Thursday 27 June 2013

ಮಕ್ಕಳ ರಂಗಭೂಮಿ ಮತ್ತು ನಾಟಕ -R V Bhandari

                                       .ಮಕ್ಕಳ  ರಂಗಭೂಮಿ  ಮತ್ತು  ನಾಟಕ
ರಂಗಭೂಮಿಯ ಕುರಿತು ಅನೇಕ ಪರಿಕಲ್ಪನೆಗಳಿವೆ. ಒಂದು ವಿಶಾಲವಾದ ಅರ್ಥದಲ್ಲಿ ಇವೆಲ್ಲವುಗಳನ್ನು ಒಳಗೊಂಡಿದ್ದೇ 'ರಂಗಭೂಮಿ' ಎಂಬ ಪರಿಕಲ್ಪನೆ ಕೂಡ. 'ರಂಗಭೂಮಿ' ಎನ್ನುವುದು ಸರ್ವತಂತ್ರ ಸ್ವತಂತ್ರವಲ್ಲ. ಅದಕ್ಕೆ ವಸ್ತು ಸಿಕ್ಕಿದಾಗಲೇ 'ರಂಗಭೂಮಿ' ಎನ್ನಿಸಿಕೊಳ್ಳುವುದು. ಪ್ರಸ್ತುತವಾಗಿ 'ರಂಗಭೂಮಿ' ಎಂದು ಕರೆಯುವುದು ನಾಟಕ ರಂಗಭೂಮಿಯೇ ಆದ್ದರಿಂದ ರಂಗಭೂಮಿ ನಾಟಕಾವಲಂಬಿ.

ರಂಗಭೂಮಿಯಲ್ಲಿ ಅಭಿಜಾತ ಮತ್ತು ಜಾನಪದ ಎಂಬೆರಡು ಬಗೆ. ಅಭಿಜಾತದಲ್ಲಿ ಪೌರಾತ್ಯ ಮತ್ತು ಪಾಶ್ಚಾತ್ಯ ಎಂಬುದು. ಇನ್ನು ಇದರಲ್ಲಿಯ ಪ್ರಕಾರಗಳು ಎಷ್ಟೋ ಇದ್ದರೂ ಇಂದು ಇವೆಲ್ಲ ಹತ್ತಿರ ಬಂದಿವೆ. ಪೌರಾತ್ಯದಲ್ಲಿ, ಪಾಶ್ಚಾತ್ಯ, ಅಭಿಜಾತ, ಜಾನಪದ ಹೀಗೆ ಯಾವುಯಾವುದು ಉದ್ದೇಶ ಪೂರಕವೆನಿಸುತ್ತದೋ ಅವೆಲ್ಲ ಒಂದೆಡೆ ಬಂದು ಸೇರಿಕೊಳ್ಳುತ್ತಿವೆ. ಆದ್ದರಿಂದ ನಮ್ಮ ಆಧುನಿಕ ರಂಗಭೂಮಿಯ ಬಗ್ಗೆ ಶಾಸ್ತ್ರ ವ್ಯಾಖ್ಯೆ ಮಾಡಲು ಮತ್ತೊಬ್ಬ 'ಭರತ ಮುನಿ' ಹುಟ್ಟಿ ಬರಬೇಕು. ಅಲ್ಲಿಯ ತನಕವೂ ವಿವಿಧ ಪ್ರಯೋಗ ಆಕರವನ್ನು ನಿಮರ್ಿಸುತ್ತಲೇ ಹೋಗಬೇಕಾಗುತ್ತದೆ. ಆ ಮೇಲೂ ಶಾಸ್ತ್ರಕ್ಕಿಂತ ಪ್ರಯೋಗವೇ ಸ್ವಾಭಾವಿಕ.

ಮಕ್ಕಳ ನಾಟಕ ಹೇಗೆ ಹೊಸ ಕಲ್ಪನೆಯೋ ಹಾಗೇ ಮಕ್ಕಳ ರಂಗಭೂಮಿ ಎನ್ನುವುದೂ ಕೂಡ. ಪಾಶ್ಚಾತ್ಯರಲ್ಲಿ, ರಷ್ಯಾದಲ್ಲಿ ಇದು ಒಂದು ಪರಿಕಲ್ಪನೆಯಾಗಿ ಪ್ರಯೋಗವಾಗುತ್ತಿದೆ ಎಂದು ಕೇಳಿದ್ದೇನೆ. ಅದರಂತೆ ಆಧುನಿಕ ಶಿಕ್ಷಣ ಮತ್ತಿತರ ವಿದ್ಯಮಾನದ ಬೆನ್ನು ಹಿಡಿದು ನಮ್ಮಲ್ಲೂ ಬಂದುದು ಈ ಮಕ್ಕಳ ರಂಗಭೂಮಿ ಎಂಬ ಹೊಸ ಕಲ್ಪನೆ.
