ಪ್ರಾಥಮಿಕ ಶಾಲೆಗಳಲ್ಲಿ ಕನ್ನಡವನ್ನು ಹೇಗೆ ಉಳಿಸಬೇಕು? ಬೆಳೆಸಬೇಕು?
ನಿ ನಿ ಕನ್ನಡ ಭಾಷೆ ಕನರ್ಾಟಕದ ರಾಜ್ಯ ಭಾಷೆ. ಹಾಗೆಯೇ ಅದು ಇಲ್ಲಿಯ ಮುಖ್ಯವಾದ ವ್ಯಾವಹಾರಿಕ ಭಾಷೆಯೂ ಆಗಿದೆ. ಅದು ಕನರ್ಾಟಕದ ಹೆಚ್ಚಿನ ಶಾಲೆಗಳಲ್ಲಿ ಒಂದರಿಂದ ಹತ್ತನೆಯ ತರಗತಿಯವರೆಗಿನ ಶಿಕ್ಷಣ ಮಾಧ್ಯಮವಾಗಿದೆ ಕೂಡ. ಒಂದು ಭಾಷೆ ವ್ಯಾವಹಾರಿಕ ಮಾಧ್ಯಮವಾಗುವುದು ಎಂದರೆ ಆ ಭಾಷೆಯ ಮುಖಾಂತರ ನಮ್ಮ ಗ್ರಹಿಕೆಯ ಶಕ್ತಿ, ವ್ಯಕ್ತಿತ್ವದ ಬೆಳವಣಿಗೆ ಮತ್ತು ಅಭಿವ್ಯಕ್ತಿಯ ಸೂಕ್ಷ್ಮತೆಯನ್ನು ಸಾಧಿಸುವುದೇ ಆಗಿದೆ. ಒಟ್ಟಾರೆಯಾಗಿ ಭಾಷೆ ನಮ್ಮ ಇಡಿಯಾದ ಬೆಳವಣಿಗೆಗೆ ಮೂರ್ತಸ್ವರೂಪಿಯಾಗಿದೆ.
ಕನ್ನಡ ಮಾಧ್ಯಮದ ಶಾಲೆಗಳಲ್ಲಿ, ಅದರಲ್ಲೂ ನನ್ನ ಅನುಭವದ ಖಾಸಾತನಕ್ಕೆ ಬಂದಂತೆ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಕನ್ನಡ ಭಾಷೆಯ ಬೆಳವಣಿಗೆ ಗಮನಾರ್ಹವಾಗಿ ಕುಸಿದಿದೆ. ಇದಕ್ಕೆ ಕೇವಲ 'ಆಂಗ್ಲ ಮಾಧ್ಯಮ ವ್ಯಾಮೋಹ' ಎಂದು ಒಂದೇ ಮಾತಿನಲ್ಲಿ ಹೇಳುವುದೂ ಈಗ ಸಾಮಾನ್ಯವೂ ಸುಲಭವೂ ಆಗಿಬಿಟ್ಟಿದೆ. ಇದು ಸರಿಯಲ್ಲ. ಅದಕ್ಕೆ ಇದೊಂದೇ ಕಾರಣವೂ ಅಲ್ಲ. ಅನೇಕ ಕಾರಣಗಳು ಬೇರೆಯೇ ಇವೆ. ವೃಥಾ ಆರೋಪ ಪಟ್ಟಿ ಮಾಡುವಂತಿಲ್ಲ. ಒಟ್ಟಿನಲ್ಲಿ ಕನ್ನಡ ಭಾಷೆಯ ಸ್ಥಿತಿ-ಗತಿ ನಿರಾಶಾದಾಯಕವಾಗಿದೆ. ಹಾಗೆಂದು ಇದು ಸುಧಾರಿಸಲು ಅಸಾಧ್ಯವಾದುದೇನೂ ಅಲ್ಲ ಅಥವಾ 'ಅಸಾಧ್ಯ'ವೆಂದು ಕೈಚೆಲ್ಲಿ ಕುಳಿತುಕೊಳ್ಳುವಂತೆಯೂ ಇಲ್ಲ. ಬದಲಾವಣೆ, ಸುಧಾರಣೆ, ಸತ್ತ್ವಭರಿತ ಭಾಷಾ ಬೆಳವಣಿಗೆ, ನಾವು-ನೀವು ಮುಖ್ಯವಾಗಿ ಶಾಲೆಗಳ ಉಪಾಧ್ಯಾಯರುಗಳು ಮನಸ್ಸು ಮಾಡಿದರೆ ಖಂಡಿತ ಸಾಧ್ಯ. ಆ ದಿಕ್ಕಿನಲ್ಲಿ ನಾನು ಕನ್ನಡ ಶಾಲಾ ಶಿಕ್ಷಕನಾಗಿ ದುಡಿದ ಆಯುಷ್ಯದ, ಅನುಭವದ ಹಿನ್ನೆಲೆಯಲ್ಲಿ ಕೆಲವು ಸೂಚನೆಗಳನ್ನೂ, ಮಾರ್ಗಗಳನ್ನೂ, ಉಪಾಯಗಳನ್ನೂ ಇಲ್ಲಿ ಸೂಚಿಸಬಯಸುತ್ತೇನೆ.
ಪ್ರಾಥಮಿಕ ಹಂತದಿಂದ ಹಿಡಿದು ವಿಶ್ವವಿದ್ಯಾಲಯದ ತನಕದ ಅಧ್ಯಾಪಕರು ಸಾಮಾನ್ಯವಾಗಿ ಗುರುತಿಸುವುದೇನೆಂದರೆ-'ವಿದ್ಯಾಥರ್ಿಗಳು ಬರವಣಿಗೆಯಲ್ಲಿ ಗಣನೀಯವಾಗಿ ಕಾಗುಣಿತ, ಅಲ್ಪ ಪ್ರಾಣ, ಮಹಾ ಪ್ರಾಣ ಮತ್ತು ಹ್ರಸ್ವ, ದೀರ್ಘ ತಪ್ಪು ಮಾಡುವಿಕೆ. ಇದನ್ನು ಆರಂಭದಲ್ಲಿಯೇ ತಿದ್ದ ಬೇಕಿತ್ತು. ಹಾಗೆ ಮಾಡದಿರುವುದೇ ಇದಕ್ಕೆ ಕಾರಣ' ಎನ್ನುವುದು ಅವರ ವಾದ. ಇದು ಸತ್ಯವೂ ಹೌದು. ಆದರೆ ತಿದ್ದುವಿಕೆ ಕೇವಲ ಪ್ರಾಥಮಿಕ ಹಂತದ ಕ್ರಿಯೆ ಮಾತ್ರವಲ್ಲ. ಅದು ನಿರಂತರವಾಗಿ ಸಾಗಬೇಕಾದ ಪ್ರಕ್ರಿಯೆಯೂ ಹೌದು.
ಈ ತಪ್ಪುಗಳಿಗೆ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಕೇಳಿದರೆ ಅವರು ಕೊಡುವ ಕಾರಣಗಳು ಹೀಗೆ-'ಮೊದಲು ಅಕ್ಷರ ಪದ್ಧತಿಯಿಂದ ಕಲಿಸುತ್ತಿದ್ದರು. ಆಗ ಸರಿಯಾಗಿ ಕಾಗುಣಿತ, ಹ್ರಸ್ವ, ದೀರ್ಘಗಳ ರೂಢಿ ಆಗುತ್ತಿತ್ತು. ಮಕ್ಕಳು ಅಕ್ಷರ ಗುರುತಿಸಿ ಶಬ್ದ, ವಾಕ್ಯದ ಕಡೆಗೆ ಹೋಗುತ್ತಿದ್ದುದರಿಂದ ಮರೆಯಲಾರದಷ್ಟು ಮೈಗೂಡುತ್ತಿತ್ತು. ಈಗ ಆ ಪದ್ಧತಿ ಬಿಟ್ಟದ್ದೇ ಇಷ್ಟೊಂದು ತಪ್ಪುಗಳಿಗೆ ಕಾರಣ.'
ಈಗ ಶಬ್ದ ಮತ್ತು ವಾಕ್ಯ ಪದ್ಧತಿ ಜಾರಿಯಲ್ಲಿದೆ. ಇದರಲ್ಲಿ ಗಿಳಿ ಓದಿನ ತರ ಮಕ್ಕಳು ರೂಢಿಸಿಕೊಳ್ಳುತ್ತಾರೆ. ಹಾಗಾಗಿ ಅಕ್ಷರ ಸ್ಖಾಲಿತ್ಯ ಮತ್ತು ಅಕ್ಷರ ಲೋಪ ಉಂಟಾಗುತ್ತದೆ. ಅದು ದೋಷ ರೂಪದಲ್ಲಿ ಪ್ರಕಟವಾಗುತ್ತದೆ.
ಮೇಲಿನ ಎರಡು ಹೇಳಿಕೆಗಳ ಒಳಹೊಕ್ಕು ನೋಡಿದಾಗ ಸತ್ಯದ ದರ್ಶನ ಆಗಬಹುದು ಎನ್ನುವುದು ನನ್ನ ನಂಬಿಕೆ. ಭಾಷೆಯ ಕಲಿಕೆಯಲ್ಲಿ ಅಕ್ಷರ ಕಲಿಕೆ ಮೊದಲೊ? ಆಲಿಸುವಿಕೆ ಮೊದಲೇ? ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗಿ ಹುಟ್ಟುತ್ತದೆ. ಯಾವ ಮಗುವೂ ಮಾತನಾಡುವುದಕ್ಕಿಂತ ಮೊದಲು ಓದುವುದಿಲ್ಲ. ಇದು ಬಹಳ ಸಾಮಾನ್ಯ ವಿಚಾರ.
