Tuesday, 25 June 2013

ಪಂಚವಾದ್ಯ ಕಲೆಗೆ ಆವರಿಸಿದ ಜಾತಿ ಮೋಡ- -ವಿಠ್ಠಲ ಭಂಡಾರಿ,ಕೆರೆಕೋಣ vittal bhandari

                                               ಪಂಚವಾದ್ಯ ಕಲೆಗೆ ಆವರಿಸಿದ ಜಾತಿ ಮೋಡ

       ಪಂಚವಾದ್ಯವನ್ನು, ವಾಲಗವೆಂದೂ, ಮಂಗಲವಾದ್ಯವೆಂದೂ ಕರೆಯುತ್ತಾರೆ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತವಿದ್ದ ಒಂದು ಜನಪದ ವಾದ್ಯ ಪ್ರಕಾರ. ಮೋವರಿ (ಮೌರಿ) ಶೃತೆ, ದೋಳು, ತಾಸ್ಮೋರು, ತಾಳ ಇವುಗಳು ಪಂಚವಾದ್ಯದ ಘಟಕಗಳಾಗಿವೆ. ಮದುವೆ ಮತ್ತಿತರ ಶುಭ ಕಾರ್ಯದಲ್ಲಿ ಅನಿವಾರ್ಯವೆಂಬಷ್ಟರ ಮಟ್ಟಿಗೆ ಜಿಲ್ಲೆಯಲ್ಲಿ ಇದು ಬಳಕೆಯಲ್ಲಿದೆ.
          ಇದರ ಇತಿಹಾಸ ತೀರಾ ಹಿಂದಿನದೆ. ಮೊದಲು ಇದು ದೇವಾಲಯದಲ್ಲಿ ಆರಾಧನೆಯ ಭಾಗವಾಗಿಯೇ ಬಂದಿದ್ದು. ದೇವಸ್ಥಾನದ ಪರಿಚಾರಿಕ ಕೆಲಸ ಮಾಡುತ್ತಿರುವವರೇ ಈ ಪಂಚವಾದ್ಯದ ಜನಕರೂ ಇರಬಹುದು. ಹಿಂದೆ ಹಲವು ಸಂದರ್ಭದಲ್ಲಿ ದೇವಸ್ಥಾನದಲ್ಲಿ ದೇವದಾಸಿಯಾಗಿರುವ ಕುಟುಂಬಗಳು ಈ ಪಂಚವಾದ್ಯದಲ್ಲಿ ನಿರತ ಆಗಿದ್ದರು.
'ದೋಳು' ಮತ್ತು 'ತಾಸ್ಮೋರು' ಚರ್ಮ ವಾದ್ಯ. ಮರದ ಕಲಶಕ್ಕೆ ಚರ್ಮದ ಹೊದಿಕೆ ಹಾಕಿ ಹಗ್ಗದಿಂದ ಬಿಗಿದಿರುತ್ತಾರೆ. ಆಕಳು, ಎಮ್ಮೆ, ಕುರಿಯ ಚರ್ಮವನ್ನು ಇದಕ್ಕೆ ಉಪಯೋಗಿಸುತ್ತಾರೆ. 'ಮೋವರಿ' ಮತ್ತು 'ಶೃತೆ'ಯು ಮರದಿಂದ ಕಡೆಯಲ್ಪಟ್ಟ ನಳಿಕೆ, ಮೇಲೆ ತಾಳೆಗರಿಯಿಂದ ಮಾಡಿದ 'ಜೀವಾಳ' ಉಪಯೋಗಿಸುತ್ತಾರೆ. ಪೂರ್ಣ ಪ್ರಮಾಣದಲ್ಲಿ ಜನಪದರು ನಿಮರ್ಿಸಿದ ವಾದ್ಯ ಪರಿಕರವೇ ಆಗಿದೆ.
