Thursday 27 June 2013

ಕವಿ 'ವಿಡಂಬಾರಿ' ಮತ್ತು ಅವರ 'ಕಾವ್ಯ'- ಡಾ . ವಿಠ್ಠಲ ಭಂಡಾರಿ, ಕೆರೆಕೋಣ,vVITTAL BHANDARI



                                                        ಕವಿ 'ವಿಡಂಬಾರಿ' ಮತ್ತು ಅವರ 'ಕಾವ್ಯ'


ವಿಡಂಬಾರಿಯವರ ಬದುಕು ಪ್ರಾರಂಭವಾಗಿದ್ದೇ ದುರಂತದ ಮೂಲಕ. ಮನುಷ್ಯ ಲೋಕಕ್ಕೆ  ಶಾಪವಾಗಿರುವ, ಸೂಳೆ ಬಿಡುವ ಪದ್ದತಿ ಇನ್ನೂ ಜೀವಂತವಾಗಿರುವ ಕಾಲ ಅದು. ದೇವರ ಹೆಸರಿನಲ್ಲಿ ಊರ ಪ್ರತಿಷ್ಟಿತರೋ,ಪೂಜಾರಿಯೋ ತಮ್ಮ ತೆವಲಿಗೆ ಕೆಳಜಾತಿಯ ಹೆಣ್ಣುಗಳನ್ನು ದೇವದಾಸಿಯಾಗಿಸುವುದನ್ನು ಸ್ವತಃ ದೇವರಿಗೂ(!?) ನಿಲ್ಲಿಸಲಾಗಿರಲಿಲ್ಲ.

ದೇವಸ್ಥಾನದ ದೇವರೆಂಬ ಮೂತರ್ಿಯ ಎದುರು ತನ್ನ ತಾಯಿಯ ತಂದೆಯವರನ್ನು ಕರೆತಂದು ನಿಲ್ಲಿಸಿ, ನೋಡು, ನಿನ್ನ ಹಿರಿಯ ಮಗಳ ಮೇಲೆ ನಮ್ಮ ದೇವರಿಗೆ ಮನಸ್ಸಾಗಿದೆ. ಕಾರಣ ನಿನ್ ಮಗಳನ್ನು ನಾಳೇಯೇ ದೇವರ ಹೆಸರಿನಲ್ಲಿ ಬಿಡದಿದ್ದರೆ ನಿನ್ನ ಕುಲವೇ ನಾಶವಾದೀತೆಂದು ಹೇಳಿದರಂತೆ. ಆಗ ತಾಯಿಯ  ತಂದೆಯಾದ ವೆೆಂಕಟಪ್ಪ ಭಂಡಾರಿ ಹೌದ್ರಾ ಒಡ್ಯಾ,ಆಗ್ಲಿ ಒಡ್ಯಾ ಅಂದರಂತೆ. ಹೀಗಾಗಿ ವೆಂಕಪ್ಪ ಭಂಡಾರಿಯವರ ಮುಗ್ಧತನ ಮತ್ತು ದೇವಸ್ಥಾನಕ್ಕೆ ಸಂಬಂಧಪಟ್ಟವರ ಸ್ವಾರ್ಥಕ್ಕೆ ಬಲಿಯಾಗಿ ನನ್ನ ತಾಯಿಯಾದ ಗಣಪಿ ದೇವರ ಹೆಸರಿನಲ್ಲಿ ಸೂಳೆ ಆದಳಂತೆ. [ಅಂಚೆಪೇದೆಯ ಆತ್ಮ ಚರಿತೆ] ಎಂದು ತಾನು ಹುಟ್ಟುವ ಮೊದಲು ನಡೆದು ಹೋದ ಒಂದು ಅಮಾನವೀಯ ಘಟನೆಯನ್ನು ನೆನಪಿಸಿಕೊಳ್ಳಲು ವಿಡಂಬಾರಿ ಹಿಂಜರಿಯುವುದಿಲ್ಲ.

ಇವರು ಹುಟ್ಟಿದ್ದು 1935ರಲ್ಲಿ ಅಂದು ಅಮವಾಸ್ಸೆ ಮತ್ತೆ ಅಪಶಕುನ. ಅಮಾವಾಸ್ಸೆ ದಿನ ಹುಟ್ಟಿದ ಮಗುವನ್ನು ಬೇರೆಯವರಿಗೆ ಕೊಡುವ ರಿವಾಜಿತ್ತು. ಕವಿ  ವಿಡಂಬಾರಿಯವರನ್ನೂ ಹುಟ್ಟಿದ 12ನೇ ದಿವಸಕ್ಕೆ ಬೇರೆಯವರಿಗೆ ಕೊಡಲಾಯಿತು. ಸಾಕು ತಂದೆ -ತಾಯಿಯ ಪ್ರೀತಿ ಹೆಚ್ಚುದಿನ ಇರಲಿಲ್ಲ. ಸಾಕುತಾಯಿ ತೀರಿಕೊಂಡ ನಂತರ ಆ ಸ್ಥಾನಕ್ಕೆ ಬಂದ ಮಲತಾಯಿಯ ಉಪಟಳ,ಹಿಂಸೆಯನ್ನು ಸಹಿಸಬೇಕಾಯಿತು. ಮನೆಯಾಚೆ ಹೋಗಲೇಬೇಕಾಯಿತು.

ಯಾರದೋ ನೆರಳೀನಲಿ ನಾ ಬಾಳಿ ಬೆಳೆದೆ
ಕೂಳಿಗೂ ವಿಧವಿಧದ ವೇಷವನ್ನು ತಳೆದೆ ಎನ್ನುತ್ತಾರೆ.

