Saturday 17 August 2013

ಆರ ವಿ ಭಂಡಾರಿಯವ ನಾಟಕ ಸಾಹಿತ್ಯ - ಡಾ.ಶ್ರೀಪಾದ ಭಟ್ಟ್

ಆರ ವಿ ಭಂಡಾರಿಯವ  ನಾಟಕ ಸಾಹಿತ್ಯ - ಡಾ.ಶ್ರೀಪಾದ ಭಟ್ಟ್
ಮುಕರಿ ಮುತ್ತನಿಗೂ
ಪಾತು ಸಾತುವಿಗೂ
ಓದು ತಿಳಿಯಬೇಕು.
ಡಾ. ಆರ್.ವಿ.ಯವರು ಬರೆದ ಧ್ರುವ ಚರಿತ್ರೆ ನಾಟಕದ ಮೇಳ ಗೀತೆ ಇದು. ಸಮಾಜದ ಅಂಚಿನಲ್ಲಿರುವವರಲ್ಲಿ ಅರಿವು ಮೂಡಿಸುವ, ಸುತ್ತಣ ಬದುಕನ್ನು ಸಹ್ಯಗೊಳಿಸುವ ಆಶಯವನ್ನು ಈ ಹಾಡು ಹೊಂದಿದೆ.

ನಾಟಕ ಧ್ರುವ ಚರಿತ್ರೆಯೇ ಬೇಕಾದರೆ ಆಗಲಿ ಆರ್.ವಿ.ಯವರ ಗಮನ ಇರುವುದು ಚರಿತ್ರೆಯಲ್ಲಿ ನೆಮ್ಮದಿ ಬದುಕನ್ನು ಕಳೆದುಕೊಂಡ ಜನರಿಗೆ ಅರಿವು ಮೂಡಿಸುವುದು; ಬದುಕು ಕಟ್ಟಲು ನೆರವಾಗುವುದು. ಹಾಗೆ ನೋಡಿದರೆ ಅವರ ಈ ದೃಷ್ಟಿಕೋನ ಕೇವಲ ಅವರ ನಾಟಕಗಳಿಗೆ ಮಾತ್ರ ಸೀಮಿತವಲ್ಲ, ಅವರ ಇತರೆಲ್ಲ ಸಾಹಿತ್ಯ ನಿಮರ್ಿತಿಯ ಹಿಂದೆಯೂ ಇಂತದೊಂದು ಕನಸಿದೆ.

ಅವರ ಕಾಲದ ಇತರ ಸಾಹಿತಿಗಳಂತೆ ಆರ್.ವಿ. ಯವರು ಸಾಹಿತ್ಯದ ಬಹುತೇಕ ಎಲ್ಲಾ ಪ್ರಕಾರಗಳಲ್ಲೂ ಕೃತಿ ರಚಿಸಿದ್ದಾರೆ. ಅದರಲ್ಲಿ ನಾಟಕ ಪ್ರಕಾರವೂ ಒಂದು. ಹಾಗಾಗಿ ಅವರ ನಾಟಕ ರಚನೆಯ ಹಿಂದೆ ಇಂತದೊಂದು ಪ್ರಕಾರ ನಿಷ್ಠೆಗಿಂತಲೂ ಹೆಚ್ಚಾಗಿ ಅವರ ತಾತ್ವಿಕ ನಿಷ್ಠೆಯೇ ಹೆಚ್ಚು ಕಾಣುವುದು ಸಹಜ. ಅದೇ ಕಾಲಕ್ಕೆ ಅವರ ನಾಟಕಗಳಲ್ಲಿ ಆ ಪ್ರಕಾರದಲ್ಲಿ ಗಟ್ಟಿಯಾದ ರಚನೆಗಳೂ ಇವೆ.

ಅವರ ನಾಟಕಗಳ ಅಧ್ಯಯನಕ್ಕೆ ಅವರ ಸೃಜನಶೀಲತೆಯ ಹಿಂದಿನ ತಾತ್ವಿಕತೆಯ ಅವಲೋಕನ ಪೂರಕ ಸಂಗತಿಯಾಗುವುದು ಎಂದು ನಾನಂದುಕೊಂಡಿದ್ದೇನೆ.