          ಉತ್ತರಕನ್ನಡದಲ್ಲಿ ಮುಖ್ಯವಾಗಿ ಭಂಡಾರಿ(ಕನ್ನಡ ಮಾತೃಭಾಷೆ), ದೇಶಭಂಡಾರಿ (ಕೊಂಕಣಿ ಮಾತೃಭಾಷೆ) ಆಗೇರರು (ದಲಿತರು) ಈ ವಾಲಗವನ್ನು ನುಡಿಸುತ್ತಾರೆ. ಭಂಡಾರಿ ಸಮುದಾಯದಲ್ಲಿ ಸುಮಾರು 40-50 ತಂಡಗಳಿವೆ ; ದೇಶಭಂಡಾರಿ ಸಮುದಾಯದಲ್ಲಿ ಸುಮಾರು 10-15 ತಂಡಗಳಿವೆ; ಆಗೇರ ಸಮುದಾಯದಲ್ಲಿ 8-10 ತಂಡಗಳು ಪಂಚವಾದ್ಯದಲ್ಲಿ ನಿರತರಾಗಿವೆ. ವಾಲಗವನ್ನೇ ನಮ್ಮ ಉಪವೃತ್ತಿಯಾಗಿಸಿಕೊಂಡ 'ಭಂಡಾರಿ' ಸಮುದಾಯದಲ್ಲಿ ಇರುವವರೇ 5-7 ಸಾವಿರ ಜನರು. ಕಲಾವಿದರಿಲ್ಲದ ಕುಟುಂಬವೇ ಇಲ್ಲವೇನೋ ಅನ್ನುವಷ್ಟು ವ್ಯಾಪಕವಾಗಿ ಪಂಚವಾದ್ಯ ಕಲೆ ಇವರಿಗೆ ಮೈಗೊಂಡಿದೆ. ವಾದ್ಯ ಮಾಡುವುದು ಮಾತ್ರವಲ್ಲ, ವಾದ್ಯದ ಪರಿಕರ ತಯಾರಿಸುವುದು, ಮಣ್ಣಿನ ಮೂತರ್ಿ ತಯಾರಿಸುವುದು, ಯಕ್ಷಗಾನದ ಮುಮ್ಮೇಳ-ಹಿಮ್ಮೇಳದಲ್ಲಿ ಕಲಾವಿದರಾಗಿ ಸೇವೆ....... ಇತ್ಯಾದಿ ಕಲೆಗಳಲ್ಲಿ ಕೂಡ ಇವರು ಪರಿಣತರು. ಉತ್ತರಕನ್ನಡ ಜಿಲ್ಲೆಯಲ್ಲಿ ಸುಮಾರು 40-50 ತಂಡಗಳು (5-5 ಕಲಾವಿದರಂತೆ ಒಂದು ತಂಡ ; ತೀರಾ ಬೇಡಿಕೆ ಇದ್ದರೆ 4-4 ಜನರ ತಂಡ ಮಾಡುತ್ತಾರೆ. ಕೆಲಸ ಮಾಡುತ್ತವೆ. ವಾದ್ಯದ ಮೇಳವೊಂದಕ್ಕೆ (ವಾದ್ಯದ ತಂಡಕ್ಕೆ 'ಮೇಳ' ಎನ್ನುತ್ತಾರೆ) ಒಂದು ಸಾವಿರದಿಂದ ನಾಲ್ಕು ಸಾವಿರದವರೆಗು ಸಂಭಾವನೆ ಇದೆ. ಆದರೆ ಇಡೀ ವರ್ಷಕ್ಕೆ ಹೆಚ್ಚೆಂದರೆ 40-50 ದಿನ ಕೆಲಸ ಸಿಗಬಹುದು.
ಪಾಂಡುರಂಗ ಭಂಡಾರಿ, ಮಂಜ ಭಂಡಾರಿ, ಸಾಂಬ ಭಂಡಾರಿ, ಕನ್ನಯ್ಯ ಭಂಡಾರಿ, ಸೀತಾರಾಂ ಭಂಡಾರಿ, ಕೃಷ್ಣ ಭಂಡಾರಿ ಮುಂತಾದ ತೀರಾ ಮಹತ್ವದ ಕಲಾವಿದರು ಈ ಸಮುದಾಯದಲ್ಲಿ ಆಗಿ ಹೋಗಿದ್ದಾರೆ. ಸುಬ್ರಾಯ ಭಂಡಾರಿ, ರಾಮಕೃಷ್ಣ ಭಂಡಾರಿ,  ಭೈರವ ಭಂಡಾರಿ, ದತ್ತ ಭಂಡಾರಿ. ಇಡಗುಂಜಿ ಗಜಾನನ ಭಂಡಾರಿ, ಹೊಸಾಕುಳಿ ಶಿವ, ಹೊನ್ನಾವರ ಬಾಬು ಭಂಡಾರಿ. .  ಮುಂತಾದವರು ಪಂಚವಾದ್ಯದ ಕಸುಬುದಾರರೆಂದೇ ಹೆಸರು ಪಡೆದಿದ್ದಾರೆ. ದುರಂತವೆಂದರೆ ಈ ವಾದ್ಯಕ್ಕೊಂದು 'ಜಾತಿ'ಯ ಮುಸುಕಿರುವುದರಿಂದ ಸ್ವತಃ ಕಲಾವಿದರೂ ತಮ್ಮದೊಂದು 'ಕಲೆ' ಎಂದುಕೊಳ್ಳುವ ಬದಲು ಇದೊಂದು ಸಂಪ್ರದಾಯ ಮತ್ತು ಆರಾಧನೆಯ ಭಾಗ ಅಂದುಕೊಂಡಿದ್ದಾರೆ. ಹೊರಗಿನವರೂ ಇದೇ ಗುಣವನ್ನು ರೂಢಿಸಿಕೊಂಡಿದ್ದಾರೆ.
