Monday 19 August 2013

ಆನ್ವಯಿಕ ರಂಗ ಮೀಮಾಂಸೆ - ಶ್ರೀಪಾದ ಭಟ್ಟ್

ಇವತ್ತಿನ ನಮ್ಮ ಆಧುನಿಕ ರಂಗಭೂಮಿ ಪಶ್ಚಿಮದ ರಂಗಭೂಮಿಯ ಹಿಡಿತದಿಂದ ಬಿಡಿಸಿಕೊಳ್ಳಬೇಕಾದ, ವಾಸ್ತವವಾದಿ ರಂಗ ಸಂಪ್ರದಾಯಗಳ ಏಕತಾನತೆಯಿಂದ ಪಾರಾಗಬೇಕಾದ ಹಾಗೂ ನಮ್ಮ ಸಂಸ್ಕೃತಿಯ ಬಹುತ್ವವನ್ನು ಗ್ರಹಿಸಲು ಮತ್ತು ಅಭಿವ್ಯಕ್ತಿಸಲು ಬೇಕಾದ ಮಾಧ್ಯಮವಾಗಿ ಬೆಳೆಯಬೇಕಾದ ಅಗತ್ಯವಿದೆ. ಈ ಅಗತ್ಯವನ್ನು ಪೂರೈಸಿಕೊಳ್ಳುವ ಮಾರ್ಗವೇ ಆಧುನಿಕ ರಂಗಭೂಮಿಯ ನಿರ್ವಸಾಹತೀಕರಣದ ಪ್ರಕ್ರಿಯೆಯಾಗಿದೆ. ಈ ನಿರ್ವಸಾಹತೀಕರಣ ಪ್ರಕ್ರಿಯೆಯ ಅಂಗವಾಗಿ ಆಧುನಕ ರಂಗಭೂಮಿ ಸಮೂಹದ ಬದುಕಿನಲ್ಲಿ ಬೇರು ಬಿಟ್ಟಿರುವ ಸಾಂಪ್ರದಾಯಿಕ ರಂಗಭೂಮಿಯತ್ತ ಮುಖಮಾಡಿ, ಅದರಿಂದ ಹೊಸ ನುಡಿಗಟ್ಟುಗಳನ್ನು ಸೃಷ್ಟಿಸಿಕೊಳ್ಳಬೇಕಾಗಿದೆ; ಸಾಂಪ್ರದಾಯಿಕ ರಂಗಕಲೆಗಳ ಹಾಗೂ ಅವುಗಳ ರಂಗ ಸಂಪ್ರದಾಯಗಳ ನೆರವಿನಿಂದ ಉಸಿರು ಪಡೆದುಕೊಳ್ಳಬೇಕಾಗಿದೆ. ಆದರೆ ಅದೇ ಕಾಲಕ್ಕೆ ಆಧುನಿಕ ರಂಗಭೂಮಿ ಸಾಂಪ್ರದಾಯಿಕ ರಂಗಭೂಮಿಯ ನೆರವನ್ನು ಕೇವಲ ತನ್ನನ್ನು ಸಿಂಗಾರ ಮಾಡಿಕೊಳ್ಳುವುದಾಕ್ಕಾಗಿ ಮಾತ್ರ ಬಳಸಿ ಕೊಳ್ಳದಂತೆ ಎಚ್ಚರವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೇವಲ ಎತ್ನಿಕ್ ಮಾದರಿಯಲ್ಲದ, ಕೇವಲ ಆಕರ್ಷಕಗೊಳಿಸುವ ಉದ್ದೇಶವಲ್ಲದ, ಆನ್ವಯಿಕ ಪ್ರಯತ್ನಗಳ ಅಗತ್ಯಗಳ ಕುರಿತು ಇಲ್ಲಿ ಚಿಂತನೆ ನಡೆಸಲಾಗಿದೆ. ನಮ್ಮ ಸಾಂಪ್ರದಾಯಿಕ ರಂಗಕಲೆಗಳ ಹಾಗೂ ಅವುಗಳ ರಂಗ ಸಂಪ್ರದಾಯಗಳ ನೆರವಿನಿಂದ ಆಧುನಿಕ ರಂಗಭೂಮಿ ಉಸಿರು ಪಡೆದುಕೊಳ್ಳುವ ಕ್ರಿಯೆಗೆ ಇರುವ ಮಹತ್ವದ ಹಿನ್ನೆಲೆಯಲ್ಲಿ ಈ ಚಿಂತನೆ ನಡೆಸಲಾಗಿದೆ.

ಜನಪದ ರಂಗಭೂಮಿ ಅಥವಾ ಸಾಂಪ್ರದಾಯಿಕ ರಂಗಭೂಮಿ, ತನ್ನ ಅಭಿವ್ಯಕ್ತಿಯ ವಿವಿಧ ಕ್ರಮಗಳಿಂದಾಗಿ, ಅದರ ಒಡಲೊಳಗಿರುವ ಅಪಾರ ಶಕ್ತಿಯಿಂದಾಗಿ, ಸಮೂಹಗಳನ್ನು ಒಳಗೊಳ್ಳುವ ಪರಿ, ಗುಂಪು ಚಲನೆ, ಸಂಗೀತ, ನೃತ್ಯ, ಲಯ ಇವೆಲ್ಲವುಗಳಿಂದಾಗಿ ರಂಗ ಭೂಮಿಯ ಅಧ್ಯಯನದಲ್ಲಿ ಮಹತ್ವದ ಪಾತ್ರವಹಿಸುತ್ತದೆ.
ಯಕ್ಷಗಾನದಂತಹ ಸಾಂಪ್ರದಾಯಿಕ ರಂಗಭೂಮಿ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ತಲುಪುತ್ತದೆ. ಪುನರಭಿನಯದ ತಂತ್ರಗಾರಿಕೆಯಿಂದ ಎಷ್ಟೇ ಸಂಖ್ಯೆಯ ಪ್ರೇಕ್ಷಕರಿದ್ದರೂ, ಭಿನ್ನವರ್ಗದ, ವಯೋಮಾನದ ಪ್ರೇಕ್ಷಕರಿದ್ದರೂ ಅವರನ್ನು ತಲುಪುವುದು ಈ ರಂಗಭೂಮಿಗೆ ಸಾಧ್ಯ.

