Wednesday 6 June 2018

‘ಈ ಮಾಸ್ತರು ಉದ್ಧಾರ ಆಗುದಿಲ್ಲ’ಎಂದು ತಮಾಷೆ ಮಾಡುತ್ತಿದ್ದರು..ನೆನಪು 3 ವಿಠ್ಠಲ ಭಂಡಾರಿ

ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.
ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ
ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ

ನೆನಪು  3
ಕಳ್ಳ ನಾಟಿನ ಮಂಚ
ಕಳ್ಳ ನಾಟೆಂದರೆ ಆತನಿಗೆ ಆಗುತ್ತಿರಲಿಲ್ಲ. ಅವರ ಬದ್ದ ವಿರೋಧಿ ಆತ.
ಕಾಡಿನ ಮಧ್ಯೆಯೇ ಇದ್ದು ಒಂದು ಇಂಚು ಕಟ್ಟಿಗೆಯನ್ನು ಕೂಡ ಆತ ಕಾಡಿನಿಂದ ತರಿಸಿಕೊಳ್ಳುತ್ತಿರಲಿಲ್ಲ. ಏನನ್ನು ಆತ ಸಮಾಜದಲ್ಲಿ ವಿರೋಧಿಸುತ್ತಿದ್ದನೋ ಅದನ್ನು ಮನೆಯಲ್ಲಿಯೂ ವಿರೋಧಿಸುತ್ತಿದ್ದ. ಒಬ್ಬನೇ ಇದ್ದಾಗಲೂ ವಿರೋಧಿಸುತ್ತಿದ್ದ.
ನಮ್ಮ ಮನೆ ಮಣ್ಣಿನ ಗೋಡೆ ಮತ್ತು ಅಡಿಕೆ ದಬ್ಬೆಯ ಅಟ್ಟ ಇತ್ತು. ಅದಕ್ಕೆ ಹಾಕಿದ ಅಡ್ಡಪಟ್ಟಿ ಕೂಡ ಅಡಿಕೆ ಮರದ್ದೆ, 2-3 ವರ್ಷಕ್ಕೆ ಇದನ್ನು ಬದಲಾಯಿಸಲೇಬೇಕು. ಬದಲಾಯಿಸಲು ಅಡಿಕೆ ಮರ ಸೇರಿಸಲು ತೋಟ ಇದ್ದವರ ಮನೆಗೆ ಹೋದಾಗೆಲ್ಲಾ “ಈ ಭಂಡಾರಿ ಮಾಸ್ತರರಿಗೆ ಮಳ್ಳು, ಮಾರಾಟಕ್ಕೆ ಬೇಡ,  ಸ್ವಂತ ಮನೆಗೆ ಜಂಟಿ ಹಾಕುವುದಕ್ಕೂ ನಾಟ (ಕಟ್ಟಿಗೆ ಜಂತಿ) ಬೇಡ ಅನ್ನುತ್ತಾರಲ್ಲ. ಪ್ರತೀ ವರ್ಷ ಮನೆಮನೆ ಅಡ್ಡಾಡುವ ಬದಲು ತಿಂಗಳ ಪಗಾರದಲ್ಲಿ ವರ್ಷಕ್ಕೆ 4-4 ಜಂಟಿ ಹಾಕಿದರೂ ಮುಗಿದು ಹೋಗುತ್ತಿತ್ತು. ಬೇರೆ ಮನೆಗೆ ಕೂಲಿಗೆ ಹೋಗುವವರೂ ಮಾಳಿಗೆ ಜಂತಿ, ಮಂಚ ಮಾಡಿಕೊಂಡಿದ್ದಾರೆ. ಈ ಮಾಸ್ತರು ಉದ್ಧಾರ ಆಗುದಿಲ್ಲ” ಎಂದು ತಮಾಷೆ ಮಾಡುತ್ತಿದ್ದರು.