         ಭಂಡಾರಿ ಜಾತಿಯಲ್ಲಿಯೇ ಮದುವೆಯಾದರೆ ಮದುವೆಗೆ ಬಂದ ಸಂಬಂಧಿಕರಲ್ಲಿ ಅತ್ಯುತ್ತಮ ಕಲಾವಿದರೆಲ್ಲಾ ಸೇರಿ ವಾದ್ಯ ನುಡಿಸುವುದನ್ನು ಕೇಳುವುದೇ ಒಂದು ಸೊಬಗು. ಒಬ್ಬರನ್ನು ಒಬ್ಬರು ಮೀರಿಸುವ ರೀತಿಯಲ್ಲಿ ಇದು ನಡೆಯುತ್ತದೆ ; ಜನ ಅವರನ್ನು ಸುತ್ತುವರಿದು ಕೇಳಿ ಆನಂದಿಸುತ್ತಾರೆ. ಅವರು ಮಾಡಿದ ಸರಿ ತಪ್ಪುಗಳ ಬಗ್ಗೆ ದೀರ್ಘ ಚಚರ್ೆ ದಿನವಿಡೀ ನಡೆಯುತ್ತದೆ. ಒಂದು ರೀತಿಯಲ್ಲಿ ಈ ಚಚರ್ೆಯೇ ಹೊಸಬರಿಗೆ ಪಾಠ ಕೂಡ.
        ಸಂಗೀತದ ಬಗ್ಗೆ ಸ್ವಲ್ಪ ಆಸಕ್ತಿ ಇರುವ ಜನರು ಮದುವೆ-ಮುಂಜಿಗಳಿಗೆ ಅತ್ಯುತ್ತಮವಾದ ಕಲಾವಿದರಿದ್ದ ಮೇಳವನ್ನೇ ಆಯ್ಕೆ ಮಾಡಿ ಕರೆಸುತ್ತಾರೆ. ಇದು ಸಾಂಪ್ರದಾಯಿಕ ವಾದ್ಯ ಅನ್ನೋದಕ್ಕಿಂತ ಇದೊಂದು ಸಂಗೀತ ಕಾರ್ಯಕ್ರಮವೆಂದೇ ಪರಿಗಣಿಸುವವರೂ ಕೆಲವರಿದ್ದಾರೆ.

         ಆದರೆ ಪಂಚವಾದ್ಯವನ್ನು ಈ ನೆಲದ ಮಹತ್ವದ ಜಾನಪದ ಕಲೆಯೆಂದು ಅಕಾಡೆಮಿಗಳಾಗಲೀ, ಸಂಸ್ಕೃತಿ ಇಲಾಖೆಯಾಗಲೀ, ಪರಿಗಣಿಸಲೇ ಇಲ್ಲ. ರಾಜ್ಯದ ಯಾವುದೇ ಉತ್ಸವದಲ್ಲಿಯೂ (ಜಿಲ್ಲೆಯ ಹೊರಗೆ) ಈ ಕಲೆ ಪ್ರದರ್ಶನಗೊಂಡಿಲ್ಲ. ಯಾವೊಬ್ಬ ಕಲಾವಿದರಿಗೂ ಅಕಾಡೆಮಿಯಿಂದ, ಸಂಸ್ಕೃತಿ ಇಲಾಖೆಯಿಂದ ಪ್ರಶಸ್ತಿಯನ್ನಾಗಲೀ, ಮಾಶಾಸನವನ್ನಾಗಲೀ ನೀಡಿಲ್ಲ. ಸಂಪೂರ್ಣವಾಗಿ ಕಡೆಗಣಿಸಲಾಗಿದೆ.
