Tuesday 18 June 2013

ಅಂತಾರಾಷ್ಟ್ರೀಯ ಉತ್ಸವಕ್ಕೆ ಕಳೆತಂದ ಜಾನಪದ ಕುಣಿತ - ವಿಠ್ಠಲ ಭಂಡಾರಿ, ಕೆರೆಕೋಣ

                                         ಅಂತಾರಾಷ್ಟ್ರೀಯ ಉತ್ಸವಕ್ಕೆ ಕಳೆತಂದ ಜಾನಪದ ಕುಣಿತ

                            ದಕ್ಷಿಣ ಆಫ್ರಿಕಾದ ಪ್ರಿಟೋರಿಯಾ ಸಮೀಪದ ಲುಕಸ್ ಮೊರಿಪೆ ಸ್ಟೇಡಿಯಂನಲ್ಲಿ ನಡೆದ ಅಂತಾರಾಷ್ಟ್ರೀಯ ವಿದ್ಯಾಥರ್ಿ-ಯುವಜನ ಉತ್ಸವದ ಉದ್ಘಾಟನಾ ಸಮಾರಂಭಕ್ಕೆ ಕಳೆ ಬಂದಿದ್ದೇ ಪ್ರಸಿದ್ಧ ಜುಲು ಬುಡಕಟ್ಟು ಕುಣಿತದ ಮೂಲಕ. ಸುಮಾರು ನೂರಕ್ಕಿಂತ ಹೆಚ್ಚು ಜನರಿರುವ ನೃತ್ಯ ತಂಡ ಸಾಂಪ್ರದಾಯಿಕವಾದ ಚರ್ಮದ ಉಡುಗೆ, ಪ್ರಾಣಿ ತುಪ್ಪಳವನ್ನು ಸಂಕೇತಿಸುವ ಹೆಡ್ ಗೇರ್, ಮುಖವಣರ್ಿಕೆಗಳ ಮೂಲಕ ಜಗತ್ತಿನ ಗಮನ ಸೆಳೆದರು. ಕಿವಿ ಗಡಚಿಕ್ಕುವ ಧರ್ಮವಾದ್ಯಗಳ ಲಯಕ್ಕೆ ಇಡೀ ಕ್ರೀಡಾಂಗಣದಲ್ಲಿ ಹೆಜ್ಜೆ ಹಾಕದವರಿಲ್ಲ. ಅವರ ಹಾಡಿಗೆ ದನಿ ಸೇರಿಸದವರಿಲ್ಲ. ಬಳ್ಳಿಯಂತೆ ಬಳಕುವ, ತೆರೆಯಂತೆ ಸರಿಯುವ, ಪ್ರವಾಹದಂತೆ ಮುನ್ನುಗ್ಗುವ, ಬೇಟೆಯನ್ನು ಬೆನ್ನಟ್ಟುವ, ಬೇಟೆಯಿಂದ ತಪ್ಪಿಸಿಕೊಳ್ಳುವ, ದೇವರನ್ನು ಆರಾಧಿಸುವ ವಿವಿಧ ಭಂಗಿಗಳು, ವಿವಿಧ ಹೆಜ್ಜೆಗಳು ಅವರ ಸಾಂಸ್ಕೃತಿಕ ಅನನ್ಯತೆಗೆ ಸಾಕ್ಷಿಯಾಗಿದ್ದವು.
ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕೋಬ್ ಜೂಮೋ ಅವರ ಭಾಷಣದ ಮೊದಲು ಮತ್ತು ನಂತರ 3-4 ತಾಸುಗಳ ಕಾಲ ಬೀಳುತ್ತಿರುವ ಮಳೆಯನ್ನೂ ಲೆಕ್ಕಿಸದೇ, ನಡುಗುವ ಚಳಿಯನ್ನು ಧಿಕ್ಕರಿಸಿ ಅವರ ಉತ್ಸಾಹ ಮುಗಿಲು ಮುಟ್ಟಿತ್ತು. ಜಗತ್ತಿನಾದ್ಯಂತ ಬಂದ ಪ್ರತಿನಿಧಿಗಳಿಗೆ ಆಫ್ರಿಕಾದ ಬುಡಕಟ್ಟುಗಳ ಕಲೆಯನ್ನು, ಅದರೊಳಗಡೆ ಅಡಗಿದ ಜೀವನ ಪ್ರೀತಿಯನ್ನು ತೆರೆದು ತೋರಿಸುವ ಆಸೆ ಅವರಲ್ಲಿತ್ತು.