ಅಲ್ಲಿಂದ ಪ್ರಾರಂಭವಾದ ಕಷ್ಟದ ಪರಂಪರೆ ಇನ್ನೂ ಮುಂದುವರಿದೇ ಇದೆ. ಹೆಚ್ಚು ಓದಲಾಗಲಿಲ್ಲ. ಹೊಟ್ಟೆ ಹೊರೆದುಕೊಳ್ಳುವ ಕಡೆ ಗಮನ. 3ನೇ ಈಯತ್ತೆಗೆ ಶಾಲಾ ಓದು ಮುಕ್ತಾಯ. ದೇವಸ್ಥಾನದ ಚಾಕರಿ, ಅಡಿಕೆ ಸ್ವಚ್ಛಗೋಳಿಸುವ ಕೂಲಿ, ಸ್ವಾಮಿಗಳೊಂದಿಗೆ ವಾದ್ಯ(ಪಂಚವಾದ್ಯ)ಕ್ಕಾಗಿ ತಿರುಗಾಟ.... ಹೀಗೆ  ಹೊಟ್ಟೆಗಾಗಿ ವಿವಿಧ ವೇಷಗಳು. ನಂತರ  ತಂದು ನಿಲ್ಲಿಸಿದ್ದು ಬ್ರಾಂಚ ಪೋಸ್ಟ್ ಆಫೀಸ್ನಲ್ಲಿ ಅಂಚೆಯಣ್ಣನಾಗಿ(ಪೋಸ್ಟಮ್ಯಾನ್)

ಆಗಲೇ ಯಕ್ಷಗಾನ, ನಾಟಕಗಳಲ್ಲ್ಲಿ ಆಸಕ್ತಿ. ಹಲವು ಪಾತ್ರ ನಿರ್ವಹಿಸಿ 'ಸೈ'ಎನಿಸಿಕೊಂಡರು. ಓದು ಆಗಲೇ ಪ್ರಾರಂಭ.ದಿನಕರ ದೇಸಾಯಿ ಹೊರಡಿಸುತ್ತಿದ್ದ 'ಜನಸೇವಕ'ದ ಮೇಲೆ ಕಣ್ಣು. ಅಂತ್ಯ ಪ್ರಾಸ, ಅನಿರೀಕ್ಷಿತ ತಿರುವಿನ ಚೌಪದಿ ಇವರ ಗಮನ ಸೆಳೆಯಿತು. ಮುಂದೆ ಇದೇ ಇವರ ಮಾಧ್ಯಮವೂ ಆಯಿತು.

ಹೀಗೆ ಹುಟ್ಟಿಸಿದ ಮನೆ ನೆರಳಾಗಲಿಲ್ಲ; ಎತ್ತಿ ಆಡಿಸಿದವರು ಬೇರೆ , ಮೊಲೆಹಾಲನಿಕ್ಕಿ ಪ್ರೀತಿ ಹಂಚಿದವರು ಬೇರೆ, ತುತ್ತ ನಿಕ್ಕಿದವರು ಬೇರೆ; ಅಕ್ಷರ ದೀಕ್ಷೆ ಕೊಟ್ಟವರು ಬೇರೆ.... ಹೀಗೆ ಸರ್ವರಲಿ ಒಂದೊಂದು ನೆರವು ಪಡೆದು ವಿಡಂಬಾರಿಯಾಗಿ ಬೆಳೆದರು. ಅವರಿಗೆ ಅವರೇ ಮಾರ್ಗದರ್ಶಕರು, ತಾನು ಏಕಲವ್ಯನ ಮಗನ ಮೊಮ್ಮಗನು ಎನ್ನುತ್ತಾರೆ. ಅಂದಿನ ಅದೇ ಹಠ,ಸಾಧಿಸುವ ಏಕಾಗ್ರತೆಯನ್ನು ಅವರು ಇಂದಿಗೂ ಜತನದಿಂದ ಕಾಯ್ದುಕೊಂಡು ಬಂದಿದ್ದಾರೆ.

'ವಿಶಾಲ ಕನರ್ಾಟಕ' ದಲ್ಲಿ ಮೊದಲ ಚುಟುಕು ಪ್ರಕಟವಾಯಿತು. ವಿ.ಗ.ಭಂಡಾರಿ ಬದಲು ಸಂಪಾದಕರು 'ವಿಡಂಬಾರಿ' ಎಂದು ಬದಲಿಸಿ ಪ್ರಕಟಿಸಿದರು. (ಆಗ ಅಂಚೆ ನೌಕರರ  ಹೋರಾಟ ನಡೆಯುತ್ತಿತ್ತು. ಇಲಾಖೆಯ ವಿರುದ್ಧ ಬರೆದ ಚುಟುಕು ಪ್ರಕಟವಾಗಿದ್ದರೆ ಅನವಶ್ಯಕ ತೊಂದರೆ ಎಂದು ಸಂಪಾದಕರೇ ನಿಜ ನಾಮಧೇಯವನ್ನು ಬದಲಿಸಿದ್ದರು) ಅದೇ ಮುಂದೆ ಕಾವ್ಯನಾಮವೂ ಆಯಿತು. ಹಾಗೆ ನೋಡಿದರೆ ಅವರ ಬದುಕನ್ನು ರೂಪಿಸಿದ್ದು ಅಂಕೋಲೆ. ಅಲ್ಲಿಯ  ಸಮಾಜವಾದಿ ಹೋರಾಟಶಾಲಿ ಸ್ನೇಹಿತರು. ಅಂಚೆನೌಕರಿಯೂ ಹೌದು.ಬದುಕಿಗೆ ಪಕ್ವತೆ ತಂದುಕೊಟ್ಟಿದ್ದು ಭಟ್ಕಳದ ಶಿರಾಲಿ. ಅಲ್ಲಿ ಅವರು ನಿವೃತ್ತಿಯೂ ಆದರು. ಬದುಕಿಗೆ ಹೊಸಚಾಲನೆಕೊಟ್ಟಿದ್ದು ಶಿರಸಿಯ 'ಚಿಂತನ' ಪುಸ್ತಕ ಮಳಿಗೆ. ಪುಸ್ತಕಗಳೇ ಅವರ ದಿನಚರಿಯಾಯಿತು. ಪ್ರತಿದಿನ ಶಿರಸಿ ಬಸ್ ನಿಲ್ದಾಣಕ್ಕೆ ಹೋಗಿ ಬಸ್ಸಲ್ಲ್ಲಿ ಹತ್ತಿ ಭಾಷಣಮಾಡಿ ಸಾವಿರಾರು ಪುಸ್ತಕಗಳನ್ನು ಮಾರುತ್ತಿದ್ದರು!. ಅಂಚೆಯಣ್ಣ  ಪುಸ್ತಕದ ಅಜ್ಜನಾಗಿ ಬದಲಾದರು. ಸಹಸ್ರ ಸಹಸ್ರ ಪುಸ್ತಕ ಮಾರಿ ಓದುವ ಸಂಸ್ಕೃತಿ ಹುಟ್ಟು ಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದರು. ಮುಗ್ಧತೆ, ವಿನಯ, ಮುಜುಗರ,ಸಹನೆ ಅವರೊಂದಿಗೆ ಬೆಳೆದ ಗುಣಗಳು. ವೈರಿಗಳನ್ನು ಕ್ಷಮಿಸಿ ಬಿಡುವ ಹೃದಯವೈಶಾಲ್ಯ ಅವರಲ್ಲಿದೆ. ಆದರೆ  ಸ್ವಾಭಿಮಾನ,ಆಶಾವಾದ ಸಾಧಿಸುವ ಛಲ ಅದರೊಳಗೆ ಸದಾ ಜಾಗೃತವಾಗಿವೆ.

