Monday 19 August 2013

ವಿ.ಜೆ. ನಾಯಕರ 'ಕಾಲ್ನಡಿಗೆ ಪಯಣ' - ವಿಠ್ಠಲ ಭಂಡಾರಿ

ವಿ.ಜೆ. ನಾಯಕರ 'ಕಾಲ್ನಡಿಗೆ ಪಯಣ' 
ಚರಿತ್ರೆಯೊಂದಿಗೆ ಅರ್ಥ ಪೂರ್ಣ ಮುಖಾಮುಖಿ

ನಮ್ಮ ನಡುವಿನ ಸಂವೇದನಾಶೀಲ ವ್ಯಕ್ತಿ ವಿ.ಜೆ.ನಾಯಕರ ಇತ್ತೀಚಿನ ಪುಸ್ತಕ 'ಕಾಲ್ನಡಿಗೆ ಪಯಣ' ಚರಿತ್ರೆಯೊಂದಿಗೆ ಅರ್ಥಪೂರ್ಣ ಮುಖಾಮುಖಿಯೇ ಆಗಿದೆ. ಒಂದೇ ಹೊತ್ತಿನಲ್ಲಿ ಲೇಖಕರ ಒಳ ತುಡಿತವನ್ನು ಮುಕ್ಕಾಲು ಶತಮಾನಗಳ ಕಾಲ ಜಿಲ್ಲೆಯಲ್ಲಿ ನಡೆದ ರಾಜಕೀಯ ಸಾಂಸ್ಕೃತಿಕ ಪಲ್ಲಟವನ್ನೂ ವಸ್ತುನಿಷ್ಟವಾಗಿ ವಿವರಿಸುತ್ತದೆ. ಇದು ವಿ.ಜೆ. ನಾಯಕರ ಕಾಲ್ನಡಿಗೆಯಷ್ಟೇ ಅಲ್ಲ, ಚರಿತ್ರೆಯ ಒಡಲೊಳಗೆ ಓದುಗರ ಕಾಲ್ನಡಿಗೆ. ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ದ ಶಿಕ್ಷಕನೊಬ್ಬ ಪ್ರತಿಯೊಂದು ಸಂಗತಿಯನ್ನು ಬೆರಳಿಟ್ಟು ತೋರಿಸುತ್ತಾ ವಿವರಿಸುತ್ತಾ ಮುನ್ನಡೆವಂತೆ ವಿ.ಜೆ.ನಾಯಕರು ಕನ್ನಡ ಚರಿತ್ರೆಯ ಘಟ್ಟಗಳನ್ನು, ಸತ್ಯಗಳನ್ನು ಬೆರಳಿಟ್ಟು ವಿವರಿಸುತ್ತಾರೆ. 3 ಹೆಜ್ಜೆ ಇಟ್ಟು ಮುಗಿಯುವುದರೊಳಗೆ  ಅಂಕೋಲೆಯನ್ನು ಕೇಂದ್ರವಾಗಿಟ್ಟುಕೊಂಡಜಿಲ್ಲೆಯ ಮುಕ್ಕಾಲು ಶತಮಾನಗಳ ಸಾಮಾಜಿಕ, ರಾಜಕೀಯ,ಆಥರ್ಿಕ, ಶೈಕ್ಷಣಿಕ, ಸಾಂಸ್ಕೃತಿಕ ಪಯಣ ಸಾರ್ಥಕ ಪಯಣವಾಗುತ್ತದೆ.

     ಹಾಗೆ ನೋಡಿದರೆ  ಇದು ವಿ.ಜೆ. ನಾಯಕರ  ಆತ್ಮ ಕಥಾನಕದ ಟಿಪ್ಪಣೆಗಳು. ಆದರೆ 3-4 ಅಧ್ಯಾಯಗಳು ಮಾತ್ರ ಅವರ ಖಾಸಗೀ ಬದುಕಿನ ಬಗ್ಗೆ (ಸೂಕ್ಷ್ಮವಾಗಿ  ಹೊರಟರೆ ಅದೂ ಖಾಸಗೀ ಸಂಗತಿಗಳಾಗಿ ಉಳಿದಿಲ್ಲ. ಶೈಕ್ಷಣಿಕವಾಗಿ ಆಗತಾನೆ ತೆರೆದುಕೊಳ್ಳುತ್ತಿರುವ, ಶಿಕ್ಷಣದ  ಪರಿಣಾಮದಿಂದಾಗಿ ಪ್ರಗತಿಪರವಾದ ಬದಲಾವಣೆಗೆ ಸ್ಪಂಧಿಸುತ್ತಿರುವ ಒಂದು ವಿಶಿಷ್ಟ ಕುಟುಂಬದ ಸಮಾಜ ಶಾಸ್ತ್ರೀಯ ಅಧ್ಯಯನವೂ ಆಗಿದೆ.) ಇದ್ದರೆ  ಉಳಿದೆಲ್ಲ ಭಾಗಗಳು ಇದರಾಚೆಯೇ ಇದೆ. ಇದು ವಿ.ಜೆ.ನಾಯಕರ ಆತ್ಮಕಥನದಿಂದ ಪ್ರಾರಂಭವಾದರೂ ಅದು ಅಂಕೋಲೆಯ ಆತ್ಮಕಥನವಾಗಿ ಮಾರ್ಪಡುವುದು. ಅಂಕೋಲೆಯಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿ, ರೈತ ಚಳುವಳಿ, ಶೈಕ್ಷಣಿಕ ಚಳುವಳಿಯ ಆತ್ಮಕಥನವಾಗಿ ಮಾರ್ಪಡುವುದು ಈ ಪುಸ್ತಕದ ಮಹತ್ವವನ್ನು ಇಮ್ಮಡಿಗೊಳಿಸಿದೆ.

