Monday, 19 August 2013

ಪ್ರೀತಿಯ ಕಣ್ಣುಗಳು ಮಾತ್ರ -ರಾಜು ಹೆಗಡೆ




ಸಂಜೆಯ ತಂಪು
ಗಾಳಿ ಮೆಲ್ಲನೆ ಒಳಗೆ
ಮೋಡದ ಚಾದರ ಹೊದೆದು
ಮಲಗಿದ್ದಾನೆ ಸೂರ್ಯ ಬಾನಂಚಿನಲ್ಲಿ
ಮಿಂಚು ಗುಡುಗು ಆಗಸಕ್ಕೆ
ಮಳೆಯ ನೆನಪು ಮಾಡಿಕೊಡಲಿ
ಇಳಿಯಲಿ ಮಳೆ
ಕತ್ತಲಲ್ಲಿ
ನೆಲಮುಗಿಲುಗಳು ಒಂದೇ
ಹಾಸಿಗೆಯಲ್ಲಿ ಪವಡಿಸಲಿ
ಹಸಿರ ಉಸಿರಲಿ ಭೂಮಿ
ನಲಿದಾಡಲಿ ಜತೆಗೆ
ಆರಲಿ ಹೊತ್ತಿದ ಬೆಂಕಿ
ಚಾಕು ಚೂರಿಗಳಿಗೆ ತೇವ ತಗುಲಿ
ಜಂಗು ಹಿಡಿಯಲಿ
ಉಕ್ಕಿ ಹರಿವ ನೆರೆಯಲ್ಲಿ
ಕೊಚ್ಚಿ ಹೋಗಲಿ ಟ್ಯಾಂಕರುಗಳು
ಯುದ್ಧ ವಿಮಾನಗಳು ಮೋಡಕ್ಕೆ ಢಿಕ್ಕಿ ಹೊಡೆದು
ಉರುಳಲಿ ಗೊಬ್ಬರವಾಗಿ ಮರಕೆ. . . . .

ಬರಬಹುದು ಮಳೆ
ನೆರೆ
ಗಾಳಿ ಬೀಸಬಹುದು ಆದರೆ
ಇವುಗಳಿಗೆಲ್ಲಾ ಏನೂ ಆಗುವುದಿಲ್ಲ
ಬೆಚ್ಚಗಿರುತ್ತವೆ ಬೆಂಕಿ ಉಗುಳುವುದೆಲ್ಲಾ
ಪ್ರೀತಿಯ ಕಣ್ಣುಗಳು ಮಾತ್ರ
ಒದ್ದೆಯಾಗುತ್ತವೆ.

ಶೋಕ - ರಾಜು ಹೆಗಡೆ




ನಲ್ಲ   ಎಂದು
ಮೌನವಾಗಿ
ಚೀರಿದಾಗ
ದಶದಿಕ್ಕಿಗೆ ದನಿ
ಚೂರು ಚೂರಾಗಿ
ಪ್ರತಿಧ್ವನಿ
ಎಳೆಎಳೆಯಾಗಿ
ಎರಗಿದಾಗ
ಯಾವೊಂದನೂ
ಗಾಢವಾಗಿ ಹಿಡಿಯಲಾಗಲಿಲ್ಲ

ದಾರಿಗಳಿಗೆ ನೆನಪಿರುವುದಿಲ್ಲ
ಹೆಜ್ಜೆ ಗುರುತು ಮಳೆಯಲ್ಲಿ
ಕರಗಿ
ಹರಿಯುತ್ತದೆ

ಸೂರ್ಯಚಂದ್ರರಂತೆ
ನಿತ್ಯರಾದವರಿಗೆ
ಕಳಕೊಂಡ ಭಯವಿಲ್ಲ
ನೆಲದ ಮಾತು ಬೇರೆ
ಗಂಧವತಿ . . . . .

ಇವಳು ಹಾಗಲ್ಲ
ಬಸವಳಿದು ಬಾಡಿ
ಹುಡಿಯಾಗಿ ಮತ್ತಾವುದೊ
ಆದಾಗ ಮಾತ್ರ
ಅರಳುವ ಹೂ
ಕೆರಳುವ ಚಂದ್ರಮರು !

ಈಗ
ಸುಕ್ಕುಗಳಲ್ಲಿ
ಉಕ್ಕುವ ದುಃಖ,
ತರಗೆಲೆ ಮಧುರ
ನೆನಪು 

ಆನ್ವಯಿಕ ರಂಗ ಮೀಮಾಂಸೆ - ಶ್ರೀಪಾದ ಭಟ್ಟ್

ಇವತ್ತಿನ ನಮ್ಮ ಆಧುನಿಕ ರಂಗಭೂಮಿ ಪಶ್ಚಿಮದ ರಂಗಭೂಮಿಯ ಹಿಡಿತದಿಂದ ಬಿಡಿಸಿಕೊಳ್ಳಬೇಕಾದ, ವಾಸ್ತವವಾದಿ ರಂಗ ಸಂಪ್ರದಾಯಗಳ ಏಕತಾನತೆಯಿಂದ ಪಾರಾಗಬೇಕಾದ ಹಾಗೂ ನಮ್ಮ ಸಂಸ್ಕೃತಿಯ ಬಹುತ್ವವನ್ನು ಗ್ರಹಿಸಲು ಮತ್ತು ಅಭಿವ್ಯಕ್ತಿಸಲು ಬೇಕಾದ ಮಾಧ್ಯಮವಾಗಿ ಬೆಳೆಯಬೇಕಾದ ಅಗತ್ಯವಿದೆ. ಈ ಅಗತ್ಯವನ್ನು ಪೂರೈಸಿಕೊಳ್ಳುವ ಮಾರ್ಗವೇ ಆಧುನಿಕ ರಂಗಭೂಮಿಯ ನಿರ್ವಸಾಹತೀಕರಣದ ಪ್ರಕ್ರಿಯೆಯಾಗಿದೆ. ಈ ನಿರ್ವಸಾಹತೀಕರಣ ಪ್ರಕ್ರಿಯೆಯ ಅಂಗವಾಗಿ ಆಧುನಕ ರಂಗಭೂಮಿ ಸಮೂಹದ ಬದುಕಿನಲ್ಲಿ ಬೇರು ಬಿಟ್ಟಿರುವ ಸಾಂಪ್ರದಾಯಿಕ ರಂಗಭೂಮಿಯತ್ತ ಮುಖಮಾಡಿ, ಅದರಿಂದ ಹೊಸ ನುಡಿಗಟ್ಟುಗಳನ್ನು ಸೃಷ್ಟಿಸಿಕೊಳ್ಳಬೇಕಾಗಿದೆ; ಸಾಂಪ್ರದಾಯಿಕ ರಂಗಕಲೆಗಳ ಹಾಗೂ ಅವುಗಳ ರಂಗ ಸಂಪ್ರದಾಯಗಳ ನೆರವಿನಿಂದ ಉಸಿರು ಪಡೆದುಕೊಳ್ಳಬೇಕಾಗಿದೆ. ಆದರೆ ಅದೇ ಕಾಲಕ್ಕೆ ಆಧುನಿಕ ರಂಗಭೂಮಿ ಸಾಂಪ್ರದಾಯಿಕ ರಂಗಭೂಮಿಯ ನೆರವನ್ನು ಕೇವಲ ತನ್ನನ್ನು ಸಿಂಗಾರ ಮಾಡಿಕೊಳ್ಳುವುದಾಕ್ಕಾಗಿ ಮಾತ್ರ ಬಳಸಿ ಕೊಳ್ಳದಂತೆ ಎಚ್ಚರವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೇವಲ ಎತ್ನಿಕ್ ಮಾದರಿಯಲ್ಲದ, ಕೇವಲ ಆಕರ್ಷಕಗೊಳಿಸುವ ಉದ್ದೇಶವಲ್ಲದ, ಆನ್ವಯಿಕ ಪ್ರಯತ್ನಗಳ ಅಗತ್ಯಗಳ ಕುರಿತು ಇಲ್ಲಿ ಚಿಂತನೆ ನಡೆಸಲಾಗಿದೆ. ನಮ್ಮ ಸಾಂಪ್ರದಾಯಿಕ ರಂಗಕಲೆಗಳ ಹಾಗೂ ಅವುಗಳ ರಂಗ ಸಂಪ್ರದಾಯಗಳ ನೆರವಿನಿಂದ ಆಧುನಿಕ ರಂಗಭೂಮಿ ಉಸಿರು ಪಡೆದುಕೊಳ್ಳುವ ಕ್ರಿಯೆಗೆ ಇರುವ ಮಹತ್ವದ ಹಿನ್ನೆಲೆಯಲ್ಲಿ ಈ ಚಿಂತನೆ ನಡೆಸಲಾಗಿದೆ.

ಜನಪದ ರಂಗಭೂಮಿ ಅಥವಾ ಸಾಂಪ್ರದಾಯಿಕ ರಂಗಭೂಮಿ, ತನ್ನ ಅಭಿವ್ಯಕ್ತಿಯ ವಿವಿಧ ಕ್ರಮಗಳಿಂದಾಗಿ, ಅದರ ಒಡಲೊಳಗಿರುವ ಅಪಾರ ಶಕ್ತಿಯಿಂದಾಗಿ, ಸಮೂಹಗಳನ್ನು ಒಳಗೊಳ್ಳುವ ಪರಿ, ಗುಂಪು ಚಲನೆ, ಸಂಗೀತ, ನೃತ್ಯ, ಲಯ ಇವೆಲ್ಲವುಗಳಿಂದಾಗಿ ರಂಗ ಭೂಮಿಯ ಅಧ್ಯಯನದಲ್ಲಿ ಮಹತ್ವದ ಪಾತ್ರವಹಿಸುತ್ತದೆ.
ಯಕ್ಷಗಾನದಂತಹ ಸಾಂಪ್ರದಾಯಿಕ ರಂಗಭೂಮಿ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ತಲುಪುತ್ತದೆ. ಪುನರಭಿನಯದ ತಂತ್ರಗಾರಿಕೆಯಿಂದ ಎಷ್ಟೇ ಸಂಖ್ಯೆಯ ಪ್ರೇಕ್ಷಕರಿದ್ದರೂ, ಭಿನ್ನವರ್ಗದ, ವಯೋಮಾನದ ಪ್ರೇಕ್ಷಕರಿದ್ದರೂ ಅವರನ್ನು ತಲುಪುವುದು ಈ ರಂಗಭೂಮಿಗೆ ಸಾಧ್ಯ.

ಆದರೆ ಈ ರಂಗಭೂಮಿಗೆ ಅದರದ್ದೇ ಆದ ಕೆಲವು ಮಿತಿಗಳಿವೆ. ಕೆಲವು ಮಿತಿಗಳನ್ನು ಹೀಗೆ ಪಟ್ಟಿ ಮಾಡಬಹುದು:
1) ಇವು ಜಾತಿನಿಷ್ಠವಾದದ್ದು,
2) ನಿದರ್ಿಷ್ಟ ಸಮುದಾಯದ ಒಳಗೆ ಮಾತ್ರ ಸಂವಹನ ಸಾಧಿಸಬಲ್ಲದು. ಉದಾಹರಣೆಗೆ, ಯಕ್ಷಗಾನದಂತಹ ಹೆಚ್ಚು ಪ್ರೇಕ್ಷಕರನ್ನು ಹೊಂದಿರುವ ರಂಗಭೂಮಿ ಸಹ ಅದರ ವ್ಯಾಕರಣದ ಪರಿಚಯವಿಲ್ಲದ ಜನಸಮೂಹವನ್ನು ತಲುಪಲಾರವು. ಇದು ಕರಾವಳಿ ಭಾಗದ ಜನರ ಒಂದು ರೀತಿಯ ಅಭಿವ್ಯಕ್ತಿ ಮಾತ್ರ,
3) ಆಚರಣೆಯೊಂದಿಗೆ ರೂಪುಗೊಂಡ ಸಾಂಪ್ರದಾಯಿಕ ರಂಗಭೂಮಿ, ಆಚರಣೆಯ ಪ್ರಕ್ರಿಯೆಯಿಂದ ಹೊರಗಿರುವ ಸಂಗತಿಗಳನ್ನು ಒಳಗೊಳ್ಳುವುದಿಲ್ಲ, ಅನ್ಯದಿಂದ ಪ್ರೇರಿತವಾದರೂ ಅದು ಹೊರ ರೂಪದಲ್ಲಿ ಮಾತ್ರ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬಹುದೇ ಹೊರತು ಆಂತರಿಕ ರಚನೆಯಲ್ಲಲ್ಲ. ಹಾಗಾಗಿ ಆಧುನಿಕ ಜಗತ್ತಿನ ಅಭಿವ್ಯಕ್ತಿಗೆ ಇದು ಸಾಧನವಾಗಲಾರದು.

ಆಧುನಿಕ ಜಗತ್ತು ಒದಗಿಸಿಕೊಟ್ಟ ಹೊಸ ಬದುಕನ್ನು ನಿರ್ವಹಿಸುವ, ಹೊಸ ರಂಗ ಮಾರ್ಗ ವನ್ನು ಹುಡುಕಿಕೊಳ್ಳುವ ಆವಶ್ಯಕತೆ ಇಂದು ನಮ್ಮ ಮುಂದಿದೆ. ಮನುಷ್ಯ ಮನುಷ್ಯ ಸಂಬಂಧದ ಕುರಿತ ನಂಬಿಕೆ, ವಿಶ್ವಾತ್ಮಕತೆಯ ಕುರಿತ ನಮ್ಮ ದೃಷ್ಟಿಕೋನ, ಅಸ್ತಿತ್ವದ ಕುರಿತ ನಮ್ಮ ಕಾಳಜಿ, ರಾಜಕೀಯ ಪ್ರಜ್ಞೆ, ನಮ್ಮ ನಡುವಿನ ಬಿಕ್ಕಟ್ಟು ಇವೆಲ್ಲವನ್ನು ರಂಗಭೂಮಿಯ ಮೂಲಕ ಅಭಿವ್ಯಕ್ತಿಸುವ ಅಗತ್ಯ ಇಂದು ನಮ್ಮ ಮುಂದಿದೆ. ಆಧುನಿಕ ರಂಗಭೂಮಿಗೆ ಈ ಧಾರಣ ಸಾಮಥ್ರ್ಯ ಇದೆ. ಇದು ಜಾತ್ಯತೀತವಾಗಿದ್ದು (ಸೆಕ್ಯುಲರ್) ಏಕಕಾಲದಲ್ಲಿ ಸ್ಥಳೀಯವೂ ಜಾಗತಿಕವೂ ಆದ ಲಕ್ಷಣಗಳನ್ನು ಹೊಂದಿದೆ. ನಮ್ಮ ಒಳಗಿನ ಲೋಕವನ್ನು ರಂಗದ ಮೇಲೆ ನಿರೂಪಿಸುವ ಅಗತ್ಯ ಮತ್ತು ಸಾಧ್ಯತೆ ಈ ರಂಗಭೂಮಿಗಿದೆ. ಇವೆಲ್ಲ ಕಾರಣಗಳಿಂದಾಗಿ ಆಧುನಿಕ ರಂಗಭೂಮಿ ನಮ್ಮ ಇಂದಿನ ಅನವಾರ್ಯ ಅಗತ್ಯ.

ಆದರೆ ಆಧುನಿಕ ರಂಗಭೂಮಿ ಸಹ ಹಲವಾರು ಮಿತಿಗಳನ್ನು ಹೊಂದಿದೆ. ಈ ಮಿತಿಗಳನ್ನು ಅರಿಯುವಿಕೆ, ಅವುಗಳನ್ನು ದಾಟುವ ಸಾಧ್ಯತೆಗಳ ಹುಡುಕಾಟದಲ್ಲಿ ತುಂಬಾ ಅಗತ್ಯ. ಕೆಲವು ಮಿತಿಗಳು ಹೀಗಿವೆ:

1) ಆಧುನಿಕ ರಂಗಭೂಮಿಗೆ ಬಹಳ ಮುಖ್ಯವಾಗಿ ಪ್ರೇಕ್ಷಕರ ಕೊರತೆ ಇದೆ. ಕಾರಣ ಇದರ ಸಂವಹನ ಮಾರ್ಗಗಳು ಸರಳವಲ್ಲ. ಸುಶಿಕ್ಷಿತ ವಲಯದ ಪ್ರೇಕ್ಷಕರನ್ನು ತಲುಪಲಾರವು. ಆಧುನಿಕ ರಂಗಭೂಮಿಗೂ ನಗರ ಪ್ರಜ್ಞೆಗೂ ನೇರ ಸಂಬಂಧ ಇದೆ. ನಗರ ಪ್ರಜೆ ತಾಕರ್ಿಕ ಚಿಂತನೆ, ಬೌದ್ಧಿಕ ಬದುಕು ಇದರ ಲಕ್ಷಣಗಳಾಗಿವೆ.
2) ಉಪಯುಕ್ತವಾದದ ಆಧುನಿಕ ರಂಗಭೂಮಿಯ ಇನ್ನೊಂದು ಮಿತಿಯೇ ಆಗಿದೆ. ರಂಗಭೂಮಿಯ ಮೇಲೆ ನಿರುಪಯುಕ್ತವಾದ ಒಂದಿಂಚು ಜಾಗವೂ ಇರಬಾರದೆಂದು ಲೇವಲ್ಗಳನ್ನು, ಪರಿಕರಗಳನ್ನು ಇಡಿಕಿರಿಸಿರುತ್ತವೆ. ಸಂಗೀತಕ್ಕೂ ವಾಸ್ತವ ಬದುಕಿಗೂ ಸಂಬಂಧವಿಲ್ಲ ಎಂದು ರಂಗದಿಂದ ಸಂಗೀತವನ್ನು ದೂರಗೊಳಿಸಿದೆ. ಭಾವನೆಯ ವಾಹಕವಾಗಿ ಸಂಗೀತವನ್ನು ಅವಲಂಬಿಸಿದ್ದ ಪ್ರೇಕ್ಷಕ ವರ್ಗಕ್ಕೆ ಈ ಬೆಳವಣಿಗೆಯಿಂದ ರಂಗದಲ್ಲಿ ಶೂನ್ಯಗಳು ಕಾಣಿಸಿಕೊಳ್ಳಲಾರಂಭಿಸಿದವು.
3) ಆಧುನಿಕ ರಂಗಭೂಮಿ ನಿದರ್ಿಷ್ಟ ವರ್ಗದ ಪ್ರೇಕ್ಷಕರನ್ನು ಮಾತ್ರ ಒಳಗೊಳ್ಳುವುದರಿಂದ ಹೆಚ್ಚು ಹೆಚ್ಚು ಪ್ರತ್ಯೇಕವಾದಿಯಾಗುತ್ತಾ, ಹೆಚ್ಚು ಜನರಿಗೆ ಅಗ್ರಾಹ್ಯವಾಗುತ್ತಾ ನಡೆದಿದೆ. ಈ ಕಾರಣದಿಂದ ಉಚ್ಚವರ್ಗದ ರಂಗಭೂಮಿ, ಸಾರ್ವತ್ರಿಕ ರಂಗಭೂಮಿ ಎಂಬ ಎರಡು ವಿಭಾಗಗಳು ಸೃಷ್ಟಿಯಾಗಿವೆ. ಕಲೆ, ಕಲೆಯಾಗುವುದು ಮುಖ್ಯವೇ ಹೊರತು, ಎಲ್ಲರಿಗೂ ಅರ್ಥವಾಗಬೇಕೆಂಬ ಅಗತ್ಯವಿಲ್ಲ ಎಂಬ ಮನೋಭಾವ ರೂಪಿತವಾಗಿದೆ. ನಾನೇ ಪ್ರದಶರ್ಿಸುತ್ತೇನೆ ಮತ್ತು ನಾನೇ ಅರ್ಥಮಾಡಿಕೊಳ್ಳುತ್ತೇನೆ, ಬೇರೊಬ್ಬರಿಗೆ ಅದು ಅರ್ಥವಾಗದಿದ್ದರೆ ಅವರಿಗೆ ನಷ್ಟ ಎಂಬ ಮನೋಭಾವ ಸಮೂಹದ ದೃಷ್ಟಿಕೋನದಿಂದ ಅನ್ಯಾಯವಾದುದು ಮತ್ತು ಅದರ ಪರಿಣಾಮಗಳು ಕಲೆಗೆ ಮಾರಕವಾಗಿವೆ.
4) ಆಧುನಿಕ ರಂಗಭೂಮಿ ತನ್ನ ಅಭಿವ್ಯಕ್ತಿ ಕ್ರಮದಿಂದಾಗಿಯೇ ಹಲವು ಮಿತಿಗಳನ್ನು ಹೇರಿಕೊಂಡಿದೆ. ಪ್ರೊಸೀನಿಯಂ ಚೌಕಟ್ಟನ್ನು ಪ್ರಧಾನವಾಗಿ ಅವಲಂಬಿಸಿದ ರಂಗಭೂಮಿ ಪ್ರೇಕ್ಷಕರ ಮತ್ತು ಪ್ರದರ್ಶಕರ ನಡುವಿನ ಜೀವ ಸಂಬಂಧವನ್ನು ಕಡಿದು ಹಾಕಿದೆ. ರಂಗಭೂಮಿಯಲ್ಲಿ ಪ್ರೇಕ್ಷಕನ ಪಾತ್ರವನ್ನು ಮಿತಿಗೊಳಿಸಿ, ರಂಗಭೂಮಿಗಿರುವ ಪ್ರಕ್ರಿಯಾತ್ಮಕ ಸಂಬಂಧವನ್ನು ಮುರಿದು ಹಾಕಿದೆ. 
5) ಆಧುನಿಕ ರಂಗಭೂಮಿ ವಾಸ್ತವವಾದವನ್ನು ಬೆನ್ನಿಗೆ ಕಟ್ಟಿಕೊಂಡೇ ಬಂದಿದೆ. ಈ ವಾಸ್ತವವಾದ ತರ್ಕವನ್ನವಲಂಬಿಸಿದೆ. ಬದುಕಿನ ಸತ್ಯಗಳನ್ನು ವಾಸ್ತವ ಮಾರ್ಗ ಮಾತ್ರ ಹೆಚ್ಚು ಸಮರ್ಥವಾಗಿ ಮಂಡಿಸುತ್ತದೆ ಎಂಬ ನಂಬಿಕೆ ಈ ತರ್ಕದಲ್ಲಿದೆ.
ಸಾಂಪ್ರದಾಯಿಕವಾಗಿ ನಾವು ಲೋಕವನ್ನು ಗ್ರಹಿಸಿಕೊಳ್ಳುವ ಹಲವು ವಿಧಾನಗಳಲ್ಲಿ ಕಲ್ಪನೆಗೆ ವಿಶಿಷ್ಟ ಸ್ಥಾನವಿದೆ. ತರ್ಕದ ಹೊರಗೇ ಇರುವ ಈ ಕಲ್ಪನೆ, ಕನಸು ಇವು ವಿಶಿಷ್ಟ ರೀತಿಯಲ್ಲಿ ಲೋಕಗ್ರಹಿಕೆಗೆ ಕಾರಣವಾಗುತ್ತದೆ. ಆದರೆ ನಾವು ನಾಗರಿಕರಾಗುತ್ತ ಹೋದಂತೆ ಹೆಚ್ಚು  ಹೆಚ್ಚು ತಾಕರ್ಿಕವಾಗುತ್ತ ಹೋಗುತ್ತೇವೆ. ಹಾಗೆ ಮಾಡಿದಾಗ ನಮ್ಮ ಗ್ರಹಿಕೆಯ ಅನೇಕ ವಿಧಾನಗಳನ್ನು ನಾವು ಬಿಟ್ಟುಕೊಡಬೇಕಾಗುತ್ತದೆ. ಭ್ರಮೆ, ಫ್ಯಾಂಟಸಿ ಇವೆಲ್ಲ ಅವಾಸ್ತವ ಎಂದು ಕೈಬಿಡುವುದರಿಂದ ನಮ್ಮ ಮಿತಿ ಹೆಚ್ಚುತ್ತದೆ. ಮನುಷ್ಯನ ಬುದ್ಧಿ ಗ್ರಹಿಸಬಹುದಾದುದಕ್ಕೆ ಬಹಳ ಮಿತಿಗಳಿವೆ. ತರ್ಕ ಒಂದು ಹಂತದವರೆಗೆ ಮಾತ್ರ ಮುಂದುವರಿಯಬಹುದೇ ಹೊರತು ಎಲ್ಲವನ್ನೂ ಗ್ರಹಿಸಲಾರದು. ಅದು ತನ್ನ ಬಾಲವನ್ನು ತಾನೇ ಬಾಯಿಯಲ್ಲಿ ಇಟ್ಟುಕೊಂಡ ಹಾವಿನ ಹಾಗೆ, ಅಲ್ಲಲ್ಲೇ ಸುತ್ತುತ್ತ ಇರಬೇಕಾಗುತ್ತದೆ.
ಆಧುನಿಕ ರಂಗಭೂಮಿ ಲೋಕಾನುಕೀರ್ತನದತ್ತ ವಾಲುತ್ತದೆ. ಜಗತ್ತಿನ ವಿದ್ಯಮಾನ ಗಳನ್ನು ರಂಗದ ಮೇಲೆ ತೋರಿಸುವಾಗ ಪರದೆ, ಬೆಳಕು, ಪರಿಕರ ಇವನ್ನೆಲ್ಲ ಬಳಸಿ ಅವಾಸ್ತವವಾಗುತ್ತಲೇ ಹೋಗ ಬೇಕಾಗುತ್ತದೆ. ಅವು ಬೌದ್ಧಿಕ ವ್ಯಾಪಾರವಾಗುವುದು ಇಲ್ಲಿಯೇ.
6) ಆಧುನಿಕ ರಂಗಭೂಮಿ ತನ್ನ ಅತಿ ಉಪಯುಕ್ತತಾವಾದದ ಬೆನ್ನಿಗೆ ಬಿದ್ದು ಏಕಕೇಂದ್ರಿತ ಚಲನೆಯನ್ನು ಕಟ್ಟಿಕೊಂಡಿದೆ. ಜೀವನದ ಬಹುಮುಖತೆಯನ್ನು ಬಿಂಬಿಸಲು ಅಗತ್ಯವಾದ ಅಭಿವ್ಯಕ್ತಿ ಇದಕ್ಕೆ ದೊರೆಯುತ್ತಿಲ್ಲ.
7) ಅತಿ ಉಪಯುಕ್ತತಾವಾದ, ತರ್ಕದ ಮಿತಿ ಇವುಗಳಿಂದ ರಂಗಭೂಮಿ ಸಂಭ್ರಮದಿಂದ ವಂಚಿತವಾಗಿದೆ, ವಿಷಾದತೆಗೆ ಎಡೆಮಾಡಿಕೊಟ್ಟಿದೆ.
8) ಆಧುನಿಕ ರಂಗಭೂಮಿಯ ಇನ್ನೊಂದು ಸಂಕಟ, ಗದ್ಯಾಭಿನಯಕ್ಕೆ ಸಂಬಂಧಿಸಿದುದು. ಬಹುಪಾಲು ಪ್ರೇಕ್ಷಕರಿಗೆ ಪದ್ಯಾಭಿನಯದ ಹಲವು ಮಾದರಿಗಳನ್ನು ಕಂಡು ಅನುಭವಿಸಿ ರೂಢಿಯಿದೆ. ಸಾಂಪ್ರದಾಯಿಕ ರಂಗಭೂಮಿ ಬಹಳ ಮುಖ್ಯವಾಗಿ ಪದ್ಯಾಭಿನಯವನ್ನು ರಂಗಭಾಷೆಯಾಗಿಸಿಕೊಂಡಿದೆ. ಆದರೆ ಆಧುನಿಕ ರಂಗಭೂಮಿ ತನ್ನ ಅಭಿವ್ಯಕ್ತಿಗಾಗಿ ಆಶ್ರಯಿಸಿರುವುದು ಗದ್ಯವನ್ನು. ಅದನ್ನು ಅಭಿನಯಿಸುವ ಮಾರ್ಗವಾಗಲಿ ಅನುಭವಿಸುವ ಪ್ರೇಕ್ಷಕ ವರ್ಗವಾಗಲಿ ಇನ್ನೂ ರೂಪುಗೊಳ್ಳಬೇಕಿದೆ.
ಆಧುನಿಕ ರಂಗಭೂಮಿ ತನ್ನ ಈ ಎಲ್ಲ ಮಿತಿಗಳನ್ನು ದಾಟುವುದು ಇಂದಿನ ಆವಶ್ಯಕತೆಯಾಗಿದೆ. ಈ ದಾಟುವಿಕೆಗೆ ಜನಪದ ರಂಗಭೂಮಿಯ ಅಧ್ಯಯನ ಹೆಚ್ಚು ನೆರವನ್ನು ನೀಡಬಹುದಾಗಿದೆ. ರಂಗಭೂಮಿಯ ಇಂದಿನ ಸಂಕಟಕ್ಕೆ ಜಾನಪದ ರಂಗಭೂಮಿ ಮತ್ತು ಆಧುನಕ ರಂಗಭೂಮಿಯ ನಡುವಿನ ಬಿರುಕು ಮುಖ್ಯವಾದ ಕಾರಣವಾಗಿದೆ. ಹಾಗಾಗಿ ಇರುವುದರ ಮೇಲೆ ಕಣ್ಣಿಟ್ಟು, ಇರದುದರೆಡೆಗೆ ತುಡಿಯಲು ಪ್ರಯತ್ನಿಸುವುದು ಆಧುನಿಕ ರಂಗಭೂಮಿಯ ಅಸ್ತಿತ್ವಕ್ಕೆ ಇಂದು ಅಗತ್ಯವಾದ ಹಾದಿಯಾಗಿದೆ. ಬಹುರೂಪಧಾರಿತ್ವ ಹೊಂದಿದ ಜನಪದ ರಂಗಭೂಮಿ ಈ ನಿಟ್ಟಿನಲ್ಲಿ ಆಧುನಿಕ ರಂಗಭೂಮಿಗೆ ಅಗತ್ಯ ನೆರವನ್ನು ನೀಡಬಹುದಾಗಿದೆ.

ಆದರೆ ಇದು ಹೊಸ ಚಿಂತನೆಯೇನೂ ಅಲ್ಲ. 1960 ರ ದಶಕದಲ್ಲಿ ಈ ರೀತಿಯ ಆಲೋಚನೆಗಳು ಕಾಣಿಸಿಕೊಂಡಾಗ ಆನ್ವಯಿಕ ಎನ್ನಬಹುದಾದ ಚಟುವಟಿಕೆಗಳು ನಡೆದವು. ಬೇರಿಗೆ ಮರಳುವ ಆಂದೋಲನದ ಹೆಸರಿನಲ್ಲಿ ರಾಷ್ಟ್ರಾದ್ಯಂತ ಜನಪದ ರಂಗಭೂಮಿಯನ್ನು ಆಧುನಿಕ ರಂಗಭೂಮಿಗೆ ಕಸಿ ಮಾಡುವ ಕಾರ್ಯ ಭರದಿಂದ ಸಾಗಿತು. ಆದರೆ ಈ ಪ್ರಯತ್ನ ನಿರೀಕ್ಷಿತ ಫಲವನ್ನು ನೀಡಲಿಲ್ಲ. ಬಹುಬೇಗ ಹಾಸ್ಯಾಸ್ಪದ ಸನ್ನಿವೇಶಕ್ಕೀಡಾಯಿತು. ಇಂದಿಗೂ ಅನೇಕ ರಂಗತಜ್ಞರು ಈ ಬಗೆಯ ಪ್ರಯತ್ನವನ್ನು ತುಸು ಅಸಡ್ಡೆಯಿಂದ ನೋಡುವುದಕ್ಕೆ ಕಾರಣವಾಯಿತು.  
ಬಹು ಮುಖ್ಯವಾಗಬೇಕಿದ್ದ ಆನ್ವಯಿಕ ಪ್ರಯತ್ನವೊಂದು ದುರಂತಕ್ಕೆ ಈಡಾದ ಕಾರಣಗಳು:

1) ಜನಪದ ರಂಗಭೂಮಿಯನ್ನು ಅಥರ್ೈಸಿಕೊಳ್ಳುವುದರಲ್ಲಿ ವಿಫಲರಾದ ಹಲವಾರು ಶೋಕಿಗಾಗಿ, ಉತ್ಸವಕ್ಕಾಗಿ, ರಂಜನೆಗಾಗಿ ಈ ರಂಗಭೂಮಿಯನ್ನು ಬಳಸಿಕೊಂಡರು.
2) ಜನಪದ ರಂಗಭೂಮಿಯನ್ನು ಆಧುನಿಕರು ಪಳೆಯುಳಿಕೆಯ ರಂಗಭೂಮಿಯೆಂದು ಗ್ರಹಿಸಿದರು. ಸಮಕಾಲೀನ ವಾಸ್ತವ ಪ್ರಪಂಚದಲ್ಲಿ ಜನಪದ ರಂಗಭೂಮಿಯೂ ಬದುಕುತ್ತಿದೆ; ಆಧುನಿಕರೆನಿಸಿಕೊಂಡ ನಮ್ಮೊಳಗೂ ಹಲವಾರು ಆಚರಣೆಗಳು, ನಂಬಿಕೆಗಳು ಮನೆಮಾಡಿವೆ ಎಂಬುದನ್ನು ಅವರು ಮರೆತರು. ಇವುಗಳಿಗೆ ಮುಖಾಮುಖಿಯಾಗಬೇಕಾದ ಸನ್ನಿವೇಶದಿಂದ ತಪ್ಪಿಸಿಕೊಂಡರು.

ಆದರೆ ಆಧುನಿಕ ರಂಗಭೂಮಿ ಜನಪದ ರಂಗಭೂಮಿಯತ್ತ ನೋಡಬೇಕಾದ ಕ್ರಮ ಬೇರೆಯೇ ಆಗಬೇಕಿದೆ. ಹೊಸ ಅಧ್ಯಯನ ನಡೆಯಬೇಕಿದೆ. ಇದುವರೆಗಿನ ಆನ್ವಯಿಕ ಪ್ರಯತ್ನವನ್ನು ವಿಶ್ಲೇಷಿಸಿ, ಪುನರ್ಪರಿಶೀಲಿಸಿ ಹೊಸ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕಾಗಿದೆ.

ಈ ಹಿಂದೆ ಆಧುನಿಕ ರಂಗಭೂಮಿಯಲ್ಲಿ ಜನಪದ ಅಧ್ಯಯನದ ಅನುಭವವನ್ನು ಧನಾತ್ಮಕವಾಗಿ ಬಳಸಿಕೊಂಡ ಹಬೀಬ್ ತನ್ವೀರ್ ಮತ್ತು ಬಾದಲ್ ಸಕರ್ಾರ್ ಇವರ ಪ್ರಯತ್ನಗಳು ಈ ನಿಟ್ಟಿನಲ್ಲಿ ಹೆಚ್ಚು ಗಮನಾರ್ಹವಾದುದು. ಹಬೀಬ್ ತನ್ವೀರ್ ಬುಡಕಟ್ಟು ಜನಾಂಗದ ಅಭಿವ್ಯಕ್ತಿ ಕ್ರಮವನ್ನು ಆಧುನಿಕ ರಂಗಭೂಮಿಯಲ್ಲಿ ಬಳಸಿಕೊಂಡರಲ್ಲದೇ, ಬುಡಕಟ್ಟು ಜನಾಂಗದ ನಟರನ್ನೇ ಆಧುನಿಕ ರಂಗಭೂಮಿಯ ನಟರನ್ನಾಗಿಯೂ ಬಳಸಿ ಕೊಂಡಿದ್ದಾರೆ. ರಂಗಭೂಮಿಯ ಪ್ರಧಾನ ಘಟಕವಾದ ನಟರಿಗೆ ಸಂಬಂಧಿಸಿದಂತೆ ಅವರು ಹೇಳುವ ಮಾತು ಇದು ನಗರ ರಂಗಭೂಮಿಯ ನಟರಿಗೆ ಜನಪದ ರಂಗಭೂಮಿಯ ನಟರಿಗಿರುವಷ್ಟು ಫ್ಲೆಕ್ಸಿಬಿಲಿಟಿಯಾಗಲಿ, ಇಂಪ್ರೂವೈಜೇಷನ್ ಗುಣವಾಗಲಿ ಇಲ್ಲ.

ಈ ನಿಟ್ಟಿನಲ್ಲಿ ಆಧುನಿಕ ರಂಗಭೂಮಿಯ ನಟ, ನಿದರ್ೆಶಕರು ತಮ್ಮಲ್ಲಿಲ್ಲದ ಗುಣವನ್ನು ಪಡೆಯಲು ಜನಪದ ರಂಗಭೂಮಿಯ ಅಧ್ಯಯನ ಬೆಳೆಸಿಕೊಳ್ಳಬೇಕೆಂಬುದು ಅವರ ನಿಲುವು. ಅವರೆನ್ನುತ್ತಾರೆ ಭಾರತೀಯ ರಂಗಭೂಮಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ನಿದರ್ೆಶಕ ಹಾಗೂ ನಟ ಜಾನಪದ ರಂಗಭೂಮಿಯ ಅಧ್ಯಯನ ಮಾಡಲೇಬೇಕು.

ಹಬೀಬ್ ತನ್ವೀರ್ಗೆ ಜನಪದ ರಂಗಭೂಮಿಯ ಅಧ್ಯಯನ ಯಾಕೆ? ಹೇಗೆ? ಎಂಬ ಬಗ್ಗೆ ಖಚಿತ ನಿಲುವುಗಳಿವೆ. ತತ್ಕಾಲೀನ ಲಾಭಕ್ಕಾಗಿ ಈ ಅಧ್ಯಯನ ಅಲ್ಲವೆಂಬ ಬಗ್ಗೆ ಅವರಿಗೆ ಅರಿವಿದೆ. ತಾತ್ವಿಕವಾಗಿ ಅವರು ತುಂಬಾ ಗಟ್ಟಿಯಾದ ನಿಲುವಿನವರು. ಜಾನಪದದ ಹೆಸರಿನಲ್ಲಿ ಎತ್ನಿಕ್ ಮಾದರಿಯ ಚಟುವಟಿಕೆಗಳನ್ನು ಅವರು ಖಂಡಿಸುತ್ತಾರೆ. ಜಾನಪದ ಈಗಿನ ಕಾಲದ ಹುಚ್ಚು ಬರೀ ಕೌಶಲ್ಯದ ಪ್ರದರ್ಶನ. ಹಿಂದೆ ವ್ಯಕ್ತಿಗತ ಹುಡುಕಾಟ, ವ್ಯಕ್ತಿಗತ ಸ್ತರದಲ್ಲಿತ್ತು. ಇಂದು ಅದು ಭಾರೀ ಉತ್ಸವಗಳಿಗಾಗಿ ಮಾರ್ಪಟ್ಟಿದೆ. ವ್ಯಾಪಾರೀಕರಣ ಪುನಃಶ್ಚೇತನವಾದ ಅವನತಿಯಲ್ಲದೇ ಇನ್ನೇನು ತಾನೆ ನಿರೀಕ್ಷಿಸಲು ಸಾಧ್ಯ.
ಜನಪದ ರಂಗಭೂಮಿಯ ಅಧ್ಯಯನವನ್ನು ತಾವು ಒಳಗೊಳ್ಳಬೇಕಾದ ಮತ್ತು ಒಳಗೊಳ್ಳಬಾರದ ರೀತಿಗಳ ಬಗ್ಗೆ ತನ್ವೀರ್ ಚಿಂತನೆ ನಮಗೆ ಮಾರ್ಗದರ್ಶನ ನಡುತ್ತವೆ.

ಜನಪದ ರಂಗಭೂಮಿಯ ಅಧ್ಯಯನದ ಮಾದರಿಗೆ ಬಾದಲ್ ಸಕರ್ಾರ್ ಅವರ ಪ್ರಯತ್ನ ಕೂಡ ಮುಖ್ಯವಾದ ನೆರವು ನೀಡಬಲ್ಲದು. ಜನಪದ ರಂಗಭೂಮಿಯ ಅನುಭವವನ್ನು ಬಾದಲ್ ಸಕರ್ಾರ್ ಬಳಸಿಕೊಂಡ ಬಗೆ ವಿಶಿಷ್ಟವಾದುದು. 1973 ರಲ್ಲಿ ಕಲ್ಕತ್ತಾದಲ್ಲಿ ಅವರು ಪ್ರಯೋಗಿಸಿದ ಸ್ಪಾರ್ಟಕಸ್ ನಾಟಕ ನೋಡುಗರಿಗೆ ಹೊಸ ಅನುಭವ ನೀಡುತ್ತಿತ್ತು. ಈ ಪ್ರಯೋಗ ಯಾವುದೇ ಗ್ರಾಮೀಣ ರಂಗಭೂಮಿಯ ಮೇಲೆ ಆಧಾರವಾದದ್ದಲ್ಲ. ಆದರೆ ನಗರ ರಂಗಭೂಮಿಯ ಸಂದರ್ಭದಲ್ಲಿ ಅದು ಜನಪದ ರಂಗಭೂಮಿಯಲ್ಲಿದ್ದ ಸಾಮುದಾಯಿಕ ಸಹಭಾಗಿತ್ವ ಮತ್ತು ರಿಚುವಲಿಸ್ಟಿಕ್ ಅಭಿನಯವನ್ನು ಅಳವಡಿಸಿಕೊಳ್ಳುವತ್ತ ಗಮನ ಹರಿಸಿತು.

ಜನಪದ ರಂಗಭೂಮಿಯ ಅಧ್ಯಯನ ಅನುಭವಗಳನ್ನು ತಾತ್ವಿಕವಾಗಿ ಗ್ರಹಿಸಿ ವ್ಯವಹರಿಸಿದ ಎರಡು ಮಾರ್ಗಗಳು ತನ್ವೀರ್ ಮತ್ತು ಬಾದಲ್ ಸಕರ್ಾರ್ರ ಪ್ರಯೋಗದಿಂದ ರೂಪಿಸಲ್ಪಟ್ಟಿದೆ.

