ಸಂಜೆಯ ತಂಪು
ಗಾಳಿ ಮೆಲ್ಲನೆ ಒಳಗೆ
ಮೋಡದ ಚಾದರ ಹೊದೆದು
ಮಲಗಿದ್ದಾನೆ ಸೂರ್ಯ ಬಾನಂಚಿನಲ್ಲಿ
ಮಿಂಚು ಗುಡುಗು ಆಗಸಕ್ಕೆ
ಮಳೆಯ ನೆನಪು ಮಾಡಿಕೊಡಲಿ
ಇಳಿಯಲಿ ಮಳೆ
ಕತ್ತಲಲ್ಲಿ
ನೆಲಮುಗಿಲುಗಳು ಒಂದೇ
ಹಾಸಿಗೆಯಲ್ಲಿ ಪವಡಿಸಲಿ
ಹಸಿರ ಉಸಿರಲಿ ಭೂಮಿ
ನಲಿದಾಡಲಿ ಜತೆಗೆ
ಆರಲಿ ಹೊತ್ತಿದ ಬೆಂಕಿ
ಚಾಕು ಚೂರಿಗಳಿಗೆ ತೇವ ತಗುಲಿ
ಜಂಗು ಹಿಡಿಯಲಿ
ಉಕ್ಕಿ ಹರಿವ ನೆರೆಯಲ್ಲಿ
ಕೊಚ್ಚಿ ಹೋಗಲಿ ಟ್ಯಾಂಕರುಗಳು
ಯುದ್ಧ ವಿಮಾನಗಳು ಮೋಡಕ್ಕೆ ಢಿಕ್ಕಿ ಹೊಡೆದು
ಉರುಳಲಿ ಗೊಬ್ಬರವಾಗಿ ಮರಕೆ. . . . .
ಬರಬಹುದು ಮಳೆ
ನೆರೆ
ಗಾಳಿ ಬೀಸಬಹುದು ಆದರೆ
ಇವುಗಳಿಗೆಲ್ಲಾ ಏನೂ ಆಗುವುದಿಲ್ಲ
ಬೆಚ್ಚಗಿರುತ್ತವೆ ಬೆಂಕಿ ಉಗುಳುವುದೆಲ್ಲಾ
ಪ್ರೀತಿಯ ಕಣ್ಣುಗಳು ಮಾತ್ರ
ಒದ್ದೆಯಾಗುತ್ತವೆ.
No comments:
Post a Comment