ಇನ್ನೂರು ಪುಟಗಳ ಆಸು-ಪಾಸಿನಲ್ಲಿ ವಿ.ಜೆ.ನಾಯಕರು 'ವಿಠೋಬ'(ಚಾಲ್ತಿಯಲ್ಲಿ ಇಟೋಬ) ಎನ್ನುವ ತನ್ನ ಹೆಸರು 'ಜೋಗಿ' ಎನ್ನುವ ತಂದೆಯ ಹೆಸರು ಬಾಲ್ಯದಲ್ಲಿ  ಉಂಟುಮಾಡಿದ ಕಿರಿಕಿರಿಯಿಂದ ಪ್ರಾರಂಭಿಸಿ ತನ್ನ ಬಾಲ್ಯದ  ಶಿಕ್ಷಣ, ಅಪರೂಪದ ಶಿಕ್ಷಕ ವೃಂದ, ಯಕ್ಷಗಾನದ ನಂಟು, ತನ್ನ ಸಮಾಜದಲ್ಲಿ ಗಳಿಸಿದ ಮೊದಲ ಪದವಿ, ವಿದ್ಯಾಥರ್ಿ ಜೀವನದಲ್ಲಿದ್ದ ಹಿಂಜರಿಕೆ, ಶಿಕ್ಷಕ ವೃತ್ತಿ, ಸಮಾಜವಾದಿ ಚಿಂತನೆಯಂಚಿಗೆ ಒಲವು, ದಿನಕರ ದೇಸಾಯಿಯವರ ಸಂಪರ್ಕ, ರೈತ ಹೋರಾಟದ ಸಂಪರ್ಕ, ಬಾಲ್ಯದಲ್ಲಿ ಕಂಡ ಸ್ವಾತಂತ್ರ್ಯಹೋರಾಟ , ಇಡೀ ಕುಟುಂಬವೇ ಸ್ವಾತಂತ್ರ್ಯ ಯಜ್ಞದಲ್ಲಿ ತೊಡಗಿದ್ದು, ಸತ್ಯಾಗ್ರಹ ಸ್ಮಾರಕ ಹೈಸ್ಕೂಲು ಕಟ್ಟಿದ್ದು,ಅಕಾಡೆಮಿ ಸದಸ್ಯತ್ವ, ಶಿಕ್ಷಕ ಪ್ರಶಸ್ತಿ, ರಾಜಕೀಯ ಮತ್ತು ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಸಮಾಜವಾದಿ ನಾಯಕರನ್ನು ಬೇಟಿ ಆಗಿದ್ದು,ಪಕ್ಷದ ಮುಖಂಡರಾಗಿದ್ದು ಚುನಾವಣೆಯ ಒಳ ಹೊರಗು, ಸಮಾಜವಾದಿ ಆಂದೋಲನದ ಕೊನೆ ಇತ್ಯಾದಿಗಳ ಬಾವುಕ ವಿಶ್ಲೇಷಣೆ ಒಂದೆಡೆಯಾದರೆ, ತಂದೆ ಜೋಗಿನಾಯಕ, ಶತಾಯುಶಿ ಜೋಗಿ ಬೀರಣ್ಣ ನಾಯಕ,ಹೋರಾಟಗಾರ ಶಂಕರ ಕೇಣಿ, ಬಡತನವನ್ನೇ ಹಾಸಿಹೊದೆದು ಬರೆದ ಪತ್ರಕರ್ತ ಅಮ್ಮೆಂಬಳ ಆನಂದ ಖಾಸಗೀ ಗೆಳೆಯ ಶಾಂತಾರಾಮ ನಾಯಕ ಹಿಚ್ಕಡ, ಅಂಕೋಲೆಗೆ ಗಾಂಧೀಜಿ ಬಂದಾಗ ಮಾಲೆಹಾಕಿ  ಸ್ವಾಗತಿಸಿದ, ಅವರು ಸಹಿಹಾಕಿಕೊಟ್ಟ ಪುಸ್ತಕವನ್ನು ಆಗಾಗ ತೆರೆದು ತೋರಿಸುತ್ತಿರುವ ಸುಕ್ರು ಮಾಸ್ತರ...... ಹೀಗೆ ಹಲವರ ವ್ಯಕ್ತಿತ್ವ ವಿಶ್ಲೇಷಣೆ ಮತ್ತು ಅವರೊಂದಿಗಿನ ಆತ್ಮೀಯ ಸಂಬಂಧದ ಜೊತೆ ತೆರೆದುಕೊಳ್ಳುವ ಜಗತ್ತು ಇನ್ನೊಂದೆಡೆ ತೀರಾ ವಿಸ್ತಾರವಾದ ಸಂಘರ್ಷಮಯ ಜಗತ್ತು ಇದು.
ಈ ತಲೆಮಾರಿಗೆ ಇದು ಹೊಸದು, ಹೋರಾಟ ಮರೆತಿರುವ ಯುವಜನ, ಹೋರಾಟದಿಂದ ನಾಡು ಕಟ್ಟಿದ ಪ್ರಜ್ಞೆ ಕಳೆದುಕೊಂಡ ಜನಪ್ರತಿನಿಧಿಗಳು ಅವಶ್ಯವಾಗಿ ಇದನ್ನು ಓದಬೇಕು. ಬೇಟಿ ಆದಾಗೆಲ್ಲಾ ಜಿಲ್ಲೆಯ ಇಂದಿನ ರಾಜಕಾರಣದ ಕುರಿತು ನಿರಾಶಾವಾದದಿಂದ ಮಾತನಾಡುತ್ತಲೇ, ಯುವಜನರು ಮತ್ತೆೆ ನಾಡುಕಟ್ಟುವ ವೀಳ್ಯ ಸ್ವೀಕರಿಸಬೇಕು; ಸ್ವೀಕರಿಸ್ಯಾರು ಎಂಬ ಆಶಾವಾದವನ್ನು ಒಡಲೊಳಗೆ ತುಂಬಿಕೊಂಡಿರುವ ವಿ.ಜೆ.ನಾಯಕರ ಒಳ ಸಂಘರ್ಷಗಳು ಈ ಕೃತಿಯನ್ನು ರೂಪಿಸಿದೆ ಎಂದುಕೊಂಡಿದ್ದೇನೆ.