ಎನ್.ಎಸ್.ಡಿ. ವಿದ್ಯಾಥರ್ಿಗಳ ಪದವಿ ದಾನ ಸಮಾರಂಭದಲ್ಲಿ ಮಾತನಾಡುತ್ತ ಆನ್ವಯಿಕ ಅಧ್ಯಯನಕ್ಕೆ ಸಂಬಂಧಿಸಿದಂತೆ ಡಾ||ಯು.ಆರ್. ಅನಂತಮೂತರ್ಿ ಹೀಗೆನ್ನುತ್ತಾರೆ. ಬುಡಕಟ್ಟು ಜನರು ತಮ್ಮದೇ ಆಂಗಿಕ ಭಾಷೆಯನ್ನು ಹೊಂದಿದ್ದಾರೆ. ಅವರನ್ನು ಒಳಗೊಳ್ಳುವುದರಿಂದ ನಮ್ಮ ರಂಗಭೂಮಿ ಇನ್ನಷ್ಟು ಶ್ರೀಮಂತವಾಗಬಹುದು. ಆದರೆ ಈ ವಿಷಯದಲ್ಲಿ ನಮ್ಮ ಧೋರಣೆ ಮತ್ತು ಸಮೀಪನವು ವಸಾಹತು ರೂಪದ್ದಾಗಲಿ, ಎತ್ನಿಕ್ ಮಾದರಿಯದ್ದಾಗಲಿ ಆಗಕೂಡದು. ಪ್ರವಾಸೋದ್ಯಮ-ಸಂಸ್ಕೃತಿಯ ಮೇಲೆ ಮಾತ್ರ ಕಣ್ಣಿಟ್ಟು ಸದಭಿರುಚಿಯ ನಾಟಕೋತ್ಸವಗಳಲ್ಲೇ  ಸಂತೃಪ್ತರಾಗಿ ಎತ್ನಿಕ್ ಮನರಂಜನೆಗಾಗಿ ಇಡಿಯಾದ ತುಣುಕುಗಳನ್ನು ನೇಯ್ದು ಕೊಡಲು ಮುಂದಾದರೆ ನಮ್ಮ ಕ್ರಿಯಾಶೀಲತೆ ಸೃಜನಶಕ್ತಿ ಕುಂಠಿತವಾಗುತ್ತದೆ.

ಖ್ಯಾತ ರಂಗನಿದರ್ೆಶಕ ಬಿ.ವಿ.ಕಾರಂತರು ಹೀಗೆನ್ನುತ್ತಾರೆ ಭಾರತೀಯ ರಂಗ ಭೂಮಿಯ ಹುಡುಕಾಟವೆಂದರೇನೇ ನಮ್ಮ ಲೋಕನಾಟ್ಯ ಪರಂಪರೆಯ ಜೀವಂತ ತತ್ವಗಳ ಹೊಸ ಹಾಗೂ ಸಾರ್ಥಕ ಹುಡುಕಾಟ. ನಮ್ಮ ಲೋಕ ರಂಗಭೂಮಿ ಅಷ್ಟು ಸಶಕ್ತವಾಗಿದೆ. ಆದರೆ ನಾವದನ್ನು ಇನ್ನಿಲ್ಲದಷ್ಟು ಉಪೇಕ್ಷೆ ಮಾಡಿದ್ದೇವೆ. ಇವತ್ತು ಹುಡುಕುತ್ತಾ ಹೊರಟಾಗೆಲ್ಲ ಪುನಃ ಪುನಃ ನಾವು ಹೋಗಿ ಮುಟ್ಟೋದು ಅಲ್ಲಿಗೇ. ಎಂತಲೇ ಭಾರತೀಯ ರಂಗಭೂಮಿಯ ಹುಡುಕಾಟವನ್ನು ಇಲ್ಲಿಯ ಜನಪದ ರಂಗಭೂಮಿಗೆ ಹೊಂದಿಸುವುದು ಸೂಕ್ತವೆನಿಸುತ್ತದೆ. ಭಾರತೀಯ ಸಂಗೀತ, ಭಾರತೀಯ ನೃತ್ಯಕ್ಕೆ ಸಮಾನಾಂತರವಾಗಿರೋದು ಭಾರತೀಯ ರಂಗಭೂಮಿಯ ತಮಾಷಾ, ಯಕ್ಷಗಾನ, ಭವಾಯಿ, ಕಥಕ್ಕಳಿ ಮುಂತಾದವುಗಳೇ ಹೊರತು ಇನ್ನಾವುದೂ ಅಲ್ಲ. ಜೀವಂತವಾದ ಜಾನಪದ ರಂಗಭೂಮಿಯಿಂದಲೇ ನಮಗೆ ಪ್ರೇರಣೆ ಹೊರತು ಶಾಸ್ತ್ರೀಯ ಪರಂಪರೆಯ ಪ್ರಯೋಗಗಳು ಏನಿದ್ದರೂ ದಾರ್ಶನಿಕ ಅಥವಾ ಸೈದ್ಧಾಂತಿಕ ಸ್ತರದಲ್ಲಿ ಮಾತ್ರ.

ಆನ್ವಯಿಕ ರಂಗಭೂಮಿಯ ಪ್ರಯತ್ನದಲ್ಲಿ ತೊಡಗುವವರಿಗೆ ಆಧುನಿಕ ಹಾಗೂ ಸಾಂಪ್ರದಾಯಿಕ ರಂಗಭೂಮಿಗಳೆರಡರಲ್ಲೂ ವಿಶೇಷ ಪರಿಶ್ರಮ ಬೇಕು. ಜನಪದ ಲೋಕದೃಷ್ಟಿ ಯನ್ನು ಅಥರ್ೈಸಿಕೊಂಡಿರಬೇಕು. ಸಾಂಪ್ರದಾಯಿಕ ರಂಗಭೂಮಿಯ ಸಂವಹನದ ಭಾಷೆಯನ್ನು ಅಥರ್ೈಸಿಕೊಳ್ಳುವ ಸಾಮಥ್ರ್ಯದ ಜತೆಗೆ, ಆಧುನಿಕ ರಂಗಭಾಷೆಗೆ ಅದನ್ನು ಒಗ್ಗಿಸಬೇಕು. ತುಂಬಾ ಸುಲಭ ಅಂದುಕೊಂಡು ಜನಪದ ಕಲೆಯ ಸಂದರ್ಭವನ್ನು ನಾಟಕದಲ್ಲಿ ಅನುಕರಣೆ ಮಾಡುವ ಜನಪದ ಕಲಾವಿದರು ಏನು ಮಾಡುತ್ತಾರೋ, ಅದನ್ನೇ ರಂಗಭೂಮಿಯ ಮೇಲೆ ಪುನಃ ಪ್ರದಶರ್ಿಸುವ ಗೀಳಿಗೆ ಬೀಳಬಾರದು.

ಜನಪದ ರಂಗಭೂಮಿಯನ್ನು ಒಳಗೊಳ್ಳುವ ಮಾತನಾಡುವಾಗ ಇನ್ನೊಂದು ಅಪಾಯವೂ ನಮ್ಮ ಮುಂದೆ ಎದುರಾಗುತ್ತದೆ. ಜನಪದ ರಂಗಭೂಮಿ `ಆರಾಧನೆ ಮತ್ತು `ಮಿಥ್ಗಳನ್ನು ಜತೆಯೇ ಹೊಂದಿರುತ್ತದೆ. ಜಾನಪದ ಪ್ರದರ್ಶನದ ಅರ್ಥ ಸಹ ಈ ಎಲ್ಲವನ್ನೂ ಒಳಗೊಂಡ ಸಂದರ್ಭದಲ್ಲಿಯೇ ಇರುತ್ತದೆ. ಈ ಸಂದರ್ಭವನ್ನು ನಾವು, ಜನಪದ ಕಲಾರೂಪಗಳನ್ನು ಅಥರ್ೈಸುವಿಕೆಯಲ್ಲಿ ಮಾತ್ರ ಗ್ರಹಿಸಬೇಕು ಹೊರತು ಆನ್ವಯಿಕ ಸಂದರ್ಭದಲ್ಲಲ್ಲ. ಜನಪದ ಕಲಾಪ್ರಕಾರಗಳನ್ನು ಅದು ಹುಟ್ಟಿಕೊಂಡ ಪರಿಸರದಿಂದ ಹೊರತೆಗೆದಾಗ ಅದರ ಅಸ್ತಿತ್ವ ಉಳಿಯುವುದಿಲ್ಲವೆಂಬುದು ಜನಪದ ತಜ್ಞರ ವಾದ. ಆದರೆ ಆಧುನಿಕ ರಂಗಭೂಮಿಯ ಕಾರ್ಯಕರ್ತ ಜಾನಪದ ರಂಗಭೂಮಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹೊತ್ತವನಾಗಲೀ, ಅದರ ಶುದ್ಧತೆಯನ್ನು ಹಾಗೆಯೇ ಕಾಪಾಡಿಕೊಂಡು ಹೋಗಬೇಕಾದ  ಜವಾಬ್ದಾರಿ ಹೊತ್ತವನಾಗಲೀ ಅಲ್ಲ. ಜನಪದ ರಂಗಭೂಮಿಯನ್ನು ಪ್ರತಿಕೃತಿ ಯಾಗಿ ಬಳಸಿಕೊಳ್ಳುವವನಿಗೆ ಈ ಅಪಾಯ ಎದುರಾಗುತ್ತದೆ. ಆಧುನಿಕ ರಂಗ ಭೂಮಿಯ ಕಾರ್ಯಕರ್ತ ಜನಪದ ರಂಗಭೂಮಿಯನ್ನು ಪ್ರತಿಮೆಯಾಗಿ ನೋಡ ಬೇಕಾದವನು. ಆನ್ವಯಿಕ ಪ್ರಯತ್ನ ಕೈಗೊಂಡ ಪ್ರದರ್ಶನವು ಧಾಮರ್ಿಕ ವಿಧಿ ಕ್ರಿಯೆಗಳ ಮಟ್ಟದಿಂದ ರಂಗಭೂಮಿ ಮಟ್ಟಕ್ಕೆ ತಲುಪುವುದು ತುಂಬಾ ಮುಖ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಖ್ಯಾತ ರಂಗತಜ್ಞ ಸಫ್ದರ್ ಹಶ್ಮಿಯವರ ಈ ಮಾತುಗಳು ಗಮನಾರ್ಹವಾಗಿವೆ. ಪಾರಂಪರಿಕ ರೂಪ ಮತ್ತು ಆಧುನಿಕ ವಸ್ತುಗಳ ಮುಖಾಮುಖಿಯನ್ನು ಸಂಮಿಲನ ಮಾಡಲು ನಾವು ಇಷ್ಟಪಡುವುದಾದರೆ, ಆ ರೂಪಗಳನ್ನು ಆಕ್ರಮಿಸಿಕೊಂಡಿರುವ ರಿಚುವಲಿಸಂ ಮತ್ತು ಧಾಮರ್ಿಕ ಸಿದ್ಧಾಂತಗಳ ಹಿಡಿತದಿಂದ ಬಿಡಿಸಬೇಕು. ಧಾಮರ್ಿಕ ವಿಧಿ ಕ್ರಿಯೆಗಳಲ್ಲಿ ಯಾವಾಗಲೂ ರಂಗಭೂಮಿಯ ಅಂಶವೊಂದು ಇದ್ದೇ ಇರುತ್ತದೆ. ಬುಡಕಟ್ಟುಗಳವರ ವಿಧಿಗಳಲ್ಲಿ ಈ ಅಂಶ ಇನ್ನಷ್ಟು ದಟ್ಟವಾಗಿರುತ್ತದೆ. ಬುಡಕಟ್ಟಿಗೆ ಸೇರದ ವ್ಯಕ್ತಿಯೊಬ್ಬನು ಪ್ರತಿಯೊಂದನ್ನು ತಾನು ಅದೇ ಆಗಿ ಅಭಿನಯಿಸಿ ತೋರಿಸುತ್ತಾನೆ. ಏಕೆಂದರೆ ಅವನಿಗೆ ಅದು ವಿವರಿಸಲಾಗದ ಸಂಗತಿಗಳನ್ನು ಅರ್ಥಮಾಡಿಕೊಳ್ಳುವ ಅತ್ಯಂತ ಸುಲಭದ ದಾರಿ. ಎಷ್ಟೊ ಸಲ ನಾವು ರಂಗಭೂಮಿಯ ಅಂಶಗಳನ್ನು ಒಳಗೊಂಡಿರುವ ಧಾಮರ್ಿಕ ವಿಧಿಗಳನ್ನು ರಂಗಭೂಮಿಯೆಂದೇ ತಪ್ಪು ತಿಳಿಯುತ್ತೇವೆ. ಇದು ಸರಿಯಲ್ಲ. ಧಾಮರ್ಿಕ ವಿಧಿಗಳಿಂದ ತನ್ನ ಬಿಡುಗಡೆಯನ್ನು ಪಡೆದುಕೊಂಡಾಗ ಮಾತ್ರ ರಂಗಭೂಮಿಯು ನಿಜವಾದ ರಂಗಭೂಮಿಯಾಗಿ ಮೈದಳೆಯುತ್ತದೆ. ಅಸ್ತಿತ್ವದ ಸಮಸ್ಯೆಗಳನ್ನು ಕೇವಲ ಧಾಮರ್ಿಕ ವಿಧಿಗಳಿಂದ ಮಾತ್ರವೇ ಪರಿಹರಿಸಿಕೊಳ್ಳುವುದು ಅಸಾಧ್ಯವಾದಾಗ ಬಿಡುಗಡೆ ಅಸಂಭವವೆನಿಸುತ್ತದೆ. ಸಮಕಾಲೀನ ಬದುಕಿನ ಅಸ್ತಿತ್ವದ ಸಮಸ್ಯೆಯನ್ನು ಕ್ರಿಯಾವಿಧಿಯ ರಂಗಾಂಶಗಳು ಬಿಡಿಸಲಾರವು ಅಥವಾ ಕ್ರಿಯಾವಿಧಿ ಆಚರಣೆಗಳಿಂದ ಹೊರಗಿರುವ ಸಮುದಾಯವು ತನ್ನ ಅಸ್ತಿತ್ವದ ಸಮಸ್ಯೆಯನ್ನು, ಸಮುದಾಯವೊಂದರ ಕ್ರಿಯಾವಿಧಿ ಆಚರಣೆಗಳಿಂದ ಹೊರಗಿರುವ ಸಮುದಾಯವು ತನ್ನ ಅಸ್ತಿತ್ವದ ಸಮಸ್ಯೆಯನ್ನು, ಸಮುದಾಯದೊಂದರ ಕ್ರಿಯಾವಿಧಿ ಆಚರಣೆಯಿಂದ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಸಾಮಾಜಿಕ ಬೆಳವಣಿಗೆಯ ವಿಧಿ ಮೂಲವಾದ ಪ್ರಜ್ಞೆಯನ್ನು ಅನಾವಶ್ಯಕವೆನಿಸಿದಾಗ ರಂಗಭೂಮಿಯು ಬಿಡುಗಡೆಗೊಳಿಸುತ್ತದೆ. ಚಾರಿತ್ರಿಕವಾಗಿ ಹೇಳುವುದಾದರೆ ಇದು ರಂಗಭೂಮಿಯು ಜಾತ್ಯತೀತವಾಗುವ ಹಾದಿಯಲ್ಲಿ ಮೊದಲ ಹೆಜ್ಜೆ.

ಇವಿಷ್ಟು ಸಂಗತಿಗಳು ಆನ್ವಯಿಕ ಮೀಮಾಂಸೆಗೆ ಸಂಬಂಧಿಸಿದ ತಾತ್ವಿಕ ಸಂಗತಿಗಳಾಗಿವೆ. ಇವುಗಳ ಆಧಾರದಲ್ಲಿ ಪ್ರಯೋಗಗಳು ನಡೆಯಬೇಕಾಗಿದೆ. 

ಶ್ರೀಪಾದ ಭಟ್ಟ್

ಗೋಡೆ ದಶಾವತಾರ 'ಗೋಡೆ ಚಿತ್ತಾರ' -ಡಾ. ವಿಠ್ಠಲ್ ಭಂಡಾರಿ,

ಗೋಡೆ ದಶಾವತಾರ 'ಗೋಡೆ ಚಿತ್ತಾರ'

ಮೂಲತಃ ಯಕ್ಷಗಾನ ಮೌಖಿಕ ಪರಂಪರೆಗೆ ಸೇರಿದ್ದು. ಹಲವು ವರ್ಷಗಳ ಕಾಲದ ಬೆಳವಣಿಗೆ ಮತ್ತು ಬದಲಾವಣೆಗಳು ಮಾತ್ರದಲ್ಲಿ ಅದರ ವಿಮಶರ್ೆಯೂ ಮೌಖಿಕವಾಗಿಯೇ ಇತ್ತು. ಅನಕ್ಷರಸ್ಥನೂ ಗ್ರಾಮೀಣ ಎನಿಸಿಕೊಂಡ ಸಾಮಾನ್ಯ ನೋಡುಗನೂ ತಾನು ನೋಡಿದ ಯಕ್ಷಗಾನದ ನಡೆ ಮತ್ತು ನಟನಾ ಸಾಮಥ್ರ್ಯದ ಕುರಿತು ತೌಲನಿಕವಾಗಿ ಮಾತನಾಡಬಲ್ಲ. ನಟನೊಬ್ಬನ ಕುಣಿತ ಅಭಿನಯ, ಮಾತುಗಾರಿಕೆಯ ಬಗ್ಗೆ ಪ್ರತಿ ಪಾತ್ರದಲ್ಲಿ ಆತ ಮಾಡಿಕೊಂಡ ಬದಲಾವಣೆಯ ಪ್ರಸ್ತುತತೆಯ ಬಗ್ಗೆ, ಪಾತ್ರಪೋಷಣೆಯ ಬಗ್ಗೆ, ಒಟ್ಟಾರೆಯಾಗಿ ಕಲಾವಿದನೊಬ್ಬನ ಅನನ್ಯತೆಯ ಕುರಿತು ಸಾಮಾನ್ಯ ನೋಡುಗ ಕೂಡ ವಿವರಿಸಬಲ್ಲ. ಹಾಗಾಗಿಯೇ ಯಾವುದೇ ಯಕ್ಷಗಾನ, ತಾಳಮದ್ದಳೆಯ ಒಂದೇ ಪ್ರಸಂಗವನ್ನು ಹತ್ತಾರು ಸಲ ಮಾಡಿದರೂ ನೋಡಲು ಹೋಗುತ್ತಾರೆ. ನೋಡುಗನಿಗೆ ಕಿಂಚಿತ್ತಾದರೂ ವಿಮರ್ಶಕ ಪ್ರಜ್ಞೆ ಇಲ್ಲದಿದ್ದರೆ ಇದು ಸಾಧ್ಯವಿಲ್ಲ. ಪ್ರೇಕ್ಷಕರಲ್ಲಿ ನಡೆದ ಚಚರ್ೆ ಮತ್ತು ಅವರ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಕಲಾವಿದ ತನ್ನನ್ನು ತಾನು ಬದಲಾಯಿಸಿಕೊಳ್ಳುತ್ತಿದ್ದ.

ಹಾಗಾಗಿಯೇ ನಮ್ಮಲ್ಲಿ ಲಿಖಿತ ಕೃತಿಗಳಿಗೆ ಬಂದಂತೆ ಮೌಖಿಕ ಪರಂಪರೆಗೆ ಸೇರಿದ ಯಕ್ಷಗಾನ, ಸಣ್ಣಾಟ, ದೊಟ್ಟಾಟಗಳಿಗೆ ದೊಡ್ಡರೀತಿಯ ವಿಮಶರ್ೆಗಳಾಗಲೀ ವಿಶ್ಲೇಷಣೆಗಳಾಗಲೀ ಲಿಖಿತವಾಗಿ ಬಂದಿಲ್ಲ. ಆದರೆ ಇಂದು ಕಲಾವಿದರ ಜೀವನ ಚರಿತ್ರೆ, ಜೀವನ ನಿರೂಪಣೆ, ಅಭಿನಂದನಾ ಗ್ರಂಥಗಳ ಮೂಲಕ ಯಕ್ಷಗಾನ ಕಲಾಪ್ರಕಾರದ ವಿಮಶರ್ೆ, ಪಾತ್ರ ವಿಶ್ಲೇಷಣೆ ನಡೆಯುತ್ತಿವೆ. ಶತಮಾನಗಳ ಕಾಲದ ಮೌಖಿಕ ಪರಂಪರೆ ಲಿಖಿತ ರೂಪವನ್ನು ಪಡೆಯುತ್ತಿದೆ. ಸಹಜವಾಗಿಯೆ ಜಾನಪದ ಕಲಾಪ್ರಕಾರವೊಂದು ಲಿಖಿತ ರೂಪಕ್ಕೆ ಬರುವಾಗ ಒದಗುವ ಬಿಕ್ಕಟ್ಟು ಇತ್ತೀಚಿನ ಎಲ್ಲಾ ಕೃತಿಯಲ್ಲಿ ಇದೆ. ನಮ್ಮ ಬಹುತೇಕ ಕಲಾವಿದರು ಅನಕ್ಷರಸ್ಥರು ಮತ್ತು ಅಕ್ಷರಸ್ಥರಾದ ಬಹುತೇಕರು ಬರವಣಿಗೆಯನ್ನು ಒಗ್ಗಿಸಿಕೊಂಡವರಲ್ಲ. ಹಾಗಾಗಿಯೇ ಕಲಾವಿದನೊಬ್ಬನ ಶ್ರೀಮಂತ ಅನುಭವ ಅದೇ ಸಹಜತೆ ಮತ್ತು ವಸ್ತು ನಿಷ್ಠತೆಯಿಂದ ಹೊರಬರಲಾರದು. ಬಂದ ಹಲವು ಬರವಣಿಗೆಗಳು ಬೇರೊಂದು ಕೃತಿಯ 'ಅನುವಾದ' ವಿದ್ದಂತೆ ಇರುತ್ತವೆ. ಈ ಬಿಕ್ಕಟ್ಟು ತಿಳಿಯಾಗಲು ಇನ್ನಷ್ಟು ಕಾಲ ಬೇಕಾಗಬಹುದು. ನಮ್ಮ ನಡುವಿನ ಪ್ರಸಿದ್ಧ ಕಲಾವಿದ ಗೋಡೆ ನಾರಾಯಣ ಹೆಗಡೆಯವರ 'ಬದುಕು ಬಣ್ಣದ ಕಥನ' 'ಗೋಡೆ ಚಿತ್ತಾರ' ಕೃತಿಯಲ್ಲಿ ನಾವು ಕಾಣುವ ಕೆಲವು ತೊಡಕುಗಳು ಕೇವಲ ಈ ಲೇಖಕರದ್ದಲ್ಲ. ಈ ಕಾಲದ್ದೂ ಹೌದು ಎನ್ನುವದನ್ನು ನಾವು ಗಮನಿಸಬೇಕಾಗಿದೆ. ಯಕ್ಷಗಾನ ರಂಗಭೂಮಿಯಲ್ಲಿ ಹಲವು ಬದಲಾವಣೆಗಳು ನಡೆದಿವೆ. ಶಿಷ್ಟ ಪರಂಪರೆಯ ಚಹರೆಗಳನ್ನು ಅದು ಸಾಧ್ಯಂತವಾಗಿ ರೂಪಿಸಿಕೊಳ್ಳುತ್ತಿವೆ. ಅದರ ಜಾನಪದ ಸ್ವರೂಪ ಬದಲಾಗುತ್ತಿದೆ. ಇಲ್ಲಿ ಆದ ಬದಲಾವಣೆ ಸರಿ ಅಥವಾ ತಪ್ಪು ಎಂದೇನೂ ನಾನು ಇಲ್ಲಿ ವಾದ ಮಂಡಿಸುತ್ತಿಲ್ಲ. ಅದೊಂದು ಪ್ರಕ್ರಿಯೆ. (ಪ್ರೋಸೆಸ್). ಐದು ಹತ್ತು ಶತಮಾನಗಳ ಹಿಂದಿನಂತೆ ಈಗಲೂ ಇರಬೇಕು, ಇರುತ್ತದೆ ಎಂದು ನಾವೇನಾದರೂ ಎಣಿಸಿದರೆ ಅದಕ್ಕಿಂತ ಮೂರ್ಖತನ ಬೇರೊಂದಿಲ್ಲ. ಆದರೆ ಈ ಬದಲಾವಣೆಯ ಹಿಂದಿನ ಒತ್ತಡದ ಬಗ್ಗೆ, ಈ ಬದಲಾಗುವ ಪ್ರಕ್ರಿಯೆಯ ಹಿಂದೆ ಇರುವ ಸಾಂಸ್ಕೃತಿಕ ರಾಜಕಾರಣದ ಬಗ್ಗೆ ಮಾತ್ರ ಎಚ್ಚರ ಇರಲೇ ಬೇಕು. ಮತ್ತು ಅದನ್ನು ಗುರುತಿಸುವದು ಕೂಡ ಇಂದಿನ ವಿಮಶರ್ೆಯ ಅಗತ್ಯವಾಗಿದೆ. 'ಗೋಡೆ ಚಿತ್ತಾರ' ಕೃತಿಯನ್ನು ಸೂಕ್ಷ್ಮವಾಗಿ ನೋಡಿದಾಗ ಆ ಕಾಲದ ಸಾಂಸ್ಕೃತಿಕ ರಾಜಕಾರಣದ ಹೊಳಹುಗಳನ್ನು ಗುರುತಿಸಬಹುದಾಗಿದೆ.

ಗೋಡೆ ನಾರಾಯಣ ಹೆಗಡೆಯವರ ದಶಾವತಾರದ ಕಥೆ ಇದು. ಅನಾಥ ಬಾಲಕ, ನಾಟಕದ ನಟ, ಸ್ತ್ರೀ ವೇಷಧಾರಿ, ಅಂಗಡಿಕಾರ, ಹೋಟೆಲ್ ಮಾಲಿಕ, ಬಾಣಸಿಗ, ಮೇಳದ ಯಜಮಾನ, ಕೃಷಿಕ, ಮೇಳದ ಪ್ರಮುಖ ವೇಷಧಾರಿ, ಸಂಸಾರಿ ಹೀಗೆ ತಮ್ಮ 70 ವರ್ಷಗಳಲ್ಲಿ ಕಂಡ ಏಳು ಬೀಳುಗಳನ್ನು ನೋವು ನಲಿವುಗಳನ್ನು ಗೋಡೆಯವರು ಇಲ್ಲಿ ಭಾಸ್ಕರ ರಾವ್ ಮೂಲಕ ತೆರೆದಿಟ್ಟಿದ್ದಾರೆ. ನಿಜವಾದ ಬದುಕಿನಲ್ಲಿ ಕಂಡುಂಡ ಅನುಭವ ಅವರ ಅರ್ಥಗಾರಿಕೆಯಲ್ಲಿ ಯಾವಾಗಲೂ ಪ್ರತಿಧ್ವನಿಸುತ್ತಿರುವುದನ್ನು ನೋಡಬಹುದಾಗಿದೆ.

ಒಂದರ್ಥದಲ್ಲಿ ಈ ಪುಸ್ತಕ ಚರಿತ್ರೆ ಕೂಡ ಹೌದು. ಒಂದು ಕಾಲದ ಯಕ್ಷಗಾನ ಕಲೆಯ ನಡೆಯನ್ನು ನಮ್ಮೆದುರು ಇದು ತೆರೆದಿಡುತ್ತದೆ. ಒಬ್ಬ ಕಲಾವಿದನೊಂದಿಗೆ ಆತನ ಬದುಕಿನ ಕಾಲದ ಅನೇಕ ದಾಖಲೆಗಳು ಹೊರಟು ಹೋಗಿಬಿಡುತ್ತದೆ. ಅದು ಮತ್ತೆಲ್ಲೂ ಸಿಗಲಾರದು. ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಅಂತಹ ದಾಖಲೆಗಳು ಮರೆಯಾಗಿ ಹೋಗಿದೆ. ಕೆಲವೊಂದನ್ನು ಮಾತ್ರ ಒಂದು ಮಿತಿಯೊಳಗೆ ದಾಖಲಿಸಲಾಗಿದೆ. ಗೋಡೆಯವರು ಇಲ್ಲಿ ಎಷ್ಟೊಂದು ಮೇಳಗಳನ್ನು, ನಟರನ್ನು, ಪ್ರಯೋಗಗಳನ್ನು, ಪಾತ್ರ ವೈವಿಧ್ಯಗಳನ್ನು ಹೆಸರಿಸುತ್ತಾರೆ! ಸಿದ್ಧಿವಿನಾಯಕ ಯಕ್ಷಗಾನ ನಾಟ್ಯ ಕಲಾಸಂಘ, ಕೆರೆಮನೆ ವೆಂಕಟಾಚಲ ಮಿತ್ರ ಮಂಡಳಿ, ಕೊಳಗಿಬೀಸ್, ಹಣಜಿಬೈಲ್ ಮೇಳ, ಪಂಚಲಿಂಗ ಹೀಗೆ 12-13 ಮೇಳಗಳ ಕುರಿತು, ಮೇಳಗಳ ಸ್ಥಿತಿಗತಿ, ಮೇಳ ಹುಟ್ಟುವ ಅಗತ್ಯತೆ, ಕಲಾಪೋಷಕರ ಸ್ವಭಾವ, ಸ್ವರೂಪ, ಕಲಾವಿದ - ಯಜಮಾನರ ಸಂಬಂಧ ಇತ್ಯಾದಿ ಕುರಿತು ವಿವರಿಸಿದ್ದಾರೆ. ಇಲ್ಲಿ ಹೆಸರಿಸಿರುವ ಬಹುತೇಕ ಮೇಳಗಳು ಈಗ ಅಸ್ತಿತ್ವದಲ್ಲಿಲ್ಲ. ಆದರೆ ಅವೆಲ್ಲ ಯಕ್ಷಗಾನ ರಂಗಭೂಮಿಯ ಏಳ್ಗೆಗೆ ತಮ್ಮದೇ ಆದ ಕೊಡುಗೆ ನೀಡಿವೆ.

ಇದರೊಂದಿಗೆ ತೀರಾ ಮಹತ್ವದ ಭಾಗವೆಂದರೆ ಇವರ ಅವಧಿಯಲ್ಲಿ ರೂಢಿಸಲ್ಪಟ್ಟ ಹಲವು ಪೌರಾಣಿಕ ಪಾತ್ರಗಳ ಬಗ್ಗೆ ಹೇಳುತ್ತಾರೆ. ಋತುಪರ್ಣ, ಬ್ರಹ್ಮ, ಕೌರವ, ಪ್ರಚಂಡ ವಿಶ್ವಾಮಿತ್ರ, ಸಹಸ್ರಾನೀಕ, ದೃಮಿಳಾಸುರ ಮುಂತಾದ ಹೊಸ ಪಾತ್ರಗಳನ್ನು ತಾನು ನಿರ್ವಹಿಸಿದ್ದಾಗಿ ಮತ್ತು ಅದಕ್ಕೊಂದು ಹೊಸತನವನ್ನು, ಮೆರಗನ್ನು ತಂದುಕೊಟ್ಟಿರುವುದಾಗಿ ಹೇಳುತ್ತಾರೆ. ಇದನ್ನು ಸರಿಯಾಗಿ ಯಾರೂ ಗುರುತಿಸಲಿಲ್ಲವಲ್ಲ ಎಂಬ ಕೊರಗೂ ಇಲ್ಲಿ ವ್ಯಕ್ತವಾಗಿದೆ. ಅದನ್ನು ತನ್ನ ದುದರ್ೈವ ಎಂದು ನೊಂದುಕೊಳ್ಳುತ್ತಾರೆ. ಆದರೆ ಪಾತ್ರಗಳಲ್ಲಿ ಮಾಡಿಕೊಂಡ ಬದಲಾವಣೆಯ ಕುರಿತು ಪ್ರಾಸಂಗಿಕವಾಗಿ ಬಂದಿದೆ. ಆದರೆ ಇದು ಇನ್ನಷ್ಟು ಹೆಚ್ಚು ದೀರ್ಘವಾಗಿದ್ದರೆ ಅಧ್ಯಯನಕ್ಕೆ ಅನುಕೂಲವಾಗುತ್ತಿತ್ತು (ಜಿ. ಎಸ್. ಭಟ್ಟ ಅವರು ಶಂಭು ಹೆಗಡೆಯವರ ಪಾತ್ರದ ಕುರಿತು ಮಾಡಿದ ವಿಶ್ಲೇಷಣೆಯ ರೀತಿ). ಆ ಸಂದರ್ಭ ಬಂದಾಗಲೆಲ್ಲ ಅವರು ಅವಸರವಾಗಿ ಮುಂದೆ ಹೋಗಿಬಿಡುತ್ತಾರೆ.

ತನ್ನ ವೃತ್ತಿ ಬದುಕಿನಲ್ಲಿ ದುರಂತ ಪಾತ್ರವನ್ನೇ ಜನ ಇಷ್ಟಪಟ್ಟಿದ್ದನ್ನು ಮತ್ತು ಒಂದು ಹಂಗಾಮಿನಲ್ಲಿ 90ಕ್ಕೂ ಅಧಿಕ 'ಗದಾಯುದ್ಧ' ಪ್ರಸಂಗದ ಆಟ ನಡೆದುದನ್ನು ನೆನಪಿಸಿಕೊಳ್ಳುತ್ತಾರೆ. ತಮ್ಮ ಜೀವಿತಾವಧಿಯಲ್ಲಿ ಸುಮಾರು 500 ಕ್ಕೂ ಹೆಚ್ಚು ಸಲ ಕೌರವ ಪಾತ್ರ ನಿರ್ವಹಿಸಿದ್ದು ಒಂದು ದಾಖಲೆಯೇ ಸರಿ.

ಶಿವರಾಮ ಹೆಗಡೆ, ಕೊಂಡದಕುಳಿ, ಮಹಾಬಲ ಹೆಗಡೆ, ಚಿಟ್ಟಾಣಿ, ಶಂಭು ಹೆಗಡೆ, ಜಲವಳ್ಳಿ ವೆಂಕಟೇಶ ರಾವ್ ಮುಂತಾದ ಕಲಾವಿದೊಂದಿಗಿನ ಜೋಡಿ ಪಾತ್ರ, ಒಡನಾಟಗಳ ಸ್ವಾರಸ್ಯದ ಕುರಿತು ಲೇಖಕರು ಇಲ್ಲಿ ಪ್ರಸ್ತಾಪಿಸುತ್ತಾರೆ. ಗೋಡೆಯವರು ನಿರ್ವಹಿಸಿದ ಕೆಲವು ಪಾತ್ರಗಳಿಗೆ ಸಿದ್ಧಮಾದರಿಗಳಿದ್ದವು (ಉದಾ: ಗದಾಯುದ್ಧದ ಕೌರವ). ಆದರೆ ಬ್ರಹ್ಮ, ಋತುಪರ್ಣ, ಅಕ್ರೂರ, ತ್ರಿಶಂಕು ಮೊದಲಾದ ಪಾತ್ರಗಳಿಗೆ ಇಂತಹ ಸಿದ್ಧ ಮಾದರಿಗಳಿರಲಿಲ್ಲ. ಗೋಡೆಯವರೇ ರೂಪಿಸಿದರು. ಟಿಕೆಟ್ ಕೌಂಟರಿನಲ್ಲಿ ಗೋಡೆಯವರು ಇದ್ದಾರೆಯೇ ಎನ್ನುವುದನ್ನು ಕೇಳಿ ಅವರಿಲ್ಲ ಎಂದಾದರೆ ಹಿಂದಿರುಗುತ್ತಿದ್ದ ಪ್ರೇಕ್ಷಕ ಸಮುದಾಯವಿತ್ತೆಂದರೆ ಅವರ ಪಾತ್ರದ ಪರಿಣಾಮ ಎಷ್ಟೆತ್ತರಕ್ಕೆ ಬೆಳೆದಿತ್ತೆನ್ನುವುದನ್ನು ತಿಳಿಯಬಹುದು ಎನ್ನುತ್ತಾರೆ ಲೇಖಕರಾದ ಭಾಸ್ಕರ ರಾವ್ ಅವರು. 

ಇಡೀ ಕೃತಿ ಆ ಕಾಲದ ಪ್ರಮುಖ ವಾಗ್ವಾದಗಳನ್ನು ಅನಾವರಣ ಮಾಡುತ್ತದೆ. ಇಂದೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಚಾಲ್ತಿಯಲ್ಲಿರುವ ಘಟ್ಟದ ಮೇಲೆ, ಘಟ್ಟದ ಕೆಳಗೆ ಎನ್ನುವ ಭೌಗೋಲಿಕ ಬೇಧ, ಸಾಂಸ್ಕೃತಿಕ ಬೇಧವಾಗಿ ಪರಿಣಮಿಸಿ ಘಟ್ಟದ ಮೇಲಿನ ಕಲಾವಿದರು ತಾತ್ಸಾರಕ್ಕೆ ಒಳಗಾಗಿದ್ದು, ಮೂರುತಾಸಿನ ಯಕ್ಷಗಾನವನ್ನು ತಾವೇ ಮೊದಲು ಪ್ರಾರಂಭಿಸಿದರೂ ಕೆರೆಮನೆ ಮೇಳಕ್ಕೆ ಅದರ ಕ್ರೆಡಿಟ್ ಹೋಗಿದ್ದು, ಪ್ರಸಂಗಕರ್ತನಿಗೆ ನಿಷ್ಠನಾಗಿ ಬ್ರಹ್ಮನ ಪಾತ್ರ ನಿರ್ವಹಿಸಿದರೂ ಶೇಣಿಯವರಿಂದ 'ಬೀದಿಕಾಮಣ್ಣ'ನಂತಹ ಬ್ರಹ್ಮ ಎನಿಸಿಕೊಂಡಿದ್ದು, ಮಲೆನಾಡಿನ ಯಕ್ಷಗಾನ ಸಮಾವೇಶಕ್ಕೆ ತನ್ನನ್ನು ಕರೆಯದಿದ್ದುದು, ಶಿರಸಿಯಲ್ಲಿ ಚಿಟ್ಟಾಣಿಯವರೊಂದಿಗೆ ಸ್ಪಧರ್ೆಗಿಳಿಸಿ ಚೆನ್ನಾಗಿ ಮಾಡಿದರೂ ಬಹುಮಾನ  ಕೊಡದಿದ್ದುದು, ಸಿದ್ದಾಪುರದ ಭುವನೇಶ್ವರೀ ತಾಳಮದ್ದಳೆ ಕೂಟ ತನ್ನ ಮೇಲೆ ಹಗೆ ಸಾಧಿಸಿದ್ದು, ಕೆರೆಮನೆ ಮೇಳ, ಅಮೃತೇಶ್ವರೀ ಮೇಳ ಸೇರಿದ್ದು ಬಿಟ್ಟಿದ್ದು, ಅದಕ್ಕಿರುವ ಕಾರಣಗಳು ಇತ್ಯಾದಿ ಇತ್ಯಾದಿ ಅನೇಕ ಚಚರ್ೆಗಳನ್ನು ಈ ಕೃತಿ ಒಳಗೊಂಡಿದೆ. ಪುಸ್ತಕದ ತುಂಬ ಹರಡಿಕೊಂಡಿರುವ ಅವರ ಅನುಭವದಲ್ಲಿ ಅರಸಿದರೂ ಒಂದೆರಡು ಹೆಸರನ್ನು (ಜಲವಳ್ಳಿ, ಗಜಾನನ ಭಂಡಾರಿ ಇತ್ಯಾದಿ) ಹೊರತುಪಡಿಸಿದರೆ ಉಳಿದಂತೆ ಶೂದ್ರ ಕಲಾವಿದರ ಹೆಸರಿನ ಪ್ರಸ್ತಾಪವೇ ಇಲ್ಲದಿರುವುದು ಕೂಡ ಆಶ್ಚರ್ಯ ಹುಟ್ಟಿಸುತ್ತದೆ. ಅಥವಾ ಮೇಲ್ಜಾತಿಯನ್ನು ಹೊರತುಪಡಿಸಿದರೆ ಬೇರೆ ಜನಸಮುದಾಯದಿಂದ ಆ ಕಾಲದಲ್ಲಿ ಕಲಾವಿದರಾಗಿ ಕಲಾವಿದರು ರೂಪುಗೊಂಡಿರಲಿಲ್ಲವೇ ಎಂಬ ಚಚರ್ೆಯನ್ನು ಇದು ಹುಟ್ಟುಹಾಕುತ್ತದೆ. ಪ್ರಾಜ್ಞರು ಈ ಕುರಿತು ಮುಕ್ತವಾಗಿಯೇ ಚಚರ್ಿಸಬೇಕಾಗಿದೆ. ಪ್ರಾಜ್ಞರು ಈ ಕುರಿತು ಮುಕ್ತವಾಗಿಯೇ ಚಚರ್ಿಸಬೇಕಾಗಿದೆ. ಯಾಕೆಂದರೆ ಈ ವಾಗ್ವಾದ ಅಂತಿಮವಾಗಿ ಅಸ್ತಿತ್ವದಲ್ಲಿರುವ ಕಲ್ಚರಲ್ ಪಾಲಿಟಿಕ್ಸ್ನ ಸೂಕ್ಷ್ಮವನ್ನು ತೆರೆದಿಡಬಹುದು ಮತ್ತು ಕಲೆಯ ಬೆಳವಣಿಗೆಗೂ ಅನುಕೂಲವಾಗಬಹುದು.

ಏಕೋ ಓದುವುದು ನನ್ನ ತಲೆಗೆ ಹತ್ತಲೇ ಇಲ್ಲ ಎಂದು ಬಾಲ್ಯವನ್ನು ನೆನಪಿಸುವ ಗೋಡೆಯವರು ನಂತರದ ಕಲಿಕೆಯೇನಿದ್ದರೂ ಜೀವನ ಶಾಲೆಯಲ್ಲಿಯೇ ಎನ್ನುವರು. ಅವರದು ಯಕ್ಷಗಾನ ಕಲಾವಿದರ ಪರಂಪರೆಯುಳ್ಳ ಕುಟುಂಬವೇನಲ್ಲ. ಬಡತನವೊಂದನ್ನು ಹೊರತುಪಡಿಸಿದರೆ ಉಳಿದದ್ದೆಲ್ಲ ಅವರ ಸ್ವಯಾಜರ್ಿತವೇ. ಎರಡನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಅನಾಥ ಮಗು ನಾರಾಯಣ, ಮುಂದಿನ ಹಲವು ವರ್ಷ ಕಾಲ ಅವರು ಉಸಿರಾಡಿದ್ದು, ತಿಂದಿದ್ದು, ಉಂಡಿದ್ದೆಲ್ಲ ಬಡತನವನ್ನೇ. ಒಂದು ಹೊತ್ತಿನ ಕೂಳಿಗೂ ತತ್ವಾರವಾಗಿದ್ದ ಅಂಥ ಸ್ಥಿತಿಯಲ್ಲಿ ಅವರಿಗೆ ಯಕ್ಷಗಾನ ಬಯಲಾಟ ನೋಡುವ ಅದೃಷ್ಟ ಎನ್ನಬಹುದಾದ ಅವಕಾಶವೊಂದು ಹೇಗೋ ದೊರೆಯಿತು. ಆಮೇಲೆ ಕಲಾವಿದರಾಗಿ, ಸಂಸಾರಿಯಾಗಿ ಗೋಡೆಯವರು ಖ್ಯಾತನಾಮರಾದುದನ್ನು ಲೇಖಕರು ವಿವರವಾಗಿಯೇ ನಮೂದಿಸಿದ್ದಾರೆ.