ಆದರೆ ಈ ರಂಗಭೂಮಿಗೆ ಅದರದ್ದೇ ಆದ ಕೆಲವು ಮಿತಿಗಳಿವೆ. ಕೆಲವು ಮಿತಿಗಳನ್ನು ಹೀಗೆ ಪಟ್ಟಿ ಮಾಡಬಹುದು:
1) ಇವು ಜಾತಿನಿಷ್ಠವಾದದ್ದು,
2) ನಿದರ್ಿಷ್ಟ ಸಮುದಾಯದ ಒಳಗೆ ಮಾತ್ರ ಸಂವಹನ ಸಾಧಿಸಬಲ್ಲದು. ಉದಾಹರಣೆಗೆ, ಯಕ್ಷಗಾನದಂತಹ ಹೆಚ್ಚು ಪ್ರೇಕ್ಷಕರನ್ನು ಹೊಂದಿರುವ ರಂಗಭೂಮಿ ಸಹ ಅದರ ವ್ಯಾಕರಣದ ಪರಿಚಯವಿಲ್ಲದ ಜನಸಮೂಹವನ್ನು ತಲುಪಲಾರವು. ಇದು ಕರಾವಳಿ ಭಾಗದ ಜನರ ಒಂದು ರೀತಿಯ ಅಭಿವ್ಯಕ್ತಿ ಮಾತ್ರ,
3) ಆಚರಣೆಯೊಂದಿಗೆ ರೂಪುಗೊಂಡ ಸಾಂಪ್ರದಾಯಿಕ ರಂಗಭೂಮಿ, ಆಚರಣೆಯ ಪ್ರಕ್ರಿಯೆಯಿಂದ ಹೊರಗಿರುವ ಸಂಗತಿಗಳನ್ನು ಒಳಗೊಳ್ಳುವುದಿಲ್ಲ, ಅನ್ಯದಿಂದ ಪ್ರೇರಿತವಾದರೂ ಅದು ಹೊರ ರೂಪದಲ್ಲಿ ಮಾತ್ರ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬಹುದೇ ಹೊರತು ಆಂತರಿಕ ರಚನೆಯಲ್ಲಲ್ಲ. ಹಾಗಾಗಿ ಆಧುನಿಕ ಜಗತ್ತಿನ ಅಭಿವ್ಯಕ್ತಿಗೆ ಇದು ಸಾಧನವಾಗಲಾರದು.

ಆಧುನಿಕ ಜಗತ್ತು ಒದಗಿಸಿಕೊಟ್ಟ ಹೊಸ ಬದುಕನ್ನು ನಿರ್ವಹಿಸುವ, ಹೊಸ ರಂಗ ಮಾರ್ಗ ವನ್ನು ಹುಡುಕಿಕೊಳ್ಳುವ ಆವಶ್ಯಕತೆ ಇಂದು ನಮ್ಮ ಮುಂದಿದೆ. ಮನುಷ್ಯ ಮನುಷ್ಯ ಸಂಬಂಧದ ಕುರಿತ ನಂಬಿಕೆ, ವಿಶ್ವಾತ್ಮಕತೆಯ ಕುರಿತ ನಮ್ಮ ದೃಷ್ಟಿಕೋನ, ಅಸ್ತಿತ್ವದ ಕುರಿತ ನಮ್ಮ ಕಾಳಜಿ, ರಾಜಕೀಯ ಪ್ರಜ್ಞೆ, ನಮ್ಮ ನಡುವಿನ ಬಿಕ್ಕಟ್ಟು ಇವೆಲ್ಲವನ್ನು ರಂಗಭೂಮಿಯ ಮೂಲಕ ಅಭಿವ್ಯಕ್ತಿಸುವ ಅಗತ್ಯ ಇಂದು ನಮ್ಮ ಮುಂದಿದೆ. ಆಧುನಿಕ ರಂಗಭೂಮಿಗೆ ಈ ಧಾರಣ ಸಾಮಥ್ರ್ಯ ಇದೆ. ಇದು ಜಾತ್ಯತೀತವಾಗಿದ್ದು (ಸೆಕ್ಯುಲರ್) ಏಕಕಾಲದಲ್ಲಿ ಸ್ಥಳೀಯವೂ ಜಾಗತಿಕವೂ ಆದ ಲಕ್ಷಣಗಳನ್ನು ಹೊಂದಿದೆ. ನಮ್ಮ ಒಳಗಿನ ಲೋಕವನ್ನು ರಂಗದ ಮೇಲೆ ನಿರೂಪಿಸುವ ಅಗತ್ಯ ಮತ್ತು ಸಾಧ್ಯತೆ ಈ ರಂಗಭೂಮಿಗಿದೆ. ಇವೆಲ್ಲ ಕಾರಣಗಳಿಂದಾಗಿ ಆಧುನಿಕ ರಂಗಭೂಮಿ ನಮ್ಮ ಇಂದಿನ ಅನವಾರ್ಯ ಅಗತ್ಯ.

ಆದರೆ ಆಧುನಿಕ ರಂಗಭೂಮಿ ಸಹ ಹಲವಾರು ಮಿತಿಗಳನ್ನು ಹೊಂದಿದೆ. ಈ ಮಿತಿಗಳನ್ನು ಅರಿಯುವಿಕೆ, ಅವುಗಳನ್ನು ದಾಟುವ ಸಾಧ್ಯತೆಗಳ ಹುಡುಕಾಟದಲ್ಲಿ ತುಂಬಾ ಅಗತ್ಯ. ಕೆಲವು ಮಿತಿಗಳು ಹೀಗಿವೆ:

1) ಆಧುನಿಕ ರಂಗಭೂಮಿಗೆ ಬಹಳ ಮುಖ್ಯವಾಗಿ ಪ್ರೇಕ್ಷಕರ ಕೊರತೆ ಇದೆ. ಕಾರಣ ಇದರ ಸಂವಹನ ಮಾರ್ಗಗಳು ಸರಳವಲ್ಲ. ಸುಶಿಕ್ಷಿತ ವಲಯದ ಪ್ರೇಕ್ಷಕರನ್ನು ತಲುಪಲಾರವು. ಆಧುನಿಕ ರಂಗಭೂಮಿಗೂ ನಗರ ಪ್ರಜ್ಞೆಗೂ ನೇರ ಸಂಬಂಧ ಇದೆ. ನಗರ ಪ್ರಜೆ ತಾಕರ್ಿಕ ಚಿಂತನೆ, ಬೌದ್ಧಿಕ ಬದುಕು ಇದರ ಲಕ್ಷಣಗಳಾಗಿವೆ.
2) ಉಪಯುಕ್ತವಾದದ ಆಧುನಿಕ ರಂಗಭೂಮಿಯ ಇನ್ನೊಂದು ಮಿತಿಯೇ ಆಗಿದೆ. ರಂಗಭೂಮಿಯ ಮೇಲೆ ನಿರುಪಯುಕ್ತವಾದ ಒಂದಿಂಚು ಜಾಗವೂ ಇರಬಾರದೆಂದು ಲೇವಲ್ಗಳನ್ನು, ಪರಿಕರಗಳನ್ನು ಇಡಿಕಿರಿಸಿರುತ್ತವೆ. ಸಂಗೀತಕ್ಕೂ ವಾಸ್ತವ ಬದುಕಿಗೂ ಸಂಬಂಧವಿಲ್ಲ ಎಂದು ರಂಗದಿಂದ ಸಂಗೀತವನ್ನು ದೂರಗೊಳಿಸಿದೆ. ಭಾವನೆಯ ವಾಹಕವಾಗಿ ಸಂಗೀತವನ್ನು ಅವಲಂಬಿಸಿದ್ದ ಪ್ರೇಕ್ಷಕ ವರ್ಗಕ್ಕೆ ಈ ಬೆಳವಣಿಗೆಯಿಂದ ರಂಗದಲ್ಲಿ ಶೂನ್ಯಗಳು ಕಾಣಿಸಿಕೊಳ್ಳಲಾರಂಭಿಸಿದವು.
3) ಆಧುನಿಕ ರಂಗಭೂಮಿ ನಿದರ್ಿಷ್ಟ ವರ್ಗದ ಪ್ರೇಕ್ಷಕರನ್ನು ಮಾತ್ರ ಒಳಗೊಳ್ಳುವುದರಿಂದ ಹೆಚ್ಚು ಹೆಚ್ಚು ಪ್ರತ್ಯೇಕವಾದಿಯಾಗುತ್ತಾ, ಹೆಚ್ಚು ಜನರಿಗೆ ಅಗ್ರಾಹ್ಯವಾಗುತ್ತಾ ನಡೆದಿದೆ. ಈ ಕಾರಣದಿಂದ ಉಚ್ಚವರ್ಗದ ರಂಗಭೂಮಿ, ಸಾರ್ವತ್ರಿಕ ರಂಗಭೂಮಿ ಎಂಬ ಎರಡು ವಿಭಾಗಗಳು ಸೃಷ್ಟಿಯಾಗಿವೆ. ಕಲೆ, ಕಲೆಯಾಗುವುದು ಮುಖ್ಯವೇ ಹೊರತು, ಎಲ್ಲರಿಗೂ ಅರ್ಥವಾಗಬೇಕೆಂಬ ಅಗತ್ಯವಿಲ್ಲ ಎಂಬ ಮನೋಭಾವ ರೂಪಿತವಾಗಿದೆ. ನಾನೇ ಪ್ರದಶರ್ಿಸುತ್ತೇನೆ ಮತ್ತು ನಾನೇ ಅರ್ಥಮಾಡಿಕೊಳ್ಳುತ್ತೇನೆ, ಬೇರೊಬ್ಬರಿಗೆ ಅದು ಅರ್ಥವಾಗದಿದ್ದರೆ ಅವರಿಗೆ ನಷ್ಟ ಎಂಬ ಮನೋಭಾವ ಸಮೂಹದ ದೃಷ್ಟಿಕೋನದಿಂದ ಅನ್ಯಾಯವಾದುದು ಮತ್ತು ಅದರ ಪರಿಣಾಮಗಳು ಕಲೆಗೆ ಮಾರಕವಾಗಿವೆ.
4) ಆಧುನಿಕ ರಂಗಭೂಮಿ ತನ್ನ ಅಭಿವ್ಯಕ್ತಿ ಕ್ರಮದಿಂದಾಗಿಯೇ ಹಲವು ಮಿತಿಗಳನ್ನು ಹೇರಿಕೊಂಡಿದೆ. ಪ್ರೊಸೀನಿಯಂ ಚೌಕಟ್ಟನ್ನು ಪ್ರಧಾನವಾಗಿ ಅವಲಂಬಿಸಿದ ರಂಗಭೂಮಿ ಪ್ರೇಕ್ಷಕರ ಮತ್ತು ಪ್ರದರ್ಶಕರ ನಡುವಿನ ಜೀವ ಸಂಬಂಧವನ್ನು ಕಡಿದು ಹಾಕಿದೆ. ರಂಗಭೂಮಿಯಲ್ಲಿ ಪ್ರೇಕ್ಷಕನ ಪಾತ್ರವನ್ನು ಮಿತಿಗೊಳಿಸಿ, ರಂಗಭೂಮಿಗಿರುವ ಪ್ರಕ್ರಿಯಾತ್ಮಕ ಸಂಬಂಧವನ್ನು ಮುರಿದು ಹಾಕಿದೆ. 
5) ಆಧುನಿಕ ರಂಗಭೂಮಿ ವಾಸ್ತವವಾದವನ್ನು ಬೆನ್ನಿಗೆ ಕಟ್ಟಿಕೊಂಡೇ ಬಂದಿದೆ. ಈ ವಾಸ್ತವವಾದ ತರ್ಕವನ್ನವಲಂಬಿಸಿದೆ. ಬದುಕಿನ ಸತ್ಯಗಳನ್ನು ವಾಸ್ತವ ಮಾರ್ಗ ಮಾತ್ರ ಹೆಚ್ಚು ಸಮರ್ಥವಾಗಿ ಮಂಡಿಸುತ್ತದೆ ಎಂಬ ನಂಬಿಕೆ ಈ ತರ್ಕದಲ್ಲಿದೆ.
ಸಾಂಪ್ರದಾಯಿಕವಾಗಿ ನಾವು ಲೋಕವನ್ನು ಗ್ರಹಿಸಿಕೊಳ್ಳುವ ಹಲವು ವಿಧಾನಗಳಲ್ಲಿ ಕಲ್ಪನೆಗೆ ವಿಶಿಷ್ಟ ಸ್ಥಾನವಿದೆ. ತರ್ಕದ ಹೊರಗೇ ಇರುವ ಈ ಕಲ್ಪನೆ, ಕನಸು ಇವು ವಿಶಿಷ್ಟ ರೀತಿಯಲ್ಲಿ ಲೋಕಗ್ರಹಿಕೆಗೆ ಕಾರಣವಾಗುತ್ತದೆ. ಆದರೆ ನಾವು ನಾಗರಿಕರಾಗುತ್ತ ಹೋದಂತೆ ಹೆಚ್ಚು  ಹೆಚ್ಚು ತಾಕರ್ಿಕವಾಗುತ್ತ ಹೋಗುತ್ತೇವೆ. ಹಾಗೆ ಮಾಡಿದಾಗ ನಮ್ಮ ಗ್ರಹಿಕೆಯ ಅನೇಕ ವಿಧಾನಗಳನ್ನು ನಾವು ಬಿಟ್ಟುಕೊಡಬೇಕಾಗುತ್ತದೆ. ಭ್ರಮೆ, ಫ್ಯಾಂಟಸಿ ಇವೆಲ್ಲ ಅವಾಸ್ತವ ಎಂದು ಕೈಬಿಡುವುದರಿಂದ ನಮ್ಮ ಮಿತಿ ಹೆಚ್ಚುತ್ತದೆ. ಮನುಷ್ಯನ ಬುದ್ಧಿ ಗ್ರಹಿಸಬಹುದಾದುದಕ್ಕೆ ಬಹಳ ಮಿತಿಗಳಿವೆ. ತರ್ಕ ಒಂದು ಹಂತದವರೆಗೆ ಮಾತ್ರ ಮುಂದುವರಿಯಬಹುದೇ ಹೊರತು ಎಲ್ಲವನ್ನೂ ಗ್ರಹಿಸಲಾರದು. ಅದು ತನ್ನ ಬಾಲವನ್ನು ತಾನೇ ಬಾಯಿಯಲ್ಲಿ ಇಟ್ಟುಕೊಂಡ ಹಾವಿನ ಹಾಗೆ, ಅಲ್ಲಲ್ಲೇ ಸುತ್ತುತ್ತ ಇರಬೇಕಾಗುತ್ತದೆ.
ಆಧುನಿಕ ರಂಗಭೂಮಿ ಲೋಕಾನುಕೀರ್ತನದತ್ತ ವಾಲುತ್ತದೆ. ಜಗತ್ತಿನ ವಿದ್ಯಮಾನ ಗಳನ್ನು ರಂಗದ ಮೇಲೆ ತೋರಿಸುವಾಗ ಪರದೆ, ಬೆಳಕು, ಪರಿಕರ ಇವನ್ನೆಲ್ಲ ಬಳಸಿ ಅವಾಸ್ತವವಾಗುತ್ತಲೇ ಹೋಗ ಬೇಕಾಗುತ್ತದೆ. ಅವು ಬೌದ್ಧಿಕ ವ್ಯಾಪಾರವಾಗುವುದು ಇಲ್ಲಿಯೇ.
6) ಆಧುನಿಕ ರಂಗಭೂಮಿ ತನ್ನ ಅತಿ ಉಪಯುಕ್ತತಾವಾದದ ಬೆನ್ನಿಗೆ ಬಿದ್ದು ಏಕಕೇಂದ್ರಿತ ಚಲನೆಯನ್ನು ಕಟ್ಟಿಕೊಂಡಿದೆ. ಜೀವನದ ಬಹುಮುಖತೆಯನ್ನು ಬಿಂಬಿಸಲು ಅಗತ್ಯವಾದ ಅಭಿವ್ಯಕ್ತಿ ಇದಕ್ಕೆ ದೊರೆಯುತ್ತಿಲ್ಲ.
7) ಅತಿ ಉಪಯುಕ್ತತಾವಾದ, ತರ್ಕದ ಮಿತಿ ಇವುಗಳಿಂದ ರಂಗಭೂಮಿ ಸಂಭ್ರಮದಿಂದ ವಂಚಿತವಾಗಿದೆ, ವಿಷಾದತೆಗೆ ಎಡೆಮಾಡಿಕೊಟ್ಟಿದೆ.
8) ಆಧುನಿಕ ರಂಗಭೂಮಿಯ ಇನ್ನೊಂದು ಸಂಕಟ, ಗದ್ಯಾಭಿನಯಕ್ಕೆ ಸಂಬಂಧಿಸಿದುದು. ಬಹುಪಾಲು ಪ್ರೇಕ್ಷಕರಿಗೆ ಪದ್ಯಾಭಿನಯದ ಹಲವು ಮಾದರಿಗಳನ್ನು ಕಂಡು ಅನುಭವಿಸಿ ರೂಢಿಯಿದೆ. ಸಾಂಪ್ರದಾಯಿಕ ರಂಗಭೂಮಿ ಬಹಳ ಮುಖ್ಯವಾಗಿ ಪದ್ಯಾಭಿನಯವನ್ನು ರಂಗಭಾಷೆಯಾಗಿಸಿಕೊಂಡಿದೆ. ಆದರೆ ಆಧುನಿಕ ರಂಗಭೂಮಿ ತನ್ನ ಅಭಿವ್ಯಕ್ತಿಗಾಗಿ ಆಶ್ರಯಿಸಿರುವುದು ಗದ್ಯವನ್ನು. ಅದನ್ನು ಅಭಿನಯಿಸುವ ಮಾರ್ಗವಾಗಲಿ ಅನುಭವಿಸುವ ಪ್ರೇಕ್ಷಕ ವರ್ಗವಾಗಲಿ ಇನ್ನೂ ರೂಪುಗೊಳ್ಳಬೇಕಿದೆ.
ಆಧುನಿಕ ರಂಗಭೂಮಿ ತನ್ನ ಈ ಎಲ್ಲ ಮಿತಿಗಳನ್ನು ದಾಟುವುದು ಇಂದಿನ ಆವಶ್ಯಕತೆಯಾಗಿದೆ. ಈ ದಾಟುವಿಕೆಗೆ ಜನಪದ ರಂಗಭೂಮಿಯ ಅಧ್ಯಯನ ಹೆಚ್ಚು ನೆರವನ್ನು ನೀಡಬಹುದಾಗಿದೆ. ರಂಗಭೂಮಿಯ ಇಂದಿನ ಸಂಕಟಕ್ಕೆ ಜಾನಪದ ರಂಗಭೂಮಿ ಮತ್ತು ಆಧುನಕ ರಂಗಭೂಮಿಯ ನಡುವಿನ ಬಿರುಕು ಮುಖ್ಯವಾದ ಕಾರಣವಾಗಿದೆ. ಹಾಗಾಗಿ ಇರುವುದರ ಮೇಲೆ ಕಣ್ಣಿಟ್ಟು, ಇರದುದರೆಡೆಗೆ ತುಡಿಯಲು ಪ್ರಯತ್ನಿಸುವುದು ಆಧುನಿಕ ರಂಗಭೂಮಿಯ ಅಸ್ತಿತ್ವಕ್ಕೆ ಇಂದು ಅಗತ್ಯವಾದ ಹಾದಿಯಾಗಿದೆ. ಬಹುರೂಪಧಾರಿತ್ವ ಹೊಂದಿದ ಜನಪದ ರಂಗಭೂಮಿ ಈ ನಿಟ್ಟಿನಲ್ಲಿ ಆಧುನಿಕ ರಂಗಭೂಮಿಗೆ ಅಗತ್ಯ ನೆರವನ್ನು ನೀಡಬಹುದಾಗಿದೆ.