ವಿಡಂಬಾರಿಯವರು ಬರೆದಂತೆ ಬದುಕಿದವರು. ಇವೆರಡರ ನಡುವೆ ಮುಚ್ಚುಮರೆಯಾಗಲೀ, ಕಂದಕವಾಗಲೀ ಇಲ್ಲ. ತೀರಾ ಗ್ರಾಮೀಣ ಭಾಗದಲ್ಲಿ ನೆಲೆನಿಂತು ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಸಂಸ್ಕೃತಿಯನ್ನು ಜೀವಂತ ಇಟ್ಟಿದ್ದಾರೆ.ಕಿರು ತೊರೆಯ ಹಾಗೆ ನೀಧಾನವಾಗಿ ಹರಿಯುತ್ತಿದೆ. ದೊಡ್ಡ ದೊಡ್ಡ ನದಿಗಳಲ್ಲಿ ಪ್ರವಾಹ ಬರುತ್ತದೆ. ಹೋಗುತ್ತದೆ. ಅದಕ್ಕೊಂದು ನಿಯತತೆ ಇಲ್ಲ. ಆದರೆ ಇಂತಹ ಕಿರುತೊರೆಗಳು ಹಾಗಲ್ಲ. ಉಬ್ಬರ ಇಳಿತಗಳಿಲ್ಲದೆ ಸದಾ ಹರಿವ ನೆಲವನ್ನು ಬರಿದಾಗದಂತೆ ಕಾಯುತ್ತವೆ. ಸಾಹಿತ್ಯದ ಅಂತರ್ಜಲವನ್ನು ಕಾಯುತ್ತಾರೆ. ಆದರೇನು ಮಾಡೋಣ ನದಿಗಳು ನಮ್ಮ ಇತಿಹಾಸದ ಭಾಗವಾಗುತ್ತವೆ, ಪತ್ರಿಕೆಗಳಿಗೆ ಸುದ್ಧಿಯಾಗುತ್ತವೆ. ಕಿರುತೊರೆಗಳಿಗೆ ಹೆಸರೂ ಇಲ್ಲ.ಇತಿಹಾಸದಲ್ಲಿ ಜಾಗವೂ ಇಲ್ಲ.
                               
ವಿಡಂಬಾರಿಯವರ 4 ಕವನ ಸಂಕಲನ ಈವರೆಗೆ ಪ್ರಕಟವಾಗಿವೆ. 1981 ರಲ್ಲಿ 'ಒಗ್ಗರಣೆ' 1986ರಲಿ 'ಕವಳ'2004ರಲ್ಲಿ 'ಕುದಿ ಬಿಂದು' 2010ರಲ್ಲಿ 'ವಿಡಂಬಾರಿ ಕಂಡಿದ್ದು' ಚುಟುಕು ಸಂಕಲನವಾದರೆ 'ಅಂಚೆ ಪೇದೆಯ ಆತ್ಮ ಚರಿತೆ' ಅವರ ಆತ್ಮಕಥನ.ಇದನ್ನು ಹೊರತಾಗಿಸಿ ಪ್ರಕಟಣೆಗಾಗಿ ಸುಮಾರು 3,000 ಚುಟುಕುಗಳು ಕಾದಿವೆ.

'ಚುಟುಕು' ಕಾವ್ಯ ಪ್ರಕಾರವೇ ಅಲ್ಲ ಎನ್ನುವ ವಾದವೂ ಇದೆ. ಖಂಡಿತವಾಗಿಯೂ ಒಂದು ಅಕಾಡೆಮಿಕ್ ವಿಮಶರ್ೆಯ ಪರಿಭಾಷೆಯಲ್ಲಿ ಚುಟುಕು ಕಾವ್ಯವಾಗಿ ಸ್ಥಾನ ಪಡೆದಿರಬಹುದು.  ಆದರೆ ಸಾಮಾನ್ಯ ಓದುಗರ ಮಧ್ಯೆ ಜನಸಾಮಾನ್ಯರ ಮಧ್ಯೆ 'ಚುಟುಕು' ವಿಶಿಷ್ಟವಾದ ಸ್ಥಾನಗಳಿಸಿದೆ. ಅತ್ಯಂತ ಸರಳ ಬಂಧ, ಅಂತ್ಯಪ್ರಾಸ,ಸ್ಪಷ್ಟ ಆಶಯ, ಕೊನೆಯ ಸಾಲಿನಲ್ಲಿ ಕಾಣುವ ತಿರುವುಗಳನ್ನು ಒಳಗೊಂಡು 4 ಸಾಲಿನ ಚುಟುಕು ಮನನಾಟುವಂತೆ ವ್ಯಂಗ್ಯ-ವಿಡಂಬನೆ ಮತ್ತು ಚಾಟಿ ಏಟಿನಂತೆ ಹರಿತವಾಗಿರುವುದರಿಂದ ಓದುಗರಿಗೆ ಹೆಚ್ಚು ಆಪ್ತವಾಗುತ್ತಿದೆ. ಜನರನ್ನು ಬೇಗ ತಲುಪುತ್ತದೆ. ಹಾಗಾಗಿಯೇ ದಿನಕರದೇಸಾಯಿಯವರು ತನ್ನ ಹೋರಾಟದ ಭಾಗವಾಗಿ ಸ್ವತಃ ಚೌಪದಿಯನ್ನು ಬರೆದರು;ಬಳಸಿದರು. ಓದುಗರಲ್ಲಿ ಹೋರಾಟ ಪ್ರಜ್ಞೆಯನ್ನು ವಿಸ್ತರಿಸುವಲ್ಲಿ,ಹೋರಾಟಕ್ಕೆ ಜನರನ್ನು ಅಣಿ ನೆರೆಸುವದರಲ್ಲಿ ಇದು ಸಾಧ್ಯಂತವಾಗಿ ದುಡಿಯಿತು.