ಮಕ್ಕಳು ಮಾತು (ಭಾಷೆ) ಕಲಿಯುವುದು ತಾಯಿ-ತಂದೆ, ಮನೆಯವರ, ನೆರೆಯವರ, ಸುತ್ತಣ ಪರಿಸರದವರ ಮತ್ತು ಶಾಲೆಗಳ ಸಹಾಯದಿಂದ. ಮೊದಲ ಮಾತು ಕಲಿಯುವ ಮಗು ತನ್ನ ಹತ್ತಿರದವರ ಮಾತುಗಳನ್ನು ಗಮನವಿಟ್ಟು ಅಂದರೆ ತನ್ನ ಸಂಪೂರ್ಣ ಇಂದ್ರಿಯ ಶಕ್ತಿಗಳ ಮೂಲಕ 'ಆಲಿಸಿ' ಅನುಕರಿಸುತ್ತದೆ. ಆಡುವವರನ್ನು ತದೇಕಚಿತ್ತದಿಂದ ನೋಡುತ್ತಾ ಮುಖದ ಭಾವ ವೈವಿಧ್ಯ, ತುಟಿಯ ಚಲನೆ ಮತ್ತು ಧ್ವನಿಯನ್ನು ತನ್ನದಾಗಿಸಿಕೊಳ್ಳಲು, ಭಾಷೆಯನ್ನಾಗಿಸಲು ಪ್ರಯತ್ನಿಸುತ್ತದೆ. ಮತ್ತೆ ಮತ್ತೆ ಅದೇ ಸನ್ನಿವೇಶ, ಅದೇ ಮಾತು, ಅದೇ ವಸ್ತು ಸಿಕ್ಕಿದಾಗ ಪುನರಾವರ್ತನೆ ಆಗುತ್ತದೆ. ಆದ್ದರಿಂದ ಭಾಷಾ ಕಲಿಕೆಯಲ್ಲಿ ಆಲಿಸುವಿಕೆ ಮತ್ತು ಸಂಭಾಷಣೆಗೆ ಪ್ರಥಮ ಸ್ಥಾನ. ಇದು ಅಕ್ಷರ ಪದ್ಧತಿಯಲ್ಲೂ ಅಷ್ಟೇ. ಶಬ್ದ, ವಾಕ್ಯ ಪದ್ಧತಿಯಲ್ಲೂ ಅಷ್ಟೇ. ಅದಕ್ಕೇ ಹೇಳುವುದು-ಶಿಕ್ಷಕರು ಅಕ್ಷರವನ್ನಾಗಲೀ, ಶಬ್ದವನ್ನಾಗಲೀ ಉಚ್ಚರಿಸುವಾಗ ಮಗುವಿಗೆ ಕೇಳುವಂತೆ ಸ್ಪಷ್ಟವಾಗಿ, ವೇಗವೂ ಅಲ್ಲದ, ನಿಧಾನವೂ ಅಲ್ಲದ ರೀತಿಯಲ್ಲಿ ಮಗುವಿನ ಮುಖ ನೋಡುತ್ತಾ ಹೇಳಬೇಕು. ಪುನಃ ಉಚ್ಚರಿಸಬೇಕು. ಮಗು, ಒಂದು ಬಾರಿ ಹೇಳಿದಾಗ ಆಲಿಸುತ್ತದೆ. ಎರಡನೆಯ ಬಾರಿ ಹೇಳಿದಾಗ ಮನನ ಮಾಡುತ್ತದೆ. ಮೂರನೆಯ ಸಲ ಹೇಳಿದಾಗ ಶಬ್ದರೂಪ ಕೊಡಲು ಸಿದ್ಧವಾಗುತ್ತದೆ. ಪರಭಾಷೆಯಾದಾಗಲಂತೂ (ಇಂಗ್ಲಿಷ್ ಇತ್ಯಾದಿ) ಪುನರಾವರ್ತನೆಯನ್ನು ಹೆಚ್ಚು ಮಾಡಬೇಕು.
ಹಾಗೆಯೇ ಶಿಕ್ಷಕರು ಶಬ್ದಗಳನ್ನು ಉಚ್ಚರಿಸುವಾಗ ಅಲ್ಪ ಪ್ರಾಣ, ಮಹಾ ಪ್ರಾಣ ಗ್ರಹಿಕೆಯನ್ನು ಸ್ಪಷ್ಟವಾಗಿ ಇಟ್ಟುಕೊಳ್ಳಬೇಕು. 'ಕ.....ಖ' ಎನ್ನುವ ಬದಲು 'ಕ.....ಕ ಎಂದೋ, 'ಮುಖ್ಯ' ಎನ್ನುವ ಬದಲು 'ಮುಕ್ಯ' ಎಂದೋ ತಪ್ಪು ಉಚ್ಚರಿಸಿದರೆ ಮಕ್ಕಳೂ ಇದೇ ತಪ್ಪನ್ನು ಮಾಡುತ್ತಾರೆ. ಬರೆಯುವಾಗಲೂ ಅಷ್ಟೇ. ಶಿಕ್ಷಕರು ಸರಿಯಾಗಿ ಬರೆದು ತೋರಿಸಬೇಕು. ಅಕ್ಷರ ಪದ್ಧತಿಯಾಗಲಿ, ಶಬ್ದ ಪದ್ಧತಿಯಾಗಲಿ, ಅದರ ಯಶಸ್ಸು ಮಕ್ಕಳ ಆಲಿಸುವಿಕೆ ಮತ್ತು ನೋಡುವಿಕೆಯನ್ನು ಅವಲಂಬಿಸಿದೆ. ಮಕ್ಕಳು ಬರಹವನ್ನು ಕಣ್ಣಿನಿಂದಲೂ ಕಿವಿಯಿಂದಲೂ ಏಕಕಾಲದಲ್ಲಿ ಓದುತ್ತಾರೆ. ಇವರೆಡರ ಸುಸಂಗತತೆ ಬಹಳ ಮುಖ್ಯ.
ಈ ಪದ್ಧತಿಗಳ ಸಾಧಕ-ಬಾಧಕಗಳೇನು?
ಅಕ್ಷರ ಪದ್ಧತಿ ಮತ್ತು ಶಬ್ದ ಪದ್ಧತಿಗಳ ಸಾಧಕ-ಬಾಧಕಗಳ ಬಗ್ಗೆ ತುಸು ಚಚರ್ಿಸಬೇಕು. ಅಕ್ಷರಗಳನ್ನು ಮಕ್ಕಳಿಗೆ ಹೇಳಿಕೊಡುವಾಗ ಬೋಧಕರು ವೈಯಕ್ತಿಕವಾಗಿ ಮಕ್ಕಳ ಸಂಪರ್ಕವನ್ನು ಹೊಂದಿರುತ್ತಾರೆ. ಪಾಟಿ (ಸ್ಲೇಟ್)ಯ ಮೇಲೆ ವಿದ್ಯಾಥರ್ಿಯ ಹತ್ತಿರದಲ್ಲಿಯೇ ಕುಳಿತು ಅಕ್ಷರವನ್ನು ಎಲ್ಲಿಂದ ಆರಂಭಿಸಬೇಕು? ಹೇಗೆ ಬರೆಯಬೇಕು? ಎನ್ನುವುದನ್ನು ಕಾಣಿಸುತ್ತಾರೆ. ಕೆಲವು ಸಲ ಶಿಕ್ಷಕರೇ ಮಗುವಿನ ಕೈ ಹಿಡಿದು ಬರೆಸುತ್ತಾರೆ. ಹಾಗೇ ತಿದ್ದುವಾಗ ಬಾಯಿಯಲ್ಲಿ ತಾವೂ ಹೇಳುತ್ತಾ ಮಕ್ಕಳಿಂದ ಹೇಳಿಸುತ್ತಾ ತಿದ್ದಿಸುತ್ತಾರೆ. ಇದರಿಂದ ಅಕ್ಷರ ಬರೆಯುವಲ್ಲಿ ಖಚಿತತೆ ಬರುತ್ತದೆ. ಇದು ಸ್ಮೃತಿಪಟಲದಲ್ಲಿ ಗಟ್ಟಿಯಾಗಿ ಒತ್ತಲ್ಪಡುತ್ತದೆ. ಮರೆಯುವುದಿಲ್ಲ. ಇದರಲ್ಲಿ ಸಣ್ಣ ದೋಷವೂ ಇದೆ ಅನ್ನಿ. ಅದೆಂದರೆ, ಮಗುವಿಗೆ ಓದು ಬರೆಹವೆಂದರೆ ಒಂದು ರೀತಿಯ ಜೈಲುಶಿಕ್ಷೆಯಾಗಿ ಬಿಡಬಹುದು. ಬೇಗ ಕಲಿಯದಿದ್ದರೆ, ತಪ್ಪಿದರೆ ಮನೆಯಲ್ಲಿ ಹೆತ್ತವರು, ಶಾಲೆಯಲ್ಲಿ ಶಿಕ್ಷಕರು ಅಥವಾ ಶಿಕ್ಷಕಿಯರು ಕಿವಿಗೆಂಡೆ ಮೇಲೆ ಎತ್ತುತ್ತಾರೆ. ಆದ್ದರಿಂದ ಶಿಕ್ಷೆ ಶಿಕ್ಷಣವಾಗದೆ ಶಿಕ್ಷಣ ಒಂದು ಶಿಕ್ಷೆಯಾಗಿಬಿಟ್ಟಿದೆ.
