಕುತ್ತಿಗೆಯಲ್ಲಿ ಹವಳದ ಸರ ನೋಡಿ ಖಿನ್ನಳಾಗೋಳು.
ಗಂಡ ಹೊಸ ಹೊಸ ಸೀರೆ ತಂದ ಸುದ್ದಿ ಗೆಳತಿಯರು ಹೇಳಿ ನಿನ್ನ ಗಂಡ ತರೋದೇ ಇಲ್ವಾ? ಎಂದು ಚುಚ್ಚಿದಾಗ ಖಿನ್ನವಾಗಿ ಮನೆಗೆ ಬರೋಳು. ಕೊನೆಗೂ ಒಂದು ಹವಳದ ಸರ ಹಾಕ್ಬೇಕು ಅನ್ನೋ ಆಸೆ ಈಡೇರಲಿಲ್ಲ. ನಾನು ನೌಕರಿ ಮಾಡಿದ್ಮೇಲೆ ಹವಳದ ಸರ ಮಾಡಿಕೊಡ್ತೇನೆ ಎಂದಾಗ ನಯವಾಗಿಯೇ ತಿರಸ್ಕರಿಸಿದಳು. ಯಾಕೆಂದರೆ ಅಷ್ಟರೊಳಗೆ ಆಕೆ ನಮ್ಮ ಥೇರಿಗೆ ಬಂದು ಮುಟ್ಟಿದ್ದಳು.
ಅವಳು ನೋಡೋದಕ್ಕೂ ಅಷ್ಟೊಂದು ಸುಂದರ. ಬೆಳ್ಳಗೆ, ಎತ್ತರ ನಿಲುವು, ಆತ್ಮ ವಿಶ್ವಾಸದ ಕಣ್ಣು, ಶಕ್ತಿವಂತ ದೇಹ, ಅವಳ ಬಣ್ಣ ನನಗೆ ಬಂದಿರಲಿಲ್ಲ. ಅವಳ ಜೊತೆ ಹೋದಾಗೆಲ್ಲಾ ನಿನ್ನ ಬಣ್ಣ ನಿನ್ನ ಮಕ್ಕಳಿಗೆ ಬರ್ಲಿಲ್ಲಾ ಎಂದು ಹೇಳೋರು. ಎಲ್ಲಾ ಅಪ್ಪಂದೇ ಬಣ್ಣ ಅನ್ನೋರು. ಒಂದಾದರೂ ಬೆಳ್ಳಗಿ ಮಕ್ಕಳಿದ್ರೆ ಅಂತ ಪಾಪ ಎಷ್ಟು ಹಂಬಲಿಸಿದಳು. ಬೆಳ್ಳಗಾಗೋದಕ್ಕೆ ಏನಾದರೂ ಔಷಧ ಇದ್ರೆ ಅದನ್ನು ಹಚ್ಚಿ ಬೆಳ್ಳಗಾಗಿ ತೋರ್ತ್ಸಿದ್ದೆ. ಆದ್ರೆ ಸಾಧ್ಯ ಆಗಲೇ ಇಲ್ಲ. ಆದ್ರೆ ಕೊನೆಕೊನೆಗೆ ಅವಳೂ ಬಣ್ಣದ ಕಡೆ ಗಮನ ಕೊಟ್ಟಿಲ್ಲ.
ನಾನು ಅಣ್ಣನ ಹಾಗೆ ಕಾರ್ಯಕ್ರಮ, ಸಂಘಟನೆ ಅಂತ ಓಡಾಡ್ತಿದ್ದ ಬಗ್ಗೆ ಆಕೆಯ ಆಕ್ಷೇಪ ಇದ್ದೇ ಇತ್ತು. ಅಪ್ಪನ ದಾರಿನೇ ಹಿಡಿತಿದ್ದಾನೆ ಅಂತ ಬೈತಾ ಇದ್ದರು. ಓದಿ ನೌಕರಿ ಮಾಡಿ ಹೊಸ ಮನೆ ಕಟ್ಟು ಅಂತ ಆಸೆ ಪಡೋಳು.ಯಾಕೆಂದರೆ ಈ ಮನೆ ಮಣ್ಣಿಂದು. ಕಂಡಕಂಡಲ್ಲಿ ಒರಲೆ ಹುತ್ತ ಏಳೋದು. ಹಂಚಿನ ಮನೆ ಆಗಿದ್ದರಿಂದ ಮಳೆಗಾಲದಲ್ಲಿ ಸೋರೋದು. ನಾನೊಂದು ಮನೆ ಕಟ್ಟಿದ್ರೆ “ಸುಬ್ಬಿ ಅಥವಾ ಸುಬ್ಬಕ್ಕ” ಅಂತ್ಲೇ ಹೆಸರಿಡ್ಬೇಕು ಅಂದ್ಕೊಂಡಿದ್ದೆ.