      'ಶಿಕ್ಷಣ-ಸಂಘಟನೆ-ಪರಿವರ್ತನೆ'ಈ ಮೂರು ಅಂಶಗಳು 'ಕಾಲ್ನಡಿಗೆ ಪಯಣ'ದಲ್ಲಿ ಅಂತರ್ವಾಹಿನಿಯಾಗಿ ಹರಿದಿದೆ. ಈ ಮೂರು ಅಂಶಗಳು ಒಂದಕ್ಕೊಂದು ಪೂರಕವಾಗಿ ಪ್ರವಹಿಸಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಈ ನೆಲದ್ದು. ಆದರೆ ಇಲ್ಲಿ ಶಿಕ್ಷಣ ಮತ್ತು ಸಂಘಟನೆ'ಗಳು ಗುಣಾತ್ಮಕವಾದ ಬೆಳವಣಿಗೆ ಇದ್ದಿತ್ತಾದರೂ ಅದು 'ಪರಿವರ್ತನೆ'ಗೆ ಸಾಕಾಗುವಷ್ಟಿರಲಿಲ್ಲ. ಬಹುಶಃ ಇದಕ್ಕೆ ಪರಿವರ್ತನೆಯ ಕುರಿತು ಶಿಕ್ಷಣ ಮತ್ತು ಸಂಘಟನೆಗಳಿಗಿರುವ ಸೈದ್ಧಾಂತಿಕ ತಿಳುವಳಿಕೆ(ಸ್ಪಷ್ಟತೆಯ)ಕೊರತೆ ಇರಬಹುದು.

