Tuesday, 11 June 2013

ಜಾನಪದಕ್ಕೆ ಮಾಸ್ತರರಾದ ಡಾ.ಎಲ್.ಆರ್.ಹಗಡೆ

        ಜಾನಪದಕ್ಕೆ ಮಾಸ್ತರರಾದ ಡಾ.ಎಲ್.ಆರ್.ಹಗಡೆ                                                                                       
                                                                                                          - ಡಾ.ವಿಠ್ಠಲ ಭಂಡಾರಿ.
           ದೊಗಲೆ ಪ್ಯಾಂಟು,ಉದ್ದ ತೋಳಿನ ಅಂಗಿ, ಅಂಗಿಗೆರಡು ಕಿಸೆ, ಹೆಗಲಿಗೆ ಒಂದು ಬಟ್ಟೆ, ಕಣ್ಣಿಗೆ ಕನ್ನಡಕ, ಕೈಯಲ್ಲೊಂದು ಕೊಡೆ ಹಿಡಿದು ಹೊಸೂರಿನಿಂದ ಸಿದ್ದಾಪುರಕ್ಕೆ ಹೊರಟರೆಂದರೆ,ಮಾಸ್ತಿಯವರ ಬಗ್ಗೆ ನಿಸ್ಸಾರ ಅಹಮದ್ ಬರೆದ
            ಕೂಗೂ ಹುಸಿಮುನಿಸುಗಳ ನಡುವೆ ತುಟಿಗಳ ಮೊಗ್ಗೆ
  ಬಿರಿಸಿ ನಕ್ಕಾಗಿವರು ಥೇಟ್ ಜುಲೈ ತಿಂಗಳ ಶಿವಮೊಗ್ಗೆ
  ಚಟಕಷ್ಟು ಚಳಿ ನೂಲು,ಒಂದಿಷ್ಟು ಹೂಬಿಸಿಲು.
  ಹೊರಗೆ ಕಚಪಿಚ ಕೆಸರು,ಒಳಗೆ ಬೆಚ್ಚನೆ ಸೂರು..."
     ಕವನ ನೆನಪಾಗುತ್ತದೆ.
        
 ಡಾ.ಎಲ್.ಆರ್.ಹೆಗಡೆಯವರು ಜಾನಪದ ಸಂಶೋಧಕ ವಿಮರ್ಶಕರಿಗೆ ವಿದ್ವಾಂಸರಾಗಿ ಗೌರವ ಪಡೆದಿದ್ದರೂ  ಜನಪದರ ಪಾಲಿಗೆ ಅವರೊಬ್ಬ ಮಾಸ್ತರರಾಗಿಯೇ ಪ್ರೀತಿಪಾತ್ರರಾಗಿದ್ದಾರೆ. ಸಂಶೋಧನೆಗಾಗಿ ಜನ ಸಮುದಾಯದ ನಡುವೆ ಬಂದ ಹೆಗಡೆಯವರು ಅವರ ಕಷ್ಟ-ಸುಖಗಳಿಗೆ ದಿನಗಟ್ಟಲೆ ಕಿವಿಗೊಟ್ಟರು. ಖಾಸಗಿ ಕೆಲಸಕ್ಕಾಗಿ ಹಳ್ಳಿಗಳಿಗೆ ಹೋದಾಗ ಜನರಿಂದ ಜಾನಪದ ಅಂಶಗಳನ್ನು ಕೆದಕಿ ಕೇಳುವ, ನೋಡುವ ಪ್ರವೃತ್ತಿ ಬೆಳೆಸಿಕೊಂಡರು. ಹಾಗಾಗಿ ಪ್ರತಿ ಸಮುದಾಯದ ಕುಟುಂಬದಲ್ಲಿ ಇನ್ನೊಬ್ಬ ಸದಸ್ಯರಾಗಿ ಬೆರೆಯುವ ಮಾನವೀಯ ಕಾಳಜಿ ಇರುವುದರಿಂದಲೇ ಹೆಗಡೆಯವರಿಗೆ ಜಾನಪದ ಅನ್ನುವುದು ಸಮುದಾಯವನ್ನು ಹೊರತಾಗಿಸಿದ ಪಠ್ಯವಲ್ಲ.ಅವರನ್ನು ಒಳಗೊಂಡ ಒಂದು ಜೀವನ ವಿಧಾನ.