ಈ ಮಧ್ಯೆ ನಡೆದ ಹಲವು ಸ್ವಾರಸ್ಯಕರ ಘಟನೆಗಳನ್ನು ಲೇಖಕರು ಗೋಡೆಯವರ ಸ್ಮೃತಿಪಟಲದಿಂದ ಹೊರತೆಗೆದಿಟ್ಟಿದ್ದಾರೆ.
1. ಯಕ್ಷಗಾನವನ್ನು ಸಮಯ ಮಿತಿಯೊಳಗೆ ಪ್ರದಶರ್ಿಸುವುದರಿಂದ ಪ್ರೇಕ್ಷಕರ ಹತ್ತಾರು ಸಮಸ್ಯೆ ನೀಗುತ್ತದೆ. ಪ್ರಸಂಗದ ಕಲಾವಿದರ ಶ್ರಮವೂ ತಗ್ಗುತ್ತದೆ ಎಂಬ ತೀಮರ್ಾನವೇ ಯಕ್ಷಗಾನವನ್ನು ಮೂರು ತಾಸಿನ ಆಟವಾಗಿಸಲು ಉತ್ತೇಜನವಾಯಿತು. ಈ ಹಿನ್ನೆಲೆಯಲ್ಲಿ ಸಮಯ ಮಿತಿಯ ಪ್ರಯೋಗಕ್ಕೆ 1954-55 ರಲ್ಲಿಯೇ ಶ್ರೀಕಾರ ಹಾಕಿದ್ದು ಗೋಡೆ, ಕೊಳಗಿ ಮತ್ತಿತರ ಗೆಳೆಯರು ಆದರೆ ಇದು 'ಮೂರುಕಾಸಿನ ಪ್ರಯೋಗ' ಎಂಬ ಮೂದಲಿಕೆಗೆ ಒಳಗಾಯಿತು. 2. ಶ್ರೀ ಸಿದ್ಧಿವಿನಾಯಕ ನಾಟ್ಯ ಕಲಾಸಂಘ ಆರಂಭವಾಗಿದ್ದು ಒಂದು ಅಮಾವಾಸ್ಯೆಯ ದಿವಸ! ಮೂರು ತಾಸಿನ ಪ್ರಯೋಗ ಮಾಡಿ ಮೂರು ಕಾಸಿನ ಪ್ರಯೋಗ ಎಂಬ ಮೂದಲಿಕೆಗೆ ಒಳಗಾಗಿದ್ದ ಗೆಳೆಯರು ಈಗ 'ಅಮಾವಾಸ್ಯೆ ಮೇಳ ಇದು. ಆಯುಷ್ಯ ಬಹಳವಿಲ್ಲ' ಎಂಬ ಮಾತನ್ನೂ ಕೇಳಬೇಕಾಗಿ ಬಂತು. 3. ಇದು ಒಂದೆರಡು ಪ್ರಸಂಗ ಮಾತ್ರ. ಇನ್ನುಳಿದಂತೆ ಶಿವರಾಮ ಹೆಗಡೆಯವರ ಮುಂದೆ ಸೈರಂದ್ರಿ ಪಾತ್ರಮಾಡಿ 'ಮಾಣಿಗೆ ಉತ್ತಮ ಭವಿಷ್ಯವಿದೆ' ಎಂತ ಹೊಗಳಿಸಿಕೊಂಡಿದ್ದು, ಶೇಣಿಯವರ ವಿಮಶರ್ೆಯಲ್ಲಿ ಬ್ರಹ್ಮನ ಪಾತ್ರ ಬೀದಿಕಾಮಣ್ಣನಾಗಿದ್ದು, ರಂಗದಲ್ಲಿ ವಲಲ ಭೀಮ ಮನೆಯಲ್ಲಿ ಸೌಟು ಹಿಡಿದು ಅಡಿಗೆ ಮಾಡಿದ್ದು, ರಾತ್ರಿಯಿಡೀ ರಂಗದಲ್ಲಿ ಮೀನಾಕ್ಷಿಯಾಗಿ ತಲೆಸುತ್ತಿ ಬಂದು ಗಟಾರ ಸೇರಿದ್ದು, ಪೇಟೆಗೆ ಅವಲಕ್ಕಿ ಮಾರಾಟಕ್ಕೆ ಹೋಗುತ್ತಿದ್ದುದು, ಮೊದಲಬಾರಿಗೆ ಆಟಕ್ಕೆ 15 ರೂ. ವೀಳ್ಯ ಪಡೆದಿದ್ದು, 'ದ್ರೌಪದಿ ಪ್ರತಾಪ' ನಡೆದಾಗ ಭೂಕಂಪವಾದರೂ ಜನಕ್ಕೆ ಅರಿವಿಗೆ ಬರದಿರುವುದು..... ಹೀಗೆ ಕೆಲವು ಲಹರಿ, ಕೆಲವು ಪುಳಕ, ಕೆಲವು ಎಚ್ಚರಿಕೆ, ಕೆಲವು ಕಟುವಾಸ್ತವ ತಿಳಿಸುವ ಘಟನೆಗಳು.

'ಪ್ರಕೃತಿ ನಮ್ಮಿಚ್ಛೆಯಂತೆ ಇರುವುದಿಲ್ಲ' ಎನ್ನುವುದು ಸ್ವತಃ ಅರಿವಿಗೆ ಬರುವ ಹೊತ್ತಿಗೆ ನಾರಾಯಣ ಹೊಳೆಯ ಅರ್ಧಕ್ಕೆ ಬಂದಾಗಿತ್ತು. ಆ ಕಡೆ ಇಲ್ಲವೇ ಈ ಕಡೆ ದಡ ಅಷ್ಟು ದೂರ. ಹಸಿವು, ನೀರಡಿಕೆ ನಮ್ಮನ್ನು ಕೇಳಿ ಬರುವುದಿಲ್ಲ. ಹಸಿವಿಗೆ ಪರಿಹಾರ ಹುಡುಕುತ್ತಾ ಹೊರಟ ನಾರಾಯಣ ಹೋಟೇಲ್ ಸೇರಿದ, ಹೋಟೇಲ್ ಕಾಮರ್ಿಕನಾಗಿ ಚಹಾ ಸಿದ್ಧಪಡಿಸಿ ಗಿರಾಕಿಗಳಿಗೆ 'ಸಪ್ಲೈ' ಮಾಡುವ ಮಾಣಿಯಾಗಿ, ಅಡುಗೆ ಭಟ್ಟನಾಗಿ...... ಏನೆಲ್ಲ ಪಾತ್ರಗಳನ್ನು ನಾರಾಯಣ ಮಾಡಿದ. ಈ ಇತಿಹಾಸ ಈಗ ಸ್ವತಃ ಗೋಡೆಯವರಿಗೂ ವಿಸ್ಮಯ ಬರಿಸುತ್ತದೆ. ಇದು ಭಾಸ್ಕರ ರಾವ್ ಅವರ ಬರವಣಿಗೆಯ ಶೈಲಿಗೆ ಒಂದು ಉದಾಹರಣೆ ಅಷ್ಟೇ. ಭಾಸ್ಕರ ರಾವ್ ಅವರು ಯಕ್ಷಗಾನದ ಒಳಹೊರಗನ್ನು ಒಳಗಿನವರಾಗಿಯೇ ಅನುಭವಿಸಿದವರಾದ್ದರಿಂದ ನಿರೂಪಣೆಯಲ್ಲಿ ಸಹಜತೆಯೂ ಆಪ್ತತೆಯೂ ಒಡಮೂಡಿದೆ.

ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಸಮಕಾಲೀನರೂ, ಸಮಬಲರೂ ಆದ ಗೋಡೆಯವರು ಜನಪ್ರಿಯತೆಯ ತಕ್ಕಡಿಯಲ್ಲಿ ಸ್ವಲ್ಪ ಸೋತರೆನ್ನಬೇಕು. ಇದಕ್ಕೆ ಕಾರಣ ಏನಿರಬಹುದು? ಅದರಲ್ಲಿ ಗೋಡೆಯವರ ಪಾಲೆಷ್ಟು? ಉಳಿದವರ ಪಾಲೆಷ್ಟು? ಎಂದು ವಿಶ್ಲೇಷಿಸಿ ಗೋಡೆಯವರ ಈವರೆಗಿನ ಸಾಧನೆಯನ್ನು ತೆರೆದಿಡಬೇಕೆನ್ನುವ ಲೇಖಕರ ಹಂಬಲ ಈ ಕೃತಿಯ ಆಳದಲ್ಲಿದೆ. ಕಲಾವಿದನೊಬ್ಬ ಹೇಳಿದಂತೆ ಇಲ್ಲಿ ದಾಖಲಾಗಿಲ್ಲ. ಆದರೆ ಲೇಖಕ, ಒದಗಿಸಿದ ಮಾಹಿತಿಯನ್ನ ಬಳಸಿಕೊಂಡೇ ತನ್ನ ಅಭಿಪ್ರಾಯವನ್ನೂ ಒಳನೋಟವನ್ನು ಜೊತೆ ಜೊತೆಗೆ ನೀಡಿದ್ದಾರೆ. ಕೆಲವೊಮ್ಮೆ ಗೋಡೆಯವರ ಹೇಳಿಕೆ ಯಾವುದು? ಭಾಸ್ಕರ ರಾವ್ ಅವರ ವ್ಯಾಖ್ಯಾನ ಯಾವುದು ಎನ್ನುವ ಗೊಂದಲ ಕೂಡ ಎದುರಾಗುತ್ತದೆ. ಇಲ್ಲಿ ಲೇಖಕರ ಆಶಯ ಗೋಡೆಯವರನ್ನು ಮಾತ್ರವೇ ಚಿತ್ರಿಸುವುದಲ್ಲ ಬದಲಾಗಿ ಗೋಡೆಯವರ ಮೂಲಕ ಆ ಕಾಲಘಟ್ಟದ ಯಕ್ಷಗಾನವನ್ನೂ, ಆಗಿನ ಜನಮನವನ್ನೂ ದಾಖಲೆಗೊಳಿಸುವ ಒಂದು ಯತ್ನವಾಗಿ ಈ ಕೃತಿ ಇರಬೇಕೆನ್ನುವುದು ನನ್ನ ಆಶಯ ಎನ್ನುವ ಅವರ ಹಂಬಲ ತೀರಾ ಮಹತ್ವವಾದದ್ದೇ. ಒಂದು ಕೃತಿಯ ಸಫಲತೆ ಇರುವುದೂ ಇಲ್ಲಿಯೇ.

ಇದರ ಪ್ರಯತ್ನವಾಗಿ ಲೇಖಕಕರು ಸ್ವಾತಂತ್ರ್ಯ ಚಳುವಳಿಯೊಂದಿಗೆ (ಅಧ್ಯಾಪ ಲಕ್ಷ-ಅಲಕ್ಷ್ಯ), ತುತರ್ುಪರಿಸ್ಥಿತಿಯ ಕಾಲದೊಂದಿಗೆ (ಕೆರೆಮನೆ ದೂರ), ಜೆ.ಪಿ.ಚಳುವಳಿಯೊಂದಿಗೆ, ಜನತಾಪಕ್ಷದ ಉಗಮದೊಂದಿಗೆ ಯಕ್ಷಗಾನ ಕ್ಷೇತ್ರದಲ್ಲಿ ಆದ ಬದಲಾವಣೆಯನ್ನು ಇಟ್ಟು ನೋಡುವ ಮಹತ್ವದ ಪ್ರಯತ್ನವನ್ನು ಅಲ್ಲಲ್ಲಿ ನೋಡಬಹುದು. ಆದರೆ ಈ ಪ್ರಯತ್ನವನ್ನು ಇನ್ನಷ್ಟು ವಿಸ್ತರಿಸಬಹುದಾಗಿತ್ತು. ಹಾಗೆಯೇ ಪಾತ್ರ ವಿಶ್ಲೇಷಣೆ ಕೂಡ ಇನ್ನಷ್ಟು ವಸ್ತು ನಿಷ್ಟಗೊಳ್ಳಬಹುದಾಗಿತ್ತು ಎನ್ನುವುದು ನನ್ನ ಆಶಯವೇ ಹೊರತು ಪುಸ್ತಕದ ಮಿತಿಯನ್ನು ಹೇಳಲು ಇದನ್ನು ಹೇಳುತ್ತಿಲ್ಲ.

ಗೋಡೆಯವರಿಗೂ 'ಗೋಡೆ ಚಿತ್ತಾರ'ವನ್ನು ಬರೆದ ಎಂ. ಕೆ. ಭಾಸ್ಕರ ರಾವ್ ಅವರಿಗೂ ಅಭಿನಂದನೆಗಳು.

- ಡಾ. ವಿಠ್ಠಲ್ ಭಂಡಾರಿ, ಉಪನ್ಯಾಸಕರು, ಸಿದ್ದಾಪುರ.

ವಿ.ಜೆ. ನಾಯಕರ 'ಕಾಲ್ನಡಿಗೆ ಪಯಣ' - ವಿಠ್ಠಲ ಭಂಡಾರಿ

ವಿ.ಜೆ. ನಾಯಕರ 'ಕಾಲ್ನಡಿಗೆ ಪಯಣ' 
ಚರಿತ್ರೆಯೊಂದಿಗೆ ಅರ್ಥ ಪೂರ್ಣ ಮುಖಾಮುಖಿ

ನಮ್ಮ ನಡುವಿನ ಸಂವೇದನಾಶೀಲ ವ್ಯಕ್ತಿ ವಿ.ಜೆ.ನಾಯಕರ ಇತ್ತೀಚಿನ ಪುಸ್ತಕ 'ಕಾಲ್ನಡಿಗೆ ಪಯಣ' ಚರಿತ್ರೆಯೊಂದಿಗೆ ಅರ್ಥಪೂರ್ಣ ಮುಖಾಮುಖಿಯೇ ಆಗಿದೆ. ಒಂದೇ ಹೊತ್ತಿನಲ್ಲಿ ಲೇಖಕರ ಒಳ ತುಡಿತವನ್ನು ಮುಕ್ಕಾಲು ಶತಮಾನಗಳ ಕಾಲ ಜಿಲ್ಲೆಯಲ್ಲಿ ನಡೆದ ರಾಜಕೀಯ ಸಾಂಸ್ಕೃತಿಕ ಪಲ್ಲಟವನ್ನೂ ವಸ್ತುನಿಷ್ಟವಾಗಿ ವಿವರಿಸುತ್ತದೆ. ಇದು ವಿ.ಜೆ. ನಾಯಕರ ಕಾಲ್ನಡಿಗೆಯಷ್ಟೇ ಅಲ್ಲ, ಚರಿತ್ರೆಯ ಒಡಲೊಳಗೆ ಓದುಗರ ಕಾಲ್ನಡಿಗೆ. ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ದ ಶಿಕ್ಷಕನೊಬ್ಬ ಪ್ರತಿಯೊಂದು ಸಂಗತಿಯನ್ನು ಬೆರಳಿಟ್ಟು ತೋರಿಸುತ್ತಾ ವಿವರಿಸುತ್ತಾ ಮುನ್ನಡೆವಂತೆ ವಿ.ಜೆ.ನಾಯಕರು ಕನ್ನಡ ಚರಿತ್ರೆಯ ಘಟ್ಟಗಳನ್ನು, ಸತ್ಯಗಳನ್ನು ಬೆರಳಿಟ್ಟು ವಿವರಿಸುತ್ತಾರೆ. 3 ಹೆಜ್ಜೆ ಇಟ್ಟು ಮುಗಿಯುವುದರೊಳಗೆ  ಅಂಕೋಲೆಯನ್ನು ಕೇಂದ್ರವಾಗಿಟ್ಟುಕೊಂಡಜಿಲ್ಲೆಯ ಮುಕ್ಕಾಲು ಶತಮಾನಗಳ ಸಾಮಾಜಿಕ, ರಾಜಕೀಯ,ಆಥರ್ಿಕ, ಶೈಕ್ಷಣಿಕ, ಸಾಂಸ್ಕೃತಿಕ ಪಯಣ ಸಾರ್ಥಕ ಪಯಣವಾಗುತ್ತದೆ.

     ಹಾಗೆ ನೋಡಿದರೆ  ಇದು ವಿ.ಜೆ. ನಾಯಕರ  ಆತ್ಮ ಕಥಾನಕದ ಟಿಪ್ಪಣೆಗಳು. ಆದರೆ 3-4 ಅಧ್ಯಾಯಗಳು ಮಾತ್ರ ಅವರ ಖಾಸಗೀ ಬದುಕಿನ ಬಗ್ಗೆ (ಸೂಕ್ಷ್ಮವಾಗಿ  ಹೊರಟರೆ ಅದೂ ಖಾಸಗೀ ಸಂಗತಿಗಳಾಗಿ ಉಳಿದಿಲ್ಲ. ಶೈಕ್ಷಣಿಕವಾಗಿ ಆಗತಾನೆ ತೆರೆದುಕೊಳ್ಳುತ್ತಿರುವ, ಶಿಕ್ಷಣದ  ಪರಿಣಾಮದಿಂದಾಗಿ ಪ್ರಗತಿಪರವಾದ ಬದಲಾವಣೆಗೆ ಸ್ಪಂಧಿಸುತ್ತಿರುವ ಒಂದು ವಿಶಿಷ್ಟ ಕುಟುಂಬದ ಸಮಾಜ ಶಾಸ್ತ್ರೀಯ ಅಧ್ಯಯನವೂ ಆಗಿದೆ.) ಇದ್ದರೆ  ಉಳಿದೆಲ್ಲ ಭಾಗಗಳು ಇದರಾಚೆಯೇ ಇದೆ. ಇದು ವಿ.ಜೆ.ನಾಯಕರ ಆತ್ಮಕಥನದಿಂದ ಪ್ರಾರಂಭವಾದರೂ ಅದು ಅಂಕೋಲೆಯ ಆತ್ಮಕಥನವಾಗಿ ಮಾರ್ಪಡುವುದು. ಅಂಕೋಲೆಯಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿ, ರೈತ ಚಳುವಳಿ, ಶೈಕ್ಷಣಿಕ ಚಳುವಳಿಯ ಆತ್ಮಕಥನವಾಗಿ ಮಾರ್ಪಡುವುದು ಈ ಪುಸ್ತಕದ ಮಹತ್ವವನ್ನು ಇಮ್ಮಡಿಗೊಳಿಸಿದೆ.

ಇನ್ನೂರು ಪುಟಗಳ ಆಸು-ಪಾಸಿನಲ್ಲಿ ವಿ.ಜೆ.ನಾಯಕರು 'ವಿಠೋಬ'(ಚಾಲ್ತಿಯಲ್ಲಿ ಇಟೋಬ) ಎನ್ನುವ ತನ್ನ ಹೆಸರು 'ಜೋಗಿ' ಎನ್ನುವ ತಂದೆಯ ಹೆಸರು ಬಾಲ್ಯದಲ್ಲಿ  ಉಂಟುಮಾಡಿದ ಕಿರಿಕಿರಿಯಿಂದ ಪ್ರಾರಂಭಿಸಿ ತನ್ನ ಬಾಲ್ಯದ  ಶಿಕ್ಷಣ, ಅಪರೂಪದ ಶಿಕ್ಷಕ ವೃಂದ, ಯಕ್ಷಗಾನದ ನಂಟು, ತನ್ನ ಸಮಾಜದಲ್ಲಿ ಗಳಿಸಿದ ಮೊದಲ ಪದವಿ, ವಿದ್ಯಾಥರ್ಿ ಜೀವನದಲ್ಲಿದ್ದ ಹಿಂಜರಿಕೆ, ಶಿಕ್ಷಕ ವೃತ್ತಿ, ಸಮಾಜವಾದಿ ಚಿಂತನೆಯಂಚಿಗೆ ಒಲವು, ದಿನಕರ ದೇಸಾಯಿಯವರ ಸಂಪರ್ಕ, ರೈತ ಹೋರಾಟದ ಸಂಪರ್ಕ, ಬಾಲ್ಯದಲ್ಲಿ ಕಂಡ ಸ್ವಾತಂತ್ರ್ಯಹೋರಾಟ , ಇಡೀ ಕುಟುಂಬವೇ ಸ್ವಾತಂತ್ರ್ಯ ಯಜ್ಞದಲ್ಲಿ ತೊಡಗಿದ್ದು, ಸತ್ಯಾಗ್ರಹ ಸ್ಮಾರಕ ಹೈಸ್ಕೂಲು ಕಟ್ಟಿದ್ದು,ಅಕಾಡೆಮಿ ಸದಸ್ಯತ್ವ, ಶಿಕ್ಷಕ ಪ್ರಶಸ್ತಿ, ರಾಜಕೀಯ ಮತ್ತು ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಸಮಾಜವಾದಿ ನಾಯಕರನ್ನು ಬೇಟಿ ಆಗಿದ್ದು,ಪಕ್ಷದ ಮುಖಂಡರಾಗಿದ್ದು ಚುನಾವಣೆಯ ಒಳ ಹೊರಗು, ಸಮಾಜವಾದಿ ಆಂದೋಲನದ ಕೊನೆ ಇತ್ಯಾದಿಗಳ ಬಾವುಕ ವಿಶ್ಲೇಷಣೆ ಒಂದೆಡೆಯಾದರೆ, ತಂದೆ ಜೋಗಿನಾಯಕ, ಶತಾಯುಶಿ ಜೋಗಿ ಬೀರಣ್ಣ ನಾಯಕ,ಹೋರಾಟಗಾರ ಶಂಕರ ಕೇಣಿ, ಬಡತನವನ್ನೇ ಹಾಸಿಹೊದೆದು ಬರೆದ ಪತ್ರಕರ್ತ ಅಮ್ಮೆಂಬಳ ಆನಂದ ಖಾಸಗೀ ಗೆಳೆಯ ಶಾಂತಾರಾಮ ನಾಯಕ ಹಿಚ್ಕಡ, ಅಂಕೋಲೆಗೆ ಗಾಂಧೀಜಿ ಬಂದಾಗ ಮಾಲೆಹಾಕಿ  ಸ್ವಾಗತಿಸಿದ, ಅವರು ಸಹಿಹಾಕಿಕೊಟ್ಟ ಪುಸ್ತಕವನ್ನು ಆಗಾಗ ತೆರೆದು ತೋರಿಸುತ್ತಿರುವ ಸುಕ್ರು ಮಾಸ್ತರ...... ಹೀಗೆ ಹಲವರ ವ್ಯಕ್ತಿತ್ವ ವಿಶ್ಲೇಷಣೆ ಮತ್ತು ಅವರೊಂದಿಗಿನ ಆತ್ಮೀಯ ಸಂಬಂಧದ ಜೊತೆ ತೆರೆದುಕೊಳ್ಳುವ ಜಗತ್ತು ಇನ್ನೊಂದೆಡೆ ತೀರಾ ವಿಸ್ತಾರವಾದ ಸಂಘರ್ಷಮಯ ಜಗತ್ತು ಇದು.
ಈ ತಲೆಮಾರಿಗೆ ಇದು ಹೊಸದು, ಹೋರಾಟ ಮರೆತಿರುವ ಯುವಜನ, ಹೋರಾಟದಿಂದ ನಾಡು ಕಟ್ಟಿದ ಪ್ರಜ್ಞೆ ಕಳೆದುಕೊಂಡ ಜನಪ್ರತಿನಿಧಿಗಳು ಅವಶ್ಯವಾಗಿ ಇದನ್ನು ಓದಬೇಕು. ಬೇಟಿ ಆದಾಗೆಲ್ಲಾ ಜಿಲ್ಲೆಯ ಇಂದಿನ ರಾಜಕಾರಣದ ಕುರಿತು ನಿರಾಶಾವಾದದಿಂದ ಮಾತನಾಡುತ್ತಲೇ, ಯುವಜನರು ಮತ್ತೆೆ ನಾಡುಕಟ್ಟುವ ವೀಳ್ಯ ಸ್ವೀಕರಿಸಬೇಕು; ಸ್ವೀಕರಿಸ್ಯಾರು ಎಂಬ ಆಶಾವಾದವನ್ನು ಒಡಲೊಳಗೆ ತುಂಬಿಕೊಂಡಿರುವ ವಿ.ಜೆ.ನಾಯಕರ ಒಳ ಸಂಘರ್ಷಗಳು ಈ ಕೃತಿಯನ್ನು ರೂಪಿಸಿದೆ ಎಂದುಕೊಂಡಿದ್ದೇನೆ.

      'ಶಿಕ್ಷಣ-ಸಂಘಟನೆ-ಪರಿವರ್ತನೆ'ಈ ಮೂರು ಅಂಶಗಳು 'ಕಾಲ್ನಡಿಗೆ ಪಯಣ'ದಲ್ಲಿ ಅಂತರ್ವಾಹಿನಿಯಾಗಿ ಹರಿದಿದೆ. ಈ ಮೂರು ಅಂಶಗಳು ಒಂದಕ್ಕೊಂದು ಪೂರಕವಾಗಿ ಪ್ರವಹಿಸಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಈ ನೆಲದ್ದು. ಆದರೆ ಇಲ್ಲಿ ಶಿಕ್ಷಣ ಮತ್ತು ಸಂಘಟನೆ'ಗಳು ಗುಣಾತ್ಮಕವಾದ ಬೆಳವಣಿಗೆ ಇದ್ದಿತ್ತಾದರೂ ಅದು 'ಪರಿವರ್ತನೆ'ಗೆ ಸಾಕಾಗುವಷ್ಟಿರಲಿಲ್ಲ. ಬಹುಶಃ ಇದಕ್ಕೆ ಪರಿವರ್ತನೆಯ ಕುರಿತು ಶಿಕ್ಷಣ ಮತ್ತು ಸಂಘಟನೆಗಳಿಗಿರುವ ಸೈದ್ಧಾಂತಿಕ ತಿಳುವಳಿಕೆ(ಸ್ಪಷ್ಟತೆಯ)ಕೊರತೆ ಇರಬಹುದು.

ಶಿಕ್ಷಣದ ಕುರಿತಂತೂ ಲೇಖಕರ ಒಲವು ಸ್ತುತ್ಯಾರ್ಹ. ಶಾಲೆಗೆ ಸ್ಥಳ ಒದಗಿಸುವುದು, ಶಾಲೆ ಕಟ್ಟುವುದು, ಸಾಕ್ಷರತೆ,ವೃತ್ತಿ ಶಿಕ್ಷಣ,ಗ್ರಂಥಾಲಯ ಇತ್ಯಾದಿಗಳಿಗೆ ಬದುಕಿನ ಬಹುಭಾಗವನ್ನು ಮೀಸಲಿಟ್ಟಿದ್ದಾರೆ. ಅತ್ಯುತ್ತಮ ಶಿಕ್ಷಕರೆಂದು ರಾಷ್ಟ್ರಪ್ರಶಸ್ತಿ ಗಳಿಸಿದ ಲೇಖಕರು ಶಿಕ್ಷಕರ ಜವಾಬ್ದಾರಿಯನ್ನು ಹೀಗೆ ಗುರುತಿಸಿದ್ದಾರೆ. ಶಿಕ್ಷಕನಾದವನು ಸಾಮಾಜಿಕ, ಸಾಹಿತ್ಯಿಕ,ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು.ಅವನು ಇತರರಿಗಿಂತ ಹೆಚ್ಚು ರಾಜಕೀಯ ಪ್ರಜ್ಞೆಉಳ್ಳವನಾಗಬೇಕು ಎಂದು ನಾನು ನಂಬಿದ್ದೇನೆ. ಯಾವ ಶಿಕ್ಷಕನು ರಾಜಕೀಯ,ಸಾಮಾಜಿಕ,ಸಾಂಸ್ಕೃತಿಕ ಸಾಹಿತ್ಯದ ವಿಷಯದಲ್ಲಿ ಒಲವು ತಿಳುವಳಿಕೆ, ಅಭಿರುಚಿಗಳನ್ನು ಬೆಳಸಿಕೊಂಡಿರುವುದಿಲ್ಲವೋ,ಅವನು ವರ್ಗದ ಕೋಣೆಯಲ್ಲಿ ಎಷ್ಟೇ ಉತ್ತಮ ಶಿಕ್ಷಕನಾಗಿರಲಿ ಅದರಿಂದ ಏನೂ ಪ್ರಯೋಜನ ಇಲ್ಲ.ಎಂದು ನನ್ನ ನಂಬಿಕೆ.(ಪು-183)ಎನ್ನುವ ಮಾತು ಶಿಕ್ಷಕರ ಜವಾಬ್ದಾರಿ ಗುರುತಿಸುವಲ್ಲಿ ಮಹತ್ವಪೂರ್ಣವಾದದ್ದಾಗಿದೆ.(ಸ್ವತಃ ವಿ.ಜೆ.ನಾಯಕರು ಹೀಗೆಯೇ ವೈವಿಧ್ಯಮಯವಾಗಿ ಬದುಕಿದ್ದನ್ನು ಆತ್ಮಕತೆ ತೆರೆದಿಡುತ್ತದೆ.) ಹಾಗಾಗಿಯೇ ಅವರು ಸಾಹಿತಿ,ಒಡನಾಡಿ ಹಿಚ್ಕಡ ಶಾಂತಾರಾಮ ನಾಯಕರ ಬಗ್ಗೆ ಬರೆಯುವಾಗ,(ಶಾಂತಾರಾಮ ಕ್ಲಾಸ್ ರೂಮಿನಲ್ಲಿ ಚೆನ್ನಾಗಿ ಪಾಠಮಾಡಬಲ್ಲವನಷ್ಟೇ ಅಲ್ಲ ಸಾಮಾಜಿಕ ಪ್ರಜ್ಞೆ ಮತ್ತು ಹೊಣೆಗಾರಿಕೆ ಉಳ್ಳ ಒಬ್ಬ ಪರಪೂರ್ಣ ಶಿಕ್ಷಕನಾಗಿದ್ದಾನೆ.ಪು.189), ಡಾ.ಆರ್.ವಿ,ಭಂಡಾರಿಯವರ ಬಗ್ಗೆ ಬರೆಯುವಾಗ (ಆರ್.ವಿ.ಭಂಡಾರಿಯವರು ಸಾಮಾಜಿಕ ಕಳಕಳಿಯ ತೀವ್ರ ಸಂವೇದನಾಶೀಲ ವ್ಯಕ್ತಿ. ಅನ್ಯಾಯದ ವಿರುದ್ಧ ಪ್ರತಿಭಟನೆಗೆ ನಿಂತ ಕಾಲ ಮೇಲೆ ಸಿದ್ಧ. ಒಬ್ಬ ಶಾಲಾಶಿಕ್ಷಕ ಹೇಗಿರಬೇಕು ಎಂದು ಕೇಳಿದರೆ ಶ್ರೀ ಆರ್.ವಿ.ಭಂಡಾರಿಯವರ ಹಾಗಿರಬೇಕು ಎಂದು ಖಂಡಿತವಾಗಿ ಹೇಳುತ್ತೇನೆ. ಶಿಕ್ಷಕರಾಗಿ ತನ್ನ ಹೊಣೆಗಾರಿಕೆ ಏನು ಎನ್ನುವುದನ್ನು ಅವರಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡವರು ಬಹಳಷ್ಟು ಕಡಿಮೆ-ಪು.203), ಅಗೇರರಿಗಾಗಿ ಮೊದಲು ಶಾಲೆ ತೆರೆದ ಸುಕ್ರು ಮಾಸ್ತರರ ಬಗ್ಗೆ ಬರೆಯುವಾಗ (ಅಸ್ಪೃಶ್ಯರಾದ ಅಗೇರ ಕುಟುಂಬದಲ್ಲಿ ಜನಿಸಿದ್ದರೂ ಸುಕ್ರುಮಾಸ್ತರರು ಇನ್ನಿತರ ಸಮಾಜದಲ್ಲಿಯೂ ಒಂದು ಗೌರವದ ಸ್ಥಾನವನ್ನು ಪಡೆದುಕೊಂಡಿದ್ದರು. ಏಕೆಂದರೆ ಅವರು ಶಿಕ್ಷಕರಾಗಿದ್ದರು.ಹೇಗೋ ಶಿಕ್ಷಕರಾಗುವಷ್ಟು ಶಿಕ್ಷಣ ಕಲಿತು ತನ್ನ ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ 1930ರ ದಶಕದಷ್ಟು ಹಿಂದೆಯೇ ನಮ್ಮೂರ ವಂದಿಗೆಯಲ್ಲಿ 'ಆಗೇರ ಶಾಲೆ'ತೆರೆದ ಸುಕ್ರು ಮಾಸ್ತರರ ಸಾಧನೆ ಕೌತುಕ ಪಡುವಂತದ್ದಲ್ಲವೆ?... ಉತ್ತಮ ಸಮಾಜ ಸೇವಕನಾಗಿ, ಶಾಲಾಶಿಕ್ಷಕನಾಗಿ ಯಕ್ಷಗಾನ ಕಲಾವಿದನಾಗಿ ಹೆಸರುವಾಸಿಯಾದ ಶ್ರೀಮಾನ್ ಸುಕ್ರುಮಾಸ್ತರರ ನೆನಪಿಗೆ ನಮನಗಳು(ಪು.152-53) ಲೇಖಕರು ಅವರ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿದ ಕಡೆಗೇ ಹೆಚ್ಚು ಒತ್ತು ಕೊಡುತ್ತಾರೆ. ಶಿಕ್ಷಕನೊಬ್ಬ ಶಾಲೆಯ ಶಿಕ್ಷಕನಾದರೆ ಸಾಲದು ಸಮಾಜಕ್ಕೇ ಶಿಕ್ಷಕನಾಗಬೇಕೆಂಬ ಆಸೆ ಅವರದು. ಆಕಾರಣಕ್ಕಾಗಿಯೇ ಅವರು 'ನಾನೇಕೆ ಶಿಕ್ಷಕನಾದೆ? ಎಂಬ ಲೇಖನವನ್ನೇ ಬರೆದಿದ್ದಾರೆ. ಆಡಳಿತಕ್ಕೆಂದು ಹೆಚ್ಚು ಒತ್ತುಕೊಟ್ಟಿದ್ದರಿಂದ ಒಳ್ಳೆಯ ಶಿಕ್ಷಕನಾಗುವುದರಿಂದ ವಂಚಿತನಾದ ಬಗ್ಗೆ ಸಣ್ಣ ಕೊರಗು ಅವರಲ್ಲಿ ಇದ್ದಂತಿದೆ. ಯಾವುದೇ ಸಂಗತಿ/ಸಂಘಟನೆಯನ್ನು ಹೀಗೆ ಹೇಳಿಬಿಡುವ ಪ್ರವೃತ್ತಿ ವಿ.ಜೆ.ನಾಯಕರದ್ದಲ್ಲ.ಅವನ್ನು ಆಯಾಕಾಲದ ಒತ್ತಡಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿಯೇ ಮುಂದೆ ಹೋಗುತ್ತಾರೆ. 'ಸ್ವಾತಂತ್ರ್ಯಸಮರ ಭೂಮಿಯಲ್ಲಿ ಹೈಸ್ಕೂಲು ಸ್ಥಾಪನೆ'; ಆಗೇರರ ಸಾಮಾಜಿಕ ಸ್ಥಿತಿಗತಿ ನಾನು ಕಂಡಂತೆ', ನಾಟಕ ಅಕಾಡೆಮಿ ಸದಸ್ಯನಾಗಿ...., 'ಮೂವರು ಸಮಾಜವಾದಿ ಗೆಳೆಯರು', ಕನರ್ಾಟಕದ ಮೊದಲ ರೈತ ಚಳುವಳಿ', ಜೋಡಿಯಾಟ ಮುಂತಾದ ಅಧ್ಯಾಯಗಳು ಇದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಅವರ ಸೈದ್ಧಾಂತಿಕ ಇತಿ-ಮಿತಿಗಳನ್ನೂ ಗುರುತಿಸಲು ಸಾಧ್ಯ.
ಅವರು ನಂಬಿದ ಸಿದ್ಧಾಂತದ ಬಗ್ಗೆ ಅತ್ಯಂತ ಪ್ರಾಮಾಣಿಕರಾಗಿರುವುದು(ಚಿಕ್ಕಂದಿನಿಂದ ಅವರನ್ನು ರೂಪಿಸಿದ ಲೋಹಿಯಾ ಸಮಾಜವಾದಿ ತಿಳುವಳಿಕೆ ಈವರೆಗೂ ಮುಂದುವರಿದದ್ದು, ಮತ್ತು ಆ ಹಿನ್ನೆಲೆಯಿಂದಲೇ ಸಮಾಜವನ್ನೂ ಕುಟುಂಬವನ್ನೂ ನೋಡುವುದು) ಮತ್ತು ಬದುಕಿನ ಮುಸ್ಸಂಜೆಯಲ್ಲೂ ಅವನ್ನು ಬದುಕಿನ ಭಾಗವಾಗಿಸಿಕೊಳ್ಳುವ ಕೆಚ್ಚು ಅವರ ವ್ಯಕ್ತಿತ್ವವನ್ನು ಆಪ್ತವನ್ನಾಗಿಸುತ್ತದೆ. ಉದಾ: ಜಡ ಸಂಪ್ರದಾಯಗಳನ್ನು ಬದುಕಿನ ಎಲ್ಲಾ ಕ್ಷೇತ್ರಗಳಿಂದಲೂ ತೊಡೆದು ಹಾಕಿ ಒಂದು ಹೊಸರೀತಿಯನ್ನು ಕಾಣಿಸಿದ ಹೊರತು ಬದುಕಿಗೆ ಚಲನಶೀಲತೆಯ ಗುಣ ಸಿಕ್ಕುವುದಿಲ್ಲ.. ಮರಣಾನಂತರ  ನನ್ನ ದೇಹವನ್ನು ಊರಿನ ಸ್ಮಶಾನದಲ್ಲಿ ನಮ್ಮ ತಂದೆಯವರ ವೃಂದಾವನದ ಹತ್ತಿರವೇ ಚಿತೆಗೆ ಏರಿಸುವುದು.... ಬ್ರಾಹ್ಮಣರು ಹೇಳಿಕೊಟ್ಟ ರೂಢಿಗತವಾದ ಯಾವ ಶ್ರಾದ್ಧ ಕಮರ್ಾದಿ ವಿಧಿ-ವಿಧಾನವನ್ನು ಅನುಸರಿಸುವುದು ಬೇಡ... ನನ್ನ ಚಿತಾಭಸ್ಮವನ್ನು ನನ್ನ ಬದುಕಿನ ಅತ್ಯಂತ ಮಹತ್ವದ ಕಾಲಾವಧಿಯನ್ನು ಸವೆಸಿದ ನನ್ನ ಶಾಲಾ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ನೆಲದಲ್ಲಿ....(ಪು.194-95)ಚೆಲ್ಲಿದರೆ ಸಾಕು ಎಂದು ಆಶಿಸುತ್ತಾರೆ. ಹೀಗೆ ಸಿದ್ಧಾಂತದ ಬಗ್ಗೆ ಪ್ರಾಮಾಣಿಕರಾಗಿರುವುದರಿಂದಲೇ 75ರ ಹೊಸ್ತಿಲಲ್ಲಿ ಯುವಕರ ಜೀವನೋತ್ಸಾಹ ಇಟ್ಟುಕೊಳ್ಳಲು ಸಾಧ್ಯ ಆಗಿದೆ.

    ಈ ಕೃತಿಯ ಇನ್ನೊಂದು ಮಹತ್ವದ ಅಂಶ ಅದರಲ್ಲಿ ಪ್ರಸ್ತಾಪಿತವಾದ ಚಾರಿತ್ರಿಕ ದಾಖಲೆಗಳು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಂಕೋಲಾ, ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡವರ ಹೆಸರುಗಳು, ಜನಸೇವಕ ಪತ್ರಿಕೆಯ ಪ್ರಾರಂಭ ಮತ್ತು ನಿಲುಗಡೆ,ನಾಡವರ ಪತ್ರಿಕೆ 'ಸುಧಾಕರ-ಯ ಪ್ರಸ್ತಾಪ, ಉ.ಕ.ಜಿಲ್ಲೆಯಲ್ಲಿ ಪ್ರಾರಂಭವಾದ ಶೈಕ್ಷಣಿಕ ಸಂಸ್ಥೆಗಳು, ಮತ್ತು ವರ್ಷ, ಯಕ್ಷಗಾನದ ಕುರಿತು ಕೆಲವು ಸಂಗಾತಿಗಳು, ಕಲಾವಿದರ ಹೆಸರು,ಅಂಕೋಲಾದ ರಾಜಕಾರಣದ ವಿವಿಧ ಘಟ್ಟಗಳು ಜಿಲ್ಲೆಯಲ್ಲಿ ಸಮಾಜವಾದ ಏಳುಬೀಳು...... ಹೀಗೆ ಹತ್ತು ಹಲವು ವಸ್ತುನಿಷ್ಠ ದಾಖಲೆಗಳು ಇಲ್ಲಿ ಲಭ್ಯ; ಯಾಕೆಂದರೆ ಇದ್ಯಾವುದೂ ಓದಿ ಬರೆದಿದ್ದಲ್ಲ; ಸ್ವತಃ ಪಾಲ್ಗೊಂಡು ಬರೆದದ್ದು ಎನ್ನುವುದಕ್ಕಾಗಿ.

ಆದರೆ ವಿ.ಜೆ.ನಾಯಕರು ಸಮಾಜವಾದದ ಸುದ್ದಿ ಬಂದಾಗೆಲ್ಲಾ ಹೆಚ್ಚು ಭಾವುಕರಾಗುತ್ತಾರೆ. ಇದರ ಬಗ್ಗೆ  ಹೇಳಿದಷ್ಟೂ ಸಾಲದು; ಮತ್ತೆ ಹೇಳೋಣವೆಂದು ಸಂದರ್ಭ ಸೃಷ್ಠಿಸಿಕೊಂಡು ಹೇಳುತ್ತಾರೆ.ಈ ಭಾವುಕತೆಯಿಂದಾಗಿಯೇ ಅವರು ಉ.ಕ.ಜಿಲ್ಲೆಯ ಸಮಾಜವಾದದ ಅವನತಿಯ ಹಿಂದಿನ ಕಾರಣವನ್ನು ಅರಸಲು ಪ್ರಯತ್ನಿಸದಂತೆ ತಡೆದಿದೆ. ಲೋಹಿಯಾ ಬಗ್ಗೆ ಅತಿ ಗೌರವ,ಪ್ರೀತಿ ಬೆಳೆಸಿಕೊಂಡ ಸಮಾಜವಾದವನ್ನು ಚೈತನ್ಯ ಪೂರ್ಣಗೊಳಿಸಿದ ಲೋಹಿಯಾ ನಿಜವಾಗಿಯೂ ಏಶಿಯಾದ ಪ್ರವಾದಿ ಎನ್ನಲಾಗಿದೆ.(ಪು.134) ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ದಿನಕರ ದೇಸಾಯಿಯವರ ಬಗ್ಗೆ ಬರೆಯುವಾಗಲೂ(ಕನರ್ಾಟಕದ ಮೊದಲ ರೈತ ಚಳುವಳಿ' ಮತ್ತು ಇತರೆ ಕೆಲವು ಲೇಖನದಲ್ಲ್ಲಿಯೂ) ಇದೇ ಭಾವುಕತೆ ಇದೆ. ದಿನಕರ ದೇಸಾಯಿಯವರನ್ನು ಮೊದಲ ಸತ್ಯಾಗ್ರಹಿ ಎಂದು  (ರೈತ ಹೋರಾಟ ಗಾರನೆಂದು ನಾನು ಅರ್ಥಮಾಡಿಕೊಂಡೆ) ಗುರುತಿಸುತ್ತಾರೆ. ಜಿಲ್ಲೆಯ ರೈತ ಹೋರಾಟವೆಂದರೆ ದೇಸಾಯಿಯವರ ಹೋರಾಟ ಮಾತ್ರ ಆಗಿರಲಿಲ್ಲ.ಇವರಿಗಿಂತ ಮೊದಲೇ ಜಿಲ್ಲೆಯಲ್ಲಿ ರೈತ ಹೋರಾಟ ಇತ್ತು; ಆ ನಂತರವೂ ಇದೆ. ವಿ.ಜೆ.ನಾಯಕರು ಅದನ್ನು ಮನಗೊಟ್ಟು ಚಚರ್ಿಸುವುದಿಲ್ಲ. ಅಂಕೋಲೆಯವರೇ ಆದ ಗಿರಿ ಪಿಕಳೆಯವರ ಬಗ್ಗೆ ಒಂದೆರಡು ಬಾರಿ  ಪ್ರಾಸಂಗಿಕವಾಗಿ ಬಂದಿದೆಯೇ ಹೊರತಾಗಿ ಮಹತ್ವಪೂರ್ಣ ಚಚರ್ೆ (ಅವರ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳ ಬಗ್ಗೆ) ನಡೆಸದಿರುವುದು ಯಾತಕ್ಕಿರಬಹುದು ಎಂಬ ಸಂಶಯ ಒಮ್ಮೆ ಮಿಂಚಿಮರೆಯಾಗಿಬಿಡುತ್ತದೆ.ಹೀಗೆ ಕೆಲವು ವ್ಯಕ್ತಿಗಳ ಕುರಿತಾದ, ಸಿದ್ಧಾಂತದ ಕುರಿತಾದ ಭಾವುಕತೆ ಕೆಲವು ಚಾರಿತ್ರಿಕ ಸತ್ಯವನ್ನೇ ಮರೆಮಾಚಿಬಿಡಬಹುದೆನ್ನುವ ಭಯ ನನ್ನದು.