ಯಾರು ಏನೇ ಹೇಳಿದರೂ ಒಂದೇ ಒಂದು ತುಂಡು ಕಳ್ಳ ನಾಟಾವನ್ನು ಮನೆಗೆ ಸೇರಿಸಲು ಆತ ಒಪ್ಪಲಿಲ್ಲ. ಒಮ್ಮೆ ಆತನ ಸ್ನೇಹಿತರಾದ ಪ್ರೊ. ಬರಗೂರು ರಾಮಚಂದ್ರಪ್ಪ, ಪ್ರೊ. ಚಂಪಾ ಮುಂತಾದವರು ಮನೆಗೆ ಬರುತ್ತಾರೆಂದು ತಿಳಿದಾಗ ಒಂದು ಡೈನಿಂಗ್ ಟೇಬಲ್ ಮಾಡಿಸಲು ತೀರ್ಮಾನಿಸಲಾಯಿತು. ಆತನಿಗೂ ಮೊಣಕಾಲು ನೋವಿರುವುದರಿಂದ ನೆಲಕ್ಕೆ ಕುಳಿತು ಊಟ ಮಾಡುವುದು ಕಷ್ಟವೆನಿಸುತ್ತಿತ್ತಾದ್ದರಿಂದ ಒಪ್ಪಿಗೆಯಂತೂ ಸಿಕ್ಕಿತು.
ಆಗ ಮಾಧವಿ ನೌಕರಿ ಮಾಡುತ್ತಿರುವುದರಿಂದ ಸಣ್ಣ ಆರ್ಥಿಕ ಸಹಾಯವೂ ಅವಳಿಂದ ಸಿಗಬಹುದೆಂಬ ಧೈರ್ಯ ಇತ್ತು. ಆಚಾರಿ ಊರಿನಲ್ಲಿಯೇ ಇದ್ದ. ಕಟ್ಟಿಗೆಯೂ ಊರಿನಲ್ಲಿಯೇ ಇತ್ತು. ನಮ್ಮೂರಿನ ಪಾರೆಸ್ಟ್ರು ಗೌಡರು ಮನೆಗೆ ಬಂದು ‘ಏನಾದರೂ ಫರ್ನಿಚರ್ ಮಾಡಿಕೊಳ್ಳಿ ಮಾಸ್ತರೆ. ನಾವಂತೂ ತಕರಾರು ಮಾಡುವುದಿಲ್ಲ’ ಎಂದು ಹೇಳಿ ಹೋಗಿದ್ದರು.
ಅಕ್ಕನಿಗೆ (ಆಯಿ) ಏನಾದರೂ ಮಾಡಿಸಿಕೊಳ್ಳೋಣ ಎಂಬ ಆಸೆ. ಆದರೆ ಅಣ್ಣ ಒಪ್ಪಲಿಲ್ಲ. ಹೊನ್ನಾವರದ ಮಿಲ್ಲಿನಿಂದ ‘ಪಾಸ್’ ಇರುವ ಕಟ್ಟಿಗೆಯನ್ನೇ ತರಬೇಕೆಂದು ‘ಹಠ’ ಹಿಡಿದ. ಕೊನೆಗೂ ಹಾಗೆಯೇ ಮಾಡಲಾಯಿತು. ಆಚಾರಿ ಬರೆದು ಕೊಟ್ಟ ಸೈಜ್ ಒಂದು, ಅಲ್ಲಿ ಸಿಕ್ಕಿದ್ದೊಂದು.. ಹೀಗೆ ರಾಮಾಯಣವಾದರೂ ಸರಿಯೇ ‘ಪಾಸ್’ ಇದ್ದ ಕಟ್ಟಿಗೆಯಿಂದಲೇ ಒಂದು ಡೈನಿಂಗ್ ಟೇಬಲ್ ಬಂತು. (ಈಗಲೂ ನಮ್ಮ ಮನೆಯಲ್ಲಿರುವುದು ಇದೇ).