 ಪ್ರಾಮಾಣಿಕತೆ ಮತ್ತು ಮುಗ್ದತೆ ಅವರ ವ್ಯಕ್ತಿತ್ವದ ಮುಖ್ಯ ಅಂಶಗಳು. ಒಮ್ಮೆ ನೀವು ಪರಿಚಯಿಸಿಕೊಂಡು ಮಾತನಾಡಿದಿರೆಂದರೆ ಸಂತೆ ಪೇಟೆಯಲ್ಲಿ ಕೂಡ ನಿಮ್ಮನ್ನು ಗುರುತಿಸಿ, ಮಾತನಾಡಿಸುವ ನೆನಪು ಅವರದು. ಮತ್ತು ವಿಷಯದಲ್ಲಿ ಆಸಕ್ತಿಯಿದೆಯೆಂದಾದರೆ ವಯಸ್ಸಿನ ಅಂತರವನ್ನೂ ಮರೆತು ನಿಮ್ಮೊಂದಿಗೆ ವಿಷಯ ಹಂಚಿಕೊಳ್ಳುವ ನಿರಹಂಕಾರಿ ಸ್ವಭಾವ ಅವರದು. ಯಾವುದಾದರೂ ರೋಗದ ಬಗ್ಗೆಯೋ, ಜಾನಪದ ಸಂಗ್ರಹದ ಬಗ್ಗೆಯೋ,ಅವರೇ ಪ್ರಕಟಿಸಿದ ಪುಸ್ತಕಗಳ ಬಗ್ಗೆಯೋ ದಾರಿಮಧ್ಯೆಯಲ್ಲಿ ಕೇಳಿದರೂ ಕೇಳುಗರ ಕುತೂಹಲವನ್ನು ತಣಿಸಿಯೇ ಮುಂದಕ್ಕೆ ಅಡಿ ಇಡುತ್ತಾರೆ. ಬಿಸಿಲು,ಗಾಳಿಗಳ ಪರಿವೆಯಿಲ್ಲದೇ, 80ರ ವಿದ್ವಾಂಸರಿಗೆ 20ರ ಹರೆಯದ ಉತ್ಸಾಹ ಎಲ್ಲಿಂದ ಬರುತ್ತದೆಯೋ?
 ತಟ್ಟನೆ ನೋಡಿದರೆ ವಿದ್ವಾಂಸರಂತೆ ಕಾಣುವುದಿಲ್ಲ. ಹೇಳಿದರೂ ನಂಬುವುದೂ ಕಷ್ಟ. ಆದರೆ ಮಾತನಾಡಿಸಿದರೆ ಮಾತ್ರ ಆಶ್ಚರ್ಯ ಆಗದೇ ಇರದು. ತೆಗೆದಷ್ಟೂ ಮತ್ತಷ್ಟು ತಂಬಿಕೊಂಡೇ ಇರುತ್ತದೆ. ಅಮೂಲ್ಯ ಸಂಪತ್ತು ಪಶ್ಚಿಮದ ಅರಬ್ಬಿಯಂತೆ ತೆರೆಯ ಹಿಂದೆ ತೆರೆಗಳ ಸಾಲು ಆದ ಬಗೆಯ, ಒಳಹೊಕ್ಕಿದರೆ ಅಮೂಲ್ಯ ಮುತ್ತು-ರತ್ನಗಳು; ಪೂರ್ವದ ಸಹ್ಯಾದ್ರಿಯಂತೆ ದಾರಿ ಕಂಡು ಒಳಹೊಕ್ಕಿದರೆ ಬೀಟೆ,ಗಂಧಗಳ ಅದ್ಭುತ ಗಣಿ.ಹಾಗೆ ನೋಡಿದರೆ ಇದೊಂದು ಜಾನಪದ ಅಕ್ಷಯಪಾತ್ರೆ.
