Wednesday, 6 June 2018

ಅಣ್ಣನಿಗೆ ಕೋಳಿ, ಸೋಯಾಬೀನ್ ವ್ಯತ್ಯಾಸವೇ ಗೊತ್ತಾಗಲಿಲ್ಲ....ವಿಠ್ಠಲ ಭಂಡಾರಿ

ಅಣ್ಣನಿಗೆ ಕೋಳಿ, ಸೋಯಾಬೀನ್ ವ್ಯತ್ಯಾಸವೇ ಗೊತ್ತಾಗಲಿಲ್ಲ..

ನನ್ನ ಅಪ್ಪ ಆರ್ ವಿ ಭಂಡಾರಿ..

ಬಂಡಾಯ ಸಾಹಿತ್ಯದ ಹಲವು ಮುಖಗಳಲ್ಲಿ ನನಗೆ ಆರ್ ವಿ ಭಂಡಾರಿಯವರದ್ದು ಮರೆಯಲಾಗದ ಮುಖ.
ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.
ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.
ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ
ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ
ಊಟದಲ್ಲೂ ಅಂತಹ ವೈಯಾರ ಇದ್ದ ಮನುಷ್ಯ ಅಲ್ಲ.
ಗಡಿಬಿಡಿಯಲ್ಲಿ ಊಟ ಮುಗಿಸುತ್ತಿದ್ದ. ಅವನೊಂದಿಗೆ ಊಟಕ್ಕೆ ಕುಳಿತವರ ಅರ್ಧ ಊಟ ಮುಗಿಸುತ್ತಿದ್ದಂತೆ ಈತನದು ಊಟ ಮಾಡಿ ಕೈ ತೊಳೆದು ಮುಗಿಯುತ್ತಿತ್ತು.
ಅಷ್ಟು ಜೋರು ಊಟ ಮಾಡಿದರೆ ಮನೆಗೆ ಊಟಕ್ಕೆ ಬಂದವರಿಗೆ ಮುಜುಗರ ಆಗಬಹುದೆಂದು ಎಷ್ಟೇ ಎಚ್ಚರಿಕೆ ಕೊಟ್ಟರೂ ಊಟ ಸಾವಕಾಶ ಆಗುತ್ತಿರಲಿಲ್ಲ. ಸಾಹಿತ್ಯ-ಸಂಘಟನೆಯವರಾಗಿದ್ದರೆ ಊಟ ಆದ ಮೇಲೂ ಕುಳಿತು ಚರ್ಚಿಸುತ್ತಿದ್ದ. ಖಾಲಿ ನೆಂಟರಾಗಿದ್ದರೆ ‘ನೀವು ಸಾವಕಾಶ ಊಟ ಮಾಡಿ, ನಾನು ಕೈತೊಳೆದುಕೊಳ್ಳುತ್ತೇನೆ’ ಎಂದು ಹೇಳಿ ಎದ್ದು ಹೋಗುತ್ತಿದ್ದ.
ಊಟಕ್ಕೆ ಏನೇ ಮಾಡಿದರೂ ಯಾವ ತಕರಾರೂ ಇಲ್ಲ. ಆದರೆ ಬೇಳೆ-ತರಕಾರಿ ಇಲ್ಲದ ಸಾರು ಮಾತ್ರ ಮಾಡಬಾರದಾಗಿತ್ತು. ಹಾಗೆ ಪದಾರ್ಥಕ್ಕೆ ಬೆಲ್ಲ ಹಾಕಬಾರದಾಗಿತ್ತು. ಅದರಲ್ಲೂ ಯಾರಾದರೂ ಅತಿಥಿಗಳು ಬಂದಾಗಲಂತೂ ಮೀನು, ಕೋಳಿ ಅಥವಾ ತರಕಾರಿ ಹಾಕಿದ ಸಾರೇ ಆಗಬೇಕು. ಊಟದ ಕೊನೆಗೆ ಬಟ್ಟಲ ತುಂಬಾ ತಂಬಳಿ ಅಥವಾ ಮಜ್ಜಿಗೆ ಹಾಕಿಕೊಂಡು ಕುಡಿದನೆಂದರೆ ಊಟ ಮುಗಿದಂತೆ.