ಶಿಕ್ಷಣದ ಕುರಿತಂತೂ ಲೇಖಕರ ಒಲವು ಸ್ತುತ್ಯಾರ್ಹ. ಶಾಲೆಗೆ ಸ್ಥಳ ಒದಗಿಸುವುದು, ಶಾಲೆ ಕಟ್ಟುವುದು, ಸಾಕ್ಷರತೆ,ವೃತ್ತಿ ಶಿಕ್ಷಣ,ಗ್ರಂಥಾಲಯ ಇತ್ಯಾದಿಗಳಿಗೆ ಬದುಕಿನ ಬಹುಭಾಗವನ್ನು ಮೀಸಲಿಟ್ಟಿದ್ದಾರೆ. ಅತ್ಯುತ್ತಮ ಶಿಕ್ಷಕರೆಂದು ರಾಷ್ಟ್ರಪ್ರಶಸ್ತಿ ಗಳಿಸಿದ ಲೇಖಕರು ಶಿಕ್ಷಕರ ಜವಾಬ್ದಾರಿಯನ್ನು ಹೀಗೆ ಗುರುತಿಸಿದ್ದಾರೆ. ಶಿಕ್ಷಕನಾದವನು ಸಾಮಾಜಿಕ, ಸಾಹಿತ್ಯಿಕ,ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು.ಅವನು ಇತರರಿಗಿಂತ ಹೆಚ್ಚು ರಾಜಕೀಯ ಪ್ರಜ್ಞೆಉಳ್ಳವನಾಗಬೇಕು ಎಂದು ನಾನು ನಂಬಿದ್ದೇನೆ. ಯಾವ ಶಿಕ್ಷಕನು ರಾಜಕೀಯ,ಸಾಮಾಜಿಕ,ಸಾಂಸ್ಕೃತಿಕ ಸಾಹಿತ್ಯದ ವಿಷಯದಲ್ಲಿ ಒಲವು ತಿಳುವಳಿಕೆ, ಅಭಿರುಚಿಗಳನ್ನು ಬೆಳಸಿಕೊಂಡಿರುವುದಿಲ್ಲವೋ,ಅವನು ವರ್ಗದ ಕೋಣೆಯಲ್ಲಿ ಎಷ್ಟೇ ಉತ್ತಮ ಶಿಕ್ಷಕನಾಗಿರಲಿ ಅದರಿಂದ ಏನೂ ಪ್ರಯೋಜನ ಇಲ್ಲ.ಎಂದು ನನ್ನ ನಂಬಿಕೆ.(ಪು-183)ಎನ್ನುವ ಮಾತು ಶಿಕ್ಷಕರ ಜವಾಬ್ದಾರಿ ಗುರುತಿಸುವಲ್ಲಿ ಮಹತ್ವಪೂರ್ಣವಾದದ್ದಾಗಿದೆ.(ಸ್ವತಃ ವಿ.ಜೆ.ನಾಯಕರು ಹೀಗೆಯೇ ವೈವಿಧ್ಯಮಯವಾಗಿ ಬದುಕಿದ್ದನ್ನು ಆತ್ಮಕತೆ ತೆರೆದಿಡುತ್ತದೆ.) ಹಾಗಾಗಿಯೇ ಅವರು ಸಾಹಿತಿ,ಒಡನಾಡಿ ಹಿಚ್ಕಡ ಶಾಂತಾರಾಮ ನಾಯಕರ ಬಗ್ಗೆ ಬರೆಯುವಾಗ,(ಶಾಂತಾರಾಮ ಕ್ಲಾಸ್ ರೂಮಿನಲ್ಲಿ ಚೆನ್ನಾಗಿ ಪಾಠಮಾಡಬಲ್ಲವನಷ್ಟೇ ಅಲ್ಲ ಸಾಮಾಜಿಕ ಪ್ರಜ್ಞೆ ಮತ್ತು ಹೊಣೆಗಾರಿಕೆ ಉಳ್ಳ ಒಬ್ಬ ಪರಪೂರ್ಣ ಶಿಕ್ಷಕನಾಗಿದ್ದಾನೆ.ಪು.189), ಡಾ.ಆರ್.ವಿ,ಭಂಡಾರಿಯವರ ಬಗ್ಗೆ ಬರೆಯುವಾಗ (ಆರ್.ವಿ.ಭಂಡಾರಿಯವರು ಸಾಮಾಜಿಕ ಕಳಕಳಿಯ ತೀವ್ರ ಸಂವೇದನಾಶೀಲ ವ್ಯಕ್ತಿ. ಅನ್ಯಾಯದ ವಿರುದ್ಧ ಪ್ರತಿಭಟನೆಗೆ ನಿಂತ ಕಾಲ ಮೇಲೆ ಸಿದ್ಧ. ಒಬ್ಬ ಶಾಲಾಶಿಕ್ಷಕ ಹೇಗಿರಬೇಕು ಎಂದು ಕೇಳಿದರೆ ಶ್ರೀ ಆರ್.ವಿ.ಭಂಡಾರಿಯವರ ಹಾಗಿರಬೇಕು ಎಂದು ಖಂಡಿತವಾಗಿ ಹೇಳುತ್ತೇನೆ. ಶಿಕ್ಷಕರಾಗಿ ತನ್ನ ಹೊಣೆಗಾರಿಕೆ ಏನು ಎನ್ನುವುದನ್ನು ಅವರಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡವರು ಬಹಳಷ್ಟು ಕಡಿಮೆ-ಪು.203), ಅಗೇರರಿಗಾಗಿ ಮೊದಲು ಶಾಲೆ ತೆರೆದ ಸುಕ್ರು ಮಾಸ್ತರರ ಬಗ್ಗೆ ಬರೆಯುವಾಗ (ಅಸ್ಪೃಶ್ಯರಾದ ಅಗೇರ ಕುಟುಂಬದಲ್ಲಿ ಜನಿಸಿದ್ದರೂ ಸುಕ್ರುಮಾಸ್ತರರು ಇನ್ನಿತರ ಸಮಾಜದಲ್ಲಿಯೂ ಒಂದು ಗೌರವದ ಸ್ಥಾನವನ್ನು ಪಡೆದುಕೊಂಡಿದ್ದರು. ಏಕೆಂದರೆ ಅವರು ಶಿಕ್ಷಕರಾಗಿದ್ದರು.ಹೇಗೋ ಶಿಕ್ಷಕರಾಗುವಷ್ಟು ಶಿಕ್ಷಣ ಕಲಿತು ತನ್ನ ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ 1930ರ ದಶಕದಷ್ಟು ಹಿಂದೆಯೇ ನಮ್ಮೂರ ವಂದಿಗೆಯಲ್ಲಿ 'ಆಗೇರ ಶಾಲೆ'ತೆರೆದ ಸುಕ್ರು ಮಾಸ್ತರರ ಸಾಧನೆ ಕೌತುಕ ಪಡುವಂತದ್ದಲ್ಲವೆ?... ಉತ್ತಮ ಸಮಾಜ ಸೇವಕನಾಗಿ, ಶಾಲಾಶಿಕ್ಷಕನಾಗಿ ಯಕ್ಷಗಾನ ಕಲಾವಿದನಾಗಿ ಹೆಸರುವಾಸಿಯಾದ ಶ್ರೀಮಾನ್ ಸುಕ್ರುಮಾಸ್ತರರ ನೆನಪಿಗೆ ನಮನಗಳು(ಪು.152-53) ಲೇಖಕರು ಅವರ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿದ ಕಡೆಗೇ ಹೆಚ್ಚು ಒತ್ತು ಕೊಡುತ್ತಾರೆ. ಶಿಕ್ಷಕನೊಬ್ಬ ಶಾಲೆಯ ಶಿಕ್ಷಕನಾದರೆ ಸಾಲದು ಸಮಾಜಕ್ಕೇ ಶಿಕ್ಷಕನಾಗಬೇಕೆಂಬ ಆಸೆ ಅವರದು. ಆಕಾರಣಕ್ಕಾಗಿಯೇ ಅವರು 'ನಾನೇಕೆ ಶಿಕ್ಷಕನಾದೆ? ಎಂಬ ಲೇಖನವನ್ನೇ ಬರೆದಿದ್ದಾರೆ. ಆಡಳಿತಕ್ಕೆಂದು ಹೆಚ್ಚು ಒತ್ತುಕೊಟ್ಟಿದ್ದರಿಂದ ಒಳ್ಳೆಯ ಶಿಕ್ಷಕನಾಗುವುದರಿಂದ ವಂಚಿತನಾದ ಬಗ್ಗೆ ಸಣ್ಣ ಕೊರಗು ಅವರಲ್ಲಿ ಇದ್ದಂತಿದೆ. ಯಾವುದೇ ಸಂಗತಿ/ಸಂಘಟನೆಯನ್ನು ಹೀಗೆ ಹೇಳಿಬಿಡುವ ಪ್ರವೃತ್ತಿ ವಿ.ಜೆ.ನಾಯಕರದ್ದಲ್ಲ.ಅವನ್ನು ಆಯಾಕಾಲದ ಒತ್ತಡಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿಯೇ ಮುಂದೆ ಹೋಗುತ್ತಾರೆ. 'ಸ್ವಾತಂತ್ರ್ಯಸಮರ ಭೂಮಿಯಲ್ಲಿ ಹೈಸ್ಕೂಲು ಸ್ಥಾಪನೆ'; ಆಗೇರರ ಸಾಮಾಜಿಕ ಸ್ಥಿತಿಗತಿ ನಾನು ಕಂಡಂತೆ', ನಾಟಕ ಅಕಾಡೆಮಿ ಸದಸ್ಯನಾಗಿ...., 'ಮೂವರು ಸಮಾಜವಾದಿ ಗೆಳೆಯರು', ಕನರ್ಾಟಕದ ಮೊದಲ ರೈತ ಚಳುವಳಿ', ಜೋಡಿಯಾಟ ಮುಂತಾದ ಅಧ್ಯಾಯಗಳು ಇದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಅವರ ಸೈದ್ಧಾಂತಿಕ ಇತಿ-ಮಿತಿಗಳನ್ನೂ ಗುರುತಿಸಲು ಸಾಧ್ಯ.
ಅವರು ನಂಬಿದ ಸಿದ್ಧಾಂತದ ಬಗ್ಗೆ ಅತ್ಯಂತ ಪ್ರಾಮಾಣಿಕರಾಗಿರುವುದು(ಚಿಕ್ಕಂದಿನಿಂದ ಅವರನ್ನು ರೂಪಿಸಿದ ಲೋಹಿಯಾ ಸಮಾಜವಾದಿ ತಿಳುವಳಿಕೆ ಈವರೆಗೂ ಮುಂದುವರಿದದ್ದು, ಮತ್ತು ಆ ಹಿನ್ನೆಲೆಯಿಂದಲೇ ಸಮಾಜವನ್ನೂ ಕುಟುಂಬವನ್ನೂ ನೋಡುವುದು) ಮತ್ತು ಬದುಕಿನ ಮುಸ್ಸಂಜೆಯಲ್ಲೂ ಅವನ್ನು ಬದುಕಿನ ಭಾಗವಾಗಿಸಿಕೊಳ್ಳುವ ಕೆಚ್ಚು ಅವರ ವ್ಯಕ್ತಿತ್ವವನ್ನು ಆಪ್ತವನ್ನಾಗಿಸುತ್ತದೆ. ಉದಾ: ಜಡ ಸಂಪ್ರದಾಯಗಳನ್ನು ಬದುಕಿನ ಎಲ್ಲಾ ಕ್ಷೇತ್ರಗಳಿಂದಲೂ ತೊಡೆದು ಹಾಕಿ ಒಂದು ಹೊಸರೀತಿಯನ್ನು ಕಾಣಿಸಿದ ಹೊರತು ಬದುಕಿಗೆ ಚಲನಶೀಲತೆಯ ಗುಣ ಸಿಕ್ಕುವುದಿಲ್ಲ.. ಮರಣಾನಂತರ  ನನ್ನ ದೇಹವನ್ನು ಊರಿನ ಸ್ಮಶಾನದಲ್ಲಿ ನಮ್ಮ ತಂದೆಯವರ ವೃಂದಾವನದ ಹತ್ತಿರವೇ ಚಿತೆಗೆ ಏರಿಸುವುದು.... ಬ್ರಾಹ್ಮಣರು ಹೇಳಿಕೊಟ್ಟ ರೂಢಿಗತವಾದ ಯಾವ ಶ್ರಾದ್ಧ ಕಮರ್ಾದಿ ವಿಧಿ-ವಿಧಾನವನ್ನು ಅನುಸರಿಸುವುದು ಬೇಡ... ನನ್ನ ಚಿತಾಭಸ್ಮವನ್ನು ನನ್ನ ಬದುಕಿನ ಅತ್ಯಂತ ಮಹತ್ವದ ಕಾಲಾವಧಿಯನ್ನು ಸವೆಸಿದ ನನ್ನ ಶಾಲಾ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ನೆಲದಲ್ಲಿ....(ಪು.194-95)ಚೆಲ್ಲಿದರೆ ಸಾಕು ಎಂದು ಆಶಿಸುತ್ತಾರೆ. ಹೀಗೆ ಸಿದ್ಧಾಂತದ ಬಗ್ಗೆ ಪ್ರಾಮಾಣಿಕರಾಗಿರುವುದರಿಂದಲೇ 75ರ ಹೊಸ್ತಿಲಲ್ಲಿ ಯುವಕರ ಜೀವನೋತ್ಸಾಹ ಇಟ್ಟುಕೊಳ್ಳಲು ಸಾಧ್ಯ ಆಗಿದೆ.