 ಜಾನಪದ ಕಲೆ,ಸಂಸ್ಕೃತಿ, ಜೀವನ ವಿಧಾನದಲ್ಲಿ ಆದ ವರ್ತನೆಯನ್ನು ಸ್ವಾತಂತ್ರ್ಯ ಪೂರ್ವದಿಂದಲೇ ಅನುಭವಿಸಿದರು. ಕುಮಟಾ ತಾಲೂಕಿನ ಹೊಲನಗದ್ದೆಯಲ್ಲಿ ಜನವರಿ 1 1923ರಲ್ಲಿ ಜನಿಸಿದ,ಇವರ ಪ್ರಾಥಮಿಕ ಶಿಕ್ಷಣ ಕುಮಟಾದಲ್ಲಿಯೇ ನಡೆಯಿತು.1951ರಿಂದ 1981ರ ವರೆಗೆ ಕುಮಟಾದ ಕೆನರಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ,ರೀಡರ್ ಆಗಿ, ಪ್ರೊಪೇಸರ್ ಆಗಿ ಸೇವೆ ಸಲ್ಲಿಸಿದರು. ಈಗ ತಮ್ಮ ನಿವೃತ್ತಿ ಜೀವನವನ್ನು ಉತ್ತರ ಕನ್ನಡದ ಸಿದ್ದಾಪುರದಲ್ಲಿ ಕಳೆಯುತ್ತಿದ್ದಾರೆ.
                                                                       2
                     ಇವರೊಬ್ಬ ಸೃಜನಶೀಲ ಲೇಖಕರು ಎನ್ನುವುದು ಅನೇಕರಿಗೆ ಗೊತ್ತಿಲ್ಲ. ಇವರ ಬರೆವ ಬದುಕು ಪ್ರಾರಂಭವಾಗಿದ್ದು ಹೈಸ್ಕೂಲು ದಿನಗಳಲ್ಲಿ.ಕತೆ ಬರೆಯುವ ಮೂಲಕ. ಇವರ ಒಂದು ಕವನ ಸಂಕಲನ 'ಬಾಳ ದೀಪಾವಳಿ' 1958ರಲ್ಲಿಯೂ,ಕಥಾ ಸಂಕಲನ 'ಹಕ್ಕಿ ನರಸಣ್ಣ' 1960ರಲ್ಲೂ 'ಘಾಟಿ ಮುದುಕಿ' ನಾಟಕ 1962ರಲ್ಲೂ ಪ್ರಕಟವಾಗಿವೆ. ಇದಲ್ಲದೇ 5-6 ಏಕಾಂಕ ನಾಟಕ ಹಲವಾರು ಬಿಡಿಕತೆಗಳು, ಹಲವಾರು ಕವಿತೆ,ಹನಿಕವನ,ರೂಪಕಗಳು,ಲಘು ಬರಹಗಳು, ಈಗಾಗಲೇ ನಾಡಿನ ಅನೇಕ ಪತ್ರಿಕೆಗಳಲ್ಲಿ, ವಿಶೇಷಾಂಕಗಳಲ್ಲಿ ಬೆಳಕು ಕಂಡಿವೆ. ಇದಲ್ಲದೇ ಅನುವಾದಿತ ಕೃತಿ,ವ್ಯಕ್ತಿಚಿತ್ರಗಳು ಬೆಳಕು ಕಂಡಿದೆ.
               
               ಎಲ್ಲಾರ್ ಹೆಗಡೆಯವರದು ಸಾಹಿತ್ಯ ವಿಮಶರ್ೆಯಲ್ಲೂ ಮುಖ್ಯ ಹೆಸರು. ನವೋದಯದ ಸ್ಪಷ್ಟ ದಾಟಿಯಲ್ಲಿಯೇ ಸಾಗುವ ಇವರ 5 ವಿಮಶರ್ಾ ಸಂಕಲನಗಳು ಪ್ರಕಟವಾಗಿವೆ. ಕಾವ್ಯ-ವ್ಯಾಸಂಗ 'ಕುಮಾರವ್ಯಾಸ' 'ಬತ್ತಲೇಶ್ವರ ರಾಮಾಯಣ' ಹಳಗನ್ನಡ ಕವನಗಳು' ಬಿಂಬ ಪ್ರತಿಬಿಂಬ' ಮುಖ್ಯವಾದದ್ದು.