ಈ ಪುಸ್ತಕದಲ್ಲಿ ವಿ.ಜೆ.ನಾಯಕರು ಸಮಾಜವಾದಿ ಪಕ್ಷದ(ಸೋಷಿಲಿಸ್ಟ್ ಪಾಟರ್ಿ) ಮಿತಿಗಳ ಕುರಿತು- ಆಗಲ್ಲದಿದ್ದರೂ ಈಗ ಅವನ್ನು ಸರಿಯಾಗಿ ಗುರುತಿಸಬಹುದು-ಎಲ್ಲೂ ಗಂಭೀರವಾಗಿ ವಿಶ್ಲೇಷಿಸಿಲ್ಲ. ಜಿಲ್ಲೆಯಲ್ಲಿ ಸಮಾಜವಾದಿ ಸಿದ್ಧಾಂತವನ್ನು ಬೇಳೆಸುವಲ್ಲಿ ದೇಸಾಯಿಯವರು ಪ್ರಮುಖರಾಗಿದ್ದರೊ ಹಾಗೆಯೇ ಅದು ಕೊನೆಗೊಳ್ಳುವಲ್ಲಿಯೂ ಅವರ ಪಾತ್ರ(ಉದ್ದೇಶಪೂರ್ವಕ ಎಂದು ನಾನು ಹೇಳುತ್ತಿಲ್ಲ) ಇದ್ದೇ ಇತ್ತು ವಿ.ಜೆ.ನಾಯಕರು ಗುರುತಿಸಿದಂತೆ ಸಮಾಜವಾದವು ಒಂದು ಚಾರಿತ್ರಿಕ ಕಾಲಘಟ್ಟದಲ್ಲಿ ಸಮಾಜದಲ್ಲಿ ಅಗತ್ಯವಾದ ಸಂಚಲನವನ್ನು ಮಾಡಿಸಿತು ಎನ್ನುವುದು ಹೌದಾದರೂ ಅಂದಿನ ಸಂದರ್ಭದಲ್ಲಿನ ಅದರ ಮಿತಿಯಿಂದಾಗಿ ಅದು ಬೆಳೆಯಬಹುದಾದ ಎತ್ತರಕ್ಕೆ,ವಿಸ್ತಾರಕ್ಕೆ  ಬೆಳೆಯಲಿಲ್ಲ ಎನ್ನುವುದೂ ಅಷ್ಟೇ ಮಹತ್ವದ ಅಂಶವಲ್ಲವೇ?.

ಹಾಗಾಗಿ ಲೇಖಕರು ತಮ್ಮ ಸ್ವಭಾವ ಸಹಜವಾದ ವಿನಯವನ್ನು ಬದಿಗಿಟ್ಟು ಇನ್ನಷ್ಟು ಹೆಚ್ಚು ನಿಷ್ಟುರವಾಗಿ ನೋಡಲು ಸಾಧ್ಯವಾಗಿದ್ದರೆ?! ಎಂದು ಓದಿನ ಮಧ್ಯೆ ನನಗೆ ಅನ್ನಿಸಿದ್ದಿದೆ. ಹಾಗಾದರೆ ಇನ್ನಷ್ಟು ಹೆಚ್ಚು ಅಪರಿಚಿತ ಲೋಕ ನಮಗಾಗಿ ತೆರೆದು ಕೊಳ್ಳಬಹುದಾಗಿತ್ತು ಎನ್ನುವ ಆಶೆ ನನ್ನದು.

ಅಸ್ಪಷ್ಟತೆಗೆ ಆಸ್ಪದವಿಲ್ಲದ ಸುಂದರ ಭಾಷೆ ಲೇಖಕರಂತೆಯೇ ಸರಳ ಹಾಗೂ ಸುಂದರ. ಪುಸ್ತಕದ ಮುಖಪುಟ ಇನ್ನಷ್ಟು ಆಕರ್ಷಕವಾಗಬಹುದಿತ್ತು.ಒಳಪುಟಗಳ ವಿನ್ಯಾಸ ಕೂಡ.......................

ನಾನಿಂದು 75 ವರ್ಷದ ಅಂಚಿನಲ್ಲಿದ್ದೇನೆ ಎನ್ನೂ ಎಷ್ಟು ವರ್ಷ ಈ  ಭೂಮಿಯ ಋಣ ಇದೆಯೋ ಕಾದು ನೋಡಬೇಕು ಎನ್ನುವ ಪ್ರಶ್ನೆಗೆ ನಾವು ಉತ್ತರ ಹೇಳುತ್ತೇನೆ. ಇನ್ನೂ 25 ವರ್ಷ ಬಾಕಿ ಇದೆ; ನಿಮ್ಮಿಂದ ನಾವು ಇನ್ನಷ್ಟು ಸುಕ್ರು ಮಾಸ್ತರರಂತವರನ್ನು ಪರಿಚಯಿಸಿಕೊಳ್ಳಲು ಬಯಸುತ್ತೇವೆ. ನೀವೇ ಹೇಳಿದಂತೆ ಚರಿತ್ರೆ ಚಲನಶೀಲವಾದುದು. ಮೌಲ್ಯದ ಕುಸಿತ ತಾತ್ಕಾಲಿಕ. 

ಇದು ನಿಮ್ಮದೇ ಪದ್ಯ.
ಇದೀಗ ಕಾದು ನಿಂತಿದ್ದೇನೆ
ಶಸ್ತ್ರಚಿಕಿತ್ಸೆಯ ಸಮಯಕೆ ಸನ್ನದ್ಧರಾಗಿ
ಕಣ್ಣು ತೆರೆಯಿಸಿ ಹಸಿರು ತೋರಣ ಕಟ್ಟುವುದಕಾಗಿ
ಭರವಸೆಯ ನಾಳೆಗಳಿಗಾಗಿ
ಹೊಸದಿನಗಳ ಸ್ವಾಗತಕಾಗಿ.
ಹೀಗೆ ಹೊಸ ದಿನಗಳ ಸ್ವಾಗತಕ್ಕಾಗಿ ಕಟ್ಟಿದ ತೋರಣವೇ 'ಕಾಲ್ನಡಿಗೆಯ ಪಯಣ'

                                                                                     --- ಡಾ.ವಿಠ್ಠಲ ಭಂಡಾರಿ ಕೆರೆಕೋಣ 
                    ಕನ್ನಡ ವಿಭಾಗ 
                   ಎಂ.ಜಿ.ಸಿ. ಮಹಾವಿದ್ಯಾಲಯ 

ಖಾಲಿ ಕೊಡ (ನಾಟಕ)--ವಿಠ್ಠಲ ಭಂಡಾರಿ

ಖಾಲಿ ಕೊಡ (ನಾಟಕ)

         ಸುಮುಖಾನಂದ ಜಲವಳ್ಳಿಯವರು ಜಿಲ್ಲೆಯ ಹೊರಗಿದ್ದುಕೊಂಡೇ ಬರವಣಿಗೆ ಮತ್ತು ಪ್ರಕಾಶನದ ಕೆಲಸದಲ್ಲಿ ತಣ್ಣಗೆ ತೊಡಗಿಕೊಂಡವರು. ಎಂದೂ ಅವಕಾಶಕ್ಕಾಗಿ ಬೆನ್ನು ಹತ್ತಿದವರಲ್ಲ; ಅದಕ್ಕಾಗಿ ಕೊರಗುತ್ತಾ ಕುಳಿತವರಲ್ಲ. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಸಿಗಬೇಕಾದ ಮಾನ್ಯತೆ ಅವರನ್ನ ಇನ್ನೂ ಅರಸಿ ಬಂದಿಲ್ಲ ಎನ್ನವುದಂತೂ ಸತ್ಯ.

       ಉತ್ತರ ಕನ್ನಡದ ಹಿರಿಯ ಲೇಖಕರ ಇತ್ತೀಚಿನ ನಾಟಕ `ಖಾಲಿ ಕೊಡ' ಸಮಕಾಲೀನ ಸಮಾಜವನ್ನು ವಸ್ತುನಿಷ್ಟವಾಗಿ ವಿಶ್ಲೇಷಿಸುವಲ್ಲಿ ಯಶಸ್ವಿಯಾಗಿದೆ. ನಾಟಕ ರಚನೆಯಲ್ಲಿ ಜಲವಳ್ಳಿಯವರದು ಪಳಗಿದ ಕೈ. ಈಗಾಗಲೇ 5 ನಾಟಕಗಳು. ಎರಡು ದೃಶ್ಯ ರೂಪಕಗಳ ಸಂಕಲನ, ಸುಮಾರು 13 ಮಕ್ಕಳ ನಾಟಕಗಳು ಪ್ರಕಟವಾಗಿದೆ. ಮತ್ತು ಓದುಗರ ಮೆಚ್ಚುಗೆ ಗಳಿಸಿದೆ.
ಸಮಕಾಲೀನ ಸಂದರ್ಭದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನದ ಬಗ್ಗೆ ಲೇಖಕರಲ್ಲಿ ಹುಟ್ಟಿದ ಹೇಸಿಗೆ ಮತ್ತು ವಿಷಾದವೇ `ಖಾಲಿ ಕೋಡ'ದಲ್ಲಿ ತುಂಬಿಕೊಂಡಿದೆ. `ಖಾಲಿ ಕೋಡ' ಈ ದೇಶವನ್ನು ಆಳುತ್ತಿರುವ ರಾಜಕೀಯ ಪಕ್ಷಗಳನ್ನ ಪ್ರತಿನಿಧಿಸುತ್ತದೆ. ರಾಜಕಾರಣದಲ್ಲಿ ತುಂಬಿಕೊಂಡಿರುವ ಅಜ್ಞಾನ, ಅಪ್ರಾಮಾಣಿಕತೆ, ಅನುಭವದ ಕೊರತೆ, ಬ್ರಷ್ಠಾಚಾರಗಳ ಕುರಿತು ಈ ನಾಟಕ ವಿವರಿಸುತ್ತದೆ. ಅಭಿವೃದ್ಧಿಯ ಕನಸುಗಳೇ ಇಲ್ಲದ ಜನಸಾಮಾನ್ಯರ ಬಗ್ಗೆ ಪ್ರಾಮಾಣಿಕ ಕಾಳಜಿ ಇಲ್ಲದ ರಾಜಕಾರಣಿಗಳು ಖಾಲಿ ಕೋಡವಲ್ಲದೆ  ಇನ್ನೇನು ಅಲ್ಲ . ಇಂತವರ ವಿರುದ್ಧ ಪ್ರತಿಭಟಿಸಬೇಕಾಗಿದೆ; ಜನಚಳುವಳಿ ರೂಪಿಸ ಬೇಕಾಗಿದೆ ಎನ್ನುವ ಆಶಯ ವ್ಯಕ್ತಪಡಿಸುತ್ತಾರೆ ಲೇಖಕರು.

       ನೀರಿಲ್ಲದೆ ಖಾಲಿ ಕೊಡ ಹಿಡಿದು ನಿಂತ ಜನಸಾಮಾನ್ಯರನ್ನು ಚುನಾವಣಾ ಉಮೇದುವಾರರು ಬೇಟಿ ಆಗುತ್ತಾರೆ. ತನಗೇ ಮತಕೊಟ್ಟರೆ ನೀರು ಕೊಡುವುದಾಗಿ ಹೇಳುತ್ತಾರೆ. ಹೇಗೆ, ನೀರು ಕೊಡುತ್ತೀರಿ ಎಂದು ಕೇಳಿದರೆ ಒಬ್ಬಾತ ಮೋಡಬಿತ್ತನೆ ಮಾಡುತ್ತೇವೆ ಎನ್ನುತ್ತಾನೆ, ಇನ್ನೊಬ್ಬ ಸಮುದ್ರದ ನೀರನ್ನೇ ಕಾಲುವೆಮಾಡಿ ಊರೂರಿಗೆ ಹರಿಸುತ್ತೇನೆ ಎನ್ನುತ್ತಾನೆ. ಅದು ಉಪ್ಪುನೀರಲ್ಲವೇ ಎಂದರೆ ವಿಜ್ಞಾನಿಗಳು ಅವನ್ನು ಸಿಹಿ ಮಾಡುತ್ತಾರೆ ಎನ್ನುತ್ತಾನೆ. ಮಗದೊಬ್ಬ ದೇವಾನು ದೇವತೆಗಳ ಮುನಿಸಿನ ಬಗ್ಗೆ ಮಾತನಾಡಿ ನೀವು ಹಣಕೊಡಿ ಯಾಗ ಮಾಡಿ, ಮಂತ್ರದಿಂದ ಮಳೆ ಹರಿಸುವುದಾಗಿ ಹೇಳುತ್ತಾನೆ. ಪುರೋಹಿತನೋಬ್ಬ ಕಪ್ಪೆ ಮದುವೆಮಾಡಿ ಮಳೆ ತರಿಸೋಣ ಅನ್ನುತ್ತಾನೆ. . . . . . . . ಹೀಗೆ ಹೀಗೆ ರಾಜಕಾರಣಿ, ಧರ್ಮರಕ್ಷಕ, ಪುರೋಹಿತ ಎಲ್ಲರೂ ಜನಸಾಮಾನ್ಯರನ್ನು ತಮ್ಮ ಸ್ವಾರ್ಥಕ್ಕಾಗಿ ಮೋಸಗೋಳಿಸಲು ಮುಂದಾದವರೆ. ಬದಲಾಗಿ ಮಳೆಬರದಿರಲು ಇರುವ ವೈಜ್ಞಾನಿಕ ಕಾರಣ ಅರಿಸಲಾರದ ಮೂರ್ಖರು!

        ಮಳೆ ಬರುತ್ತದೆ; ನೆರೆಹಾವಳಿ, ಜನರ ಮನೆಯನ್ನೂ, ಬದುಕನ್ನೂ ಕೊಚ್ಚಿಕೊಂಡು ಹೋಗುತ್ತದೆ. ಮತ್ತೆ ಅಲ್ಲಿ ರಾಜಕಾರಣಿಗಳು, ನೆರೆ ಸಂತ್ರಸ್ತರ ನಿಧಿ ಸೇರಿಸುವವರು ಹಾಜರು. ಬಂದ ನಿಧಿಯಲ್ಲಿ ಅರ್ದ ನೆರೆ ಪರಿಹಾರಕ್ಕೆ ಹೋದರೂ ಇನ್ನು ಅರ್ಧ ಉಳಿಯುತ್ತದಲ್ಲ. ಕೊಟ್ಟವರೇನು ಲೆಕ್ಕ ಕೇಳುತ್ತಾರೆಯೆ ಎಂದು ನಿಧಿ ಸೇರಿಸಿ ಜನರಿಗೆ ಮೋಸ ಮಾಡುತ್ತಾರೆ. ಜನ ಎಚ್ಚೆದ್ದು ಪ್ರತಿಭಟನೆ ಮಾಡುತ್ತಾರೆ. ಅಲ್ಪ ಸ್ವಲ್ಪ ನ್ಯಾಯ ಸಿಗುತ್ತದೆ.

      ಕರ್ನಾಟಕದಲ್ಲಿ ನಡೆದದ್ದೂ ಇದೇ ಅಲ್ಲವೆ. ಅಜ್ಜಿಯ ಚಿತೆಯಲ್ಲಿ ಬೀಡಿ ಹಚ್ಚಿಕೊಂಡಂತೆ. ನೆರೆ ಪರಿಹಾರ ನಿಧಿಗೆ ಯಾವ ಲೆಕ್ಕವೂ ಇಲ್ಲ. ಮನೆ ಕಳಕೊಂಡವರಿಗೆ ಮನೆಯೂ ಇಲ್ಲ. ಮತ್ತೆ ಮಳೆಗಾಲ .. ... ಕಾಯರ್ಾಚರಣೆಗೆ, ಇನ್ನೊಂದು ನೆರೆಹಾವಳಿಗೆ ಕಾಯುತ್ತಿದ್ದಾರೆ.

     ಹೀಗೆ ಸದ್ಯದ ರಾಜಕಾರಣವನ್ನು ವಿಮಶರ್ಿಸುವ ಈ ನಾಟಕದಲ್ಲಿ ಭಾಷಾ ಬಳಕೆಯಲ್ಲಿಯೂ ಕೂಡ ವ್ಯಂಗ್ಯ, ವಿಡಂಬನೆ ಎದ್ದು ಕಾಣುತ್ತದೆ. ಶಾಲಾ ಕಾಲೇಜಿನಲ್ಲಿ ಬೀದಿ ನಾಟಕವಾಗಿ, ರಂಗನಾಟಕವಾಗಿ ಅತ್ಯಂತ ಸರಳ ರಂಗ ಸಜ್ಜಿಕೆಯಲ್ಲಿಯೂ ಕೂಡ ಆಡಬಹುದುದಾಗಿದೆ.

ವಿಠ್ಠಲ ಭಂಡಾರಿ

Sunday, 18 August 2013

ದೀಪಾರಾಧನೆ - vittal bhandari

ಅರ್ಥಪೂರ್ಣ ಅಭಿನಂದನೆ . . . . . . . .


ದೀಪಾರಾಧನೆ
(ಎನ್.ಆರ್.ನಾಯಕ ದಂಪತಿಗಳ ಅಭಿನಂದನಾ ಗ್ರಂಥ)
ಜಾನಪದ ಪ್ರಕಾಶನ, ಹೊನ್ನಾವರ (ಉ.ಕ)


     ಪ್ರೊ.ಜಿ.ಎಸ್ ಅವಧಾನಿ ಮತ್ತು ಡಾ.ಆರ್.ವಿ.ಭಂಡಾರಿಯವರು ಸೇರಿ ಸಂಪಾದಿಸಿದ ಈ ಕೃತಿ `ದೀಪಾರಾಧನೆ' ಜಾನಪದ ಪ್ರಕಾಶನದ ದಶಮಾನೋತ್ಸವದ ಸಂದರ್ಭದಲ್ಲಿ ಡಾ. ಎನ್.ಆರ್. ನಾಯಕ ಮತ್ತು ಶಾಂತಿ ನಾಯಕ ದಂಪತಿಗಳಿಗೆ ಅಪರ್ಿಸಿದ ಅರ್ಥಪೂರ್ಣ ಅಭಿನಂದನಾ ಕೃತಿ. ಹಾಗೆಯೇ ಜಾನಪದ ಪ್ರಕಾಶನವು ಆವತ್ತಿನವರೆಗೆ ಪ್ರಕಟಿಸಿದ ಕೃತಿಗಳ ಸಮೀಕ್ಷೆಯೂ  ಹೌದು.
  
 ಮುನ್ನುಡಿಯಲ್ಲಿ ಪೊ.ಜಿ.ಎಸ್. ಅವಧಾನಿಯವರು ಬರೆದಂತೆ ದಶಮಾನೋತ್ಸವವನ್ನು ಕೇವಲ ಹಬ್ಬವನ್ನಾಗಷ್ಟೇ ಆಚರಿಸದೆ ಅದಕ್ಕೊಂದು ಹೊಸ ಆಯಾಮ ಒದಗಿಸಬೇಕು ಎನ್ನುವ ಹಂಬಲದಿಂದ, ಡಾ,ನಾಯಕ ದಂಪತಿಗಳ ಎಲ್ಲಾ ಕೃತಿಗಳನ್ನು ವಿಮಶರ್ಿಸಿ, ತನ್ಮೂಲಕ ಪ್ರಕಾಶನವನ್ನು ಅಥರ್ೈಸುವುದೇ ಅವರಿಗೆ ಸಲ್ಲಿಸುವ ಅಭಿನಂದನೆ ಎನ್ನುವ ಕಾರಣದಿಂದ ಸಿದ್ಧಪಡಿಸಿದ ಈ ಗ್ರಂಥ ಜಾನಪದ ಅಧ್ಯಯನಕ್ಕೊಂದು ಆಕರ ಗ್ರಂಥವಾಗಿದೆ.
       
ಅಭಿನಂದನೆ ಎಂದಾಕ್ಷಣ ಸಹಜವಾಗೇ ಹೊಗಳುವುದು ಅಂತ ತಿಳಿವ ವಾಡಿಕೆ ಇದೆ. ಹಾಗಾಗದ ಹಾಗೆ ನೋಡಿಕೊಳ್ಳವುದು ನಮ್ಮ ಕಾಳಜಿಯಾಗಿತ್ತು ಎನ್ನುವ ಸಂಪಾದಕರ ಮಾತು ಸಂಪೂರ್ಣ ಈಡೇರಿದೆ. ಸೇಸೆ, ಕೃತಿ ಪರಿಶೀಲನೆ, ವ್ಯಕ್ತಿವಿಚಾರ, ಪತ್ರಿಕೆ ಎನ್ನುತ ನಾಲ್ಕು ವಿಭಾಗಗಳಲ್ಲಿ ಇಲ್ಲಿಯ ಲೇಖನಗಳು ಸಮಾಹಿತ ಗೊಂಡಿದೆ.
     
           ಕೃತಿ ಪರಿಶೀಲನೆ ಗ್ರಂಥದ ಪ್ರಮುಖ ಭಾಗ. ಕನ್ನಡದ ಹಿರಿಯ ಲೇಖಕರಾದ ಹಿ.ಶಿ.ರಾಮಚಂದ್ರೇಗೌಡ,ಡಾ.ತೀ.ನಂ.ಶಂಕರನಾರಾಯಣ, ಡಾ.ಪುರುಷೊತ್ತಮ ಬಿಳಿಮಲೆ, ಡಾ.ಆರ್.ಪಿ.ಹೆಗಡೆ, ಡಾ.ಚೆನ್ನಣ್ಣ ವಾಲೀಕಾರ, ಡಾ.ಎಲ್.ಜಿ.ಭಟ್ಟ, ಡಾ.ಜಿ.ಎಸ್.ಭಟ್ಟ, ಡಾ.ಶಾಲಿನಿ ರಘುನಾಥ್ ,ಡಾ.ಚಿನ್ನಪ್ಪ ಗೌಡ . . . ಮುಂತಾದವರ ಮಹತ್ವಪೂರ್ಣ ಒಳನೋಟಗಳುಳ್ಳ ಬರಹಗಳು ಡಾ.ನಾಯಕ ದಂಪತಿಗಳ ಕೃತಿಗಳ ಗುಣದೋಷಗಳನ್ನು ನಿದರ್ಿಷ್ಠ ಸಾಂಸ್ಕೃತಿಕ ಸಂದರ್ಭದಲ್ಲಿಟ್ಟು ನೋಡುವುದರಿಂದ ಇಲ್ಲಿಯ ಯಾವ ಲೇಖನವೂ ಕೇವಲ ಪುಸ್ತಕದ ಪರಿಚಯದ ಹಂತಕ್ಕೆ ನಿಲ್ಲುವುದಿಲ್ಲ. ಬದಲಾಗಿ ಜಾನಪದ ಅಧ್ಯಯನದ ತಾತ್ವಿಕ ಚಚರ್ೆಯ ಕಡೆಗೆ ಗಮನ ಹರಿಸುತ್ತದೆ. 
      ನಾಯಕರಿಗೆ ಜಾನಪದ ಅಧ್ಯಯನ ಒಂದು ಹವ್ಯಾಸವಲ್ಲ. ಅದು ಅವರ ಜೀವನ ಪ್ರೇಮ ಹಾಗೂ ಶ್ರದ್ಧೆ ಎಂದು ಗುರುತಿಸುವ ರಾಮಚಂದ್ರೇಗೌಡರು ನಾಯಕರದು ಮೃತ ಚಿಂತನೆಯಲ್ಲ; ಸಂಬಂಧಾತ್ಮಕವಾದದ್ದು ಹಾಗೂ ಪ್ರಗತಿ ಮನೋಧರ್ಮದಿಂದ ಕೂಡಿದ್ದು. ಆದುದರಿಂದಲೇ ಅವರು ಜಾನಪದವಿಲ್ಲದ ನಾಗರಿಕತೆಯಿಲ್ಲ ಹಾಗೂ ಜಾನಪದ ಮೃತ್ಸುವಿನ ಕಪಿಮುಷ್ಟಿಗೆ ಸಿಗದು ಎಂದು ಸರಿಯಾಗಿಯೇ ಜಾನಪದದ ಪ್ರಕ್ರಿಯೆಯನ್ನು ದಾಖಲಿಸುತ್ತಾರೆ. .ಜಾನಪದ ಗೀತೆ ತತ್ವದ ಮೂಲಕ ಜಾನಪದ ತತ್ವ ಹಾಗೂ ಸತ್ವವನ್ನು ಹೇಳ ಹೊರಡುತ್ತಾರೆ(ಪು.18) ಎಂದು ಉ.ಕ ಜಿಲ್ಲೆಯ ಜಾನಪದ ಸಂಸ್ಕೃತಿಯ ಕೋಶಕ್ಕೆ ಎನ್.ಆರ್.ನಾಯಕರ ಕೊಡುಗೆಯನ್ನು ವಿವರಿಸುತ್ತಾರೆ.
      
      'ಜಾನಪದ ಸಂಬಾರ ಬಟ್ಟಲು' ಕೃತಿಯ ಬಗ್ಗೆ ಬರೆಯುತ್ತಾ ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಸಮೃದ್ಧವಾದ ಆಕರಗಳನ್ನು ಸಂಗ್ರಹಿಸಿ ಕೊಡುತ್ತಾರೆ. ಸಂಗ್ರಹಿಸಿದ ಆಕರಗಳನ್ನು ವೈಜ್ಞಾನಿಕವಾಗಿ ವಿಂಗಡಿಸಿಕೊಂಡು ಒಂದೊಂದಾಗಿ ಮಂಡಿಸುತ್ತಾರೆ. ವಿಷಯ ಮಂಡನೆಯಲ್ಲಿ ಜಾನಪದ ವಿದ್ವಾಂಸನೊಬ್ಬನ ಶಿಸ್ತನ್ನು ಉದ್ದಕ್ಕೂ ಉಳಿಸಿಕೊಂಡು ಹೋಗುತ್ತಾರೆ(ಪು,22) ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರೆ. `ಗಾಮೊಕ್ಕಲ ಭಾರತ' ಕೃತಿಯನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿದ ಡಾ.ಕೇಶವಶರ್ಮ ಪ್ರಧಾನ ಸಂಸ್ಕೃತಿಯಾಗಲೀ ಅಧೀನ ಸಂಸ್ಕೃತಿಯಾಗಲೀ ಪರಸ್ಪರ ಭಿನ್ನತೆಯನ್ನು ಕಾಪಾಡಿಕೊಂಡು ಕೂಡಾ ಅನೇಕ ಸಂದರ್ಭಗಳಲ್ಲಿ ಸಾಮಾನ್ಯ ಸಂವಾದವೊಂದನ್ನು ಉಳಿಸಿಕೊಳ್ಳುತ್ತವೆ ಎನ್ನುವುದಕ್ಕೆ ಈ ಕೃತಿಯೂ ಒಂದು ಆಧಾರವಾಗಿದೆ(ಪು,7) ಮತ್ತು ಸಾಂಸ್ಕೃತಿಕ ರಾಜಕಾರಣದ ಸಂದರ್ಭದೊಳಗಡೆ ಈ ರೀತಿಯ ಕೃತಿಗಳಿಗೆ ವಿಶೇಷವಾದ ಪ್ರಾಶಸ್ತ್ಯ ಸಲ್ಲುತ್ತದೆ.(ಪು,7) ಎಂದು ಕೃತಿಯೊಂದರ ಸಾಂಸ್ಕೃತಿಕ ಮುಖದ ಕಡೆ ಗಮನ  ಸೆಳೆಯುತ್ತಾರೆ.
      `ಕೂಸಾಯ್ತು ನಮ್ಮ ಕೊಮರಗೆ' ಕೃತಿಯ ಕುರಿತು ವಿಸ್ತಾರವಾಗಿ ಬರೆದಿರುವ ಡಾ.ಜಿ.ಎಸ್.ಭಟ್ ಇಂಥ ರಚನೆಗಳ ಸಾಹಿತ್ಯೇತರ ಮೌಲ್ಯಗಳೂ ಗಮನಾರ್ಹ. ಬದುಕಿನ ಒಂದು ಮಹತ್ವದ ಸಂದರ್ಭದ ವಿವರ-ವಿವರಗಳನ್ನು ಹಿಡಿದಿಡುವ ದಾಖಲೆಗಳಾಗುತ್ತವೆ.(ಪು,14-15) ಎನ್ನುತ್ತಾರೆ. ಇಂತಹ ಸಂಕಲನಗಳಿಗೆ ಪ್ರಾಪ್ತವಾಗುವ ಸಾಮಾಜಶಾಸ್ತ್ರೀಯ ಮಹತ್ವವನ್ನು ವಿವರಿಸಿದ್ದಾರೆ. ಮಾತ್ರವಲ್ಲಬದುಕಿನ ನಿಶ್ಚಿತ ಸಂದರ್ಭಗಳಲ್ಲಿ ಎಲ್ಲ ಜನಾಂಗಗಳ ಒಳಮನಸ್ಸು ಕೆಲಸ ಮಾಡುವ ರೀತಿ ಒಂದೇ. ಹೊರ ಆವರಣಗಳು ಮಾತ್ರ ಬೇರೆಬೇರೆಯಾಗುತ್ತವೆ. ಜಾತಿಜಾತಿಗಳ ವೈಶಿಷ್ಟ್ಯಗಳಲ್ಲಿ ಶ್ರೇಷ್ಠ ಕನಿಷ್ಠಗಳ ಪ್ರಜ್ಞೆ ಉದ್ಬವಿಸದೆ ಮೌಖಿಕತೆ ಮಾತ್ರ ಮುಖ್ಯವಾಗುತ್ತದೆ. ಅವನ್ನು ಗುರುತಿಸುವ, ದಾಖಲಿಸುವ, ಗೌರವಿಸುವ ಮನಸ್ಸು ಜನಾಂಗ ಸಾಮರಸ್ಯಕ್ಕೆ ನಾಂದಿಯಾಗಿ ರಾಷ್ಟ್ರೀಯ ಸಾಮರಸ್ಯಕ್ಕೆ ಬುನಾದಿಯಾಗುತ್ತದೆ ಎನ್ನುವ ಮೂಲಕ ಆಧುನಿಕ ಸಮಾಜವೊಂದು ತನ್ನೊಡಲಿನಲ್ಲಿ ಬೆಳೆಸಿಕೊಳ್ಳುತ್ತಿರುವ ವೈಷ್ಯಮದ, ಮತ್ಸರದ ಪ್ರವೃತ್ತಿಗೆ ಪರ್ಯಾಯವೊಂದನ್ನು  ಸೂಚಿಸುತ್ತಾರೆ.
     
            `ಬಂದಾನೆ ಬಲೀಂದ್ರರಾಯ' ಪುಸ್ತಕವನ್ನು ವಿಶ್ಲೇಷಿಸಿದ ಡಾ.ಆರ್.ವಿ.ಭಂಡಾರಿಯವರು ಬ್ರಾಹ್ಮಣದಿಂದ ಮೊದಲ್ಗೊಂಡು ಕೆಳ ಜಾತಿಯ ಶೂದ್ರರ ವರೆಗಿನ ಹಾಡುಗಳು ಈ ಸಂಕಲನದಲ್ಲಿದ್ದರೂ ಮುಕ್ರಿ ಮುಂತಾದ ದಲಿತರಲ್ಲಿ ಬಲಿಂದ್ರನ ಕುರಿತು ಇರಬಹುದಾದ ಹಾಡುಗಳು ಇಲ್ಲಿ ಇಲ್ಲ. ಎನ್ನುವ ತಕರಾರಿನ ಮೂಲಕವೇ ಕೃತಿ ಪ್ರವೇಶಿಸುತ್ತಾರೆ. ಒಮ್ಮೆ ದಲಿತರಲ್ಲಿ ಇಂತಹ ಹಾಡುಗಳು ಇಲ್ಲದಿದ್ದರೂ ಅದರ ಅಧ್ಯಯನ ತುಂಬಾ ಕುತೂಹಲಕರ ಸಂಗತಿ ಆಗಬಹುದಿತ್ತು ಎನ್ನುತ್ತಾರೆ. ಇಡೀ ಪುಸ್ತಕದಲ್ಲಿ ಬಲಿ-ವಾಮನನ ಕತೆ ಒಂದು ಸಂಸ್ಕೃತಿಯ ಸ್ಥಾನಪಲ್ಲಟದ ಸಂಕೇತವಾಗಿ ಬಂದಿರುವುದನ್ನು ಹೀಗೆ ಉಲ್ಲೇಖಿಸುತ್ತಾರೆ, ಬಲಿ-ವಾಮನರ ಪುರಾಣ ಕೇವಲ ಆಯರ್ೀಕರಣದ್ದು ಮಾತ್ರವಾಗಿರದೆ ಚರಿತ್ರೆಯ ನಡೆಯಲ್ಲಿ ಕೃಷಿ ಸ್ತ್ರೀಯರ ಕೈತಪ್ಪಿದ ಒಂದು ಮಹಾಪರ್ವಕ್ಕೆ ಪ್ರತೀಕವಾದಂತಾಯಿತು. ಆದ್ದರಿಂದಲೇ ಬಲಿಯ ಆರಾಧನೆ ಒಂದು ಸಾಂಸ್ಕೃತಿಕ ಸಂಕೇತವಾಗಿದೆಯೇ ಹೊರತು `ಬಲಿ'ಯೆಂಬ ರೈತ ಮುಂದಾಳುವಿಗೇ ಸಂಬಂಧಿಸಿದ್ದಾಗಿರಲಿಕ್ಕಿಲ್ಲ ಎಂಬ ನಿಲುವಿಗೆ ತಲ್ಪ ಬೇಕಾಗುತ್ತದೆ. (ಪು,51)ಎನ್ನುತ್ತಾರೆ.

 ಇದೇ ಪುಸ್ತಕದ ಬಗ್ಗೆ ಜಾನಪದ ವಿದ್ವಾಂಸರಾದ ವಿ.ಗ.ನಾಯಕರು ಬರೆದ ಇನ್ನೊಂದು ಲೇಖನವೂ ಇದೆ. ಇದರಲ್ಲಿಆದರೆ ಜಿಲ್ಲೆಯಲ್ಲಿಯೇ ಬೇರೆಬೇರೆ ಕಡೆಗಳಲ್ಲಿ ಬಲಿಪಾಡ್ಯದ ದಿನವೂ ಹಿರಿಯರಿಗೆ ನಮಸ್ಕರಿಸುವ `ಸಣ್ಣ ಮಾಡುವುದು' ಎಂಬ ರಿವಾಜಿರುವುದನ್ನು ನಿರ್ಲಕ್ಷಿಸಿದ್ದಾರೆ. . . .  ಅದರಂತೆ ಬೋರಜ್ಜಿಗಾಗಿಯೇ ಹಿಂದೊಮ್ಮೆ ಇದ್ದ ಎಂಡು ದಿನಗಳ ಹಬ್ಬ; ಆಕೆ ಬಲಿಂದ್ರನ ತಾಯಿ, ಮೊಮ್ಮಕ್ಕಳಿಗೆ ಎಣ್ಣೆ ಸ್ನಾನ ಮಾಡಿದಲೆಂದು ಬಂದ ಅಜ್ಜಿ ಎಂದೆಲ್ಲಾ ಇರುವ ನಂಬಿಕೆಯನ್ನು ನಾಯಕರು ಕಡೆಗೆಣಿಸಿದ್ದಾರೆ (ಪು,114) ಎಂದು ಪುಸ್ತಕದಲ್ಲಿ ಸೇರ್ಪಡೆಯಾಗಬೇಕಾದ ಮಾಹಿತಿಯೊಂದನ್ನು ವಿ.ಗ.ನಾಯಯಕರು ಕೊಟ್ಟಿದ್ದಾರೆ.( ಇಂತಹ ಮಾಹಿತಿ ಕೊಟ್ಟಿದ್ದಕ್ಕಾಗಿ ಎನ್.ಆರ.ನಾಯಕರು ವಿನಯದಿಂದ ಕೃತಜ್ಞತೆ ಸಲ್ಲಿಸಿದ್ದಾರೆ ಕೂಡ.) ಸಣ್ಣಪುಟ್ಟ ಕೊರತೆಗಳ ನಡುವೆ ಕೂಡ ದೀಪಾವಳಿಯ ಕುರಿತು ಜಾನಪದರಲ್ಲಿ ಬಂದ ಅಗದೀ ಚಲೋದಾದ ಪ್ರಯತ್ನವಾಗಿದೆ. (ಪು.115) ಎಂದು ಶರಾ ಬರೆದಿದ್ದಾರೆ.

  ಈಪುಸ್ತಕದ ಇನ್ನೊಂದು ಮಹತ್ವಪೂರ್ಣ ಲೇಖನ `ದೇಜಗೌ' ಅವರು `ಪಡು ಕೋಗಿಲೆ' ಬಗ್ಗೆ ಬರೆದ ಬರಹ. ಜನಾಂಗೀಯ ಹಿನ್ನೆಲೆಯಲ್ಲೂ ಪ್ರಾದೇಶಿಕ ಹಿನ್ನಲೆಯಲ್ಲಿ ಜಾನಪದ ಸಂಶೋಧನೆ ನಡೆದಾಗ ಮೂಲ ಅಧ್ಯಯನಕ್ಕೆ ಒಂದು ವ್ಯಾಪಕತೆ ಬರುತ್ತದೆ.' ಎಂದು ಹೇಳುತ್ತಾ `ಪಡು ಕೋಗಿಲೆ' ಸಂಕಲನ ಜನಾಂಗದ ಜಾನಪದದ ಕಡೆಗೆ ನಮ್ಮ ದೃಷ್ಠಿಯನ್ನು ಸೆಳೆಯುವ ಉಪಯುಕ್ತ ಕೃತಿ ಎನ್ನುತ್ತಾರೆ.

  ಶಾಂತಿನಾಯಕರ ಮುಖ್ಯ ಕೃತಿಗಳ ಬಗ್ಗೆಕೂಡ ಇಲ್ಲಿ ಮಹತ್ವದ ಲೇಖನಗಳಿವೆ. ತನ್ನ ಸಿದ್ಧಾಂತದ ಸಮರ್ಥನೆಗೆ ಬೇಕಾದಷ್ಟನ್ನು ಮಾತ್ರ ಸಂಗ್ರಹಿಸಿ ಕೊಡುವ ಬದಲು ಯಾವುದೇ ಪೂವರ್ಾಗ್ರಹವಿಲ್ಲದೆ ಮಾಹಿತಿಗಳನ್ನೆಲ್ಲಾ ಸುಂದರವಾಗಿ ಒದಗಿಸುವ ಪ್ರಯತ್ನ ವನ್ನು ಶಾಂತಿನಾಯಕರು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿರುವ ಡಾ.ಕೆ.ಚಿನ್ನಪ್ಪಗೌಡ ಮುಖ್ಯವಾಗಿ ಇತರ ಪರಂಪರೆಗಳಿಗಿಂತ ನೀವು ನೊಡುವ ಪರಂಪರೆಯು ಭಿನ್ನ ಮತ್ತು ಅನನ್ಯವಾಗಿರುವ ನೆಲೆಗಳತ್ತ ನಿಮ್ಮ ಲಕ್ಷಸೆಳೆಯುವುದು - ಈ ದೃಷ್ಟಿಯಿಂದ ಶಾಂತಿನಾಯಕರ ಳೇಖನಗಳು ಆಧುನಿವಾಗಿವೆ. ಜಾನಪದರ ಜೀವನ ಕ್ರಮಗಳ ಕುರಿತಂತೆ ಮಾಹಿತಿಗಳನ್ನು ಕೊಡುವ ಈ ಲೇಖನಗಳಲ್ಲಿ 'ಖಂಡಿತವಾಗಿ ಇದರ ಅರ್ಥ ಹೀಗೆ ಮತ್ತು ಇಷ್ಟು ಮಾತ್ರ ಎಂಬ ಅಂತಿಮ ನಿಧರ್ಾರಗಳಿಲ್ಲ. ಈ ಹಿನ್ನೆಲೆಯಲ್ಲಿ ನೋಡಿದರೆ ಶಾಂತಿನಾಯಕರ ಲೇಖನಗಳು ಭವಿಷ್ಯದಲ್ಲಿಯೂ ಪ್ರಸ್ತುತವಾಗಿ ಉಳಿದುಕೊಳ್ಳುತ್ತವೆ.(ಪು,10) ಎನ್ನುತ್ತಾ ಜನಪದ ಅಧ್ಯಯನದಲ್ಲಿ ಪ್ರಸ್ತುತ ವಾಗಬೇಕಾದ ಮಾರ್ಗವನ್ನು ಸೂಚಿಸುತ್ತಾರೆ.