ಆರ್.ವಿ.ಯವರ ಯಾವ ಸೃಜನಾತ್ಮಕತೆಯೂ ನಿರುದ್ದಿಶ್ಯವಾದುದಲ್ಲ. ಕೇವಲ ಆನಂದ ಅವರ ಯಾವ ಬಗೆಯ ಕೃತಿಗಳ ಉದ್ದೇಶವಾಗಿಯೂ ಕಾಣುವುದಿಲ್ಲ. ಸದ್ಯಪರ ನಿವರ್ೃತಯೇ ಎಂಬ ಮೀಮಾಂಸೆ ಅವರದಲ್ಲ. ಕಳೆದ ದಿನಗಳ ಯಾತನೆ ಮತ್ತು ನಲಿವು ಅವರ ಸೃಷ್ಟಿ ಕ್ರಿಯೆಯ ಹಿಂದೆ ನಿಂತಿರುವುದನ್ನು ನಾವು ಕಾಣಲು ಸಾಧ್ಯ. ವರ್ತಮಾನದಲ್ಲಿ ನೋವುಣ್ಣುತ್ತಿರುವ ಜನಾಂಗದ ಸ್ಥಾನಪಲ್ಲಟಕ್ಕಾಗಿ ನಡೆಸುವ ಹೋರಾಟವನ್ನು ಅವರ ಬಹುತೇಕ ಕೃತಿಗಳಲ್ಲಿ ನಾವು ಗುರುತಿಸಬಹುದು. ಪರಿಧಿಯಲ್ಲಿರುವ ಸಾತು, ಪಾತು, ಮುಕ್ರಿ, ಮುತ್ತ ಇವರೆಲ್ಲ ಅವರ ಕೃತಿಗಳಲ್ಲಿ ಕೇಂದ್ರಕ್ಕೆ ಬರುತ್ತಾರೆ. ಅವರೆಲ್ಲರಿಗೆ `ಓದು ಕಲಿಸುವುದು ಅವರ ಇತರ ಕೃತಿಗಳಂತೆ ನಾಟಕ ರಚನೆಯ ಉದ್ದೇಶವೂ ಆಗಿದೆ.

ಉತ್ತರ ಕನ್ನಡದಲ್ಲಿ ಆಧುನಿಕ ರಂಗಭೂಮಿಯ ವ್ಯಾಕರಣವನ್ನು ಪರಿಚಯಿಸುವ ಮಹತ್ವದ ಕೆಲಸವನ್ನು ಅವರು ಮಾಡಿದ್ದಾರೆ. ಆಧುನಿಕತೆಗೆ ಕಿವಿ ಕಣ್ಣುಗಳನ್ನು ಎಚ್ಚರದಿಂದ ತೆರೆದಿಟ್ಟುಕೊಂಡು ತಾನು ಕಂಡುಂಡಿದ್ದನ್ನು ತನ್ನ ಸುತ್ತಣ ಜನರಿಗೆ ಪರಿಚಯಿಸುವ ಪ್ರೀತಿಯ ಕಾಯಕ ಅವರದು. ಈ ಹಿನ್ನಲೆಯಲ್ಲಿ ಅವರ ನಾಟಕಗಳು ಉತ್ತರ ಕನ್ನಡದ ಆಧುನಿಕ ನಾಟಕದ ಇತಿಹಾಸದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಅವರು ಪ್ರೋಸೀನಿಯಂ ನಾಟಕ, ಅಸಂಗತ ನಾಟಕ, ಬೀದಿನಾಟಕ, ಮಕ್ಕಳ ನಾಟಕ ಹೀಗೆ ರಂಗಭೂಮಿಯ ಎಲ್ಲ ಆಯಾಮಗಳಲ್ಲೂ ಕೃತಿ ರಚನೆ ಮಾಡಿರುವುದಕ್ಕೆ ಇದೂ ಒಂದು ಕಾರಣವಾಗಿದೆ. ಕೆಲವು ಕೃತಿಗಳು ಈ ರಂಗ ವ್ಯಾಕರಣದ ಪರಿಚಯದ ಮಟ್ಟದಲ್ಲೇ ನಿಂತು ಐತಿಹಾಸಿಕ ದಾಖಲೆ ಮಾತ್ರವೇ ಆಗುಳಿದರೆ, ಅವರು ರಚಿಸಿದ ಮಕ್ಕಳ ನಾಟಕಗಳು ಭವಿಷ್ಯದ ಮಕ್ಕಳ ರಂಗಭೂಮಿಯಲ್ಲಿ ಗಟ್ಟಿಯಾಗಿ ನಿಲ್ಲುವ ರಚನೆಗಳಾಗಿವೆ. ಒಟ್ಟಾರೆ ಅವರ ಈ ಎಲ್ಲ ರಚನೆಗಳನ್ನು ಉತ್ತರ ಕನ್ನಡದ ರಂಗಭೂಮಿಯ ಅಧ್ಯಯನ ಮರೆಯುವಂತಿಲ್ಲ.