    ಈ ಕೃತಿಯ ಇನ್ನೊಂದು ಮಹತ್ವದ ಅಂಶ ಅದರಲ್ಲಿ ಪ್ರಸ್ತಾಪಿತವಾದ ಚಾರಿತ್ರಿಕ ದಾಖಲೆಗಳು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಂಕೋಲಾ, ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡವರ ಹೆಸರುಗಳು, ಜನಸೇವಕ ಪತ್ರಿಕೆಯ ಪ್ರಾರಂಭ ಮತ್ತು ನಿಲುಗಡೆ,ನಾಡವರ ಪತ್ರಿಕೆ 'ಸುಧಾಕರ-ಯ ಪ್ರಸ್ತಾಪ, ಉ.ಕ.ಜಿಲ್ಲೆಯಲ್ಲಿ ಪ್ರಾರಂಭವಾದ ಶೈಕ್ಷಣಿಕ ಸಂಸ್ಥೆಗಳು, ಮತ್ತು ವರ್ಷ, ಯಕ್ಷಗಾನದ ಕುರಿತು ಕೆಲವು ಸಂಗಾತಿಗಳು, ಕಲಾವಿದರ ಹೆಸರು,ಅಂಕೋಲಾದ ರಾಜಕಾರಣದ ವಿವಿಧ ಘಟ್ಟಗಳು ಜಿಲ್ಲೆಯಲ್ಲಿ ಸಮಾಜವಾದ ಏಳುಬೀಳು...... ಹೀಗೆ ಹತ್ತು ಹಲವು ವಸ್ತುನಿಷ್ಠ ದಾಖಲೆಗಳು ಇಲ್ಲಿ ಲಭ್ಯ; ಯಾಕೆಂದರೆ ಇದ್ಯಾವುದೂ ಓದಿ ಬರೆದಿದ್ದಲ್ಲ; ಸ್ವತಃ ಪಾಲ್ಗೊಂಡು ಬರೆದದ್ದು ಎನ್ನುವುದಕ್ಕಾಗಿ.