ಮಕ್ಕಳ ರಂಗಭೂಮಿಗೂ ವಯಸ್ಕರ ರಂಗಭೂಮಿಗೂ ಇರುವ ವ್ಯತ್ಯಾಸ ಮನಃಶಾಸ್ತ್ರಕ್ಕೆ ಸಂಬಂಧಿಸಿ ನಿರೂಪಣೆಗೊಳ್ಳಬೇಕಾದುದು. ದೊಡ್ಡವರ 'ರಂಗಭೂಮಿ'ಯ ಎಲ್ಲ ಪರಿಕರಗಳೂ ಮಕ್ಕಳ ರಂಗಭೂಮಿಗೂ ಇರುತ್ತವೆ. ಆದರೆ ಅದು 'ವಾಸ್ತವಿಕ' ರಂಗಭೂಮಿಗಿಂತ ತೀರ ಭಿನ್ನ. ಅದರಲ್ಲಿ ಹಾಡು, ಕುಣಿತ, ಭ್ರಾಮಕ ಕಲೆ (ಫೆಂಟಸಿ) ಕತೆ, ಕನಸು, ಮನೋರಂಜನೆ, ವೇಷಭೂಷಣ, ಬಣ್ಣ ಬೆಡಗು, ಮುಖವಾಡ, ಬೆಳಕಿನ ವ್ಯವಸ್ಥೆ ಎಲ್ಲವೂ ಇರಬಹುದು. ಇವು ದೊಡ್ಡವರ ರಂಗಭೂಮಿಯಲ್ಲೂ ಇರುತ್ತದೆ. ಆದರೆ ಮಕ್ಕಳ ರಂಗಭೂಮಿಯ ತಿರುಳು ಇರುವುದು ಇವುಗಳನ್ನು ದುಡಿಸಿಕೊಳ್ಳುವ ರೀತಿಯಲ್ಲಿ ಅಥವಾ ಇವು ಪ್ರತ್ಯಕ್ಷವಾಗುವ ಸ್ವರೂಪದಲ್ಲಿ ಇವು ಜನಪದ ರಂಗಭೂಮಿಯ ಉತ್ಸವ ಸ್ವರೂಪಿಯಾದುದು. ಲವಲವಿಕೆ ಚಟುವಟಿಕೆ ಮತ್ತು ರಂಜನೆಯಿಂದ ವೈಶಿಷ್ಟ್ಯ ಪೂರ್ಣವಾದುದು.

ಮಕ್ಕಳ 'ರಂಗಭೂಮಿ'ಯ ಪರಿಕಲ್ಪನೆಯಲ್ಲಿ ಬರುವ ಮಕ್ಕಳು ಯಾರು? ಇವು ಬಹಳ ಮುಖ್ಯವಾದ ಪ್ರಶ್ನೆ. ನಮಗೆಲ್ಲ ಗೊತ್ತಿರುವಂತೆ ಮಕ್ಕಳ ಬೆಳವಣಿಗೆ ಸಂಕೀರ್ಣವಾದುದು. ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ವೇಗಪೂರ್ಣ. ಈ ಬೆಳವಣಿಗೆಯನ್ನು ಶಾರೀರಿಕ ಮತ್ತು ಮಾನಸಿಕ ಎರಡನ್ನೂ ಒಟ್ಟಿಗೇ ನೋಡಬೇಕು. ಪರಿಸರ ಕೂಡ ಪ್ರಭಾವಶಾಲಿಯಾಗಿದ್ದರೂ ಮುಖ್ಯವಾಗಿ ಗಮನಿಸಬೇಕಾದುದು ಈ ಎರಡನ್ನೇ. ಇದನ್ನು ಗ್ರಹಿಸುವಾಗ ಒಂದು ಸ್ಥೂಲ ಸ್ವರೂಪ ಮಾತ್ರ ಸಾಧ್ಯ. ಇದು ಮನಃಶಾಸ್ತ್ರದಲ್ಲೂ ಸರಿ. ಆದ್ದರಿಂದ ಮನೋವಿಜ್ಞಾನದ ಅನುಸರಿಯಾಗಿ ಲೆಕ್ಕಹಾಕಬೇಕಾಗುತ್ತದೆ.