ದೇಸಾಯಿವರ ನಂತರ ಈ ಸ್ಥಾನ ವಿಡಂಬಾರಯವರಿಗೇ ಸೇರಬೇಕು. ದಿನಕರದೇಸಾಯಿಯವರನ್ನು ಬಿಟ್ಟರೆ ಚುಟುಕುಗಳನ್ನು ವಿಡಂಬಾರಿಯವರಷ್ಟು ವ್ಯಾಪಕವಾದ ರೀತಿಯಲ್ಲಿ ನಮ್ಮ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮವನ್ನಾಗಿ ಆರಿಸಿಕೊಂಡವರು ಕನ್ನಡದಲ್ಲಿ ತೀರಾ ವಿರಳ ಎನ್ನುತ್ತಾರೆ ಹಿರಿಯ ಲೇಖಕ ಯಶವಂತ ಚಿತ್ತಾಲರು. ಹಾಗೆ ನೋಡಿದರೆ ದಿನಕರ ದೇಸಾಯಿವಯವರಂತೆ ಅವೂ ಸತ್ವ ಹಾಗೂ ಸಂಖ್ಯೆಯಲ್ಲಿ ಚುಟುಕ ಬರೆದವರು ವಿಡಂಬಾರಿಯವರೇ ಎಂಬುದು ಗಮನಾರ್ಹ ಸಂಗತಿ ಎಂದಿದ್ದಾರೆ ದಿವಂಗತ ಜಿ.ಎಸ್. ಅವಧಾನಿಯವರು. ವಿಡಂಬಾರಿಯವರೂ ತಮ್ಮ ಆತ್ಮಕತೆಯಲ್ಲಿ ದೇಸಾಯಿಯವರು ನೀಡಿದ ಪ್ರೀತಿ, ಮಾರ್ಗದರ್ಶನವನ್ನು  ನೆನಪಿಸಿಕೊಂಡಿದ್ದಾರೆ

'ಬರಹಕ್ಕೆ ದಿನಕರನನ್ನು ಗುರುವೆಂಬೆ
ಬರೆವಾಗ ನಿತ್ಯವೂ ನಾ ಸ್ಮರಿಸಿಕೊಂಬೆ 'ಎಂದು ಚುಟುಕುಗಳಲ್ಲಿಯೂ ದೇಸಾಯಿವರನ್ನು ನೆನೆಯುತ್ತಾರೆ.

ಮಾತ್ರವಲ್ಲ

'ಕುಳಿತಲ್ಲಿ ನೋಡುತ್ತಾ ತಮ್ಮ ಅವತಾರ
ಹೆಣೆಯುತ್ತಾ ಇಹೆನಯ್ಯ ಚುಟುಕೆಂಬ ಹಾರ 'ಎನ್ನುತ್ತಾರೆ.

ಆದರೆ ಅವರ ಚೌಪದಿಯೆಲ್ಲವೂ ದಿನಕರರ  ಅಂಧಾನುಕರುಣೆಯಲ್ಲಿ ಇವರ  ಸ್ವಂತಿಕೆ ಕೂಡ ಸಾಕಷ್ಟಿದೆ.
'ಆದರೂ ಇನ್ನೊಂದು ಮಾತುಂಟು ಕೇಳಿ
ತುಂಬಿಹೆನು ಇದರೊಳಗೆ ನನ್ನದೇ ಗಾಳಿ '
ಎನ್ನುತ್ತಾರೆ. ಚುಟುಕ ವಿಡಂಬಾರಿಯವರ ಅಭಿವ್ಯಕ್ತಿಯ ಮಾಧ್ಯಮ.                            
'ನನ್ನ ಮನ ಕುದಿಕುದಿದು ಸಿಡಿದುಕ್ಕಿ ಬಂದು
ಚೆಲ್ಲುತಿದೆ ಆಗಾಗ ಒಂದೊಂದು ಹುಂಡು' (ಒಗ್ಗರಣೆ)
ಎಂದು ಚುಟುಕಿನ ಹಿಂದಿರುವ ಆಶಯವನ್ನು ಹೇಳುತ್ತಾರೆ

ಬದುಕಿನ ತುಂಬಾ ನೋವುಂಡ ವಿಡಂಬಾರಿಯವರು ಒಂದರ್ಥದಲ್ಲಿ ಪುರಾಣದ ಕತೆಯಲ್ಲಿ ಬರುವ ಶಿವನಂತೆ. ನೋವನ್ನು, ನಿಂದನೆಯನ್ನು ಗಂಟಲಲ್ಲಿಯೇ ಧರಿಸಿದ್ದಾರೆ. ಅದು ಮೈಗೊಳ್ಳಲು ಬಿಡಲಿಲ್ಲ. ಈ ನೋವೆ ಚುಟುಕಾಗಿದೆ.
'ಇದುವರೆಗೆ ಬಾಳಿನಲಿ ಕಂಡುಂಡ ನೋವು
ಮೂಡಿಸಿತು ಒಂದೊಂದೆ ಚುಟುಕೆಂಬ ಹೂವು'.