ಆರ್.ವಿ.ಯವರು ಸುಮಾರು 20 ಮಕ್ಕಳ ನಾಟಕಗಳನ್ನು, 10 ಬೀದಿನಾಟಕಗಳನ್ನು, ಒಂದು ಅಸಂಗತ ನಾಟಕವನ್ನು, 5 ದೊಡ್ಡವರ ಪ್ರ್ರೊಸೀನಿಯಂ ಚೌಕಟ್ಟಿನ ನಾಟಕಗಳನ್ನು ಬರೆದಿದ್ದಾರೆ. ಬಹುತೇಕವಾಗಿ ಈ ನಾಟಕಗಳು ಪರಿಸರ, ಸ್ವಾತಂತ್ರ್ಯ, ಸಾಕ್ಷರತೆ, ಆದರ್ಶ ನಾಯಕತ್ವ, ಕೋಮು ಸೌಹಾರ್ದತೆ, ರಾಜಕೀಯ ವಿಡಂಬನೆ, ವರ್ಣ ಮತ್ತು ವರ್ಗ ಸಂಘರ್ಷದ ನೆಲೆಗಳ ಕುರಿತಾಗಿ ಇದೆ.

ಅವರ ನಾಟಕಗಳಲ್ಲಿಂದ ಕೆಲವು ವೈಚಾರಿಕ ಆಕೃತಿಗಳನ್ನು ಈಗ ನೋಡೋಣ.
ಇತಿಹಾಸ ಮತ್ತು ಪುರಾಣಗಳ ಮರುವಾಖ್ಯಾನ ಅವರ ಬಹಳ ನಾಟಕಗಳಲ್ಲಿ ಕಂಡು ಬರುತ್ತವೆ. ಯಾನ, ಮಹಿಷಾಸುರ ಮದರ್ಿನಿ, ಧರ್ಮವ್ಯಾಧ ನಾಟಕಗಳಲ್ಲದೇ ಬೆಳಕು ಹಂಚಿದ ಬಾಲಕ ದಂತಹ ನಾಟಕದಲ್ಲಿ ಅದು ಢಾಳಾಗಿ ಕಾಣಿಸಿಕೊಳ್ಳುತ್ತದೆ.