ಆದರೆ ಇದು ಹೊಸ ಚಿಂತನೆಯೇನೂ ಅಲ್ಲ. 1960 ರ ದಶಕದಲ್ಲಿ ಈ ರೀತಿಯ ಆಲೋಚನೆಗಳು ಕಾಣಿಸಿಕೊಂಡಾಗ ಆನ್ವಯಿಕ ಎನ್ನಬಹುದಾದ ಚಟುವಟಿಕೆಗಳು ನಡೆದವು. ಬೇರಿಗೆ ಮರಳುವ ಆಂದೋಲನದ ಹೆಸರಿನಲ್ಲಿ ರಾಷ್ಟ್ರಾದ್ಯಂತ ಜನಪದ ರಂಗಭೂಮಿಯನ್ನು ಆಧುನಿಕ ರಂಗಭೂಮಿಗೆ ಕಸಿ ಮಾಡುವ ಕಾರ್ಯ ಭರದಿಂದ ಸಾಗಿತು. ಆದರೆ ಈ ಪ್ರಯತ್ನ ನಿರೀಕ್ಷಿತ ಫಲವನ್ನು ನೀಡಲಿಲ್ಲ. ಬಹುಬೇಗ ಹಾಸ್ಯಾಸ್ಪದ ಸನ್ನಿವೇಶಕ್ಕೀಡಾಯಿತು. ಇಂದಿಗೂ ಅನೇಕ ರಂಗತಜ್ಞರು ಈ ಬಗೆಯ ಪ್ರಯತ್ನವನ್ನು ತುಸು ಅಸಡ್ಡೆಯಿಂದ ನೋಡುವುದಕ್ಕೆ ಕಾರಣವಾಯಿತು.  
ಬಹು ಮುಖ್ಯವಾಗಬೇಕಿದ್ದ ಆನ್ವಯಿಕ ಪ್ರಯತ್ನವೊಂದು ದುರಂತಕ್ಕೆ ಈಡಾದ ಕಾರಣಗಳು:

1) ಜನಪದ ರಂಗಭೂಮಿಯನ್ನು ಅಥರ್ೈಸಿಕೊಳ್ಳುವುದರಲ್ಲಿ ವಿಫಲರಾದ ಹಲವಾರು ಶೋಕಿಗಾಗಿ, ಉತ್ಸವಕ್ಕಾಗಿ, ರಂಜನೆಗಾಗಿ ಈ ರಂಗಭೂಮಿಯನ್ನು ಬಳಸಿಕೊಂಡರು.
2) ಜನಪದ ರಂಗಭೂಮಿಯನ್ನು ಆಧುನಿಕರು ಪಳೆಯುಳಿಕೆಯ ರಂಗಭೂಮಿಯೆಂದು ಗ್ರಹಿಸಿದರು. ಸಮಕಾಲೀನ ವಾಸ್ತವ ಪ್ರಪಂಚದಲ್ಲಿ ಜನಪದ ರಂಗಭೂಮಿಯೂ ಬದುಕುತ್ತಿದೆ; ಆಧುನಿಕರೆನಿಸಿಕೊಂಡ ನಮ್ಮೊಳಗೂ ಹಲವಾರು ಆಚರಣೆಗಳು, ನಂಬಿಕೆಗಳು ಮನೆಮಾಡಿವೆ ಎಂಬುದನ್ನು ಅವರು ಮರೆತರು. ಇವುಗಳಿಗೆ ಮುಖಾಮುಖಿಯಾಗಬೇಕಾದ ಸನ್ನಿವೇಶದಿಂದ ತಪ್ಪಿಸಿಕೊಂಡರು.

ಆದರೆ ಆಧುನಿಕ ರಂಗಭೂಮಿ ಜನಪದ ರಂಗಭೂಮಿಯತ್ತ ನೋಡಬೇಕಾದ ಕ್ರಮ ಬೇರೆಯೇ ಆಗಬೇಕಿದೆ. ಹೊಸ ಅಧ್ಯಯನ ನಡೆಯಬೇಕಿದೆ. ಇದುವರೆಗಿನ ಆನ್ವಯಿಕ ಪ್ರಯತ್ನವನ್ನು ವಿಶ್ಲೇಷಿಸಿ, ಪುನರ್ಪರಿಶೀಲಿಸಿ ಹೊಸ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕಾಗಿದೆ.

ಈ ಹಿಂದೆ ಆಧುನಿಕ ರಂಗಭೂಮಿಯಲ್ಲಿ ಜನಪದ ಅಧ್ಯಯನದ ಅನುಭವವನ್ನು ಧನಾತ್ಮಕವಾಗಿ ಬಳಸಿಕೊಂಡ ಹಬೀಬ್ ತನ್ವೀರ್ ಮತ್ತು ಬಾದಲ್ ಸಕರ್ಾರ್ ಇವರ ಪ್ರಯತ್ನಗಳು ಈ ನಿಟ್ಟಿನಲ್ಲಿ ಹೆಚ್ಚು ಗಮನಾರ್ಹವಾದುದು. ಹಬೀಬ್ ತನ್ವೀರ್ ಬುಡಕಟ್ಟು ಜನಾಂಗದ ಅಭಿವ್ಯಕ್ತಿ ಕ್ರಮವನ್ನು ಆಧುನಿಕ ರಂಗಭೂಮಿಯಲ್ಲಿ ಬಳಸಿಕೊಂಡರಲ್ಲದೇ, ಬುಡಕಟ್ಟು ಜನಾಂಗದ ನಟರನ್ನೇ ಆಧುನಿಕ ರಂಗಭೂಮಿಯ ನಟರನ್ನಾಗಿಯೂ ಬಳಸಿ ಕೊಂಡಿದ್ದಾರೆ. ರಂಗಭೂಮಿಯ ಪ್ರಧಾನ ಘಟಕವಾದ ನಟರಿಗೆ ಸಂಬಂಧಿಸಿದಂತೆ ಅವರು ಹೇಳುವ ಮಾತು ಇದು ನಗರ ರಂಗಭೂಮಿಯ ನಟರಿಗೆ ಜನಪದ ರಂಗಭೂಮಿಯ ನಟರಿಗಿರುವಷ್ಟು ಫ್ಲೆಕ್ಸಿಬಿಲಿಟಿಯಾಗಲಿ, ಇಂಪ್ರೂವೈಜೇಷನ್ ಗುಣವಾಗಲಿ ಇಲ್ಲ.

ಈ ನಿಟ್ಟಿನಲ್ಲಿ ಆಧುನಿಕ ರಂಗಭೂಮಿಯ ನಟ, ನಿದರ್ೆಶಕರು ತಮ್ಮಲ್ಲಿಲ್ಲದ ಗುಣವನ್ನು ಪಡೆಯಲು ಜನಪದ ರಂಗಭೂಮಿಯ ಅಧ್ಯಯನ ಬೆಳೆಸಿಕೊಳ್ಳಬೇಕೆಂಬುದು ಅವರ ನಿಲುವು. ಅವರೆನ್ನುತ್ತಾರೆ ಭಾರತೀಯ ರಂಗಭೂಮಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ನಿದರ್ೆಶಕ ಹಾಗೂ ನಟ ಜಾನಪದ ರಂಗಭೂಮಿಯ ಅಧ್ಯಯನ ಮಾಡಲೇಬೇಕು.

