Friday 14 June 2013

ಸುಬ್ಬಿ ಭಂಡಾರಿ ನೆನಪಿನಲ್ಲಿ ಪಟ್ಟಿ ಪುಸ್ತಕ ವಿತರಣೆ

              ಸುಬ್ಬಿ ಭಂಡಾರಿ ನೆನಪಿನಲ್ಲಿ ಪಟ್ಟಿ ಪುಸ್ತಕ ವಿತರಣೆ

             ಹಿರಿಯ ಲೇಖಕರು, ಶಿಕ್ಷಕರು ಆಗಿದ್ದ ದಿವಂಗತ ಆರ್.ವಿ. ಭಂಡಾರಿಯವರ ಮಡದಿ ಸುಬ್ಬಿ ಭಂಡಾರಿಯವರು ನಿಧನರಾಗಿ ಒಂದು ವರ್ಷವಾದ ನೆನಪಿಗೆ ಅವರ ಕುಟುಂಬದವರು ಕೆರೆಕೋಣದ ಎಚ್. ಪಿ. ಎಸ್. ಶಾಲೆಯಲ್ಲಿ ಪೆನ್ನು, ನೋಟ್ಸಬುಕ್ಸ್, ಮಕ್ಕಳಿಗಾಗಿ ವೈಚಾರಿಕ ಪುಸ್ತಕಗಳನ್ನು ವಿತರಿಸಿದರು.
             ಆರ್.ವಿ ಯವರ ಕುಟುಂಬದ ಪರವಾಗಿ ಪಟ್ಟಿ-ಪುಸ್ತಕ ಹಂಚಿ ಮಾತನಾಡಿದ ಮಾಧವಿ ಭಂಡಾರಿ, 'ಇಂದು ನಮ್ಮ ತಾಯಿ ನಮ್ಮನ್ನಗಲಿ ಒಂದು ವರ್ಷ. ಅವರ ನೆನಪಿನಲ್ಲಿ ಆಡಂಬರದ ಊಟೋಪಚಾರ ಮಾಡಿ, ಉಳ್ಳವರಿಗೆ ಊಟಕೊಟ್ಟು ಸಂತೋಷಪಡುವ ಬದಲು ಅವರು ಯಾವತ್ತೂ ಪ್ರೀತಿಸುವ ಮಕ್ಕಳಿಗೆ ಪಠ್ಯ-ಪುಸ್ತಕ ಹಂಚುವುದು, ಸಿಹಿ-ತಿಂಡಿ ಹಂಚುವುದು ಹೆಚ್ಚು ಅರ್ಥಪೂರ್ಣ ಎಂದುಕೊಂಡೆವು. ಅವರು ಮತ್ತು ನಮ್ಮ ಇಡೀ ಕುಟುಂಬ ಕಲಿತ ಶಾಲೆ ಇದು. ಪ್ರತಿವರ್ಷವೂ ಈ ಕಾರ್ಯಕ್ರಮವನ್ನು ಕುಟುಂಬದ ಪರವಾಗಿ ಮುಂದುವರೆಸುತ್ತೇವೆ. ತಂದೆ ತಾಯಿಯ ಆಶಯವೂ ಇದೇ ಆಗಿತ್ತು' ಎಂದರು.
                 ಪ್ರತಿವರ್ಷ ಮಕ್ಕಳಿಗೆ ಪಠ್ಯ ಸಾಮಗ್ರಿ ವಿತರಣೆಗೆ ಅನುಕುಲವಾಗುವಂತೆ ಸುಬ್ಬಿ ಭಂಡಾರಿಯವರ ನೆನಪಿಗಾಗಿ 5000ರೂ ದೇಣಿಗೆಯನ್ನು ಕುಟುಂಬದ ಪರವಾಗಿ ಇಂದಿರಾ ಭಂಡಾರಿಯವರು ಶಾಲೆಗೆ ನೀಡಿದರು. ಆರ್.ವಿಯವರು ಬರೆದ 'ಮಕ್ಕಳಿಗಾಗಿ ರಾಮಾಯಣ' ಪುಸ್ತಕವನ್ನು, ಎಲ್ಲಾ ಮಕ್ಕಳಿಗೂ ಹಂಚಲಾಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಸರಸ್ವತಿ ಶೆಟ್ಟಿ ವಹಿಸಿ ಮಾತನಾಡಿ ಇಂತಹ ಕಾರ್ಯಕ್ರಮ ನಡೆಸಿದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಸಭೆಯಲ್ಲಿ ವಿಠ್ಠಲ ಭಂಡಾರಿ, ಯಮುನಾ ಗಾಂವ್ಕರ್, ಗಣೇಶ ಭಂಡಾರಿ, ನಾಗರತ್ನ, ದಾಮೋದರ ನಾಯ್ಕ, ವಿದ್ಯಾಧರ ಕಡತೋಕ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ರಾಮ ಭಂಡಾರಿ, ಸುಧಾಕರ, ಸುಜಾತಾ, ಶ್ಯಾಮಲಾ ಶೆಟ್ಟಿ ಮುಂತಾದವರು ಹಾಜರಿದ್ದರು. ಶಾಲಾ ಶಿಕ್ಷಕರಾದ ವಿನಾಯಕ ಭಟ್ಟ ಸ್ವಾಗತಿಸಿದರು. ಮುಖ್ಯೋಪಾಧ್ಯಾಯರು ವಂದಿಸಿದರು.



No comments:

Post a Comment