ಇಂತಹ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ನನಗೆ ಬೇಡ..
ನನ್ನ ಅಪ್ಪ ಆರ್ ವಿ ಭಂಡಾರಿ..
ಬಂಡಾಯ ಸಾಹಿತ್ಯದ ಹಲವು ಮುಖಗಳಲ್ಲಿ ನನಗೆ ಆರ್ ವಿ ಭಂಡಾರಿಯವರದ್ದು ಮರೆಯಲಾಗದ ಮುಖ.
ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.
ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.
ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ
ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ
ನೆನಪು: 10
ರಾಜ್ಯೋತ್ಸವ ಪ್ರಶಸ್ತಿ ಶಿಫಾರಸ್ಸಿಗೆ ವಿರೋಧ
ಅಣ್ಣ ಎಂದೂ ಪ್ರಶಸ್ತಿಗಳ ಹಿಂದೆ ಬಿದ್ದವನಲ್ಲ.
ಆ ಮಟ್ಟಿಗೆ ಆತ ಒಬ್ಬ ಸಂತನಂತಿದ್ದ. ಯಾವುದೇ ಪ್ರಶಸ್ತಿಯ ಪ್ರಸ್ತಾವನೆ ಬಂದರೂ ಬೇರೆ ಯಾರನ್ನೋ ತೋರಿಸುತ್ತಿದ್ದ.
‘ಪ್ರತಿಸಲ ನೀನು ಪ್ರಶಸ್ತಿಗೆ ಬೇರೆಯವರನ್ನೇ ಬೆರಳು ಮಾಡಿ ತೋರಿಸುತ್ತೀಯಲ್ಲಾ ಯಾಕೆ?’ ಎಂದು ನಾನು ಹಲವು ಬಾರಿ ಅಸಮಾಧಾನದಲ್ಲಿ ಪ್ರಶ್ನಿಸಿದ್ದಿದೆ.
ಆಗೆಲ್ಲ ಆತ “ನಾನೇನು ಕರ್ನಾಟಕದ ಮೇಜರ್ ರೈಟರ್ ಅಲ್ಲ. ಜಿಲ್ಲೆಯಲ್ಲಿ ಹಿರಿಯ ಇರಬಹುದು. ಆದರೆ ನಾನಿನ್ನೂ ಬರೆಯಬೇಕಾದುದು ಬಹಳ ಇದೆ. ಅದಾದಮೇಲೆ ನೋಡೋಣ. ಹೊಸ ತಲೆಮಾರಿನ ಲೇಖಕರಿಗೆ ಅದು ಮೊದಲು ಸಿಗಬೇಕು. ಬಂದ ಪ್ರಶಸ್ತಿ ನಮ್ಮನ್ನು ಚಿಕ್ಕವರನ್ನಾಗಿಸಬಾರದು.” ಎನ್ನುತ್ತಿದ್ದ. “ನಾನಿನ್ನೂ ಬರೆಯಬೇಕಾದುದು ತುಂಬಾ ಇದೆ; ಈ ಶಾಲೆಯ ಕೆಲಸದಲ್ಲಿ ಅದು ಸಾಧ್ಯವಾಗುತ್ತಿಲ್ಲ’ ಎಂಬ ಕೊರಗು ಅವನಿಗೆ ಇದ್ದೇ ಇತ್ತು.
ಇದೆಲ್ಲದರ ಆಚೆಯೂ ಅವನಿಗೆ ವಾಜಂತ್ರಿ ಪ್ರಶಸ್ತಿ, ಕೊಗ್ರೆ ಶಿಕ್ಷಣ ಪ್ರತಿಷ್ಠಾನ ಪ್ರಶಸ್ತಿ, ರಾಜ್ಯ ಶಿಕ್ಷಣ ಕಲ್ಯಾಣ ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ, ಗೌರೀಶ ಕಾಯ್ಕಿಣಿ ಪ್ರತಿಷ್ಠಾನದ ಪ್ರಶಸ್ತಿ, ಸಿಸು ಸಂಗಮೇಶ ಪ್ರಶಸ್ತಿ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಅಂಬೇಡ್ಕರ್ ಫೆಲೋಶಿಪ್, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಮತ್ತು ವಾರ್ಷಿಕ ಗೌರವ ಪ್ರಶಸ್ತಿ…. ಹೀಗೆ ಹಲವು ಪ್ರಶಸ್ತಿಗಳು ಅವನ ಬದುಕಿನ ಕೊನೆಯ ಹಂತದಲ್ಲಿ ಬಂದಿದ್ದವು.