ಮೊದಲನೆಯದಾಗಿ ಮಕ್ಕಳೆಂದರೆ ದೊಡ್ಡವರಲ್ಲ. ನಮ್ಮ ಯಕ್ಷಗಾನದಲ್ಲಿ ಬರುವ ಪ್ರಹ್ಲಾದ, ಲೋಹಿತಾಶ್ವ ಮುಂತಾದವೆಲ್ಲ ಸಣ್ಣವರ ರೂಪದಲ್ಲಿರುವ ದೊಡ್ಡವರೇ ಹೊರತು ಮಕ್ಕಳಲ್ಲ. ಮಕ್ಕಳ ಮಾನಸಿಕ ಸ್ಥಿತಿಯ ರೀತಿಯೇ ಬೇರೆ. ಇಲ್ಲಿ ಬರುವ ಕತೆ, ಹಾಡು, ಕುಣಿತ, ಕನಸು, ಭ್ರಮೆ, ರಂಜನೆ ಇವೆಲ್ಲ ಮಕ್ಕಳ ಮನೋಭೂಮಿಕೆಯ ರಂಜನೀಯ ಸ್ಥಿತಿಯಿಂದ ಪೋಷಣೆಗೊಂಡಿರಬೇಕು. ಹಾಗೆಯೇ ಅದರ ಪ್ರತಿಬಿಂಬ ಗತಿಬಿಂಬ ಕೂಡ ಆಗಿರಬೇಕು. 'ಬುಶ್ಕೋಟು, ಮದುವೆ ಪತ್ತಲ, ಸದಾರಮೆ, ಸತ್ಯಾವಾನ ಸಾವಿತ್ರಿ, ಸಂಗ್ಯಾಬಾಳ್ಯ, ಶೋಕ ಚಕ್ರ ಇಂಥವೆಲ್ಲ ಇಲ್ಲಿ ಸಲ್ಲದು. ಇದು ಪ್ರದರ್ಶನ ದೃಷ್ಟಿಯಿಂದಲೂ ಮಕ್ಕಳ ರಂಗಭೂಮಿಗೆ ಸಲ್ಲದು. ನೋಡುವುದರಿಂದ ಕೆಲ ಅಂಶ ಮಕ್ಕಳಿಗೂ ರಂಜನೆಗೆ ಸಲ್ಲಬಹುದು. ಮಕ್ಕಳು ಮೀಸೆ ಬರೆದೋ, ಸೀರೆ ಉಟ್ಟೋ ಅಭಿನಯಿಸುವದರಿಂದ ದೊಡ್ಡವರಿಗೆ ಒಂದು ನಗೆಯಾಟ ದೊರಕಬಹುದು. ಆದರೆ ಇದು ಅರ್ಥಪೂರ್ಣವಲ್ಲ. ಯಾಕೆಂದರೆ ಇವು ಮಕ್ಕಳ ಮಾನಸಿಕ ಬೆಳವಣಿಗೆ ಹಂತದಲ್ಲಿ ಪ್ರತಿಕ್ರಿಯಿಸಲಾರವು.
ಮಕ್ಕಳು ಎಂದು ನಾವು ನಿರ್ಣಯಿಸುವಲ್ಲೂ ಯಾವ ವಯಸ್ಸಿನ ಮಕ್ಕಳು ಎಂಬುದು ಮುಖ್ಯವಾಗಿರುತ್ತದೆ. ಯಾಕೆಂದರೆ 'ಮಕ್ಕಳ' ಬೆಳವಣಿಗೆಯಲ್ಲಿ ಅನೇಕ ಹಂತಗಳಿವೆ. ಆಯಾ ಹಂತದ ಬೇಡಿಕೆ ಮತ್ತು ಅರ್ಹತೆ ಬೇರೆ ಬೇರೆಯೇ ಆಗಿರುತ್ತದೆ. ಇದನ್ನು ಗಮನಿಸಿ ಮನೋವಿಜ್ಞಾನದ ನೆರವಿನಿಂದ ಸ್ಥೂಲವಾಗಿ ಹೀಗೆ ವಿಂಗಡಿಸಿಕೊಳ್ಳಬಹುದು.

1) 6 ರಿಂದ 9 ವರ್ಷ
2) 10 ರಿಂದ 13 ವರ್ಷ
3) 14 ರಿಂದ 17 ವರ್ಷ
ಮೊದಲಹಂತದಲ್ಲಿ ಮುಗ್ಧತೆ, ಕ್ರಿಯಾಶೀಲತೆ, ಹಾಡು, ಕುಣಿತ, ಗುಂಪುಕ್ರಿಯೆ, ರಂಜನೆ, ಭ್ರಾಮಕತೆ, ಬಣ್ಣಬೆಡಗು ಸೂಕ್ಷ್ಮವಲ್ಲದ ನಟನೆ ಮುಖ್ಯ. ಕಲ್ಲು, ಮಣ್ಣು, ನೀರು, ಮರ, ಮಳೆ, ಸೂರ್ಯ, ಚಂದ್ರ, ಬೆಕ್ಕು, ಹುಲಿ, ಹಾವು ಇತ್ಯಾದಿಗಳು ಜೀವ ತಳೆದು ಮಾತಾಡಬಲ್ಲವು. ಅವು ಮನುಷ್ಯರೂಪಿ ಪದಾರ್ಥಗಳೂ ಪದಾರ್ಥರೂಪಿ ಮನುಷ್ಯರೋ ಆಗಬಲ್ಲವು. ಒಂದನ್ನೊಂದು ಸ್ಪಂದಿಸಬಲ್ಲವು. ಇಲ್ಲಿ ಲಘು ಸಂಗೀತ ಹಾಡು ಅಪೇಕ್ಷಣೀಯ.