       ಪಂಚವಾದ್ಯವೆನ್ನುವ ಜಾನಪದ ಕಲೆಯ ಆಧುನಿಕ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆದಿಲ್ಲ. ಸಾವಕಾಶವಾಗಿ ಅದು ತನ್ನ ಜಾನಪದ ಮಟ್ಟಿನಿಂದ ಹೊರಬರುತ್ತಿದೆ. 'ಮೋವರಿ' ಎನ್ನುವುದು 'ಶಹನಾಯಿ' ಯ ರೂಪ ಪಡೆದು ಕೊಂಡು 'ಹಿಂದೂಸ್ಥಾನಿ'ಯನ್ನು ಅನುಸರಿಸುತ್ತಿದೆ. ಹೊಸತಲೆಮಾರು ಈ ಕಲೆಯ ಕಡೆಗೆ ಉತ್ಸುಕವಾಗಿಲ್ಲ. 'ಸಾಂಪ್ರದಾಯಿಕತೆ' ಮತ್ತು 'ಕಲೆ' ಯ ಒಟ್ಟಂದವಾಗಿ ಬೆಳೆದು ಬಂದ ಪಂಚವಾದ್ಯ ತನ್ನೊಳಗಿರುವ ಕಲೆಯ ಅಸ್ತಿತ್ವವನ್ನು ಕಳೆದುಕೊಂಡು ಕೇವಲ 'ಸಂಪ್ರದಾಯಿಕ' ವಾದ್ಯವಾಗಿ ಮಾತ್ರ ಹಾಗೋ ಹೀಗೋ ಉಳಿದು ಬಿಡುವ ಅಪಾಯವೂ ಇದೆ. ಯಾವುದೇ ಜಾನಪದ ಕಲೆಯಾಗಲಿ, ನಿದರ್ಿಷ್ಟ ಸಮುದಾಯ ಕೇಂದ್ರಿತ ಕಲೆಯಾಗಲೀ ತನ್ನ ಅನನ್ಯತೆಯನ್ನು ಉಳಿಸಿಕೊಂಡೇ ಕಾಲಕಾಲಕ್ಕೆ ಹೊಸರೂಪವನ್ನು ಪಡೆದುಕೊಳ್ಳುತ್ತಿರಬೇಕು. ಹೊಸ ತಲೆಮಾರು ಇದರಲ್ಲಿ ತೊಡಗಿಕೊಳ್ಳಬೇಕು. ವರ್ತಮಾನದ ಬದಲಾವಣೆಯ ಜೊತೆ ಅರ್ಥಪೂರ್ಣವಾದ, ಮೌಲಿಕವಾದ ಅನುಸಂಧಾನ ಸಾಧ್ಯ ಇಲ್ಲದಿದ್ದರೆ ಯಾವುದೇ ಕಲೆ 'ಮ್ಯೂಸಿಯಂ'ನ ಒಂದು ಸಂಗತಿ ಆಗಿ ಬಿಡುವ ಅಪಾಯ ಕೂಡ ಇದೆ. ಪಂಚವಾದ್ಯದ ಹಳೆಯ ಮಟ್ಟುಗಳೆಲ್ಲ ಮರೆಯಾಗಿ ಇದು ಕೂಡ 'ಮ್ಯೂಸಿಯಂ' ಸೇರುವ ಅಪಾಯ ಕಾಣುತ್ತಿದೆ.
        ಈವರೆಗೆ ಪಂಚವಾದ್ಯವನ್ನು ಹೊಸ ತಲೆಮಾರಿಗೆ ಕಲಿಸುವ ಯಾವ ವ್ಯವಸ್ಥೆಯೂ ಇಲ್ಲ. ಇದು ವಂಶಪಾರಂಪರ್ಯವಾಗಿ ಬೆಳೆದು ಬಂದಿದೆ. ಅಜ್ಜನಿಂದ ಅಪ್ಪನಿಗೆ, ಅಪ್ಪನಿಂದ ಮಗನಿಗೆ.......... ಹೀಗೆ ತಲೆಮಾರಿನಿಂದ ತಲೆಮಾರಿಗೆ ಬಳುವಳಿಯಾಗಿ. ಈ ಪಂಚವಾದ್ಯ ಇನ್ನಷ್ಟು ಹೆಚ್ಚು ವಿಸ್ತಾರ ಆಗದಿರಲು, ಹೊಸ ಹೊಸ ಪ್ರಯೋಗಗಳು ನಡೆದು ಜನಪ್ರಿಯವಾಗದಿರಲು ಬಹುಶಃ ಎರಡು ಕಾರಣಗಳನ್ನು ಗುರುತಿಸಬಹುದು.