ಅಕ್ಷರಗಳನ್ನು ಹೆಕ್ಕಿ ಹೆಕ್ಕಿ ಓದುವುದರಿಂದ ಕಣ್ಣು, ಕಿವಿ, ಧ್ವನ್ಯಂಗ ಒಟ್ಟಿಗೇ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಪಟುತ್ವ ಹೆಚ್ಚುತ್ತದೆ.
ಶಬ್ದಪದ್ಧತಿಯಲ್ಲಿ ಈ ಶಿಕ್ಷೆ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಅರ್ಥವಿಲ್ಲದ ಅಕ್ಷರವನ್ನು 'ಗೋಳೋ' ಎಂದು ತಿದ್ದುವುದಕ್ಕಿಂತ ಅರ್ಥಪೂರ್ಣವಾದ ಶಬ್ದವನ್ನು ಮಗು ಲವಲವಿಕೆಯಿಂದ ಕಲಿಯುತ್ತದೆ. ಇದನ್ನು ಒಂದು ಉದಾಹರಣೆಯಿಂದ ಸ್ಪಷ್ಟಪಡಿಸಬಹುದು. 'ಹಸ್ತ' ಎಂಬ ಶಬ್ದವನ್ನು ಹೇಳುವಿರಿ ಎಂದಿಟ್ಟುಕೊಳ್ಳೋಣ. ಆಗ ಮಗು ಇಡಿಯಾಗಿ ಹಸ್ತವನ್ನು ಗ್ರಹಿಸುತ್ತದೆ ಮತ್ತು ಆಸಕ್ತಿ ತೋರುತ್ತದೆಯೇ ಹೊರತು ಬೆರಳು, ಮಧ್ಯದ ಕರತಲವನ್ನು ಬಿಡಿಬಿಡಿಯಾಗಿ ಯೋಚಿಸಿಕೊಳ್ಳುವುದಿಲ್ಲ. ಹಾಗೆಯೇ 'ಹಸ್ತ' ಎಂದು ಬರೆದಾಗ ಅದು 'ಹ' ಬೇರೆ, 'ಸ್ತ' ಬೇರೆ ಎಂದು ಗ್ರಹಿಸುವುದಿಲ್ಲ. 'ಹಸ್ತ' ಎಂಬುದನ್ನು ಒಂದು ಘಟಕ (ಯುನಿಟ್) ಆಗಿಯೇ ಮಗು ಗ್ರಹಿಸುತ್ತದೆ. ಆದ್ದರಿಂದ ಶಬ್ದವನ್ನು ಮೊದಲು ಓದಿ, ಆಮೇಲೆ ಬರೆದು, ಅನಂತರ ಕೇಳಿ ಬರೆಯುತ್ತದೆ. ಇಲ್ಲಿ ಬೇಸರ ಬರುವುದಿಲ್ಲ. ಪಾಠವು ಆಟವಾಗುತ್ತದೆ. ಹೀಗೆ 200 ಶಬ್ದ ಕಲಿಯುವುದರಲ್ಲಿ ಎಲ್ಲಾ ಅಕ್ಷರಗಳನ್ನು ಮಗು ಕಲಿಯುತ್ತದೆ. ಬಿಡಿ ಬಿಡಿ ಅಕ್ಷರಗಳ ಅಭ್ಯಾಸವೂ ತನ್ನಿಂದ ತಾನೇ ಆಗುತ್ತದೆ. ಮೂಲ ಅಕ್ಷರ, ಕಾಗುಣಿತ, ಒತ್ತಕ್ಷರ ಇತ್ಯಾದಿ ಒಟ್ಟಿಗೇ ಅಭ್ಯಾಸವಾಗಿಬಿಡುತ್ತದೆ. ಆದ್ದರಿಂದ 'ಶಬ್ದ ಪದ್ಧತಿ' ಹೆಚ್ಚು ಸುಖ ಮತ್ತು ಸುಲಭದ ಪದ್ಧತಿ ಆಗಿದೆ.
ಅಂದ ಮಾತ್ರಕ್ಕೆ ಈ ಪದ್ಧತಿ ಅಪಾಯರಹಿತವೇನಲ್ಲ. ಮಕ್ಕಳು ಪಾಠವನ್ನು 'ಉರು' ಹೊಡೆದುಬಿಡುವ ಅಪಾಯವಿದೆ. 'ಹತ್ತನೆಯ ಪಾಠ ಓದು' ಎಂದರೆ ಸಾಕು. ಪುಸ್ತಕ ತೆರೆಯುವ ಮೊದಲೇ ಪಾಠದ ತಲೆಬರೆಹದಿಂದ ಹಿಡಿದು ಇಡಿಯ ಪಾಠದ ಓದನ್ನು ಮುಗಿಸಿಬಿಡುತ್ತಾರೆ. ಏಕೆ ಹೀಗೆ ಆಗುತ್ತದೆ ಎಂದರೆ ಮಕ್ಕಳ ಜತೆ ಬೋಧಕರು ಹೆಚ್ಚು ವೇಳೆ ಕಳೆಯುವುದಿಲ್ಲ. ಮಕ್ಕಳಿಗೆ ಶಬ್ದದ ಕಲಿಕೆಯಲ್ಲಿ ಸಾಕಷ್ಟು ರೂಢಿ (ಪ್ರಾಕ್ಟೀಸ್) ಆಗಿರುವುದಿಲ್ಲ. 'ಶಬ್ದ ಕಲಿಕೆ' ಎಂದರೆ ಬರೀ ಓದುವುದಲ್ಲ. ನೋಡಿ ಬರೆಯುವುದೂ ಅಲ್ಲ. ಕೇಳಿ ಬರೆಯಬೇಕು. ತಾವಾಗಿಯೇ ಯೋಚಿಸಿ ಬರೆಯಬೇಕು. ಅಂದರೆ ಒಂದು ಶಬ್ದ ಸರಿಯಾದ ಉಚ್ಚಾರದೊಂದಿಗೆ ಸರಿಯಾದ ಬರಹದಲ್ಲಿ ಅಂತರ್ಗತ ಆಗಬೇಕು. ಹೀಗೆ ಆಗದೇ ಇರುವುದರಿಂದಲೇ 'ಶಬ್ದ ಪದ್ಧತಿಯ' ಪ್ರಯೋಗದಲ್ಲಿ ದೋಷಗಳು ಹೆಚ್ಚಾಗುತ್ತವೆ. ಮೊದಲ ಪದ್ಧತಿ ಬೋಧಕರಿಗೆ ಸುಖ. ಎರಡನೆಯದು ಮಕ್ಕಳಿಗೆ ಸುಖ. ಇದನ್ನು ಸರಿಪಡಿಸಲು ಆಗದೇ ಇದ್ದುದರಿಂದಲೇ ಈಗ ಪುನಃ ಅಕ್ಷರ ಪದ್ಧತಿಯನ್ನೇ ಜಾರಿಗೆ ತಂದಿದ್ದಾರೆಂದು ತೋರುತ್ತದೆ.
ಪದ್ಧತಿಗಳು 'ಸ್ವಯಂಭೂ' ಅಲ್ಲ
ಯಾವುದೇ ಪದ್ಧತಿಯೂ ಸ್ವಯಂಭೂ ಅಲ್ಲ. ಪರಿಪೂರ್ಣವೂ ಅಲ್ಲ. ಮುಂದಿನ ಪದ್ಧತಿಯಲ್ಲಿ ಹಿಂದಿನ ಗಟ್ಟಿ ದ್ರವ್ಯ ಇರಲೇ ಬೇಕು. ಕುಶಲಿಯಾದ ಶಿಕ್ಷಕರು ಈ ಮೇಲಿನ ಎರಡೂ ಪದ್ಧತಿಗಳನ್ನು ಹೊಂದಿಸಿಕೊಂಡು ಯಶಸ್ವಿಯಾಗಿ ಬೋಧನ ಕಾರ್ಯ ಕೈಗೊಳ್ಳುವಲ್ಲಿ ಮಕ್ಕಳ ಸರ್ವತೋಮುಖ ಪ್ರಗತಿ, ಯಶಸ್ಸು ಇದೆ. ಹಾಗೇ ಶಿಕ್ಷಕ ಪದ್ಧತಿಗಳಲ್ಲಿ ಯಾವುದು ಶ್ರೇಷ್ಠ ಎಂದು ಹುಡುಕುವ ಸಿದ್ಧಾಂತವಲ್ಲ. ಬದಲಾಗಿ ಎಲ್ಲದರಲ್ಲಿಯೂ ಒಳ್ಳೆಯದನ್ನೂ ಆರಿಸಿಕೊಂಡು ಸಂಯೋಜಿಸಿಕೊಂಡು ದುಡಿಯುವ ನಿತ್ಯ ಪ್ರಯೋಗಶೀಲ ಮತ್ತು ಪ್ರಯೋಗ ಕರ್ತ. ಹಾಗಾದಾಗಲೇ ಬೋಧನೆಗೆ ಸವರ್ಾಂಗ ಯಶಸ್ಸು ದೊರೆಯುತ್ತದೆ.