                ಡಾ. ಹೆಗಡೆಯವರು ಪಿ.ಎಚ್.ಡಿ. ಅಧ್ಯಯನಕ್ಕೆ  ಆಯ್ಕೆ ಮಾಡಿಕೊಂಡ ವಿಷಯ ಜಾನಪದದ್ದಲ್ಲ. 'ಕುಮಾರವ್ಯಾಸನ ಪಾತ್ರ ಸೃಷ್ಟಿ' ಎನ್ನುವ ವಿಷಯದ ಮೇಲಿನ ಅಧ್ಯಯನಕ್ಕೆ ಪಿ.ಎಚ್.ಡಿ. ಸಿಕ್ಕಿದೆ.ಇದು ಕಾಲ್ಪನಿಕ ಮತ್ತು ಮನೋವೈಜ್ಞಾನಿಕ ಸೆಲೆಯ ಸಂಶೋಧನ ಮಹಾಪ್ರಬಂಧ.

                ಇದಲ್ಲದೇ 40-50 ಲೇಖನಗಳು ಬಿಡಿಬಿಡಿಯಾಗಿ ಪ್ರಕಟವಾಗಿದೆ. ಇವು ಪುಸ್ತಕರೂಪ ಪಡೆದುಕೊಳ್ಳಬೇಕಾಗಿದೆ. ಮುಖ್ಯವಾಗಿ ಇಲ್ಲೆಲ್ಲಾ ಅವರ ವಿಮಶರ್ಾ ಸಂಯಮ ಎದ್ದು ಕಾಣುತ್ತದೆ. ಸರಳವಾಗಿದ್ದನ್ನೂ ಸಂಕೀರ್ಣವಾಗಿ ಹೇಳುವ ಕ್ರಮ ಇವರದ್ದಲ್ಲ.ನಡೆ-ನುಡಿ ಎಷ್ಟು ಸರಳವೋ ಅವರ ವಿಮಶರ್ಾ ಲೇಖನದ ದಾಟಿ ಕೂಡ ಅಷ್ಟೇ ಸರಳ. ವಿಷಯ ವೈವಿಧ್ಯ ಕೂಡ ಸಾಕಷ್ಟಿದೆ.

                  ಡಾ. ಹೆಗಡೆಯವರು ಅತ್ಯತ್ತಮ ಹೋಮಿಯೋಪತಿ ವೈದ್ಯರು ಕೂಡ ಹೌದು. ನಾಡ ಔಷಧಿಯಲ್ಲಿಯೂ ಅವರಿಗೆ ಒಳ್ಳೆಯ ಗತಿ ಇದೆ. ಸುಮಾರು 15 ವೈದ್ಯ  ಗ್ರಂಥಗಳನ್ನು ಪ್ರಕಟಿಸಿದ್ದು,ಕೇವಲ ಅಲ್ಲಿ ಇಲ್ಲಿ ಕೇಳಿ ಸಂಗ್ರಹಿಸಿದ್ದಲ್ಲ.