ಇದ್ಯಾವುದೂ ಅವನು ಒಪ್ಪಿಗೆ ಪಡೆದು ಕೊಟ್ಟಿದ್ದಲ್ಲ. ಹಾಗೇನಾದರೂ ಸಂಘಟಕರು ಮೊದಲೇ ಕೇಳಿದ್ದರೆ ಈತ ಅದನ್ನು ಬೇರೆಯವರಿಗೆ ಕೊಡಿಸುತ್ತಿದ್ದನೇನೋ!!. ಶಿಕ್ಷಕ ಪ್ರಶಸ್ತಿ ಬಂದಾಗ, ಅಕಾಡೆಮಿ ಪ್ರಶಸ್ತಿ ಬಂದಾಗ ಹಲವರು ಅವನಿಗೆ ಸನ್ಮಾನಿಸಲು ಸನ್ಮಾನ ಸಮಾರಂಭ ನಿಗದಿ ಮಾಡಿಕೊಂಡು ಬರುತ್ತಿದ್ದರು. ನಿರಾಸೆಯಿಂದ ಹಿಂತಿರುಗುತ್ತಿದ್ದರು. ಕೆಲವರು ಮೊದಲೇ ನನ್ನನ್ನು ಭೇಟಿ ಆಗಿ ಆತನನ್ನು ಒಪ್ಪಿಸಲು ಹೇಳುತ್ತಿದ್ದರು. ಯಾರು ಹೇಳಿದರೂ ಅಷ್ಟೆ. ಆತನ್ನು ಅತಿಥಿಯೆಂದು ಕರೆದು ಆತನಿಗೆ ಮೊದಲೇ ಗೊತ್ತಾಗದಂತೆ ಸನ್ಮಾನ ಮಾಡಬೇಕು ಅಷ್ಟೆ!
ಆದರೆ ಅವನಿಗೆ ಸಿಗಬೇಕಾದ ಪ್ರಶಸ್ತಿಗಳಲ್ಲಿ ಒಂದಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ – ಈ ಪ್ರಶಸ್ತಿ ಪಡೆದವರನ್ನು ಸಂಶಯದಿಂದ ನೋಡುವ ಸ್ಥಿತಿ ಇತ್ತು. ಅಪಾತ್ರರೇ ತುಂಬಿ ತುಳುಕುತ್ತ ಪ್ರಶಸ್ತಿ ತನ್ನ ಮೌಲ್ಯ ಕಳೆದುಕೊಂಡಿದ್ದು ಒಂದು ದೊಡ್ಡ ಕತೆ.
ಆದರೆ ಇತ್ತೀಚೆಗೆ ಅದು ಸ್ವಲ್ಪ ಸರಿದಾರಿಗೆ ಬರುವಂತಿದೆ.- ನೀಡಬಹುದಾಗಿತ್ತು. ಆದರೆ ಬೆಂಗಳೂರಿನ ಆತನ ಯಾವ ಸ್ನೇಹಿತರಾಗಲಿ, ಕನ್ನಡ ಸಂಸ್ಕೃತಿ ಇಲಾಖೆಯಾಗಲಿ ಈತನ ಹೆಸರನ್ನು ಬಹುಕಾಲ ಸೂಚಿಸಿದಂತಿಲ್ಲ. (ಸೂಚಿಸಿದ್ದರೆ ಆತನ ವ್ಯಕ್ತಿ ವಿವರವನ್ನಾದರೂ ನನ್ನಲ್ಲಿ ಕೇಳುತ್ತಿದ್ದರು.) ನಾನು ನಮ್ಮ ಜಿಲ್ಲೆಯ ಕೆಲವು ಅರ್ಹರ ಹೆಸರನ್ನು ಸೂಚಿಸಿ ಅಗತ್ಯ ಮಾಹಿತಿ ನೀಡಿದ್ದಿದೆ. ಹಾಗೆ ನೀಡಿದವರಲ್ಲಿ ಹಲವರಿಗೆ ಪ್ರಶಸ್ತಿಯೂ ಬಂದಿದೆ. ಹೀಗಿದ್ದೂ ಅಣ್ಣನ ಹೆಸರನ್ನು ನಾನು ಪ್ರಶಸ್ತಿಗಾಗಿ ಸೂಚಿಸುವುದಕ್ಕೆ ನನ್ನ ಮನಸ್ಸು ಒಪ್ಪಲಿಲ್ಲ. ಒಂದು ರೀತಿಯಲ್ಲಿ ಅಣ್ಣ ಪಾಲಿಸಿಕೊಂಡು ಬಂದ ತತ್ವಕ್ಕೆ ಇದು ವಿರುದ್ಧವಾಗಿತ್ತು.