                ಒಂದೆಡೆ ಅಮೆರಿಕಾ ಪ್ರೇರಿತ ಪಾಶ್ಚಾತ್ಯ ಸಂಸ್ಕೃತಿಗಳು ಅಭಿವೃದ್ಧಿಶೀಲ ದೇಶಗಳ ಸಾಂಸ್ಕೃತಿಕ ಚಹರೆಗಳ ಮೇಲೆ ದಾಳಿ ಇಡುತ್ತಿರುವಾಗ, ತಮ್ಮ ತಮ್ಮ ಕಲೆ, ಸಾಹಿತ್ಯ, ಪಾರಂಪರಿಕ ಕಲೆಗಳ ಕುರಿತು ಕೀಳರಿಮೆ ಹುಟ್ಟಿಸುತ್ತಿರುವಾಗ 10ದಿನಗಳ ಉತ್ಸವ ಇದಕ್ಕೆ ಸೆಡ್ಡು ಹೊಡೆದಂತೆ ಆಫ್ರಿಕಾ ಖಂಡದ ವಿವಿಧ ದೇಶಗಳಿಂದ, ದಕ್ಷಿಣ ಆಫ್ರಿಕಾದ ವಿವಿಧ ಪ್ರಾವಿನ್ಸ್ಗಳಿಂದ ಬಂದ ನೃತ್ಯ ತಂಡಗಳು, ಸಾಂಪ್ರದಾಯಿಕ ಹಾಡುಗಳ ಉಡುಗೆ ತೊಡುಗೆಗಳ ಮೂಲಕ, ವಾದ್ಯ ಪರಿಕರಗಳ ಮೂಲಕ ತಮ್ಮ ಅನನ್ಯತೆಯನ್ನು ಅಭಿವ್ಯಕ್ತಿಸಿದರು.

            ದಕ್ಷಿಣ ಆಫ್ರಿಕಾವನ್ನು ಪ್ರವೇಶಿಸಿದ ಸಂದರ್ಭದಿಂದಲೂ ಕಪ್ಪು ಸುಂದರಿ-ಸುಂದರರ ಗುಂಪು ನರ್ತನಗಳೇ ಕಣ್ಣೆದುರಿಗಿದ್ದವು. ಅಲ್ಲಿ ಸೇರಿದ ಕಾರ್ಯಕರ್ತರೂ ಕೂಡ ಹಲವು ಸಂದರ್ಭಗಳಲ್ಲಿ ತಮ್ಮ ಕೆಲಸ ಬಿಟ್ಟು ನರ್ತನದಲ್ಲಿ ತೊಡಗಿರುತ್ತಿರು. ಉದ್ಘಾಟನೆಯ ಪ್ರತಿ ಘಟ್ಟದಲ್ಲಿಯೂ ಘೋಷಣೆಯುಕ್ತ ನರ್ತನ. ಇದು ಅಲ್ಲಿಯ ಅತಿಥಿಗಳಿಗೂ ಅದೆಷ್ಟು ರೂಢಿಯಾಗಿದೆಯೆಂದರೆ ಅವರ ಭಾಷಣದ ಮಧ್ಯೆ ಮಧ್ಯೆ ನರ್ತನಕ್ಕಾಗಿ, ಹಾಡಿಗಾಗಿ 2-3 ನಿಮಿಷ ಸಮಯ ನೀಡುತ್ತಿದ್ದರು. ಮತ್ತು ಅವರೂ 'ಅಮಾಂಜಾ, ವೀವಾ' ಎಂದು ಘೋಷಣೆ ಕೂಗುತ್ತಿದ್ದರು. ಉದ್ಘಾಟಕರಾದ ಅಧ್ಯಕ್ಷ ಜಕೋಬ್ ಜೂಮಾ, ಪ್ರಿಪರೇಟರಿ ಕಮೀಟಿಯ ಅಧ್ಯಕ್ಷ ಜ್ಯೂಲಿಯನ್ ಮಲೇಮಾರ ಮಾತುಗಳು ನಡೆಯುತ್ತಿರುವಾಗ ಆಫ್ರಿಕಾದ ಪ್ರತಿನಿಧಿಗಳು ಕೂಗುವ ಘೋಷಣೆಗೆ, ಸಾಮೂಹಿಕ ನರ್ತನಗಳಿಗೆ ಅತಿಥಿಗಳು ಕೆರಳಿಸಬಹುದೆಂದು, ಪೋಲೀಸರು ಬಂದು ಅವರನ್ನು ಗದರಿಸಬಹುದೆಂದುಕೊಂಡೆವು. ಯಾಕೋ ಅವರದು ಅತಿಯಾಯಿತೆಂದು ಅನಿಸಿತು. ಆದರೆ ಅತಿಥಿಗಳು ಸಿಡುಕುವ ಬದಲು ಎಂಜೋಯ್ ಮಾಡುತ್ತಿದ್ದರು. ಸ್ವತಃ ಉದ್ಘಾಟಕರಾದ ಜುಮೋ ಅವರೇ 'ಅಮಾಂಜಾ, ವೀವಾ' ಎಂದು ಘೋಷಣೆ ಕೂಗಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದರು.