ಮಳೆಗಾಲ ಬಂದರೆ ನೆಲವೆಲ್ಲಾ ಥಂಡಿ ಥಂಡಿ. ಖುರ್ಚಿ ಇಟ್ಟಲ್ಲೆಲ್ಲಾ ಕುಳಿ ಬೀಳುತ್ತಿತ್ತು. ಹಾಗಾಗಿ ಖುರ್ಚಿ ಕಾಲಿಗೆ ಬಟ್ಟೆ ಸುತ್ತಿಡುತ್ತಿದ್ದರು; ಕಾಲೊಡೆ ಬಂದ ಆಕಳ ಕಾಲಿಗೆ ಬಟ್ಟೆ ಸುತ್ತಿದಂತೆ. ಮಣ್ಣಿನ ಮನೆ ಯಾರು ಬಂದರೂ ನೆಲಕ್ಕೆ ಮಲಗಬೇಕು, ಒಂದು ಮಂಚ ಮಾಡಿಸಿದರೆ ಹ್ಯಾಗೆ ಎಂಬ ಆಲೋಚನೆ ಮನೆಯಲ್ಲಿ ಪ್ರಸ್ತಾಪ ಆಯಿತು.
ಮಿಲ್ಲಿನಿಂದ ಕಟ್ಟಿಗೆ ತಂದು 8-10 ಸಾವಿರ ಹಣ ಹಾಕಲು ಸಾಧ್ಯವಿಲ್ಲವೆಂದು ಅಲ್ಲಿಗೆ ಕೈ ಬಿಡಲಾಯಿತು. ಆದರೆ ನನ್ನ ಒಬ್ಬ ಸ್ನೇಹಿತ 3-4 ಸಾವಿರ ರೂಪಾಯಿಗಳನ್ನು ನನ್ನಿಂದ ಕೈಗಡ ಪಡೆದಿದ್ದ. ವರ್ಷಗಳಿಂದ ಕೊಟ್ಟಿರಲಿಲ್ಲ. ಮತ್ತೆ ಕೇಳಿದಾಗ ಆತ ತನ್ನ ಅಸಹಾಯಕತೆ ವ್ಯಕ್ತಪಡಿಸಿ ನನ್ನ ಹಣಕ್ಕೆ ಶ್ರದ್ಧಾಂಜಲಿ ಮಾಡ ಹೊರಟ. ಆದರೆ ನನ್ನ ವಿನಯವಾದ ಮಾತು ಕೇಳಿ, ಇಷ್ಟು ಹಣ ಸೇರಿಸಲು ನಾನು ಪಟ್ಟ ಕಷ್ಟವನ್ನೆಲ್ಲ ಕೇಳಿ ಆತನ ಮನಸ್ಸೂ ಕರಗಿರಬೇಕು. ಅದಕ್ಕೆ ಆತ ಪರಿಹಾರ ಸೂಚಿಸಿದ.
ಇತ್ತೀಚೆಗೆ ನಾನು ಮಾಡಿಸಿದ ಕಾಟ್ (ಮಂಚ) ಒಂದಿದೆ. ಅದೂ ‘ಪಾಸ್’ ಕಟ್ಟಿಗೆಯದೆ, ಕೊಟ್ಟ ಹಣಕ್ಕೆ ಬದಲಾಗಿ ಇವನ್ನು ಬೇಕಾದರೆ ಕೋಡುತ್ತೇನೆ ಎಂದ. ಒಳಗೊಳಗೆ ಮಂಚದ ಮೇಲಿನ ಆಸೆಯೂ ಇತ್ತು; ಹಣವೂ ವಾಪಾಸು ಬಂದಂತಾಯಿತು. ಈ ಎರಡು ಖುಷಿಗಾಗಿ ಮಾಧವಿಯನ್ನು ಕೇಳಿದೆ. (ಅರ್ಧದಷ್ಟು ಒತ್ತಾಯ ಅವಳದೇ ಆಗಿತ್ತು.) ಅವಳೂ ಒಪ್ಪಿಗೆ ಕೊಟ್ಟಳು.