ಅವರ ಮಹಿಷಾಸುರ ಮದರ್ಿನಿ ನಾಟಕದ ಸೂತ್ರಧಾರ ಹೀಗೆನ್ನುತ್ತಾನೆ. ಪುರಾಣ ಕಾಲದ ಕಥನವನ್ನು ಚರಿತ್ರೆ ಪೂರ್ವ ಸಾಹಿತ್ಯಾಂಶಗಳ ಮೂಲಕ ಪ್ರವೇಶಿಸಿ ಅದನ್ನೇ ಪ್ರತಿಸೃಷ್ಟಿಸುವುದು ಕವಿಯ ಕೆಲಸ. ಪುರಾಣದ ಹಿಂದಿನ ಸಾಮಾಜಿಕ ಅರ್ಥವನ್ನು ಹುಡುಕುವ ಯತ್ನವನ್ನು ಅವರ ಈ ಕೃತಿಯಲ್ಲಿ ಕಾಣಲು ಸಾಧ್ಯ. ಸತ್ಯಾಗ್ರಹ ಬೀದಿನಾಟಕದ ಸೂತ್ರದಾರ ಹೀಗೆನ್ನುತ್ತಾನೆ ಇತಿಹಾಸ ಇಲ್ಲದವರಿಗೆ ಭವಿಷ್ಯವು ಇಲ್ಲ. ಇತಿಹಾಸವನ್ನು ನೋಡುವ ಕಣ್ಣನ್ನು ಅವರಿಗೆ ಮಾಕ್ಸರ್್ವಾದ ನೀಡಿದೆ.
ಆ ಕಾಲದ ಘಟನೆಗಳ ವಿವರಗಳು ಅವರಿಗೆ ಹೊರ ಆವರಣ ಮಾತ್ರ. ಮುಖ್ಯವಾಗಿ ಅವರ ಗಮನ ಅದರ ತಿರುಳಿನ ಕಡೆಗೆ. `ಇಂತಲ್ಲಿ ಹೀಗೆ ನಡೆದಿರಬಹುದು. ಇಷ್ಟು ತಿಳಿದರಾಯಿತು. ಒಂದು ಸಲ ಕಥೆಯ ಸೆಳವಿಗೆ ಸಿಕ್ಕಿದಾಗ ಈ ಹೊರ ಆವರಣವೆಲ್ಲ ಮರೆತು ಹೋಗುತ್ತದೆ. ಎನ್ನುವುದು ಅವರ ನಿಲುವು.
ಬೆಳಕು ಅವರ ನಾಟಕಗಳಲ್ಲಿ ಪದೇ ಪದೇ ಮೂಡಿ ಬರುವ ಶಕ್ತ ಪ್ರತಿಮೆ. ಬೆಳಕಿನ ಕುರಿತಾದ ಅವರ ದಾಹವನ್ನು ಅವರು ಚಿತ್ರಿಸಿದ ಹಲವಾರು ಪಾತ್ರಗಳಲ್ಲಿ ನಾವು ಕಾಣಬಹುದಾಗಿದೆ. ಅವರ ಎರಡು ಪ್ರಮುಖ ಮಕ್ಕಳ ನಾಟಕಗಳ ಹೆಸರುಗಳು ಹೀಗಿವೆ. ಬೆಳಕಿನೆಡೆಗೆ ಮತ್ತು ಬೆಳಕು ಹಂಚಿದ ಬಾಲಕ.

ಆರ್.ವಿ.ಯವರಿಗೆ ಬುದ್ದ ಬಹಳವಾಗಿ ಕಾಡುತ್ತಾನೆ. ಪ್ರೀತಿ ಅಹಿಂಸೆ ಅರಿವು ಹಂಚುವ ಬುದ್ಧ ಅವರ ವ್ಯಕ್ತಿತ್ವದ ಒಂದು ಅಂಗವೇ ಆಗಿ ಬಿಟ್ಟಿದ್ದಾನೆ. ಅವರ ಹಲವಾರು ನಾಟಕಗಳಲ್ಲಿ ಬುದ್ಧ ಪ್ರತ್ಯಕ್ಷವಾಗಿಯೂ ಅಥವಾ ಪಾತ್ರಗಳ ಪ್ರತಿರೂಪವಾಗಿಯೂ ಕಾಣಿಸಿಕೊಳ್ಳುತ್ತಾನೆ. ಉದಾಹರಣೆಗೆ ಕೊಲ್ಲುವವರು, ಕಾಯುವವರು, ಬೆಳಕು ಹಂಚಿದ ಬಾಲಕ ಬೆಳಕಿನಡೆಗೆ - ಈ ಎಲ್ಲಾ ನಾಟಕಗಳಲ್ಲೂ ಬುದ್ಧ ಮತ್ತೆ ಮತ್ತೆ ಮೇಲೆದ್ದು ಬರುತ್ತಾನೆ. ಮನಃಪರಿವರ್ತನೆಗೆ, ವ್ಯಕ್ತಿತ್ವದ ಬೆಳವಣಿಗೆಗೆ ಮೂಲ ಕಾರಣನಾಗುತ್ತಾನೆ. ಕೊಲ್ಲುವವರು ಕಾಯುವವರು ನಾಟಕದ ಬುದ್ಧ ಕಾಜಾಣದ ಕೀಳರಿಮೆ ಹೋಗಲಾಡಿಸುತ್ತಾನೆ. ಜಿಂಕೆ, ನರಿ, ಮೊಲಗಳಿಗೆ ಅಭಯ ನೀಡುತ್ತಾನೆ. ಹುಲಿಗೆ ಹಿಂಸೆ ಬಿಡಲು ತಾಕೀತು ಮಾಡುತ್ತಾನೆ.