               ಒಂದು ರೀತಿಯಲ್ಲಿ ಅವರ ಬದುಕೇ ಈ ಹಾಡು ಕುಣಿತಕ್ಕೆ ಟ್ಯೂನ್ ಆದಂತಿದೆ. ಒಂದು ಸಣ್ಣ ಹಾಡು ಒಂದೆರಡು ರೀದಂ ಕೇಳಿದರೆ ಸಾಕು, ಊಟ ಮಾಡುತ್ತಿದ್ದವರು ಕೆಳಗಿಟ್ಟು ಕುಣಿಯುತ್ತಾರೆ. ಮುಗಿದವರು ಅಲ್ಲೇ ಕೈ-ಕಾಲು ಆಡಿಸುತ್ತಾರೆ. ನಿದ್ದೆ ಮಾಡುತ್ತಿದ್ದವರೂ ಅರೆನಿಮಿಷ ಎದ್ದು ಕುಣಿದು ಏನೂ ಆಗಿಯೇ ಇಲ್ಲ ಎನ್ನುವಂತೆ ಮಲಗಿಬಿಡುತ್ತಾರೆ. ನಾವು ಒಂದೆರಡು ಹೆಜ್ಜೆ ಕುಣಿದರೆ ಸಾಕು, ಸ್ವಲ್ಪ ಮೈ ಕುಲುಕಿಸಿದರೆ ಸಾಕು ಅವರು ಅರೆಘಳಿಗೆ ನಮ್ಮ ಕೈ ಹಿಡಿದು ನತರ್ಿಸಿಯೇ ಮುಂದೆ ಹೋಗುತ್ತಾರೆ
.
              ಈ ಹಾಡು, ನರ್ತನ ತಮ್ಮ ಬುಡಕಟ್ಟುಗಳಿಂದ ಬಂದ ಸಾಂಪ್ರದಾಯಿಕ ಬಳುವಳಿ ಎನ್ನುತ್ತಾರೆ. ಇದು ಬಿಳಿಯರ ವಿರುದ್ಧ ಪ್ರತಿಭಟನೆಯ, ಹೋರಾಟದ ಒಂದು ಭಾಗವಾಗಿತ್ತು ಎಂದು ನೆನಪಿಸುತ್ತಾರೆ. ಪ್ರತಿ ಹಂತದಲ್ಲಿ ಯಾಕೆ ಕೈ ಕೈಹಿಡಿದು ಸಾಮೂಹಿಕವಾಗಿ ನತರ್ಿಸುತ್ತೀರೆಂದು ಕೇಳಿದಾಗ, 'ಇದು ಬಿಳಿಯರ ವಿರುದ್ಧದ ಪ್ರತಿಭಟನೆ. ಕರಿಯರ ಸಂಘಶಕ್ತಿಯ ಪ್ರತೀಕ.' ಎನ್ನುವ ಉತ್ತರ ಬಂತು. ಅವರ ಹಲವು ನರ್ತನದಲ್ಲಿಯೂ ಕೂಡ ಬಿಳಿಯರನ್ನು ಅಪಹಾಸ್ಯ ಮಾಡುವ, ಕರಿಯರ ಗೆಲುವನ್ನು ಸಂಭ್ರಮಿಸುವ ಧ್ವನಿ ಅಡಗಿದೆ. ಇದರೊಂದಿಗೆ ಬಿಳಿಯರೊಂದಿಗೆ ಪಟ್ಟ ಹಿಂಸೆ, ಅವಮಾನ, ನೋವು, ಪ್ರಾಣಿ ಸದೃಶವಾಗಿ ಬದುಕಿದ ರೀತಿಗಳೂ ಕೂಡ ಸೂಟು, ಶಂಗಾನ್, ವೆಂಡಾ ಮುಂತಾದ ಬುಡಕಟ್ಟುಗಳ ಕುಣಿತದಲ್ಲಿ ಸೇರಿಕೊಂಡಿವೆ. ಹಲವು ಹಾಡುಗಳಲ್ಲಿ ತಮ್ಮ ಪೂವರ್ಿಕರನ್ನು ನೆನೆಯುತ್ತಾರೆ. ಬಹುತೇಕರು ಬಿಳಿಯರು ಬರುವ ಪೂರ್ವದಲ್ಲಿ ಆಗಿಹೋದ ಬುಡಕಟ್ಟುಗಳ ನಾಯಕರು, ಇನ್ನು ಹಲವರು ಬಿಳಿಯರ ವಿರುದ್ಧದ ಹೋರಾಟದಲ್ಲಿ ಹತರಾದವರು. ಉಳಿದಂತೆ ಅವರಲ್ಲಿ ಸ್ವಾತಂತ್ರ್ಯದ ಬೀಜ ಬಿತ್ತಿದವರು, ಸ್ವಾತಂತ್ರ್ಯದ ಹೋರಾಟದಲ್ಲಿ ಪಾಲ್ಗೊಂಡವರು ಹಾಡಿನಲ್ಲಿ ಸ್ಪೂತರ್ಿಯಾಗಿ ಬರುತ್ತಾರೆ.

