ಕವಿಗಳು ಕಂಡಂತೆ ಹಸಿವು
ಇಲ್ಲಿರುವ ಕವಿತೆಗಳನ್ನು ಸಂಪಾದಿಸಿರುವ ವಿಠ್ಠಲ ಭಂಡಾರಿ. ಕವಿತೆಗಳನ್ನು ಓದುವುದಕ್ಕೂ ಮುನ್ನ ಓದುಗರಿಗೆ ಎಸ್. ಜಿ. ಸಿದ್ದರಾಮಯ್ಯನವರು ಬರೆದಿರುವ ಮುನ್ನುಡಿ ಕೃತಿಯ ಬಗ್ಗೆ ರುಚಿ ಹತ್ತಿಸುತ್ತದೆ. ಆನಂತರ ವಿಸ್ತಾರವಾಗಿರುವ ಸಂಪಾದಕರ ಮಾತು ಕವಿತೆಗಳನ್ನು ಓದುತ್ತಾ ಹೋದಂತೆ ಆಗಾಗ ಪ್ರಸ್ತುತವಾಗುತ್ತದೆ. ಎಲ್ಲಾ ಕವಿತೆಗಳ ಸಾರವನ್ನು ಸಂಪಾದಕರ ಮಾತುವಿನಲ್ಲಿ ವಿಠ್ಠಲ ಭಂಡಾರಿಯವರು ಹಿಡಿದಿಟ್ಟಿದ್ದಾರೆ. ತಮ್ಮ ಬಾಲ್ಯದ ದಿನಗಳನ್ನು ನೆನೆಸಿಕೊಂಡು ಮರುಗಿದ್ದಾರೆ.
ವಿಠ್ಠಲ ಭಂಡಾರಿ ಹಸಿವಿನ ಬಗ್ಗೆ ಇರುವ ಎಲ್ಲಾ ಕನ್ನಡ ಕವಿತೆಗಳನ್ನು ಇಲ್ಲಿ ಸೇರಿಸಿರುವಂತೆಯೇ ಕೆಲವು ಜನಪದ ಗೀತೆಗಳನ್ನು ಸಂಗ್ರಹಿಸಿದ್ದಾರೆ. ಹಸಿವನ್ನು ಜನಪದರು ಸ್ವತ: ಅನುಭವಿಸಿ ಹಾಡಿರುವ ಈ ಹಸಿ ಗೀತೆಗಳು ಹಸಿವಾಸ್ತವವನ್ನು ಹೊರಗಿಡುತ್ತವೆ.
ಬಡವರು ಸತ್ತರೆ ಸುಡಲಿಕೆ ಸೌದಿಲ್ಲೋ,
ಒಡಲ ಬೆಂಕಿಲಿ ಹೆಣ ಬೆಂದೋ ದೇವರೆ,
ಬಡವರಿಗೆ ಸಾವ ಕೊಡಬ್ಯಾಡ
'ದೊಡ್ಡೋರ ಮಕ್ಳೋಗೆ ಬೆಲ್ಲ ಬಾಳೆಯ ಹಣ್ಣು
ಏನೂ ಇಲ್ಲದ ಬಡವೇಯ ಮಕ್ಳೋಗೆ
ಹೆತ್ತಬ್ಬೆ ಬತ್ತ ಮೊಲೆ ಹಾಲು'
ಈ ಕವಿತೆಗಳು ಹಸಿವಿನಲ್ಲಿ ನರಳುತ್ತಿರುವವರೆಲ್ಲರ ಧ್ವನಿಯನ್ನು ಪ್ರತಿಧ್ವನಿಸುತ್ತದೆ. ಅಲ್ಲಮ ಪ್ರಭು, ಜೇಡರ ದಾಸಿಮಯ್ಯ, ಸರ್ವಜ್ಞ, ಬಸವಣ್ಣ, ಅಂಬಿಗರ ಚೌಡಯ್ಯ, ಕಡಕೋಳ ಮಡಿವಾಲಪ್ಪ, ರಂಶ್ರೀ ಮುಗಳಿ, ಬಿ.