Wednesday, 6 June 2018

ಕೊನೆಗೂ ಆತ ಉಪನ್ಯಾಸಕನಾಗಲೇ ಇಲ್ಲ...ವಿಠ್ಠಲ ಭಂಡಾರಿ

ಕೊನೆಗೂ ಆತ ಉಪನ್ಯಾಸಕನಾಗಲೇ ಇಲ್ಲ..

ನನ್ನ ಅಪ್ಪ ಆರ್ ವಿ ಭಂಡಾರಿ..

ಬಂಡಾಯ ಸಾಹಿತ್ಯದ ಹಲವು ಮುಖಗಳಲ್ಲಿ ನನಗೆ ಆರ್ ವಿ ಭಂಡಾರಿಯವರದ್ದು ಮರೆಯಲಾಗದ ಮುಖ.
ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.
ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.
ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ
ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ
ನೆನಪು 8
ಕೊನೆಗೂ ಆತ ಉಪನ್ಯಾಸಕನಾಗಲೇ ಇಲ್ಲ
ಅಣ್ಣ ಮಾಡಿದ್ದು ಎರಡು ಎಂ.ಎ.
ಒಂದು ಕನ್ನಡ ಸಾಹಿತ್ಯದಲ್ಲಿ, ಇನ್ನೊಂದು ಇಂಗ್ಲೀಷ್ ಸಾಹಿತ್ಯದಲ್ಲಿ; ಸಂಸ್ಕೃತ ಎಂ.ಎ ಯನ್ನು ಒಂದು ವರ್ಷ ಮುಗಿಸಿದ್ದ. ಹಿಂದಿಯ ರಾಷ್ಟ್ರ ಭಾಷಾ ಪರೀಕ್ಷೆ.. ಇನ್ನೂ ಕೆಲವು ಪರೀಕ್ಷೆ ಮುಗಿಸಿದ್ದಾನೆ.
ಕನ್ನಡ ಶಾಲೆಯ ಮಾಸ್ತರು ಹೀಗೆಲ್ಲಾ ಮಾಡುವುದು ಆಗ ಅಪರೂಪವೇ. ಇಷ್ಟೆಲ್ಲಾ ಆದರೂ ಅವರಿಗೆ ಕಾಲೇಜು ಉಪನ್ಯಾಸಕ ಆಗಲು ಸಾಧ್ಯ ಆಗಲಿಲ್ಲ.
ಮೊದಲು ಅವನು ಅರೇಅಂಗಡಿಯ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಆ ಕಾಲದಲ್ಲಿ ಅಣ್ಣ ಶೂದ್ರ ವರ್ಗದ ಸ್ವಾಭಿಮಾನ ಎತ್ತಿ ಹಿಡಿಯುವ, ಅವರ ಮೇಲೆ ಆಗುತ್ತಿರುವ ಮೇಲ್ಜಾತಿಯ ದೌರ್ಜನ್ಯವನ್ನು ಬಯಲಿಗೆಳೆಯುವ ಕೆಲಸವನ್ನು ತನ್ನ ಭಾಷಣ, ಲೇಖನದ ಮೂಲಕ ಮಾಡುತ್ತಿದ್ದ.
ಹಾಗಾಗಿ ಅವನನ್ನು ಹಲವರು ಬ್ರಾಹ್ಮಣ ವಿರೋಧಿ ಎಂದೇ ತಪ್ಪಾಗಿ ಅರ್ಥೈಸುತ್ತಿದ್ದರು. (ಆದರೆ ಅವನನ್ನು ಆಪ್ತವಾಗಿ ಪ್ರೀತಿಸುತ್ತಿದ್ದವರು ಬುದ್ಧಿಶೀಲ ಬ್ರಾಹ್ಮಣರು ತುಂಬಾ ಜನ ಇದ್ದರು). ಅರೇಅಂಗಡಿಯ ಕಾಲೇಜಿನ ಆಡಳಿತ ಸಂಸ್ಥೆಯಲ್ಲಿ ಬಹುತೇಕರು ಬ್ರಾಹ್ಮಣರೇ ಇರುವುದರಿಂದ ಇವನನ್ನು ತೆಗೆದುಕೊಳ್ಳಲು ಒಪ್ಪಲಿಲ್ಲ.