         ATLEGANG CULTURAL GROUP, THE LESEDI CULTURAL VILLAGE GROUP, MALEDI YOUTH CLUB  ಮುಂತಾದ ಸಾಂಸ್ಕೃತಿಕ ತಂಡಗಳು ನಡೆಸಿಕೊಟ್ಟ ಕಾರ್ಯಕ್ರಮಗಳನ್ನು ನೋಡಿದಾಗ ಬಡತನ, ಅವಮಾನದಲ್ಲಿಯೂ ಕಾಪಿಟ್ಟುಕೊಂಡ ಸಾಂಸ್ಕೃತಿಕ ಶ್ರೀಮಂತಿಕೆ ಯಾರನ್ನೂ ಬೆರಗುಗೊಳಿಸುತ್ತದೆ.
ಆಫ್ರಿಕಾದ ಇತರ ದೇಶಗಳಾದ ನಮೀಬಿಯಾ, ಇಥಿಯೋಪಿಯಾಗಳಿಂದ ಬಂದ ತಂಡಗಳೂ ಕೂಡ ಈ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹಾಗೇ ಉಳಿಸಿಕೊಂಡಿವೆ. ಆದರೆ ಇಂತಹ ಪ್ರದರ್ಶನಕೊಡುವ ಕೆಲವು ತಂಡಗಳು ಮಾತ್ರ ಉಳಿದುಕೊಂಡಿದ್ದು, ಸಾವಕಾಶವಾಗಿ ಕಡಿಮೆ ಆಗುತ್ತಿರುವ ಸಾಧ್ಯತೆಯ ಬಗ್ಗೆ ಗಮನ ಸೆಳೆಯುತ್ತಾರೆ. ಆದರೆ ಅಲ್ಲೆಲ್ಲಾ ಇಂತಹ ನರ್ತನವನ್ನು ಹೊಸ ಶಿಕ್ಷಣ ಪಡೆಯುತ್ತಿರುವ ವಿದ್ಯಾಥರ್ಿ-ಯುವಜನರಿಗೆ ಹೇಳಿ ಕೊಡುವ ಶಾಲೆಗಳೂ, ತರಬೇತಿ ಕೇಂದ್ರಗಳೂ ಇವೆ, ಕೆಲವು ಸಕರ್ಾರದ ನೆರವಿನಿಂದ ನಡೆದರೆ, ಇನ್ನು ಕೆಲವು ಕಾರ್ಯಕ್ರಮ ನೀಡಿ ಗಳಿಸಿದ ಹಣದಲ್ಲಿ ತರಬೇತಿ ನೀಡುತ್ತಿವೆ.