ಎರಡನೆಯ ಹಂತದಲ್ಲಿ ಇವೆಲ್ಲವೂ ಇರುತ್ತದೆ. ಆದರೂ ಇಲ್ಲಿ ವಾಸ್ತವಿಕತೆಯ ಗ್ರಹಿಕೆ ಬೆಳೆದಿರುತ್ತದೆ. ಹೀಗೆ ಮಾಡುವುದಕ್ಕಿಂತ ಹೀಗೆ ಮಾಡಿದರೆ ಚೆನ್ನಲ್ಲವೇ ಎಂಬ ಕುತೂಹಲ. ಮುಖವಾಡಕ್ಕಿಂತ ನೇರ ಪ್ರದರ್ಶನ ಇಚ್ಛೆ, ಪ್ರದರ್ಶನದಲ್ಲಿ ಹೆಚ್ಚು ಶಿಸ್ತು ಇವೆಲ್ಲ ಇಲ್ಲಿ ಮುಖ್ಯ. ನಟನೆ ಕೂಡ ಕಲಾತ್ಮಕತೆ, ಸೂಕ್ಷ್ಮತೆಯ ಕಡೆ ಒಲಿಯುತ್ತದೆ. ಭ್ರಾಮಕತೆಯಿದ್ದು ತಾಕರ್ಿಕ ಮನೋಭಾವ ಬೆಳೆದಿರುತ್ತದೆ. ಕತೆಯಲ್ಲಿ (ವಸ್ತುವಿನಲ್ಲಿ) ಒಂದು ಸುಸಂಬದ್ಧತೆ ಇಲ್ಲಿಯ ನಿರೀಕ್ಷೆ.
ಮೂರನೇ ಹಂತದಲ್ಲಿ ಇನ್ನೂ ಪ್ರೌಢಾವಸ್ಥೆ. ಹಿಂದಿನ ಎಲ್ಲ ರಂಜನೀಯ ಅಂಶ ಇಲ್ಲಿಯೂ ಇರುತ್ತದೆ. ಆದರೆ ಬಣ್ಣ ಬೆಡಗಿನಕ್ಕಿಂತ ಚಿಂತನೆ, ಗಾಂಭೀರ್ಯದ ಕಡೆ ಒಲವು ಜಾಸ್ತಿ. ವಾಸ್ತವದ ಪ್ರಜ್ಞೆಯೊಂದಿಗೆ ಆದರ್ಶವಾದಿ ಮತ್ತು ಸಾಹಸದ ಕನಸು ಗರಿಗೆದರುತ್ತದೆ. ಕಲಾತ್ಮಕತೆಯಲ್ಲಿ ಹೆಚ್ಚು ಸ್ವಾತಂತ್ರ್ಯ, ವೈಯುಕ್ತಿಕ ಮೆಚ್ಚಿಕೆಯೆಲ್ಲ ಇಲ್ಲಿ ಜಾಸ್ತಿ. ರಸಭಾವದ ದೃಷ್ಟಿಯಿಂದ ವೀರ, ರೌದ್ರ, ಶಾಂತ, ಕರುಣೆ ಇಂಥವುಗಳ ಬೆಳವಣಿಗೆ.

ಈ ಹಂತದ ಹುಡುಗಿಯರ ಮನೋಭಾವದಲ್ಲಿ ಇನ್ನೂ ಹೆಚ್ಚಿನ ರಸಾತ್ಮಕತೆ ಕಾಣಲು ಸಾಧ್ಯ. ಶೃಂಗಾರ ರಸದ ಪರಿಭಾವನೆಯ ಪಟುತ್ವ ಕಾಣಿಸಿಕೊಳ್ಳುತ್ತದೆ. ಶೀಲಾಶ್ಲೀಲಗಳ ದೃಷ್ಟಿಯಿಂದ ಸಾಮಾಜಿಕ ಅಪೇಕ್ಷೆಯ ಅರಿವು ಹೆಚ್ಚಿರುತ್ತದೆ. ಹಾಗೆಯೇ ವಾಸ್ತವತೆಯನ್ನು ಮೀರುವ ಅಲ್ಲಿ ನಿರುಂಬಳವಾಗುವ ಆಕಾಂಕ್ಷೆ ಹೆಚ್ಚಿರುತ್ತದೆ. ಇಲ್ಲಿ ಹೆಚ್ಚು ಕಲಾತ್ಮಕತೆಯ ಅಪೇಕ್ಷೇ ಕೂಡ ಇರುತ್ತದೆ. ಭಾವಸ್ಪಂದನ ಜಾಸ್ತಿ ಹಾಗೂ ಕಲ್ಪನಾವಿಹಾರ.
