Tuesday, 11 June 2013

'ಪಾರ್ಥಿಸುಬ್ಬ'ದ ಗರಿ ಹೊತ್ತ ಮಂಜ ಭಾಗವತರಿಗೆ ನೆನಪಿನ ನುಡಿ ನಮನ

'ಪಾರ್ಥಿಸುಬ್ಬ'ದ ಗರಿ ಹೊತ್ತ ಮಂಜ ಭಾಗವತರಿಗೆ ನೆನಪಿನ ನುಡಿ ನಮನ
                                                                                                          -- ಡಾ.ವಿಠ್ಠಲ ಭಂಡಾರಿ.
          ಹಿರಿಯರಾದ ಮಂಜುನಾಥ ಭಾಗ್ವತರು ನಮ್ಮನ್ನಗಲಿ 10 ದಿನಗಳು ಕಳೆದವು. ಹಾಗೆ ನೋಡಿದರೆ ಯಕ್ಷಗಾನದ ಒಂದು ವರ್ಣರಂಜಿತ ಅದ್ಯಾಯ ಪೂರ್ಣಗೊಂಡಿತು. ಮಹಾ ನಿಷ್ಠುರ ನಿಲುವಿನ, ಸದಾ ಪ್ರಯೋಗಶೀಲ ಮನಸ್ಸಿನ ಭಾಗವತರು ಯಕ್ಷ ರಂಗದಲ್ಲಿ ಗಳಿಸಿದ ಖ್ಯಾತಿ, ಕೊಟ್ಟ ಕೊಡುಗೆ ಜನಮಾನಸದಲ್ಲಿ  ಎಂದೂ ಮಾಸದು. ತೀರಾ ಬಡತನದ ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದು ಬಂದ ಇವರು ಪ್ರಾರಂಭದ ದಿನಗಳಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸಿದರು. ಯಕ್ಷರಂಗ ಪ್ರವೇಶಕ್ಕೆ ಮನೆಯವರಿಂದಲೇ ಒದಗಿದ ವಿರೋಧವನ್ನೂ ಲೆಕ್ಕಿಸದೇ ಭಾಗವತರಾಗಿ ದಕ್ಷಿಣೋತ್ತರ ಕನ್ನಡದ ಅನಿವಾರ್ಯ ಕಲಾವಿದರಾಗಿ ಬೆಳೆದ ಬಗೆ ವಿಸ್ಮಯಕರವಾದುದು. ಪ್ರಸಂಗಕರ್ತರಾಗಿ, ಭಾಗವತರಾಗಿ, ಯಕ್ಷಗಾನ ಪತ್ರಿಕೆಯ ಸಂಪಾದಕರಾಗಿ, ಇದನ್ನೆಲ್ಲ ಮೀರುವ ರೀತಿಯಲ್ಲಿ ಒಬ್ಬ ಸಹೃದಯ, ಮಾನವೀಯ ವ್ಯಕ್ತಿಯಾಗಿ ನಮ್ಮೊಡನಿದ್ದರು.
ಅವರು ನಮ್ಮನ್ನಗಲಿದ ದುಃಖದ ಸಂದರ್ಭದಲ್ಲಿಯೂ ನಾವು ನೆನಪಿಸಿಕೊಳ್ಳಬೇಕಾದ ಸಂತೋಷದ ಸಂಗತಿಯೆಂದರೆ ಹಿರಿಯ ಕಲಾವಿದ ಮಂಜುನಾಥ ಭಾಗವತರಿಗೆ ಪಾಥರ್ಿಸುಬ್ಬ ಪ್ರಶಸ್ತಿ ಕೊಟ್ಟು ಗೌರವಿಸಿದ್ದು. ಆದರೆ ಅವರಿಗೆ ಪಾಥರ್ಿಸುಬ್ಬದಂತ ದೊಡ್ಡ ಪ್ರಶಸ್ತಿ ಬಂದಾಗ ನಡೆದಾಡುವಷ್ಟು ಶಕ್ತಿ ಇರಲಿಲ್ಲ. ಹರಟೆ ಹೊಡೆಯುವ ಕಸುವಿರಲಿಲ್ಲ. ನೆನಪು ಮಾಸಿತ್ತು. ಆದರೆ ಪಾತರ್ಿಸುಬ್ಬ ಮಾತ್ರ ಮಂಜುನಾಥ ಭಾಗವತರನ್ನು ಮರೆಯದಿದ್ದುದು ನನಗಂತೂ ತುಂಬಾ ಖುಷಿ ನೀಡಿದೆ.