ಹಬೀಬ್ ತನ್ವೀರ್ಗೆ ಜನಪದ ರಂಗಭೂಮಿಯ ಅಧ್ಯಯನ ಯಾಕೆ? ಹೇಗೆ? ಎಂಬ ಬಗ್ಗೆ ಖಚಿತ ನಿಲುವುಗಳಿವೆ. ತತ್ಕಾಲೀನ ಲಾಭಕ್ಕಾಗಿ ಈ ಅಧ್ಯಯನ ಅಲ್ಲವೆಂಬ ಬಗ್ಗೆ ಅವರಿಗೆ ಅರಿವಿದೆ. ತಾತ್ವಿಕವಾಗಿ ಅವರು ತುಂಬಾ ಗಟ್ಟಿಯಾದ ನಿಲುವಿನವರು. ಜಾನಪದದ ಹೆಸರಿನಲ್ಲಿ ಎತ್ನಿಕ್ ಮಾದರಿಯ ಚಟುವಟಿಕೆಗಳನ್ನು ಅವರು ಖಂಡಿಸುತ್ತಾರೆ. ಜಾನಪದ ಈಗಿನ ಕಾಲದ ಹುಚ್ಚು ಬರೀ ಕೌಶಲ್ಯದ ಪ್ರದರ್ಶನ. ಹಿಂದೆ ವ್ಯಕ್ತಿಗತ ಹುಡುಕಾಟ, ವ್ಯಕ್ತಿಗತ ಸ್ತರದಲ್ಲಿತ್ತು. ಇಂದು ಅದು ಭಾರೀ ಉತ್ಸವಗಳಿಗಾಗಿ ಮಾರ್ಪಟ್ಟಿದೆ. ವ್ಯಾಪಾರೀಕರಣ ಪುನಃಶ್ಚೇತನವಾದ ಅವನತಿಯಲ್ಲದೇ ಇನ್ನೇನು ತಾನೆ ನಿರೀಕ್ಷಿಸಲು ಸಾಧ್ಯ.
ಜನಪದ ರಂಗಭೂಮಿಯ ಅಧ್ಯಯನವನ್ನು ತಾವು ಒಳಗೊಳ್ಳಬೇಕಾದ ಮತ್ತು ಒಳಗೊಳ್ಳಬಾರದ ರೀತಿಗಳ ಬಗ್ಗೆ ತನ್ವೀರ್ ಚಿಂತನೆ ನಮಗೆ ಮಾರ್ಗದರ್ಶನ ನಡುತ್ತವೆ.

ಜನಪದ ರಂಗಭೂಮಿಯ ಅಧ್ಯಯನದ ಮಾದರಿಗೆ ಬಾದಲ್ ಸಕರ್ಾರ್ ಅವರ ಪ್ರಯತ್ನ ಕೂಡ ಮುಖ್ಯವಾದ ನೆರವು ನೀಡಬಲ್ಲದು. ಜನಪದ ರಂಗಭೂಮಿಯ ಅನುಭವವನ್ನು ಬಾದಲ್ ಸಕರ್ಾರ್ ಬಳಸಿಕೊಂಡ ಬಗೆ ವಿಶಿಷ್ಟವಾದುದು. 1973 ರಲ್ಲಿ ಕಲ್ಕತ್ತಾದಲ್ಲಿ ಅವರು ಪ್ರಯೋಗಿಸಿದ ಸ್ಪಾರ್ಟಕಸ್ ನಾಟಕ ನೋಡುಗರಿಗೆ ಹೊಸ ಅನುಭವ ನೀಡುತ್ತಿತ್ತು. ಈ ಪ್ರಯೋಗ ಯಾವುದೇ ಗ್ರಾಮೀಣ ರಂಗಭೂಮಿಯ ಮೇಲೆ ಆಧಾರವಾದದ್ದಲ್ಲ. ಆದರೆ ನಗರ ರಂಗಭೂಮಿಯ ಸಂದರ್ಭದಲ್ಲಿ ಅದು ಜನಪದ ರಂಗಭೂಮಿಯಲ್ಲಿದ್ದ ಸಾಮುದಾಯಿಕ ಸಹಭಾಗಿತ್ವ ಮತ್ತು ರಿಚುವಲಿಸ್ಟಿಕ್ ಅಭಿನಯವನ್ನು ಅಳವಡಿಸಿಕೊಳ್ಳುವತ್ತ ಗಮನ ಹರಿಸಿತು.

ಜನಪದ ರಂಗಭೂಮಿಯ ಅಧ್ಯಯನ ಅನುಭವಗಳನ್ನು ತಾತ್ವಿಕವಾಗಿ ಗ್ರಹಿಸಿ ವ್ಯವಹರಿಸಿದ ಎರಡು ಮಾರ್ಗಗಳು ತನ್ವೀರ್ ಮತ್ತು ಬಾದಲ್ ಸಕರ್ಾರ್ರ ಪ್ರಯೋಗದಿಂದ ರೂಪಿಸಲ್ಪಟ್ಟಿದೆ.

ಎನ್.ಎಸ್.ಡಿ. ವಿದ್ಯಾಥರ್ಿಗಳ ಪದವಿ ದಾನ ಸಮಾರಂಭದಲ್ಲಿ ಮಾತನಾಡುತ್ತ ಆನ್ವಯಿಕ ಅಧ್ಯಯನಕ್ಕೆ ಸಂಬಂಧಿಸಿದಂತೆ ಡಾ||ಯು.ಆರ್. ಅನಂತಮೂತರ್ಿ ಹೀಗೆನ್ನುತ್ತಾರೆ. ಬುಡಕಟ್ಟು ಜನರು ತಮ್ಮದೇ ಆಂಗಿಕ ಭಾಷೆಯನ್ನು ಹೊಂದಿದ್ದಾರೆ. ಅವರನ್ನು ಒಳಗೊಳ್ಳುವುದರಿಂದ ನಮ್ಮ ರಂಗಭೂಮಿ ಇನ್ನಷ್ಟು ಶ್ರೀಮಂತವಾಗಬಹುದು. ಆದರೆ ಈ ವಿಷಯದಲ್ಲಿ ನಮ್ಮ ಧೋರಣೆ ಮತ್ತು ಸಮೀಪನವು ವಸಾಹತು ರೂಪದ್ದಾಗಲಿ, ಎತ್ನಿಕ್ ಮಾದರಿಯದ್ದಾಗಲಿ ಆಗಕೂಡದು. ಪ್ರವಾಸೋದ್ಯಮ-ಸಂಸ್ಕೃತಿಯ ಮೇಲೆ ಮಾತ್ರ ಕಣ್ಣಿಟ್ಟು ಸದಭಿರುಚಿಯ ನಾಟಕೋತ್ಸವಗಳಲ್ಲೇ  ಸಂತೃಪ್ತರಾಗಿ ಎತ್ನಿಕ್ ಮನರಂಜನೆಗಾಗಿ ಇಡಿಯಾದ ತುಣುಕುಗಳನ್ನು ನೇಯ್ದು ಕೊಡಲು ಮುಂದಾದರೆ ನಮ್ಮ ಕ್ರಿಯಾಶೀಲತೆ ಸೃಜನಶಕ್ತಿ ಕುಂಠಿತವಾಗುತ್ತದೆ.