         ಆಫ್ರಿಕಾ ದೇಶಗಳ ತಂಡಗಳು ಮಾತ್ರವಲ್ಲ ವಿಯೆಟ್ನಾಂ, ಪಶ್ಚಿಮ ಸಹಾರಾ, ಕ್ಯೂಬನ್ ಹಾಡು, ಕುಣಿತದಲ್ಲಿಯೂ ಇದೇ ಪ್ರತಿಭಟನೆಯ ಧ್ವನಿ ಇದ್ದು ಕಾಣುತ್ತಿತ್ತು. ಹಾಡು, ನರ್ತನದ ವಸ್ತುವೇ ಆದೇಶಗಳಲ್ಲಿ ನಡೆದ ಕ್ರಾಂತಿಯ ಕತೆ; ಹುತಾತ್ಮರ ಕುರಿತ ಮೆಚ್ಚುಗೆ; ಹುತಾತ್ಮರಿಂದ ಸ್ಪೂತರ್ಿ, ಶಕ್ತಿ ಬೇಡುವುದು, ಹೋರಾಡಿಯೇ ಸಿದ್ಧ ಎನ್ನುವ ಸಂದೇಶ ನೀಡುವುದು. ಹಾಡು ಆಧುನಿಕವಾಗಿದ್ದರೂ ಅದರ ಧಾಟಿ ಮಾತ್ರ ಜಾನಪದದ್ದು. ಅವರು ಬಳಸುವ ಬಹುತೇಕ ವಾದ್ಯಗಳು ಸಾಂಪ್ರದಾಯಿಕ ವಾದ್ಯಗಳು.

          ಬೆಳಿಗ್ಗೆಯಿಂದ ಸಂಜೆಯವರೆಗೆ ಕುಣಿಯುತ್ತೀರಿ. ನಿಮಗೆ ಆಯಾಸ-ದಣಿವು ಆಗುವುದಿಲ್ಲವೇ ಎಂದು ಕೇಳಿದರೆ 'ನಮಗ್ಯಾಕೆ ದಣಿವಾಗಬೇಕು? ನಾವು ವಿಯೆಟ್ನಾಂ ಹುಡುಗಿಯರು, ಹೊಚಿಮ್ಹಿನ್ ನಾಡಿನವರು. ಇನ್ನೂ ನಾಲ್ಕು ತಾಸು ಹಾಡುತ್ತೇವೆ; ಕುಣಿಯುತ್ತೇವೆ. ಬನ್ನಿ, ನಮ್ಮೊಂದಿಗೆ ಹೆಜ್ಜೆ ಹಾಕಿ.' ಎಂದು ಕೈ ಹಿಡಿದು ಹತ್ತಾರು ಬಿದಿರುಗಳ ಬಲೆಯೊಳಗೆ ಹೆಜ್ಜೆ ಹಾಕುವುದನ್ನು ಹೇಳಿಕೊಡುತ್ತಾರೆ. ಹೀಗೆ 8 ದಿನ ಕುಣಿದಿದ್ದಾರೆ, ವಿವಿಧ ದೇಶಗಳ ಪ್ರತಿನಿಧಿಗಳನ್ನು ಕುಣಿಸಿದ್ದಾರೆ. ಇಂಪಾದ ಸಂಗೀತ ಅವರದು. ಕೊಳಲು, ಬಿದಿರಿನಿಂದ ಮಾಡಿದ ವಾದ್ಯಗಳು, ತಂತಿ ವಾದ್ಯಗಳು ಉತ್ಸವದ ಗಮನ ಸೆಳೆದವು. ಸುಂದರ ಧ್ವನಿ ಅವರದು; ವಿಯೆಟ್ನಾಮಿ ಹುಡುಗಿಯರ ಹಾಗೆ.