ಅಣ್ಣ ಬೆಂಗಳೂರಿಗೆ ಹೋದಾಗ ಮಂಚ ಮನೆ ಸೇರಿತು. ಮಜಬೂತ್ ಮಂಚ, ಇಬ್ಬರೂ ಆರಾಮಾಗಿ ಮಲಗಬಹುದು. ಚೌಕಟ್ಟು ಬಿಟ್ಟರೆ ಉಳಿದೆಲ್ಲ ಹುಳು ಹಿಡಿದ ಕಟ್ಟಿಗೆಯೆ. ಹಾಸಿಗೆ ಹಾಸಿದ ಮೇಲೆ ಅದೇನೂ ಕಾಣುವುದಿಲ್ಲವಲ್ಲ ಎಂದು ಸಮಾಧಾನ ಮಾಡಿಕೊಂಡು ಮನೆಯ ಒಳಕೋಣೆಯಲ್ಲಿ ಹಾಕಿದೆವು. ಗೋಡೆಗೆ ತಾಗಿಸಿದರೆ ಒರಲೆ ಹುತ್ತ ಬೆಳೆಯಬಹುದು; ಮಧ್ಯ ಹಾಕಿದರೆ ಓಡಾಡಲು ಆಗುವುದಿಲ್ಲ; ಮೂಲೆಯಲ್ಲಿ ಹಾಕಿದರೆ ಬಂದವರಿಗೆ ಅದರ ಡಿಸೈನ್ ಕಾಣುವುದಿಲ್ಲ; (ಯಾರಿಗೂ ಕಾಣದಿದ್ದರೆ ತಂದೇನು ಪ್ರಯೋಜನ. ನಮ್ಮ ಅನೇಕ ಬೇಡಿಕೆಗಳು ನೋಡುವ ಜನರಿಗಾಗಿಯೇ ಅಲ್ಲವೇ?) ಅಳೆದು-ಸುರಿದು ಅದರ ಮೇಲೆ ಮಲಗಿ ಟಿ.ವಿ. ನೋಡಲು ಅನುಕೂಲ ಆಗುವಂತೆ ಇಡಲಾಯಿತು.
ಅಣ್ಣನೆದುರು ಯಾರಾದರೂ ಕೇಳಿದರೆ ಹೇಳುವಂತೆಯೂ ಇಲ್ಲ. ಅವನಿಗೆ ಕಾಣದಂತೆ ಏನೇನೋ ಉಪಾಯ ಮಾಡಿದೆವು. ಸಾಮಾನ್ಯವಾಗಿ ಆತ ಇದನ್ನೆಲ್ಲಾ ಗಮನಿಸುತ್ತಿರಲಿಲ್ಲ. ಒಂದು ಸಾಮಾನು ಬಂದರೂ ಗೊತ್ತಾಗುವುದಿಲ್ಲ. ಒಂದು ಸಾಮಾನು ಮನೆಯಿಂದ ಆಚೆಗೆ ಹೋದರೂ ತಿಳಿಯುವುದಿಲ್ಲ. (ಒಂದು ಪುಸ್ತಕ ಆಚೀಚೆ ಆದರೆ ಮಾತ್ರ ತಕ್ಷಣ ಗೊತ್ತಾಗುತ್ತದೆ.)
ಆದರೆ ಒಂದು ದಿನ ಯಾರೋ ಟಿ.ವಿ ನೋಡಲು ಬಂದವರು ಮಂಚ ನೋಡಿ ಸುಮ್ಮನಾಗುವ ಬದಲು “ರೋಹಿದಾಸ ಭಾವ ಮಂಚ ಚೆನ್ನಾಗಿವೆ. ಹೊರಗಿನ ಮಂಚದ ಮೇಲೆ ನೀನು ಮಲಗುವುದಕ್ಕಿಂತ ಒಳಗಿನ ಮಂಚದ ಮೇಲೆ ಮಲಗು” ಎಂದುಬಿಟ್ಟರು. ಆಗ ಆತ ಏನು? ಎತ್ತ? ಎಂದೆಲ್ಲಾ ಕೇಳಿ ವಿಚಾರಿಸಿ ಮಂಕು ಬಡಿದವರಂತೆ ಒಂದೆಡೆ ಕುಳಿತುಬಿಟ್ಟ.