ಬೆಳಕು ಹಂಚಿದ ಬಾಲಕ ನಾಟಕದಲ್ಲಿ ಅಂಬೇಡ್ಕರ್ ಶಾಲಾ ವಾಷರ್ಿಕೋತ್ಸವದಲ್ಲಿ ಬುದ್ಧನ ಪಾತ್ರ ವಹಿಸುತ್ತಾನೆ. ಬುದ್ಧನ ಮಾತುಗಳನ್ನು ಹೇಳುತ್ತಾ ಹೇಳುತ್ತಾ ಕೊನೆಗೆ ಪಾತ್ರವನ್ನು ಮೀರಿ ತನ್ನ ವ್ಯಕ್ತಿತ್ವದ ಮಾತುಗಳನ್ನಾಡುತ್ತಾನೆ. ನಾಟಕದಲ್ಲಿ ನಡೆಯುವ ಈ ಘಟನೆ ಆರ್.ವಿ.ಯವರ ಹಲವಾರು ನಾಟಕಗಳಲ್ಲಿ ನಾಟಕದ ಬಂಧವನ್ನು ಕೆಲವೊಮ್ಮೆ ಮೀರಿ ವೈಚಾರಿಕತೆ ಚಚರ್ೆ ವಿಜೃಂಭಿಸುವದಕ್ಕೆ ಸಂಕೇತವಾಗಿಯೂ ಕಾಣುತ್ತದೆ.