ಸ್ವತಃ ಅವರೇ ಅದನ್ನು ಪ್ರಯೋಗ ಮಾಡಿ ನೋಡಿದವರು. ಅವರಿಗೆ 'ಸೀನಿಯರ್ ಹೋಮಿಯೋಪತಿ' ಎಂಬ ಬಿರುದು ಕೂಡ ಬಂದಿದೆ. ಮದ್ದಿನ ಮೇಲೆ ಇಷ್ಟೊಂದು ಪುಸ್ತಕ ಪ್ರಕಟಿಸಿದವರಲ್ಲಿ ಇವರೇ ಮೊದಲಿಗರು ಎಂದು ವಿದ್ವಾಂಸರ ಅಭಿಪ್ರಾಯ. ಒಬ್ಬ ರೋಗಿಯನ್ನು ಎಷ್ಟೊಂದು ಪ್ರೀತಿಸುತ್ತಾರೆ ಎಂದರೆ ನಿಮ್ಮ ಆರೋಗ್ಯದ ಬಗ್ಗೆ ತಿಳಿದರೆ ಸಾಕು ಅದಕ್ಕೊಂದು ಔಷಧ ಹೇಳಿಯೇ ಉಳಿದ ಮಾತುಗಳು ಒಂದು ಪತ್ರ ಬರೆದರೆ ಸಾಕು 5-6 ಕಿ.ಮೀ. ನಡೆದೇ ಮನೆಗೆ ಬಂದು,ಔಷಧ ಕೊಟ್ಟು ಹೋಗುವ ವಿಶಿಷ್ಟ ವ್ಯಕ್ತಿ ಇವರು. ಜಾನಪದ ಕಥೆಯ ಸಂಗ್ರಹದಲ್ಲಿ ಇವರೇ ಪ್ರಥಮರು. ಬೇರೆಯವರ ಸಂಗ್ರಹ ಮೊದಲೇ ಪ್ರಕಟವಾಗಿದ್ದರೂ ಆ ದಿಶೆಯಲ್ಲಿ ದೊಡ್ಡ ಪ್ರಯತ್ನ ನಡೆದದ್ದು ಇವರಿಂದಲೇ ಈ ವರೆಗೆ ಸುಮಾರು 500ಕ್ಕೂ ಹೆಚ್ಚು ಕಥೆಗಳನ್ನು ಅವರು ಸಂಗ್ರಹಿಸಿದ್ದಾರೆ.(ಅದರ ಕೃತಿ ವಿವರ ಪ್ರತ್ಯೇಕವಾಗಿ ಕೊಡಲಾಗಿದೆ.) 
                    
                      ತೀರಾ ವೈವಿಧ್ಯತೆ ಇದೆ. ಬ್ರಾಹ್ಮಣ ಕುಟುಂಬದಿಂದ ಹಿಡಿದು ಮುಕರಿ ಮತ್ತು ಹೊಲೆಯರ ಜನಾಂಗದವರೆಗಿನ ಕಥೆಗಳನ್ನು ಅವರು ಸಂಗ್ರಹಿಸಿದ್ದಾರೆ. ಹಾಗೆ ನೋಡಿದರೆ ಅವರ ಕಥೆಗಳ ಸಮಗ್ರ ಅಧ್ಯಯನ ಉತ್ತರ ಕನ್ನಡದ ಎಲ್ಲಾ ವರ್ಗ,ಸಮುದಾಯದ ಸಮಗ್ರ ಅಧ್ಯಯನವೂ ಹೌದು ಎನ್ನುವಷ್ಟು ವ್ಯಾಪಕವಾದದ್ದು.