ಸಿಟ್ಟುಗೊಂಡು ಬೈದದ್ದೂ ಆಯಿತು; ಇಂದು ಸುಧಾರಿಸುತ್ತಾನೆ, ನಾಳೆ ಸುಧಾರಿಸುತ್ತಾನೆಂದು ತಿಳಿದರೆ ಹಾಗಾಗಲೇ ಇಲ್ಲ. ಯಾರೊಂದಿಗೂ ಮಾತಿಲ್ಲ. ತಾನು ಈವರೆಗೆ ಕಟ್ಟಿಕೊಂಡಿರುವ ನೈತಿಕತೆಯ ಮೌಲ್ಯವೇ ಕುಸಿದು ಬಿದ್ದಾಗ ಆಗುವ ಆಘಾತವನ್ನು ನಾವೇ ಊಹಿಸಿಕೊಳ್ಳಬೇಕು. ಅವನ ನಂಬಿಕೆ, ಮೌಲ್ಯಕ್ಕೆ ಪೆಟ್ಟು ಕೊಟ್ಟವರು ಬೇರೆ ಯಾರೂ ಅಲ್ಲ. ಶಿಕ್ಷಕಿಯಾದ ಮಗಳು, ಜನಪರ ಸಂಘಟನೆಯಲ್ಲಿ ತೊಡಗಿಕೊಂಡ ಕಮ್ಯುನಿಷ್ಟ ಚಿಂತನೆಯನ್ನು ಪ್ರತಿಪಾದಿಸುವ ಮಗ. ಎಂಥಹ ಭ್ರಮ ನಿರಸನ ಆಗಿರಬೇಕು. ಮನೆಯಲ್ಲಿ ಎಲ್ಲರೂ ಇದ್ದೂ ಆತನಿಗೆ ಯಾರೂ ನನ್ನೊಂದಿಗೆ ಅನ್ನಿಸತೊಡಗಿರಬೇಕು. ಉಸಿರುಗಟ್ಟಿಸುವ ವಾತಾವರಣ. ಅದರ ಬಿಸಿ ನಮಗೂ ತಟ್ಟತೊಡಗಿತು. ಯಾಕಾದರೂ ಈ ಮಂಚ ತಂದೆವು ಅನ್ನಿಸಿತು. ಸುಖದ ಹೊಸ ಕಲ್ಪನೆಗಾಗಿ ಇದ್ದ ಸುಖವನ್ನೂ ಕಳೆದುಕೊಂಡಂತಾಯಿತು.
ಇದೇ ಸಂದರ್ಭದಲ್ಲಿಯೇ ಆತ ‘ಮಂಚ’ ಎನ್ನುವ ಕತೆ ಬರೆದ. ಈ ಕತೆಯ ನಾಯಕ ನಾಗೇಶ ಸಾಯುವ ಕಾಲದಲ್ಲಿ ಮಗಳು ಮಾಡಿಕೊಟ್ಟ ಮಂಚದಲ್ಲಿ ಮಲಗದೇ ಸತ್ತು ಹೋಗುತ್ತಾನೆ. ಅವನಿಗೆ ಹೊಸ ಮಂಚ ಸಾವಿನ ಮಂಚವಾಗುತ್ತದೆ. (ಇದು ಮೀನ್ಪಳ್ದಿ ಸಂಕಲನದಲ್ಲಿವೆ). ಇದು ಅವನ ಕತೆ.
ನನಗೂ ಏನು ಮಾಡಬೇಕೆಂದು ತಿಳಿಯಲಿಲ್ಲ. ಮಂಚಕೊಟ್ಟವನ ಹತ್ತಿರ ಕಟ್ಟಿಗೆಯ ಪಾಸ್ ಕೇಳಿದೆ. ಆತ ಇನ್ನೇನೋ ಕತೆ ಹೇಳಿದ. ಇದು ಪಾಸ್ ಇಲ್ಲದ ಕಟ್ಟಿಗೆಯೆಂದು ಆಗ ಗೊತ್ತಾಯಿತು. ಕೊನೆಗೆ ಹೊನ್ನಾವರದ ಆರ್. ಎಫ್. ಓ ಅವರಲ್ಲಿ ಹೋದೆ. ನಮ್ಮ ಹೋರಾಟ, ವನಮಹೋತ್ಸವ ಇತ್ಯಾದಿಯ ಮೂಲಕ ಅವರು ತುಂಬಾ ಪರಿಚಯದವರು. ಅವರಿಗೆ ನಡೆದ ಕತೆ ಹೇಳಿದೆ. ಅವರು ಹೊಟ್ಟೆ ಹುಣ್ಣಾಗುವಷ್ಟು ನಕ್ಕರು.