ಬಹುಶಃ 2006-07 ಇರಬೇಕು. ಬೆಂಗಳೂರಿನ ಒಬ್ಬ ಸ್ನೇಹಿತರು ಫೋನ್ ಮಾಡಿ ಆರ್.ವಿ ಯವರ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಸೂಚಿಸುವುದಾಗಿಯೂ, ಆತನ ಬಗ್ಗೆ ವಿವರ ಕಳಿಸಿಕೊಡಬೇಕೆಂದು ಕೇಳಿದರು. ಅವನಿಗೆ ಗೊತ್ತಿಲ್ಲದೇ ಕಳುಹಿಸಿ ಬಿಡಬೇಕೆಂದುಕೊಂಡಿದ್ದೆ. ಆದರೆ ಈವರೆಗೆ ಯಾವುದನ್ನೂ ಆತನ ಒಪ್ಪಿಗೆ ಇಲ್ಲದೇ ಮಾಡದಿರುವುದರಿಂದ ಇದನ್ನೂ ಅವನಿಗೆ ಹೇಳಿ ಒಪ್ಪಿಗೆ ಕೇಳಿದೆ.
ಆತ ನಗುತ್ತಲೇ ಇದನ್ನು ತಿರಸ್ಕರಿಸಿದ ಮತ್ತು ಇದಕ್ಕೆ ಆತ ನೀಡಿದ ಕಾರಣ ಇದು: “ಯಾರೇ ಆಯ್ಕೆ ಮಾಡಿದರೂ ಅದು ರಾಜ್ಯ ಸರ್ಕಾರ ನೀಡುವ ಪ್ರಶಸ್ತಿ. ಅಕಾಡೆಮಿಯಂಥ ಸ್ವಾಯತ್ತ ಸಂಸ್ಥೆ ನೀಡುವಂತಹುದಲ್ಲ. ರಾಜ್ಯದ ಮುಖ್ಯಮಂತ್ರಿಯ ಕೈಯ್ಯಲ್ಲಿ ಈ ಪ್ರಶಸ್ತಿ ಸ್ವೀಕರಿಸಬೇಕು. ರಾಜ್ಯದಲ್ಲಿ ಈಗ ಎಚ್. ಡಿ. ಕುಮಾರ ಸ್ವಾಮಿ ಮತ್ತು ಬಿ. ಎಸ್. ಯಡಿಯೂರಪ್ಪ ನಾಯಕತ್ವದ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವಿದೆ. ನಾವೆಲ್ಲ ಬೆಂಬಲಿಸಿದ ಜಾತ್ಯತೀತ ಸರ್ಕಾರವೊಂದು ನಾವು ಜೀವನ ಪರ್ಯಂತ ವಿರೋಧಿಸಿದ ಕೋಮುವಾದಿ ಬಿಜೆಪಿ ಸರ್ಕಾರದೊಟ್ಟಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದೆ. ಯಾವುದನ್ನು ನಾನು ತಾತ್ವಿಕವಾಗಿಯೂ ಪ್ರಾಯೋಗಿಕವಾಗಿಯೂ ವಿರೋಧಿಸುತ್ತಿದ್ದೇನೋ ಅದೇ ಸರ್ಕಾರ ರಾಜ್ಯದಲ್ಲಿ ಇರುವಾಗ ನನಗೆ ಅವರು ನೀಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಲು ಮನಸ್ಸು ಬರುತ್ತಿಲ್ಲ.” ಎಂದು ಖಡಾಖಂಡಿತವಾಗಿ ಹೇಳಿದ.