 ಅಂದರೆ ನೋವು ಇಲ್ಲಿ ವೈಭವೀಕರಣಗೊಂಡಿಲ್ಲ. ಬದಲಾಗಿ ಅದನ್ನು ಹೂವನ್ನಾಗಿಸಿದ್ದಾರೆ ವಿಡಂಬಾರಿ. ಆದರೆ ಒಮ್ಮೊಮ್ಮೆ ನೋವು ಪ್ರಕಟವಾಗುವುದು ಹೀಗೆ.

'ನೋವುಗಳು ಕಾಡುತ್ತಾ ಎದೆಯೊಳಗೆ ಬಾವು
ಎದ್ದೆದ್ದು ಒಡೆದೊಡೆದು ಸುರಿಯುವುದು ಕೀವು
ಕೀವಿನೊಳು ಆಗಾಗ ಚುಟುಕುಗಳು ತೇಲಿ
ಬರುತಿರಲು ನಾನೇನು ಮಾಡುವುದು ಹೇಳಿ' ಅವರ ಜಾಗೃತ ಪ್ರಜ್ಞೆಯನ್ನು ಮೀರಿ ಬಂದುಬಿಡಬಹುದಾದ ನೋವಿನ ಎಳೆಗಳನ್ನು ಅಸಹಾಯಕ ಧ್ವನಿಯನ್ನು ಕಾಣಬಹುದಾಗಿದೆ.

ಪ್ರತಿ ಸಂಕಲನದಲ್ಲಿಯೂ ತನ್ನ ಬದುಕಿನ ನೋವನ್ನು, ಯಾತನೆಯನ್ನು ಹೇಳುವ ನಾಲ್ಕಾರು ಚುಟುಕುಗಳಷ್ಟೇ ಇವೆ. ಇದೇ ತುಂಬಿದ್ದೆ ಆದರೆ ಅವರ ಸಂಕಲನಕ್ಕೇನೂ ಮಹತ್ವ ಬರುತ್ತಿರಲಿಲ್ಲ. ಬದಲಾಗಿ ಸ್ಪಷ್ಟವಾದ ಸಾಮಾಜಿಕ ಪ್ರಜ್ಞೆ,ರಾಜಕೀಯ ಪ್ರಜ್ಞೆಯಿಂದಾಗಿ ಸಂಕಲನ ಮಹತ್ವ ಪಡೆಯುತ್ತದೆ.


 ಸಾಹಿತ್ಯ ಕ್ಷೇತ್ರವನ್ನು ಸೂಕ್ಷ್ಮವಾಗಿ ನೋಡಿದರೆ 2 ಮಾದರಿಯ ಲೇಖಕರಿದ್ದಾರೆ. 
1. ನನ್ನ ನೋವೇ ಜಗದ ನೋವು ಎಂದು ತಿಳಿದವರು.
2. ಜಗದ ನೋವೆ ನನ್ನ ನೋವು ಎಂದು ಪರಿಭಾವಿಸಿದವರು.
ವಿಡಂಬಾರಿವರ ಈ ಎರಡನೇ ಪಂಗಡಕ್ಕೆ ಸೇರಿದವರು. ಜಗದ ನೋವಿಗಾಗಿ ಅವರು ತನ್ನ ನೋವನ್ನು ಪಕ್ಕಕ್ಕಿಡುತ್ತಾರೆ. ಇದು ಕವಿಯೊಬ್ಬ ತನ್ನ ನೋವನ್ನು ಮರೆಯುವ ಅಥವಾ ದಾಟುವ ಪ್ರಕ್ರಿಯೆ ಕೂಡ. ಆದರೆ ಹಲವು ಸಂದರ್ಭದಲ್ಲಿ ವಿಡಂಬಾರಿಯವರ ಮತ್ತು ಅವರು ಪ್ರಸ್ತುತಪಡಿಸುವ ಸಮಾಜದ ನೋವು-ನಲಿವುಗಳು ಒಂದೇ ಆಗಿಬಿಡುವುದು ಆಕಸ್ಮಿಕವೇನೂ ಅಲ್ಲ.

ವಿಡಂಬಾರಿ ಈ ಸಮಾಜದಲ್ಲಿ ಆಗುಹೋಗುವ ಪ್ರತಿಘಟನೆಗೂ ಕಣ್ಣು-ಕಿವಿತೆರೆದುಕೊಂಡವರು.ಹಾಗಾಗಿಯೇ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅಪಾಯ ಬಂದಾಗೆಲ್ಲ ಅವರ ಪ್ರಜ್ಞೆ ಎಚ್ಚೆತ್ತುಕೊಳ್ಳುತ್ತದೆ. ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ. ಕೋಮುವಾದ, ಬ್ರಷ್ಟಾಚಾರ, ಲಂಚಗುಳಿತನ, ಸ್ವಜನಪಕ್ಷಪಾತ, ಜಾತಿವಾದ, ಮೌಢ್ಯ ಕಂದಾಚಾರ,ಧಾಮರ್ಿಕ ಅಸಹಿಷ್ಣುತೆಯನ್ನು ಒಳಗೊಂಡಂತೆ ಮನುಷ್ಯನ ಮನಸ್ಸಿನ ಒಳತೋಟಿಗಳ ಬಗ್ಗೆ ಕೂಡ ಸೂಕ್ಷ್ಮವಾಗಿ ಬರೆಯುತ್ತಾರೆ.
ಅವರನ್ನು ತೀವ್ರವಾಗಿ ಕಾಡಿದ್ದು ಈ ನೆಲದ ಸೌಹಾರ್ದತೆಯನ್ನು ನಾಶಮಾಡುತ್ತಿರುವ ಕೋಮುವಾದದ ಬಗ್ಗೆ
'ಹಿಂಸೆಯೇ ಧರ್ಮಗಳ ತಿರುಳಾಗಿ ಇಂದೆ
ಸುತ್ತೆಲ್ಲ ನೆತ್ತರಿನ ಹೊಳೆಯನ್ನು ಕಂಡೆ
ಕಡುಕ್ರೂರ ಮಂದಿಗಳ ಕೈಯಲ್ಲಿ ಧರ್ಮ
ಸಿಕ್ಕಿಂದು ಸತ್ತಿಹುದು ಧರ್ಮಗಳ ಮರ್ಮ(ಧರ್ಮ)
ಹರಿಯುತಿದೆ ವಿಧವೆಯರ ಕಣ್ಣೀರು ಕೋಡಿ
ಅನಾಥ ಮಕ್ಕಳನು ಕಣ್ತೆರೆದು ನೋಡಿ
ನೆತ್ತರೊಳು ಕೆಸರಾಯ್ತು ಭಾರತದ ಭೂಮಿ
ಕಾರಣವು ಮಂದಿರ-ಮಸಿದಿಗಳು ಸ್ವಾಮಿ' (ಮಂದಿರ-ಮಸೀದಿ)

