Monday 19 August 2013

ಖಾಲಿ ಕೊಡ (ನಾಟಕ)--ವಿಠ್ಠಲ ಭಂಡಾರಿ

ಖಾಲಿ ಕೊಡ (ನಾಟಕ)

         ಸುಮುಖಾನಂದ ಜಲವಳ್ಳಿಯವರು ಜಿಲ್ಲೆಯ ಹೊರಗಿದ್ದುಕೊಂಡೇ ಬರವಣಿಗೆ ಮತ್ತು ಪ್ರಕಾಶನದ ಕೆಲಸದಲ್ಲಿ ತಣ್ಣಗೆ ತೊಡಗಿಕೊಂಡವರು. ಎಂದೂ ಅವಕಾಶಕ್ಕಾಗಿ ಬೆನ್ನು ಹತ್ತಿದವರಲ್ಲ; ಅದಕ್ಕಾಗಿ ಕೊರಗುತ್ತಾ ಕುಳಿತವರಲ್ಲ. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಸಿಗಬೇಕಾದ ಮಾನ್ಯತೆ ಅವರನ್ನ ಇನ್ನೂ ಅರಸಿ ಬಂದಿಲ್ಲ ಎನ್ನವುದಂತೂ ಸತ್ಯ.

       ಉತ್ತರ ಕನ್ನಡದ ಹಿರಿಯ ಲೇಖಕರ ಇತ್ತೀಚಿನ ನಾಟಕ `ಖಾಲಿ ಕೊಡ' ಸಮಕಾಲೀನ ಸಮಾಜವನ್ನು ವಸ್ತುನಿಷ್ಟವಾಗಿ ವಿಶ್ಲೇಷಿಸುವಲ್ಲಿ ಯಶಸ್ವಿಯಾಗಿದೆ. ನಾಟಕ ರಚನೆಯಲ್ಲಿ ಜಲವಳ್ಳಿಯವರದು ಪಳಗಿದ ಕೈ. ಈಗಾಗಲೇ 5 ನಾಟಕಗಳು. ಎರಡು ದೃಶ್ಯ ರೂಪಕಗಳ ಸಂಕಲನ, ಸುಮಾರು 13 ಮಕ್ಕಳ ನಾಟಕಗಳು ಪ್ರಕಟವಾಗಿದೆ. ಮತ್ತು ಓದುಗರ ಮೆಚ್ಚುಗೆ ಗಳಿಸಿದೆ.
ಸಮಕಾಲೀನ ಸಂದರ್ಭದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನದ ಬಗ್ಗೆ ಲೇಖಕರಲ್ಲಿ ಹುಟ್ಟಿದ ಹೇಸಿಗೆ ಮತ್ತು ವಿಷಾದವೇ `ಖಾಲಿ ಕೋಡ'ದಲ್ಲಿ ತುಂಬಿಕೊಂಡಿದೆ. `ಖಾಲಿ ಕೋಡ' ಈ ದೇಶವನ್ನು ಆಳುತ್ತಿರುವ ರಾಜಕೀಯ ಪಕ್ಷಗಳನ್ನ ಪ್ರತಿನಿಧಿಸುತ್ತದೆ. ರಾಜಕಾರಣದಲ್ಲಿ ತುಂಬಿಕೊಂಡಿರುವ ಅಜ್ಞಾನ, ಅಪ್ರಾಮಾಣಿಕತೆ, ಅನುಭವದ ಕೊರತೆ, ಬ್ರಷ್ಠಾಚಾರಗಳ ಕುರಿತು ಈ ನಾಟಕ ವಿವರಿಸುತ್ತದೆ. ಅಭಿವೃದ್ಧಿಯ ಕನಸುಗಳೇ ಇಲ್ಲದ ಜನಸಾಮಾನ್ಯರ ಬಗ್ಗೆ ಪ್ರಾಮಾಣಿಕ ಕಾಳಜಿ ಇಲ್ಲದ ರಾಜಕಾರಣಿಗಳು ಖಾಲಿ ಕೋಡವಲ್ಲದೆ  ಇನ್ನೇನು ಅಲ್ಲ . ಇಂತವರ ವಿರುದ್ಧ ಪ್ರತಿಭಟಿಸಬೇಕಾಗಿದೆ; ಜನಚಳುವಳಿ ರೂಪಿಸ ಬೇಕಾಗಿದೆ ಎನ್ನುವ ಆಶಯ ವ್ಯಕ್ತಪಡಿಸುತ್ತಾರೆ ಲೇಖಕರು.