            ಆದರೆ ಕ್ಯೂಬಾದ ಹಾಡು, ಕುಣಿತ ಹಾಗಲ್ಲ. ಏರಿದ ಧ್ವನಿ, ಅಬ್ಬರದ ವಾದ್ಯ, ಮೈ ಮುರಿದ ಕುಣಿತ. . . . ಅವರ ಹೋರಾಟದಂತೆ; ಜಗತ್ತಿಗೆ ಕೇಳುವಂತೆ. ಅಮೇರಿಕಾವನ್ನೇ ಬೆದರಿಸುವಂತೆ. ಹೆಚ್ಚು ಕುಣಿಯುವುದು ಹುಡುಗಿಯರೇ. ಬಿಳಿ, ಕಪ್ಪು, ಕಂದು ಬಣ್ಣದ ಬೆಡಗಿಯರು. ವಿಶ್ವಾಸದ ನರ್ತನ. ಎಲ್ಲಾ ದೇಶಗಳ ವೈವಿಧ್ಯತೆಗಳನ್ನೂ ಪ್ರದಶರ್ಿಸಲು ಕೊಟ್ಟ ಸ್ಟಾಲ್ ಗಳಿವೆ. ಒಂದು ಸುತ್ತು ಮೆರವಣಿಗೆಯಲ್ಲಿ ನಡೆದು ಜನರ ಗಮನ ಸೆಳೆದು ಕಾರ್ಯಕ್ರಮ ನೀಡಿ ವೀವಾ ಕ್ಯೂಬಾ ಎಂದು ಜನರ ಬಾಯಲ್ಲೇ ಬರುವಂತೆ ಮಾಡುವ ಸಾಹಸ ಮೆಚ್ಚಲೇ ಬೇಕು
.

                 ಮೊರಕ್ಕೋದಿಂದ ಧಾಳಿಗೊಳಗಾದ ವೆಸ್ಟರ್ನ ಸಹಾರಾ ಮತ್ತು ಇಸ್ರೈಲ್ ನಿಂದ ಧಾಳಿಗೊಳಗಾದ ಪ್ಯಾಲಿಸ್ಟೈನಿಯರ ಹಾಡು, ನೃತ್ಯಗಳು ಜಾನಪದದ ಸೊಗಡಿನಿಂದ ಕೂಡಿರದಿದ್ದರೂ ಮಹಿಳೆಯರೇ ಹೆಚ್ಚಾಗಿ ಕುಣಿಯುವ ಅವರ ಸಾಂಪ್ರದಾಯಿಕ ಉಡುಗೆಯಿಂದ ಗಮನ ಸೆಳೆಯುತ್ತಿದ್ದರು. ಹಲವು ತಂಡಗಳು ಪ್ರತಿನಿಧಿಗಳ ಗಮನ ಸೆಳೆದುವು. ಜುಲು ಡಾನ್ಸ್ ಸುಮಾರು 10-15 ರೀತಿಯ ಹೆಜ್ಜೆಗಳನ್ನು ಕುಣಿಯುತ್ತಾರೆ. ಇವೆಲ್ಲವೂ ಭಿನ್ನಭಿನ್ನವಾದದ್ದೇ. ಬಿಟ್ಟ ಮೈ, ಸೊಂಟಕ್ಕೆ, ಎದೆಗೆ ಚರ್ಮದ ಬಟ್ಟೆ, ಕುತ್ತಿಗೆಗೆ ಮಣಿಸರ, ಎಲುವಿನ ಬಣ್ಣದ ಮಾಲೆಗಳು. ಕಾಲು ಕೈಗಳಿಗೆ ಕೂಡ ಮಣಿಗಳ ಕಟ್ಟುಗಳು. ತಲೆಗೆ ಪ್ರಾಣಿ ಚರ್ಮದ ಕೂದಲಿನಿಂದ ಮಾಡಿದ ಹೆಡ್ ಗೇರ್. ಆಕಾದೆತ್ತರಕ್ಕೆ ಕಾಲುಗಳನ್ನೆತ್ತಿ ಕುಣಿಯುವ ಭಂಗಿ ಆಕರ್ಷಕವಾದದ್ದು. ಕಾಂಗೋ ರೀತಿಯ ಚರ್ಮವಾದ್ಯ ಮತ್ತು ದೊಡ್ಡ ದೊಡ್ಡ ಡೋಲು, ಕಾಡಿನಲ್ಲಿ ಸಿಗುವ ಯಾವುದೋ ಕಾಯಿಯಿಂದ ಮಾಡಿದ ಗೆಜ್ಜೆ, ಹೆಜ್ಜೆಗೊಂದು ಗತ್ತು ತಂದಿದ್ದವು.