ಹಿಂದೂ ಕೋಮುವಾದ ಮತ್ತು ಮುಸ್ಲಿಂ ಮೂಲಭೂತವಾದದ ಕ್ರೌರ್ಯದ ಹಲವು ಮುಖವನ್ನು ಹಲವು ಚುಟುಕುಗಳಲ್ಲಿ ವಿವರಿಸಿದ್ದಾರೆ.ಧರ್ಮ-ಧರ್ಮಗಳ ನಡುವಿನ ಜಗಳ, ಹಿಂದಿನ ಕಾರಣ ಧಾಮರ್ಿಕವಾದದ್ದಲ್ಲ. ಧರ್ಮ ತನ್ನ ನಿಜವಾದ ಅರ್ಥವನ್ನು ಕಳೆದುಕೊಂಡು ಸಂಘಪರಿವಾರದ ಕೈಯಲ್ಲಿ ನಲುಗುತ್ತಿರುವುದನ್ನು ಗುರುತಿಸುತ್ತಾರೆ. ಇದು ಕೇವಲ ರಾಜಕೀಯ ದುರುದ್ದೇಶದ್ದು.
ರಾಜಕೀಯ ಲಾಭಕ್ಕೆ ದೇಶದೊಳು ಕೋಮು
ದ್ವೇಶವನು ಬಿತ್ತುವರುಗೊತ್ತೇನು ಖೇಮು.
ಇನ್ನೊಂದೆಡೆ ಪ್ರಗತಿಯ ಹೆಸರಿನಲ್ಲಿ ನಡೆಯುವ ಡೊಂಬರಾಟ ಕೂಡ ಇವರಿಗೆ ಒಪ್ಪಿತವಲ್ಲ.

ತಂದಿರುವ ವಿಪರೀತ ಪರದೇಶಿ ಸಾಲ
ಲೂಟಿಕೋರರಿಗೆಲ್ಲ ಆಯ್ತು ಅನುಕೂಲ
ಇದು ನಮ್ಮ ಸ್ವಾತಂತ್ರ್ಯ ಭಾರತದ ಪ್ರಗತಿ
ಬಾನಿನೆತ್ತರಕ್ಕೆ ಬೆಳೆದ ಉದ್ಯೋಗಪತಿ(ಪ್ರಗತಿ)
ಹೀಗೆ ಭಾರತದಲ್ಲಿ ಟಾಟಾ ಬಿಲರ್ಾಗಳು ಬೆಳೆದರು.ಇದೇ ಪ್ರಗತಿ ಎಂದು ಚಿತ್ರಿಸಲಾಗುತ್ತದೆ. ಇದಕ್ಕೆ ಕಾರಣವಾದ ಲೋಕಸಭೆ,ವಿಧಾನ ಸಭೆಗಳಲ್ಲಿ ಕೂಡ ಇರುವ ಕಿಸೆಕಳ್ಳರ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಉದಾರೀಕರಣದ ಹುಚ್ಚು ಭಾರತಕ್ಕೆ ಹಿಡಿದದ್ದನನ್ನು ಪ್ರಸ್ತಾಪಿಸುತ್ತಾರೆ.

ಅಂದು ಈ ಕರಣ ಉದಾರೀಕರಣ
ಮತ್ತೊಮ್ಮೆ ಭಾರತದ ಸ್ವಾತಂತ್ರ್ಯ ಹರಣ
ಹಿಡಿಯುತ್ತ ಬುಶ್ ಎಂಬ ಅಹಂಕಾರಿ ಚರಣ
ಹರಾಜುಹಾಕಿದರು ದೇಶದಂತಃಕರಣ (ಉದಾರೀಕರಣ)
  ಎನ್ನುವಲ್ಲಿ ಮತ್ತೊಮ್ಮೆ ಭಾರತದ ಸ್ವಾತಂತ್ರ್ಯ ಹರಣವಾಗುವ ಅಪಾಯವನ್ನು ಹೇಳುತ್ತಾರೆ. ಸ್ವದೇಶಿ,ಬಡವನುದ್ಧಾರ, ಭರವಸೆ ಜಾಗತೀಕರಣ ಇಲ್ಲೆಲ್ಲ ಲೇಖಕ ಉದಾರೀಕರಣವನ್ನು ನಗ್ನಗೊಳಿಸುತ್ತಾರೆ.
ಈ ವರೆಗೆ ಆಳಿದ ಎಲ್ಲಾ ಪಕ್ಷವನ್ನು ಅವರ ಚುಟುಕೆಂಬ ಕುಲುಮೆಯಲ್ಲಿ ಸುಡುತ್ತಾರೆ. ಎಲ್ಲರೂ ಸುಟ್ಟು ಬೂದಿಯಾಗುತ್ತಾರೆ. ಆದರೆ ಕೆಲವು ಮಾತ್ರ ಉಳಿಯುತ್ತವೆ