        1)    ಈಗಿರುವ ಸ್ಥಿತಿಯಲ್ಲಿ ಇದನ್ನೇ ನಂಬಿ ಬದುಕು ಕಟ್ಟಿಕೊಳ್ಳುವುದು ಸಾಧ್ಯವಿಲ್ಲ. ಕುಟುಂಬ ನಿರ್ವಹಣೆಗೆ ಬೇಕಾದ ಆಥರ್ಿಕದ ಶಕ್ತಿಯನ್ನು ಕೂಡ ಇದು ನೀಡಲಾರದು. ಇದು 'ಸೀಸನ್ ಬೆಸ್ಟ್' ವೃತ್ತಿಯಾಗಿರುವುದರಿಂದ ಈ ಕಲಾವಿದರೆಲ್ಲಾ ಜೀವನ ನಿರ್ವಹಣೆಗೆ ಕೂಲಿ, ಕೃಷಿ ಕೂಲಿ ಇತ್ಯಾದಿಗಳನ್ನು ಅವಲಂಬಿಸಬೇಕಾಗಿದೆ. ಇನ್ನು ವಾದ್ಯ ಕಟ್ಟಲು, ಸೂಕ್ತ ಚರ್ಮವೂ ಸಿಗುತ್ತಿಲ್ಲ. ಮರಗಳೂ ಸಿಗುತ್ತಿಲ್ಲ. ವಾದ್ಯಗಳೆಲ್ಲಾ 'ರೆಡಿಮೇಡ್' ಬಂದಿರುವುದರಿಂದ ಆ ಕೆಲಸವೂ ಇಂದು ಆಥರ್ಿಕವಾಗಿ ಲಾಭದ್ದಲ್ಲ. ಹಾಗಾಗಿ ಹೊಸ ತಲೆಮಾರಿಗೆ ಇದರಲ್ಲಿ ಆಕರ್ಷಣೆ ಉಳಿದಿಲ್ಲ.


2)    ಸಾಮಾಜಿಕ ಮನ್ನಣೆಯ ಪ್ರಶ್ನೆ ಕೂಡ ಇಲ್ಲಿದೆ. ಯಾಕೆಂದರೆ ಪಂಚವಾದ್ಯ 'ಭಂಡಾರಿ' ಜಾತಿ ಕಸುಬು ಎನ್ನುವ ಹಣೆಪಟ್ಟಿಯಲ್ಲಿ ಬೆಳೆಯುತ್ತಿದೆ. ಹಾಗಾಗಿ ಬೇರೆ ಜಾತಿಯ ಸಮುದಾಯದ ಜನರು ಇದರಲ್ಲಿ ಸೇರುತ್ತಿಲ್ಲ. ಭಂಡಾರಿ ಶೂದ್ರವರ್ಣದ ಒಂದು ಜಾತಿ. ಬಹುತೇಕ ದೇವಸ್ಥಾನದ ಚಾಕರಿ ಮಾಡುತ್ತಾ ಬೆಳೆದವನು. ತೀರಾ ಹಿಂದಕ್ಕೆ ಹೋದರೆ 'ದೇವದಾಸಿ' ಕುಟುಂಬದಿಂದ ಬಂದವರು ಹಲವರಿದ್ದಾರೆ. ಬ್ರಾಹ್ಮಣರು ಇವರನ್ನು ಕೀಳು ಜಾತಿಯವರೆಂದು ಸಹ ಪಂಕ್ತಿಗೆ, ವೈವಾಹಿಕ ಸಂಬಂಧಕ್ಕೆ ಅನರ್ಹರೆಂದು ಪರಿಗಣಿಸಿದ್ದಾರೆ. ಪೂಜಾರಿಗಳು ಗರ್ಭಗುಡಿಯ ಒಳಗಡೆ ಇದ್ದರೆ ಇವರು ಗರ್ಭಗುಡಿಯ ಆಚೆಗೆ ನಿಂತು ದೇವಸ್ಥಾನ ಸ್ವಚ್ಛ ಮಾಡುವುದು, ಪೂಜೆಯಾಗುವಾಗ 'ವಾದ್ಯ' ಮಾಡುವುದು, ಪೂಜಾ ಸಾಮಗ್ರಿಯನ್ನು ತೊಳೆದು ಶುಚಿಗೊಳಿಸುವುದು ದೇವಕಾರ್ಯವಾದರೆ ಬ್ರಾಹ್ಮಣರ ಊಟದ ನಂತರ ಎಲ್ಲಾ ಪಾತ್ರೆ ತೊಳೆದು, ಪಾತ್ರೆಯ ತಳದಲ್ಲಿರುವುದನ್ನು (ಇದ್ದರೆ) ಊಟ ಮಾಡುವುದುಸಾಂಪ್ರದಾಯಿಕವಾದ ಕ್ರಮ.