ಆಡಳಿತಾತ್ಮಕ ದೋಷ
ಹೀಗೆ ಕಲಿಕೆಯ ದೋಷಗಳನ್ನು ಪದ್ಧತಿಯಲ್ಲಿ ಅರಸುವವರು ಒಂದು ಮಹತ್ತ್ವದ ಆಡಳಿತಾತ್ಮಕ ಅಂಶವನ್ನು ಮರೆಯುತ್ತಾರೆ. ಅದೆಂದರೆ, ಮಕ್ಕಳಿಗೆ ವೈಯಕ್ತಿಕ ಗಮನ ಕೊಡಬೇಕು ಎನ್ನುವುದು ಸುಲಭ. ಆದರೆ ಪರಿಸ್ಥಿತಿ ಹೇಗಿದೆ? ವಿದ್ಯಾಥರ್ಿಗಳು ಮತ್ತು ಶಿಕ್ಷಕರ ಅನುಪಾತ ಎಷ್ಟಿದೆ? ಒಂದು ಹಳ್ಳಿಪರಿಸರದ ತಾಲೂಕಿನಲ್ಲಿಯೇ 200 ಕ್ಕೂ ಹೆಚ್ಚು ವಿದ್ಯಾಥರ್ಿಗಳು ಇರುವ ಶಾಲೆಗಳಲ್ಲಿ ಕೇವಲ ಇಬ್ಬರು ಶಿಕ್ಷಕರೋ, ಶಿಕ್ಷಕಿಯರೋ ಇರುವ ಶಾಲೆ ಆರು-ಏಳು ಆದರೂ ಇವೆ. ಒಂದು ಪೂರ್ಣ ಪ್ರಾಥಮಿಕ ಶಾಲೆಗೆ ನಾಲ್ಕು ಜನ ಬೋಧಕರೂ ಇಲ್ಲದಿದ್ದ ಮೇಲೆ ಬೋಧನೆಯ ಮಟ್ಟ ಹೇಗಿರಬೇಕು? ನೀವೇ ಊಹಿಸಿ. ಇದು ಇಂದಿನ ಕನರ್ಾಟಕದ ಪ್ರಾಥಮಿಕ ಕನ್ನಡ ಶಾಲೆಗಳ ವಸ್ತುಸ್ಥಿತಿ.
ಅದೇನೇ ಇದ್ದರೂ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಕೆಲವು ಮುಖ್ಯ ಸಲಹೆಗಳನ್ನು ಹೀಗೆ ಪಟ್ಟಿ ಮಾಡಬಹುದಾಗಿದೆ.
ಗಟ್ಟಿಯಾಗಿ ಓದುವುದು
ಪ್ರಾಥಮಿಕ ಶಾಲಾ ಹಂತದ ಕಲಿಕೆಯಲ್ಲಿ ಗಟ್ಟಿಯಾಗಿ ಓದುವುದು ಬಹಳ ಮುಖ್ಯ. ಹೀಗೆ ಓದುವುದರಿಂದ ಮಕ್ಕಳು ತಮ್ಮ ಉಚ್ಚಾರವನ್ನು ತಾವೇ ಕೇಳಿಕೊಳ್ಳುತ್ತಾರೆ. ಅಂದರೆ 'ಆಲಿಸುವಿಕೆ' ಬಲಗೊಳ್ಳುತ್ತದೆ. ಇದರಿಂದ ಧ್ವನ್ಯಂಗಗಳು ಪಟುತ್ವ ಹೊಂದುತ್ತವೆ. ಹೀಗೆ ಓದುವುದರಿಂದ ಮಕ್ಕಳು ತಪ್ಪಿದರೆ ಶಿಕ್ಷಕರು, ಹಿರಿಯರು, ಪಾಲಕರು ತಿದ್ದಲು ಅನುಕೂಲವಾಗುತ್ತದೆ. ಈ ತಿದ್ದುವಿಕೆ ಒಂದು 'ಶಿಕ್ಷೆ' ಆಗದಂತೆ ತಿದ್ದುವವರು ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ತೆನಾಲಿ ರಾಮಕೃಷ್ಣನ ಬೆಕ್ಕು ಹಾಲು ಕುಡಿದಂತೆ ಆಗುತ್ತದೆ. ಕೆಳಗಿನ ತರಗತಿಯ ಓದು ಬಾಯ್ದೆರೆಯದ್ದಾಗಿರಬೇಕು. ಬೋಧಕರು ಮಾದರಿ ಓದನ್ನು ಒದಗಿಸಬೇಕು.
ಶಬ್ದ ಬರೆಯುವುದು
ಇದು ಬಹಳ ಮಹತ್ತ್ವದ್ದು. ಪಾಠದ ಪುನರಾವರ್ತನೆಯ ಸಂದರ್ಭದಲ್ಲಿ ಕಡ್ಡಾಯವಾಗಿ 'ಶಬ್ದ ಕೇಳಿ ಬರಹ' ಇರಬೇಕು. ಬೋಧಕರು ಮೊದಲೇ ಒಂದು ಪಟ್ಟಿಯನ್ನು ಸಿದ್ಧಪಡಿಸಿಕೊಂಡಿರಬೇಕು. ಹ್ರಸ್ವ, ದೀರ್ಘ, ಅಲ್ಪ ಪ್ರಾಣ, ಮಹಾ ಪ್ರಾಣ, ಒತ್ತಕ್ಷರ, ಅನುನಾಸಿಕ, ಅನುಸ್ವಾರಗಳ ವ್ಯತ್ಯಾಸಗಳಿಂದ ಶಬ್ದಗಳ ಪಟ್ಟಿ ತಯಾರಿಸಬೇಕು. ಉದಾ: ದಡ್ಡ-ದಡ, ನೆಗ್ಗು-ನೆಡು, ಅಂಗಳ-ಅಗಳ, ರೋಖು-ರೊಕ್ಕ, ಅತ್ತೆ-ಕತ್ತೆ, ಅಮ್ಮ-ಗುಮ್ಮ, ತಮ್ಮ-ಎಮ್ಮೆ, ಸ್ಥಾನ-ಸ್ಥಾಪನೆ, ಮಂಗ-ಮಗ, ಕಷ್ಟ-ನಷ್ಟ, ಕ್ಷಾರ-ಕ್ಷತ್ರಿಯ ಇತ್ಯಾದಿಯಾಗಿ ಧ್ವನ್ಯಂತರವುಳ್ಳ ಆಘಾತ (ಸ್ಟ್ರೆಸ್)ಗಳ ಶಬ್ದಗಳ ಪಟ್ಟಿಯನ್ನು ತಯಾರಿಸಿಕೊಳ್ಳಬೇಕು. ಇಂಥ ಒಂದು ನೂರು ಶಬ್ದಗಳನ್ನು ತಯಾರಿಸಿ ಕೊಟ್ಟು ಒಂದು ವಾರದ ಅನಂತರ ಅದರ ಸ್ಪಧರ್ೆ ಏರ್ಪಡಿಸಬಹುದಾಗಿದೆ.
ಹಾಗೇ 'ಮಂಗ' ಶಬ್ದ ಬರೆಸಿ, ಓದಿಸುವುದು-ಮಧ್ಯದ ಸೊನ್ನೆ ತೆಗೆದು ಇನ್ನೊಮ್ಮೆ ಓದಿಸುವುದು. 'ಏಣಿ' ಬರೆಸಿ ಒಮ್ಮೆ ಓದಿಸುವುದು. ಇನ್ನೊಮ್ಮೆ 'ಎಣಿ' ಬರೆಸಿ ಓದಿಸುವುದು. ಹೀಗೆ ಬರೆಯುವುದರಲ್ಲಿ ಸರಿ, ತಪ್ಪು ಬರೆಸಿ ದೊಡ್ಡದಾಗಿ ಓದಿಸಿ ತಿದ್ದಿಸಬೇಕು. ಇದು ಶಬ್ದಗಳ ಬರೆಯುವಿಕೆಯಲ್ಲಿ ಸರಿ, ತಪ್ಪಿನ ಅರಿವನ್ನು ಸ್ಪಷ್ಟವಾಗಿ ಮಾಡಿಸುತ್ತದೆ. ಶಬ್ದಗಳ ಕುರಿತು ಖಚಿತ ಜ್ಞಾನವನ್ನು ತರುತ್ತದೆ.
ಶುದ್ಧ ಬರಹ ಅಥವಾ ಕೇಳಿ ಬರಹ
ಪ್ರತಿ ಪಾಠ ಮುಗಿದಾಗಲೂ ಒಂದು ದೀರ್ಘವಾದ ಪ್ಯಾರಾವನ್ನು ಕೇಳಿ ಬರಹಕ್ಕಾಗಿ ಉಪಯೋಗಿಸಬೇಕು. ಬೋಧಕರು ಓದುವಾಗ ಎಲ್ಲ ಮಕ್ಕಳಿಗೂ ಕೇಳುವಂತೆ ಸರಿಯಾದ ರೀತಿಯಲ್ಲಿ ಹೆಚ್ಚು ನಿಧಾನವೂ ಹೆಚ್ಚು ವೇಗವೂ ಆಗದ ರೀತಿಯಲ್ಲಿ ಓದಬೇಕು.