ಖ್ಯಾತ ರಂಗನಿದರ್ೆಶಕ ಬಿ.ವಿ.ಕಾರಂತರು ಹೀಗೆನ್ನುತ್ತಾರೆ ಭಾರತೀಯ ರಂಗ ಭೂಮಿಯ ಹುಡುಕಾಟವೆಂದರೇನೇ ನಮ್ಮ ಲೋಕನಾಟ್ಯ ಪರಂಪರೆಯ ಜೀವಂತ ತತ್ವಗಳ ಹೊಸ ಹಾಗೂ ಸಾರ್ಥಕ ಹುಡುಕಾಟ. ನಮ್ಮ ಲೋಕ ರಂಗಭೂಮಿ ಅಷ್ಟು ಸಶಕ್ತವಾಗಿದೆ. ಆದರೆ ನಾವದನ್ನು ಇನ್ನಿಲ್ಲದಷ್ಟು ಉಪೇಕ್ಷೆ ಮಾಡಿದ್ದೇವೆ. ಇವತ್ತು ಹುಡುಕುತ್ತಾ ಹೊರಟಾಗೆಲ್ಲ ಪುನಃ ಪುನಃ ನಾವು ಹೋಗಿ ಮುಟ್ಟೋದು ಅಲ್ಲಿಗೇ. ಎಂತಲೇ ಭಾರತೀಯ ರಂಗಭೂಮಿಯ ಹುಡುಕಾಟವನ್ನು ಇಲ್ಲಿಯ ಜನಪದ ರಂಗಭೂಮಿಗೆ ಹೊಂದಿಸುವುದು ಸೂಕ್ತವೆನಿಸುತ್ತದೆ. ಭಾರತೀಯ ಸಂಗೀತ, ಭಾರತೀಯ ನೃತ್ಯಕ್ಕೆ ಸಮಾನಾಂತರವಾಗಿರೋದು ಭಾರತೀಯ ರಂಗಭೂಮಿಯ ತಮಾಷಾ, ಯಕ್ಷಗಾನ, ಭವಾಯಿ, ಕಥಕ್ಕಳಿ ಮುಂತಾದವುಗಳೇ ಹೊರತು ಇನ್ನಾವುದೂ ಅಲ್ಲ. ಜೀವಂತವಾದ ಜಾನಪದ ರಂಗಭೂಮಿಯಿಂದಲೇ ನಮಗೆ ಪ್ರೇರಣೆ ಹೊರತು ಶಾಸ್ತ್ರೀಯ ಪರಂಪರೆಯ ಪ್ರಯೋಗಗಳು ಏನಿದ್ದರೂ ದಾರ್ಶನಿಕ ಅಥವಾ ಸೈದ್ಧಾಂತಿಕ ಸ್ತರದಲ್ಲಿ ಮಾತ್ರ.

ಆನ್ವಯಿಕ ರಂಗಭೂಮಿಯ ಪ್ರಯತ್ನದಲ್ಲಿ ತೊಡಗುವವರಿಗೆ ಆಧುನಿಕ ಹಾಗೂ ಸಾಂಪ್ರದಾಯಿಕ ರಂಗಭೂಮಿಗಳೆರಡರಲ್ಲೂ ವಿಶೇಷ ಪರಿಶ್ರಮ ಬೇಕು. ಜನಪದ ಲೋಕದೃಷ್ಟಿ ಯನ್ನು ಅಥರ್ೈಸಿಕೊಂಡಿರಬೇಕು. ಸಾಂಪ್ರದಾಯಿಕ ರಂಗಭೂಮಿಯ ಸಂವಹನದ ಭಾಷೆಯನ್ನು ಅಥರ್ೈಸಿಕೊಳ್ಳುವ ಸಾಮಥ್ರ್ಯದ ಜತೆಗೆ, ಆಧುನಿಕ ರಂಗಭಾಷೆಗೆ ಅದನ್ನು ಒಗ್ಗಿಸಬೇಕು. ತುಂಬಾ ಸುಲಭ ಅಂದುಕೊಂಡು ಜನಪದ ಕಲೆಯ ಸಂದರ್ಭವನ್ನು ನಾಟಕದಲ್ಲಿ ಅನುಕರಣೆ ಮಾಡುವ ಜನಪದ ಕಲಾವಿದರು ಏನು ಮಾಡುತ್ತಾರೋ, ಅದನ್ನೇ ರಂಗಭೂಮಿಯ ಮೇಲೆ ಪುನಃ ಪ್ರದಶರ್ಿಸುವ ಗೀಳಿಗೆ ಬೀಳಬಾರದು.