       ಬ್ರಾಹ್ಮಣರ ಮನೆಗೆ ಮದುವೆಗೆ ಹೋದರೂ (ಈಗ ಕಲ್ಯಾಣ ಮಂಟಪದ ಮದುವೆಯಾದ್ದರಿಂದ ರೀತಿ ರಿವಾಜು ಸ್ವಲ್ಪ ಭಿನ್ನ) ಮದುವೆ ಅಂಗಳದ ಕೊನೆಗೆ ಇವರ ಸ್ಥಳ. ಎಲ್ಲರ ಊಟ ಆದ ಮೇಲೆ ಅಂಗಳದ ಕೊನೆಗೆ ಇವರಿಗೆ ಊಟ. ತಾವೇ ಬಾಳೆ ತೆಗೆದು ಸಗಣಿ ಹಾಕಿ ಸ್ವಚ್ಛ ಮಾಡಿ ಬರಬೇಕು. ತನ್ನದೇ ತರಗತಿಯಲ್ಲಿ ಓದಿದ ಒಬ್ಬ ದಡ್ಡ ಸಹಪಾಠಿಯ ಮನೆಗೆ ಹೋದರೂ ಹೀಗೆ; ಹೊರಗೆ ಕುಳಿತೆ ಊಟ ಮಾಡಬೇಕು. ಭಂಡಾರಿಗಳ ಕತೆಯೇ ಹೀಗಾದರೆ ಇನ್ನು ದಲಿತ ವರ್ಗಕ್ಕೆ ಸೇರಿದ ಆಗೇರರ ಸ್ಥಿತಿಯನ್ನು ನಾನು ಪ್ರತ್ಯೇಕವಾಗಿ ವಣರ್ಿಸಬೆಕಾಗಿಲ್ಲ. ಹಾಗಾಗಿ ಜಾತಿಯ ಕಾರಣದಿಂದ 'ಕಲೆ'ಯ ಅಂಶ ನಗಣ್ಯವಾಗಿ 'ಜಾತಿ' ಮುಖ್ಯವಾಗುವುದು ಹೊಸ ಹುಡುಗರಿಗೆ ಅವಮಾನ ಅನ್ನಿಸದೇ ಇರದು.

      3)    ಆಶ್ಚರ್ಯವೆಂದರೆ 'ಭಂಡಾರಿ'ಗಳು ಗಳು ತಾವು ಉಳಿದೆಲ್ಲಾ ಬ್ರಾಹ್ಮಣೇತರ ಜಾತಿಗಳಿಗಿಂತ ಶ್ರೇಷ್ಠ 'ಜಾತಿ' ಎಂದು ಕೊಳ್ಳುತ್ತಾರೆ. ಹಿಂದೆಲ್ಲಾ ಬ್ರಾಹ್ಮಣೇತರ ಜಾತಿಗಳ ಮದುವೆಗೆ ಹೋದರೆ ಅವರ ಮನೆಯಲ್ಲಿ ಊಟ ಮಾಡುತ್ತಿರಲಿಲ್ಲ. ಅಕ್ಕಿ, ಕಾಯಿ, ಬೇಳೆ ಪಡೆದು ತೋಟದಲ್ಲಿ 3 ಕಲ್ಲು ಹೂಡಿ ಅಡಿಗೆ ಮಾಡಿಕೊಳ್ಳುತ್ತಿದ್ದರು. ಬಡಿಸಿಕೊಳ್ಳಲು ತಲೆಯನ್ನು ಒಡೆಯಲು ಕಾಲನ್ನು ಹೊಂದಿದ ಸ್ಥಿತಿ ಇವರು.