ಈ ಸಂಸ್ಥೆಯೊಂದಿಗೆ ಅವನಿಗೆ ಒಂದು ಸಣ್ಣ ಭಾವನಾತ್ಮಕ ಸಂಬಂಧ ಕೂಡ ಇತ್ತು. ಯಾಕೆಂದರೆ ಏಳನೇ ತರಗತಿ ಮುಗಿದು ಬೇರೆ ಕಡೆ ಶಾಲೆಗೆ ಹೋಗಲು ಸಾಧ್ಯವೇ ಆಗದೆ ಬೇರೆ ಮನೆ ಕೆಲಸಕ್ಕೆ ಹೋಗುತ್ತಿದ್ದಾಗ ಈ ಹೈಸ್ಕೂಲು ಪ್ರಾರಂಭ ಆಯ್ತು. ಈತ ಮೊದಲ ಬ್ಯಾಚಿನ ವಿದ್ಯಾರ್ಥಿ ಆಗಿದ್ದನು. ಇಲ್ಲಿಯ ಶಿಕ್ಷಕರಾದ ಜಿ. ಆರ್ ಭಟ್, ಲೋಕೇಶ್ವರ ಮಾಸ್ತರರು.. ಇವರೆಲ್ಲಾ ಇವನ ಪ್ರೀತಿಯ ಶಿಕ್ಷಕರಾಗಿದ್ದರು. ಈ ಆರ್ ಭಟ್ ಅವರು ಈತನ್ನು ತೆಗೆದುಕೊಳ್ಳು ತುಂಬಾ ಪ್ರಯತ್ನ ಮಾಡಿದ್ದರೂ ಬ್ರಾಹ್ಮಣರ ಲಾಬಿಯಿಂದ ಅದು ಸಾಧ್ಯ ಆಗಲಿಲ್ಲ.
ಇನ್ನೊಮ್ಮೆ ಹೊನ್ನಾವರ ಎಸ್.ಡಿ.ಎಂ. ಕಾಲೇಜಿನಲ್ಲಿ ಕನ್ನಡ ವಿಷಯದ ಉಪನ್ಯಾಸಕ ಹುದ್ದೆಗೆ ಅರ್ಜಿ ಕರೆದಿದ್ದರು. ಪ್ರೊ. ಜಿ. ಎಸ್.ಅವಧಾನಿಯವರ ಒತ್ತಾಯಕ್ಕೆ ಅಣ್ಣನೂ ಅರ್ಜಿ ಹಾಕಿದ್ದ. ಅವನನ್ನೇ ತೆಗೆದುಕೊಳ್ಳಬೇಕೆಂದು ಅವಧಾನಿಯವರು, ಅವರ ಸ್ನೇಹಿತರು ಒತ್ತಾಯ ಹೇರಿದ್ದರು. ಆದರೆ ಕನ್ನಡಕ್ಕೆ ಆಯ್ಕೆಯಾದವರು 4 ಪಿರಿಯಡ್‍ನ್ನು ಸಂಸ್ಕೃತ ವಿಷಯ ಪಾಠ ಮಾಡಬೇಕಾಗಿ ಆಡಳಿತ ಮಂಡಳಿ ಹೇಳಿತು. ಅಣ್ಣನಿಗೆ ಸಂಸ್ಕೃತ ಮಾತನಾಡುವಷ್ಟು ಬರುತ್ತಿರಲಿಲ್ಲ. ಆಗ ಅವಧಾನಿಯವರು ಸಂಸ್ಕೃತವನ್ನು ನಾನೇ ಮಾಡುವುದಾಗಿಯೂ ಆರ್.ವಿ. ಎಲ್ಲಾ ಅವಧಿಯಲ್ಲಿ ಕನ್ನಡವನ್ನೇ ಮಾಡಬಹುದೆಂದು ಹೇಳಿ ಅಣ್ಣನ ಬೆನ್ನೆಲುಬಾಗಿ ನಿಂತರು.
ಆದರೆ ಸಂದರ್ಶನಕ್ಕೆ ಹೊನ್ನಾವರದವರೇ ಆದ ಶ್ರೀಪಾದ ಶೆಟ್ಟಿಯವರಯ ಹಾಜರಾಗಿದ್ದರು. ಆಗತಾನೆ ಅವರು ಎಂ. ಎ ಮುಗಿಸಿಕೊಂಡು ಬಂದಿದ್ದರು. ಆಗ ಅವರ ತಂದೆ ಕೂಡ ತೀರಿಕೊಂಡಿದ್ದರೆಂದು ಕಾಣುತ್ತದೆ. ಅದನ್ನೇ ಮುಂದೊಡ್ಡಿ, ತನ್ನ ಬಡತನವನ್ನು ಪಣಕ್ಕಿಟ್ಟು ಶ್ರೀಪಾದ ಶೆಟ್ಟರು ಕರುಣೆ ಸಂಪಾದಿಸಿದರು. ಅಣ್ಣನ ಬಳಿ ಬಂದು ‘ನಿಮಗಾದರೆ ಕನ್ನಡ ಶಾಲೆಯ ಸಣ್ಣ ನೌಕರಿಯಾದರೂ ಇದೆ. ನನಗೆ ಅದೂ ಇಲ್ಲ. ದಾರಿಯ ಮೇಲೆ ಬೀಳಬೇಕಾಗುತ್ತದೆ. ನೀವು ಇದರಿಂದ ಹಿಂದೆ ಸರಿದರೆ ನನಗೆ ಕೆಲಸ ಸಿಗುತ್ತದೆಂದು ವಿನಂತಿಸಿದರು.” ಅಣ್ಣನಿಗೆ ಬೇರೆ ದಾರಿ ಇರಲಿಲ್ಲ; ಸಂದರ್ಶನ ಮುಗಿಸಿದರು. ಶ್ರೀಪಾದ ಶೆಟ್ಟರೇ ಉಪನ್ಯಾಸಕರಾಗಿ ಆಯ್ಕೆಯೂ ಆದರು.
ಈ ಬಗ್ಗೆ ಅಣ್ಣ ಇನಿತೂ ಬೇಸರ ಮಾಡಿಕೊಳ್ಳಲಿಲ್ಲ. ನನಗಾದರೆ ಸಣ್ಣ ನೌಕರಿಯಾದರೂ ಇದೆ. ಅವರಿಗೆ ಅದೂ ಇಲ್ಲ. ಅವರಾದದ್ದೇ ಒಳ್ಳೆಯದಾಯಿತು ಎಂದು ಖುಷಿಪಟ್ಟರು. ಅಕ್ಕ ಬೇಸರ ಪಟ್ಟಾಗ ಅವಳಿಗೂ ಹೀಗೇ ಸಾಂತ್ವನ ಹೇಳಿದರು.
ಆದರೆ ಶ್ರೀಪಾದ ಶೆಟ್ಟರು ಈ ಕಾಲೇಜಿನಲ್ಲಿ ಉಳಿಯುವ ಬದಲು ಅಂಕೋಲಾ ಕಾಲೇಜಿನಲ್ಲಿ ಅಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿ, ಅಲ್ಲಿ ಆಯ್ಕೆಯಾಗಿ ಹೊನ್ನಾವರ ಕಾಲೇಜಿಗೆ ರಾಜಿನಾಮೆ ಕೊಟ್ಟರು. ಇಲ್ಲಿಯ ಹುದ್ದೆ ಭಂಡಾರಿಗೂ ಇಲ್ಲ; ಶೆಟ್ಟರಿಗೂ ಇಲ್ಲಿ ಎನ್ನುವಂತಾಯಿತು.
ಒಮ್ಮೆ ಶ್ರೀಪಾದ ಶೆಟ್ಟರು ಆಸಕ್ತಿ ವಹಿಸದಿದ್ದರೆ ಅಣ್ಣ ಎಸ್.ಡಿ.ಎಂ ಕಾಲೇಜಿನ ಅಧ್ಯಾಪಕನಾಗಿ ನಿವೃತ್ತನಾಗುತ್ತಿದ್ದ. ಹಾಗಾಗಿದ್ದರೆ ಬಹುಶಃ ಆತನ ಇನ್ನಷ್ಟು ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತಿತ್ತೇನೋ. ಅಥವಾ ಆನಂತರದ ದಿನಗಳಲ್ಲಿ ಸಂಸ್ಥೆಯ ಅಧ್ಯಕ್ಷರು ಬಿಜೆಪಿಯವರಾಗಿದ್ದರಿಂದ ಕೆಲಸ ಮಾಡಲಾಗದೇ ರಾಜಿನಾಮೆಯನ್ನೂ ಕೊಡಬೇಕಾಗುತ್ತಿತ್ತೇನೋ!
ಆಮೇಲೆ ನಾನು ಅಲ್ಲಿಯ ವಿದ್ಯಾರ್ಥಿಯೂ ಆಗಿದ್ದೆ, ಅಣ್ಣನ ಪಾಠವನ್ನು ಕೇಳುವ ಭಾಗ್ಯವಿರುತ್ತಿತ್ತು. ಅಲ್ಲಿಯೇ ಪಾರ್ಟ್ ಟೈಂ ಉಪನ್ಯಾಸಕನಾಗಿ ಸೇರಿಕೊಂಡೆ. ಏನೋ ಪಾಠ ಮಾಡುವಾಗ ಆರ್.ಎನ್ ಶೆಟ್ಟಿಯವರನ್ನು ಟೀಕಿಸಿದೆ ಎಂದು ಆರು ತಿಂಗಳಲ್ಲಿ ಕಾಲೇಜಿನಿಂದ ತೆಗೆದು ಹಾಕಿದರು.

No comments:

Post a Comment