  ಉ.ಕ.ಜಿಲ್ಲೆಯ ಹವ್ಯಕ ಕತೆಗಳ ಸಂಗ್ರಹದ ಬಗ್ಗೆ ಡಾ.ಎಲ್.ಜಿ.ಭಟ್ ಅವರು ಬರೆದ ಲೇಖನದಲ್ಲಿ ಕತೆಗಳನ್ನು ತೌಲನಿಕ ಅಧ್ಯಯನವಿದೆ. ಕತೆಯ ಭಾಷಾ ವೈವಿದ್ಯವನ್ನು ಮತ್ತು ಆಧುನಿಕಜಗತ್ತಿನಲ್ಲಿ ಮರೆಯಾಗಿ ಬಿಡಬಹುದಾದ ಹವ್ಯಕ ಆಡುಭಾಷೆಯನ್ನು ದಾಖಲಿಸಿದ್ದನ್ನು ಮಹತ್ವದ ಕ್ರಿಯೆಯೆಂದು ಹೇಳುತ್ತಾರೆ. ಭಾಷಾಬಳಕೆಯಲ್ಲಿ ಆದ ಸಣ್ಣಪುಟ್ಟ ದೋಷವನ್ನು ಪಟ್ಟಿಮಾಡುತ್ತಾರೆ ಮತ್ತು ಈ ಎಲ್ಲಾ ಕತೆಗಳು ಬೇರೆ ಜಾತಿಯವರು ಹೇಳುವ ಕತೆಯಲ್ಲೂ ಇರುವುದನ್ನು ಹೇಳುತ್ತಾ ಮೂಲತಃ ಇದು ಯಾವ ವರ್ಗದಲ್ಲಿ ಹುಟ್ಟಿಕೊಂಡಿದ್ದೆಂದು ಅಧ್ಯಯನ ಮಾಡುವುದು ಸೂಕ್ತ ಎನ್ನುತ್ತಾರೆ.

   ಶಾಂತಿನಾಯಕರ ಜಾನಪದ ಸಂಗ್ರಹದ ವಿಶಿಷ್ಠತೆಯ ಕುರಿತು ಡಾ.ಶಾಲಿನಿ ರಘುನಾಥ ಅವರು ಮತ್ತು ಡಾ.ಬಿ.ಪಿ.ರಾಮಯ್ಯನವರ ಲೇಖನ ಗಮನರ್ಹವಾದದ್ದು.

  ಪತ್ರಿಕೆಗಳಿಂದ ಆಯ್ದುಕೊಂಡ ಜಾನಪದ ವಿದ್ವಾಂಸರ ಮಾತುಗಳು ಕೂಡ ಜಾನಪದ ಪ್ರಕಾಶನದ ಕೊಡುಗೆಯನ್ನು ಉಲ್ಲೇಖಿಸುತ್ತದೆ. ಶಂಬಾಜೋಶಿ, ಕಾಳೇಗೌಡ ನಾಗವಾರ, ಶ್ರೀಕಂಠ ಕೂಡಿಗೆ, ಕೃಷ್ಣಮೂತರ್ಿ ಹನಾರ .. .....ಮುಂತಾದವರು ಮಹತ್ವಪೂರ್ಣ ಮಾತುಗಳು ಜಾನಪದ ಅಧ್ಯಯನ ರೂಢಿಸಿಕೊಳ್ಳಬೇಕಾದ ಶಿಸ್ತನ್ನು ಒತ್ತಿ ಹೇಳುತ್ತದೆ.

    ಡಾ.ಎನ್ ಆರ್ ನಾಯಕ ಮತ್ತು ಶಾಂತಿನಾಯಕರ ವ್ಯಕ್ತಿತ್ವದ ಕುರಿತು ಡಾ.ಆರ್.ವಿ. ಭಂಡಾರಿ, ಜಿ.ಎನ್.ಹರೇಗುತ್ತಿ ಮತ್ತು ಟಿ.ಕೆ ಮಹಮದ್ರ ಲೇಖನ ಕೂಡ ಅವರ ಜೀವನ ಪ್ರೀತಿಯನ್ನು ಎತ್ತಿ ತೋರಿಸುತ್ತದೆ.

             ಹೀಗೆ ಕೃತಿಯೊಂದರ ಗುಣಾವಗುಣಗಳ ವಸ್ತುನಿಷ್ಠ ವಿಶ್ಲೆಷಣೆಗೆ ಮತ್ತು ಜಾನಪದ ಅಧ್ಯಯನದ ಪರಂಪರೆ ಮತ್ತು ಪ್ರಯೋಗದ ಕುರಿತು ನಮ್ಮ ಗಮನ ಸೆಳೆದ ಕೃತಿ ನಿಜಕ್ಕೂ ದೀಪಾರಾಧನೆಯೇ ಆಗಿದೆ.
- ಡಾ. ವಿಠ್ಠಲ ಭಂಡಾರಿ.ಕೆರೆಕೋಣ
- (ಮರು ದಿಬ್ಬಣ -ಕೃತಿಯಲ್ಲಿ ಪ್ರಕಟಿತ-2010)

ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಶ್ರೀಪಾದ ಅವರ ಸಂದರ್ನನ -ವಿಠ್ಠಲ ಭಂಡಾರಿ

1 . ಪ್ರಶಸ್ತಿ ಬಂದ ಈ ಸಂದರ್ಭ ತಮಗೆ ಏನೆನಿಸುತ್ತದೆ? 
ಇಂದಿನ ಸ್ಥಿತಿಗಳಲ್ಲಿ ಪ್ರಶಸ್ತಿ ಸ್ವಲ್ಪ ಮುಜುಗರ ತರುವಂತದ್ದೇ. ಸಂತೋಷ ಆಗಿಲ್ಲ ಅಂದರೆ ತಪ್ಪಾಗುತ್ತದೆ. ಹೆಚ್ಚಿದ ಹೊಣೆಗಾರಿಕೆಗಾಗಿ ಇನ್ನೂ ಸಿದ್ಧಗೊಳ್ಳಬೇಕಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಸ್ನೇಹಿತರು ಸಂತೋಷಪಟ್ಟು ಕರೆ ಮಾಡುತ್ತಿದ್ದಾರೆ. ಬಹುಶ: ಇದೇ ದೊಡ್ಡ ಸಂತೋಷ.
2 ನಿಮಗೆ ಈ ಮೊದಲೂ ಪ್ರಶಸ್ತಿಗಳು ಸಿಕ್ಕಿವೆ
ಹೌದು ಮಂಡ್ಯದಲ್ಲಿ ಕೆಲಸ ಮಾಡುತ್ತಿದ್ದಾಗ ಶಿಕ್ಷಕ ಕೇಂದ್ರದ ಉತ್ತಮ ಶಿಕ್ಷಕ ಪ್ರಶಸ್ತಿ, ಶಿಕ್ಷಣ ಸಿರಿ ರಾಜ್ಯ ಪ್ರಶಸ್ತಿ, ಕನರ್ಾಟಕ ನಾಟಕ ಅಕಾಡೆಮಿಯ ಸಿ.ಜಿ.ಕೆ. ಪ್ರಶಸ್ತಿ, ಸದಾನಂದ ಸುವರ್ಣ ಪ್ರಶಸ್ತಿ ಕೆಲವು ನಾಟಕಗಳ ನಿದರ್ೇಶನಕ್ಕಾಗಿ ರಾಜ್ಯ, ರಾಷ್ಟ್ರಪ್ರಶಸ್ತಿಗಳು ಬಂದಿವೆ.
3 ಹೊಸ ಜವಾಬ್ದಾರಿ ಏನು? 
ತರಗತಿಯ ಕೋಣೆಗಳು, ಆಚೆಯ ಬದುಕನ್ನು ಎದುರಿಸಲು ಬೇಕಾದ ಆತ್ಮವಿಶ್ವಾಸವನ್ನು ಮೂಡಿಸುವಂತ ಹಂತ ತಲುಪಬೇಕಿದೆ. ಹಾಗಾಗಿ ಅದಕ್ಕೆ  ಸಜ್ಜುಗೊಳಿಸಬೇಕಾದುದೇ ದೊಡ್ಡ  ಜವಾಬ್ದಾರಿ ಅನಿಸುತ್ತಿದೆ.
4 . ಶಿಕ್ಷಕ ವೃತ್ತಿಯ ಬಗ್ಗೆ ಗೌರವ ಮೂಡಿದ್ದು ಹೇಗೆ? ಪ್ರಭಾವ ಬೀರಿದ ಶಿಕ್ಷಕರು ಯಾರು?
ನನ್ನ ತಂದೆ ಗಜಾನನ ಭಟ್ ಯಕ್ಷಗಾನ ಕಲಾವಿದರು, ಶಿಕ್ಷಕರೂ ಆಗಿದ್ದರು. ಯಕ್ಷಗಾನದಲ್ಲಿ ಅವರು ನಿರ್ವಹಿಸುತ್ತಿದ್ದ ಪಾತ್ರದಷ್ಟೇ ತರಗತಿಯಲ್ಲಿಯೂ ಆಕರ್ಷಕ ಪಾಠ ಮಾಡುತ್ತಿದ್ದರು. ಅಂತಯೇ ಪಿ.ಯು.ಸಿ. ಓದುತ್ತಿದ್ದಾಗ ಜಿ.ಆರ್. ಭಟ್ ಅನ್ನೋ ಶಿಕ್ಷರರು ರನ್ನನ ಗದಾಯುದ್ಧ ಪಾಠ ಮಾಡುತ್ತಿದ್ದ ರೀತಿ, ಕಾಲೇಜು ಓದುತ್ತಿದ್ದಾಗ ಸಾಹಿತಿ-ಉಪನ್ಯಾಸಕರಾಗಿದ್ದ ಶ್ರೀ ಜಿ.ಎಸ್. ಅವಧಾನಿ ಹಾಗೂ ತರಗತಿ ಕೋಣೆಗಳ ಹೊರಗೆ ಡಾ. ಆರ್.ವಿ. ಭಂಡಾರಿ- ಇವರೆಲ್ಲರ ವ್ಯಕ್ತಿತ್ವ ನನಗೆ ಶಿಕ್ಷಕ ವೃತ್ತಿಯ ಕುರಿತು ಗೌರವ ಮೂಡಿಸಿದೆ.
4. ಶಿಕ್ಷಕ ವೃತ್ತಿಯ ಮೇಲೆ ಸಮಾಜದಲ್ಲಿ ಗೌರವ ಕಡಿಮೆಯಾಗಿದೆ ಅನಿಸುತ್ತಿದೆಯೇ? ಏಕೆ? 
ಮೇಲು ನೋಟಕ್ಕೆ ಶಿಕ್ಷಣ ಕ್ಷೇತ್ರ ಹೆಚ್ಚು ವ್ಯಾಪಕವಾಗಿ ತೆರೆದುಕೊಂಡಿದೆ ಎನಿಸುತ್ತದೆ. ತಾಂತ್ರಿಕವಾಗಿ ತರಗತಿಗಳು ಶ್ರೀಮಂತಗೊಂಡಿವೆ. ಆದರೆ ಶಿಕ್ಷಣ ವಿಪತ್ತಿನಲ್ಲಿದೆ. ಯಾವೊಬ್ಬ ಪಾಲಕರೂ ಮಕ್ಕಳ ವ್ಯಕ್ತಿತ್ವ ನಿರೂಪಣೆಗೆ ಶಿಕ್ಷಣ ಬೇಕು ಎಂದು ಕೇಳುತ್ತಿಲ್ಲ. ಗರಿಷ್ಟ ಸಂಬಳ ತರುವ ಉದ್ಯೋಗಕ್ಕಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ಬೇಕು ಎನ್ನುತ್ತಿದ್ದಾರೆ. ಈ ಮಾರುಕಟ್ಟೆಯ ಸರಕನ್ನು ತಯಾರಿಸುವ ಭರದಲ್ಲಿ ಶಿಕ್ಷಕರೂ ಮುಂದಾಗುತ್ತಿದ್ದಾರೆ. ಇದು ದೊಡ್ಡ ವಿಪತ್ತು ಎಂದು ನನಗನಿಸುತ್ತಿದೆ. ಮಾರುಕಟ್ಟೆಯ ಸರಕಿನಲ್ಲಿ ಶಿಕ್ಷಕನೂ ಒಬ್ಬನಾದ ಮೇಲೆ ಅವನಿಗೆ ವಿಶೇಷ ಗೌರವ ಸಿಗಲು ಹೇಗೆ ಸಾಧ್ಯ?
ಬಹಳ ಮುಖ್ಯವಾಗಿ ಶಿಕ್ಷಕರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಕಡೆಗಣಿಸುತ್ತಿದ್ದಾರೆ. ಸಮುದಾಯದ ಸಾಂಸ್ಕೃತಿಕ ಕಾರ್ಯಗಳ ನೇತಾರರಾಗಬೇಕಿದ್ದ ಶಿಕ್ಷಕರು ಅದರಿಂದ ಪಲಾಯನ ಮಾಡುತ್ತಿದ್ದಾರೆ. ಇದೂ ಸಹ ಶಿಕ್ಷಕರ ಗೌರವ ಕಡಿಮೆಯಾಗಲು ಕಾರಣವಾಗಿದೆ.
5. ರಂಗ ಭೂಮಿಯ ನಂಟು ಯಾವಾಗಿನಿಂದ ಪ್ರಾರಂಭವಾಯಿತು? ಹೇಗೆ? 
ತಂದೆಯ ಜೊತೆ ಯಕ್ಷಗಾನಕ್ಕೆ ಬಂದೆ. ಅಣ್ಣ ಕಿರಣನ ಜೊತೆ ಆಧುನಿಕ ರಂಗಭೂಮಿಗೆ ಬಂದೆ. ಸುತ್ತಲಿನ ಸಾಂಸ್ಕೃತಿಕ ಹಬ್ಬಗಳು ಬಹು ದೊಡ್ಡ ಪ್ರೇರಣೆ ನೀಡಿದುವು. ಚಿಂತನ ಉತ್ತರ ಕನ್ನಡ ಸಂಘಟನೆ ಅಸ್ತಿತ್ವ ಒದಗಿಸಿತು. ಮುಂದೆ ರಂಗ ಕೆಲಸ ವಿಸ್ತಾರ ಪಡೆಯಿತು.  ಈಗ ಹೊರ ರಾಜ್ಯಗಳಲ್ಲೂ ರಂಗಭೂಮಿಯ ಕೆಲಸಕ್ಕಾಗಿ ಪ್ರಯಾಣ ಮಾಡುತ್ತಲೇ ಇರುತ್ತೇನೆ. ಚಿಕ್ಕಂದಿನಲ್ಲಿ ಪ್ರಭಾವ ಬೀರಿದ ಯಕ್ಷಗಾನ, ನಂತರದಲ್ಲಿ ಉದ್ದೀಪಿಸಿದ ಸಾಹಿತ್ಯ ಕೃತಿಗಳು, ಮೊದಲಿನಿಂದಲೂ ಒದಗಿ ಬಂದ ಸಂಗೀತ ಸಂಬಂಧ ಇವೆಲ್ಲ ಬಣ್ಣಗೊಂಡು, ಪಾಕಗೊಂಡು ರಂಗಭೂಮಿಯಲ್ಲಿ ನೆಲೆ ನಿಲ್ಲಲು ಕಾರಣವಾಗಿವೆ.
6. ರಂಗಭೂಮಿ ಮತ್ತು ಶಿಕ್ಷಣದ ಸಂಬಂಧ ಹೇಗಿರಬೇಕು? ರಂಗಭೂಮಿಯ ನಿಮ್ಮ ಸಂಬಂಧ ಶಿಕ್ಷಣ ಕ್ಷೇತ್ರದಲ್ಲಿ ಪ್ರಯೋಗಕ್ಕೆ ಬಂದಿದೆಯೇ ?
ಮೂಲಭೂತವಾಗಿ ರಂಗಭೂಮಿಯ ಕೆಲಸ ಶಿಕ್ಷಕನ ಕೆಲಸಕ್ಕಿಂತ ಬೇರೆಯಲ್ಲ. ರಂಗಭೂಮಿಯಲ್ಲಿ ನಟ ಪಠ್ಯವನ್ನು ಪ್ರೇಕ್ಷಕರಿಗೆ ಮುಟ್ಟಿಸುತ್ತಾನೆ, ಸಂಸ್ಕಾರಗೊಳಿಸುತ್ತಾನೆ. ಶಿಕ್ಷಕನೂ ಪಠ್ಯವನ್ನು ವಿದ್ಯಾಥರ್ಿಗಳಿಗೆ ಮುಟ್ಟಿಸುತ್ತಲೇ ಅವರ ಸಂಸ್ಕಾರಕ್ಕೆ ಕಾರಣನಾಗುತ್ತಾನೆ. ರಂಗಶಿಕ್ಷಣ ಪಡೆಯದ ವ್ಯಕ್ತಿ ಅಥವಾ ಆ ಕುರಿತು ಆಸಕ್ತಿಯನ್ನು ಮೂಡಿಸಿಕೊಳ್ಳದ ಶಿಕ್ಷಕ ಉತ್ತಮ ಶಿಕ್ಷಕನಾಗಲಾರ ಎಂದೇ ನನ್ನ ಭಾವನೆ. ಶಿಕ್ಷಕ ತರಗತಿಗೆ ಪ್ರವೇಶಿಸುವ ಕ್ರಮ, ವಿದ್ಯಾಥರ್ಿಗಳೊಂದಿಗಿನ ಸ್ಪಂದನೆ, ಚಟುವಟಿಕೆಗಳೊಂದಿಗೆ ಇರಿಸಿಕೊಳ್ಳಬೇಕಾದ ಸುಸಂಬಂಧ, ಪಠ್ಯದ ಓದುವಿಕೆ, ಸ್ವರಭಾರ ಇವೆಲ್ಲವುಗಳೂ ರಂಗಭೂಮಿಯ ಪ್ರಾಥಮಿಕ ಸಂಗತಿಗಳು. ಶಿಕ್ಷಕ ಇವುಗಳಿಂದ ಪ್ರೇರಣೆ ಪಡೆದರೆ ದಿನನಿತ್ಯದ ತರಗತಿಗಳೂ ನಲಿ-ಕಲಿಯೇ ಆಗುತ್ತದೆ.
7. ಹಾಗಾದರೆ ಬಹಳಷ್ಟು ಜನ ರಂಗ ಭೂಮಿಯನ್ನು ಒಂದು ಪಠ್ಯೇತರ ಚಟುವಟಿಕೆ ಅಂತ ಭಾವಿಸುತ್ತಾರಲ್ಲ ?
 ರಂಗಭೂಮಿಯೇ ನಿಜವಾದ ಪಠ್ಯ. ಅದು ವ್ಯಕ್ತಿಗಳ ದೇಹ- ಮನಸ್ಸನ್ನು ಏಕತ್ರವಾಗಿ ಸುಂದರಗೊಳಿಸುತ್ತದೆ. ಬಿ.ಎಡ್, ಎಂ.ಎಡ್ ಗಳಲ್ಲಿ ರಂಗಶಿಕ್ಷಣವನ್ನು ಕಡ್ಡಾಯಗೊಳಿಸಿದರೆ ಶಿಕ್ಷಕರ ತರಬೇತಿಯ ಸ್ವರೂಪವೂ ಬದಲಾಗುತ್ತದೆ. ಇಂದು ರಂಗಶಿಬಿರಗಳಲ್ಲಿ ತೆರೆದುಕೊಳ್ಳುವಷ್ಟು ಪ್ರಭುದ್ಧವಾಗಿ ಮಕ್ಕಳು ತರಗತಿಗಳಲ್ಲಿ ತೆರೆದುಕೊಳ್ಳಲಾರರು ಎಂಬುದನ್ನು ನಾವು ಗಮನಸಿದರೆ ಶಿಕ್ಷಣವು ರಂಗಭೂಮಿಯ ಸಂಬಂಧವನ್ನು ಹೇಗೆ ಧರಿಸಿಕೊಳ್ಳಬಹುದೆಂಬುದು ತಿಳಿದುಬರುತ್ತದೆ.
8. ನಿಮ್ಮ ನಿದರ್ೇಶನದ ಪಾಠ ನಾಟಕ ಪ್ರಯೋಗದ ಉದ್ದೇಶ ಸಫಲವಾಯಿತೇ?
ಪಾಠ ನಾಟಕ ನನ್ನ ಕನಸಾಗಿತ್ತು. 100ಕ್ಕೂ ಹೆಚ್ಚು ಪ್ರದರ್ಶನ ನಡೆದ ಪಾಠ ನಾಟಕ ಪ್ರದರ್ಶನಗಳು ವಿದ್ಯಾಥರ್ಿಗಳನ್ನು ಮಾತ್ರವಲ್ಲ ಶಿಕ್ಷಕರನ್ನೂ ಸಾಕಷ್ಟು ಪರಿಭಾವಿಸಿದೆ.
9. ನೀವು ಮಕ್ಕಳ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೇಕೆ? ಇದು ಅಂತಹ ಖ್ಯಾತಿ ತಂದು ಕೊಡುವ ವಿಭಾಗ ಅಲ್ಲವಲ್ಲ.!
ನಿಜ. ಮಕ್ಕಳ ರಂಗ ಭೂಮಿಯು ಅಂಥ ಖ್ಯಾತಿ ತಂದುಕೊಡುವ ಕ್ಷೇತ್ರವಲ್ಲ. ಆದರೆ ಮಕ್ಕಳ ರಂಗಭೂಮಿ ನನಗೆ ಕಲಿಸಿಕೊಟ್ಟ ಪಾಠ, ನಾನು ದೊಡ್ಡವರ ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಲು ಕಾರಣವಾಗಿದೆ. ಮೂಲತಃ ಮಕ್ಕಳ ರಂಗಭೂಮಿ ಜೀವನದ ಹಲವು ಪೂರ್ವಗ್ರಹೀತ ಕಲ್ಪನೆಯನ್ನು ಒಡೆದುಹಾಕುತ್ತದೆ. ತರ್ಕದ ಆಚೆ ಜಿಗಿಯುವ ಶಕ್ತಿಯನ್ನು, ಮುರಿದು ಕಟ್ಟುವ ಬಗೆಯನ್ನು ಮಕ್ಕಳ ರಂಗಭೂಮಿ ನನಗೆ ಕಲಿಸಿದೆ. ಗೋವಿನ ಹಾಡು ನಾಟಕ ಮಾಡಿಸುವಾಗ ಅಂತಹ ಒಳ್ಳೆಯ ಹುಲಿ ಯಾಕೆ ಸಾಯಬೇಕು? ಎಂದು ಕೇಳಿದ ಬಾಲಕಿಯೊಬ್ಬಳ ಪ್ರಶ್ನೆ ನನ್ನನ್ನು ಪಠ್ಯ ಬಗೆಯುವ ಹೊಸ ಕ್ರಮಕ್ಕೆ ತೆರೆದುಕೊಳ್ಳಲು ಅನುವು ನೀಡಿತು. ನನಗೆ ನನ್ನ ಶಕ್ತಿ ಮತ್ತು ಮಿತಿ ಎರಡೂ ಗೋಚರವಾಗುವುದು ಮಕ್ಕಳ ರಂಗಭೂಮಿಯಲ್ಲಿಯೇ. ಅಲ್ಲದೇ ಖ್ಯಾತಿ ಇಲ್ಲವೇ ಇಲ್ಲವೆಂದಲ್ಲ. `ಕಂಸಾಯಣವನ್ನು ಮಕ್ಕಳಿಗಾಗಿ ನಿದರ್ೇಶಿಸಿದೆ. ದೆಹಲಿಯಲ್ಲಿ ಪ್ರದರ್ಶನಗೊಂಡಿತು. ಅದು ನನಗೆ ಬಹಳ ಖ್ಯಾತಿಯನ್ನು ತಂದುಕೊಟ್ಟಿದೆ.
10. ನೀವು ವಿದ್ಯಾಥರ್ಿಗಳೊಂದಿಗೆ ನಡೆಸಿದ ಹೊಸ ಪ್ರಯೋಗ ?
ಪಠ್ಯಾಧಾರಿತ ವಿಚಾರಸಂಕಿರಣ, ಕವನಗಳಿಗೆ ಚಿತ್ರ ಸ್ಪಂದನೆ, ವಿದ್ಯಾಥರ್ಿಗಳು ಶಿಕ್ಷಕರಾಗಿ ಪಾಠ ನಿರ್ವಹಿಸಲು ಬಿಡುವುದು, ಓದಿನ ಗುಂಪು ಸಿದ್ಧಪಡಿಸುವುದು ಇತ್ಯಾದಿ. ಕೆಲವು ಕಾಲೇಜುಗಳಲ್ಲಿ ನಾನು ನಡೆಸಿದ ಹಾಗೂ ಈಗಲೂ ನಡೆಸುತ್ತಿರುವ ವಾಚನಾಭಿರುಚಿ ಕಮ್ಮಟ ನನ್ನ ಪ್ರಿಯ ಕಾರ್ಯಕ್ರಮಗಳಲ್ಲಿ ಒಂದು.
11. ವಿದ್ಯಾಥರ್ಿಗಳಲ್ಲಿ ಸೃಜನಶೀಲತೆ, ಕ್ರಿಯಾಶೀಲತೆ ಬೆಳೆಸುವಲ್ಲಿ ಶಿಕ್ಷಕರು ವಹಿಸಬೇಕಾದ ಪಾತ್ರ ಏನು?
 ಶಿಕ್ಷಕರೆಲ್ಲರೂ ತೊತ್ತೋಚಾನ್ ಪುಸ್ತಕದಲ್ಲಿ ಮೂಡಿಬಂದಂತಹ ಶಾಲೆಯೊಂದನ್ನು ಸಿದ್ಧಗೊಳಿಸಲು ಪ್ರಯತ್ನ ಪಟ್ಟರೆ ಸಾಕು.
12. ನೀವು ವೃತ್ತಿಗೆ ಸೇರಿದಾಗಿನ ಮಕ್ಕಳ ಮನಃಸ್ಥಿತಿಗೂ ಈಗಿನ ಮಕ್ಕಳ ಮನಃಸ್ಥಿತಿಗೂ ಇರುವ ವ್ಯತ್ಯಾಸ ಏನು? 
ನಾನು ವೃತ್ತಿಗೆ ಸೇರಿದಾಗ ನಮ್ಮ ಮತ್ತು ವಿದ್ಯಾಥರ್ಿಗಳ ಸಂಬಂಧ ಹೆಚ್ಚು ಭಾವನಾತ್ಮಕವಾಗಿದ್ದರೆ, ಈಗ ಹೆಚ್ಚು ಹೆಚ್ಚು ಯಾಂತ್ರಿಕವಾಗುತ್ತಿದೆ. ನಮಗೆ ಮಕ್ಕಳು ಹಾಗೂ ಮಕ್ಕಳಿಗೆ ನಾವು ಸರಕುಗಳಾಗಿ ಕಾಣಿಸುತ್ತಿದ್ದೇವೇನೋ ಎನಿಸುತ್ತಿದೆ. ಆದರೂ ಇಂದಿನ ಮಕ್ಕಳು ತುಂಬ ಸೂಕ್ಷ್ಮರು. ಕೆಲವೊಮ್ಮೆ ನನಗನ್ನಿಸುತ್ತದೆ, ನಾವು ಶಿಕ್ಷಕರು ಕೆಟ್ಟ ಬೋರ್ ಹೊಡೆಸುವ ಧಾರಾವಾಹಿಗಳಂತಿದ್ದೇವೆ; ಮಕ್ಕಳು ಜಾಹೀರಾತಿನಂತಿದ್ದಾರೆ ಎಂದು.
13. ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಾದ ತುತರ್ು ಬದಲಾವಣೆ ಕುರಿತು ಹೇಳಿ? 
ಸಮಾಜದ ಅವಶ್ಯಕತೆಗೆ ಶಿಕ್ಷಣ ಸ್ಪಂದಿಸುತ್ತಲೇ ಶಿಕ್ಷಣದ ನಿಜ ಕನಸುಗಳೇನಿದೆಯೋ ಅದು ರೂಪಿತ ಆಗಬಹುದಾದ ಸಮಾಜವನ್ನು ನಿಮರ್ಿಸುವುದು ಇಂದಿನ ತುತರ್ು.
14. ಶಾಲೆ-ಪಾಠ-ಕಾಗದ ಪತ್ರದ ನಡುವೆ ಬೇರೆ ಕೆಲಸ ಸಾಧ್ಯವೇ ಇಲ್ಲ ಅನ್ನುತ್ತಾರಲ್ಲ! ನೀವು ಹೇಗೆ ಕೆಲಸ ಮಾಡುತ್ತೀರಿ? 
ಕಾಗದ ಪತ್ರಗಳ ನಡುವಿನಿಂದ ಹೊರ ಕೆಲಸಗಳಿಗೆ ಬರುವಾಗ ಅನಿವಾರ್ಯವಾದ ಕೆಲವು ತ್ಯಾಗಗಳನ್ನು ಮಾಡಲೇಬೇಕಾಗುತ್ತದೆ. ಕೆಲವೊಮ್ಮೆ ಆರೋಗ್ಯ-ಹಣ ಎರಡನ್ನೂ ತ್ಯಾಗ ಮಾಡಬೇಕಾದ ಪ್ರಸಂಗ ನನಗೆ ಒದಗಿದೆ. ಆದರೆ ಅದರಿಂದ ಆಗಿರುವ ತೃಪ್ತಿಗೆ ಬೇರಾವುದೂ ಸಾಟಿಯಲ್ಲ.
13. ವಿದ್ಯಾಥರ್ಿಗಳಿಗೆ ನೈತಿಕ ಮೌಲ್ಯದ ಬಗ್ಗೆ ಇತ್ತೀಚಿಗೆ ಹೇಳಲಾಗುತ್ತಿದೆ. ಏನಿದು ಈ ನೈತಿಕ ಮೌಲ್ಯ ? 
ನೀತಿ ಎನ್ನುವುದು ಹೇರಿಕೆಯ ವಸ್ತುವಲ್ಲ. ಅಥವಾ ಅದಕ್ಕಾಗಿಯೇ ತರಗತಿಯನ್ನು ಪ್ರತ್ಯೇಕವಾಗಿ ಸಿದ್ಧಗೊಳಿಸಬೇಕಿಲ್ಲ. ಒಳ್ಳೆಯ ಸಾಹಿತ್ಯದ ಓದಿಗಿಂತ ಉತ್ತಮ ನೀತಿ ಬೇರೊಂದಿಲ್ಲ. ಆದರೆ ಇಂದು ನೀತಿಯ ಹೆಸರಿನಲ್ಲಿ ಮತೀಯ ಶಿಕ್ಷಣದ ಹುನ್ನಾರವೂ ಸೇರಿಕೊಳ್ಳುತ್ತಿರುವುದರಿಂದ ನೀತಿ ಶಿಕ್ಷಣ ಅಂದ ಕೂಡಲೇ ಯಾರ ನೀತಿ? ಯಾವ ನೀತಿ? ಎಂಬೆಲ್ಲ ಪ್ರಶ್ನೆಗಳನ್ನು ಹಾಕಿಕೊಂಡೇ ಮುಂದುವರಿಯಬೇಕಾಗುತ್ತದೆ.
14 . ಶಿಕ್ಷಕ ಪಠ್ಯಕೇಂದ್ರಿತವಾಗಿರಬೇಕೋ? ಸಮಾಜ ಕೇಂದ್ರಿತವಾಗಿರಬೇಕೋ? 
ಶಿಕ್ಷಕ ಪಠ್ಯ ಕೇಂದ್ರಿತನಾದಾಗ ಯಾರೋ ಒಬ್ಬರ ಸಾಧನ (ಣಠಠಟ) ಮಾತ್ರ ಆಗಲು ಸಾಧ್ಯ. ಸಮಾಜ ಕೇಂದ್ರಿತವಾದ ಚಿಂತನೆ ಶುರು ಮಾಡಿದಾಗ ಮನುಷ್ಯನಾಗಲು ಸಾಧ್ಯ. ನಿಜವಾಗಿ ಪಠ್ಯ ಎನ್ನುವುದೇ ಒಂದು ಣಠಠಟ. ಅದರಾಚೆ ಜಿಗಿಯದೇ ಯಾವ ಸೃಜನ ಕ್ರಿಯೆಯೂ ಸಾಧ್ಯವಿಲ್ಲ 

ಯಕ್ಷಗಾನದಲ್ಲಿ ನಾಯಕನ ಆರಾಧನೆ - Dr.Shreepad Bhat

      ಕೆಲದಿನಗಳ ಹಿಂದೆ ಕುಮಟಾದಲ್ಲಿ ಜರುಗಿದ್ದ ಯಕ್ಷಗಾನ ಪ್ರದರ್ಶವೊಂದಕ್ಕೆ ಹೋಗಿದ್ದೆ . ಆಗ ಆಲ್ಲಿ ಆಟ ಪ್ರದರ್ಶನಗೊಂಡ ಬಗೆ ಅಲ್ಲಿಯ ಪ್ರೇಕ್ಷಕ ವರ್ಗದ ನಡವಳಿಕೆಯನ್ನು ನೋಡಿ ನಿಜಕ್ಕೂ ಬೆಚ್ಚಿ ಬಿದ್ದೆ ! ತಮ್ಮ ನೆಚ್ಚಿನ ನಟನ ಪ್ರತಿ ಕುಣಿತಕ್ಕೂ ಪ್ರತಿ ನಿಮಿಷವೂ ಅವರು ಚೀರುತ್ತಿದ್ದ ರೀತಿ ಉಳಿದ ಯಾವ ಪಾತ್ರಗಳನ್ನೂ ನೋಡಲು ಕೇಳಲು ಕೊಡದ ನೀತಿ ಅಭಿಮಾನಿಗಳ ಮಾಫಿಯಾವನ್ನು ನೆನಪಿಗೆ ತರುತ್ತಿತ್ತು. ಅವರನ್ನು ಆ ರೀತಿ ಪ್ರೇರಿಸುತ್ತಿದ್ದ, ಚೀರುವಿಕೆಯಿಂದ ಪುಳಕಗೊಳ್ಳುವ ಕಲಾವಿದರು ಕಲೆಯ ಶವ ಪೆಟ್ಟಿಗೆಯ ಮೊಳೆ ಯಂತಿದ್ದರು. ಯಕ್ಷಗಾನದ ಇಂದಿನ ಸಂದರ್ಭವನ್ನು ಹತ್ತಿರದಿಂದ ಬಲ್ಲವರಿಗೆ ಈ ಮಾತು ಅರ್ಥವಾಗುತ್ತದೆ! ಬೆಂಗಳೂರಿನ ಕೆಲ ಚಲನಚಿತ್ರ ಗೃಹಗಳಲ್ಲಿ ಡಾ. ರಾಜಕುಮಾರರ ಚಿತ್ರಗಳನ್ನು ನೋಡು ವಾಗ ಅಲ್ಲಿನ ಕೆಲ ಪ್ರೇಕ್ಷಕರ ನಡವಳಿಕೆ ಹೀಗೇ ಇರುತ್ತದೆ! ಅಲ್ಲಿ ಶಾಂತವಾಗಿ ಚಲನಚಿತ್ರ ನೋಡುವುದೇ ಅಸಾಧ್ಯ. ಅಲ್ಲಿಗೆ ಮತ್ತು ಇಲ್ಲಿಗೆ ವ್ಯತ್ಯಾಸ ಒಂದಿದೆ! ಅಲ್ಲಿ ಪರದೆಯ ಮೇಲೆ ತನ್ನ ನಾಯಕನನ್ನು ನೋಡುತ್ತಿದ್ದಂತೆ ಚಿಲ್ಲರೇ ನಾಣ್ಯ ಎಸೆದರೆ ಇಲ್ಲಿ ಎಸೆದಿಲ್ಲ ಅಷ್ಟೆ!   ಪ್ರೇಕ್ಷಕರ ಅಸಹನೀಯ ಗದ್ದಲದಿಂದಾಗಿ ಪ್ರದರ್ಶನದಿಂದ ಅರ್ಧಕ್ಕೆ ವಾಪಸಾಗಬೇಕಾಯಿತು. 

     ಹೀಗೆ ಪ್ರೇಕ್ಷಕರಿಂದ ಅಭಿಮಾನದ ರೂಪದಲ್ಲಿ ವ್ಯಕ್ತಗೊಳ್ಳುವ ಈ ಬಗೆಯ ನಡವಳಿಕೆ ಯಕ್ಷಗಾನದಲ್ಲಿ ನಾಯಕನ ಆರಾಧನೆ ಕುರಿತು ಚಿಂತಿಸುವುದಕ್ಕೆ ಕಾರಣ. ಯಕ್ಷರಂಗದಲ್ಲಿ ತಾರೆಗಳ ಉದಯ, ಅವರ ಜವಾಬ್ದಾರಿ ರಹಿತ ನಡತೆ, ಪ್ರೇಕ್ಷಕರ ಅತಿರೇಕ ವರ್ತನೆಗಳು, ಇವೆಲ್ಲವುಗಳಿಂದ ಕಲೆಯ ಮೇಲಾಗುವ ಪರಿಣಾಮದ ಕುರಿತು ಆ ಕ್ಷಣದ ಅನಿಸಿಕೆಗಳನ್ನಷ್ಟೆ ದಾಖಲಿಸುತ್ತಿದ್ದೇನೆ. ನಾನು ಅತೀವವಾಗಿ ಪ್ರೀತಿಸುತ್ತಿರುವ ಕಲಾ ವ್ಯವಹಾರವೊಂದರ ವ್ಯಾಕರಣವೇ ವ್ಯತ್ಯಯವಾಗಿ ಹೋಗುತ್ತಿರುವ ದಿಗ್ಭ್ರಮೆಯಲ್ಲಿ..............

    ಯಕ್ಷಗಾನವೊಂದು ಸಾಮುದಾಯಿಕ ಕಲೆ. ಸೆಮಿಕ್ಲಾಸಿಕ್ ರೂಪ ತಳೆದಿದ್ದರೂ ತನ್ನ ಸಂವಹನದ ಶಕ್ತಿಯಲ್ಲಿ ಸಮ್ಮೋಹಕತೆಯಲ್ಲಿ ಜಾನಪದ ವೈಲಕ್ಷಣವನ್ನು ಗರ್ಭದಲ್ಲಿರಿಸಿಕೊಂಡ ಕಲಾ ಪ್ರಕಾರ. ಸಾಮೂಹಿಕ ನಿರ್ವಹಣೆಯ ಮೂಲಕವೇ ಅದರ ಪರಿಣಾಮ ಸಿದ್ದಿಸುತ್ತದೆ. ಹಾಗಾಗಿ ಈ ಪ್ರದರ್ಶನಾತ್ಮಕ ಕಲೆಗೆ, ಚಲನಚಿತ್ರದಲ್ಲಿರುವಂತಹ, ಕಂಪನಿ ನಾಟಕಗಳಲ್ಲಿ ಕಂಡುಬರುವಂತಹ ತಾರೆಗಳ ಅವಶ್ಯಕತೆ ಇಲ್ಲ. ನಾಯಕನ ಆರಾಧನೆಯಿಂದ ವ್ಯಕ್ತಿಪೂಜೆ ಆರಂಭವಾಗುತ್ತದೆ. ಕಲಾವಿದ ಆ ಕಲಾ ಪ್ರಕಾರಗಳಿಂದ ಹೊರನಿಂತು, ವೈಯಕ್ತಿಕವಾಗಿ ಕಾಣಿಸಿಕೊಳ್ಳುವ, ಪ್ರತ್ಯೇಕಗೊಳ್ಳುವ ವ್ಯವಹಾದಲ್ಲಿ ಈ ತಾರೆಗಳ ಅಸ್ತಿತ್ವ. ಆದರೆ ಯಕ್ಷಗಾನ ಕಲಾವಿದ ವ್ಯವಹರಿಸುವುದು ಆ ಪ್ರಕಾರ(ಖಿಥಿಠಿಜ) ದ ಮೂಲಕವಾಗಿ ಆದ್ದರಿಂದಲೇ ಈ ತಾರೆಗಳು ಯಕ್ಷಗಾನದ ಪರಿಣಾವನ್ನೇ ಹದಗೆಡಿಸುವಲ್ಲಿ ಕಾರಣರಾಗುತ್ತಾರೆ! 

     ಬಹುಶಹ ಟೆಂಟ್ಮೇಳಗಳ ಆವಿಷ್ಕಾರದೊಂದಿಗೆ ಅಂದರೆ ಕಲೆಯೊಂದು ಪೂರ್ಣಪ್ರಮಾಣದಲ್ಲಿ ಉದ್ದಿಮೆಯಾದನಂತರ ಈ ತಾರಾಮೌಲ್ಯ ಪ್ರಚಲಿತಕ್ಕೆ ಬಂದಿತು ಅನಸುತ್ತದೆ. ಆರಾಧನೆಯ ಹೊರತಾದ ಪ್ರದರ್ಶನ ತನ್ನ ಪ್ರದರ್ಶನೀಯತೆಯಿಂದಲೇ ಪ್ರೇಕ್ಷರನ್ನು ಸೆರೆ ಹಿಡಿಯಬೇಕಾಗಿರುವುದರಿಂದ ಸಹಜವಾಗಿ ಕೆಲವು ಪ್ರೇಕ್ಷಣೀಯ ಅಂಶಗಳನ್ನು ಗುರುತಿಸಿ, ಟೆಂಟ್ ಯಜಮಾನ ಅವುಗಳನ್ನು ಕ್ಯಾಶ್ ಮಾಡಿಕೊಳ್ಳತೊಡಗಿದ. ಈ ಹಿನ್ನಲೆಯಲ್ಲಿಯೇ ಇಂತಹ ಪಾತ್ರ ಇಂಥವರೇ ನಿರ್ವಹಿಸುವರೆಂಬ ಪ್ರಚಾರ,  ಅದನ್ನು ನೋಡಲೆಂದೇ ಪ್ರೇಕ್ಷಕರು ಬರುವಂತೆ ಮಾಡಲಾಯಿತು. ಇದೇ ಮುಂದೆ ಪಟ್ಟಭದ್ರತೆ, ಕಲಾವಿದರ ಬೆಳವಣಿಗೆಯ ಸ್ಥಗಿತತೆ ಇವೆಲ್ಲಕ್ಕೂ ಕಾರಣವಾಯಿತು.

           ಕಲಾವಿದನ ಸ್ವಗತದಲ್ಲಿ ಯಕ್ಷ ಕಲಾವಿದ ಜಲವಳ್ಳಿ ವೆಂಕಟೇಶರು ಈ ಕುರಿತು ಮಾತನಾಡುತ್ತ
ಆಟವೇ ಪ್ರಧಾನವಾಗಿದ್ದಾಗ ಒಬ್ಬ ಕಲಾವಿದ ಎರಡು-ಮೂರು ಪಾತ್ರಗಳನ್ನು ನಿಭಾಯಿಸುತ್ತಿದ್ದ.... ಇಂಥ ಪಾತ್ರ ಇಂಥವರೇ ಮಾಡಬೇಕೆಂಬ ಮೀಸಲಾತಿ ಇರುತ್ತಿರಲಿಲ್ಲ. ಸಂದಭರ್ಾನುಸಾರ ಆಯಾ ಪಾತ್ರಗಳನ್ನು ಮಾಡುವ ಅವಕಾಶ ಸಿಗುತ್ತಿತ್ತು. ಇದರಿಂದ ಒಬ್ಬ ಕಲಾವಿದ ಪೂರ್ಣ ಪ್ರಮಾಣದಲ್ಲಿ ರೂಪುಗೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಇಂದು ಹೀಗಿಲ್ಲ ಎನ್ನುತ್ತಾರೆ. ಕಲೆಕ್ಷನ್ ಮಾತ್ರ ಪ್ರಧಾನವಾಗಿರುವ ಉದ್ದೇಶದ ಪ್ರದರ್ಶನದಲ್ಲಿ ಇದಕ್ಕೆ ವ್ಯತಿರಿಕ್ತವಾದ ಅನುಭವ ಸಹಜವಾಯಿತು.

       ಕಾಲದ ಹೋಯ್ಲಿಗೆ ಸಿಕ್ಕ ಯಾವ ಕಲೆಯಾದರೂ ತನ್ನ ಮೂಲ ಸ್ವರೂಪದಲ್ಲಿ ಉದ್ದೇಶದಲ್ಲಿ ವ್ಯತ್ಯಯ ಇಲ್ಲದಂತೆ ಮುಂದುವರಿಯಲು ಸಾಧ್ಯವಿಲ್ಲ. ಈ ಕುರಿತು ನಾವು ಸಿನಿಕರಾಗಬೇಕಿಲ್ಲ. ಆದರೆ ಇದೇ ಕಾರಣಕ್ಕೆ ಕಲಾ ಸಂಸ್ಥೆ ಪ್ರೇಕ್ಷಕರ ಅಭಿರುಚಿಯನ್ನೇ ಕೆಡಿಸದಿರುವ ವಿವೇಕ ಬೆಳಸಿಕೊಳ್ಳಬೇಕಾದ ಬಗ್ಗೆ ಚಿಂತಿಸಬೇಕಾಗಿದೆ. ಅದರಲ್ಲೂ ಸೂಕ್ಷ್ಮರೂ, ಸಂವೇದಿಗಳೂ ಅನ್ನಿಸಿಕೊಂಡ ಕಲಾವಿದರು ಈ ಹೋಯ್ಲಿನಲ್ಲಿ ತಾವೇ ಸೆಳೆದು ಹೋಗುತ್ತ ತಮ್ಮ ಅಸ್ತಿತ್ವನ್ನು ಪ್ರತ್ಯೇಕವಾಗಿ ಕಾಣಿಸಿ ಚಪ್ಪಾಳೆಗಾಗಿಯೇ ರಂಗದ ಮೇಲೆ ಬದುಕುವ ರೀತಿ ಶೋಚನೀಯ ಎನಿಸಿಬಿಡುತ್ತದೆ. 
ಈ ಹಿಂದೆ ಕೆಲವು ಕಲಾವಿದರು ತಮ್ಮ ಪ್ರತಿಭೆ ಮತ್ತು ಅವಕಾಶಗಳಿಂದಾಗಿ ಯಕ್ಷಗಾನದಲ್ಲಿ ನಾಯಕಮಣಿಗಳಾಗಿ ಕಂಗೊಳಿಸಿದ್ದಿದೆ. ಆದರೆ ವಿವಿಧ ಪಾತ್ರಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಒಟ್ಟು ಪರಿಣಾಮದಲ್ಲಿ ಯಕ್ಷಗಾನದ ಪ್ರಕಾರ ದಿಂದ ಬೇರೆಡೆ ಫ್ರೇಂ ಆಗದಿರುವಿಕೆ, ಅವರನ್ನು ತಾರೆಗಳನ್ನಾಗಿಸಲಿಲ್ಲ. 

     ಈ ಸಂದರ್ಭದಲ್ಲಿ ಕೆ.ವಿ.ಅಕ್ಷರ ಅವರು ರಂಗ ಪ್ರಪಂಚ ಪುಸ್ತಕದಲ್ಲಿ ಉಲ್ಲೇಖಿಸಿದ 18ನೇ ಶತಮಾನದಲ್ಲಿಯ  ನಾಟಕ ರಂಗಭೂಮಿಯ ತಾರಾ ಮೌಲ್ಯದ ಉದಯ ಮತ್ತು ಕಲೆಯ ಅವನತಿ ಬಗೆಗಿನ ದಾಖಲೆಗಳನ್ನು ಹೋಲಿಕೆಗಾಗಿ ಇಲ್ಲಿ ನೀಡುತ್ತಿದ್ದೇನೆ. ಪ್ರೇಕ್ಷಕರು ನಾಟಕ ನೋಡಲಿಕ್ಕಾಗಿ ಹೋಗದೆ ತಮ್ಮ ನೆಚ್ಚಿನ ನಟರನ್ನು ನೋಡಲಿಕ್ಕಾಗಿ ಹೋಗುತ್ತಿದ್ದರು.... ನಟ ತನ್ನ ದೇಹ ಧ್ವನಿ ಮಾತುಗಳನ್ನು ಪ್ರೇಕ್ಷಕರಿಗೆ ಆಕರ್ಷಕವೆನಿಸುವ ಹಾಗೆ, ಚಾಣಾಕ್ಷವೆನಿಸುವ ಹಾಗೆ ಬಳಸಿಕೊಳ್ಳತಿದ್ದ. ಇಂಥ ಒಂದೊಂದು ಅಭಿನಯ ಭಾಗವನ್ನು ಮುಗಿಸುತ್ತಲೂ ಪ್ರೇಕ್ಷರಿಂದ ಕರತಾಡತನವನ್ನು ಸ್ವೀಕರಿಸಿ ಆಮೇಲೆ ಮುಂದಿನ ಭಾಗಕ್ಕೆ ಹೋಗುತ್ತಿದ್ದ... 

       ನಮ್ಮ ಯಕ್ಷ ತಾರೆಗಳು ಸಹ ಹೀಗೆಯೇ  ಬಾವ ಕೈಯ ಮುಗಿವೆ........ ಎಂಬ ಪದ್ಯವನ್ನು ಭಾಗವತರು ಹಾಡುತ್ತಿದ್ದರೆ ನೆಲಕ್ಕೆ ತಲೆ ಹೊಸೆಯುವವರೆಗೂ ಬಗ್ಗಿ, ಚಪ್ಪಾಳೆ ಬಿದ್ದ ಮೇಲೆಯೇ ತಲೆ ಎತ್ತುತ್ತಾರೆ. ಉಂಡ ಮೊಲೆಯ ಮರೆತು .......... ಪದಾಭಿನಯದಲ್ಲಿ ಮೊಲೆಯನ್ನು ವಿಕೃತವಾಗಿ ತೋರುತ್ತ ಪದ್ಯದ ಧ್ವನಿಯನ್ನೆ ಗ್ರಹಿಸದೇ ಚಪ್ಪಾಳೆ ಬೀಳುವವರೆಗೂ ಕುಣಿಯುತ್ತಾರೆ. ಒಂದು ಪ್ರದರ್ಶನ ಮುಗಿಯುವ ಹೊತ್ತಿಗೆ ಇಂತಹ ಹಲವು ಹತ್ತು ಉದಾಹರಣೆಗಳನ್ನು ಯಾರು ಬೇಕಾದರು ಗುರುತಿಸಬಹುದು, ಅದರಲ್ಲೂ ಇಂತಹ ಅಭಿನಯಗಳು ತುಂಬಾ ರೂಕ್ಷವಾಗಿ ಅಭಿನಯಿಸಲ್ಪಡುತ್ತವೆ; ಕಂಪನಿ ನಾಟಕದ ಅನೌಚಿತ್ಯ ಹಾಸ್ಯಗಳಿಗಿಂತ ಕಡೆಯಾಗಿ........... ಅರ್ಥ ಸಂವಹನದ ಗರಿಷ್ಟ ಸಾಧ್ಯಗಳಿಗಾಗಿ ಬಳಕೆಯಾಗುವ ಪುನಾರಾಭಿನಯ ಪರಂಪರೆ ಇಂಥವರ ಕೈಗೆ ಸಿಕ್ಕು ಹೇಗೆ ವಿರೂಪಗೊಳ್ಳುತ್ತಿದೆ ಎಂಬುದನ್ನು ಇಂಥ ಉದಾಹರಣೆಗಳಲ್ಲಿ ಚೆನ್ನಾಗಿ ಗಮನಿಸಬಹುದು.

     ಅಕ್ಷರ ಅವರು ಅದೇ ಲೇಖನದಲ್ಲಿ ಹೇಳಿದ ಈ ಹೇಳಿಕೆಯನ್ನು ಗಮನಿಸಿ. ನಾಟಕ ರಂಗದ ನಟರ ಅಸಾಧಾರಣ ಪ್ರಸಿದ್ದಿಯೇ ಆ ಶತಮಾನದ ನಾಟಕ ಸಾಹಿತ್ಯಕ್ಕೆ ಮುಳುವಾಯಿತು. ನಟ ತನ್ನನ್ನು ನೋಡಲೆಂದು ಬಂದ ಪ್ರೇಕ್ಷಕನಿಗಾಗಿಯೇ ತನ್ನ ಅಭಿನಯವನ್ನು ಒಗ್ಗಿಸಿಕೊಂಡಿದ್ದ. ಮ್ಯಾನೇಜರರು ತನ್ನ ಕಂಪನಿ ನಟನಿಗೆ ಹೊಂದುವಂತೆ ಏಕವ್ಯಕ್ತಿ ಪ್ರಧಾನ ನಾಟಕಗಳನ್ನು ಬರೆಸಿ ಆಡುತ್ತಿದ್ದರು. 

    ಹದಿನೆಂಟನೇ ಶತಮಾನದ ಈ ರಂಗ ಇತಿಹಾಸದ ದಾಖಲೆ ಇಂದಿನ ಯಕ್ಷಗಾನ ಕಂಪನಿಗಳಿಗೆ ಎಷ್ಟು ಚೆನ್ನಾಗಿ ಅನ್ವಯವಾಗುತ್ತದೆ ಗಮನಿಸಿ. ಮುಖ್ಯವಾಗಿ ಚಿಂತಿಸ ಬೇಕಾದದ್ದು ಇದು - ಇದನ್ನೆಲ್ಲ ತುಂಬಾ ಖುಷಿಯಿಂದ ಅನುಭವಿಸುವ ನಟ ತಾನು ಬೆಳೆಯುವುದಿಲ್ಲ. ಪಾತ್ರಕ್ಕಿಂತ ನಟನೇ ಪ್ರಧಾನನಾದಲ್ಲಿ ಪಾತ್ರಕ್ಕೆ ಹೊಂದುವಂತೆ ನಟ ಬದಲಾಗುವುದಿಲ್ಲ.  
ಈ ಅಚ್ಚಿನ ಅಭಿನಯದ ನಟರು, ಅವರ ಏಕವ್ಯಕ್ತಿ ಪ್ರಧಾನ ಪ್ರಸಂಗ ಪ್ರದರ್ಶನ, ಈ ಪ್ರದರ್ಶನಗಳು ಸೃಷ್ಟಿಸಿದ ಶಿಳ್ಳೆ ಪ್ರೇಕ್ಷಕರು - ಇಲ್ಲದರಿಂದ ಆಟ ನೋಡುವುದು ಒಂದು ಅನುಭವವಾಗಿ ಮಾರ್ಪಡುವುದು ಸಾಧ್ಯವೇ? ಇದರಲ್ಲಿ ಯಾರ್ಯಾರ ಕೊಡುಗೆ ಎಷ್ಟೆಷ್ಟಿದೆ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬಹುದೇ .
                                                                       Dr.Shreepad Bhat