ಆದರೆ ವಿ.ಜೆ.ನಾಯಕರು ಸಮಾಜವಾದದ ಸುದ್ದಿ ಬಂದಾಗೆಲ್ಲಾ ಹೆಚ್ಚು ಭಾವುಕರಾಗುತ್ತಾರೆ. ಇದರ ಬಗ್ಗೆ  ಹೇಳಿದಷ್ಟೂ ಸಾಲದು; ಮತ್ತೆ ಹೇಳೋಣವೆಂದು ಸಂದರ್ಭ ಸೃಷ್ಠಿಸಿಕೊಂಡು ಹೇಳುತ್ತಾರೆ.ಈ ಭಾವುಕತೆಯಿಂದಾಗಿಯೇ ಅವರು ಉ.ಕ.ಜಿಲ್ಲೆಯ ಸಮಾಜವಾದದ ಅವನತಿಯ ಹಿಂದಿನ ಕಾರಣವನ್ನು ಅರಸಲು ಪ್ರಯತ್ನಿಸದಂತೆ ತಡೆದಿದೆ. ಲೋಹಿಯಾ ಬಗ್ಗೆ ಅತಿ ಗೌರವ,ಪ್ರೀತಿ ಬೆಳೆಸಿಕೊಂಡ ಸಮಾಜವಾದವನ್ನು ಚೈತನ್ಯ ಪೂರ್ಣಗೊಳಿಸಿದ ಲೋಹಿಯಾ ನಿಜವಾಗಿಯೂ ಏಶಿಯಾದ ಪ್ರವಾದಿ ಎನ್ನಲಾಗಿದೆ.(ಪು.134) ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ದಿನಕರ ದೇಸಾಯಿಯವರ ಬಗ್ಗೆ ಬರೆಯುವಾಗಲೂ(ಕನರ್ಾಟಕದ ಮೊದಲ ರೈತ ಚಳುವಳಿ' ಮತ್ತು ಇತರೆ ಕೆಲವು ಲೇಖನದಲ್ಲ್ಲಿಯೂ) ಇದೇ ಭಾವುಕತೆ ಇದೆ. ದಿನಕರ ದೇಸಾಯಿಯವರನ್ನು ಮೊದಲ ಸತ್ಯಾಗ್ರಹಿ ಎಂದು  (ರೈತ ಹೋರಾಟ ಗಾರನೆಂದು ನಾನು ಅರ್ಥಮಾಡಿಕೊಂಡೆ) ಗುರುತಿಸುತ್ತಾರೆ. ಜಿಲ್ಲೆಯ ರೈತ ಹೋರಾಟವೆಂದರೆ ದೇಸಾಯಿಯವರ ಹೋರಾಟ ಮಾತ್ರ ಆಗಿರಲಿಲ್ಲ.ಇವರಿಗಿಂತ ಮೊದಲೇ ಜಿಲ್ಲೆಯಲ್ಲಿ ರೈತ ಹೋರಾಟ ಇತ್ತು; ಆ ನಂತರವೂ ಇದೆ. ವಿ.ಜೆ.ನಾಯಕರು ಅದನ್ನು ಮನಗೊಟ್ಟು ಚಚರ್ಿಸುವುದಿಲ್ಲ. ಅಂಕೋಲೆಯವರೇ ಆದ ಗಿರಿ ಪಿಕಳೆಯವರ ಬಗ್ಗೆ ಒಂದೆರಡು ಬಾರಿ  ಪ್ರಾಸಂಗಿಕವಾಗಿ ಬಂದಿದೆಯೇ ಹೊರತಾಗಿ ಮಹತ್ವಪೂರ್ಣ ಚಚರ್ೆ (ಅವರ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳ ಬಗ್ಗೆ) ನಡೆಸದಿರುವುದು ಯಾತಕ್ಕಿರಬಹುದು ಎಂಬ ಸಂಶಯ ಒಮ್ಮೆ ಮಿಂಚಿಮರೆಯಾಗಿಬಿಡುತ್ತದೆ.ಹೀಗೆ ಕೆಲವು ವ್ಯಕ್ತಿಗಳ ಕುರಿತಾದ, ಸಿದ್ಧಾಂತದ ಕುರಿತಾದ ಭಾವುಕತೆ ಕೆಲವು ಚಾರಿತ್ರಿಕ ಸತ್ಯವನ್ನೇ ಮರೆಮಾಚಿಬಿಡಬಹುದೆನ್ನುವ ಭಯ ನನ್ನದು.