ಜಾಗತೀಕರಣದ ಪ್ರಕ್ರಿಯೆಯನ್ನು ಅದರ ಅನಿಷ್ಠಗಳನ್ನು ಅವರ ಅನೇಕ ನಾಟಕಗಳು ಚಚರ್ೆಗೆ ಎತ್ತಿಕೊಳ್ಳುತ್ತದೆ. ಚಿನ್ನದ ಅಮಲಿನಲ್ಲಿ ಮನುಷ್ಯ ಪ್ರೀತಿ ಕಳೆದುಕೊಳ್ಳುತ್ತಿರುವ ಬಗ್ಗೆ ದಟ್ಟ ವಿಷಾದ ಅವರ ಹಲವಾರು ನಾಟಕಗಳಲ್ಲಿ ಕಂಡು ಬರುತ್ತದೆ. ಹಕ್ಕಿಗಳೂ ಬಲೆಯೂ ನಾಟಕದಲ್ಲಿ ಹಕ್ಕಿಗಳು, ಮನುಷ್ಯ ದುಡ್ಡು ಮಾಡುತ್ತಾ ಮಾಡುತ್ತಾ ಯುದ್ಧದ ಅಮಲಿನಲ್ಲಿ ಬೀಳುವುದರ ಕುರಿತು ಮಾತನಾಡುತ್ತದೆ. `ಪ್ರೀತಿಯ ಕಾಳು ನಾಟಕವು ಚಿನ್ನದ ಕಾಳು ತುಂಬಿಸಿಕೊಳ್ಳುವ ಸಲುವಾಗಿ ಪ್ರೀತಿಯ ಕಾಳನ್ನು ಹೊರ ಚೆಲ್ಲಿದುದರ ಕುರಿತು ಚಚರ್ಿಸುತ್ತದೆ. ಯಾನ ನಾಟಕದಲ್ಲಿ ಶಂಕು ಮತ್ತು ಕುಸುಮ ಎಂಬ ಇಬ್ಬರು ಪ್ರೇಮಿಗಳ ಪ್ರೇಮ ಚಿನ್ನದ ಕಾರಣದಿಂದ ಕೆಟ್ಟು ಹೋಗುತ್ತದೆ. ಶಂಕು ಹೇಳುತ್ತಾನೆ. ಚಿನ್ನ ಬೇಕು ಅಂದ್ರೆ ಹೊಡೆದಾಡುವುದೇನು ದೊಡ್ಡದಲ್ಲ ಬಿಡು ಕುಸುಮ ತಿರುಗಿ ಹೇಳುತ್ತಾಳೆ ಚಿನ್ನದ ಭಕ್ಷಕರಾದವರು ರಾಕ್ಷಸರಾಗುತ್ತಾರೆ ಸಾಮ್ರಾಜ್ಯಶಾಹಿಯ ಆಸೆ ಬಡುಕತನಕ್ಕೆ ಬುಡಕಟ್ಟು ಜನಾಂಗದ ಪ್ರೀತಿ ಕುಸಿಯುವುದರ ಕುರಿತು ಯಾನ ಬೆಳಕು ಚೆಲ್ಲುತ್ತದೆ. ರಾಮನ ಆಯನದ ಹಿಂದಿನ ರಾಜಕೀಯಕ್ಕೆ ಸುಗ್ರೀವ ಬಲಿಯಾಗುತ್ತಾನೆ. ಋಷ್ಯಮೂಕ ಪರ್ವತದಲ್ಲಿ ಚಿನ್ನದ ಹುಚ್ಚಿನಲ್ಲಿ ಕುಟುಂಬಗಳು ಛಿದ್ರವಾಗುತ್ತವೆ.
ಆರ್.ವಿ.ಯವರ ಮಕ್ಕಳ ನಾಟಕಗಳು ಮಕ್ಕಳ ರಂಗಭೂಮಿಯಲ್ಲೊಂದು ಸೂಕ್ತ ಮಧ್ಯ ಪ್ರವೇಶಿಕೆ ಎನಿಸುತ್ತದೆ. ಒಂದೆಡೆ ಮಕ್ಕಳ ರಂಗಭೂಮಿ ಇನ್ನೂ ಕಲ್ಪಕತೆ ಭ್ರಾಮಕ ಅಂಶ. ಸುಳ್ಳು ನೀತಿ, ಮನರಂಜನೆ ಇವಿಷ್ಟನ್ನೆ ಅವಲಂಬಿಸಿ ಬೆಳೆಯುತ್ತಿದ್ದರೆ ಇನ್ನೊಂದೆಡೆ ಶಿಕ್ಷಣದಲ್ಲಿ ರಂಗಭೂಮಿ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ರಂಗಭೂಮಿ ಕುರಿತ ಕನಿಷ್ಠ ಜ್ಞಾನವೂ ಇಲ್ಲದ ತೀರ ಜಾಳು ಜಾಳಾದ ಪ್ರಯೋಗಗಳಿವೆ. ಈ ಮಧ್ಯೆ ಪಾಠವೂ ಆಗುವ ನಾಟಕವೂ ಆಗ ಬೇಕಾದ ಗಂಭೀರ ಹೊಣೆಗಾರಿಕೆ, ಸಾಮಾಜಿಕ ಜವಾಬ್ದಾರಿ. ಮಕ್ಕಳ ಲೋಕ ಗ್ರಹಿಕೆಯ ಹಿನ್ನೆಲೆಯಲ್ಲಿ ಆರ್.ವಿ.ಯವರ ನಾಟಕ ಮಹತ್ವ ಪಡೆಯುತ್ತವೆ. ಅವರ ನಾನು ಗಾಂಧಿ ಆಗ್ತೇನೆ, ಬೆಳಕು ಹಂಚಿದ ಬಾಲಕ, ಬೆಳಕಿನೆಡೆಗೆ, ಪ್ರೀತಿಯ ಕಾಳು ನಾಟಕಗಳು ನಿಸ್ಸಂದೇಹವಾಗಿ ಕನ್ನಡದ ಮಕ್ಕಳ ನಾಟಕಗಳಲ್ಲಿಯೇ ಮೇಲ್ಪಂಕ್ತಿಯಲ್ಲಿವೆ.