ಕಾರ್ನಾಡರ ನಾಟಕಗಳಲ್ಲಿ ಸ್ತ್ರೀಪಾತ್ರ -ಶ್ರೀಪಾದ ಭಟ್ಟ್

         ಶ್ರೇಣೀಕೃತ, ಸಾಂಪ್ರದಾಯಿಕ, ಪಿತೃ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ ಮತ್ತು ಸಾಧ್ಯತೆ ಕಾರ್ನಾಡರನ್ನು ಬಹುವಾಗಿ ಆಕರ್ಗಷಿಸಿದ ಸಂಗತಿ. ಈ ಆಶಯವನ್ನು ಅವರು ನಿರ್ವಹಿಸಿದ ಬಗೆ, ಸ್ತ್ರೀ ಪಾತ್ರಗಳ ನಿರ್ಮಿತಿಯ ಹಿಂದಿನ ನಿಲುವು, ಈ ನಿಲುವುಗಳು ನಾಟಕದ ಕ್ರಿಯೆಯನ್ನು ನಡೆಸಿದ ರೀತಿ ಇದನ್ನು ಅಧ್ಯಯನ ಮಾಡುವುದು ಈ ಲೇಖನದ ಉದ್ದೇಶ. ಸ್ತ್ರೀ ಪಾತ್ರಗಳ ನಡೆಯ ಮೂಲಕವೇ ಈ ಅಂಶಗಳನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ. ಕೇಂದ್ರದಲ್ಲಿದ್ದ ಪುರುಷ ಯಜಮಾನಿಕೆ ಪರಿಧಿಯತ್ತ ಸರಿಯುತ್ತ, ಈ ಪುರುಷ ಪಾತ್ರಗಳ ಸುತ್ತ ಗಿರಕಿ ಹೊಡೆಯುತ್ತವೆ ಎಂದು ಕೊಳ್ಳುವ ಸ್ತ್ರೀ ಪಾತ್ರಗಳು ಕೇಂದ್ರವನ್ನಾವರಿಸುವ ಒಂದು ಬಗೆಯ ಚಲನೆ ಇಲ್ಲಿಯ ನಾಟಕದಲ್ಲಿರುವದರಿಂದ, ಪಾತ್ರಗಳ ನಡೆಯ ಚಚರ್ೆ, ನಾಟಕದ ಚಚರ್ೆಯಾಗಿಯೂ ಇಲ್ಲಿ ಮಾರ್ಪಟ್ಟಿದೆ. ಈ ಚಚರ್ೆಗೆ ಯಯಾತಿ, ಹಿಟ್ಟಿನಹುಂಜ, ಅಂಜುಮಲ್ಲಿಗೆ, ಹಯವದನ, ನಾಗಮಂಡಲ, ಅಗ್ನಿ ಮತ್ತು ಮಳೆ ನಾಟಕಗಳನ್ನು ಆಯ್ದುಕೊಂಡಿದ್ದೇನೆ.
                  ಹೆಣ್ಣು ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಮಾಡುವ ವಿವಿದಣ ನೆಲೆಯ ಹೋರಾಟವನ್ನು ಅಸ್ತಿತ್ವವಾದಿ ತಾತ್ವಿಕತೆಯ ಮೂಲಕವೇ ಕಟ್ಟ ಹೊರಟ ಪ್ರಯತ್ನ ಯಯಾತಿಯಲ್ಲಿದೆ. ದೇವಯಾನಿ ಬ್ರಾಹ್ಮಣ ಕನ್ಯೆ. ಕಚನಿಂದ ನಿರಾಕರಿಸಲ್ಪಟ್ಟ ಆಕೆಗೆ ಯಯಾತಿಯಿಂದೊಂದು ಅಸ್ತಿತ್ವ ಸಿಕ್ಕಿತು. ಆ ಕಾರಣಕ್ಕಾಗಿಯೇ ಯಯಾತಿಯ ಎಲ್ಲ ತೆವಲುಗಳನ್ನು ಆಕೆ ಸಹಿಸುತ್ತ ಬಂದಳು. ಆದರೆ ಯಾವ ಅಸ್ತಿತ್ವಕ್ಕಾಗಿ ಯಯಾತಿಯನ್ನು ಆಕೆ ಸಹಿಸಿದ್ದಳೋ ಅದಕ್ಕೆ ಧಕ್ಕೆ ಬಂದಾಗ ಮಾಂಗಲ್ಯವನ್ನು ಕಿತ್ತು ಬಿಸುಟು ಹೊರನಡೆಯುತ್ತಾಳೆ. ಶರ್ಮಿಷ್ಟೆ ರಾಜನ ಮಗಳಾಗಿದ್ದರೂ ಒಂದು ಕಾಲಕ್ಕೆ ಗೆಳತಿಯಾಗಿದ್ದ, ಬ್ರಾಹ್ಮಣ ರಾಣಿಯ ದಾಸಿಯಾದವಳು. ಕ್ಷತ್ರಿಯ ರಾಜ ಯಯಾತಿಯನ್ನು ತನ್ನ ಬೌದ್ಧಿಕತೆ ಮತ್ತು ಲೈಂಗಿಕತೆಯಿಂದ ಗೆದ್ದು ದೇವಯಾನಿಯ ಸ್ಥಾನಕ್ಕೆ ಬರುತ್ತಾಳೆ. ಆದರೆ ಒಮ್ಮೆ ಆ ಸ್ಥಾನಕ್ಕೆ ಬಂದ ನಂತರ ಯಯಾತಿಗೆ ನಿಷ್ಠಳಾಗುತ್ತಾಳೆ. ಈ ಹೊಸ ಅಸ್ತಿತ್ವ ಯಯಾತಿಯೊಂದಿಗಿನ ವಾನಪ್ರಸ್ಥಕ್ಕೂ ಅವಳನ್ನು ಸಿದ್ದಗೊಳಿಸುತ್ತದೆ.
      ಕ್ಷತ್ರಿಯತ್ವದ ದಮ್ಮಿಲ್ಲದ ಪುರುವಿನ ಕೈ ಹಿಡಿದು ಅರಮನೆ ಪ್ರವೇಶಿಸಿದ ಚಿತ್ರಲೇಖೆಯನ್ನು ಸ್ವಾಗತಿಸಿದ್ದು ದೇವಯಾನಿ ಕಿತ್ತೆಸೆದ ಮಾಂಗಲ್ಯ. ಈ ಮಾಂಗಲ್ಯದ ಕಾರಣಕ್ಕಾಗಿ ಗಂಡನ ಮುದಿತನವನ್ನು ಆಕೆ ಸಹಿಸಲಾರಳು. ರಾಜತ್ವದ ಅಧಿಕಾರ ಕೂಡ ಆಕೆಯನ್ನು ಬಗ್ಗಿಸಲಾರದು. ಹೊಸ ಓದು ತಂದುಕೊಟ್ಟ ಎಚ್ಚರ, ಅವಳ ಸಮಕಾಲೀನ ಚಿಂತನೆಗೆ ಕಾರಣವಾಗಿದೆ.
ಯಯಾತಿಗೆ ಆಕೆ ಹಾಕುವ ಸವಾಲು ಇದು ..... ನಿಮ್ಮ ಸೊಸೆ ವೇದಾಧ್ಯಯನ ಮಾಡಿರಬೇಕು. ಗೃಹಕೃತ್ಯದಲ್ಲಿ ನುರಿತವಳಾಗಿರಬೇಕು ಎಂದೆ ಅಲ್ಲವೆ? ನಾನು ಅಸ್ತ್ರವಿದ್ಯೆ ಬೇರೆ ಕಲಿತಿದ್ದೆ. ಇಂಥ ವಿದ್ಯೆಯ ಪುತ್ಥಳಿಯನ್ನು ಮನೆಗೆ ತಂದು ಅವಳ ಕಾಲಿಗೆ ಸನಾತನ ಶೃಂಖಲೆಯನ್ನು ತೊಡಿಸುವ ಆಟ ನಿಮ್ಮದು. ಅಣ್ಣಂದಿರಿಂದ ನಾನು ವನ್ಯ ಪಶುಗಳಿಗೆ ಬೆದರಬಾರದೆಂದು ಕಲಿತಿದ್ದೇನೆ. ನಿಮಗೆ ನಾನು ಹೆದರಲೇ?
                ನಾಟಕದಲ್ಲಿ, ವರ್ಣ ಸಂಘರ್ಷದ ರಾಜಕೀಯಕ್ಕೆ ಹೆಣ್ಣು ತನ್ನನ್ನು ಒಡ್ಡಿಕೊಂಡ ಬಗೆ ಬಹು ಮಹತ್ವದ್ದು. ಯಯಾತಿಯ ಮೊದಲ ಹೆಂಡತಿ ಪುರುವಿನ ತಾಯಿ ಅಸುರ ಕನ್ಯೆ, ತನಗೆ ತಿಳಿಯದೇ ಆದ ಮದುವೆ ಅದು ಎಂಬುದು ಅವನ ಅಳಲು. ದಿಗ್ವಿಜಯದಲ್ಲಿ ಸಿಕ್ಕಿದ ಆಕೆ ಯಯಾತಿಯ ಅಸ್ತಿತ್ವವನ್ನೇ ಅಲ್ಲಾಡಿಸಿಬಿಡುತ್ತಾಳೆ. ಯಯಾತಿ, ರಾಕ್ಷಸ ಕನ್ಯೆಯ ರಕ್ತವನ್ನು ಪುರುವಿನ ನರನಾಡಿಗಳಿಂದಲೇ ಮರೆಯಾಗಿಸುವ ಪ್ರಯತ್ನ ಮಾಡುತ್ತಾನೆ. ಶರ್ಮಿಷ್ಟೆ ಅಸುರಕನ್ಯೆ. ಆಕೆಯ ಬೌದ್ಧಿಕತೆ ಅವಳನ್ನು ಗೆಲ್ಲುವ ಚಪಲತೆಯನ್ನು ಯಯಾತಿಗೆ ತಂದುಕೊಡುತ್ತದೆ. ಅಸುರ ಕನ್ಯೆಯಿಂದ ಅವಮಾನಕ್ಕೀಡಾದ ಅಹಂಕಾರ ಶಮರ್ಿಷ್ಠೆಯನ್ನು ಹೊಂದುವ ತವಕಕ್ಕೆ ಇಂಬು ನೀಡುತ್ತದೆ. ಹೀನೈಸಲಾಗುತ್ತಿದ್ದ ಅಸುರ ಸ್ಥಾನದಿಂದ ಕ್ಷತ್ರಿಯ ಸ್ಥಾನಕ್ಕೇರಿದ ಶಮರ್ಿಷ್ಠೆ ಬ್ರಾಹ್ಮಣ ಒಡತಿಯನ್ನು ಅವಳ ಸ್ಥಾನ ಬಿಡಿಸುತ್ತಾಳೆ.
                  ಕೊನೆಗೂ ಯಯಾತಿಯ ಮುಕ್ತಿಗೆ ಅಸುರ ಹೆಣ್ಣು  ಶರ್ಮಿಷ್ಟೆಯೇ ಒದಗಿ ಬರಬೇಕಾಗುತ್ತದೆ. ಲಿಂಗಭೇದ ತಂದಿರುವ ಹೀನತೆಯಿಂದ ಮಾತ್ರವಲ್ಲ ವರ್ಣಭೇದದ ಹೀನತೆಯಿಂದಲೂ ಹೆಣ್ಣು ಬಿಡುಗಡೆ ಹೊಂದಲು ಪ್ರಯಾಸಪಡುತ್ತಲೇ ಇರಬೇಕಾಗುತ್ತದೆ.
               ಈ ಬಿಡುಗಡೆಗಾಗಿಯೇ ದೇವಯಾನಿ ಮಾಂಗಲ್ಯ ಕಿತ್ತೆಸೆದು ಕುಟುಂಬ ವ್ಯವಸ್ಥೆಯಿಂದ ಹೊರ ಸಾಗಿದರೆ, ಶಮರ್ಿಷ್ಠೆ ದೇವಯಾನಿಯ ಸ್ಥಾನಕ್ಕೆ ಬರುವುದರ ಮೂಲಕ ದಾಸತ್ವದಿಂದ, ಅಸುರತ್ವದಿಂದ ಬಿಡುಗಡೆ ಪಡೆಯುತ್ತಾಳೆ. ಸ್ವರ್ಣಲತೆ ತಾನು ಶೀಲ ಭಂಗಕ್ಕೆ ಒಳಗಾಗಿದ್ದೇನೆ ಎಂದು ಗಂಡನಿಗೆ ಸುಳ್ಳು ಹೇಳುವುದರ ಮೂಲಕ ಅವನ ಸಂಶಯದ ನರಕದಿಂದ ಬಿಡುಗಡೆ ಹೊಂದಿದರೆ, ಚಿತ್ರಲೇಖೆ ವಿಷದ ಕರಂಡಿಕೆಗೆ ಈಡಾಗಬೇಕಾಗುತ್ತದೆ. ಅವಳ ಸಾವು ಯಯಾತಿಯನ್ನು ಪುರುವನ್ನೂ ಅವರ ಭ್ರಮೆಗಳಿಂದ ಬಿಡುಗಡೆ ಗೊಳಿಸುತ್ತದೆ.
                  ಪುರುಷ ಯಜಮಾನ್ಯ ಲೈಂಗಿಕ ಲಾಂಛನವನ್ನಾಧರಿಸಿದೆ. ಯಯಾತಿಯ ಪುರುಷತ್ವದ ಅಹಮಿಕೆಗೆ ಲೈಂಗಿಕತೆ ಸಾಧನವಾಗಿರುತ್ತದೆ.  ಶರ್ಮಿಷ್ಟೆಯ  ಜತೆಗಿನ ಲೈಂಗಿಕತೆಯ ವ್ಯವಹಾರದಿಂದ ಆಕೆಯ ಬೌದ್ಧಿಕತೆಯನ್ನು ಗೆಲ್ಲುವ ಹಾಗೂ ಬ್ರಾಹ್ಮಣತಿ ದೇವಯಾನಿಯ ಮೇಲೆ ವಿಜಯ ಸಾಧಿಸಿದ ತೆವಲು ಯಯಾತಿಗೆ. ಆದರೆ ಯಾವ ಲೈಂಗಿಕತೆ ಅಧಿಕಾರದ ಕೇಂದ್ರವಾಗಿತ್ತೋ, ಅದೇ ಲೈಂಗಿಕ ಆಹ್ವಾನದ ಮೂಲಕ ಚಿತ್ರಲೇಖೆ ಅವನ ಅಧಿಕಾರ ಕೇಂದ್ರವನ್ನು ಚೂರು ಚೂರು ಮಾಡುತ್ತಾಳೆ. ಆ ಮೊದಲೇ ಪುರುವಿನ ತಾಯಿ ಲೈಂಗಿಕತೆಯ ಮೂಲಕವೇ ಯಯಾತಿಯ ಅಧಿಕಾರ ಕೇಂದ್ರವನ್ನು ಛಿದ್ರಗೊಳಿಸಿದ್ದಳು.
                ಯಯಾತಿ : ..... ಅವಳು ನಮ್ಮೆಲ್ಲರನ್ನು ಮೋಸಗೊಳಿಸಿದಳು. ರಾಜಪುರೋಹಿತರಿಂದ ಹಿಡಿದು ನಮ್ಮ ಅಶ್ವಶಾಲೆಯ ಆಳು ಮಗನವರೆಗೆ ಎಲ್ಲರ ಕಣ್ಣಲ್ಲೂ ಧೂಳೆರಚಿ ಹೋದಳು.
ಲೈಂಗಿಕ ಅಪಚಾರದ ಸಂಶಯದಿಂದಲೇ ಸ್ವರ್ಣಲತೆಯ ಗಂಡ ಆಕೆಯನ್ನು ಹಿಂಸಿಸುತ್ತಿದ್ದ. ಯಾವಾಗ ಆಕೆ ತಾನು ಲೈಂಗಿಕ ಸ್ವೇಚ್ಛಾಚಾರ ಮಾಡಿದ್ದೇನೆ ಎಂದು ಪ್ರಕಟಿಸುತ್ತಾಳೋ ಆಗ ಊರನ್ನೇ ಬಿಡುತ್ತಾನೆ.
                ಯಯಾತಿ ಕುಟುಂಬದ ಹಿರಿಯತನ, ಪಿತೃತ್ವ ತಂದುಕೊಡುವ ಅಧಿಕಾರದ ವಾರಸುದಾರ. ಆದರೆ ತಂದೆತನದ ಜವಾಬ್ದಾರಿ ಹೊರಲಾರ. ಹಾಗಾಗಿ ಮಗನ ಯೌವನವನ್ನು ಆತ ಕೇಳಬಲ್ಲ. ಅದಕ್ಕೆಂದೇ ಚಿತ್ರಲೇಖೆ ಆತನನ್ನು ಮಾವನೆಂದು ಸ್ವೀಕರಿಸಲು ಒಪ್ಪುವುದಿಲ್ಲ. ಕೌಟುಂಬಿಕ ನ್ಯಾಯ ಮೀರಿದ ಯಯಾತಿಗೆ ಅದೇ ತರ್ಕದ ಹಿನ್ನೆಲೆಯಲ್ಲಿ ತನ್ನನ್ನು ಸ್ವೀಕರಿಸಲು ಹೇಳುತ್ತಾಳೆ. ದುರ್ಬಲ ಗಂಡನನ್ನು ಅಂತಃಪುರ ಸೇರಿಸಲು ಆಕೆ ಒಪ್ಪುವುದಿಲ್ಲ. ರಾಜತ್ವದ ಅಧಿಕಾರದಿಂದ ಪುರುವನ್ನು ಸ್ವೀಕರಿಸಲು ಯಯಾತಿ ಹೇಳಿದಾಗ ಸಾವಿನಿಂದ ಆತನನ್ನು ಸೋಲಿಸುತ್ತಾಳೆ. ವ್ಯವಸ್ಥೆಯ ಪಂಚಾಂಗವನ್ನು ಸಡಿಲಿಸುತ್ತಾಳೆ.
ಇಲ್ಲಿಯ ಪುರುಷ ಸಮಾಜ ಮಮರ್ಾಂಗದ ಮೂಲಕವೆ ಹೆಣ್ಣು ಕುಲವನ್ನು ಆಳಲು ಯತ್ನಿಸುತ್ತದೆ. ಆದರೆ ಸ್ತ್ರೀಯರು ಆ ಲೈಂಗಿಕ ಸ್ವಾತಂತ್ರ್ಯವನ್ನು ವಹಿಸಿಕೊಂಡಾಗ, ಮಮರ್ಾಂಗಕ್ಕೇ ಏಟು ಬಿದ್ದವರಂತೆ ಬೊಕ್ಕ ಬೋರಲು ಮಕಾಡೆ ಮಲಗಿಬಿಡುತ್ತದೆ.
             ಹಿಟ್ಟಿನ ಹುಂಜದ ಅಮೃತಮತಿ ಜೀವನದ ಒಂದು ಗಳಿಗೆಯ ಅಜ್ಞಾತಕ್ಕೆ, ತಾನು ತಾನಾಗಿ ಮಾತ್ರ ಇರುವುದಕ್ಕೆ ಹಂಬಲಿಸಿದವಳು. ತನ್ನತನದ ಪರಿಚಯವಾಗುವದಕ್ಕಿಂತ ಮೊದಲೇ ಮದುವೆಯಾಗಿ, ಬೇರೆಯವರಿಗಾಗಿ ಬದುಕಿದವಳು, ರಾಣಿವಾಸ ಬಂಧನದ ಬದುಕು, ಮನೆತನಕ್ಕಾಗಿ ಆಗ ಬೇಕಾದ ಬಸಿರ ಹಕ್ಕೊತ್ತಾಯಕ್ಕಾಗಿ, ತಾನು ಆರಿಸಿಕೊಂಡ ಒಂದು ಗಳಿಗೆಗಾಗಿ ಮಾವುತನನ್ನೂ ಆತನ ರಾಗವನ್ನೂ ಅಪ್ಪಿಕೊಂಡವಳು. ಈ ಲೈಂಗಿಕತೆ ಅವಳ ಸ್ವಂತದ ಆಯ್ಕೆ. ಅದರಲ್ಲಿ ಪಾಪದ ಸೋಂಕಿಲ್ಲ. ಹಾಗಾಗಿ ರಾಜನಾಗಲೀ, ರಾಜಮಾತೆಯಾಗಲೀ ಮಂಡಿಸುವ ಪಾಪದ ಮೀಮಾಂಸೆಯನ್ನು ಆಕೆ ಒಪ್ಪುವುದಿಲ್ಲ. ಭೌತಿಕವಾಗಿ ತನ್ನ ಕಡೆಗಿದ್ದರೂ ಬೌದ್ಧಿಕವಾಗಿ ಇನ್ನೂ ಹಿಂಸೆಯ ಪರ ಇರುವ ಅತಂತ್ರ ಮನಸ್ಥಿತಿಯ ನಪುಂಸಕ ಗಂಡ, ಸಮಯ ಸಿಕ್ಕಾಗಲೆಲ್ಲ ಧರ್ಮದ ಹೆಸರಿನಲ್ಲಿ ತನ್ನನ್ನು ಮಟ್ಟ ಹಾಕಲು ನಿಂತ ಕುಸ್ತಿ ಪಟುವಿನಂತೆ ವತರ್ಿಸುವ ಅತ್ತೆಯ ನಡುವೆ ಅವಳು ಅವಳಾಗುವ ಆ ಪ್ರಜ್ಞಾಪೂರ್ವಕ ಆಯ್ಕೆಯನ್ನು ಹಿಂಸಿಸಲು ನಡೆದ ಹುನ್ನಾರವನ್ನು ಆಕೆ ಪ್ರತಿಭಟಿಸುತ್ತಾಳೆ. ಆಕೆಗೆ ದೈಹಿಕ ಕ್ರಿಯೆ ಮತ್ತು ಮಾನಸಿಕ ಕ್ರಿಯೆಯ ನಡುವೆ ವ್ಯತ್ಯಾಸವಿಲ್ಲ. ಹಾಡು ಮೆಚ್ಚಿಕೊಂಡಂತೆ ಹಾಡುಗಾರನನ್ನು ಹಚ್ಚಿಕೊಳ್ಳುವ ತರ್ಕದ ಹಿನ್ನೆಲೆಯಲ್ಲಿಯೇ ಹಿಟ್ಟಿನ ಹುಂಜ ಮತ್ತು ಅದನ್ನು ಬಲಿಕೊಡುವ ಮನಸ್ಥಿತಿಯನ್ನು ಆಕೆ ಅಥರ್ೈಸಬಲ್ಲಳು. ಆಕೆಯ ಸ್ವಂತಿಕೆಯ ಕ್ಷಣಗಳನ್ನು ಹಿಂಸಿಸಲು ಯತ್ನಿಸಿದ ರಾಜ, ಹಠದಿಂದ ಹಿಟ್ಟಿನ ಹುಂಜವನ್ನು ಬಲಿಕೊಡಲು ಯತ್ನಿಸಿದ ನಾದರೂ ಹಿಟ್ಟಿನ ಹುಂಜದಲ್ಲಿ ಪ್ರಾಣಸಂಚಾರವಾಗುವದರ ಮೂಲಕ ಅಪ್ರತಿಹತನಾಗುತ್ತಾನೆ. ತೀರ ಸಹಜವಾಗಿ ಹುಂಜಕ್ಕೆ ಕಾಳು ನೀಡುವ ಕ್ರಿಯೆಯ ಮೂಲಕ ರಾಣಿಯ ಬದುಕಿನ ಮೀಮಾಂಸೆ ಗೆಲುವು ಪಡೆಯುತ್ತದೆ. ದೇಹ ಮನಸ್ಸಿನ ನಡುವೆ ಎರಡು ಬಗೆಯದ ರೀತಿಯಲ್ಲಿ ಬದುಕ ಯತ್ನಿಸಿದ ಆಕೆ ಅಮೃತಮತಿಯಾಗುತ್ತಾಳೆ. ನಾಟಕದ ಕೊನೆಯಲ್ಲಿ ರಾಜ ಅಮೃತಮತಿಯೆಂದು ಚೀರುವದು ಹೀಗೆ ಔಚಿತ್ಯಪೂರ್ಣವಾಗಿ ಬಿಡುತ್ತದೆ. ಪಾಪದ ಸೋಂಕನ್ನು ತಗಲಿಸಿಕೊಳ್ಳದ ಅಮೃತಮತಿಯ ಈ ಲೈಂಗಿಕ ಆಯ್ಕೆ ಹಯವದನದ ಪದ್ಮಿನಿಯಲ್ಲಿ ಇನ್ನೂ ನಿಚ್ಚಳವಾಗುತ್ತದೆ.
ಸಾಂಪ್ರದಾಯಿಕವಾದ ಖಾಸಗಿ ಆಸ್ತಿಯ ಪರಿಕಲ್ಪನೆಯ ದಾಂಪತ್ಯದ ಎಲ್ಲೆಯನ್ನು ದಾಟಿ ಪ್ರೀತಿ ಯಾಕೆ ಒಂದೇ ದೇಹದ ಜತೆ ಅಂಟಿರಬೇಕು? ಎನ್ನುವ ಮೂಲಭೂತ ಪ್ರಶ್ನೆಯ ಜತೆ ಸಾಗುತ್ತದೆ ಹಯವದನ.
       ಚಿಂತನೆ ಮತ್ತು ಕ್ರಿಯೆಯ ನಡುವಿನ ಬಿರುಕನ್ನು ದಾಟಲು ಯತ್ನಿಸುವ ಪದ್ಮಿನಿ ಅವರೆರಡರ ಸಂಕೇತವಾಗಿ ನಿಲ್ಲುವ ದೇವದತ್ತ ಮತ್ತು ಕಪಿಲರ ನಡುವೆ ಮಾಡಿಕೊಳ್ಳುವ ಆಯ್ಕೆ ಬಹಳ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬ್ರಾಹ್ಮಣನ ತಲೆ, ಶೂದ್ರನ ದೇಹ ಒಂದು ಪ್ರಯೋಗ, ಆದರೆ ತಲೆ ಎಲ್ಲವನ್ನೂ ಆಳುತ್ತದೆ. ಹಾಗಾಗಿ ದೇವದತ್ತನ ತಲೆ ಕಪಿಲನ ದೇಹವನ್ನು ಮೆತ್ತಗಾಗಿಸಿಬಿಡುತ್ತದೆ. ಕೊನೆಗೆ ಅದೇ ತರ್ಕದ ಹಿನ್ನೆಲೆಯಲ್ಲಿ ದೇವದತ್ತನ ದೇಹವನ್ನು ಬಗ್ಗಿಸಿದ ಕಪಿಲನನ್ನು ಆಕೆ ಸೇರುತ್ತಾಳೆ. ಕಪಿಲನ ದೇಹದ ಜತೆ ಸೇರಿದ್ದರೂ ತಲೆ ದೂರವೇ ಉಳಿದಿತ್ತು. ಕಪಿಲನ ತಲೆ ಇರುವ ದೇಹ ಸೇರಿ ಆಕೆ ಕಪಿಲನ ಪೂರ್ಣತ್ವ ಪಡೆಯುತ್ತಾಳೆ. ದಾಂಪತ್ಯದ ಚೌಕಟ್ಟಿನ ಒಳಗೆ ಆಕೆ ದೇಹವನ್ನು ಅದಲು ಬದಲು ಮಾಡುವುದರ ಮೂಲಕ ನಡೆಸಿದ ಪ್ರಯೋಗದಲ್ಲಿ ಗೆಲವು ಕಾಣದೇ ಚೌಕಟ್ಟಿನ ಹೊರಗೆ ಇಚ್ಛೆ ಸಾಧಿಸುತ್ತಾಳೆ.
     ಪದ್ಮಿನಿ ಆಕಸ್ಮಿಕಗಳಿಗೆ ಬಲಿಯಾದವಳಲ್ಲ. ಬದುಕಿನ ಪ್ರತಿಯೊಂದೂ ತಿರುವಿನಲ್ಲೂ ಆಯ್ಕೆ ಅವಳದೇ. ಆಕೆ ಮನಸ್ಸಾಕ್ಷಿಗೆ ವಿರುದ್ಧವಾಗಿ ನಡೆದವಳೇ ಅಲ್ಲ. ಹಾಗಾಗಿ ಕಾಳಿಯ ಎದುರು ತನ್ನ ಹಾದರವನ್ನು ಚಚರ್ಿಸಬಲ್ಲಳು. ಆಕೆಯೆದುರು ಸತ್ಯವನ್ನು ಹೇಳಿದವಳು ಅವಳೊಬ್ಬಳೇ. ಪಠ್ಯದಲ್ಲಿಯ ಆಕೆಯ ಮಾತುಗಳೆಲ್ಲ ಪೂರ್ವ ನಿರ್ಧರಿತ ಅನಿಸಿಕೆಯ ಅಂಗವಾಗಿದೆ. ಎಲ್ಲ ಮಾತುಗಳೂ ಆತ್ಮ ವಿಶ್ವಾಸದಿಂದ ನುಡಿಯಲ್ಪಟ್ಟಿವೆ. ಕೊನೆಯ ದುರಂತ ಸಹ ಆಕೆಯ ಆಯ್ಕೆ. ಹೆಣ್ಣನ್ನು ಉಪಭೋಗದ ಆಸ್ತಿಯನ್ನಾಗಿಸಿಕೊಂಡುದರ ಫಲವಾಗಿ ಹರಣವಾದ ಸ್ವಾತಂತ್ರ್ಯವನ್ನು ಆಕೆ ಮತ್ತೆ ಪಡೆದುಕೊಳ್ಳುತ್ತಾಳೆ. ``ಪ್ರೀತಿಗೆ ಯಾಕೆ ಒಂದೇ ಜೀವದ ಬಂಧನ ಎಂದು ಆಕೆ ಸವಾಲೆಸೆಯುತ್ತಾಳೆ. ಕ್ರಿಯೆಗಳನ್ನು ತನ್ನಿಚ್ಛೆಯಂತೆ ಎಸಗುತ್ತಾಳೆ. ಉದ್ದೇಶಿತ ಕಾರ್ಯ ಸಾಧಿಸುವಲ್ಲಿ ಆಕೆಗೆ ಸೋಲೆಂಬುದಿಲ್ಲ. ಹಾಗಾಗಿ ದುರಂತ ಅವಳನ್ನು ಕಂಗೆಡಿಸುವುದಿಲ್ಲ.
     ತೊಗಲಿಗೆ ಅದರದ್ದೆ ಆದ ನೆನಪಿರುತ್ತದೆ. ಅದಕ್ಕೆ ಅದರದ್ದೆ ಆದ ಅಸ್ತಿತ್ವವೂ ಇದೆ. ಆದರೆ ತಲೆಯ ಆಡಳಿತದಿಂದ ಅದು ತಪ್ಪಿಸಿಕೊಳ್ಳಲಾರದು. ಹಾಗಾಗಿ ದುರಂತ ಅನಿವಾರ್ಯ. ಹಯವದನ, ಕಾಳಿಯಲ್ಲಿ ಪೂಣರ್ಾಂಗವನ್ನು ಬೇಡುತ್ತಾನೆ. ಆದರೆ ಆತ ತನ್ನ ದೇಹವಿದ್ದಂತೆ ಮನುಷ್ಯನಾಗಲಿಲ್ಲ, ತಲೆಯಿದ್ದಂತೆ ಹಯವೇ ಆದ. ಅದಕ್ಕೆಂದೇ ಇದು ಹಯವದನ. ಪದ್ಮಿನಿಯ ಆಯ್ಕೆ ಇಲ್ಲಿ ತುಂಬಾ ಮುಖ್ಯ. ಆಕೆಯ ಮಗ ಹಯವದನನನ್ನು ಪೂರ್ಣವಾಗಿ ಹಯವಾಗಿಸಲು ಕಾರಣನಾಗುತ್ತಾನೆ. ಪೂರ್ಣತ್ವ ನೀಡುತ್ತಾನೆ. ಆತ ಪದ್ಮಿನಿಯ ಮಗ.
       ನದಿ-ದಡ ಇದು ಸಾಂಪ್ರದಾಯಿಕ ಉಪಮೆ. ನದಿಗೆ ವ್ಯವಸ್ಥೆಯ ದಡದ ಮಧ್ಯ ಹರಿಯಬೇಕಾದ ಅನಿವಾರ್ಯತೆ ಇದೆ. ನದಿ ದಡವನ್ನು  ಮೀರಲಾರಳು, ಆದರೆ ಅದನ್ನು ಕೆತ್ತಿ ಗಾಯಗೊಳಿಸಿಯಾಳು. ಆದ್ರೆ ಇಲ್ಲಿ ಮುಖ್ಯವಾಗುವದು ನೀರಿನ ಮೇಲೆ ಚಿತ್ರ ಬರೆಯೋಕಾಗಲ್ಲ ಎನ್ನುವದು.
ಹೆಣ್ಣು ಹೆಣ್ಣಾಗಿರುವವರೆಗೆ ಯಾವ ತೊಂದರೆಯೂ ಇಲ್ಲ. ಆದರೆ ಆಕೆ ತಾಯಿಯೋ ತಂಗಿಯೋ ಮತ್ತೊಂದೋ ಆದಾಗ ಸಂಬಂಧಗಳ ನಡುವೆ ಕರ್ಷಣ ಆರಂಭಗೊಳ್ಳುತ್ತದೆ. ಮಿಥ್ಗಳ ಮೂಲಕ ಈ ಕರ್ಷಣವನ್ನು, ವ್ಯವಸ್ಥೆ, ಸಂಬಂಧಗಳ ನಡುವೆ ಆದೇಶಿಸುವ ನಿಷೇಧಗಳು ಉಂಟು ಮಾಡುವ ಸಂಘರ್ಷದ ಹಿನ್ನೆಲೆಯಲ್ಲಿ ಕಾನರ್ಾಡ್ ಚಿತ್ರಿಸಿದ್ದಾರೆ. ಈ ಬಗೆಯ ಒಂದು ಪಠ್ಯ ಅಂಜುಮಲ್ಲಿಗೆಯದು.
       ನಾಟಕದ ಆರಂಭಕ್ಕೂ ಮೊದಲೆ ಕಾನರ್ಾಡರು ಋಗ್ವೇದ ಸಂಹಿತೆಯಲ್ಲಿ ಬರುವ ಯಮ-ಯಮಿಯರ ಸಂವಾದದ ಸಾಲನ್ನು ಉಲ್ಲೇಖಿಸುತ್ತಾರೆ. ಈ ಉಲ್ಲೇಖವೇ ನಾಟಕದ ಒಂದು ಬಗೆಯ ಓದನ್ನು ಸೂಚಿಸಿಬಿಡುತ್ತದೆ. ಋಗ್ವೇದದ ಹತ್ತನೆಯ ಮಂಡಲದ ಹತ್ತನೆಯ ಮಂತ್ರದಲ್ಲಿ ಈ ಸಂಭಾಷಣೆ ಬರುತ್ತದೆ. ಪ್ರಪಂಚದಲ್ಲಿ ವಾಸಿಸುತ್ತಿದ್ದವರು ಈ ಯಮ ಮತ್ತು ಯಮಿ ಇಬ್ಬರೇ, ಅವರು ಅಣ್ಣ ತಂಗಿಯರು: ಹಾಗೆಯೇ ಗಂಡಸು ಮತ್ತು ಹೆಂಗಸು. ಯಮಿ ಯಮನಲ್ಲಿ ಪ್ರಣಯವನ್ನು ಯಾಚಿಸುತ್ತಾಳೆ.....
        ಅಂಜುಮಲ್ಲಿಗೆಯ ನಾಯಕಿ ಯಾಮಿನಿ ಆಗಿರುವುದು ಈ ಹಿನ್ನೆಲೆಯಲ್ಲಿಯೇ. ಅವಳ ತಮ್ಮ ಸತೀಶ. ಇಂಗ್ಲೆಂಡಿಗೆ ಬಂದು ರೂಪಾಂತರಗೊಂಡವ. ಯಮನ ಬೆನ್ನುಹತ್ತಿ ಇಂಗ್ಲೆಂಡಿಗೆ ಬಂದ ಯಾಮಿನಿ ಇಲ್ಲಿ ಆತನ ಬದಲಾದ ಹೊಸ ಬದುಕು, ಹೊಸ ಪ್ರೇಯಸಿಯರಿಂದ ಕಂಗೆಟ್ಟಿದ್ದಾಳೆ, ತನ್ನನ್ನು ಬೇಕೆಂದೇ ದೂರ ಸರಿಸುತ್ತಿರುವ ಸತೀಶನನ್ನು ಆವರಿಸಲು ಸಾಕಷ್ಟು ಯತ್ನ ಮಾಡುತ್ತಾಳೆ. ಸತೀಶ ಬಿಳಿ ಹುಡುಗಿಯ ಜತೆ ಸಂಬಂಧ ಬೆಳೆಸಿರುವುದರಿಂದ, ಸತೀಶ ವಿರೋಧಿಸಬಹುದಾದ ವ್ಯಕ್ತಿತ್ವದ ಕರಿಯ ಡೇವಿಡ್ನ ಜತೆ ಕೂಡುತ್ತಾಳೆ. ಯಮನ ಹ್ಯಾಂಗೋವರ್ನಿಂದ ಹೊರಬರಲು ನಡೆಸಿದ ವಿಫಲ ಪ್ರಯತ್ನ ಅದು.
ಡೇವಿಡ್ನಲ್ಲಿ ಆಕೆ ಅಂತಾಳೆ: - 
 ``ನೀನನ್ನೋದು ಖರೆ. ಕರಿಯರಿಂದ ಬಿಳಿಯರು ದೂರ ಇರಬೇಕು.... ಜಾತಿಯಿಂದ ಜಾತಿ ಬೇರೆ. ಕುಟುಂಬದಿಂದ ಕುಟುಂಬ ಬೇರೆ. ಆಗೋದೇನಿದೆ ಅದೆಲ್ಲ ಕುಟುಂಬದ ಒಳಗಡೇನೆ ಆಗಬೇಕು. ಆಕೆ ಡೇವಿಡ್ನಿಗೆ ಆತನನ್ನು ಆಯ್ಕೆ ಮಾಡಿಕೊಂಡ ಕಾರಣವನ್ನು ಸ್ಪಷ್ಟವಾಗಿ ಹೇಳುತ್ತಾಳೆ. ``ನನ್ನ ಕುಡಿ ಮುರಿದರೆ ನಿನ್ನ ದೊಡ್ಡಸ್ತಿಕೆ ಅಂದುಕೊಳ್ಳಬೇಡ ಇಲ್ಲೀತನಕ ನನ್ನ ಗೆಳೆಯರೆಲ್ಲ ನಮ್ಮ ದೇಶದವರೆ ಇದ್ರು. ಅದಕ್ಕೇ ಹೀಗೆ ಹಸಿ ಕುಮಾರಿಯಾಗಿ ಕಳೆದೆ. ನೀನು ಕೀಳು ದಜರ್ೆಯ ಕೆಳವರ್ಗದ ಹೊಲಸು ಆಂಗ್ಲ. ಅದಕ್ಕೇ ನಿನ್ನನ್ನೀಗ ಮಾಡಗೊಡುತ್ತಿದ್ದೇನೆ ತಿಳಕೋ 
         ಯಾಮಿನಿ ಹುಡುಕುತ್ತಿದ್ದುದು ಯಮನನ್ನು. ಆದರೆ ಆತ ಆಗಲೇ ಸತೀಶನಾಗಿ  ಬಿಟ್ಟಿದ್ದ. ಹಾಗಾಗಿ ವಾಸ್ತವದಲ್ಲಿ ಸಿಗದ ಯಮನನ್ನು ಕನಸಿನಲ್ಲಿ ಭೇಟಿಯಾಗುತ್ತಾಳೆ. ತನ್ನ ಮತ್ತು ಸತೀಶನ ನಡುವಿನ ಲೈಂಗಿಕ ಸಂಬಂಧದ ಇತಿಹಾಸ ನಂಬಿದ ಜ್ಯುಲಿಯಾ ಆತ್ಮ ಹತ್ಯೆಯ ಪ್ರಯತ್ನ ಮಾಡಿದ ಸಂಗತಿ ಕೇಳಿ ಆಕೆ ಅನ್ನುತ್ತಾಳೆ.
ಆತ್ಮ ಹತ್ಯೆಯ ಪ್ರಯತ್ನ ಮಾಡುತ್ತಾಳೇನು? ಹೂಂ ಯಮರಾಜಾ ನಿನ್ನ ದನಿಯ ಗುರುತೂ ಇಲ್ಲದ ಈ ಬಿಳೇ ಕೋತಿ ಅದೇನು ಮಾಡಿಕೋತದೆ ಆತ್ಮಹತ್ಯೆ? ನಾ ತೋರಸತೇ ನಾಕಿಗೆ. ಯಾಮಿನಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
       ಯಾಮಿನಿಯ ಸಮಸ್ಯೆಯನ್ನು ಅರ್ಥ ಮಾಡಿಕೊಂಡವಳು ಜ್ಯೂಲಿಯಾ ಮಾತ್ರ. ಆಕೆ ವಾಸ್ತವವನ್ನು ಅರ್ಥಮಾಡಿಕೊಳ್ಳುವ ಮೂಲಕ ಬಿಡುಗಡೆಗೆ ಯತ್ನಿಸುತ್ತಾಳೆ.... ಅವಳು ಮಾಡಿದ್ದಾದರೂ ಏನು? ಯಾವ ತಪ್ಪು ಮಾಡಿದಳು? ನಿನ್ನ ಅಕ್ಕ ಆಗಿ ಹುಟ್ಟಿ ಹೆಂಗಸಂತೆ ನಿನ್ನನ್ನು ಬಯಸಿದಳು ಅಷ್ಟೇ ಅಲ್ವೇನು? ನನ್ನ ಹಾಗೇ ನಿನ್ನಷ್ಟೇ ಬಯಸಿದಳು. ಹೌದು ಅವಳು ನಿನ್ನನ್ನು ಪ್ರೀತಿಸಿದಳು. ಅದರಲ್ಲಿ ತಪ್ಪೇನು? ನಾವಿದನ್ನು ಒಪ್ಪಿಕೊಳ್ಳುವತನಕ ನಮಗೂ ಎಂದೂ ಬಿಡುಗಡೆ ಸಿಗೋದಿಲ್ಲ.
ಹೆಣ್ಣನ್ನ ಹೆಣ್ಣಾಗಿ ನೋಡುವತನಕ ಆಕೆ ಸಹಜವಾಗಿ ಹೂ ಬಿಡುವ ಮಲ್ಲಿಗೆಯಾಗ್ತಾಳೆ. ಆಕೆಯ ವಿವಿಧ ಬಗೆಯ ಪಾತ್ರ ನಿರ್ವಹಣೆ ಬಲವಂತವಾಗಿ ಹೂ ಬಿಡುವ ಕಾಯಕಕ್ಕೆ ಒತ್ತಾಯಿಸುತ್ತದೆ. ಆಕೆ ಅಂಜುಮಲ್ಲಿಗೆಯಾಗುತ್ತಾಳೆ.
ಪಿತೃ ಪ್ರಧಾನ ಸಮಾಜದಲ್ಲಿ ಹೆಣ್ಣು, ವ್ಯವಸ್ಥೆ ಸೂಚಿಸಿದ ಪಾತ್ರ ನರ್ವಹಿಸಬೇಕಾಗುತ್ತದೆ. ಈ ಪಾತ್ರ ಮಾಡಬೇಕಾದ ಹೆಣ್ತನ ಸಮಸ್ಯೆಗೀಡಾಗುತ್ತದೆ. ಹಾಗಾಗಿ ಹೆಣ್ಣು ಕಲ್ಪಿತ ಮತ್ತು ವಾಸ್ತವ ಹೀಗೆ ಏಕಕಾಲದಲ್ಲಿ ಎರಡು ಜಗತ್ತಿನಲ್ಲಿ ಬದುಕಲು ಯತ್ನಿಸುತ್ತಾಳೆ. ಆದರೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗಿ ಬಂದಾಗ ಆಕೆ ದುರಂತ ನಾಯಕಿಯಾಗಿಬಿಡುತ್ತಾಳೆ. ಯಾಮಿನಿಯ ದುರಂತ ಇರುವದು ಇಲ್ಲಿಯೇ.
              ಈ ಕಲ್ಪನೆ ಮತ್ತು ವಾಸ್ತವವನ್ನು ಒಂದಾಗಿಸಿ ಗೆದ್ದವಳು ನಾಗಮಂಡಲದ ರಾಣಿ. ತನ್ನ ಸುತ್ತ ಕಟ್ಟಿದ ಕೋಟೆಯನ್ನು, ಕೋಟೆಯಂತಹ ಮನೆಯನ್ನು, ಹುತ್ತವನ್ನು ಬಗೆದು ತನ್ನ ಕನಸಿಗೆ ರೂಪಕೊಟ್ಟ ರಾಣಿಯ ಕತೆ ನಾಗಮಂಡಲದ್ದು. ಹಗಲು ರಾತ್ರಿ ಇಲ್ಲಿ ವಾಸ್ತವ ಮತ್ತು ಕನಸಿನ ವೈರುಧ್ಯವವನ್ನು ಸಾಂಕೇತಿಸುತ್ತದೆ. ತನ್ನ ಕನಸನ್ನು ನನಸು ಮಾಡಿಕೊಳ್ಳುವ ರಾಣಿ ರಾತ್ರಿಯ ಕನಸನ್ನು ಹಗಲಿನ ವಾಸ್ತವವನ್ನಾಗಿಸುತ್ತಾಳೆ. ಶೀಲಕ್ಕೆ ಬೀಗ ಜಡಿದ (ಅಣ್ಣಪ್ಪ ಅವಳನ್ನು ಸದಾಕಾಲ ಬೀಗ ಜಡಿದ ಮನೆಯಲ್ಲಿಯೇ ಇರಿಸುತ್ತಾನೆ) ಮದುವೆಯ ದಮನಕಾರಿ ವ್ಯವಸ್ಥೆಯಲ್ಲೇ ಉಳಿದರೂ ತಾನು ಬಯಸಿದ ಬದುಕನ್ನು ರೂಪಿಸಿಕೊಂಡು ತನ್ನ ಪ್ರಿಯಕರನನ್ನು (ನಾಗನನ್ನು) ತನ್ನ ಬಳಿಯೇ (ಕೂದಲಿನಲ್ಲಿಯೇ) ಇರಿಸಿಕೊಳ್ಳುವ ಆಕೆ ಆ ಕೂದಲನ್ನು ಮಾಂಗಲ್ಯಕ್ಕೆ ಹೋಲಿಸುತ್ತಾಳೆ.
ರಾಣಿಯೊಬ್ಬಳೇ ಕುಳಿತು ಕಟ್ಟಿಕೊಳ್ಳುವ ಕನಸಿನಲ್ಲೂ ಕೋಟೆ ಒಡೆಯುವಂತೆ ಬಂದ ನೆರೆ, ತಿಮಿಂಗಿಲ ಏರಿ ನೆರೆ ದಾಟುವದು, ಮಾಯರೂಪಿನ ರಾಜಕುಮಾರನನ್ನು ಕಾಣುವುದು..... ಇವೆಲ್ಲಾ ಸಾಂಕೇತಿಕತೆಗಳು ಬಿಡುಗಡೆಯ ಆಶಯವನ್ನೇ ಹೊಂದಿವೆ. ಈ ಕಥೆಗಳ ಆಶಯದ ಜತೆಗೆ ರಾಣಿ ತನ್ನ ವಾಸ್ತವವನ್ನು ಸಮೀಕರಿಸಿಕೊಳ್ಳುತ್ತಾಳೆ. 
ಕುರುಡವ್ವ ಆಕೆಯ ವ್ಯಕ್ತಿತ್ವದ ಇನ್ನೊಂದು ರೂಪಾಂತರ. ನಾಟಕದಲ್ಲಿಯ ಈ ರೂಪಾಂತರ ಪ್ರಕ್ರಿಯೆ ವಾಸ್ತವವಾಗಿ ಅಪ್ಪಣ್ಣನದಲ್ಲ, ಅದನ್ನು ಆಗುವಂತೆ ಮಾಡಿದ ರಾಣಿಯದು.
              ಸಮಾಜ ಶೀಲಕ್ಕೆ ಹಾಕಿದ ಬೀಗಮುದ್ರೆ ಒಡೆದು ಅದೇ ಸಮಾಜದಿಂದ ಮನ್ನಣೆಗೆ ಒಳಗಾಗಬಲ್ಲ ಶಕ್ತಿ ಸಹ ಆಕೆಗಿದೆ. ಈ ಶಕ್ತಿಯ ಅರಿವಿಲ್ಲದ ಕಪ್ಪಣ್ಣನಂತಹ ಕುರುಡವ್ವನ ಮಕ್ಕಳು ಶಾಕ್ಗೆ ಒಳಗಾಗುತ್ತಾರೆ. ಹೆಣ್ಣಿನ ಈ ಶಕ್ತಿಯನ್ನು ದಕ್ಕಿಸಿಕೊಳ್ಳಲಾರದೇ ಕಪ್ಪಣ್ಣ ಕುರುಡವ್ವನಿಂದ ಹೋಳಾಗಿ ಹೋಗುತ್ತಾನೆ. ಇಲ್ಲಿ ತನ್ನಿಚ್ಛೆಯ ಬದುಕನ್ನು ಉಪಾಯದಿಂದ ಆಯ್ಕೆ ಮಾಡಿಕೊಳ್ಳುವ ರಾಣಿ ಹಯವದನದ ಪದ್ಮಿನಿಯ ಕಥೆಯ ಮುಂದುವರಿದ ರೂಪ. 
ಗಂಡನ ಜೊತೆಗಿನ ಅಸಹನೀಯತೆಯಿಂದಾಗಿ ದೇವಯಾನ ಮಾಂಗಲ್ಯವನ್ನು ಕಿತ್ತು ಎಸೆದರೆ, ಪದ್ಮಿನಿ ಮಾಂಗಲ್ಯದ ಭಾರದಿಂದ ದುರಂತವನ್ನಪ್ಪುತ್ತಾಳೆ. ಆದರೆ ರಾಣಿ ಈ ಮಾಂಗಲ್ಯದ ಜೊತೆಗೆ ಕೇಶ ಮಾಂಗಲ್ಯವೆಂಬ ಪರಿಕಲ್ಪನೆ ಹುಟ್ಟುಹಾಕಿ ದುರಂತವನ್ನು ಗೆಲ್ಲುತ್ತಾಳೆ. ಹಾಗಾಗಿ ತಾನೇ ಹೋಳಾಗುತ್ತಾಳೆ: ಸೀಳಿಕೊಳ್ಳುತ್ತಾಳೆ. ಆದರೆ ಈ ಸೀಳುವಿಕೆಯಲ್ಲಿ ದುರಂತವಿಲ್ಲ. ಆಯ್ಕೆಯ ಸ್ವಾತಂತ್ರ್ಯವಿದೆ.
                ಈ ಕತೆಯ ಮೂರು ಬಗೆಯ ಅಂತ್ಯವೂ ಹೆಣ್ಣಿನ ಸ್ಥಿತಿ ಮತ್ತು ಸಾಧ್ಯತೆಯ ಮೂರು ಮಾರ್ಗಗಳು. ಸಾಂಪ್ರದಾಯಿಕ ಕಥನ ನೀಡುವ ಕೊನೆಯಿಂದ ಸಮಾಧಾನ ಹೊಂದದ ನಾಟಕದೊಳಗಿನ ನಾಟಕಕಾರ, ಮಾಂಗಲ್ಯ ಕೇಶಮಾಂಗಲ್ಯ ಎಂಬ ತರ್ಕ ಹುಟ್ಟು ಹಾಕಿ ಇನ್ನೊಂದು ಬಗೆಯ ಸಾಧ್ಯತೆಯನ್ನು ಮುಂದಿಡುತ್ತಾನೆ.
ಅಗ್ನಿ ಮತ್ತು ಮಳೆ ಜಾತಿಗಳ ಮೇಲುಕೀಳಿನ ಸ್ತರಗಳಲ್ಲಿಯ ಹೆಣ್ಣಿನ ಬದುಕು ಬವಣೆಯ ಗೆಲುವು, ಜೀವಂತಿಕೆಯ ಕತೆ. ಬೆಂಕಿ ನಾಶವನ್ನು, ಜಲ ಹುಟ್ಟನ್ನು, ಸಂಕೇತಿಸುತ್ತ ಹೋಗುತ್ತದೆ. ಇಲ್ಲಿ ವಿಶಾಖಾ ಅಗ್ನಿ ಸಂಸ್ಕೃತಿಯನ್ನು, ನಿತ್ತಿಲೆ ಜಲ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾಳೆ. ವಿಶಾಖಾ ತಾನೂ ಉರಿಯುತ್ತಾ ಎಲ್ಲವನ್ನೂ ಉರಿಸುತ್ತಾಳೆ. ನಿತ್ತಿಲೆ ಈ ಅಗ್ನಿಗೆ ಸವಾಲಾಗುತ್ತಾಳೆ; ಮಳೆಗೆ ಕಾರಣಳಾಗುತ್ತಾಳೆ.       
             ಬೆಂಕಿಯ ವಿರಾಟ ರೂಪವೇ ಇಲ್ಲಿದೆ. ಹತ್ತು ವರ್ಷದ ದೇಹದ, ದೇಶದ ಬರಗಾಲ ಒಂದು ಬೆಂಕಿ, ವಿಶಾಖ ಮತ್ತು ಯವಕ್ರೀತರ ನಡುವಿನ ಬೆಂಕಿ, ಯವಕ್ರೀ-ರೈಭ್ಯ್ಚರ ನಡುವಿನ ಬೆಂಕಿ, ರೈಭ್ಯ-ವಿಶಾಖರ ನಡುವಿನ ಬೆಂಕಿ, ಹೀಗೆ.....
ಮೇಲ್ವರ್ಗಕ್ಕೆ ಹೆಣ್ಣು ಅವರ ಸಾಧನೆಗೆ, ದ್ವೇಷಕ್ಕೆ, ಪ್ರಯೋಗಕ್ಕೆ, ಪ್ರಶಸ್ತಿಗೆ, ಮುಕ್ತಿಗೆ, ಹೀಗೆ ಗಂಡಿಗೆ ಸಾಧನವಾಗಿ ಮಾತ್ರ. ವಿಶಾಖ ಹೇಳುತ್ತಾಳೆ: ಅವನು ನನ್ನ ಶರೀರದ ರಂದ್ರಗಳನ್ನೆಲ್ಲ ಅಗೆದುಹೋದ. ನಿನಗೆ ಹೆಣ್ಣು ಅಂದರೆ ಅರ್ಧಂಬರ್ದ ಬಲಿತ ಎರಡು ಮೊಲೆ..... ವಿಶಾಖಾ ಈ ವ್ಯವಸ್ಥೆಯ ವಿರುದ್ಧ ಉರಿಯುತ್ತಾಳೆ; ಉರಿಸುತ್ತಾಳೆ. ಈಕೆ ಒಂದು ಮಾದರಿ.
ನಿತ್ತಿಲೆ ಕೆಳವರ್ಗದವಳು. ಅವಳಲ್ಲಿ ಹಾದರದ ಸೋಂಕಿಲ್ಲ. ಅವಳಿಂದಾಗಿ ಅರವಸು ಕೆಳವಗರ್ಿಕರಣ ಹೊಂದುವನು. ನಿತ್ತಿಲೆ ಅರವಸುರ ನಡುವಣ ಪ್ರೀತಿ ಲೈಂಗಿಕತೆಯನ್ನು ಮೀರಿದ ಆದರ್ಶ ಸ್ಥಿತಿ ತಲುಪಿ ಕಾವ್ಯಮಯ ವೃತ್ತಿಗೇರುತ್ತದೆ. ಗಂಡು ಹೆಣ್ಣಿನ ನಡುವಿನ ಅಕರ್ಿಟೈಪಲ್ ಮಾದರಿಗಳನ್ನು ಕಾನರ್ಾಡ್ ಇಲ್ಲಿ ಒಡೆಯುತ್ತಾರೆ. ಗಂಡನನ್ನು ಬಿಟ್ಟು ಅರವಸುವಿನ ಸಂಕಟಕ್ಕೊದಗಲು ಓಡಿಬಂದ ನಿತ್ತಿಲೆ ಅರವಸುವಿನೊಡನೆ ಬದುಕು ನಿಶ್ಚಯಿ ಸಿದ್ದರೂ ಲೈಂಗಿಕ ಸಂಬಂಧವನ್ನು ನಿರಾಕರಿಸುತ್ತಾಳೆ. ಆಕೆಯ ಆಯ್ಕೆ ಬದುಕುವ, ಬದುಕಿಸುವ ನೆಲೆಯದ್ದು. ಅವಳ ನೈತಿಕತೆ ಮಾನವೀಯವಾದದ್ದು.
ಅರವಸುವಿಗೆ ಆಕೆ ಅನ್ನುತ್ತಾಳೆ. ನಿನ್ನ ಅಣ್ಣ ನೀಚನಾದ ಅಂತ ನೀನು ಅವನಷ್ಟೇ ನೀಚನಾಗುವದಕ್ಕಿಂತ ಷಂಡನಾಗುವದರಲ್ಲಿ ಏನು ತಪ್ಪು?
                ಸ್ಥಾಪಿತ ಮೌಲ್ಯಗಳ ವಿರುದ್ಧ ನಿತ್ತಿಲೆ ಯಾವಾಗಲೂ ನಿಲ್ಲುತ್ತಾಳೆ. ಆಕೆಗೆ ಇಂದ್ರನಿಗಿಂತ ವೃತ್ತ ಪ್ರೀತಿ. ಸಾವು ಗೊತ್ತಿಲ್ಲದವನು ಏನನ್ನೂ ಹುಟ್ಟಿಸಲಾರ ಎಂಬ ನಂಬಿಕೆ ಆಕೆಯದು. ಅಗ್ನಿ ಪೂಜಾ ರೈಭ್ಯನ ಮಗನನ್ನು ಆಕೆ ಜಲಪೂಜೆಗೆ ಅಣಿಗೊಳಿಸುತ್ತಾಳೆ. ನಿನ್ನ ಕುಣಿತಕ್ಕೆ ಮಳೆಯಾಗಬೇಕು ಎಂದು ಅರವಸುವಿಗೆ ಆಕೆ ಹೇಳುತ್ತಾಳೆ. ಅರವಸು, ನಿತ್ತಿಲೆಯ ಶವ ಎತ್ತಿಕೊಂಡು ಅಗ್ನಿ ಪ್ರವೇಶ ಮಾಡಿದಾಗ ಅಗ್ನಿ ಆರಿಹೋಗುತ್ತದೆ. ನಿತ್ತಿಲೆ ಇನ್ನೊಂದು ಬಗೆಯ ಮಾದರಿ. 
            ಹೀಗೆ ವಿಶಾಖಾ ಮತ್ತು ನಿತ್ತಿಲೆ ಹೆಣ್ಣಿನ ಬಿಡುಗಡೆಯ ಎರಡೂ ಸಾಧ್ಯತೆಗಳನ್ನು ಸೂಚಿಸುವ ಸಂಕೇತಗಳಾಗಿ ನಿಲ್ಲುತ್ತಾರೆ.ಇವಿಷ್ಟು ಚಚರ್ೆಯ ಹಿನ್ನೆಲೆಯಲ್ಲಿ ಸ್ತ್ರೀತ್ವದ ಕುರಿತು ಕಾನರ್ಾಡರಿಗೆ ಇರುವ ಗ್ರಹಿಕೆ ಬಗ್ಗೆ ವಿವೇಚಿಸಬಹುದು. ಇದುವರೆಗೆ ನಾನಿಲ್ಲಿ ಚಚರ್ಿಸಿದ ಅವರ ನಾಟಕಗಳ ಸ್ತ್ರಿ ಪಾತ್ರಗಳ ನಿಮರ್ಿತಿಯ ವ್ಯಾಕರಣ ಇದಕ್ಕೆ ಸಹಾಯಕವಾಗಬಹುದಾಗಿದೆ. ಯಾವ ಅಸ್ತ್ರದಿಂದ ಪಿತೃ ಪ್ರಧಾನ ವ್ಯವಸ್ಥೆ ಹೆಣ್ಣನ್ನು ಬಂಧನದಲ್ಲಿಡಲು ಯತ್ನಿಸುವದೋ ಅದೇ ಅಸ್ತ್ರದಿಂದ ಇಲ್ಲಿಯ ಹೆಣ್ಣು ಸ್ವತಂತ್ರಳಾಗಲು ಬಯಸುತ್ತಾಳೆ.. ಕಾನರ್ಾಡರ ತಾಕರ್ಿಕ ಚಿಂತನೆಯ ಫಲ ಇದು. ಇಲ್ಲಿಯ ಸ್ತ್ರೀ ಪಾತ್ರಗಳನ್ನು ನಿದರ್ಿಷ್ಟ ತರ್ಕದ ಹಿನ್ನೆಲೆಯಲ್ಲಿ ಕಟ್ಟಿ ನಿಲ್ಲಿಸಲಾಗಿದೆ.
               ವಾಸ್ತವದಲ್ಲಿ ಇಲ್ಲದ ಬಿಡುಗಡೆಯನ್ನು ಅವರು ತರ್ಕದ ಮೂಲಕವೇ ಪಡೆಯುತ್ತಾರೆ. ನಾಗಮಂಡಲದ ರಾಣಿ ನಾಗದಿವ್ಯ ಮಾಡುವಾಗ ನಾನು ಈ ನಾಗನ ಹೊರತಾಗಿ ಬೇರೆ ಪುರುಷನ ಕೈಹಿಡಿಯಲಿಲ್ಲ ಎಂದು ತಾಕರ್ಿಕವಾಗಿ ಮಾತನಾಡಿದ ಜಾಣ್ಮೆ ಕೇವಲ ಈ ನಾಟಕದ ಕತೆಯ ಕ್ರಿಯೆಯ ಅಂಗವಾಗಿ ಬಂದದ್ದಲ್ಲ. ನಾಗನನ್ನು ಪುರುಷನನ್ನಾಗಿ ಗ್ರಹಿಸಿದ, ಆ ಕೈ ಹಿಡಿದ ನೆನಪು ಅದು ತೊಗಲಿಗೂ ಇರುವ ನೆನಪಿನದ್ದು. ಈ ನೆನಪಿನ ಹಿಂದೆ ಪದ್ಮಿನಿ, ಅಮೃತಮತಿ ಮುಂತಾದವರಿದ್ದಾರೆ.
                      ಹೀಗೆ ನೈಜ ಸನ್ನಿವೇಶದಲ್ಲಿ ಇಲ್ಲಿಯ ಪಾತ್ರಗಳು ಹುಟ್ಟುವದಿಲ್ಲ, ಬೆಳೆಯುವುದಿಲ್ಲ. ಇವು ಕಟ್ಟಲ್ಪಟ್ಟವು, ರಚಿತಗೊಂಡವು. ಇವು ನಾಟಕದ ಕ್ರಿಯೆಯೊಡನೆ ಬೆಳೆಯದ, ಆಶಯಕ್ಕನುಗುಣವಾಗಿ ಮಾತ್ರ ಸಿದ್ಧಗೊಂಡವು. ಕಾನರ್ಾಡರ ನಿದರ್ಿಷ್ಟ ನಿಲುವುಗಳನ್ನು ಹೇಳಲು ರೂಪುಗೊಂಡ ಈ ಪಾತ್ರಗಳು ತಮ್ಮ ತರ್ಕವನ್ನು ಮುಚ್ಚಿಡಲು ಕಾವ್ಯಮಯ ಭಾಷೆ ಬಳಸುತ್ತವೆ. ತೀವ್ರ ಬಿಕ್ಕಟ್ಟನ್ನು ಎದುರಿಸಬೇಕಾಗಿ ಬಂದ ಸಂದರ್ಭದಲ್ಲೆಲ್ಲ ಸ್ತ್ರೀ ಪಾತ್ರಗಳು ಕಾವ್ಯಮಯವಾಗಿ ಮಾತನಾಡುವುದನ್ನು ನಾವು ಗಮನಿಸಬಹುದು. ಇಲ್ಲಿ ಕಾವ್ಯಾತ್ಮಕ ಭಾಷೆ ಮಾತುಗಳ ಅರ್ಥವಂತಿಕೆ, ಆಳ, ಸೆಳವು, ಸಂಕೀರ್ಣತೆಯನ್ನು ನಿಭಾಯಿಸುವದಕ್ಕಿಂತ ತಾಕರ್ಿಕತೆಯನ್ನು ನಿಭಾಯಿಸುವ ಗುರಾಣಿಯಾಗಿ ಬಂದಿದೆ.
          ಭವಿತವ್ಯದ ಬೆಂಕಿಯಲ್ಲಿ ಮೀಯಲು ಸದಾ ಸಿದ್ಧವಾಗಿರುವ, ಸಹಜತೆಗಿಂತಲೂ ಹೆಚ್ಚು ಖಚಿತವಾಗಿ, ಆತ್ಮ ವಿಶ್ವಾಸದಿಂದ ಮಾತನಾಡುವ ಇಲ್ಲಿಯ ಸ್ತ್ರೀ ಆ ಕಾರಣಕ್ಕಾಗಿ ಓದುಗರ ಮೆಚ್ಚುಗೆ ಗಳಿಸುತ್ತಾಳಾದರೂ ಎಲ್ಲಿಯೂ ಆಕೆ ತನ್ನ ಅನನ್ಯತೆಯನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ ಎಂಬುದನ್ನು ಗಮನಿಸಬೇಕಾಗಿದೆ. ಸ್ವ ಅನನ್ಯತೆಗಿಂತ ಹೆಚ್ಚಾಗಿ ಪುರುಷ ವರ್ಗದಿಂದ ಮುದ್ರೆ ಹಾಕಿಸಿಕೊಂಡು ಕೃತಕೃತ್ಯರಾಗುವ ಇರಾದೆ ಇವಳದು. ಇವಳಿಗೆ ತನ್ನದೆಲ್ಲವನ್ನೂ ಕೊಟ್ಟು ಬರಿದಾಗುವ ತವಕ. ಕೆಲವೆಡೆಯಂತೂ ತ್ಯಾಗ ಮಾಡುವದರಲ್ಲೇ ಸುಖ ಕಾಣುವ ಭಾರತೀಯ ಮಹಿಳೆಯ ಪ್ರಾಗ್ರೂಪ, ಇಲ್ಲಿ ಹೊಸತನದಿಂದ ಒಡಮೂಡಿದೆಯೇನೋ ಎಂಬ ಗುಮಾನಿ ಕಾಡುವುದು ಸುಳ್ಳಲ್ಲ 
.ಶ್ರೀಪಾದ ಭಟ್ಟ್