ಈ ಪುಸ್ತಕದಲ್ಲಿ ವಿ.ಜೆ.ನಾಯಕರು ಸಮಾಜವಾದಿ ಪಕ್ಷದ(ಸೋಷಿಲಿಸ್ಟ್ ಪಾಟರ್ಿ) ಮಿತಿಗಳ ಕುರಿತು- ಆಗಲ್ಲದಿದ್ದರೂ ಈಗ ಅವನ್ನು ಸರಿಯಾಗಿ ಗುರುತಿಸಬಹುದು-ಎಲ್ಲೂ ಗಂಭೀರವಾಗಿ ವಿಶ್ಲೇಷಿಸಿಲ್ಲ. ಜಿಲ್ಲೆಯಲ್ಲಿ ಸಮಾಜವಾದಿ ಸಿದ್ಧಾಂತವನ್ನು ಬೇಳೆಸುವಲ್ಲಿ ದೇಸಾಯಿಯವರು ಪ್ರಮುಖರಾಗಿದ್ದರೊ ಹಾಗೆಯೇ ಅದು ಕೊನೆಗೊಳ್ಳುವಲ್ಲಿಯೂ ಅವರ ಪಾತ್ರ(ಉದ್ದೇಶಪೂರ್ವಕ ಎಂದು ನಾನು ಹೇಳುತ್ತಿಲ್ಲ) ಇದ್ದೇ ಇತ್ತು ವಿ.ಜೆ.ನಾಯಕರು ಗುರುತಿಸಿದಂತೆ ಸಮಾಜವಾದವು ಒಂದು ಚಾರಿತ್ರಿಕ ಕಾಲಘಟ್ಟದಲ್ಲಿ ಸಮಾಜದಲ್ಲಿ ಅಗತ್ಯವಾದ ಸಂಚಲನವನ್ನು ಮಾಡಿಸಿತು ಎನ್ನುವುದು ಹೌದಾದರೂ ಅಂದಿನ ಸಂದರ್ಭದಲ್ಲಿನ ಅದರ ಮಿತಿಯಿಂದಾಗಿ ಅದು ಬೆಳೆಯಬಹುದಾದ ಎತ್ತರಕ್ಕೆ,ವಿಸ್ತಾರಕ್ಕೆ  ಬೆಳೆಯಲಿಲ್ಲ ಎನ್ನುವುದೂ ಅಷ್ಟೇ ಮಹತ್ವದ ಅಂಶವಲ್ಲವೇ?.