ಒಮ್ಮೊಮ್ಮೆ ಓದಿದ್ದನ್ನೋ ಮುಂದೆ ಬರೆಯುವುದನ್ನೋ ಯೋಚನೆ ಮಾಡುತ್ತಾ ಮುಕ್ಕಾಲು ಪಾತ್ರೆ ತಂಬಳಿ ಕುಡಿದು ಬಿಡುತ್ತಿದ್ದ. ಕೊನೆಗೆ ಕೇಳಿದರೆ ಹೌದಾ? ನನಗೆ ಗೋತ್ತೇ ಆಗಲಿಲ್ಲವೆಂದು ಮುಖ ಪೆಚ್ಚು ಮಾಡಿಕೊಳ್ಳುತ್ತಿದ್ದ.
ಆತ ಎಷ್ಟು ಯೋಚನಾ ಮಗ್ನ ಆಗುತ್ತಿದ್ದನೆಂದರೆ ಊಟ ಆದ ಮೇಲೆ ತಮಾಷೆಗಾಗಿ ಏನು ಊಟ ಮಾಡಿದೆ? ಏನು ಸಾರು ಎಂದು ಕೇಳಿದರೆ ನೆನಪಿಲ್ಲದೆ ನಗುತ್ತಿದ್ದ. ನಮಗೆ ಇದೇ ತಮಾಷೆಯ ವಸ್ತುವಾಗಿತ್ತು. ಮುಸಿಮುಸಿ ನಗುತ್ತಿದ್ದೆವು. ಒಮ್ಮೊಮ್ಮೆ ಪದಾರ್ಥಕ್ಕೆ ಉಪ್ಪು ಹೆಚ್ಚಾಗಿದೆ ಎನ್ನುತ್ತಿದ್ದ. ಆದಿನ ಉಪ್ಪೇ ಆಗಿರುತ್ತಿರಲಿಲ್ಲ; ಆತ ಚಪ್ಪೆ ಎಂದ ದಿನ ಚಪ್ಪೇ ಆಗುತ್ತಿರಲಿಲ್ಲ. ಆದರೆ ನಮ್ಮ ಅತ್ತೆಯ ಗಂಡ (ತಂದೆಯವರ ತಂಗಿಯ ಗಂಡ) ಯಾವಾಗಲೂ ಊಟ ಮಾಡುವಾಗ ಏನಾದರೂ ತಕರಾರಿಲ್ಲದೇ- ಚಪ್ಪೆ..ಉಪ್ಪು..ಬೆಂದಿಲ್ಲ..ಅನ್ನ ಕರಗಿದೆ..ಇತ್ಯಾದಿ- ಉಣ್ಣುತ್ತಿರಲಿಲ್ಲ. “ನನ್ನ ಅಣ್ಣನ್ನು ನೋಡಿ ಕಲಿಯಿರಿ. ಒಂದಿನವಾದರೂ ತಕರಾರು ಮಾಡಿದ್ದಿದೆಯಾ ನಿಮ್ಮಂತೆ? ಅಂಥವರಿಗೆ ಅಡಿಗೆ ಮಾಡಿ ಹಾಕುವುದು ಖುಷಿ.” ಎಂದು ಬೈದಾಗ ಆತ “ನಿನ್ನಣ್ಣನಿಗೆ ನಾಲಿಗೆ ರುಚಿ ಎಂದರೆ ಏನೆಂದು ಗೊತ್ತಿರಬೇಕಲ್ಲಾ. ಹಾಕಿದ್ದೆಲ್ಲಾ ತಿನ್ನುತ್ತಾನೆ.” ಎಂದು ತಮಾಷೆ ಮಾಡುತ್ತಿದ್ದ.
ಒಮ್ಮೆ ಇನ್ನೊಂದು ತಮಾಷೆ ನಡೆಯಿತು.