ಈ ನಾಡಿನ ಬಹುಮುಖ್ಯ ಭಾಗವತರು ಇವರು. ಜನಪ್ರಿಯತೆಯಲ್ಲಿಯೂ, ವಿದ್ವತ್ತಿನಲ್ಲಿಯೂ, ಯಕ್ಷಗಾನದ ಕುರಿತು ಬದ್ಧತೆಯಿಂದಲೂ ಮಂಜುನಾಥ ಭಾಗವತರು ಅದ್ವಿತೀಯರು. ಕೆಲವು ದಶಕಗಳಕಾಲ ತನ್ನ ಕಂಠ ಸಿರಿಯಿಂದ, ಸಮಯ ಪ್ರಜ್ಞೆಯಿಂದ ಯಕ್ಷರಂಗವನ್ನು ಆಳಿದರು ಎನ್ನುವುದು ಬಹುಶಃ ಅತಿಶಯೋಕ್ತಿಯಾಗಲಾರದು.
10-15 ವರ್ಷಗಳಿಂದ ಮಂಜುನಾಥ ಭಾಗವತರ ಕುಂಬಾರಮಕ್ಕಿ ಮನೆಯೊಂದಿಗೆ ನನಗೆ ತುಂಬಾ ಆತ್ಮೀಯ ಸಂಬಂಧ. ಅವರ ಒಡನಾಟದ ಸವಿಯನ್ನು ನಾನೂ ಉಂಡಿದ್ದೇನೆ. ವ್ಯಂಗ್ಯ, ಹರಿತ ಭಾಷೆಗೆ ಹೆಸರುವಾಸಿ. ಸದಾ ಎದುರಿಗಿದ್ದವರನ್ನು ನಗಿಸುತ್ತಾ, ತಾವೂ ನಗುತ್ತಾ ತನ್ನ ಹಳೆಯ ಜಮಾನಾವನ್ನು ನೆನಪಿಸುತ್ತಿದ್ದರು. ರಂಗದಲ್ಲಿ ನಡೆಯುವ ಹಲವು ಆಭಾಸಗಳನ್ನು ಕತೆ ಕಟ್ಟಿ ಹೇಳುತ್ತಿದ್ದರು. ಧರ್ಮಸ್ಥಳ ಮೇಳದ ಕುಂಬಳ ಕಾಯಿ ಸಾರು, ಕಾಯಿ ಚಟ್ನಿಯ ರುಚಿ ಈ ಹೆಂಗಸರ ಅಡಿಗೆಗೆ ಎಂದೂ ಬರಲಾರದು ಎಂದು ಮನೆಯವರನ್ನು ರೇಗಿಸುತ್ತಿದ್ದರು. ರಾತ್ರಿ ಆಟ, ಹಗಲು ನಿದ್ದೆಯ ಖುಷಿಯೇ ಬೇರೆ ಎಂದು ತಮ್ಮ ತಿರುಗಾಟದ ಅನುಭವವನ್ನು ನಿಭರ್ಿಡೆಯಿಂದ ಬಿಚ್ಚಿಡುತ್ತಿದ್ದರು. ಬಾಲ್ಯದ ಬಡತನ, ಅನ್ನ ಕಂಡುಕೊಳ್ಳುವ ಬದುಕಿನ ಹೋರಾಟ, ಮೇಳಗಳ ಕಾಲೆಳೆಯುವ ಸ್ಪರ್ದೆಯನ್ನು ಜಯಿಸಿ ಮಂಜುನಾಥ ಭಾಗವತರು 'ಪಾರ್ಥಿ ಸುಬ್ಬ' ಪ್ರಶಸ್ತಿಯವರೆಗೆ ಬೆಳೆದ ಪರಿ ಮಾತ್ರ ರೋಚಕವಾದುದು.
            ಭಾಗವತರು ಒಬ್ಬ ಆಶು ಕವಿ ಕೂಡ. ಹಲವು ಸಂಧರ್ಭಗಳಲ್ಲಿ ಪ್ರಸಂಗ ಪಟ್ಟಿಯಿಲ್ಲದೆಯೇ ಆಕ್ಷಣದಲ್ಲಿ ಪದ್ಯ ರಚಿಸಿ ಹಾಡುತ್ತಾ ಮುಮ್ಮೇಳದವರಿಗೆ ತಿಳಿಯದಂತೆ ಅವರನ್ನು ಕುಣಿಸಿದ ದಾಖಲೆಯೂ ಇದೆ. ಆ ಕಾಲದಲ್ಲಿಯೇ ಯಕ್ಷಗಾನಕ್ಕೊಂದು ಪತ್ರಿಕೆ ಬೇಕೆಂದು ಪ್ರಾರಂಭಿಸುವ ಧೈರ್ಯಕ್ಕೆ ಯಾರಾದರೂ ಮೆಚ್ಚಲೇ ಬೇಕು. ಪತ್ರಿಕೆ ನಿಂತಿತು ಎನ್ನುವುದು ಬೇರೆ ಮಾತು. ಆದರೆ ಕನಸು ಮತ್ತು ಆಶಯ ಇತ್ತಲ್ಲ. ಅದನ್ನು ನಾವು ಮೆಚ್ಚಲೇ ಬೇಕು.