 ಯಾವುದೇ ಆಧುನಿಕ ಸಲಕರಣೆಗಳಿಲ್ಲದ ಆ ದಿನಗಳಲ್ಲಿಯೇ ಡಾ.ಹೆಗಡೆಯವರು ಸಂಶೋಧನೆಗೆ ತೊಡಗಿಕೊಂಡವರು. ನಡೆಯಲು ಕಾಲು,ಕೇಳಲು ಕಿವಿ,ಬರೆಯಲು ಪಟ್ಟಿ-ಪೆನ್ನು ಇವಿಷ್ಟೇ ಹೆಗಡೆಯವರ ಸಾಧನ.ಇವಿಷ್ಟರಿಂದಲೇ ಅದೆಷ್ಟು ಸಮರ್ಪಕವಾಗಿ ಅವರು ಸಂಗ್ರಹಿಸಿದ್ದಾರೆ ಎನ್ನುವುದೇ ಆಶ್ಚರ್ಯದ ಮಾತು.ಇದನ್ನೇ ಡಾ: ಬಿಳಿಮಲೆಯವರು 'ಅವರು ಕೆಲಸವನ್ನು ಪ್ರಾರಂಭಿಸಿದಾಗ ಉತ್ತರ ಕನ್ನಡದಂತಹ ಜಿಲ್ಲೆಯಲ್ಲಿ ಆಧುನಿಕ ಸಲಕರಣೆಗಳು ಇರಲು ಸಾಧ್ಯವಿರಲಿಲ್ಲ. ಆದರೆ ಅದನ್ನು ತೊಂದರೆ ಎಂದು ಭಾವಿಸದೇ ಹೆಗಡೆಯವರು ಅಪಾರ ಶ್ರಮ ವಹಿಸಿ ತಮ್ಮ ಪರಿಸರದಲ್ಲಿಲಭ್ಯವಿರುವ ಜಾನಪದ ಮಾಹಿತಿಗಳನ್ನು ಕಲೆ ಹಾಕಿದರು' ಎಂದು ಸರಿಯಾಗಿಯೇ ಅವರ ವಿಶಿಷ್ಟತೆಯನ್ನು ಗುರುತಿಸಿದ್ದಾರೆ.
  ಹಾಗಾಗಿ ಇಂದಿಗೂ ಅವರಿಗೆ ಅವರು ಸಂಗ್ರಹಿಸಿದ ಹಾಡಿನ ದಾಟಿ ತಿಳಿದಿದೆ. ಹಾಡ ಬಲ್ಲರೂ ಕೂಡ. ಅವರ ಸಂಕಲನದ ಒಂದು ಕಥೆಯ ಹೆಸರು ಹೇಳಿದರೆ 40 ವರ್ಷದ ಹಿಂದೆ ಅದನ್ನು ಯಾರು ಹೇಳಿದರು? ಅದರ ಎಲ್ಲಾ ವಿವರಗಳನ್ನು ಅವರು ಹೇಳಬಲ್ಲರು.
 ಪ್ರತಿಯೊಂದು ಸಂಗ್ರಹದ ಮುನ್ನುಡಿಯಂತೂ ಅತ್ಯಂತ ದೀರ್ಘವೂ ಮತ್ತು ಕತೆಯ 'ಓದಿಗೆ ಮಹತ್ವದ ಪೀಠಿಕೆಯೂ ಆಗಿದೆ. ಯಾವದೋ ಬುಡಕಟ್ಟಿನ ಕಥೆಯನ್ನು ಸಂಗ್ರಹಿಸಿದ್ದಾರೆ ಎಂದರೆ ಆ ಬುಡಕಟ್ಟಿನ ಜೀವನ ಕ್ರಮ-ಆಯಾಮಗಳ ದಾಖಲೆಯನ್ನು ಕೊಡುತ್ತಾರೆ.ಹಾಗಾಗಿ ಅನೇಕ ಸಂದರ್ಭದಲ್ಲಿ ಅದೇ ಒಂದು ಪುಸ್ತಕ ಆಗುವಷ್ಟು ಪರಿಪೂರ್ಣ ಮತ್ತು ಸ್ವತಂತ್ರ.ಇದರೊಂದಿಗೆ ಅಪರಿಚಿತ ಜನಾಂಗ ಒಂದು ಹಂತದಲ್ಲಿ ಪರಿಚಿತ ಲೋಕವಾಗಿಬಿಡುತ್ತದೆ.