         ಹೀಗೆ 'ಪಂಚವಾದ್ಯ' ಒಂದು ಜಾತಿ ಕಸುಬು ಎಂದು ಮುದ್ರೆ ಒತ್ತಿರುವುದರಿಂದ ಬೇರೆ ಜಾತಿ ಸಮುದಾಯದವರು ಇದರಲ್ಲಿ ಪ್ರವೇಶವನ್ನು ಮಾಡಿಲ್ಲ. ಮಹತ್ವದ ಒಂದು ಕಲೆ 'ಜಾತಿ'ಯ ಚೌಕಟ್ಟಿನ ಕಾರಣಕ್ಕೆ ಸೊರಗುವ ಸ್ಥಿತಿ ಬಂದಿದೆ. ಹಲವು ಮಹತ್ವದ ಜನಪದ ಕಲೆಗಳ ಸ್ಥಿತಿಯೂ ಹೀಗೆ ಆಗಿದೆ. ಈ ಕಲೆಗಳ ಹುಟ್ಟು ಎಂದೂ ಜಾತಿ ಕೇಂದ್ರಿತವಾಗಿರಲಿಲ್ಲ. ಒಂದು ಸಮುದಾಯದ ಒಟ್ಟಂತರ ಕೊಡುಗೆ ಇದು. ಜಾನಪದದ ಪ್ರತಿಭೆಯ ಹೆಗ್ಗುರುತುಗಳಿವು. ಒಂದು ಪ್ರದೇಶದಲ್ಲಿ ಬದುಕುತ್ತಿರುವ ಜನಪದರ ಸಾಂಸ್ಕೃತಿಕ ಮೈಲುಗಲ್ಲಿದು. ಆದರೆ ಒಂದು ಘಟ್ಟದಲ್ಲಿ ಇದು 'ಜಾತಿ' ಕೇಂದ್ರಿತವಾಗಿ ತನ್ನ ಬೆಳವಣಿಗೆಯನ್ನು ತಾನೆ ಕುಂಟಿತಗೊಳಿಸಿಕೊಂಡಿತು.

     ಹಾಗಾಗಿ ಇಂತಹ ಕಲೆಗಳು 'ಜಾತಿ' ಆವರಣವನ್ನು ಬಿಟ್ಟು ಆಚೆ ಬಂದು ಎಲ್ಲರೂ ಪಾಲ್ಗೊಳ್ಳುವಂತಾಗಬೇಕು. ಇಂತಹ ಕಲೆಗೆ ಆಥರ್ಿಕ ಮನ್ನಣೆಯೂ, ಸಾಮಾಜಿಕ ಮನ್ನಣೆಯೂ ಲಭ್ಯವಾಗಬೇಕು. ಹೀಗಾಗುವಾಗ ಮೊದಲು ಸಮಾಜದಲ್ಲಿ ಇಂದಿಗೂ ಪ್ರಭಲವಾಗಿ ಅಸ್ತಿತ್ವದಲ್ಲಿದ್ದ 'ಜಾತಿ' ಪದ್ಧತಿ ನಾಶವಾಗಬೇಕಾಗಿದೆ. ಜಾತಿ ಪದ್ಧತಿಯನ್ನು ವಿವಿಧ ರೂಪದಲ್ಲಿ ಹಾಗೆಯೇ ಇಟ್ಟುಕೊಂಡು 'ಜಾತಿ ಕಸುಬಿನ' ಹಣೆಪಟ್ಟಿಯಲ್ಲಿರುವ 'ಕಲೆ' ಯನ್ನು ಉಳಿಸಲು ಜನಪ್ರಿಯಗೊಳಿಸಲು ಸಾಧ್ಯವಿಲ್ಲ.
                                                                                       --ವಿಠ್ಠಲ ಭಂಡಾರಿ,ಕೆರೆಕೋಣ
                                                            {ದಿನಾಂಕ 04-02-2013 ರಂದು ಪ್ರಜಾವಾಣಿಯಲ್ಲಿ ಪ್ರಕಟಿತ}

No comments:

Post a Comment