ನಾನು ಕಾಲೇಜು ದಿನದಲ್ಲಿ ನಾಟಕ, S.F.I. ಅಂತ ಓಡಾಡುತ್ತಿದ್ದಾಗ ಖಿನ್ನಳಾಗಿ ನೋಡೋಳು. ಎಂ.ಎ. ಮಾಡೋದಕ್ಕೆ ಹೋದಾಗ ಖುಷಿಯಾಗಿದ್ದಳು. ಪೂರ್ಣಾವಧಿ ಕಾರ್ಯಕರ್ತನಾಗಿ ಓಡಾಡುವಾಗ ಅವಳೆದುರು ಹೆದರುತ್ತಲೇ ಇದ್ದೆ. ಒಂದು ದ್ವಂದ್ವ ಕಾಡೋದಕ್ಕೆ ಪ್ರಾರಂಭ ಆಗಿತ್ತು. ನೌಕರಿ ಮಾಡಿ ಒಳ್ಳೆ ಬದುಕು ಕಟ್ಟಬೇಕೆಂಬ ತಾಯಿಯ ಆಸೆ ಪೂರೈಸಬೇಕಾ ಅಥವಾ ಅಣ್ಣ ಹೇಳುವ ಹಾಗೆ ಇಂತಹ ನೂರಾರು ತಾಯಿಯರ ಮನೆ-ಮಠ, ಅನ್ನ ಇಲ್ಲದೆ ನರಳುತ್ತಿರುವ ಸ್ಥಿತಿಯಿಂದ ಮೇಲೆತ್ತುವ ಕನಸಿನೊಂದಿಗೆ ಹೊರಟ ಸಂಘಟನೆಯ ಹೋರಾಟದಲ್ಲಿ ಪಾಲ್ಗೊಳ್ಳಬೇಕಾ? ಎನ್ನುವುದು.
ಇಂದು ಅಕ್ಕನಿಗೆಂದು ಮನೆ ಕಟ್ಟಿಕೊಡಬಹುದಾಗಿತ್ತು. ಆದರೆ ಆಕೆ ಈಗ ಇಲ್ಲ. ಅವಳ ನೆನಪಿನಲ್ಲಿ ನಾಲ್ಕು ವರ್ಷ ಕಳೆದು ಹೋಯಿತು.
ನನ್ನ ಬಗ್ಗೆ ವಿಶೇಷ ಪ್ರೀತಿ ಅವಳಿಗೆ. ಯಾಕೆಂದರೆ ಒಬ್ಬನೇ ಮಗ, ಇಬ್ಬರು ಅಕ್ಕಂದಿರು. ನಾನು ದೇವರಿಗೆ ಹರಕೆ ಹೊತ್ತಮೇಲೆ ಹುಟ್ಟಿದವನು. ನಾನು ಹುಟ್ಟಿದ ಮೇಲೆ ಮನೆಗೆ ಒಳಿತಾಗಲು ಪ್ರಾರಂಭ ಆಗಿದೆ ಅಂತ ಆಕೆಯ ಬಲವಾದ ನಂಬಿಕೆ. ಒಂದೇ ಮಗ ಆಗಿರೋದ್ರಿಂದ ಒಂದಿನಾನೂ ನನಗೆ ಬಡತನ ಕಾಡದಂತೆ ನೋಡಿಕೊಂಡಳು.
ನನ್ನ ಅಕ್ಕಂದಿರೆ ಸ್ವತಃ ರಾಗಿ ಗಂಜಿ, ತಣ್ಣೆನ್ನ (ರಾತ್ರಿ ಹೆಚ್ಚಾಗಿದ್ದ ಅನ್ನಕ್ಕೆ ನೀರು ಹಾಕಿ ಇಡೋದು) ಕುಡಿದು ನನಗೆ ಅನ್ನ ಹಾಕ್ತಿದ್ದಳು. ನಾನು ಎಂದೂ ಅನ್ನದ ಕೊರತೆ ಆಗಿ ಗಂಜಿ ಕುಡ್ದೋನೇ ಅಲ್ಲ. ಅವಳ ಅನಾರೋಗ್ಯದಲ್ಲಿ ಊಟಮಾಡುವಂತೆ, ವ್ಯಾಯಾಮ ಮಾಡುವಂತೆ ಬೈದು ಒತ್ತಾಯಿಸಿದಾಗೆಲ್ಲ ಹೇಳೋಳು “ಸತ್ಯನಾರಾಯಣನ ಕತೆ ಹೇಳ್ಕೊಂಡು ನಿನ್ನನ್ನ ಪಡ್ದಿದ್ದೇನೆ, ನೀನು ನೋಡಿದ್ರೆ ನಂಗೇ ಬೈತೀಯಾ” ಅಂತಾ ಜೋರಾಗಿ ಹೇಳಿ ನನ್ನನ್ನು ಸುಮ್ಮನಾಗಿಸುತ್ತಿದ್ದಳು.