ಮಕ್ಕಳ ರಂಗಭೂಮಿ ಎಂದರೆ ಹೀಗಿರಬೇಕು ಎಂದು ತಮ್ಮ ನಾಟಕದ ಮುನ್ನುಡಿಯಲ್ಲಿ ಆರ್.ವಿ. ಹೇಳುತ್ತಾರೆ. ಮಕ್ಕಳ ನಾಟಕ ಚಿಕ್ಕದಾಗಿರಬೇಕು ಸಂಭಾಷಣೆ ಚುರುಕಾಗಿರಬೇಕು. ನಟನೆಗೆ ಅನುಕೂಲವಾಗಿರಬೇಕು. ಹೆಚ್ಚು ಮಕ್ಕಳು ಭಾಗವಹಿಸುವಂತಿರಬೇಕು. ರಂಗ ರಚನೆಯಲ್ಲಿ ಸುಲಭ ತಾಂತ್ರಿಕ ಸೌಲಭ್ಯವಿರಬೇಕು. ಕತೆ ಇರಬೇಕು. ರಸಭಾವಗಳು ವಯಸ್ಸಿಗೆ ತಕ್ಕದ್ದಿರಬೇಕು ಕೊನೆಗೆ ನಾಟಕ ಶೈಕ್ಷಣಿಕವೂ ಇರಬೇಕು ಎಂಬುದು ಮುಖ್ಯ. ಅವರ ನಾಟಕಗಳು ಇವೆಲ್ಲ ಲಕ್ಷಣಗಳನ್ನು ಹೊಂದಿಯೂ ಅವನ್ನು ಮೀರಿ ಬೆಳೆದದ್ದೂ ಉಂಟು.

ಅವರ ನಾಟಕದಲ್ಲಿ ಮನುಷ್ಯನ ದೌರ್ಬಲ್ಯವನ್ನು ಮೀರಲು ನೆರವಾಗುವುದು. ಹಕ್ಕಿ ಮತ್ತು ಕನಸಿನ ರೂಪಕಗಳು. ಜತೆಗೆ ವಾಸ್ತವದ ದರಿದ್ರತೆಯನ್ನು ಮೀರಲು ಕನಸುಗಳು ನೆರವಾಗುತ್ತದೆ. ಈ ಕನಸುಗಳಾದರೋ ಆಗಸದಲ್ಲಿ ತೇಲುವ ಭ್ರಮೆಗಳಲ್ಲ ; ಮನಸ್ಸಿನಲ್ಲೇ ಮೊಳೆತು ಬದುಕುವಂತವು. ಹಕ್ಕಿಗಳು ಬಲೆಯು, ಕೊಲ್ಲುವವರೂ ಕಾಯುವವರೂ, ಬಣ್ಣದ ಹಕ್ಕಿ, ಬೆಳಕಿನೆಡೆಗೆ ಈ ಎಲ್ಲಾ ನಾಟಕಗಳಲ್ಲೂ ಈ ಅಂಶ ತುಂಬ ಸುಂದರವಾಗಿ ಮೂಡಿ ಬಂದಿದೆ.
ಇತ್ತೀಚೆಗೆ ಬಿಡುಗಡೆ ಆದ ಹೂವಿನೊಡನೆ ಮಾತುಕತೆ ಎನ್ನುವ ಮಕ್ಕಳ ಕಥಾ ಸಂಕಲನದಲ್ಲಿ ಪುಟ್ಟಿ ಕನಸಿನಲ್ಲಿ ಪುಟ್ಟಿ ಹೂವನ್ನು ಕೇಳುತ್ತಾಳೆ
ಬಿಂಬಿ ಯಾಕೆ ಬಂದಿತ್ತು?
ಮಕರಂದ ತಿನ್ನಲು
ನೀನು ಯಾಕೆ ಅವಕ್ಕೆಲ್ಲ ಮಕರಂದ ಕೊಡುತ್ತೀ?
ನಿಮ್ಮ ಮನೆಗೆ ಬಂದವರಿಗೆ ನೀವು ಕುಡಿಯಲು ನೀರು ಕೊಡುವದಿಲ್ಲವೆ?
ಓಹೋ ಹಾಗೋ? ಹೀಗೆ ಮನವನ್ನು ಉನ್ನತೀಕರಿಸಲು ಆರ್.ವಿ. ಪ್ರಯತ್ನಿಸುವುದು ಹೀಗೆ.
ಆರ್.ವಿ. ಯವರ ನಾಟಕಗಳಲ್ಲಿಯ ಚಳುವಳಿಗಳಲ್ಲಿ ಮಂಚೂಣಿಯಲ್ಲಿರುವವರೆಲ್ಲ ಹೆಣ್ಣು ಮಕ್ಕಳೇ ಆಗಿದ್ದಾರೆ. ಗಂಡಸರ ಚಿನ್ನದ ವ್ಯಾಮೋಹವನ್ನು ಮೀರಿ ಪ್ರೀತಿಯನ್ನು ಚಿಗುರೊಡೆಸಲು ಹೆಣ್ಣು ಮಕ್ಕಳೇ ಕಾರಣರಾಗುತ್ತಾರೆ. ಆರ್.ವಿ.ಯವರ ಪ್ರೊಪೆಗಂಡ ಸಹ ಇದೇ ; ಪರಿಧಿಯಲ್ಲಿರುವವರನ್ನು ಕೇಂದ್ರಕ್ಕೆ ತರುವದು. ಪಾತು ಸಾತುವಿಗೂ ಓದು ಕಲಿಸುವದು
ಅವರ ನಾಟಕದ ಮಾತಿನಲ್ಲಿಯ ಚಲನೆಯ ಗತಿಗೆ ಸಂಬಂಧಿಸಿದಂತೆ ಒಂದು ಉದಾಹರಣೆ ನೋಡಬಹುದು. ಮುದುಕನೂ ಹುಲಿಯೂ ನಾಟಕದಲ್ಲಿ ಆರಂಭದಲ್ಲಿ ಅಜ್ಜ ಮತ್ತು ಮೊಮ್ಮಕ್ಕಳ ಸಂಭಾಷಣೆ ಹೀಗಿದೆ.