THE LUMBOOT DANCING ತಂಡ ಮುಖ್ಯವಾಗಿ ಯುದ್ಧದ ವಸ್ತುವುಳ್ಳ ಕುಣಿತ ಮಾಡುತ್ತದೆ. ಅದನ್ನವರು TRADITIONAL WAR DANCE  ಂದು ಕರೆಯುತ್ತಾರೆ. ಕೈಯಲ್ಲಿ ಈಟಿ ಇತ್ಯಾದಿ ಆಯುಧಗಳೊಂದಿಗೆ ಯುದ್ಧದ ಕುಣಿತ NALEDI YOUTH CLUB  ಪ್ರಸ್ತುತ ಪಡಿಸಿದ ಕುಣಿತದಲ್ಲಿ ದೇವರನ್ನು ಆರಾಧಿಸುವುದು ಮತ್ತು ಬೇಟೆಯ ದೃಶ್ಯ ಪ್ರದರ್ಶನ ಪ್ರಧಾನವಾಗಿತ್ತು. ಸುಮಾರು 36 ಜನರ ತಂಡ. ಅವರು ಸಮೂಹಕ್ಕೆ ಸಂಪತ್ತನ್ನು ಬೇಡುತ್ತಾರೆ. ಮತ್ತು ಹಿರಿಯರಿಗೆ ಸದ್ಗತಿಯನ್ನು ಕೋರುತ್ತಾರೆ. ಉಳಿದಂತೆ ಸಮುದಾಯಕ್ಕೆ ಖುಷಿಯನ್ನು ಬೇಡುತ್ತಾರೆ.


TSHWANE TRADITIONAL DANCE, KURU DANCE, KASANE BOSTSWANA TRADITIONAL DANCE, VANUATU TRIBAL DANCE ಹೀಗೆ ವಿವಿಧ ತಂಡಗಳು ಪ್ರಸ್ತುತ ಪಡಿಸಿದ ಹಲವು ನರ್ತನಗಳು ಮತ್ತು ಅವರು ಹಾಕುವ ಹೆಜ್ಜೆಯ ವಿನ್ಯಾಸ ಕನರ್ಾಟಕದ ಹಲವು ಬುಡಕಟ್ಟುಗಳ ಕುಣಿತವನ್ನು ಹೋಲುತ್ತವೆ.
ಎಲ್ಲಾ ಕುಣಿತಗಳೂ ಸಾಮೂಹಿಕ ಕುಣಿತ, ಸ್ತ್ರೀಯರೇ ಪ್ರಧಾನವಾಗಿರುವ ಕುಣಿತ, ಕಾಡಿನ ಮನುಷ್ಯರಂತೆ ಉಡುಪು, ಆಭರಣಗಳನ್ನೇ ಬಟ್ಟೆಯಂತೆ ತೊಡುವ ರೀತಿ, ಶೇಡಿಯಂತಹ ಬಣ್ಣದಿಂದ ನಮ್ಮಲ್ಲಿಯ ವಿದೂಷಕನಂತೆ ಮುಖವಣರ್ಿಕೆ, ಅಪರೂಪಕ್ಕೆ ಕಾಣುವ ಮುಖವಾಡ ಇತ್ಯಾದಿಗಳು ಹೊಸ ಲೋಕವನ್ನೇ ಸೃಷ್ಟಿಸುತ್ತವೆ.
ಉತ್ಸವದ ಪ್ರತಿ ದಿನವೂ ಬೇರೆ ಬೇರೆ ದೇಶಗಳ, ಖಂಡಗಳ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದರು. ಏಷ್ಯಾ, ಯುರೋಪ್, ಅಮೇರಿಕಾ, ಆಫ್ರಿಕಾ ಮುಂತಾದ ಖಂಡಗಳ ಪ್ರತಿನಿಧಿಗಳು ಪರಸ್ಪರ ಸಾಂಸ್ಕೃತಿಕವಾಗಿ ಗುರುತಿಸಿಕೊಳ್ಳಲು ಇದೊಂದು ಸದವಕಾಶವಾಗಿತ್ತು.