Saturday, 17 August 2013

ವೃತ್ತಿ + ಹವ್ಯಾಸಿ = ರಂಗಭೂಮಿ --ಶ್ರೀಪಾದ ಭಟ್ಟ್

                    ವೃತ್ತಿ +  ಹವ್ಯಾಸಿ  = ರಂಗಭೂಮಿ 
            ಆಧುನಿಕ ರಂಗಭೂಮಿ, ತನ್ನೆಲ್ಲ ಬದ್ಧತೆಗಳ ನಡುವೆಯೂ ಜನಪ್ರಿಯತೆಯ ಮಾನದಲ್ಲಿ ತೀವ್ರ ಕೆಳಮುಖವನ್ನು ಅನುಭವಿಸುತ್ತಿದೆ. ರಂಗಭೂಮಿಯ ಸಾಮಾಜಿಕ ಅವಶ್ಯಕತೆಯನ್ನು ಮನಗಂಡ ರಂಗತಜ್ಞರು, ರಂಗಭೂಮಿಯನ್ನು ಮತ್ತೆ ಜನರ ಅವಶ್ಯಕತೆಯನ್ನಾಗಿ ಮಾಡುವ ತೀವ್ರ ಪ್ರಯತ್ನದಲ್ಲಿದ್ದಾರೆ. ವರ್ತಮಾನದ ಗಾಯಗಳಿಗೆ ಗತಕಾಲದಲ್ಲಿ ಉಪಚಾರ ದೊರೆಯಬಹುದೆನೋ ಎಂಬ ಆಸೆ ಸಹಜವಾದದ್ದು. ಹಾಗಾಗಿ ಒಮ್ಮೆ ಜನಪ್ರಿಯತೆಯ ಉತ್ತುಂಗದಲ್ಲಿದ್ದ ವೃತ್ತಿರಂಗಭೂಮಿ ಅಥವಾ ಕಂಪನಿ ನಾಟಕಗಳು ಗೆದ್ದಿರುವ ಕಾರಣಗಳೇನು? ಮತ್ತು ನಾವು ಆಧುನಿಕರು ಸೋಲುತ್ತಿರುವುದೆೆಲ್ಲಿ ಎಂಬುದನ್ನು ಒಟ್ಟೊಟ್ಟಿಗೆ ಇಟ್ಟು ನೋಡುವ ಪ್ರಯತ್ನ ಈ ಲೇಖನದ್ದು.
            ಕಂಪನಿ ನಾಟಕ ಅಥವಾ ವೃತ್ತಿರಂಗಭೂಮಿಯ ಹಾಗೂ ಹವ್ಯಾಸಿ ರಂಗಭೂಮಿಯ ಅನ್ವಯಿಕ ಸಾಧ್ಯತೆಗಳ ಕುರಿತು ನನ್ನ ಟಿಪ್ಪಣೆಗಳನ್ನು ಮಂಡಿಸುವ ಆರಂಭದಲ್ಲೇ ಈ ಪರಿಕಲ್ಪನೆಗಳಿಗಿರುವ ತೊಡಕುಗಳನ್ನು ತಮ್ಮ ಮುಂದಿಡುತ್ತಿದ್ದೇನೆ.
ಒಂದನೇ ತೊಡಕು ವಗರ್ಿಕರಣಕ್ಕೆ ಸಂಬಂಧಿಸಿದ್ದು. ಯಾವುದನ್ನು ನಾವು ಈಗ `ವೃತ್ತಿ ರಂಗಭೂಮಿ ಎಂದು ಕರೆಯುತ್ತಿದ್ದೇವೋ ಮತ್ತು ಯಾವುದನ್ನು ನಾವು `ಹವ್ಯಾಸಿ ರಂಗ ಭೂಮಿ ಎಂದು ಕರೆಯುತ್ತಿದ್ದೇವೊ ಅವು ಒಂದು ಸಿದ್ಧ ಪ್ರೊಡಕ್ಟ್ ಗಳಲ್ಲ. ಅದರಲ್ಲಿ  ಹಲವಾರು ಬೆಳವಣಿಗೆಯ ಅಂಶಗಳಿವೆ. ವೃತ್ತಿ ರಂಗಭೂಮಿ ಆರಂಭದಲ್ಲಿ  ಸ್ವೀಕರಿಸಿದ ಜನಪದ ಆಟಗಳಾಗಿರಬಹುದು ಅಥವಾ ಸ್ಥಳೀಯ ವಿವಿಧ ಮಾದರಿಗಳಿರಬಹುದು,  ಅವನ್ನೆಲ್ಲ ಬೇರೆ ಬೇರೆ ಕಾಲಘಟ್ಟದಲ್ಲಿ ಸೇರಿಸಿಕೊಳ್ಳುತ್ತ  ಬೆಳವಣಿಗೆ ಹೊಂದುತ್ತ ಬಂದಿದೆ. ಈಗ ನಾವು ಇಲ್ಲಿ ಪ್ರಸ್ತಾಪಿಸುವ ಕಂಪನಿನಾಟಕಗಳು, ಯಾವುದನ್ನು ನಾವು ಲೆಜೆಂಡ್ ಆಗಿ ನೋಡುತ್ತಿದ್ದೇವೆಯೋ ಅವು ಅದರ ಉಚ್ಛ್ರಾಯ ಕಾಲದಲ್ಲಿ,  ಸಿದ್ಧರೂಪವಾಗಿ ನಿಂತ ಕಾಲಘಟ್ಟಕ್ಕೆ ಸೇರಿದುದಾಗಿದೆ. ಅದನ್ನು ಮಾತ್ರ ಉಲ್ಲೇಖಿಸಲು ಸಾಧ್ಯ; ಹೊರತು ಈ ರೂಪದ ಹಿಂದಿನ ಬೆಳವಣಿಗೆಯ ಹಂತಗಳನ್ನಲ್ಲ.
ಅದೇ ರೀತಿ `ಹವ್ಯಾಸಿ ರಂಗಭೂಮಿ ಅಂತ ಕರೆಯುವಾಗ ಕೂಡ ಒಂದು ಸರ್ವ ಗ್ರಾಹ್ಯ ಆದ ಘಟ್ಟ ಅಂತ ಸಿಗೋದಿಲ್ಲ. ಅದೂ ಸಹ ಬೆಳವಣಿಗೆ ಹೊಂದುತ್ತಲೇ ಇದೆ. ಹಾಗಾಗಿ ನಾವು ಮಾತನಾಡುವಾಗ ಅವುಗಳ ಈ ಓಘವನ್ನು ಕಡೆಗಣಿಸಿ ಒಂದುಕಡೆ ಸ್ಥಗಿತಗೊಳಿಸಿ ಮಾತನಾಡಬೇಕಾಗುತ್ತದೆ. ಈಗ ನೋಡಿ ಜನಪದ ರಂಗಭೂಮಿಯ ಅಂಶಗಳನ್ನು, ಸಂವಹನೆಯ ಮಾದರಿಗಳನ್ನು ಅರಗಿಸಿಕೊಳ್ಳುತ್ತ ಕಂಪನಿ ನಾಟಕ ಹೊಸ ಆಕೃತಿಯೊಡನೆ ಬಂತು. ಹಾಗಾಗಿ ಇದನ್ನು ಪ್ರತ್ಯೇಕವಾಗಿ ಒಡೆಯುವುದು ಹೇಗೆ? ಅಲ್ಲದೇ ಹವ್ಯಾಸಿ ರಂಗಭೂಮಿಯಲ್ಲಿಯೇ ನಗರದ  ರಂಗಚಟುವಟಿಕೆಗಳಿಗೂ, ಗ್ರಾಮೀಣ ರಂಗ ಚಟುವಟಿಕೆಗಳಿಗೂ ಅಗಾಧವಾದ ವ್ಯತ್ಯಾಸಗಳಿವೆ. ಯಾವುದರ ಲಕ್ಷಣಗಳನ್ನು ಹಿಡಿದಿರಿಸುವುದು? ಇದರರ್ಥ. ಅಂತದ್ದೊಂದು ಲಕ್ಷಣಗಳೇ ಈ ಎಲ್ಲ ರಂಗಭೂಮಿಗೂ  ಇಲ್ಲ ಅಂತಲ್ಲ. ಆದರೆ ನಾವಂದುಕೊಂಡಷ್ಟು  ಪ್ರತ್ಯೇಕವಾದ `ಈಸ್ಥೆಟಿಕ್ ಇದರ ಹಿಂದಿದೆಯೇ ಎಂಬುದು ಅನುಮಾನ. ವಗರ್ಿಕರಣದ ಈ ನಮೂನೆಯನ್ನು ಸಧ್ಯ ಅಧ್ಯಯನದ ಅನುಕೂಲಕ್ಕಾಗಿ ಮಾತ್ರವೇ ಸ್ವೀಕರಿಸಿ ನಂತರ ಅದನ್ನು ವಿಸಜರ್ಿಸಲೇ ಬೇಕಾಗುತ್ತದೆ.
                 ಎರಡನೇಯದಾಗಿ ಪಾರಿಭಾಷಿಕ ಪದಕ್ಕೆ ಸಂಬಂಧಿಸಿದ ತೊಡಕು. ಇದನ್ನು ವಿಸ್ತರಿಸಲು ಹೋಗುವುದಿಲ್ಲ. ಈ ಪ್ರಬಂಧದ ಮಟ್ಟಿಗೆ ವೃತ್ತಿ ರಂಗಭೂಮಿ = ಕಂಪನಿ ನಾಟಕಗಳು ಅಂತಲೂ, ಹವ್ಯಾಸಿ ರಂಗಭೂಮಿ = ಆಧುನಿಕ ರಂಗಭೂಮಿ ಅಂತಲೂ ಇಟ್ಟು ಮಾತನಾಡಲು ಬಯಸುತ್ತೇನೆ. ಆಧುನಿಕ ರಂಗಭೂಮಿ ಅಂದಾಗ ಅದು ವಸಾಹತು ಕಾಲಕ್ಕೆ ಸಂಬಂಧಿಸಿದ್ದರಿಂದ ಕಂಪನಿ ನಾಟಕಗಳೂ ಅದರಲ್ಲೇ ಬರುತ್ತವೆ ಎಂಬ ಎಚ್ಚರ ನನಗಿದೆ. ಆದಾಗ್ಯೂ ಅದನ್ನು ನವ್ಯ ಫೇಸ್ನ ಕಾಲಘಟ್ಟ ಅಂತ ಗುರುತಿಸಲು ಇಷ್ಟಪಡುತ್ತೇನೆ. ಮತ್ತು ಈ ಟಿಪ್ಪಣಿ ಮುಗಿದಕೂಡಲೇ ನೀವು ಈ ಪಾರಿಭಾಷಿಕ ಪದದ ಒಪ್ಪಂದವನ್ನು ಸಹ ವಿಸರ್ಜಿಸಬಹುದು..
             ಹವ್ಯಾಸಿ ರಂಗಭೂಮಿಯ ಆದ್ಯರಾದ ರಂಗಾಚಾರ್ಯರು ಅಂದರೆ ಶ್ರೀರಂಗರ ರಂಗಪ್ರಜ್ಞೆಯನ್ನು ರೂಪಿಸಿದ್ದು, ಅವರೂರಿನಲ್ಲಿ ನಡೆದ ಹರಿಶ್ಚಂದ್ರದಂತ ಆಟಗಳು, ವಿಜಾಪುರದಲ್ಲಿ ಅವರ ಮೇಲೆ ಅಪಾರ ಪ್ರಭಾವ ಬೀರಿದ ನಾರಂಗಿ ನಿಶಾನ್ನಂತಹ ಮರಾಠಿ ಕಂಪನಿ ನಾಟಕಗಳು. ಈ ಕಾಲಘಟ್ಟದ ನಮ್ಮ ನಡುವಿನ ಹೆಮ್ಮೆಯ ಗಿರಿಶ್ ಕಾನರ್ಾಡರು ನಾನು ಆಧುನಿಕ ನಾಟಕ ಎಂದು ಯೋಚನೆ ಮಾಡಿದರೂ ಕಂಪನಿ ನಾಟಕದಿಂದಲೇ ಹೊರಟು ಬರಬೇಕು ಅನ್ನುತ್ತಾರೆ. ಅವರ ರಚನೆಯ ಹಿಂದಿನ ಸ್ಪೂತರ್ಿಯನ್ನು, ಆಕೃತಿಯನ್ನು ನಾವು ಹೀಗೆ ಗೃಹಿಸಲು ಸಾಧ್ಯ. ಕಾರಂತರಂತೂ ಆಧುನಿಕವಾದ ತಮ್ಮ ಪ್ರಯೋಗಕ್ಕೆ ಕಂಪನಿ ನಾಟಕದ ಮಾಂತ್ರಿಕ ಸ್ಪರ್ಶ ನೀಡಿದ ಉದಾಹರಣೆ ನಮ್ಮ ಕಣ್ಣೆದುರಿಗೇ ಇದೆ.
                ಈ ಹಿನ್ನೆಲೆಯಲ್ಲಿ ನಾನು ಈ ಎರಡೂ ರಂಗಭೂಮಿಯ ಶಕ್ತಿ ಮತ್ತು ಮಿತಿಗೆ ಸಂಬಂಧಿಸಿದ ಕೆಲವು ಸಂಗತಿಗಳನ್ನು ಮಂಡಿಸುತ್ತಿದ್ದೇನೆ : ಮತ್ತು ಕನರ್ಾಟಕದ ಸಂದರ್ಭವನ್ನು ಮಾತ್ರ ಪರಿಗಣಿಸಿ ಮಾತನಾಡುತ್ತಿದ್ದೇನೆ. ಅಲ್ಲದೇ ನಾನು ವೃತ್ತಿರಂಗಭೂಮಿಯಿಂದ ಕಲಿತುಕೊಳ್ಳಬಹುದಾದ ಸಂಗತಿಗಳ ಕುರಿತು ಹೇಳುವಾಗ ನಿಮಗೆ ಕಂಪನಿ ನಾಟಕ ಅಂದರೆ ಸವರ್ಾಲಂಕಾರ ಭೂಷಿತ,  ಸರ್ವಗುಣ ದೋಷರಹಿತವಾದ ಒಂದು ಆತ್ಯಂತಿಕ ಸ್ಥಿತಿಯ ರಂಗಭೂಮಿ ಅಂತಲೂ, ಹವ್ಯಾಸಿ ರಂಗಭೂಮಿ ಎಂದರೆ ಪರಮ ಭ್ರಷ್ಟಾತಿ ಭ್ರಷ್ಟವಾದ ಆಶಾದಾಯಕವೇ ಅಲ್ಲದ ರಂಗ ಅಭ್ಯಾಸವೆಂತಲೂ ಕಂಡುಬರುವ ಅಪಾಯವಿದೆ. ಆದರೆ ಹಾಗೇನು ಅಲ್ಲ ಎಂಬುದನ್ನು ಆರಂಭದಲ್ಲೇ ಸ್ಪಷ್ಟಪಡಿಸುತ್ತಿದ್ದೇನೆ. ಈ ಸಂದರ್ಭದ ಅಧ್ಯಯನದ ಚೌಕಟ್ಟಿನ ಮಿತಿಯಲ್ಲಿ ವೃತ್ತಿ ರಂಗಭೂಮಿಯ ಶಕ್ತಿ ಹಾಗೂ ಹವ್ಯಾಸಿ ರಂಗಭೂಮಿಯ ಮಿತಿ ಇವೆರಡನ್ನೂ ಮಾತ್ರ ಒತ್ತುಕೊಟ್ಟು ಮಾತನಾಡುತ್ತಿದ್ದೇನೆ. ಅಂದರೆ ಇಲ್ಲಿ ಹವ್ಯಾಸಿ ರಂಗಭೂಮಿಯ ಸಾಧನೆಯನ್ನು, ವೃತ್ತಿರಂಗಭೂಮಿಯ ಮಿತಿಯನ್ನು ಎಲ್ಲೂ ಚರ್ಚಿಸುತ್ತಿಲ್ಲ.. ಅದು ಸಧ್ಯದ ನನ್ನ ತುರ್ತಲ್ಲ.

                ಕಂಪನಿ ನಾಟಕ ನಮಗೆ ಬಹಳ ಮುಖ್ಯವಾಗಿ ರಂಗಭೂಮಿಯ ಸಂಭ್ರಮವನ್ನು ಕಾಣಿಸಿತು. ರಂಗಭೂಮಿಗೆ ಇರುವ ಅದರ ರೋಚಕತೆಯನ್ನು ಅನುಭವವಾಗಿಸಿತ್ತು. ಹವ್ಯಾಸಿ ರಂಗಭೂಮಿಯ ಪ್ರಧಾನವಾದ ದೌರ್ಬಲ್ಯವೇ ಅದರ ಅತಿವಾಸ್ತವತೆ. ವಾಸ್ತವದ ನಮ್ಮ ಕಣ್ಣ ನೇರದ ಸಂಗತಿಗಳ ಆಚೆ ಏನೂ ಇಲ್ಲ ಎಂದು ನಂಬಿಕೊಂಡ ಗೃಹಿಕೆ ಅದು. ಈ ಅತಿವಾಸ್ತವತೆಯ ವ್ಯಾಮೋಹ ನವ್ಯ ಹೇಳಿಕೊಟ್ಟ ಪಶ್ಚಿಮದ ರ್ಯಾಶನಾಲಿಸ್ಟ್ ಧೋರಣೆಗೆ ಸಂಬಂಧಿಸಿದ್ದು,  ಇದಕ್ಕೆ  ಭವಿಷ್ಯದ ಕನಸಿಲ್ಲ. ಗತಕಾಲದ ಕುರಿತು ಅತ್ಯಂತಿಕ ತಿರಸ್ಕಾರ ಇದೆ. ತೀರ ಕೌಟುಂಬಿಕವಾದ ಪಠ್ಯಗಳಾಚೆ ಉಳಿದ ಪಠ್ಯಗಳನ್ನು ಅದು ನಿರಾಕರಿಸತೊಡಗುತ್ತದೆ. ಹಾಗಾಗಿ ಇದೆಲ್ಲದರ ಆಚೆ ಬೇರೊಂದು ಪ್ರಪಂಚವೂ ಇದೆ ಎಂಬುದನ್ನು ಅದು ನಿರಾಕರಿಸಿತು. ಆ ಇತರ ಜಗತ್ತಿನವರಿಗೆ ಇಲ್ಲಿ ಪ್ರವೇಶ ಸಾಧ್ಯವಾಗಲೇ ಇಲ್ಲ. ಪಶ್ಚಿಮದ ಕಲಿತ ಬುದ್ದಿ ಆಡಿಸಿದ ನುಡಿ ನಾಟಕದ ನಾಡಿಯನ್ನು ಆಡಿಸತೊಡಗಿತು. ಹವ್ಯಾಸಿ ರಂಗಭೂಮಿಯನ್ನು ಉದ್ಘೋಷಿಸಿದ ಶ್ರೀರಂಗರು ಅಂತೆಯೇ ಕೈಲಾಸಂ ಇಂಗ್ಲೇಂಡಿಗೆ ಹೋಗಿ ಬಂದದ್ದು, ಅವರ ಚಟುವಟಿಕೆಗಳ ಬೆನ್ನ ಹಿಂದೆಯೇ ನವ್ಯ ಮೂಮೆಂಟ ಇಲ್ಲಿ ಬೆಳವಣಿಗೆ ಹೊಂದಿದ್ದು, ಜನಪ್ರಿಯತೆಯನ್ನು ಅನುಮಾನಿಸುವ ದೃಷ್ಟಿ ಇವೆಲ್ಲ ರಂಗಭೂಮಿ ಇತಿಹಾಸ ಬಲ್ಲವರಿಗೆ ಗೊತ್ತು. ಆದರೆ ಬಹುಮುಖ್ಯ ಸಂಗತಿ ಎಂದರೆ ನಾಟಕದ ಒಳಗಡೆಯೇ ಅವರು ವೃತ್ತಿರಂಗಭೂಮಿಗೆ ಹೊಡೆದ ಹೊಡೆತ ಸಾಮಾನ್ಯವಾದದ್ದಲ್ಲ. ಅವರ ನಾಟಕಗಳು ತಲುಪಿದ್ದು, ತೀರ ಎಲೈಟ್ ಆದ ಮಧ್ಯಮವರ್ಗದ ಬುದ್ದಿಜೀವಿಗಳನ್ನು ಎಂದಾದರೂ ಅವರ ಅಭಿಪ್ರಾಯ ಜನಾಭಿಪ್ರಾಯ ರೂಪಿಸಿದ್ದು ಸುಳ್ಳಲ್ಲ. ನಮ್ಮ ವಸಾಹತು ಬದುಕಿನ ಸಂದರ್ಭದಲ್ಲಿ ಇಂಗ್ಲೆಂಡಿನಿಂದ ಬಂದವರ ಮಾತಿಗೊಂದು ತೂಕ ಒದಗುವದು ಆಶ್ಚರ್ಯವೇನಲ್ಲ. ಅದು  ಎಷ್ಟರಮಟ್ಟಿಗೆ ಆಯಿತೆಂದರೆ ಕಂಪನಿ ನಾಟಕ ನೋಡುವುದೇ ಒಂದು ಪಾಪ ಎಂಬಷ್ಟರ ಮಟ್ಟಿಗೆ ಹೋಯಿತು.
  ಈ ಅತಿವಾಸ್ತವದ ರೋಗ ಬಡಿದಿದ್ದರಿಂದ ಆದ ಮೊದಲ ಸಮಸ್ಯೆಯೇ ರಂಗಭೂಮಿ ಎನಿಮಿಕ್ ಆಗಿದ್ದು, ತನ್ನೆಲ್ಲ ಜೀವರಸವನ್ನು ಕಳೆದುಕೊಂಡಿದ್ದು. ಅದಕ್ಕೆ ಅನಂತರದ ರಸಸ್ಪರ್ಶ ಕಂಪನಿ ಪ್ರಭಾವದ ಕಾರಂತರಿಂದ ಆಯಿತು. ಆದರೆ ಕಾರಂತರು ಆ ಸಮಯದಲ್ಲಿ ಎಷ್ಟೆಲ್ಲ ನಿಂದೆಗೂ ಗುರಿಯಾಗಬೇಕಾಯಿತು. ನವ್ಯ ವಲಯ ಅವರ ಪ್ರಯೋಗವನ್ನು ಗಿಮಿಕ್ ಎಂದೂ, ಹಾಡು ಹಸೆಯಲ್ಲಿ ಆದ ಪಲಾಯನವಾದವೆಂದೂ, ಕೇವಲ ಅಲಂಕರಣ ಎಂದೂ ಮೂದಲಿಸಿತ್ತು. 80 ರ ನಂತರ ಕಾರಂತರ ಮಹತ್ವ ಅರಿವಾಗತೊಡಗಿದೆ.
                ಯುನಿವಸರ್ಿಟಿ ವಿಟ್ ಎಂದು ಕರೆಯಲ್ಪಡುವ ವಿಶ್ವವಿದ್ಯಾಲಯದ ರಂಗ ವಿಮರ್ಶಕರ ಗುಂಪು ಷೇಕ್ಸ್ಪಿಯರನ್ ಕಾಲದಲ್ಲೂ ಹೀಗೆ ವತರ್ಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಮಾತಿನ ಮಧ್ಯ ಹಾಡನ್ನು ತಂದ ಆತನನ್ನು `ಬೇರೆ ಬೇರೆ ಗರಿಗಳನ್ನು ಸಿಕ್ಕಿಸಿಕೊಂಡ ಕಾಗೆ ಅಂತ ಕರೆದಿದ್ದುಂಟು. ಆದರೆ ಕಂಪನಿ ನಾಟಕದ  ಷೇಕ್ಸ್ಪಿಯರ್ ಇಂದು ಯುನಿರ್ವಸಿಟಿಯ ಪಠ್ಯದಲ್ಲಿದ್ದಾನೆ.

               ವೃತ್ತಿ ರಂಗಭೂಮಿಯ ಒಂದು ಶಕ್ತಿ ಎಂದರೆ ಅದರ ಸ್ಥಿತಿ ಸ್ಥಾಪಕತ್ವದಗುಣ ಹಾಗೂ ಒಳಗೊಳ್ಳುವ ಗುಣ. ಕಾಲಕಾಲಕ್ಕೆ ಸಮಾಜದಲ್ಲಾದ ಬದಲಾವಣೆಗಳನ್ನು ಒಳಗೊಳ್ಳುತ್ತಾ ಪ್ರತಿಕ್ರಿಯಿಸುತ್ತಾ ಬಂದ ಈ ರಂಗಭೂಮಿ ಬೇಕಾದರೆ ದ್ರೌಪದಿ ವಸ್ತ್ರಾಪಹರಣದಲ್ಲಿ ಖಾದಿ ಮಹತ್ವದ ಕುರಿತು ಮಾತನಾಡುತ್ತದೆ. ಜನರಿಗೆ ಅದರಲ್ಲಿ ಜೀವಂತಿಕೆ ಕಾಣುವ ಹಾಗೆ, ನಮ್ಮದೇ ಜೀನವದ ಅಂಗ ಅದರಲ್ಲಿ ಪ್ರತಿನಿಧಿಸಲ್ಪಡುತ್ತದೆ ಅಂತ ಅನ್ನಿಸುವ ಹಾಗೆ ಅದು ಮಾಡಿತು. ಅದರ ಒಳಗೊಳ್ಳುವ ಕ್ರಿಯೆ ಬಹಳ ಆಸಕ್ತಿದಾಯಕವಾದದ್ದು.
 ಕಂಪನಿ ನಾಟಕದ ಕುರಿತು ನನ್ನಲ್ಲಿ ಅಪಾರವಾದ ಆಸಕ್ತಿ ಮೂಡಿಸಿದ ಒಂದು ಚಿಕ್ಕ ಕಂಪನಿ ಕರಾವಳಿ ತೀರದ ನನ್ನೂರಿಗೆ ಬಂದಿತ್ತು. ಅದೊಂದು ಅಲೆಮಾರಿಗಳ ರಂಗತಂಡ. ಹಗಲಿನಲ್ಲಿ ಮನೆ ಮನೆಗಳಿಗೆ ಹೋಗಿ ಬಟ್ಟೆ, ಅಕ್ಕಿ, ಕಾಯಿಗಳನ್ನು ಬೇಡುತ್ತ, ರಾತ್ರಿ ನಾಟಕ ಪ್ರದಶರ್ಿಸುತ್ತಿತ್ತು. ಆಯಾದಿನ ಸಂಗ್ರಹಿಸಿದ ಹಳೆ ಬಟ್ಟೆಗಳನ್ನು ನಾಟಕದಲ್ಲಿ ಹೊಸರೂಪದೊಂದಿಗೆ ಅವರು ಬಳಸುತ್ತಿದ್ದರು. ಆಗ ಸದಾರಮೆ ನಾಟಕ ಮಾಡುತ್ತಿದ್ದರು. ನಾನು ನನ್ನಮ್ಮನ ಸೀರೆಯೊಂದನ್ನು (ಸ್ವಲ್ಪ ಚೆನ್ನಾಗಿರೋದು) ಅವರಿಗೆ ಕದ್ದು ಕೊಟ್ಟಿದ್ದೆ. ಅವತ್ತಿಂದ ನನಗೆ ನಾಟಕಕ್ಕೆ ಫ್ರೀ ಪಾಸ್, ಆದಿನ ಆ ಸೀರೆಯ ಅಂಚನ್ನು ತೆಗೆದು ಹಳೆಯ ಸೀರೆಯ ಬಾರ್ಡರ್ ಅಂಟಿಸಿಕೊಂಡು ಸದಾರಮೆ ಫ್ರೆಶ್ ಆಗಿ ನಗುತ್ತ ನಾಟಕಕ್ಕೆ ಕಳೆ ಏರಿಸಿದ್ದಳು. ಇದೊಂದು ರೂಪಕವಾಗಿ ನನಗೆ ಈ ಹೊತ್ತು ಕಾಣಿಸುತ್ತಿದೆ. ಆಧುನಿಕ ರಂಗಭೂಮಿಯ ಅಪಾರ ಮಡಿವಂತಿಕೆ ಒಂದು ಬಗೆಯ ಟ್ರಿಮ್ ಮಾಡಿದಂತಿರುವ ಅತಿ ಶಿಸ್ತು ಈ ಯಾವ ಒಳಗೊಳ್ಳುವಿಕೆಯನ್ನೂ ಬಯಸುವುದಿಲ್ಲ.

              ಕಂಪನಿ ನಾಟಕಗಳು ಭಾರತದ ರಂಗಸಂಪ್ರದಾಯಗಳ ಕಥನವನ್ನು ಮುಂದುವರಿಸಿ ಕೊಂಡು ಬಂದವು. ನಿರೂಪಣಾತ್ಮಕವಾದ ರಂಗಭೂಮಿ ಅದು. ಆದರೆ ನಾವು ಆಧುನಿಕರು, ಪ್ರಸ್ತುತ ಪಡಿಸುತ್ತಿರುವುದು ವ್ಯಾಖ್ಯಾನ ಪ್ರಧಾನ ರಂಗಭೂಮಿಯನ್ನು. ನಿರೂಪಣೆಯೇ ವ್ಯಾಖ್ಯಾನವೂ ಆಗಬಲ್ಲದು ಎಂಬುದನ್ನೂ,  ಒಂದು ಕಥೆಯನ್ನು ನಾವು ಹೇಗೆ ನಿರೂಪಿಸುತ್ತೇವೆ ಎಂಬುದೇ ಅದರ ವ್ಯಾಖ್ಯಾನವು ಕೂಡ ಆಗುತ್ತದೆ ಎಂಬುದನ್ನೂ ಮರೆತು, ವ್ಯಾಖ್ಯಾನಕ್ಕಾಗಿಯೇ ಇಡೀ ನಾಟಕವನ್ನು ಹವ್ಯಾಸಿ ರಂಗಭೂಮಿ ದುಡಿಸಿಕೊಳ್ಳುತ್ತದೆ.  ಹೀಗಾಗಿ ಪ್ರೇಕ್ಷಕರಿಗಾಗಿ ಏನನ್ನೂ ಬಿಡದೆ ಒಂದು ಸಿದ್ದ ಪ್ರಾಡೆಕ್ಟನ್ನು ಇದು ನೀಡುತ್ತಿದೆ. ಹಾಗಾದಾಗ ಅದರ ಜೀವಂತಿಕೆಯೇ ಮರೆಯಾಗುತ್ತದೆ. ನಿದರ್ೆಶಕ ಕೊಟ್ಟ ಒಂದೇ ಬಗೆಯ ವ್ಯಾಖ್ಯಾನದಿಂದಾಗಿ ಪ್ರದರ್ಶನ ತೆರೆದಿಡುವ ಹಲವಾರು ವ್ಯಾಖ್ಯಾನಗಳು, ಸಾಧ್ಯತೆಗಳು ಮುಚ್ಚಿ ಹೋಗುತ್ತವೆ. ಎಲ್ಲ ನಟರೂ ನಿದರ್ೆಶಕರಂತೆ ಮಾತನಾಡುತ್ತಾರೆ. ಮುಂದುವರಿದು ನಿದರ್ೆಶಕರ ಲೋಕಗೃಹಿಕೆಯೇ ನಾಟಕದ ಲೋಕಗೃಹಿಕೆಯೂ ಆಗುವ ಹಾಗೆ, ಅದನ್ನು ಪ್ರೇಕ್ಷಕ ಒಪ್ಪುವ ಹಾಗೆ ಅದು ಒತ್ತಾಯಿಸುತ್ತದೆ. ಕಥನದ ನೂರೆಂಟು ಸಾಧ್ಯತೆಗಳು ಮಾಯವಾಗುತ್ತಿವೆ.

                ಒಂದು ನಿರ್ದಿಷ್ಟ ವೈಚಾರಿಕ ಆಕೃತಿಗೆ ಮಾತ್ರವೇ ಮಾತು ಕೊಡುವ ಇರಾದೆ ಹೊಂದಿದ ಹವ್ಯಾಸಿ ರಂಗಭೂಮಿ ಆ ಕಾರಣಕ್ಕಾಗಿಯೇ ಶುಷ್ಕವಾದ ಅಭಿನಯವನ್ನು ಆತುಕೊಳ್ಳುತ್ತಿದೆ. ನಟನಾದವನ ಜವಾಬ್ದಾರಿ ಈ ಕಲಿತ ಮಾತುಗಳನ್ನು ಒಪ್ಪಿಸುವುದು ಮಾತ್ರವಾಗಿರುವುದರಿಂದ ಅಭಿನಯ ಸಲೀಸಾಗುತ್ತದೆ. ಅದಕ್ಕಾಗಿ ಯಾವ ವಿಶೇಷ ರಿಯಾಜ್ಗಳೂ ಅಗತ್ಯ ಎನಿಸುತ್ತಿಲ್ಲ. ಬದಲಾಗಿ ನಾವು ಈಚಿನ ರಂಗಭೂಮಿಯವರು ಕಂಪನಿ ನಾಟಕದ ನಟರ ಅಭಿನಯವನ್ನು `ಮೆಲೋಡ್ರಾಮಾ, `ಭಾವಾತಿರೇಕ ಎಂದು ನಮಗೆ ಕಲಿಸಿಕೊಟ್ಟ ಮಾತುಗಳನ್ನೇ ಉರು ಹೊಡೆದು ಹೇಳುತ್ತ ಬಂದೆವು. ಭಾವ ತನ್ಮಯತೆಯನ್ನು ಬ್ರೆಕ್ಟನ ಹೆಸರಲ್ಲಿ ತಪ್ಪು ತಪ್ಪಾಗಿ, ಜಾಳು ಜಾಳಾಗಿ ವಿಶ್ಲೇಷಿಸಿ ಅದನ್ನೊಂದು ಅಪರಾಧ ಎನ್ನುವಂತೆ ನೋಡಿದೆವು. ಈ ತನ್ಮಯತೆ ಮತ್ತು  ವಾಸ್ತವ ಪ್ರಜ್ಞೆಗೆ ಸಂಬಂಧಿಸಿದ ಒಂದು ಸಂಗತಿ ಹೀಗಿದೆ. ಗರುಡರ ಕಂಪನಿಯಲ್ಲಿ ನಾಟಕ ಶಿಕ್ಷಕರಾಗಿ ಸೇರಿ ನಂತರ ಪ್ರಧಾನ ಪಾತ್ರವಹಿಸಿ ಮುಂದೆ `ಜಯಕನರ್ಾಟಕ ನಾಟಕ ತಂಡ ಕಟ್ಟಿದ ಹುಲಿಮನೆ ಸೀತಾರಾಮ ಶಾಸ್ತ್ರಿಯವರನ್ನು ಗೌರೀಶ ಕಾಯ್ಕಿಣಿಯವರು ಸಂದರ್ಶನ ಮಾಡಿದ್ದರು. ಆ ಕುರಿತ ಕಾಯ್ಕಿಣಿಯವರ ಬರೆಹವನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ..... ಹುಲಿಮನೆ ಶಾಸ್ತ್ರಿ ಅಸಾಮಾನ್ಯ ಅಭಿನಯಪಟು. ಅಭಿನಯವಲ್ಲ ಥೇಟು ಯತಾರ್ಥ. ಯಾವ ಪಾತ್ರವನ್ನೂ ಸಹ ಸಮರ್ಥವಾಗಿ ಸಜೀವಗೊಳಿಸುತ್ತಿದ್ದರು. ಪಾತ್ರಾಭಿನಯದಲ್ಲಿ ತನ್ಮಯರಾಗಿ ಕಾಣುತ್ತಿದ್ದರು. ಅಥರ್ಾತ್ ಪ್ರೇಕ್ಷಕರ ರೋಮಾಂಚಿತ ದೃಷ್ಟಿಗೆ. ಆ ಕುರಿತು ನಾನು ಅವರನ್ನು ಕೇಳಿದೆ ಶಾಸ್ತ್ರಿಗಳೇ ರಂಗದಲ್ಲಿ ಅಷ್ಟೊಂದು ತನ್ಮಯ ಭಾವದಿಂದಲೇ ನಟಿಸುತ್ತೀರಾ? ಅದಕ್ಕೆ ಅವರು ಅಂದರು  `ಹಾಗೆ ಅಭಿನಯಿಸುವುದು ಉಂಟು. ಯಾವ ಪಾತ್ರವೇ ಇರಲಿ ಅದರ ಪ್ರಭಾವಕ್ಕೆ ತಕ್ಕಂತೆ ಅಂತ ನಟರು ತನ್ಮಯರಾಗಿ ಬಿಡುತ್ತಾರೆ. ಆದರೆ ತಾನೇ ಆಯಾ ಪಾತ್ರದ ಭೂಮಿಕೆಯೊಡನೆ ಒಂದಾದರೆ ಅದು ನಟನೆಯಾದೀತೆ? ನಾನು ಅಥವಾ ಗರುಡ ಸದಾಶಿವರಾಯ ಹಾಗಲ್ಲ.  ನಮಗೆ ಎಂಥ ಅಮೋಘ ಅಭಿನಯದಲ್ಲಿಯೂ ಆತ್ಮಪ್ರಜ್ಞೆ ಜಾಗೃತವಾಗಿರುತ್ತಿತ್ತು. ಕೀಚಕವಧೆ ನಾಟಕದಲ್ಲಿ ನಾನು ಭೀಮ, ಗರುಡರು ಕೀಚಕ. ಭೀಮನು ಕೀಚಕನನ್ನು ರೋಷಾವೇಷದಲ್ಲಿ ಎತ್ತಿಹಿಡಿದಾಗ ಪ್ರೇಕ್ಷಕನು ಉಸಿರುಗಟ್ಟಿ ಹಿಡಿದು ನೋಡುತ್ತಿದ್ದಾಗ ಗರುಡರು `ಶಾಸ್ತ್ರಿ ನನ್ನನ್ನು ಗಟ್ಟಿ ಹಿಡಿ. ಬಿದ್ದೇನು ಎಂದು ಪಿಸುಗುಡುತ್ತಿದ್ದರು.
ಅಭಿನಯದ ಕುರಿತ ಈ ಚಿಂತನೆಯನ್ನು ನಾವು ಆಧುನಿಕರು ಏನೆಂದು ಗುರುತಿಸಿದ್ದೇವೆ?

           ನಮ್ಮ ರಂಗ ಪರಂಪರೆ ಕಾವ್ಯಾಭಿನಯಕ್ಕೆ ಸಂಬಂಧಿಸಿದ್ದು, ಕಾವ್ಯದೊಡನೆಯ ಸಾಹಚರ್ಯ ಅದರ ಅಭಿಯನದ ವ್ಯಾಕರಣವನ್ನು ರೂಪಿಸಿದೆ.  ಮಾತು-ಗೀತ ಇವೆರಡೂ ಒಡೆಯದ ಒಂದು ನಿದರ್ಿಷ್ಟ ಶ್ರುತಿಯಲ್ಲಿ ಇದನ್ನು ಮೇಳೈಸಿಕೊಂಡ ಅಭಿನಯ ಪರಂಪರೆ ನಮಗಿದೆ. ಮಾತು ಸಾಧಿಸಲಾರದ ಹಲವು ಭಾವಗಳನ್ನು ಗೀತ ಸಂವಹಿಸುತ್ತದೆ. ಕಂಪನಿ ನಾಟಕ ಇದನ್ನು ಚೆನ್ನಾಗಿ ನಿರ್ವಹಿಸಿಕೊಂಡು ಬಂದಿತು.ಆಧುನಿಕ ರಂಗಭೂಮಿಯ ಸಂಕಟ ಗದ್ಯಾಭಿನಯಕ್ಕೆ ಸಂಬಂಧಿಸಿದ್ದು. ಅವಾಸ್ತವ ಎಂದು ಮೊದಲ ಹಾಡನ್ನು ಪಕ್ಕಕ್ಕಿಟ್ಟ ಈ ರಂಗಭೂಮಿ ಅನಂತರ ಕಷ್ಟಪಟ್ಟು ಸಂಗೀತವನ್ನು ತೇಪೆ ಹಾಕಿಕೊಳ್ಳಲು ಆರಂಭಿಸಿದೆ. ಗದ್ಯಾಭಿನಯದ ವ್ಯಾಕರಣ ನಮಗಿನ್ನೂ ತಿಳಿದಿಲ್ಲ. ಹಾಗಾಗಿ ಸಂವಹನದ ಕೊರತೆ ನೀಗಿಸಲು ಅತಿಯಾದ ಪರಿಕರಗಳನ್ನು ರಂಗದಲ್ಲಿ ಇಡಿಕಿರಿಸಿದ್ದೇವೆ. ನಟನ ದೇಹಕ್ಕೆ ಅವಮಾನ ಮಾಡುವಷ್ಟು ಪರಿಕರಗಳನ್ನು ಆ ಸ್ಥಾನದಲ್ಲಿ  ತುಂಬಿದ್ದೇವೆ, ಇಲ್ಲವೇ ಅತಿಯಾದ ಶೈಲಿಕೃತ  ಅಭಿನಯಕ್ಕೆ ಮೊರೆಹೋಗುತ್ತಿದ್ದೇವೆ.
ಈ ಎಲ್ಲ ಹಿನ್ನೆಲೆಯಲ್ಲಿ ನಾವು ಆಧುನಿಕರು, ಹವ್ಯಾಸಿ ರಂಗ ಕಮರ್ಿಗಳು ನಾವು ಕಳೆದುಕೊಂಡದ್ದೇನು ಎಂಬುದನ್ನು ತಿರುಗಿ ನೋಡಲೇಬೇಕಿದೆ. ನಮ್ಮನ್ನು ನಾವು ಆಧುನಿಕಗೊಳಿಸಿಕೊಳ್ಳಲು ಇತಿಹಾಸದ ಏನೆಲ್ಲ ಅರಿವನ್ನು ಹೊರಗೆಸೆದಿದ್ದೇವೆ ಎಂಬುದನ್ನು ಮತ್ತೆ ಪರಿಶೀಲಿಸಬೇಕಿದೆ. ಅದಕ್ಕೇ ಈ ಅನ್ವಯ ಮಾರ್ಗದ ಶೋಧವನ್ನು ಪರಿಶೀಲಿಸಬೇಕಿದೆ. ಅದರೆ ಈ ದಾರಿ ಸುಲಭ ಸಾಧ್ಯವೇನಲ್ಲ. ಅನ್ವಯ ಮಾರ್ಗದ ಎರಡೂ ತುದಿಗಳ ತಾತ್ವಿಕತೆಯೇ ತೀರ ಭಿನ್ನವಾದುದು.

                ಮೂಲಭೂತವಾಗಿ ಕಂಪನಿ ನಾಟಕಗಳ ಹಿಂದಿನ ತಾತ್ವಿಕತೆ ಸದ್ಯಪರ ನಿವರ್ೃತಯೆ ಎಂಬ ಮಿಮಾಂಸೆಯದು. ಆಧುನಿಕ ರಂಗಭೂಮಿ `ಮರೆಯಬಾರದ ನೋವುಗಳನ್ನು ತಲ್ಲಣಗಳನ್ನು ಹಿಡಿದಿಡುವಂಥದ್ದು. ಇವೆರಡೂ ತಾತ್ವಿಕ ಮಾರ್ಗಗಳ ಅರಿವು ಈ ಅನ್ವಯ ಮಾರ್ಗದಲ್ಲಿ ನಡೆಯುವವನಿಗೆ ಸ್ಪಷ್ಟವಾಗಿ ಇರಬೇಕಾಗುತ್ತದೆ. ಇಲ್ಲವಾದರೆ ಶಿವರಾಮ ಕಾರಂತರು ಹೇಳುವ ಹಾಗೆ ರಂಗ ಪ್ರದರ್ಶನವೆಂಬುದು `ನಾವೆಲ್ಟಿ ಷೋ ಆಗಿ `ಜನತಾ ಬಜಾರ್ ಆಗಿ ಪರಿಣಮಿಸಿ ಬಿಡುತ್ತವೆ. ಈ ಹಿನ್ನೆಲೆಯಲ್ಲಿ ನಮ್ಮ ನಡುವಿನ ಸಾಧ್ಯತೆಗಳನ್ನು ಶೋಧಿಸುವ ಪ್ರಯತ್ನ ನಡೆಯಬೇಕಿದೆ. ಕ್ರೀಡಾ ನೀಯಕ ವನ್ನು ಸ್ಥಾಪಿಸಿಕೊಳ್ಳುತ್ತ ನಮ್ಮ ಪರಂಪರೆಯಲ್ಲಿರುವ ಕಥನಗಳನ್ನು ಎತ್ತಿಕೊಳ್ಳಬೇಕಿದೆ. ಅಂದರೆ ನಾವು ಹವ್ಯಾಸಿ ರಂಗಭೂಮಿಯವರು ಮತ್ತೆ ಪರದೆ ಹಾಕಿಯೇ ನಾಟಕ ಮಾಡಬೇಕೆಂದಲ್ಲ .  ಆದರೆ ಅವರ ಪರದೆ ವ್ಯವಸ್ಥೆಯ ಹಿಂದಿನ ತಾತ್ವಿಕತೆಯನ್ನು, ಅದನ್ನು ಬಳಸಿಕೊಳ್ಳಬೇಕಾದ ಹೊಸ ಸಾಧ್ಯತೆಯನ್ನು ಗಮನಿಸಲೇಬೇಕಾಗಿದೆ.
ನಾವು ಇಂದು ಏಕಕಾಲದಲ್ಲಿ ಸಾಂಪ್ರದಾಯಿಕವೂ ಆಗುವ ಆಧುನಿಕವೂ ಆಗಬೇಕಾದ ಪಾಕವನ್ನು ಸಿದ್ಧಿಸಿಕೊಳ್ಳಬೇಕಿದೆ. ಇದನ್ನು ಸಾರಸಗಟಾಗಿ ಮಿಸಳಬಾಜಿ ಎಂದು ತಳ್ಳಿ ಹಾಕುವಂತಿಲ್ಲ. ನಾನು ನಿಮಗೆ ಈ ಕುರಿತು ಉದಾಹರಣೆಯೊಂದನ್ನು ನಿಡುತ್ತೇನೆ. ಯಕ್ಷಗಾನದಂತಹ ಸಂಪ್ರದಾಯಿಕ ಪ್ರಕಾರಗಳಲ್ಲಿ ಅತ್ಯುನ್ನತ ಸಿದ್ಧಿ ಸಾಧಿಸದ ನಟರೂ ಸಹ ರಂಗಭೂಮಿಯ ಅಂಶಗಳನ್ನು ಮೇಳೈಸಿಕೊಂಡು ಬೆಳೆದ ಉದಾಹರಣೆಗಳು ಇವು.  ರಾಷ್ಟ್ರಪ್ರಶಸ್ತಿ ಪಡೆದ ಶಿವರಾಮ ಹೆಗಡೆವರು ಶ್ರೀರಂಗರಂತವರ ಸಂಪರ್ಕ ಹೊಂದಿದ್ದರು. ಮಹಾಬಲ ಹೆಗಡೆಯವರು ಕೈಲಾಸಂ ಅವರು ಕಟ್ಟಿಕೊಟ್ಟ ಕೀಚಕನ್ನನ್ನು, ಕಂದಗಲ್ಲರ ರಕ್ತರಾತ್ರಿ ನಾಟಕದಲ್ಲಿ ನಿಮರ್ಿತಿಗೊಂಡ ಅಶ್ವತ್ಥಾಮನನ್ನು ಹಾಗೂ ಬಿ.ಎಂ.ಶ್ರೀಯವರ ಆಶ್ವತ್ಥಾಮ ನಾಟಕದ ಆಶ್ವತ್ಥಾಮ ನನ್ನು ಅನುಸರಿಸಿ ಆಯಾ ಪಾತ್ರಗಳ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದರು. ಶಂಭು ಹೆಗಡೆಯವರು ಎನ್.ಎಸ್.ಡಿ.ಯಲ್ಲಿ ಪಡೆದ ಕೋರಿಯೋಗ್ರಪಿ ತರಬೇತಿ ಯಕ್ಷಗಾನ ರಂಗಕ್ಕೂ ಹೊಸಕಳೆ ತಂದಿತು.
ಕಂಪನಿ ನಾಟಕದ ಪ್ರಸಿದ್ಧ ಕಲಾವಿದರರಾಗಿದ್ದ ಏಕ್ಟರ್ ಜೋಶಿ ಮುಂದೆ ಯಕ್ಷಗಾನದಲ್ಲಿ ಪಾತ್ರವಹಿಸುತ್ತ ಅಲ್ಲಿಯೂ ಏಕ್ಟರ್ ಜೋಶಿಯಾಗಿಯೇ ಉಳಿದರು. ಮೂರೂರು ದೇವರು ಹೆಗಡೆ ಕಂಸನನ್ನು ಚಿತ್ರಿಸುವಾಗ ಅದ್ಭುತ ನಾಟಕೀಯ ತಂತ್ರಗಳನ್ನು ಬಳಸುತ್ತಿದ್ದರು. ಇವರೆಲ್ಲ ಯಕ್ಷಗಾನದ ಮೇರುನಟರೆನಿಸಿಕೊಂಡವರು ಎಂಬುದಕ್ಕಾಗಿಯೇ ಇಲ್ಲಿ ಉಲ್ಲೇಖಿಸಿದ್ದೇನೆ. ಪಾಸರ್ಿ ನಾಟಕದ ನಂಜುಂಡ ಎಂಬ ನಟ ಹನುಮಂತನ ಪಾತ್ರದಲ್ಲಿ ಅದ್ಭುತ ಹೆಸರುಗಳಿಸಿದ್ದ. ಆತನ ನಾಟಕಗಳು ಕರಾವಳಿಯಲ್ಲಿ ಪ್ರದರ್ಶನಗೊಂಡ ನಂತರ ಇಂದಿಗೂ ಯಕ್ಷಗಾನದ ಹನುಮಂತ ನಾಟಕದ ಹನುಮಂತನಾಗಿಯೇ ಜೀವ ಹಿಡಿದಿದ್ದಾನೆೆ ಎಂಬುದು ಕರಾವಳಿ ಯಕ್ಷಗಾನದ ಇತಿಹಾಸ ಬಲ್ಲವರಿಗೆಲ್ಲ ಗೊತ್ತು.
              ಈ ಉದಾಹರಣೆಗಳನ್ನು ನಾನು ಇಲ್ಲಿ ನೀಡುತ್ತಿರುವುದರ ಉದ್ದೇಶ ಈ ಒಳಗೊಳ್ಳುವಿಕೆ ಹೇಗೆ ಆಯಾ ಕಲಾಪ್ರಕಾರಗಳನ್ನು ಜನಪ್ರಿಯಗೊಳಿಸುತ್ತದೆ ಅಲ್ಲದೇ ಅವುಗಳ ವಿಸ್ತರಣೆಯ ಅಂಗವೂ ಆಗಿ ಪರಿಣಮಿಸುತ್ತದೆ ಎಂಬುದನ್ನು ಸೂಚಿಸಲು ಮಾತ್ರ.                                                              
                                                                                                                 -ಶ್ರೀಪಾದ ಭಟ್ಟ್