ಅಜ್ಜ, ಅಜ್ಜ ಎಲ್ಲಿಗೆ
ತಿರುಪತಿ ಯಾತ್ರೆಗೆ
ಅಜ್ಜ ನಾವು ಬರ್ತೀವಿ
ನಿನ್ನ ಹಿಂದೆ ಬರ್ತೀವಿ
ಬೇಡ ಬೇಡ ಮಕ್ಕಳೆ ಮನೆಗೋಗಿ ಮಕ್ಕಳೆ
ಅಜ್ಜ ನಾವು ಬರ್ತೀವಿ ನಿನ್ನ ಹಿಂದೆ ಬತರ್ಿವಿ
ಮಳೆಗಿಳೆ ಬಪ್ಪುದು ಮನೆಗೋಗಿ ಮಕ್ಕಳೆ
ಮಳೆಗಿಳೆ ಬಂದರೆ ಮರದ ಕೆಳಗೆ ನಿಲ್ತೀವಿ
ಚಳಿಗಿಳಿ ಆಗೂದು ಮನೆಗೋಗಿ ಮಕ್ಕಳೆ
ಚಳಿಗಿಳಿ ಆದರೆ ಹೊಡಚಲನ್ನು ಹಾಕ್ತೀವಿ
ಹುಲಿಗಿಲಿ ಬಪ್ಪುದು. .
 . .
ಅಷ್ಟರಲ್ಲಿ ಹುಲಿ ಕೂಗು ಕೇಳುತ್ತದೆ. ಪಂಜರದ ಹುಲಿ ಕಾಣುತ್ತದೆ. ನಾಡಿನಿಂದ ಕಾಡಿನ ಕಡೆಗಿನ ಅಜ್ಜನ ಪಯಣವೂ ಮುಗಿಯುತ್ತದೆ.
ನಾಟಕದಲ್ಲಿ ಬರುವ ಪದ್ಯದ ಸೊಗಸಿಗೊಂದು ಉದಾಹರಣೆಯಾಗಿ ಜಾಣಕೋಳಿ ನಾಟಕದ ಈ ಪದ್ಯ ನೋಡಬಹುದು
ಕತ್ತಲೆ ಕಂಬಳಿ ಮುಸುಕಲಿ ಮಲಗಿದ
ಭೂಮಿಯ ಕಣ್ಣು ತೆರೆಯುತಿದೆ
ಬೆಳಕಿನ ಗಾಳಿಯು ಮೆಲ್ಲನೆ ಬೀಸಿ
ಹೂಗಳ ಎದೆಯ ಬಿರಿಯುತಿದೆ
                                                                      ಡಾ.ಶ್ರೀಪಾದ ಭಟ್ಟ್

No comments:

Post a Comment