ಹಿಂದೆ 'ಮಕ್ಕಳು' ದೊಡ್ಡವರಲ್ಲ ಎಂದೇ ಹೇಳಿದೆ. ಹಾಗಿದ್ದಾಗ
ಲೂ ಅವು ಬಿಡಿಬಿಡಿಯಾದ ಪ್ರತ್ಯೇಕ ಘಟಕಗಳಲ್ಲ. ಅದು ಕೈಯಲ್ಲಿ ಕೈಸೇರಿಕೊಂಡ ಮಾನವ ಸರಪಳಿ. ಒಂದು ಹಂತದ ಬುತ್ತಿ ಮತ್ತೊಂದು ಹಂತದಲ್ಲಿಯೂ ಸಲ್ಲುತ್ತದೆ. ಅದರಿಂದ ಪುಷ್ಟಿಗೊಂಡು ಮುಂದಿನ ಹಂತ ಸಿದ್ಧವಾಗುತ್ತದೆ. 'ಮಗುವೆ ಮಾನವನ ತಂದೆ' ಎಂಬ ವಡ್ಸ್ವತರ್್ ಕವಿಯ ಮಾತು ಕೇವಲ ಕವಿತೆಯ ಮಾತಲ್ಲ. ಮನೋವೈಜ್ಞಾನಿಕವಾಗಿ ಮತ್ತು ಸಾಮಾಜಿಕ ಮನೋಜ್ಞಾನದ ದೃಷ್ಟಿಯಿಂದಲೂ ಅರ್ಥಪೂರ್ಣವಾಗಿದೆ. ಆದ್ದರಿಂದ ಇಲ್ಲಿಯ ವಸ್ತುವಿನ ಆಯ್ಕೆ ಕಲ್ಲಲ್ಲ. ಹರಿವ ಹಳ್ಳದ ನೀರೂ ಅಲ್ಲ. ಅದು ಉಕ್ಕಿನ ಹಾಗೆ ಸೆಟೆದು ಮೇಣದ ಹಾಗೆ ಮಿದುವಾಗಬಲ್ಲದು. ಮನಸ್ಸಿನಲ್ಲಿ ಮೂಡಿಸಿಕೊಳ್ಳುವ ಶಕ್ತಿ ಒಳಗಿನದಾದರೆ, ಮೂಡಿಸುವ ಪ್ರಭಾವ ಹೊರಗಿನದು. ಅಂದರೆ ಆನುವಂಶಿಕ ಒಲವು ಚೆಲುವು ಮತ್ತು ನಿಲುವು ವೈಶಿಷ್ಟ್ಯ ಪೂರ್ಣವಲ್ಲದ್ದು, ದುರ್ಬಲವಾದುದು, ಅಸ್ಪತಂತ್ರವಾದುದು ಎಂದಲ್ಲ. ಆದರೆ ಆ ಪರಿವರ್ತನೀಯವಾದ ಸ್ಥಾವರ ಅಲ್ಲವೆಂದು ಮಾತ್ರ. ಆದ್ದರಿಂದ ಶೈಕ್ಷಣಿಕ ಮನೋವಿಜ್ಞಾನದ ನೆರವು ಇಲ್ಲಿ ಸಾಪೇಕ್ಷಣಿಯವಾದುದು.

ಆದರ್ಶವನ್ನು ಬೆಳೆಸುವುದಕ್ಕಾಗಿ ಮಕ್ಕಳ ರಂಗಭೂಮಿ ಇರಬೇಕೆಂದು ನಾನು ಹೇಳುತ್ತಿಲ್ಲ. 'ವಿಜ್ಞಾನಕ್ಕಾಗಿ ವಿಜ್ಞಾನ ಅಲ್ಲ' ಕಲೆಗಾಗಿ ಕಲೆ ಅಲ್ಲ. ಅದು ಇಡಿಯಾಗಿ ಮಾನವತೆಯ ಆವಿಭರ್ಾವಕ್ಕಾಗಿ, ಹೊರೆಯುವುದಕ್ಕಾಗಿ ಇರಬೇಕು. ನಾವು ಇಂದು 'ನಾನು' ಕ್ಕಿಂತ 'ನಾವು' ಎಂಬ ಪ್ರಜ್ಞೆಯ ಕಡೆಗೆ ಸಾಗುತ್ತಿದ್ದೇವೆ. ಈ 'ನಾವು' ಅಲ್ಲಿ 'ನಾನು' ಕೂಡ ಅಷ್ಟೇ ಮುಖ್ಯ. ಇದರ ಸಮತೋಲನ ಸಂಕೀರ್ಣವಾದುದು ಎಂದು ಒಪ್ಪಿದಾಗಲೂ ನಿರಾಕರಣೆಯದಲ್ಲ. ಗಾಂಧಿಯಂತೆ ಅನೇಕ ಜನ ಶ್ರವಣಕುಮಾರರ ಚರಿತ್ರೆಯನ್ನು ಓದಿದ್ದಾರೆ. ಹರಿಶ್ಚಂದ್ರ ನಾಟಕ ನೋಡಿದ್ದಾರೆ. ಆದರೆ ಯಾರೂ 