ದುಡಿಯುವವರ ಏಳಿಗೆಯ ದ್ಯೋತಕದ ಕೆಂಪು
ಬಾವುಟವ ಹಿಡಿದೆತ್ತಿ ಬರುತಿಹುದು ಗುಂಪು
ಈ ಗುಂಪು ಮನುಷ್ಯತ್ತ ಉಳ್ಳವರ ಕೂಡಿ
ಒಕ್ಕೂಟ ರಚಿಸುವುದು ಖಂಡಿತವು ನೋಡಿ (ಕೆಂಪು ಬಾವುಟ)
ಇದು ಮಾತ್ರ ದೇಶವನನ್ನು ಅಪಾಯದಿಂದ ಮೇಲೆತ್ತ್ತುತ್ತದೆ. ಎನ್ನುವ ಖಚಿತ ರಾಜಕೀಯ ನಿಲುವನ್ನು ಇವರು ಪ್ರಕಟಿಸುತ್ತಾರೆ.
'ಕ್ಯೂಬಾ','ಸಮಾಜವಾದ', 'ಭಗತ್ಸಿಂಗ್' 'ಅಸಮಾನತೆ' ಮುಂತಾದ ಚುಟುಕುಗಳಲ್ಲಿ ಇದನ್ನು ಸ್ಪಷ್ಟ ಪಡಿಸುತ್ತಾರೆ.
ಈ ರೋಗ ತೊಲಗಿಸಲು ಎಡಪಂಥ ಮಾತ್ರ
ವಹಿಸುತ್ತಾ ಬಂದಿಹುದು ಬಹು ದೊಡ್ಡ ಪಾತ್ರ
ಎಂಬುದು ಕೇವಲ ಭಾವನಾತ್ಮಕವಾದ ಸಂಗತಿಯಲ್ಲ. ಅವರೊಳಗಿದ್ದ ಎಚ್ಚೆತ್ತ ಪ್ರಜ್ಞೆ ತಲುಪಿದ ಅಂತಿಮ ನಿಲುವು ಕೂಡ.  ಸಮಾಜದ  ಆಗು ಹೋಗುಗಳನ್ನು ವಿಮಶರ್ಾತ್ಮಕವಾದ,ವಸ್ತುನಿಷ್ಟ ದೃಷ್ಟಿಯಲ್ಲಿ ನೋಡುವುದರ ಜೊತೆಗೆ ಭವಿಷ್ಯದ ಕುರಿತು ಆಶಾದಾಯಕ ನಿಲುವು ಹೊಂದಿರುವ ಪ್ರತಿಯೊಬ್ಬನೂ ಅನಿವಾರ್ಯವಾಗಿ ತಲುಪಬಹುದಾದ ಕೊನೆಯನ್ನು ವಿಡಂಬಾರಿಯವರು ತಲುಪುತ್ತಾರೆ.
ಹಾಗಾಗಿಯೇ,ದಲಿತರೇ ರೈತರೇ ಬಡಜನರೇ ಕೇಳಿ
ಎಡಪಂಥ ಸಂಘಟನೆ ಮೈಕೊಡವಿ ಏಳಿ
ಅರವತ್ತು ವರುಷಗಳು ದೇಶವನು ಆಳಿ
ಉಳಿದವರು ನಿಮಗೇನು ಕೊಟ್ಟಿಹರು ಹೇಳಿ
ಎಂದು ಎಡ ಚಳುವಳಿಯ ಕಡೆಗೆ ಕಾವ್ಯದ ಮೂಲಕ ಕರೆ ಕೊಡುತ್ತಾರೆ. ಇದು ಕಾವ್ಯದ ಕರೆ ಮಾತ್ರವಲ್ಲ ಇಂತಹ ಜನಪರ ಚಳುವಳಿಯಲ್ಲಿ ಅವರು 70ನೇ ವರ್ಷದಲ್ಲಿಯೂ ಕೆಂಬಾವುಟ ಹಿಡಿದು ಹೋರಾಟದ ಮಾರ್ಗದಲ್ಲಿ ನಿಂತರು.
ಹಾಗೆಯೇ ಅವರಿಗೆ ಹೇಸಿಗೆ ಹುಟ್ಟಿಸಿದ ಇನ್ನೊಂದು ರೋಗವೆಂದರೆ ಜಾತೀಯತೆಯದು ಮತ್ತು ಸಮಾಜವನ್ನು ಕಾಡುತ್ತಿರುವ ಮೌಢ್ಯದ್ದು. ಈ ಹಿನ್ನೆಲೆಯಲ್ಲಿಯೇ ರಚಿತವಾದ ಬಸವಣ್ಣ ಅಂಬೇಡ್ಕರ್ ಕುರಿತಾದ ಚುಟುಕು 'ಕರ್ಣನ' ಕುರಿತು ಚುಟುಕು ಗಮನಸೆಳೆಯುತ್ತದೆ.
'ಬಸವಣ್ಣ ಆ ನಿನ್ನ ದಲಿತ ಜನರಿಲ್ಲಿ
ಬಲಿಯಾಗುತ್ತಿಹರಲ್ಲೋ ಕ್ರೂರಿಗಳ ಕೈಲಿ' ಎನ್ನುತ್ತಾರೆ.
ಜಾತಿ ವ್ಯವಸ್ಥೆಯ ಕ್ರೌರ್ಯದ ಬಗ್ಗೆ ಗಮನಸೆಳೆಯುತ್ತಾರೆ. ಮತ್ತು
ಜಾತಿ ಪದ್ದತಿ ಇಲ್ಲಿ ಸವರ್ಾಂತಯರ್ಾಮಿ
ತಲೆ ತಲಾಂತರದ ಪಿಡುಗು ಇದು ಸ್ವಾಮಿ ಎನ್ನುತ್ತಾರೆ. ಹಾಗಾಗಿ
ಕಿತ್ತೆಸೆದು ಜಾತಿಮತ ಕೋಮುಗಳ ಕಟ್ಟು
ಊರಿನೇಳಿಗೆಗಾಗಿ ಶ್ರಮಿಸೋಣ ಒಟ್ಟು ಎಂದು ಸೌಹಾರ್ದತೆಯನ್ನು ಪ್ರತಿಪಾದಿಸುತ್ತಾರೆ.