          ಅವರ ಇಡೀ ಕುಟುಂಬವೇ ಹಾಗೆ. ಅತಿಥಿ ಸತ್ಕಾರದಲ್ಲಿ ಎತ್ತಿದ ಕೈ. ಅವರ ಮನೆಯಲ್ಲಿ ಊಟ ಮಾಡುವಾಗ ಯಾರ ಜಾತಿಯನ್ನೂ ಅವರು ಕೇಳಿದ್ದಿಲ್ಲ. ಅವರೊಂದಿಗೆ ಊಟ-ತಿಂಡಿ ಹಲವು ಬಾರಿ ನಾವೇ ಬಡಿಸಿಕೊಂಡು ಉಂಡಿದ್ದೂ ಇದೆ. ಜಾತ್ಯತೀತ ಮನೋಭಾವ ಅವರ ಸ್ವಭಾವದಲ್ಲಿ ಬೆರೆತಿತ್ತು.
           ಅವರ ಮಡದಿಯವರನ್ನು ನಾನು ನೆನೆಯಲೇ ಬೇಕು, ಪಾತರ್ಿಸುಬ್ಬ ಪ್ರಶಸ್ತಿಯನ್ನು ಒಳಗೊಂಡಂತೆ ಮಂಜ ಭಾಗವತರ ಯಶಸ್ಸಿನಲ್ಲಿ ದೊಡ್ಡ ಪಾಲು ಇವರಿಗೆ ಇದೆ. ನಾವೆಲ್ಲಾ ಅವರಿಗೆ 'ಆಯಿ' ಎಂದೇ ಕರೆಯುತ್ತೇವೆ. ಇಡೀ ಸಂಸಾರವನ್ನು ನಿಭಾಯಿಸುತ್ತಿದ್ದುದು ಇವರೇ. ತೋಟ, ಮನೆ, ಮಕ್ಕಳು. . .ಎಲ್ಲರೂ ಇವರ ಕಾಳಜಿಯಲ್ಲಿಯೇ ಬೆಳೆದುವು. ಭಾಗವತರ ಅನಾರೋಗ್ಯದಲ್ಲಿ - ಎಕ್ಷಿಡೆಂಟ್ ಆದಾಗ, ಪಾಶ್ರ್ವವಾಯು ಆದಾಗ- ಮಗುವಂತೆ ಪೋಷಿಸಿದರು.
ಅವರ ಮನೆಯ ಹೊಳ್ಳಿಯಲ್ಲಿ ಮಂಜ ಭಾಗವತರು, ಆಯಿ, ಮಮತಾ, ಗೋಪಾಲ, ನಾನು, ಮೊಮ್ಮಗ ಮಂಜುನಾಥ . .  . ಎಲ್ಲಾ ಕವಳ ಜಗಿಯುತ್ತ (ಗೋಪಾಲ ಕವಳದಲ್ಲಿ ಶೂರನಾಗಿದ್ದ.) ಹರಟೆ ಹೊಡೆದ ದಿನಗಳ ನೆನಪು ಈಗಲೂ. . . ಈಗಲೂ ಹಸಿರಾಗಿದೆ. ತನಗೆ ನೆನಪಿನ ಶಕ್ತಿಯೇ ಇಲ್ಲ ಎಂದು ಹೇಳುತ್ತಲೇ ನೆನಪಿನಾಳವನ್ನು ಬಗೆದಿಡುತ್ತಿದ್ದರು. ಭಾಗವತರು ಸಂಜೆ ಆಗುತ್ತಿದ್ದಂತೆ ಒಂದು ಸಿಗರೇಟಿಗಾಗಿ ಅಗ್ರಹಾರದ ಕಡೆ ನಡೆಯುತ್ತಿದ್ದರು. ಸಿಗರೇಟು ಸೇದಿ ಬಂದಾಗ ಅವರನ್ನು ತಮಾಷೆ ಮಾಡುತ್ತಿದ್ದೆವು. ಆದರೆ ಈಗ ಹೋದವರು ಬರುವುದೇ ಇಲ್ಲಾ ಎಂದಾಗ ಮನಸ್ಸಿಗೆ ಬೇಸರವಾಗುತ್ತದೆ.  
ವಿಠ್ಠಲ ಭಂಡಾರಿ, ಕೆರೆಕೋಣ
(ಇಂದು ಸಂಜೆ ಭಾಗವತರ ಹುಟ್ಟೂರಾದ ಕಡತೋಕಾದಲ್ಲಿ ಶೃದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿದೆ. ಅವರ ನೆನಪಿನಲ್ಲಿ ಈ ನೆನಪಿನ ನುಡಿ.)
 11-11-2011 ರಂದು ಕರಾವಳಿ ಮುಂಜಾವಿನಲ್ಲಿ ಪ್ರಕಟವಾಗಿದೆ

No comments:

Post a Comment