'ಗಾಂಧಿ' ಆಗಲಿಲ್ಲ. ಆದರೆ ಗಾಂಧಿ ಮಾತ್ರ 'ಗಾಂಧಿ' ಆದರು. ಇದು ಅವರ ವ್ಯಕ್ತಿ ವೈಶಿಷ್ಟ್ಯ. ಆದರೆ ಗಾಂಧಿ 'ಗಾಂಧಿ' ಆಗುವಲ್ಲಿ ಭಾಗವಹಿಸಿದ್ದು ಹದಗೊಳಿಸಿದ್ದು ಸಮಾಜ. ಆದ್ದರಿಂದ ಮಕ್ಕಳ ನಾಟಕ ಮತ್ತು ರಂಗಭೂಮಿ ಕೂಡ ಕಾಲದ ಅವಶ್ಯಕತೆಯನ್ನು ನಿರಾಕರಿಸಬಾರದು. ಹಾಗೆ ನಿರಾಕರಿಸಿದರೆ ಅದಕ್ಕೊಂದು ವೈಶಿಷ್ಟ್ಯವೇ ಇರುವುದಿಲ್ಲ. ಆದ್ದರಿಂದ ಪ್ರಜಾಪ್ರಭುತ್ವದ ವಿಕಾಸಕ್ರಿಯೆಯಲ್ಲಿ ಇವೆಲ್ಲ ಸೇರಬೇಕಾಗಿದೆ. ಸಮಾಜವಾದಿ ಮನೋಭಾವದ ವಿಕಸನ ಶೀಲತೆ ಇಂದಿನ ಸಾಮಾಜಿಕ ಅವಶ್ಯಕತೆ. ಸೂತ್ರ ರೂಪವಾಗಿ ಹೇಳುವುದಾದರೆ ನಮ್ಮ ಮುಂದೆ ಎರಡು ಸಾಹಸ ಆದರ್ಶಗಳಿವೆ. ಒಂದು : ಗಾಂಧಿ, ನೆಹರು, ಮೌಲಾನಾ ಅಬುಲ್ ಕಲಾಮ್ ಆಝಾದ್, ಅರುಣ ಅಸಫ್ ಆಲಿ, ಸುಭಾಶ್ಚಂದ್ರ ಭೋಸ್, ಭಗತ್ಸಿಂಗ್, ಮದರ್ ತೆರೇಸಾ, ಎ.ಕೆ. ಗೋಪಾಲನ್, ವಿವೇಕಾನಂದ, ನಾರಾಯಣ ಗುರು ಹೀಗೆ ಹೀಗೆ. ಎರಡು : ಸುಖರಾಮ್, ಜಯಲಲಿತಾ, ಚಂದ್ರಸ್ವಾಮಿ, ದಾವೂದ್, ಹರ್ಷದ್ ಮೆಹೆತಾ, ವೀರಪ್ಪನ್ ಹೀಗೆ ಹೀಗೆ. ನಮ್ಮ ಮಕ್ಕಳ ಮುಂದೆ ಇಡಬೇಕಾದ ಮಾದರಿ ಯಾವುದೆಂಬುದರ ಬಗ್ಗೆ ಜಗಳ ಇರಲಾರದು ಅಂದುಕೊಂಡಿದ್ದೇನೆ. ರಂಗಭೂಮಿ ಕೂಡ ಶೈಕ್ಷಣಿಕ ಎನ್ನುವ ನಿಲುವು ಇಲ್ಲಿಯದು.
ಇಲ್ಲಿಯವರೆಗೆ ಪ್ರಸ್ತಾಪಿತವಾದ ಮಕ್ಕಳ ರಂಗಭೂಮಿಯ ವಸ್ತುವನ್ನು ನಾವು ಗಮನಿಸಿದಾಗ ಮಧ್ಯಮ ವರ್ಗದ ಒಲವು ಚೆಲುವುಗಳ ಬಗ್ಗೆ ಹೆಚ್ಚು ಗಮನಿಸಿದ್ದು ಕಂಡು ಬರುತ್ತವೆ. ಆದರೆ ಕೆಳಸ್ಥರದ ಮಕ್ಕಳ ಮನೋಭೂಮಿಕೆಯ ಚಿತ್ರಣ ಹಾಗೂ ಭಾಗವಹಿಸುವಿಕೆ ನಮ್ಮ ನಿಲುಕಿನ ಹೊರಗೇ ಇದೆ. ಕೆಳಜಾತಿಯ, ಕೆಳವರ್ಗದ, ಬಾಲಕಾಮರ್ಿಕರ, ಅಸ್ಪೃಶ್ಯ ಮತ್ತು ಕೊಳಚೆ ಮಕ್ಕಳ ರಂಗಭೂಮಿಗೆ ವಿಶೇಷವಾದ ಆಹ್ವಾನವಾಗಿದೆ. ಅದರ ಅಭ್ಯಾಸ ಮತ್ತು ಪ್ರಯೋಗ ಅದ್ಭುತ ಲೋಕವೇ ಹೊರತಂದೀತು. ಸಾಮಾಜಿಕವಾಗಿಯಂತೂ ಅದರ ಮಹತ್ವ ಇಷ್ಟು ಎಂದು ಹೇಳಲಸಾಧ್ಯ.