ಹಾಗಾಗಿ ಲೇಖಕರು ತಮ್ಮ ಸ್ವಭಾವ ಸಹಜವಾದ ವಿನಯವನ್ನು ಬದಿಗಿಟ್ಟು ಇನ್ನಷ್ಟು ಹೆಚ್ಚು ನಿಷ್ಟುರವಾಗಿ ನೋಡಲು ಸಾಧ್ಯವಾಗಿದ್ದರೆ?! ಎಂದು ಓದಿನ ಮಧ್ಯೆ ನನಗೆ ಅನ್ನಿಸಿದ್ದಿದೆ. ಹಾಗಾದರೆ ಇನ್ನಷ್ಟು ಹೆಚ್ಚು ಅಪರಿಚಿತ ಲೋಕ ನಮಗಾಗಿ ತೆರೆದು ಕೊಳ್ಳಬಹುದಾಗಿತ್ತು ಎನ್ನುವ ಆಶೆ ನನ್ನದು.

ಅಸ್ಪಷ್ಟತೆಗೆ ಆಸ್ಪದವಿಲ್ಲದ ಸುಂದರ ಭಾಷೆ ಲೇಖಕರಂತೆಯೇ ಸರಳ ಹಾಗೂ ಸುಂದರ. ಪುಸ್ತಕದ ಮುಖಪುಟ ಇನ್ನಷ್ಟು ಆಕರ್ಷಕವಾಗಬಹುದಿತ್ತು.ಒಳಪುಟಗಳ ವಿನ್ಯಾಸ ಕೂಡ.......................

ನಾನಿಂದು 75 ವರ್ಷದ ಅಂಚಿನಲ್ಲಿದ್ದೇನೆ ಎನ್ನೂ ಎಷ್ಟು ವರ್ಷ ಈ  ಭೂಮಿಯ ಋಣ ಇದೆಯೋ ಕಾದು ನೋಡಬೇಕು ಎನ್ನುವ ಪ್ರಶ್ನೆಗೆ ನಾವು ಉತ್ತರ ಹೇಳುತ್ತೇನೆ. ಇನ್ನೂ 25 ವರ್ಷ ಬಾಕಿ ಇದೆ; ನಿಮ್ಮಿಂದ ನಾವು ಇನ್ನಷ್ಟು ಸುಕ್ರು ಮಾಸ್ತರರಂತವರನ್ನು ಪರಿಚಯಿಸಿಕೊಳ್ಳಲು ಬಯಸುತ್ತೇವೆ. ನೀವೇ ಹೇಳಿದಂತೆ ಚರಿತ್ರೆ ಚಲನಶೀಲವಾದುದು. ಮೌಲ್ಯದ ಕುಸಿತ ತಾತ್ಕಾಲಿಕ. 

ಇದು ನಿಮ್ಮದೇ ಪದ್ಯ.
ಇದೀಗ ಕಾದು ನಿಂತಿದ್ದೇನೆ
ಶಸ್ತ್ರಚಿಕಿತ್ಸೆಯ ಸಮಯಕೆ ಸನ್ನದ್ಧರಾಗಿ
ಕಣ್ಣು ತೆರೆಯಿಸಿ ಹಸಿರು ತೋರಣ ಕಟ್ಟುವುದಕಾಗಿ
ಭರವಸೆಯ ನಾಳೆಗಳಿಗಾಗಿ
ಹೊಸದಿನಗಳ ಸ್ವಾಗತಕಾಗಿ.
ಹೀಗೆ ಹೊಸ ದಿನಗಳ ಸ್ವಾಗತಕ್ಕಾಗಿ ಕಟ್ಟಿದ ತೋರಣವೇ 'ಕಾಲ್ನಡಿಗೆಯ ಪಯಣ'

                                                                                     --- ಡಾ.ವಿಠ್ಠಲ ಭಂಡಾರಿ ಕೆರೆಕೋಣ 
                    ಕನ್ನಡ ವಿಭಾಗ 
                   ಎಂ.ಜಿ.ಸಿ. ಮಹಾವಿದ್ಯಾಲಯ 

No comments:

Post a Comment