         ಸಾಮ್ರಾಜ್ಯ ಶಾಹಿ ಶಕ್ತಿಗಳ ಕ್ರೂರ ಧಾಳಿಗೆ ಒಳಗಾಗಿರುವ ದೇಶಗಳು ಪ್ರಭುತ್ವದ ಧಾಳಿಗೆ ವಿರುದ್ಧವಾಗಿ ರಾಜಕೀಯ ಹೋರಾಟವನ್ನು ಮಾಡುತ್ತಲೇ ತಮ್ಮ ಸಾಂಸ್ಕೃತಿಕ ಅನನ್ಯತೆಯನ್ನು ಮತ್ತೆ ಮತ್ತೆ ಅಪ್ಪಿಕೊಳ್ಳುತ್ತಿವೆ. ಆಫ್ರಿಕಾದ ಅನೇಕ ದೇಶಗಳು ಸಾಂಪ್ರದಾಯಿಕ ಕಲೆಗಳನ್ನು ಯಥಾವತ್ತಾಗಿ ಪ್ರದಶರ್ಿಸಿದರೆ ಕ್ಯೂಬಾ, ವಿಯೆಟ್ನಾಂ ನಂಥ ದೇಶಗಳು ಟ್ರೆಡಿಶನಲ್ ಕಲೆಗಳಿಗೆ ಹೊಸಕಾಲದ ಆಶಯವನ್ನು ಅನುಸಂಧಾನಿಸಿ ಜನರ ಮಧ್ಯೆ ಹೋಗುತ್ತಿದ್ದಾರೆ. ಜನಸಾಮಾನ್ಯರನ್ನು ಒಳಗೊಳ್ಳುತ್ತಿದ್ದಾರೆ.



             ಆದರೆ ಇಡೀ ಉತ್ಸವದಲ್ಲಿ ಭಾರತದ ಪಾಲ್ಗೊಳ್ಳುವಿಕೆ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮ ನೀಡುವಲ್ಲಿ ನಿರಾಶಾದಾಯಕವಾಗಿತ್ತು. ಮಣಿಪುರಿ ನರ್ತನವೊಂದನ್ನು ಬಿಟ್ಟರೆ ಗಮನ ಸೆಳೆಯುವ ಯಾವ ಕುಣಿತವಾಗಲೀ, ಹಾಡುಗಳಾಗಲೀ, ವಾದ್ಯಗಳಾಗಲೀ ಇರಲಿಲ್ಲ. ಹಾಗೆ ನೋಡಿದರೆ ಕನರ್ಾಟಕವನ್ನೂ ಒಳಗೊಂಡಂತೆ ಜಾನಪದ ಕಲೆ, ಕುಣಿತ, ಹಾಡುಗಳನ್ನು ಹೋರಾಟದ ಭಾಗವಾಗಿಸಿಕೊಂಡಿಲ್ಲ. ಈ ವಿಷಯಗಳಲ್ಲಿ ನಾವು ಕೇವಲ ಭಾಷಣಕ್ಕೆ ಸೀಮಿತಗೊಂಡಿದ್ದೇವೆ ಎಂದೆನಿಸಿತು.

              ಜಗತ್ತಿನಲ್ಲಿಯೇ ಅತ್ಯಂತ ವೈವಿಧ್ಯಮಯ ಸಂಸ್ಕೃತಿಗಳನ್ನು ಭಾರತ ದೇಶವು ಹೊಂದಿದೆ. ಭಾರತದಲ್ಲಿ ಅಸ್ತಿತ್ವದಲ್ಲಿರುವ ಅತ್ಯಂತ ವಿಶಿಷ್ಟವಾದ ಮತ್ತು ವೈವಿಧ್ಯಮಯವಾದ ಜಾನಪದ ಕಲೆ, ಸಾಹಿತ್ಯವನ್ನು ಹೋರಾಟ ಕಟ್ಟುವಲ್ಲಿ, ಜನಸಾಮಾನ್ಯರ ಬಳಿ ಹೋಗುವಲ್ಲಿ ಹೇಗೆ ದುಡಿಸಿಕೊಂಡಿದ್ದೀರಿ? ಎಂದು ಕೆಲವು ದೇಶಗಳ ಪ್ರತಿನಿಧಿಗಳು ಕೇಳಿದಾಗ ನಮಗೆ ಸುಮ್ಮನಿರದೇ ಬೇರೆ ದಾರಿಯಿರಲಿಲ್ಲಾ. ಮಾತನ್ನು ಬೇರೆಡೆ ಹೊರಳಿಸುವುದೊಂದೇ ನಮಗಿರುವ ದಾರಿಯಾಗಿತ್ತು!

ವಿಠ್ಠಲ ಭಂಡಾರಿ, ಕೆರೆಕೋಣ
                                                                                                                     (ಜನಶಕ್ತಿಯಲ್ಲಿ ಪ್ರಕಟ)




No comments:

Post a Comment