“ಅಧಿಕಾರಕ್ಕಾಗಿ ಬಿಜೆಪಿಯ ಜೊತೆಗೆ ಕೈಜೋಡಿಸಿದ್ದು ಈ ನಾಡಿಗೆ ಜಾತ್ಯಾತೀತ ಜನತಾದಳ ಬಗೆದ ದ್ರೋಹ ಇದು. ಸಾಂಸ್ಕೃತಿಕ ಐಕ್ಯತೆಗೆ ಇದು ಅಪಾಯಕಾರಿ. ಇತ್ತೀಚಿನ ರಾಜಕೀಯ ನಡೆಯ ಬಗ್ಗೆ ನನ್ನ ಮನಸ್ಸು ಕಳವಳದಲ್ಲಿದೆ. ಇಂಥ ಹೊತ್ತಿನಲ್ಲಿ ಒಮ್ಮೆ ಪ್ರಶಸ್ತಿ ಬಂದುಬಿಟ್ಟರೆ …. ಮನಸ್ಸು ಒಪ್ಪುತ್ತಿಲ್ಲ, ಬೇಡ” ಎಂದು ಹೇಳಿದ.
ಅವನಿಗೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಬಗ್ಗೆ ತೀರಾ ನೋವಿತ್ತು. ಆ ಸಂದರ್ಭದಲ್ಲಿ ಆತ ಕೋಮುವಾದದ ಅಪಾಯದ ಬಗ್ಗೆ ತುಂಬಾ ಲೇಖನ ಬರೆದ ಮತ್ತು ಪತ್ರಿಕೆಯಲ್ಲಿ ಸಾಧ್ಯವಾದಾಗಲೆಲ್ಲ ಪ್ರತಿಕ್ರಿಯೆ ಬರೆದ. ಈ ಬಗ್ಗೆ ಮತ್ತೊಮ್ಮೆ ಕೇಳಿದಾಗಲೂ “ಈ ಸರ್ಕಾರದವರು ನನಗೆ ಕೊಡುವುದಿಲ್ಲ ಬಿಡು. ನನಗೆ ಒಮ್ಮೆ ಬಂದರೂ ನಾನು ತಿರಸ್ಕರಿಸಿ ಹೇಳಿಕೆ ನೀಡುತ್ತೇನೆ. ಆಗ ನನ್ನ ಹೆಸರು ಸೂಚಿಸಿದವರಿಗೆ ಮುಜುಗರ ಆಗಬಹುದು.” ಎಂದಾಗ ಆ ವಿಚಾರವನ್ನೇ ಕೈಬಿಟ್ಟೆವು.
ಮುಂದೆ ಯಾವಾಗಾದರೂ ನೋಡೋಣ ಎಂದುಕೊಂಡೆವು. ಆದರೆ ಮುಂದೆ ಅಂತದ್ದೊಂದು ದಿನ ಬರಲಿಲ್ಲ. ಬರದಿದ್ದ ಬಗ್ಗೆ ಕೂಡ ಬೇಸರವಿಲ್ಲ.
ಹಾಗಾಗಿ ಯಾವ ಸಂದರ್ಭದಲ್ಲೂ ತಾನು ನಂಬಿದ ತತ್ವದ ವಿರುದ್ಧ ನಡೆಯದ ಯಾವ ಆಮಿಷಕ್ಕೂ ತನ್ನ ತತ್ವವನ್ನು ಬಲಿಕೊಡದ ಅವನ ಗಟ್ಟಿತನ ಯಾವಾಗಲೂ ನಮಗೆ ಆದರ್ಶವೇ ಆಗಿದೆ.
No comments:
Post a Comment