ಎಚ್. ಶ್ರೀಧರ, ದಿನಕರ ದೇಸಾಯಿ, ಕೆಯ್ಯಾರ ಕಿಂಞ್ಞಣ್ಣ ರೈ, ಎಂ. ವಿ. ಸೀತಾರಾಮಯ್ಯ, ವಿ.ಜಿ. ಭಟ್, ಸು.ರಂ. ಎಕ್ಕುಂಡಿ, ಜಿ.ಎಸ್. ಶಿವರುದ್ರಪ್ಪ, ಚನ್ನವೀರ ಕಣವಿ, ಡಾ. ಆರ್. ವಿ.ಭಂಡಾರಿ, ಡಾ. ಸಿದ್ದಲಿಂಗಯ್ಯ, ಪ್ರೊ. ಡಿ.ಬಿ. ಬಡಿಗೇರ, ಸಿ. ವೀರಣ್ಣ, ಅಶೋಕ ಶೆಟ್ಟರ್, ದೊಡ್ಡರಂಗೇಗೌಡ, ಶ್ಯಾಮಸುಂದರ ಬಿದರಕುಂದಿ, ಬರಗೂರು ರಾಮಚಂದ್ರಪ್ಪ, ಬೇಂದ್ರೆ, ಟಿ. ಮಲ್ಲಪ್ಪ, ಮುಂತಾದವರು ಬರೆದಿರುವ 56 ಕವಿತೆಗಳು ಓದುಗರಿಗೆ ಹಸಿವಿನ ದರ್ಶನ ಮಾಡಿಸುತ್ತದೆ. ಕನ್ನಡ ಸಾಹಿತ್ಯ ಎಷ್ಟರ ಮಟ್ಟಿಗೆ ಜನರ ಹಸಿವಿಗೆ ಸ್ಪಂದಿಸಿದೆ ಎಂಬುದು ಈ ಕವಿತೆಗಲ ಮೂಲಕ ತಿಳಿಯುತ್ತದೆ. ಕವಿತೆ ಮೂಲಕವೇ ಅಲ್ಲದೇ ಕಥಾ ರೂಪದಲ್ಲಿ ಜನರು ಹಸಿವಿಗೆ ಸ್ಪಂದಿಸಲಾಗಿದೆ.
ಇಲ್ಲಿ ಬಳಸಿರುವ ಪದಗಳು ಹಸಿವಿನ ನೋವನ್ನು ಓದುಗನ ಮನಸಿಗೆ ತಾಗಿಸುತ್ತವೆ. ಹಸಿದವರ ಸ್ಥಿತಿಗೆ ಮರಗುವ ಮನಸ್ಸಿರುವ ಈ ಕವಿತೆಗಳಲ್ಲಿ ಶೋಷಿತರ ವಿರುದ್ಧ ಸಿಡಿಯುವ ರೋಷನೂ ಅರಿವಿಗೆ ಬರುತ್ತದೆ. ಇಲ್ಲಿರುವ ಕವಿತೆಗಳು ಬೇರೆಬೇರೆ ಸಂದರ್ಭಗಳಲ್ಲಿ ರಚಿತವಾದವುಗಳಾದರೂ ಅವು ಹಸಿವನ್ನು ಹೊಮ್ಮಿಸುವ ರೀತಿ ನೋಡಿದರೆ ಹಸಿವೆಂಬ ಕರಾಳತೆ ಜನರನ್ನೂ ಕಾಲದಿಂದ ಕಾಲಕ್ಕೆ ಬಿಡುವು ಕೊಡದೆ ಬಾಧಿಸುತ್ತಿರುವ ರೀತಿ ಕಣ್ಣಿಗೆ ಕಟ್ಟುತ್ತದೆ. ಎಲ್ಲಾ ಕವಿತೆಗಳೂ ಇದು ಹಾಡಲ್ಲ ಒಡಲ ಉರಿ ಎಂಬುದನ್ನು ವ್ಯಕ್ತಗೊಳಿಸುತ್ತವೆ.
-ಎನ್.ಎಸ್ ಗೌಡ
ಲಂಕೇಶ್ ಪತ್ರಿಕೆ /13 ಮೇ 2010
No comments:
Post a Comment