ಉದಾ: ಅಶೋಕನು ರಣರಂಗದಲ್ಲಿ ಬಿದ್ದು ಆರ್ತನಾದ ಮಾಡುತ್ತಿದ್ದ ಲಕ್ಷಾಂತರ ಗಾಯಾಳು ಸೈನಿಕರನ್ನು ಕಣ್ಣಾರೆ ಕಂಡು ಮಮ್ಮಲ ಮರುಗಿದನು ಎಂಬ ವಾಕ್ಯವಿದೆ ಎಂದುಕೊಳ್ಳುವ. ಇದನ್ನ ಕೇಳಿ ಬರಹಕ್ಕೆ ಅರಿಸಿಕೊಂಡಾಗ ವಾಕ್ಯ ಖಂಡವನ್ನು ಒಮ್ಮೆಲೇ ಓದಬೇಕು. ಬದಲಾಗಿ ಅಶೋಕನು...... ಅಶೋಕನು, ರಣರಂಗದಲ್ಲಿ ಬಿದ್ದು..... ಬಿದ್ದು ಹೀಗೆ ಬಿಡಿಸಿ ಬಿಡಿಸಿ ಓದಬಾರದು. ನಾಲ್ಕಾರು ಬಾರಿ ದೊಡ್ಡದಾಗಿ ವಾಕ್ಯ ಓದಿಸಬೇಕು. ಅನಂತರ ಬರೆಯಲು ಹೇಳಬೇಕು. ತಪ್ಪಿದರೆ ಹತ್ತು ಬಾರಿ ಬರೆಸಬೇಕು. ಅಥವಾ ಅದಕ್ಕೂ ಮೊದಲು ಮಕ್ಕಳ ಪ್ರಗತಿಯನ್ನೂ ಗಮನಿಸಿ ಅರ್ಥಪೂರ್ಣವಾದ ವಾಕ್ಯಖಂಡವನ್ನು ಓದಬೇಕು.
ನೋಡಿ ಬರಹ
ಇದರಲ್ಲಿ ಎರಡು ವಿಧಗಳು. ಅಕ್ಷರಗಳನ್ನು ಸುಂದರಗೊಳಿಸುವುದಕ್ಕಾಗಿ ಬರೆಯುವುದು. ಇನ್ನೊಂದು ಪಾಠವನ್ನು ನೋಡಿ ಬರೆಯುವುದು. ಮೊದಲನೆಯದು ಅಕ್ಷರಗಳನ್ನು ಸುಂದರಗೊಳಿಸಿದರೆ, ಎರಡನೆಯದು ಬರಹವನ್ನು ಶುದ್ಧ ಗೊಳಿಸುತ್ತದೆ. ದಿನಾಲೂ ಮನೆಯಿಂದ ಒಂದು ಜೋಡು ಗೆರೆ ನೋಟ್ ಪುಸ್ತಕದಲ್ಲಿ (ಹಿಂದಿ ಬರೆಯಲು ಉಪಯೋಗಿಸುವ) ಪಾಠ ಬರೆದು ತರಲು ಹೇಳಬೇಕು. ಮೂರನೆಯ ತರಗತಿಯಿಂದಲೇ ಈ ಪದ್ಧತಿ ಜಾರಿಗೆ ಬಂದಲ್ಲಿ ನಾಲ್ಕು ಮತ್ತು ಐದನೆಯ ತರಗತಿಗೆ ಮಗು ಬರುವ ಹೊತ್ತಿಗೆ ಅಕ್ಷರಗಳು ಮುತ್ತಿನಂತೆ ಆಕಾರ ಪಡೆಯುತ್ತವೆ.
ಉಚ್ಚಾರದ ಸುಭಗತೆ
ಬಹಳ ಮಕ್ಕಳಿಗೆ ಉಚ್ಚಾರದ ತೊಂದರೆ ಇರುತ್ತದೆ. ಶಬ್ದ, ವಾಕ್ಯಗಳ ಉಚ್ಚಾರ ಕಷ್ಟವಾಗುತ್ತದೆ. ಇದಕ್ಕೆ ವಾಡಿಕೆಯಲ್ಲಿ 'ನಾಲಗೆ ತಿರುಗದೇ ಇರುವುದು' ಎನ್ನುತ್ತಾರೆ. ಇದಕ್ಕೆ ಕೆಲವು ಪದ್ಯಗಳನ್ನು ಆರಿಸಿಕೊಂಡು ಒಂದು ಆಟವನ್ನು ಆಡಿಸಬಹುದು. ಕರಿ ಕುರಿ ಮರಿ ಕೆರೆ ಏರಿ ಮೇಲೆ ಮೇಯ್ತದೆ ಎಂಬ ಸಾಲನ್ನು ತೀರಾ ವೇಗ ವೇಗವಾಗಿ ಉಚ್ಚರಿಸಲು ಹೇಳಬೇಕು. ಶಿಕ್ಷಕರಿಗೆ ಮೊದಲು ಈ ರೀತಿಯ ಪದ್ಯ ಬರಬೇಕು. ಮಕ್ಕಳಿಗೆ ಈ ರೀತಿಯ ಉಚ್ಚಾರ ಖುಶಿ ಕೊಡುತ್ತದೆ. ಪಾಠ, ಆಟ ಆದಂತಾಗಿ ಮಕ್ಕಳಿಗೆ ಉಚ್ಚಾರದ ಸಮಸ್ಯೆ ಅರಿವಿಲ್ಲದಂತೆ ಮಾಯವಾಗಿ ಬಿಡುತ್ತದೆ. ಇದಕ್ಕೆ ಪೂರಕವಾದ ಪದ್ಯದ ಸಾಲುಗಳು ನಮ್ಮ ಜಾನಪದ ಸಾಹಿತ್ಯದಲ್ಲಿ ಬಹಳ ಸಿಗುತ್ತವೆ.
ಕವನ ಹಾಡುವುದು ಮತ್ತು ಓದುವುದು
ಕವನಗಳನ್ನು ಹಾಡುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಹುರುಪು. ಕೆಳಗಿನ ತರಗತಿಯಲ್ಲಿ ಪ್ರಾಸಪದ್ಯ, ಮಕ್ಕಳ ಪದ್ಯ, ತಮಾಷೆಯ ಪದ್ಯ ಹಾಡಿಸಬಹುದು. ಮುಂದಿನ ತರಗತಿಗಳಲ್ಲಿ ಭಾವಗೀತೆ ಹಾಡಿಸಬೇಕು. ಷಟ್ಟದಿಯನ್ನು ಗಮಕದ ರೀತಿಯಲ್ಲಿ ಹಾಡುವುದು. ಇವುಗಳನ್ನು ಮತ್ತು ಇತರ ಕವನಗಳನ್ನು ಮಾದರಿ ಓದನ್ನಾಗಿ ಕೊಟ್ಟು ಅರ್ಥವತ್ತಾಗಿ ಓದುವುದನ್ನು ಕಲಿಸಬೇಕು.
ನೆನಪನ್ನು ಹೆಚ್ಚಿಸಲು ಸ್ವರಚಿತ ಪದ್ಯ
ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸಲು ಪದ್ಯ ಹೆಣೆಯುವ ಆಟ ಆಡಿಸಬಹುದು. ಉದಾಹರಣೆಗಾಗಿ ಇಲ್ಲಿ ಒಂದು ಪದ್ಯ ಕೊಡುತ್ತೇನೆ. (ಇದನ್ನು ನನಗೆ ಗೆಳೆಯ ಶ್ರೀಪಾದ ಭಟ್ಟ ಹೇಳಿದ್ದು. ಅವರಿಗೆ ಬೇರೆ ಯಾರೋ....)
ಕೂಜಳ್ಳಿ ಮುದುಕ ಪೇಟೆಗೆ ಬಂದ.
ಇದನ್ನು ಮಕ್ಕಳ ಗುಂಪು ಹೇಳಬೇಕು.
ಅನಂತರ ಪುನಃ ಬೋಧಕ -
ಮುದುಕನ ಹೆಂಡತಿ ಪೇಟೆಗೆ ಬಂದಳು.
ಪುನಃ ಮಕ್ಕಳು ಹೇಳಬೇಕು.
ಅನಂತರ ಶಿಕ್ಷಕ -
ಕೂಜಳ್ಳಿ ಮುದುಕ ಮುದುಕನ ಹೆಂಡತಿ ಪೇಟೆಗೆ ಬಂದರು.
ಪುನಃ ಮಕ್ಕಳ ಗುಂಪು ಉಚ್ಚರಿಸಬೇಕು.
ಅನಂತರ ಶಿಕ್ಷಕ -
ಮುದುಕನ ಮಗ ಪೇಟೆಗೆ ಬಂದ.
ಮಕ್ಕಳ ಗುಂಪು ಉಚ್ಚರಿಸಬೇಕು
ಅನಂತರ ಬೋಧಕ -
ಕೂಜಳ್ಳಿ ಮುದುಕ, ಮುದುಕನ ಹೆಂಡತಿ, ಮುದುಕನ ಮಗ ಪೇಟೆಗೆ ಬಂದರು.