 ಸದಾ ಇನ್ನೊಬ್ಬನ ಕಷ್ಟವನ್ನು ನೋಡಿ ಮರುಗುವ ಸ್ವಭಾವ ಎಲ್.ಆರ್.ಹೆಗಡೆಯವರದು.ಹಾಗಾಗಿ ಅವರು ಜನಪದ ಕಷ್ಟಗಳಿಗೆ ಸ್ಪಂದಿಸಿದ ಘಟನೆಗಳು ನೂರಾರು. ತೀರಾ ಅಸಹಾಯಕ ನಿಕೃಷ್ಟ ಬಾಳನ್ನು ಬದುಕುತ್ತಿರುವ ಅನೇಕರನ್ನು ಮೇಲೆತ್ತಲು ಸ್ವತಃ ಪ್ರಯತ್ನಿಸಿದವರು.ಉದಾಹರಣೆಗೆೆ ಉತ್ತರ ಕನ್ನಡದ ಮುಕರಿಗಳನ್ನು ಗುರುತಿಸಿ ಅವರಿಗೆ ಮೀಸಲಾತಿ(ವಿಶೇಷ ಸೌಲತ್ತು) ಕೊಡಿಸುವಲ್ಲಿ ಅವರು ಪಟ್ಟ ಶ್ರಮವನ್ನು ನಾವಾಗಿ ಕೇಳಿದರೆ ನೆನಪಿಸಿಕೊಳ್ಳುತ್ತಾರೆ. ಹಾಗಾಗಿ ಈ ಸಂಶೋಧಕನ ಮತ್ತು ಜನಪದ ಸಂಬಂಧ ಯಾಂತ್ರಿಕವಾದದ್ದಲ್ಲ. ರಕ್ತ ಮಾಂಸಗಳಿಂದೊಡಗೂಡಿದ ಮಾನವೀಯ ಸಂಬಂಧ. ಆಧುನಿಕ ಸಾಧನ ಸಲಕರಣೆಗಳ ಕಾಲದಲ್ಲಿ ಇದು ಮರೆಯಾಗುತ್ತಿರುವುದು ವಿಷಾದನೀಯ.
                                                                   4 ಸಂಶೋಧಕನಿಗಿರಬೇಕಾದ ಕಾಳಜಿಯ ಬಗ್ಗೆ ಕೇವಲ ಅವರಲ್ಲಿ ಇರುವ ಸಾಹಿತ್ಯವನ್ನು ತೆಗೆದುಕೊಂಡು ಬರುವುದಾಗಲಿ, ತಂದದ್ದನ್ನು ಯಾಂತ್ರಿಕವಾಗಿ ವಿಶ್ಲೇಷಿಸುವುದಾಗಲಿ ಸಂಶೋಧಕನ ಗುಣವಲ್ಲ. ಅವನಿಂದ ನಾವು ಪಡೆಯುವ ಸಾಹಿತ್ಯಕ್ಕಿಂತ ಅವನ ಬದುಕು, ಜೀವನ ಮುಖ್ಯ. ಲೋಕ ಬದುಕಿನಲ್ಲಿರುವ ಅನೇಕರಿಗೆ ಅವರ ಕಷ್ಟಗಳಿಗೆ ಸ್ಪಂಧಿಸಿ ಕೈಲಾದ ಸಹಾಯ ಮಾಡುವುದು ಜೀವನದ  ವಿದ್ವಾಂಸನ ಕರ್ತವ್ಯ ಎಂದು ಹೇಳುವ ಹೆಗಡೆಯವರ ಪ್ರಗತಿಪರ ಮನೋಭಾವವನ್ನು ತಿಳಿಸುತ್ತದೆ.
 ಡಾ.ಹೆಗಡೆಯವರು ಎಂದೂ ಪ್ರಶಸ್ತಿಗಳ, ಸನ್ಮಾನಗಳ ಹಿಂದೆ ಹೋಗದಿರುವ ನಾಚಿಕೆ ಸ್ವಭಾವವನ್ನು ಬೆಳೆಸಿಕೊಂಡಿದ್ದರು. ರಾಜ್ಯ ಮಟ್ಟದ ಅನೇಕ ಗೋಷ್ಠಿ ಪ್ರಬಂಧಕಾರರಾಗಿ, ಅಧ್ಯಕ್ಷರಾಗಿ ಭಾಗವಹಿಸಿದ್ದಾರೆ.(ಪ್ರಶಸ್ತಿ ಗೌರವಗಳ ವಿವರ ಪ್ರತ್ಯೇಕವಾಗಿ ಕೊಟ್ಟಿದೆ.)ಆದರೂ ಅವರಿಗೆ ಸಿಗಬೇಕಾದ ಸ್ಥಾನಮಾನ ಇನ್ನೂ ಸಿಗಲಿಲ್ಲ ಎಂದೇ ಹೇಳಬೇಕು. ಯಾಕೆಂದರೆ ಇವರ ಸಂಶೋಧನೆಗಳ ಮಧ್ಯೆ ಪ್ರಶಸ್ತಿ ಪಡೆಯಲು ಬೇಕಾದ ಲಾಬಿಯನ್ನು ಕಟ್ಟಿಕೊಳ್ಳುವುದನ್ನೇ ಇವರು ಮರೆತರು.