ಮನೆಯಲ್ಲಿ ಕೋಳಿ ಪದಾರ್ಥ (ಸಾರು) ಮಾಡಿದ್ದರು. ಊಟ ಮಾಡುವಾಗ ಆಗಾಗ ಕೋಳಿ ಪೀಸನ್ನು ಬೆಕ್ಕಿಗೆ ಹಾಕುತ್ತಲೇ ಇದ್ದ. ಹಾಕಿದ್ದರಲ್ಲಿ ಬಹುಭಾಗ ಬೆಕ್ಕಿನ ಪಾಲಾಯ್ತು. ಊಟ ಮುಗಿಸಿ ಹೊರ ಬಂದವ ಸಿಟ್ಟಿನಲ್ಲಿಯೇ ಇದ್ದ. ಯಾಕೆ ಗೊತ್ತಾಗಲಿಲ್ಲ. ಕೋಳಿ ಸಾರು ಮಾಡಿದಾಗ ಚೆನ್ನಾಗಿದೆ ಎಂದು ಯಾವಾಗಲಾದರೂ ಹೇಳುವ ಕ್ರಮ ಇತ್ತು.
ಮಾಧವಿ ಮನೆಯಲ್ಲಿದ್ದಾಗ ಕೋಳಿ ಸಾರಿಗೂ ಬೆಲ್ಲ ಹಾಕಿ ಬಿಡುತ್ತಾಳೆಂಬ ಸಂಶಯ ಅವನಿಗೆ ಇದ್ದೇ ಇತ್ತು. ಆಕೆ ಯಾವಾಗಲೂ ಎಲ್ಲಾ ಪದಾರ್ಥಕ್ಕೂ ಬೆಲ್ಲ ಹಾಕುತ್ತಾಳಾದರಿಂದ ಇದಕ್ಕೂ ಹಾಕದೇ ಮಾಡುತ್ತಾಳೆಯೇ ಎಂಬ ತರ್ಕ ಆತನನ್ನು ಕಾಡುತ್ತಿತ್ತು. ಮಾಧವಿ ಏನೇ ಮಾಡಿದರೂ ಸ್ವಲ್ಪ ಸಿಹಿಯಾಗಿದೆ ಎಂದೇ ಹೇಳುತ್ತಿದ್ದ. ಆದರೆ ದೊಡ್ಡಕ್ಕ ಇನ್ನಕ್ಕ ಪದಾರ್ಥಕ್ಕೆ ಬೆಲ್ಲ ಹಾಕಿದರೂ ಆಕೆ ಹಾಕುವುದಿಲ್ಲ ಎಂಬ ಬಲವಾದ ನಂಬಿಕೆಯಿಂದ ಪದಾರ್ಥ ರುಚಿಯಾಗಿದೆ ಎಂದೇ ಹೇಳುತ್ತಿದ್ದ.
ನಾನು ಕೋಳಿ ಸಾರಿನ ಪ್ರಕರಣ ಹೇಳುತ್ತಿದ್ದವನು ಎಲ್ಲೋ ಹೋದೆ… ಆತ ಸಿಟ್ಟುಗೊಂಡಿದ್ದು ಯಾಕೆಂದು ಆನಂತರ ತಿಳಿದು ನಕ್ಕುನಕ್ಕು ಸಾಕಾಯಿತು. ಆತನ ಬಾಯಲ್ಲಿರುವುದು ಹಲ್ಲು ಸೆಟ್ಟಾಗಿರುವುದರಿಂದ(ಕೃತಕ ಹಲ್ಲು) ಜಗಿಯಲು ಆಗುವುದಿಲ್ಲವೆಂದು ನಾವು ಎಲುಬಿಲ್ಲದ ಮೆದುವಾದ ಕೋಳಿಪೀಸನ್ನು ಹಾಕಿದ್ದೆವು. ಆದರೆ ಆತ ಅದನ್ನು ಸೋಯಾಬಿನ್ (ಕೋಳಿ ಮಾಂಸದಂತೆ ಕಾಣುವ ಇದನ್ನು ಹಲವರು ಸಾರಿಗೆ ಹಾಕಿಡುತ್ತಾರೆ ಮಾಂಸ ಒದಗಿದಂತೆ ಕಾಣಬೇಕೆಂದು. ನೀವು ಅದನ್ನು ಮಾಂಸವೆಂದು ತಿಳಿದು ಬಾಯಿಗೆ ಹಾಕಿ ಅಗಿದ ಮೇಲೇ ತಿಳಿಯಬೇಕು. ಇದು ಸೋಯಾಬಿನ್ ಎಂದು) ಎಂದು ತಿಳಿದು ಸಿಟ್ಟಿನಿಂದ ಅದನ್ನೆಲ್ಲ ತೆಗೆದು ಬೆಕ್ಕಿಗೆ ಹಾಕುತ್ತಿದ್ದ.