ಪುನಃ ಮಕ್ಕಳ ಗುಂಪು ಹೇಳುತ್ತದೆ. ಹೀಗೆ ಸಾಲುಗಳನ್ನು ಮೊದಲಿನ ಸಾಲಿಗೆ ತಕ್ಕಂತೆ ಕೂಡಿಸುತ್ತಾ ಹೋಗುವ ಆಟ. ಆಯಾಯ ಊರು, ಅಲ್ಲಿನ ಜನ, ಭಾಷೆ, ರಿವಾಜುಗಳನ್ನು ಬಳಸಿ ಅವರವರಿಗೆ ಸುಲಭವಾದ ಪದ್ಯ ಹೆಣೆಯಬಹುದು. ಇದನ್ನು ಎಷ್ಟೂ ಬೆಳಸಬಹುದು. ಅನಂತರ ಇದರಲ್ಲಿಯೇ ಒಂದು ಸ್ಪಧರ್ೆ ಏರ್ಪಡಿಸಬಹುದು. ಮಕ್ಕಳು ಸೋಲುವ ತನಕ ಪದ್ಯ ಮುಂದುವರಿಯಬಹುದು. ಇದರಿಂದ ಮಕ್ಕಳಿಗೆ ಖುಶಿ ಸಿಗುತ್ತದೆ. ಪಾಠ, ಆಟವಾಗುವಲ್ಲಿನ ಹೊಸ ಲೋಕ ಸೃಷ್ಟಿಯಾಗುತ್ತದೆ.
ಹಲವು ಮಕ್ಕಳು ಅಂತ್ಯಾಕ್ಷರಿ ಸ್ಪಧರ್ೆಯನ್ನು ಟಿ.ವಿ. ಗಳಲ್ಲಿ ನೋಡಿರಬಹುದು. ಶಬ್ದ ಯಾ ವಾಕ್ಯಗಳನ್ನು ಬಳಸಿ ಅದರ ಕೊನೆಯ ಅಕ್ಷರದಿಂದ ಮುಂದೆ ಬೆಳೆಸುವ ಕ್ರಿಯೆ-ಸ್ಪಧರ್ೆ. ಪದ್ಯಗಳನ್ನೂ ಬಳಸಿಕೊಳ್ಳಬಹುದು. ವೈಯಕ್ತಿಕವಾಗಿ ಅಥವಾ ಗುಂಪು ಗುಂಪಾಗಿ ಬೇಕಾದಂತೆ ಈ ಸ್ಪಧರ್ೆಯನ್ನು ರೂಪಿಸಿಕೊಳ್ಳಬಹುದು. ಇದರ ಜತೆ ಕವನಗಳ 'ರಸಪ್ರಶ್ನೆ' ಕಾರ್ಯಕ್ರಮಗಳನ್ನೂ ಮಾಡ ಬಹುದಾಗಿದೆ. ಒಂದರಿಂದ ಏಳನೆಯ ತರಗತಿಯ ವರೆಗಿನ ಪಠ್ಯಪುಸ್ತಕದ ಪದ್ಯಗಳನ್ನು ಇದಕ್ಕೆ ಸೀಮಿತಗೊಳಿಸಬಹುದು.
ಕತೆ ಹೇಳುವುದು
ಕತೆ ಹೇಳುವುದು ಮತ್ತು ಕೇಳುವುದು ಯಾವ ತರಗತಿಯ ಮಕ್ಕಳಿಗೇ ಆದರೂ ಬಹಳ ಪ್ರಿಯ. ಕತೆ ಹೇಳಿಸುವ, ಕೇಳಿಸುವ ಕ್ರಿಯೆ ಒಬ್ಬರಿಂದ ಒಬ್ಬರಿಗೆ ಬದಲಾಗುತ್ತಾ ಸಾಗಬೇಕು. ಬೋಧಕರು ಕೊನೆಗೆ ಒಂದು ಕತೆ ಹೇಳಬೇಕು. ಮುಂದಿನ ವಾರ ಇದೇ ಕತೆಯನ್ನು ಮಕ್ಕಳು ಹೇಳಬೇಕೆಂದು ಸವಾಲು ಹಾಕಬೇಕು. 'ಖೊ...... ಖೋ ಕತೆಯನ್ನು ಮಾಡಿಸಬಹುದು. (ಒಬ್ಬೊಬ್ಬರು ಒಂದೊಂದು ವಾಕ್ಯ ಹೇಳಿ ಕತೆ ಮುಗಿಸುವುದಕ್ಕೆ 'ಖೊ.... ಖೋ ಕತೆ ಅನ್ನುತ್ತಾರೆ'). ಇದರಿಂದ ಮಕ್ಕಳ ಕಲ್ಪನಾಶಕ್ತಿ ಕುದುರುತ್ತದೆ. ಭಾಷೆ ಬೆಳೆಯುತ್ತದೆ.
ಒಗಟು ಮತ್ತು ಗಾದೆ ಮಾತುಗಳು
ಐದರಿಂದ ಏಳನೆಯ ತರಗತಿಯ ಮಕ್ಕಳಿಗೆ ಈ ಅಭ್ಯಾಸ ಮಾಡಿಸಬಹುದು. ಒಗಟುಗಳನ್ನು ಮತ್ತು ಗಾದೆ ಮಾತುಗಳನ್ನು ಪುಸ್ತಕರೂಪದಲ್ಲಿ ಸಂಗ್ರಹಿಸಿ, ಶಾಲೆಯಲ್ಲಿ ಅಂದವಾಗಿ ಇಡಬಹುದು. ಒಂದು ನೋಟ್ ಬುಕ್ ತಂದು ಒಂದು ಕಡೆ ಗಾದೆಗಳು; ಇನ್ನೊಂದು ಕಡೆ ಒಗಟುಗಳನ್ನು ಬರೆದು ಇಡಬಹುದು. ಯಾರು ಹೆಚ್ಚು ಸಂಗ್ರಹಿಸುತ್ತಾರೋ ಅಂಥವರಿಗೆ ಬಹುಮಾನ ಕೊಡಬೇಕು. ಪುಸ್ತಕವನ್ನು ಅಂದವಾಗಿ ಇಟ್ಟವರಿಗೂ ಪ್ರೋತ್ಸಾಹಕರ ಬಹುಮಾನ ಇಡಬೇಕು. ವರ್ಷದಲ್ಲಿ ಕೆಲವು ಬಾರಿ ಇದರ ಪ್ರದರ್ಶನ ಏರ್ಪಡಿಸಬಹುದು. ಇದರ ಜತೆಗೆ ಮಕ್ಕಳು ಸ್ವತಂತ್ರವಾಗಿ ಗಾದೆಗಳನ್ನು, ಒಗಟುಗಳನ್ನು ರಚಿಸುವಂತೆ ಹುರಿದುಂಬಿಸಬೇಕು.
ಜನಪದ ಕತೆ, ಕವನ ಸಂಗ್ರಹಿಸುವಿಕೆ
ಮಕ್ಕಳಿಗೆ ಮನೆಗೆಲಸದ ಜತೆ ಒಂದು ವಿಶೇಷ ಕೆಲಸವನ್ನೂ ಕೊಡಬಹುದಾಗಿದೆ. ತಂತಮ್ಮ ಹಿರಿಯರಿಂದ ಮತ್ತು ಸುತ್ತಮುತ್ತಲಿನ ಜನಪದರಿಂದ ಜನಪದ ಕತೆ, ಕವನಗಳನ್ನು ಸಂಗ್ರಹಿಸಲು ಪ್ರೋತ್ಸಾಹಿಸಬೇಕು. ಜನಪದ ವೈದ್ಯ, ಮಾಟಗಳ ಬಗ್ಗೆಯೂ ಸಂಗ್ರಹಿಸಲು ಸೂಚಿಸಬೇಕು. ಇವುಗಳನ್ನು ಸೇರಿಸಿ, 'ಕೈಬರಹ ಪತ್ರಿಕೆ' ತರಬಹುದು.
ಏಕಪಾತ್ರಾಭಿನಯ
ಭಾಷೆಯ ಬೆಳವಣಿಗೆಯಲ್ಲಿ ಏಕಪಾತ್ರಾಭಿನಯ ಮಹತ್ತ್ವದ ಪಾತ್ರವಹಿಸುತ್ತದೆ. ಒಂದೇ ವ್ಯಕ್ತಿ ಎರಡು, ಮೂರು ಜನರ ಅನುಕರಣೆ ಮಾಡುವುದು, ಪೌರಾಣಿಕ (ರಾಮಾಯಣ, ಮಹಾಭಾರತ, ಪಂಚತಂತ್ರ, ಬೈಬಲ್, ಜನಪದ, ಕುರಾನ್ ಹೀಗೆ) ಪಾತ್ರ ಕತೆಗಳನ್ನು ಅಭಿನಯಿಸುವುದು ಇತ್ಯಾದಿ. ಇದರಿಂದ ಭಾವಪೂರ್ಣವಾದ ಮಾತು, ಅರ್ಥಪೂರ್ಣವಾದ ಕಲ್ಪನೆ ಬೆಳೆಯುತ್ತದೆ.
ಚಚರ್ಾಕೂಟ
ಇತ್ತೀಚಿನ ದಿನಗಳಲ್ಲಿ ನಮ್ಮ ಪ್ರಾಥಮಿಕ ಶಾಲೆಗಳಲ್ಲಿ ಚಚರ್ಾಕೂಟ ಕಾರ್ಯಕ್ರಮಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳ ಅನುಭವ ಮತ್ತು ಕಲ್ಪನೆಗೆ ಎಟಕುವ ವಿಷಯಗಳನ್ನೇ ಆಯ್ದು ಚಚರ್ಾಗೋಷ್ಠಿ ಏರ್ಪಡಿಸಬಹುದು. 'ಕೊಡೆ ಮೇಲೋ ಕಂಬಳಿ ಮೇಲೋ', 'ನಗರ ಮೇಲೋ ಹಳ್ಳಿ ಮೇಲೋ', 'ವಿಜ್ಞಾನ ವರವೋ ಶಾಪವೊ?' ಇತ್ಯಾದಿ. ಮಕ್ಕಳಲ್ಲಿ ಚಚರ್ಾಕೂಟಗಳ ಮೂಲಕ ತಾಕರ್ಿಕ ಜ್ಞಾನ, ವಿಷಯ ಜ್ಞಾನ, ಚುರುಕುತನ, ನಿರೀಕ್ಷಣಾ ಚತುರತೆ ಬೆಳೆಯುತ್ತದೆ. ಎಲ್ಲವೂ ಮಕ್ಕಳ ಸ್ವಂತ ಬೌದ್ಧಿಕತೆಯ ಮೇಲೇ ಕೂಟ ಸಾಗಬೇಕು'.