'ಮಕ್ಕಳ ರಂಗಭೂಮಿ'ಯ ಕುರಿತಾಗಿ ಮಾತನಾಡುವಾಗ ನಾವು ಇನ್ನೊಂದು ಬಹಳ ಮಹತ್ವದ ಪ್ರಶ್ನೆಯ ಕಡೆ ಗಮನಿಸಬೇಕು. ಪ್ರಶ್ನೆ ಇಷ್ಟೇ, ಮಕ್ಕಳ ರಂಗಭೂಮಿ ಮಕ್ಕಳಿಂದಲೆ ನಿರ್ವಹಿಸಲ್ಪಡಬೇಕೋ ಅಥವಾ ಮಕ್ಕಳಿಗಾಗಿ ದೊಡ್ಡವರಿಂದ ನಿರ್ವಹಿಸಲ್ಪಡುತ್ತದೆಯೋ? ಪಾತ್ರ ನಿರ್ವಹಣೆಯಲ್ಲಿ ದೊಡ್ಡವರ ಪಾತ್ರವನ್ನು ಮಕ್ಕಳು ನಿರ್ವಹಿಸಬಹುದೇ?

ಇದಕ್ಕೆ ಎರಡೂ ರೀತಿಯಲ್ಲಿ ಉತ್ತರ ಸಾಧ್ಯ. ಮಕ್ಕಳೇ ಮಕ್ಕಳ ರಂಗಭೂಮಿಯ ನಿವರ್ಾಹಕರು. ಅಂದರೆ ಕೆಲವು ತಾಂತ್ರಿಕ ವ್ಯವಸ್ಥೆಯನ್ನು ಹೊರತುಪಡಿಸಿ. ಅದರಂತೆ ದೊಡ್ಡವರು ಮಕ್ಕಳಿಗಾಗಿ ರಂಗಭೂಮಿಯನ್ನು ನಿರ್ವಹಿಸಬಹುದು. ಆದರೆ ಮಕ್ಕಳೇ ಪಾತ್ರ ನಿರ್ವಹಣೆ, ಹಾಡು ಇತ್ಯಾದಿ ಕಲೆಗೆ ಸಂಬಂಧಿಸಿದ ವಿಷಯದಲ್ಲಿ ಭಾಗವಹಿಸುವುದು ಹೆಚ್ಚು ಅಪೇಕ್ಷಣೀಯ ಮತ್ತು ಪರಿಪೂರ್ಣ ಕೂಡ. 'ಕಲೆ' ಎಂಬುದು ಕಲಿತದ್ದು ಕೂಡ ಹೌದು. ಅದೊಂದು ಯಶಸ್ವೀ ಅನುಕರಣೆ. ಹಾಗಿರುವಾಗ ಮಕ್ಕಳೇ ದೊಡ್ಡವರ ಪಾತ್ರವನ್ನು ಅಜ್ಜ, ರೈತ. ಆರಕ್ಷಕ, ರಾಜ ಇತ್ಯಾದಿ. ವಹಿಸಬಹುದು ಅದನ್ನು ಯಶಸ್ವಿಗೊಳಿಸಬಹುದು. ಮನೋವಿಜ್ಞಾನದ ದೃಷ್ಟಿಯಿಂದ ತೀರ ಅಭಾಸಪೂರ್ಣವಾಗಿ ಮಾತ್ರ ಇರಬಾರದು. ಅಷ್ಟೇ, ದೊಡ್ಡವರ ಪಾತ್ರವನ್ನು ದೊಡ್ಡವರೇ ವಹಿಸಬಹುದು.

ಇನ್ನೊಂದು ವಿಷಯವನ್ನು ಇಲ್ಲಿಯ ನಿದರ್ೆಶಕರು ಗಮನಿಸಬೇಕಾಗಿದೆ. ನಾವು ಮಕ್ಕಳಿಗೆ ಕಥೆಕೊಟ್ಟು ಅಥವಾ ಕೊಡದೆ ಅವರನ್ನು ಅಭಿನಯಕ್ಕೆ ಹಚ್ಚಿ ನೋಡಿದ್ದೇವೆಯೇ? ರಂಗಕ್ರಿಯೆ ಕುರಿತು ಸ್ವಾತಂತ್ರ್ಯ ಕೊಟ್ಟು ಪರಿಣಾಮ ನೋಡಿದ್ದೇಯೇ? ನಮ್ಮ ನಿದರ್ೆಶನದ ಕುರಿತು ಅವರ (ವಿವಿಧ ಹಂತಕ್ಕೆ ತಕ್ಕಾಗಿ) ಅಭಿಪ್ರಾಯ ಸಂಗ್ರಹಿಸಿದ್ದೇವೆಯೇ?