ಎರಡು ದಿನ ಬಿಟ್ಟು “ಯಾಕೆ ಮೊನ್ನೆ ಕಡಿಮೆ ಕೋಳಿ ತಂದಿದ್ದೀರಿ? ಇನ್ನೊಂದು ಕೆ.ಜಿ. ತರಬಾರದಿತ್ತೇ? ಕೋಳಿಗೆ ಬದಲು ಆ ಸೋಯಾಬಿನ್ ಹಾಕಿದ್ದೀರಿ” ಎಂದು ಬೈದಾಗಲೇ ನಮಗೆ ಗೊತ್ತಾಗಿದ್ದು. ಆತನಿಗೆ ಹಾಕಿದ ಎಲ್ಲಾ ಒಳ್ಳೆಯ ಕೋಳಿಪೀಸನ್ನು ಆತ ಸೋಯಾಬಿನ್ ಎಂದು ತಿಳಿದು ಬೆಕ್ಕಿಗೆ ಹಾಕಿ ಬರೀ ಸಾರು ತಿಂದು ಎದ್ದು ಹೋಗಿದ್ದ. ಇದು ಆತನ ಪಾಕಶಾಸ್ತ್ರ ಪ್ರಾವೀಣ್ಯತೆ. ಬೇರೆ ಮನೆಗೆ ಹೋದಾಗಲಂತೂ ಏನೇ ಹಾಕಿದರೂ ತಲೆತಗ್ಗಿಸಿ ಊಟ ಮಾಡಿ ಬರುತ್ತಿದ್ದ.
ಮನೆಯಲ್ಲಿ ಮೀನು ಸಾರು ಮಾಡಿದ್ದರೂ ಹಾಕಿಕೊಳ್ಳುವುದು ಒಂದೆರಡು ಪೀಸು ಅಷ್ಟೆ. ನಂತರ ಊಟ ಮಾಡುವವರಿಗೆ ಇಲ್ಲದಿದ್ದರೆ ಎಂಬ ಚಿಂತೆ. ತನಗೆ ಕಡಿಮೆ ಆದರೂ ಬೇರೆಯವರಿಗೆ ಹೊಟ್ಟೆ ತುಂಬಾ ಇರಬೇಕನ್ನುವ ಆಶಯ ಆತನದು.
ಮನೆಯಲ್ಲಿ ಯಾರಿಲ್ಲದಿದ್ದರೆ ಆತ ಉಪವಾಸ ಇರುವುದೇ! ಒಂದೇ ಒಂದು ಕಪ್ ಟೀ ಮಾಡಿಕೊಳ್ಳಲೂ ಬರುತ್ತಿರಲಿಲ್ಲ. ಎಲ್ಲಾ ಮಾಡಿ ಟೇಬಲ್ ಮೇಲೆ ಮುಚ್ಚಿಟ್ಟರೆ ಕಷ್ಟಪಟ್ಟು ಬಡಿಸಿಕೊಂಡು ಊಟ ಮಾಡುತ್ತಿದ್ದ ಅಷ್ಟೇ. ಒಲೆ ಒಟ್ಟಲೂ ಬರುತ್ತಿರಲಿಲ್ಲ. ಗ್ಯಾಸ್ ಹಚ್ಚಲೂ ಬರುತ್ತಿರಲಿಲ್ಲ; ಆದರೆ ಹಲವು ವರ್ಷಗಳ ಅನಾರೋಗ್ಯಕ್ಕೆ ತುತ್ತಾಗುವವರೆಗೂ ತನ್ನ ಬಟ್ಟಲನ್ನು ಮತ್ತು ತನ್ನ ಬಟ್ಟೆಯನ್ನು ತಾನೇ ತೊಳೆದುಕೊಳ್ಳುತ್ತಿದ್ದ. ಹಾಗೆ ತೊಳೆದುಕೊಳ್ಳುವಂತೆ ನಮಗೂ ಹೇಳುತ್ತಿದ್ದ. ಆದರೆ ಆಲಸಿಗಳಾದ ನಾವು ಅದನ್ನು ಕೇಳಿಸಿಕೊಳ್ಳಲೇ ಇಲ್ಲ.

No comments:

Post a Comment