ಜನಪದ ರಂಗಭೂಮಿಯನ್ನು ಒಳಗೊಳ್ಳುವ ಮಾತನಾಡುವಾಗ ಇನ್ನೊಂದು ಅಪಾಯವೂ ನಮ್ಮ ಮುಂದೆ ಎದುರಾಗುತ್ತದೆ. ಜನಪದ ರಂಗಭೂಮಿ `ಆರಾಧನೆ ಮತ್ತು `ಮಿಥ್ಗಳನ್ನು ಜತೆಯೇ ಹೊಂದಿರುತ್ತದೆ. ಜಾನಪದ ಪ್ರದರ್ಶನದ ಅರ್ಥ ಸಹ ಈ ಎಲ್ಲವನ್ನೂ ಒಳಗೊಂಡ ಸಂದರ್ಭದಲ್ಲಿಯೇ ಇರುತ್ತದೆ. ಈ ಸಂದರ್ಭವನ್ನು ನಾವು, ಜನಪದ ಕಲಾರೂಪಗಳನ್ನು ಅಥರ್ೈಸುವಿಕೆಯಲ್ಲಿ ಮಾತ್ರ ಗ್ರಹಿಸಬೇಕು ಹೊರತು ಆನ್ವಯಿಕ ಸಂದರ್ಭದಲ್ಲಲ್ಲ. ಜನಪದ ಕಲಾಪ್ರಕಾರಗಳನ್ನು ಅದು ಹುಟ್ಟಿಕೊಂಡ ಪರಿಸರದಿಂದ ಹೊರತೆಗೆದಾಗ ಅದರ ಅಸ್ತಿತ್ವ ಉಳಿಯುವುದಿಲ್ಲವೆಂಬುದು ಜನಪದ ತಜ್ಞರ ವಾದ. ಆದರೆ ಆಧುನಿಕ ರಂಗಭೂಮಿಯ ಕಾರ್ಯಕರ್ತ ಜಾನಪದ ರಂಗಭೂಮಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹೊತ್ತವನಾಗಲೀ, ಅದರ ಶುದ್ಧತೆಯನ್ನು ಹಾಗೆಯೇ ಕಾಪಾಡಿಕೊಂಡು ಹೋಗಬೇಕಾದ  ಜವಾಬ್ದಾರಿ ಹೊತ್ತವನಾಗಲೀ ಅಲ್ಲ. ಜನಪದ ರಂಗಭೂಮಿಯನ್ನು ಪ್ರತಿಕೃತಿ ಯಾಗಿ ಬಳಸಿಕೊಳ್ಳುವವನಿಗೆ ಈ ಅಪಾಯ ಎದುರಾಗುತ್ತದೆ. ಆಧುನಿಕ ರಂಗ ಭೂಮಿಯ ಕಾರ್ಯಕರ್ತ ಜನಪದ ರಂಗಭೂಮಿಯನ್ನು ಪ್ರತಿಮೆಯಾಗಿ ನೋಡ ಬೇಕಾದವನು. ಆನ್ವಯಿಕ ಪ್ರಯತ್ನ ಕೈಗೊಂಡ ಪ್ರದರ್ಶನವು ಧಾಮರ್ಿಕ ವಿಧಿ ಕ್ರಿಯೆಗಳ ಮಟ್ಟದಿಂದ ರಂಗಭೂಮಿ ಮಟ್ಟಕ್ಕೆ ತಲುಪುವುದು ತುಂಬಾ ಮುಖ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಖ್ಯಾತ ರಂಗತಜ್ಞ ಸಫ್ದರ್ ಹಶ್ಮಿಯವರ ಈ ಮಾತುಗಳು ಗಮನಾರ್ಹವಾಗಿವೆ. ಪಾರಂಪರಿಕ ರೂಪ ಮತ್ತು ಆಧುನಿಕ ವಸ್ತುಗಳ ಮುಖಾಮುಖಿಯನ್ನು ಸಂಮಿಲನ ಮಾಡಲು ನಾವು ಇಷ್ಟಪಡುವುದಾದರೆ, ಆ ರೂಪಗಳನ್ನು ಆಕ್ರಮಿಸಿಕೊಂಡಿರುವ ರಿಚುವಲಿಸಂ ಮತ್ತು ಧಾಮರ್ಿಕ ಸಿದ್ಧಾಂತಗಳ ಹಿಡಿತದಿಂದ ಬಿಡಿಸಬೇಕು. ಧಾಮರ್ಿಕ ವಿಧಿ ಕ್ರಿಯೆಗಳಲ್ಲಿ ಯಾವಾಗಲೂ ರಂಗಭೂಮಿಯ ಅಂಶವೊಂದು ಇದ್ದೇ ಇರುತ್ತದೆ. ಬುಡಕಟ್ಟುಗಳವರ ವಿಧಿಗಳಲ್ಲಿ ಈ ಅಂಶ ಇನ್ನಷ್ಟು ದಟ್ಟವಾಗಿರುತ್ತದೆ. ಬುಡಕಟ್ಟಿಗೆ ಸೇರದ ವ್ಯಕ್ತಿಯೊಬ್ಬನು ಪ್ರತಿಯೊಂದನ್ನು ತಾನು ಅದೇ ಆಗಿ ಅಭಿನಯಿಸಿ ತೋರಿಸುತ್ತಾನೆ. ಏಕೆಂದರೆ ಅವನಿಗೆ ಅದು ವಿವರಿಸಲಾಗದ ಸಂಗತಿಗಳನ್ನು ಅರ್ಥಮಾಡಿಕೊಳ್ಳುವ ಅತ್ಯಂತ ಸುಲಭದ ದಾರಿ. ಎಷ್ಟೊ ಸಲ ನಾವು ರಂಗಭೂಮಿಯ ಅಂಶಗಳನ್ನು ಒಳಗೊಂಡಿರುವ ಧಾಮರ್ಿಕ ವಿಧಿಗಳನ್ನು ರಂಗಭೂಮಿಯೆಂದೇ ತಪ್ಪು ತಿಳಿಯುತ್ತೇವೆ. ಇದು ಸರಿಯಲ್ಲ. ಧಾಮರ್ಿಕ ವಿಧಿಗಳಿಂದ ತನ್ನ ಬಿಡುಗಡೆಯನ್ನು ಪಡೆದುಕೊಂಡಾಗ ಮಾತ್ರ ರಂಗಭೂಮಿಯು ನಿಜವಾದ ರಂಗಭೂಮಿಯಾಗಿ ಮೈದಳೆಯುತ್ತದೆ. ಅಸ್ತಿತ್ವದ ಸಮಸ್ಯೆಗಳನ್ನು ಕೇವಲ ಧಾಮರ್ಿಕ ವಿಧಿಗಳಿಂದ ಮಾತ್ರವೇ ಪರಿಹರಿಸಿಕೊಳ್ಳುವುದು ಅಸಾಧ್ಯವಾದಾಗ ಬಿಡುಗಡೆ ಅಸಂಭವವೆನಿಸುತ್ತದೆ. ಸಮಕಾಲೀನ ಬದುಕಿನ ಅಸ್ತಿತ್ವದ ಸಮಸ್ಯೆಯನ್ನು ಕ್ರಿಯಾವಿಧಿಯ ರಂಗಾಂಶಗಳು ಬಿಡಿಸಲಾರವು ಅಥವಾ ಕ್ರಿಯಾವಿಧಿ ಆಚರಣೆಗಳಿಂದ ಹೊರಗಿರುವ ಸಮುದಾಯವು ತನ್ನ ಅಸ್ತಿತ್ವದ ಸಮಸ್ಯೆಯನ್ನು, ಸಮುದಾಯವೊಂದರ ಕ್ರಿಯಾವಿಧಿ ಆಚರಣೆಗಳಿಂದ ಹೊರಗಿರುವ ಸಮುದಾಯವು ತನ್ನ ಅಸ್ತಿತ್ವದ ಸಮಸ್ಯೆಯನ್ನು, ಸಮುದಾಯದೊಂದರ ಕ್ರಿಯಾವಿಧಿ ಆಚರಣೆಯಿಂದ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಸಾಮಾಜಿಕ ಬೆಳವಣಿಗೆಯ ವಿಧಿ ಮೂಲವಾದ ಪ್ರಜ್ಞೆಯನ್ನು ಅನಾವಶ್ಯಕವೆನಿಸಿದಾಗ ರಂಗಭೂಮಿಯು ಬಿಡುಗಡೆಗೊಳಿಸುತ್ತದೆ. ಚಾರಿತ್ರಿಕವಾಗಿ ಹೇಳುವುದಾದರೆ ಇದು ರಂಗಭೂಮಿಯು ಜಾತ್ಯತೀತವಾಗುವ ಹಾದಿಯಲ್ಲಿ ಮೊದಲ ಹೆಜ್ಜೆ.

ಇವಿಷ್ಟು ಸಂಗತಿಗಳು ಆನ್ವಯಿಕ ಮೀಮಾಂಸೆಗೆ ಸಂಬಂಧಿಸಿದ ತಾತ್ವಿಕ ಸಂಗತಿಗಳಾಗಿವೆ. ಇವುಗಳ ಆಧಾರದಲ್ಲಿ ಪ್ರಯೋಗಗಳು ನಡೆಯಬೇಕಾಗಿದೆ. 

ಶ್ರೀಪಾದ ಭಟ್ಟ್

No comments:

Post a Comment