ಇದು ಮುಖ್ಯ ಆದರೂ ರಂಗಭೂಮಿ ಕಲೆಗೆ ಸಂಬಂಧಿಸಿರುವಂತೆ ತರಬೇತಿ, ನಿದರ್ೆಶನ ಅವಶ್ಯ.
ನಮ್ಮ ಜಿಲ್ಲೆಯ ಕುರಿತಾಗಿ ಹೇಳುವುದಾದರೆ 'ಮಕ್ಕಳ ರಂಗಭೂಮಿ'ಯ ಕೆಲಸ ಬಹಳ ಆಗಿದೆ. ಆದರೆ ಅದರ ದಾಖಲೆ ಮತ್ತು ವಿಶ್ಲೇಷಣೆ ಆದದ್ದು ಮಾತ್ರ ಏನೂ ಸಾಲದು. ನಮ್ಮಲ್ಲಿ ರಂಗಸಂಗದ ಗೆಳೆಯರನ್ನೊಳಗೊಂಡು ಕಿರಣ ಭಟ್ಟ, ಜಿ.ಎಂ. ಹೆಗಡೆ, ವಿ. ಎಂ. ಹೆಗಡೆ, ಚಂದ್ರು ಉಡುಪಿ, ಶ್ರೀಪಾದ ಭಟ್ಟ, ಎಸ್. ಪಿ. ಹೆಗಡೆ, ಕೆ. ಆರ್. ಪ್ರಕಾಶ ಇನ್ನೂ ಅನೇಕರು ಮಕ್ಕಳ ನಾಟಕ ಆಡಿಸಿದ್ದಾರೆ. ಒಟ್ಟಾರೆಯಾದ ಮಕ್ಕಳ ರಂಗಭೂಮಿಗೆ ಅವರ ಕೊಡುಗೆ ಗಣನೀಯ. ಅದರಲ್ಲೂ ಗ್ರಾಮೀಣ ಪ್ರದೇಶದ ವಿಶಿಷ್ಟವಾದ ಅನುಭವ ಅವರದ್ದು. ಸಾಮಾಜಿಕರ ಮಧ್ಯೆ, ಶಿಕ್ಷಕರ ಮಧ್ಯೆ ಮತ್ತು ಮುಖ್ಯವಾಗಿ ಮಕ್ಕಳ ಮಧ್ಯೆ ಅವರ ಅನುಭವ ಪ್ರತ್ಯಕ್ಷ ಮತ್ತು ಪ್ರಾಯೋಗಿಕವಾದದ್ದು. ಅದನ್ನು ಚಾಚೂ ತಪ್ಪದೆ ಟಿಪ್ಪಣಿ ಮಾಡಬೇಕು. ಅದರ ವಿಶ್ಲೇಷಣೆಯೂ ರಂಗಾಸಕ್ತರ ಮಧ್ಯೆ ನಡೆಯಲಿ. ಇದರಿಂದ ಅನೇಕ ಹೊಸ ಅಂಶಗಳು ಬೆಳಕಿಗೆ ಬರುತ್ತವೆ. ಹಾಗೆಯೇ ಮಕ್ಕಳ ರಂಗಭೂಮಿಯ ಬೆಳವಣಿಗೆಯಲ್ಲಿ ಬಹುದೊಡ್ಡ ಕೊಡುಗೆಯಾಗುತ್ತದೆ.

ಕೊನೆಯದಾಗಿ ಖಲೀಲ್ ಗಿಬ್ರನ್ನ ಒಂದು ಉಕ್ತಿಯನ್ನು ಹೇಳಬಯಸುತ್ತೇನೆ.
'ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ
ಜೀವನ ಸ್ವ ಪ್ರೇಮದ ಪುತ್ರ ಪುತ್ರಿಯರವರು
ಅವರು ನಿಮ್ಮ ಜೊತೆಗೆ ಇರುವುದಾದರೂ
ಅವರು ನಿಮಗೆ ಸೇರಿದವರಲ್ಲ
ನಿಮ್ಮ ಪ್ರೀತಿಯನ್ನು ಅವರಿಗೆ ನೀಡಬಹುದು
ಆದರೆ ನಿಮ್ಮ ಆಲೋಚನೆಗಳನ್ನಲ್ಲ
ಅವರಂತಿರಲು ನೀವು ಪ್ರಯತ್ನಿಸಬಹುದು
ಆದರೆ ಅವರನ್ನು ನಿಮ್ಮಂತೆ ಮಾಡದಿರಿ
ಜೀವನ ಹಿಮ್ಮುಖವಾಗಿ ಹರಿಯದಿರಲಿ'

No comments:

Post a Comment