ಅಸಮಾನತೆ, ಅಜ್ಞಾನ ಅಳಿಯಲು ಅವಶ್ಯವಾಗಿ ರೂಢಿಸಿ ಕೊಳ್ಳಬೇಕಾದ್ದು
' ವೈಜ್ಞಾನಿಕ ಕ್ರಾಂತಿಯೇ ಏಕೈಕ ದಾರಿ
 ಎಂದೆಂಬ ಸತ್ಯವನು ಹೇಳುವೆನು ಸಾರಿ'
ಎಂದು ವಿಜ್ಞಾನ ಕುರಿತು, ವೈಜ್ಞಾನಿಕ ಚಿಂತನೆಯ ಕುರಿತು ಹೇಳುವಾಗಲೇ
'ಅಣುಬಾಂಬು ಎಸೆದುದರ ಪರಿಣಾಮವೇನು?
ಎಂಬುದನು ಚೆನ್ನಾಗಿ ಬಲ್ಲವನು ನೀನು
ಇಂತಿರಲು ಒಳಗಣ್ಣು ಅಂದಕರ ಕೂಡ
ಬಾಂಬನ್ನು ಕೊಡುವವನು ನೀನೆಂಥ ಮೂಢ' ಎಂದು ಅದರ ಅಪಾಯದ ಕಡೆಗೆ ಕೂಡ ಎಚ್ಚರಿಸುತ್ತಾರೆ.
ಒಟ್ಟಾರೆ ಅವರು ಮನುಷ್ಯತ್ವದ ಪ್ರತಿಪಾದಕರು. ಮನುಷ್ಯನನ್ನು  ಜಾತಿ,ಧರ್ಮ,ಬಡವ,ಶ್ರೀಮಂತ ಎಂದು ವಿಭಾಗಿಸುವ ಮತ್ತು ಮನುಷ್ಯನನ್ನು ಓಟಿನ ಲೆಕ್ಕಾಚಾರದಲ್ಲಿ ಗುಣಿಸುವ ಇಡೀ ವ್ಯವಸ್ಥೆಯ ಬಗ್ಗೆಯೇ ಅವರ ಚುಟುಕು ಆಕ್ರೋಶ ವ್ಯಕ್ತಪಡಿಸುತ್ತವೆ.

ಆಕ್ರೋಶ,ನೋವು,ನಲಿವುಗಳಿಗೆ ,ವ್ಯಂಗ್ಯ-ವಿಡಂಬನೆ ಸೂಕ್ಷ್ಮವಾದ ಭಾಷೆ,ದೃಷ್ಟಾಂತಗಳಿಂದಾಗಿ ಅವರ ಆಶಯ ತನ್ನೆಲ್ಲ ಶಕ್ತಿಯೊಂದಿಗೆ ಪ್ರಕಟವಾಗುತ್ತದೆ.ಜನಮುಖಿಯಾದ ಚಿಂತನೆಯಿಂದಾಗಿ ಕಾವ್ಯ ಸೌಂದರ್ಯವನ್ನಾದರೂ ಕಡಿಗಣಿಸಿಯಾರೇ ಹೊರತು (ಪುನರಾವರ್ತನೆ,ವಾಚಾಳಿತನ,..............ಇತ್ಯಾದಿ ಅಲ್ಲಲ್ಲಿ ಇಲ್ಲದಿಲ್ಲ.) ಕಾವ್ಯವಸ್ತುವಿನ ಜೊತೆ  ಅವರ ರಾಜಿ ಇಲ್ಲ. ಆಶ್ಚರ್ಯವೆಂದರೆ ಅವರ ಚುಟುಕಿಗೂ ಅವರಿಗೂ ಇರುವ ಸಂಬಂಧ ವೈರುಧ್ಯದಿಂದ ಕೂಡಿದ್ದು. ವೈಯಕ್ತಿಕವಾಗಿ ಅವರ ಸ್ವಭಾವ ಹೆಚ್ಚು ಮೃದು ಮತ್ತು ಮುಗ್ಧತನದ್ದು. ಯಾರಿಗೂ ಎದುರುವಾದಿಸದ, ವೈರಿಗಳಿಗೂ ಶುಭ ಹಾರೈಸುವ ಕೆಟ್ಟ ಮುಲಾಜಿನ ಮನುಷ್ಯ. ಎತ್ತರದ ದನಿಯಲ್ಲಿ ಮಾತನಾಡಿಸಿದ್ದ್ದನ್ನು ನಾನರಿಯೆ. ಎಲ್ಲಾ ನೋವನ್ನು ಸ್ವತಃ ನುಂಗಿಕೊಳ್ಳುವ ಸ್ವಭಾವ. ಆದರೆ ಅವರ ಚುಟುಕು ಇದರ ವಿರದ್ಧ. ಸಿಟ್ಟು,ಪ್ರತಿಭಟನೆ,ಆಕ್ರೋಶಗಳು ಬೆಂಕಿಯುಂಡೆಯಂತೆ ಏಳುತ್ತವೆ. ಅವರ ಚಾಟಿಗೆ, ವ್ಯಂಗ್ಯಕ್ಕೆ ಒಳಗಾಗದ ವಸ್ತುವೇ ಇಲ್ಲ ಎನ್ನಬಹುದು.  ಚೇಳಿನಂತೆ ಕುಟುಕುವ ,ಕಟ್ಟಿರುವೆಯಂತೆ ಕಚ್ಚುವ, ರಣ ಹದ್ದಿನಂತೆ ತಲೆಯ ಮೇಲೆ ಎರಗುವ ಚುಟುಕುಗಳು ಸಾಂತ್ವನದ ಅಪ್ಪುಗೆಯನ್ನು ನೀಡುವುದರಿಂದ ಕನ್ನಡದ ಪ್ರಮುಖ ಕವಿಯಾಗಿ ಅವರು ನಮಗೆ ಮುಖ್ಯವಾಗುತ್ತಾರೆ.


                                                                                                             ಡಾ . ವಿಠ್ಠಲ ಭಂಡಾರಿ, ಕೆರೆಕೋಣ


No comments:

Post a Comment