 ಒಬ್ಬ ಸಂಶೋಧಕರಿಗೆ ಬೇಕಾದ ಕುತೂಹಲ,ಆತ್ಮವಿಶ್ವಾಸ ಮತ್ತು ಶಿಸ್ತನ್ನು ಸಮನಾಗಿ ರೂಢಿಸಿಕೊಂಡ ಡಾ.ಎಲ್.ಆರ್.ಹೆಗಡೆ ಯವರು ಈ 80ರ ವಯಸ್ಸಿನಲ್ಲಿಯೂ ಸಂಗ್ರಹ ಕಾರ್ಯವನ್ನು ನಿಲ್ಲಿಸಿಲ್ಲ. ಇಂಥವರಿಗೆ ಹಾರತುರಾಯಿಗಳ ಮೂಲಕ ಸನ್ಮಾನಿಸುವುದು ತಕ್ಕವಲ್ಲವೆಂದು ತಿಳಿದು ಇತ್ತೀಚೆಗೆ ಉತ್ತರ ಕನ್ನಡದ ಗೆಳೆಯರು ಅವರ 5 ಪುಸ್ತಕಗಳನ್ನು ಮತ್ತು ಅವರ ಕೃತಿಸೂಚಿಯನ್ನು 1997 ರಲ್ಲಿ ಮತ್ತು 2000ರಲ್ಲಿ 4 ಪುಸ್ತಕಗಳನ್ನು ಮುದ್ರಿಸಿ ಅವರಿಗೆ ಅಪರ್ಿಸುವುದರ ಮೂಲಕ ವಿಶಿಷ್ಟವಾಗಿ ಸನ್ಮಾನಿಸಿದರು.
 ಅಂದು ಭಾಗವಹಿಸಿದ ಡಾ.ಎಚ್.ಜೆ.ಲಕ್ಕಪ್ಪ ಗೌಡರು ಜಾನಪದ ಸಾಹಿತ್ಯದ ಸಂದರ್ಭದಲ್ಲಿ ಎಲ್.ಆರ್.ಹೆಗಡೆಯವರು ಒಂದು ಮಾರ್ಗ 'ಜಾನಪದ ವಿದ್ವಾಂಸರಿಗೆ ಕೊಡಬಹುದಾದ ಒಂದು ಅತ್ಯುನ್ನತ ಪ್ರಶಸ್ತಿಯೇನಾದರೂ ಕನರ್ಾಟಕದಲ್ಲಿ ಸ್ಥಾಪನೆ ಆದರೆ ಅದು ಮೊದಲು ಸಲ್ಲಬೇಕಾದ್ದು ಡಾ.ಎಲ್.ಆರ್.ಹೆಗಡೆಯವರಿಗೆ'. ಹೇಳಿದ ಈ ಮಾತು ಎಲ್.ಆರ್.ಹೆಗಡೆಯವರ ಮಹತ್ವವನ್ನು ಸ್ವಲ್ಪವಾಗಿ ತಿಳಿಹೇಳುತ್ತೇವೆ.
           
                         (ಅವರು ಬದುಕಿರುವಾಗ ಬರೆದಿದ್ದು. ಈಗ ನಮ್ಮೊಂದಿಗೆ ಅವರಿಲ್ಲ)
****************

No comments:

Post a Comment