ಪ್ರಪಂಚದಲ್ಲಿ ಇಂಥವರೆಲ್ಲ ಇರುತ್ತಾರಲ್ಲಾ ಎಂದು ಖುಷಿಪಟ್ಟರು. ನಿಮ್ಮ ಕುಟುಂಬದ ಬಗ್ಗೆ ಗೌರವ ಮೂಡುತ್ತಿದೆ ಎಂದರು. (ಆಮೇಲೆ ಅವರು ಅಣ್ಣನನ್ನು ಭೇಟಿ ಕೂಡ ಆದರು.) ಅದೆಲ್ಲಾ ಸರಿ ಇದಕ್ಕೇನು ಪರಿಹಾರ ಎಂದು ಕೇಳಿದೆ. ಅವರಿಗೂ ತೋಚಲಿಲ್ಲ. ಮನೆಗೆ ಬಂದು ತುಂಬಿಕೊಂಡು ಹೋದರೆ ಜಗತ್ತಿಗೇ ಸುದ್ದಿ ಆಗಬಹುದು. ಯಾಕೆಂದರೆ ಆರ್.ವಿ. ಭಂಡಾರಿ ಮಾಡಬಹುದಾದ ಸಣ್ಣ ತಪ್ಪಿಗೆ ಇಡೀ ಊರಲ್ಲಿ ಅವನಿಗಾಗದವರು ಹಲವು ವರ್ಷದಿಂದ ಕಾಯುತ್ತಿದ್ದರು.
ಹಾಗೆ ಹೊನ್ನಾವರದ ಕೆಲವು ಪತ್ರಕರ್ತರು ಕೂಡ. ಮತ್ತೇನು ಮಾಡುವುದು.? ನಾನೇ ಪರಿಹಾರ ಹೇಳಿದೆ. ಒಂದಿಷ್ಟು ಹಣವನ್ನು ಮುಂದಿಟ್ಟು ಒಂದು ದಂಡದ ಪಾವತಿ ಹರಿದು ಕೊಡಿ. ಹಣವನ್ನು ಸರ್ಕಾರಕ್ಕೆ ತುಂಬಿ ಎಂದೆ. ಅವರು ಬೇಡವೆಂದರೂ ನನ್ನ ಒತ್ತಾಯಕ್ಕೆ ಒಪ್ಪಿ ಕಟ್ಟಿಗೆಯನ್ನು ಲೆಕ್ಕ ಹಾಕಿ ಅದರ ಮೌಲ್ಯ 1500/- ಮಾತ್ರ ಎಂದು ಹೇಳಿ ಪಾವತಿ ಕೊಟ್ಟರು.
ಅಣ್ಣನಿಗೆ ತಂದು ತೋರಿಸಿದೆ. ಅಲ್ಲಿಂದ ಆತನ ಮನಸ್ಥಿತಿ ಸುಧಾರಿಸಿತು. ನೀನು ಇನ್ನು ಈ ತಪ್ಪು ಮಾಡಬಾರದು ಎಂದು ತಾಕೀತು ಮಾಡಿದ. ಅಲ್ಲಿಗೆ ‘ಮಂಚ’ದ ಕತೆ ಮುಗಿಯಿತು. ಮಿಲ್ಲಿನಿಂದ ತಂದು ಮಾಡಿದ್ದರೆ 4 ಸಾವಿರದೊಳಗೆ ಮುಗಿಯುತ್ತಿತ್ತು. ಆದರೆ ಈಗ 5500/- ರೂ ಖರ್ಚಾಯಿತು. ಈಗಲೂ ಆ ಮಂಚದ ಮೇಲೆ ಮಲಗುವಾಗ ಅಣ್ಣ, ಆತನ ಮುಗ್ದತೆ, ಪ್ರಾಮಾಣಿಕತೆ, ಮೌಲ್ಯಗಳು ನೆನಪಾಗುತ್ತಲೇ ಇರುತ್ತದೆ. ಅಣ್ಣ ದಿನನಿತ್ಯ ನನ್ನೆದುರು ಜೀವಂತವಾಗಿರುತ್ತಾನೆ.

No comments:

Post a Comment