Monday, 19 August 2013

ಶೋಕ - ರಾಜು ಹೆಗಡೆ




ನಲ್ಲ   ಎಂದು
ಮೌನವಾಗಿ
ಚೀರಿದಾಗ
ದಶದಿಕ್ಕಿಗೆ ದನಿ
ಚೂರು ಚೂರಾಗಿ
ಪ್ರತಿಧ್ವನಿ
ಎಳೆಎಳೆಯಾಗಿ
ಎರಗಿದಾಗ
ಯಾವೊಂದನೂ
ಗಾಢವಾಗಿ ಹಿಡಿಯಲಾಗಲಿಲ್ಲ

ದಾರಿಗಳಿಗೆ ನೆನಪಿರುವುದಿಲ್ಲ
ಹೆಜ್ಜೆ ಗುರುತು ಮಳೆಯಲ್ಲಿ
ಕರಗಿ
ಹರಿಯುತ್ತದೆ

ಸೂರ್ಯಚಂದ್ರರಂತೆ
ನಿತ್ಯರಾದವರಿಗೆ
ಕಳಕೊಂಡ ಭಯವಿಲ್ಲ
ನೆಲದ ಮಾತು ಬೇರೆ
ಗಂಧವತಿ . . . . .

ಇವಳು ಹಾಗಲ್ಲ
ಬಸವಳಿದು ಬಾಡಿ
ಹುಡಿಯಾಗಿ ಮತ್ತಾವುದೊ
ಆದಾಗ ಮಾತ್ರ
ಅರಳುವ ಹೂ
ಕೆರಳುವ ಚಂದ್ರಮರು !

ಈಗ
ಸುಕ್ಕುಗಳಲ್ಲಿ
ಉಕ್ಕುವ ದುಃಖ,
ತರಗೆಲೆ ಮಧುರ
ನೆನಪು 

No comments:

Post a Comment