       ನೀರಿಲ್ಲದೆ ಖಾಲಿ ಕೊಡ ಹಿಡಿದು ನಿಂತ ಜನಸಾಮಾನ್ಯರನ್ನು ಚುನಾವಣಾ ಉಮೇದುವಾರರು ಬೇಟಿ ಆಗುತ್ತಾರೆ. ತನಗೇ ಮತಕೊಟ್ಟರೆ ನೀರು ಕೊಡುವುದಾಗಿ ಹೇಳುತ್ತಾರೆ. ಹೇಗೆ, ನೀರು ಕೊಡುತ್ತೀರಿ ಎಂದು ಕೇಳಿದರೆ ಒಬ್ಬಾತ ಮೋಡಬಿತ್ತನೆ ಮಾಡುತ್ತೇವೆ ಎನ್ನುತ್ತಾನೆ, ಇನ್ನೊಬ್ಬ ಸಮುದ್ರದ ನೀರನ್ನೇ ಕಾಲುವೆಮಾಡಿ ಊರೂರಿಗೆ ಹರಿಸುತ್ತೇನೆ ಎನ್ನುತ್ತಾನೆ. ಅದು ಉಪ್ಪುನೀರಲ್ಲವೇ ಎಂದರೆ ವಿಜ್ಞಾನಿಗಳು ಅವನ್ನು ಸಿಹಿ ಮಾಡುತ್ತಾರೆ ಎನ್ನುತ್ತಾನೆ. ಮಗದೊಬ್ಬ ದೇವಾನು ದೇವತೆಗಳ ಮುನಿಸಿನ ಬಗ್ಗೆ ಮಾತನಾಡಿ ನೀವು ಹಣಕೊಡಿ ಯಾಗ ಮಾಡಿ, ಮಂತ್ರದಿಂದ ಮಳೆ ಹರಿಸುವುದಾಗಿ ಹೇಳುತ್ತಾನೆ. ಪುರೋಹಿತನೋಬ್ಬ ಕಪ್ಪೆ ಮದುವೆಮಾಡಿ ಮಳೆ ತರಿಸೋಣ ಅನ್ನುತ್ತಾನೆ. . . . . . . . ಹೀಗೆ ಹೀಗೆ ರಾಜಕಾರಣಿ, ಧರ್ಮರಕ್ಷಕ, ಪುರೋಹಿತ ಎಲ್ಲರೂ ಜನಸಾಮಾನ್ಯರನ್ನು ತಮ್ಮ ಸ್ವಾರ್ಥಕ್ಕಾಗಿ ಮೋಸಗೋಳಿಸಲು ಮುಂದಾದವರೆ. ಬದಲಾಗಿ ಮಳೆಬರದಿರಲು ಇರುವ ವೈಜ್ಞಾನಿಕ ಕಾರಣ ಅರಿಸಲಾರದ ಮೂರ್ಖರು!

        ಮಳೆ ಬರುತ್ತದೆ; ನೆರೆಹಾವಳಿ, ಜನರ ಮನೆಯನ್ನೂ, ಬದುಕನ್ನೂ ಕೊಚ್ಚಿಕೊಂಡು ಹೋಗುತ್ತದೆ. ಮತ್ತೆ ಅಲ್ಲಿ ರಾಜಕಾರಣಿಗಳು, ನೆರೆ ಸಂತ್ರಸ್ತರ ನಿಧಿ ಸೇರಿಸುವವರು ಹಾಜರು. ಬಂದ ನಿಧಿಯಲ್ಲಿ ಅರ್ದ ನೆರೆ ಪರಿಹಾರಕ್ಕೆ ಹೋದರೂ ಇನ್ನು ಅರ್ಧ ಉಳಿಯುತ್ತದಲ್ಲ. ಕೊಟ್ಟವರೇನು ಲೆಕ್ಕ ಕೇಳುತ್ತಾರೆಯೆ ಎಂದು ನಿಧಿ ಸೇರಿಸಿ ಜನರಿಗೆ ಮೋಸ ಮಾಡುತ್ತಾರೆ. ಜನ ಎಚ್ಚೆದ್ದು ಪ್ರತಿಭಟನೆ ಮಾಡುತ್ತಾರೆ. ಅಲ್ಪ ಸ್ವಲ್ಪ ನ್ಯಾಯ ಸಿಗುತ್ತದೆ.

      ಕರ್ನಾಟಕದಲ್ಲಿ ನಡೆದದ್ದೂ ಇದೇ ಅಲ್ಲವೆ. ಅಜ್ಜಿಯ ಚಿತೆಯಲ್ಲಿ ಬೀಡಿ ಹಚ್ಚಿಕೊಂಡಂತೆ. ನೆರೆ ಪರಿಹಾರ ನಿಧಿಗೆ ಯಾವ ಲೆಕ್ಕವೂ ಇಲ್ಲ. ಮನೆ ಕಳಕೊಂಡವರಿಗೆ ಮನೆಯೂ ಇಲ್ಲ. ಮತ್ತೆ ಮಳೆಗಾಲ .. ... ಕಾಯರ್ಾಚರಣೆಗೆ, ಇನ್ನೊಂದು ನೆರೆಹಾವಳಿಗೆ ಕಾಯುತ್ತಿದ್ದಾರೆ.

     ಹೀಗೆ ಸದ್ಯದ ರಾಜಕಾರಣವನ್ನು ವಿಮಶರ್ಿಸುವ ಈ ನಾಟಕದಲ್ಲಿ ಭಾಷಾ ಬಳಕೆಯಲ್ಲಿಯೂ ಕೂಡ ವ್ಯಂಗ್ಯ, ವಿಡಂಬನೆ ಎದ್ದು ಕಾಣುತ್ತದೆ. ಶಾಲಾ ಕಾಲೇಜಿನಲ್ಲಿ ಬೀದಿ ನಾಟಕವಾಗಿ, ರಂಗನಾಟಕವಾಗಿ ಅತ್ಯಂತ ಸರಳ ರಂಗ ಸಜ್ಜಿಕೆಯಲ್ಲಿಯೂ ಕೂಡ ಆಡಬಹುದುದಾಗಿದೆ.

ವಿಠ್ಠಲ ಭಂಡಾರಿ

No comments:

Post a Comment