ಕೊನೆಯ ದಿನಗಳನ್ನು ಆಕೆ ಡಿಮೆನ್ಶಿಯಾದಿಂದ ಬಳಲಿದಳು. ಅಕ್ಕನ ಕುರಿತು ಅಣ್ಣನ ಎದೆಯೊಳಗಿರುವ ಪ್ರೀತಿ ಪೂರ್ಣಪ್ರಕಟವಾಗಿದ್ದು ಆಗಲೇ. ಹೊರಗೆ ಕಾಣುವ ಗಂಭಿರ ವ್ಯಕ್ತಿತ್ವದೊಳಗೆ ಪ್ರೀತಿಯ ತೊರೆ. ಅಕ್ಕನನ್ನು ಮಗುವಾಗಿ ನೋಡಿಕೊಂಡಿದ್ದ. ಆಸ್ಪತ್ರೆ, ಮನೆ ಹೀಗೆ ಬೇಕಾದ ರೀತಿ ಔಷಧಿ. ಒಂದೆರಡು ಬಾರಿ ಅವಳ ಸೀರೆಯನ್ನು ಕೂಡ ತೊಳೆದದ್ದಿದೆ.
ಒಂದು ವೇಳೆ ನಾನು ಮೊದಲೇ ಸತ್ತರೆ ಅವಳನ್ನು ಯಾವುದಕ್ಕೂ ಕೊರತೆ ಆಗದಂತೆ ನೋಡಿಕೋ..ಅವಳ ಹೆಸರಿಗೆ ಪೆನ್ಶನ್ ಬರುವಂತೆ ಮಾಡಿದ್ದೇನೆ.. .. ಬದುಕಿನಲ್ಲಿ ತುಂಬಾ ಕಷ್ಟ ಪಟ್ಟಿದ್ದಾಳೆ. ಅವಳು ನನ್ನ ಆದರ್ಶಕ್ಕಾಗಿ ತನ್ನೆಲ್ಲಾ ಸುಖ ತ್ಯಾಗ ಮಾಡಿದ್ದಾಳೆ. ನಾನು ಆಕೆಯನ್ನು ಇನ್ನಷ್ಟು ಚೆನ್ನಾಗಿ ನೋಡಿಕೊಳ್ಳಬೇಕಾಗಿತ್ತು ಎಂದು ಆತ ಹೇಳುವಾಗ ಕಣ್ಣಲ್ಲಿ ನೀರು ತುಂಬಿಕೊಂಡಿದ್ದು . . . .ನನ್ನ ಕಣ್ಣೆದುರು ಚಿತ್ರದಂತಿದೆ.
ಅಕ್ಕನೂ ಹಾಗೆ; ಅಣ್ಣನನ್ನು ತುಂಬಾ ಹಚ್ಚಿಕೊಂಡಿದ್ದಳು. ಆತ ತೀರಿಕೊಂಡಾಗ ತುಂಬಾ ಇಳಿದು ಹೋದಳು. ಮತ್ತೆ ಆಕೆ ಸುಧಾರಿಸಲೇ ಇಲ್ಲ. ನಮ್ಮನ್ನಗಲಿದಳು.
ಅಕ್ಕ ತೀರಿಕೊಂಡಾಗ ಅವಳ ಕಣ್ಣನ್ನು ರೋಟರಿ ಹಾಸ್ಪಿಟಲ್‍ಗೆ ಕೊಡಲಾಯಿತು. ಅಣ್ಣನೂ ತನ್ನ ಕಣ್ಣನ್ನು ದಾನ ಮಾಡುವಂತೆ ಬರೆದಿಟ್ಟಿದ್ದ. ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. (ಕಾರಣ ಮುಂದೆ ಯಾವಾಗಾದರೂ ಹೇಳ್ತೇನೆ). ಶಿರಸಿಯ ರೋಟರಿ ಆಸ್ಪತ್ರೆಯಿಂದ ಅವರು ಅದನ್ನು ಹುಬ್ಬಳ್ಳಿಯ ಜೋಷಿಯವರ ಕಣ್ಣಿನ ಆಸ್ಪತ್ರೆಗೆ ಕಳುಹಿಸಿದರು. “ಆ ಕಣ್ಣಿನಿಂದ ಇಬ್ಬರ ಬದುಕಿನಲ್ಲಿ ಬೆಳಕು ನೋಡುವಂತಾಯಿತು, ವಂದನೆಗಳು” ಎಂದು ಅಲ್ಲಿಂದ ಒಂದು ಪತ್ರವೂ ಬಂತು.
ಅಕ್ಕನ ಕಣ್ಣು ಈ ಜಗತ್ತನ್ನು ನೋಡುತ್ತಿದೆ. ಆಕೆ ನನ್ನ ನೋಡಿದಂತೆ, ನನ್ನ ಕುಟುಂಬವನ್ನು ನೋಡಿದಂತೆ ನಮ್ಮ ಆದರ್ಶಗಳನ್ನು ನೋಡಿದಂತೆ, ನಾಡಿನ ಮಕ್ಕಳನ್ನೂ ನೋಡುತ್ತಿದ್ದಾಳೆ….. ಆಕೆ ಜೀವಂತ ಇದ್ದಾಳೆ. ತನ್ನ ಹೆಂಡತಿ ಕೊನೆಗೂ ನನ್ನನ್ನು ಪೂರ್ತಿ ಒಪ್ಪಿಕೊಂಡಳು ಅಂತ ಅಣ್ಣ ಕೂಡ ನೋಡ್ತಿರಬಹುದು.
No comments:
Post a Comment