ಚಿತ್ರ ಕತೆ
ಒಂದು ಚಿತ್ರವನ್ನು ಕೊಟ್ಟು ಮಕ್ಕಳಿಗೆ ಅದರ ಮೇಲೆ ಕಥೆ ಅಥವಾ ಕವನ ರಚಿಸುವಂತೆ ಸೂಚಿಸಬೇಕು.
ಟಿ.ವಿ. ಸುದ್ದಿ ರಚನೆ
ಈಗ ಹಳ್ಳಿಹಳ್ಳಿಗಳಲ್ಲೂ ಟಿ.ವಿ. ಬಂದಿದೆ. ಹೀಗಾಗಿ ನಮ್ಮ ಮಕ್ಕಳಿಗೆ ಟಿ.ವಿ. ಹೊಸದೇನಲ್ಲ. ಮಕ್ಕಳಿಗೆ ಟಿ.ವಿ.ಯಲ್ಲಿ ಬರುವ ಸಮಾಚಾರವನ್ನೇ ಅನುಕರಿಸಿ ತಂತಮ್ಮ ಸ್ವಂತ ಕಲ್ಪನಾಶಕ್ತಿಯ ಆಧಾರದ ಮೇಲೆ ಸುದ್ದಿ ಸೃಷ್ಟಿಸಿ ಹೇಳಲು ಹೇಳಬೇಕು. ಮಕ್ಕಳಿಗೆ ಇಂಥ ಆಟ-ಪಾಠ ಅಂದರೆ ಇಷ್ಟ. ಅವರಿಗೆ ಒಳ್ಳೆಯ ಮನೋರಂಜನೆಯೂ ದೊರಕುತ್ತದೆ.
ಉದಾ: ನಿನ್ನೆ ಇಂಥ ಊರಿನ ಸಮೀಪದ ಇಂಥಲ್ಲಿ ಮೀನಿಗೂ ಕೆ.ಎಸ್.ಆರ್.ಟಿ.ಸಿ. ಬಸ್ಸಿಗೂ ಭೀಕರ ಅಪಘಾತ ಸಂಭವಿಸಿ ಬಸ್ಸು ತೀವ್ರ ಹಾನಿಗೊಳಗಾಯಿತು.
ದೇಶದ ಪ್ರಧಾನ ಮಂತ್ರಿಗಳು (ಇಂಥವರು) ನಮ್ಮ ಶಾಲೆಯ ಪ್ರಧಾನಮಂತ್ರಿಯನ್ನು ಭೇಟಿಯಾಗಿ ತಮ್ಮ ಮಂತ್ರಿ ಮಂಡಲಕ್ಕೆ ಸೇರುವಂತೆ ಆಹ್ವಾನ ನೀಡಿದರು. ಆದರೆ ನಮ್ಮ ಪ್ರಧಾನಿ ಕು| ಇಂಥವರು ಅದನ್ನು ನಯವಾಗಿಯೇ ನಿರಾಕರಿಸಿದರು.
ಹೀಗೆ ಹಾಸ್ಯಭರಿತ ಸುದ್ದಿಗಳನ್ನು ಸೃಷ್ಟಿಸಿ ಟಿ.ವಿ. ನ್ಯೂಸ್ ಮಾಡಬಹುದು.
ಪ್ರಬಂಧ, ಅಜರ್ಿ, ಆಮಂತ್ರಣ ಪತ್ರಿಕೆ, ಪತ್ರಿಕಾ ವರದಿ ರಚನೆ
ಶಾಲೆಗಳಲ್ಲಿ ಪ್ರಬಂಧ ಬರೆಸುವುದು ಸಾಮಾನ್ಯ. ಆದರೆ ಬದಲಾದ ಸಾಮಾಜಿಕ ವ್ಯವಸ್ಥೆಯ ಸಂದರ್ಭದಲ್ಲಿ ಅಜರ್ಿ ಬರೆಯುವ, ಆಮಂತ್ರಣ ಪತ್ರಿಕೆ ತಯಾರಿಸುವ, ಪತ್ರಿಕಾ ವರದಿ ತಯಾರಿಸುವ ಪರಿಪಾಠವನ್ನು ಮಕ್ಕಳಿಗೆ ಹೇಳಿಕೊಡಬೇಕು. ಮಕ್ಕಳಿಗೆ ಹೊಸ ಹೊಸ ವಿಷಯ, ವಿಚಾರಗಳ ಪರಿಚಯ, ಖುಶಿ, ರಂಜನೆ ಎಲ್ಲವೂ ದೊರಕುತ್ತದೆ. ಜತೆಗೆ ಬುದ್ಧಿಶಕ್ತಿ ಬೆಳೆಯುತ್ತದೆ. ಬದುಕಿನ ವಿವಿಧ ವ್ಯಾವಹಾರಿಕ ದಿನಚರಿಗಳ ಅರಿವೂ ಆಗುತ್ತದೆ.
ಪ್ರಬಂಧಕ್ಕೆ, ಪತ್ರಿಕಾ ವರದಿಗಳ ತಯಾರಿಕೆಗೆ ನಿದರ್ಿಷ್ಟ ವಿಷಯ ಕೊಡಬೇಕು. ಉತ್ತಮ ವರದಿ, ಪ್ರಬಂಧ, ಅಜರ್ಿ ತಯಾರಿಕೆಗಳಿಗೆ ಬಹುಮಾನ ಇರಿಸಬೇಕು.
ಕೈಬರೆಹ ಪತ್ರಿಕೆ
ನಮ್ಮ ಶಾಲೆಗಳಲ್ಲಿ ಕೈಬರೆಹ ಪತ್ರಿಕೆ ತಯಾರಿಸುವುದು ಯಾವಾಗಿನಿಂದಲೂ ಇದೆ. ಆದರೆ ಅದು ವರ್ಷಕ್ಕೊಮ್ಮೆ ಎಂಬ ತಿಳುವಳಿಕೆಯಾಗಿದೆ. ವಾಷರ್ಿಕೋತ್ಸವಕ್ಕೆ ಮಾತ್ರ ಎಂಬಂಥಾಗಿದೆ. ಹೀಗಾಗಬಾರದು. ಕೈಬರಹ ಪತ್ರಿಕೆ ಪ್ರತಿ ತಿಂಗಳಿಗೊಂದರಂತೆ ಹೊರಬರಬೇಕು. ಅದಕ್ಕೆ ಮಕ್ಕಳಲ್ಲಿಯೇ ಒಂದು ಸಂಪಾದಕೀಯ ಮಂಡಳಿ ರಚಿಸಬೇಕು. ಶಿಕ್ಷಕರು ಮೇಲ್ವಿಚಾರಣೆ ನಡೆಸುತ್ತಾ ಮಾರ್ಗದರ್ಶನ ಮಾಡಬೇಕು. ಪುಟ್ಟ-ಪುಟ್ಟ ಬರೆಹ, ಚಿತ್ರಗಳು, ಜನಪದ ಸಂಗ್ರಹ, ಕವನ, ಕಥೆ, ಲೇಖನ, ರಂಗೋಲಿ, ಸಾಹಿತಿ-ಕಲಾವಿದರ, ವಿಜ್ಞಾನಿಗಳ ಮಹಾತ್ಮರ, ರಾಜಕಾರಣಿಗಳ ಚಿತ್ರ, ವಿವರ ಸಂಗ್ರಹ ಇತ್ಯಾದಿ ವೈವಿಧ್ಯ ಇರಬೇಕು.
ಮೂರು ಮುಖ್ಯ ಚಟುವಟಿಕೆಗಳು
ಕೊನೆಯದಾಗಿ ಅತ್ಯಂತ ಮಹತ್ತ್ವದ ಮತ್ತು ಹೊಸದಾದ ಮೂರು ಚಟುವಟಿಕೆಗಳನ್ನು ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷಾ ಬೆಳವಣಿಗೆಗಳಿಗೆ ಪೂರಕವಾಗಿ ಸೂಚಿಸುತ್ತೇನೆ. ಅವೆಂದರೆ ಶಬ್ದಕೋಶ ರಚನೆ. ವಿಶ್ವಕೋಶ ರಚನೆ. ಮುಕ್ತ ಗ್ರಂಥಾಲಯ.
ಶಬ್ದಕೋಶ ರಚನೆ
ಶಬ್ದಕೋಶ ರಚನೆ ಎಂದೊಡನೆ ಇದೇನಪ್ಪಾ ಆಗುಹೋಗದ ಕೆಲಸ. ಇದೇನು ವಿಶ್ವವಿದ್ಯಾಲಯವೇ? ಮುಂತಾಗಿ ಯೋಚಿಸಿ ಗಾಬರಿ ಆಗಬೇಕಾಗಿಲ್ಲ.
ಶಬ್ದಕೋಶ ರಚನೆಯಿಂದ ಮಕ್ಕಳಲ್ಲಿ ಸಂಶೋಧನಾ ಪ್ರವೃತ್ತಿ, ಸ್ವಾವಲಂಬನೆ, ಸೂಕ್ಷ್ಮ ಗ್ರಹಿಕೆ, ಖಚಿತ ಜ್ಞಾನ, ನೆನಪು, ವಿಷಯ ಜ್ಞಾನ ಇತ್ಯಾದಿಗಳ ಪಟುತ್ವ ಬೆಳೆಯುತ್ತದೆ. ಈ ಶಬ್ದಕೋಶ ರಚನೆಯ ಕಾರ್ಯವನ್ನು ಆರನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೂ ವಿಸ್ತರಿಸಬಹುದು.
ಇದರಲ್ಲಿ ಕೇವಲ ಭಾಷೆಗೆ ಸಂಬಂಧಿಸಿ ಮಾತ್ರ ಇರಬೇಕಾಗಿಲ್ಲ. ಮಕ್ಕಳ ಜ್ಞಾನಕ್ಕೆ ಅನುಸರಿಸಿ ಭೂಗೋಲ ಪದಕೋಶ, ಚರಿತ್ರೆಯ ಪದಕೋಶ, ವಿಜ್ಞಾನ ಪದಕೋಶ ಹೀಗೆ ವೈವಿಧ್ಯಮಯವಾಗಿ ಮಾಡಬಹುದು.
ಕೆಲವು ಉದಾಹರಣೆಗಳು
ಆರನೆಯ ತರಗತಿ
ಮೃಗರಾಜ - ಸಿಂಹ, ಪಂಚಾಸ್ಯ
ನದಿ - ಹೊಳೆ, ದೊಡ್ಡಹಳ್ಳ
ಬಾನು - ಆಕಾಶ, ಆಗಸ
ಭಾನು - ಸೂರ್ಯ, ನೇಸರು
ಗುಲಾಬಿ - ಒಂದು ಹೂವಿನ ಹೆಸರು
ರಸ್ತೆ - ದಾರಿ, ಹಾದಿ, ಮಾರ್ಗ
ಏಳನೆಯ ತರಗತಿ
ಇಲ್ಲಿ ತುಸು ವಿಸ್ತರಿಸಬೇಕು. ಪದಕೋಶದಲ್ಲಿ ಉಪಯೋಗಿಸುವ ಸಂಕ್ಷಿಪ್ತ ಚಿಹ್ನೆಗಳ ಬಳಕೆ ಬರಬೇಕು. ಉದಾ: ನಾಮಪದ (ನಾ.ಪ)
ಕ್ರಿಯಾಪದ (ಕ್ರಿ.ಪ), ನಾಮ ವಿಶೇಷಣೆ (ನಾ.ವಿ)
ಭಾವನಾಮ (ಭಾ.ನಾ) ಇತ್ಯಾದಿ
ಅಡವಿ - (ನಾ.ಪ). ಬೆಟ್ಟ, ವನ
ನದಿ - (ರೂ.ನಾ) ಹೊಳೆ, ದೊಡ್ಡಹಳ್ಳ
ಆನಂದ - (ಭಾ.ನಾ) ಸಂತೋಷ, ಸುಖ
ಓಡು - (ಕ್ರಿ.ಪ) ವೇಗವಾಗಿ ಚಲಿಸು ಇತ್ಯಾದಿ.
ಹೀಗೆ ಎಂಟನೆಯ ತರಗತಿ, ಒಂಬತ್ತನೆಯ ತರಗತಿವರೆಗೆ ಶಬ್ದಕೋಶ ರಚಿಸಬಹುದು. ಇದಕ್ಕೆ ಒಂದು ಪ್ರತ್ಯೇಕ ನೋಟ್ಬುಕ್ ತಯಾರಿಸಬೇಕು. ಸ್ವಚ್ಛ, ಸುಂದರವಾಗಿ ಬರೆಯಬೇಕು. ಪರಿಶೀಲನೆಗೆ ಮಕ್ಕಳಲ್ಲಿಯೇ ಒಂದು ಕಮಿಟಿ ಮಾಡಬೇಕು. ಶಿಕ್ಷಕರು ಮಾರ್ಗದರ್ಶನ ಮಾಡಬೇಕು.
ಹತ್ತನೆಯ ತರಗತಿಯಲ್ಲಿ ವಾಗ್ರೂಢಿಗಳ ವಾಕ್ಯ ಪ್ರಯೋಗಗಳನ್ನು ಸೇರಿಸಬೇಕು. ಭೂಗೋಲ, ಇತಿಹಾಸ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿ ಶಬ್ದಕೋಶ ರಚಿಸಬೇಕು.
ಹೀಗೇ ಮನೆಮಾತುಗಳ ಸಂಗ್ರಹಗಳನ್ನೂ ಮಕ್ಕಳಿಂದ ಮಾಡಿಸಬಹುದು. ಪ್ರೌಢಶಾಲೆಗಳಿಗೆ ಅನುಕೂಲವಾಗುವ ವಿಶ್ವಕೋಶವನ್ನು ರಚನೆ ಮಾಡಲು ಮಕ್ಕಳಿಗೆ ಪ್ರೇರೇಪಿಸಬಹುದು.
ಉದಾ: ನಮ್ಮ ನಮ್ಮ ಮನೆಗಳಲ್ಲಿಯೇ ಇರುವ ಸಾಮಾನುಗಳ ವಿವರ ಸಂಗ್ರಹಿಸುವುದು.
ಚೂಳಿ : ಇದು ಬೆತ್ತದಿಂದ ಮಾಡುವ ದೊಡ್ಡದಾದ ಬುಟ್ಟಿ. ರೈತರ ದಿನಚರಿಯಲ್ಲಿ ಬಹಳ ಮುಖ್ಯ ಪಾತ್ರವಹಿಸುವ ಸಾಧನ. ಇದು ಗುಡಿ ಕೈಗಾರಿಕೆಯ ಉತ್ಪನ್ನ. (ಸಾಧ್ಯವಾದರೆ ಚಿತ್ರ ಕೊಡಬಹುದು.)
ಹೀಗೇ ಬೆಳೆಸಬಹುದು.
ಮುಕ್ತ ಗ್ರಂಥಾಲಯ
ಈಗಂತೂ ಶಾಲೆಗಳಿಗೆ ಸರಕಾರ ತಾನೇ ಗ್ರಂಥ ಖರೀದಿಸಿ ಕೊಡುತ್ತದೆ. ಆ ಪುಸ್ತಕಗಳ ಸದುಪಯೋಗ ಆಗಬೇಕಾದದ್ದು ಅಗತ್ಯ. ಶಾಲೆಯಲ್ಲಿ ಇರುವ ಪುಸ್ತಕಗಳನ್ನು ಒಂದು ಕಪಾಟಿನಲ್ಲಿ ಇಟ್ಟು ಯಾವುದೇ ಸಮಯದಲ್ಲಿ (ಸಮಯ ಸಿಕ್ಕಾಗ) ಅವರೇ ತೆಗೆದು ಓದಲು ಹೇಳಬೇಕು. ಪುಸ್ತಕವನ್ನು ಚೆಂದವಾಗಿ, ಜೋಪಾನವಾಗಿ ಇಡುವುದನ್ನು ಕಲಿಸಬೇಕು. ಪುಸ್ತಕ ಪ್ರೀತಿ ಬೆಳೆಸಬೇಕು. ಇದರಿಂದ ಮಕ್ಕಳಲ್ಲಿ ವಾಚನಾಭಿರುಚಿ ಬೆಳೆಯುತ್ತದೆ. ಬಹುತೇಕ ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ನೇರ ಪುಸ್ತಕದ ಕಪಾಟಿಗೆ ಕೈಹಾಕಲು ಬಿಟ್ಟರೆ ಪುಸ್ತಕಗಳು ಹಾಳಾಗುತ್ತವೆ ಎಂಬ ಭಾವನೆ ಇದೆ. ಇದು ಹೋಗಬೇಕು.
ಹೀಗೆ ಪ್ರಾಥಮಿಕ ಶಾಲೆಯಲ್ಲಿ ಭಾಷಾ ಬೆಳವಣಿಗೆಯ ದಿಕ್ಕಿನಲ್ಲಿ ಪ್ರಯೋಗ ಮಾಡಬಹುದಾಗಿದೆ. ಪ್ರಯೋಗಶೀಲತೆ ಎನ್ನುವುದೇ ಒಂದು ಕಷ್ಟ ಮತ್ತು ಜವಾಬ್ದಾರಿ. ಆದರೆ ಇಂಥ ಕಷ್ಟ ಮತ್ತು ಜವಾಬ್ದಾರಿಯನ್ನು ತೆಗೆದುಕೊಂಡಾಗಲೇ ಫಲ ಪ್ರಾಪ್ತವಾಗುವುದು.
ಭಾಷೆಯ ಬಳಕೆ ಹಾಗೂ ಬೆಳವಣಿಗೆಯ ಬಗ್ಗೆ ಉತ್ತಮ ಚಿಂತನೆ ನಡೆಸಿದ ತಮಗೆ ಹೃದಯಪೂರ್ವಕ ಧನ್ಯವಾದಗಳು
ReplyDelete